ಕಲಬುರ್ಗಿ: ರುಕ್ಮಿಣಿ ನಾಗಣ್ಣವರ

2018 ಫೆಬ್ರುವರಿ. ಕಲಬುರ್ಗಿಗೆ ಬೇಸಿಗೆಯ ಬಿಸಿಲು ಇನ್ನೂ ಆವರಿಸಿರಲಿಲ್ಲ. ಹುಬ್ಬಳ್ಳಿ-ದಾಂಡೇಲಿ ಪ್ರವಾಸ ಮುಗಿಸಿ, ರೈಲಿನಲ್ಲಿ ಬೆಳಿಗ್ಗೇನೆ ಕಲಬುರ್ಗಿಗೆ ಬಂದಿಳಿದ ನನಗೆ ಮೊದಲು ಕಾಣಿಸಿದ್ದೇ ಪುಟಾಣಿ ಚಹಾ ಅಂಗಡಿಗಳ ಸಾಲು. ಒಂದು ಅಂಗಡಿಯ ಹೆಸರು ಕರ್ನಾಟಕ ಟೀ ಸ್ಟಾಲ್, ಮತ್ತೊಂದರದ್ದು ಗಾಣಗಾಪುರ ಟೀ ಸ್ಟಾಲ್. ಮೊದಲ ಬಾರಿಗೆ ಕಲ್ಯಾಣ ನಾಡಿನ ನೆಲ ಸ್ಪರ್ಶಿಸಿದ ನನಗೆ ಬಿಸಿ ಬಿಸಿ ಚಹಾ ಕುಡಿದೇ ಮನೆಯತ್ತ ಹೆಜ್ಜೆ ಹಾಕಲು ಮನಸ್ಸು ಹೇಳಿತು. ಆದರೆ, ಮನೆ ತಲುಪಿದರೆ ಸಾಕು ಎಂಬಂತೆ ದಣಿವು ನನ್ನನ್ನು ಆಯಾಸಗೊಳಿಸಿತ್ತು. ಆದದ್ದು ಆಗಿಯೇ ಬಿಡಲಿ, ನಾನು ಮನಸ್ಸಿನ ಮೊರೆ ಹೋಗಿ ರುಚಿಕಟ್ಟಾದ ಚಹಾ ಸವಿದೆ. ಇದರಿಂದ ಮುನಿಸಿಕೊಂಡ ದಣಿವು ತಣ್ಣಗೆ ಮರೆಯಾಯಿತು.

ಒಂದು ಕಾಲದಲ್ಲಿ ಗುಲಬರ್ಗಾ ಎಂದು ಕರೆಯಲ್ಪಡುತ್ತಿದ್ದ ಗುಂಬಜ್ ನಗರಿಯೊಂದಿಗಿನ ನಂಟು ಶುರುವಾದದ್ದೇ ಹೀಗೆ. ಈ ಊರಿನ ಬಗ್ಗೆ ಬಹುತೇಕ ಜನರಿಂದ ಆಸಕ್ತಿಕರ ವರ್ಣಮಯ ಕಥನಗಳನ್ನು ಕೇಳಿದ್ದ ನನ್ನೊಳಗೆ ರಾಶಿಗಟ್ಟಲೇ ಕುತೂಹಲಗಳು ಮನೆ ಮಾಡಿದ್ದವು. ಊರಿನಲ್ಲಿನ ಒಂದಿಬ್ಬರು ಪರಿಚಯಸ್ಥರು ಬಿಟ್ಟರೆ ಇಲ್ಲಿನ ಹಾದಿ, ಬೀದಿಗಳ ಬಗ್ಗೆ ಕಿಂಚಿತ್ತೂ ಸುಳಿವು ಇರಲಿಲ್ಲ. ಆದರೆ, ಒಂದು ವಿಷಯ ಪಕ್ಕಾ ಖಾತ್ರಿ ಇತ್ತು. ಇಲ್ಲಿ ಎಲ್ಲೇ ಓಡಾಡಿದರೂ ಬಹುಭಾಷಿಕರು ಸಿಗುತ್ತಾರೆ. ಹಿಂದಿ ಅಥವಾ ಉರ್ದು ಪದಗಳ ಬಳಕೆಯಾಗದೇ ಮಾತು ಆರಂಭ ಆಗುವುದಿಲ್ಲ. ಮುಗಿಯುವುದೂ ಇಲ್ಲ. ಹಾಗೆಯೇ, ಭಾಷೆಯೊಂದಿಗೆ ಅಭಿವ್ಯಕ್ತವಾಗುವ ಪ್ರೀತಿ ಮತ್ತು ಆಪ್ತತೆಯ ಘಮಲಿಗೂ ಕೊರತೆಯೇನೂ ಇಲ್ಲ.

ಬಹುತೇಕ ಜನರ ಪಾಲಿಗೆ ಕಲಬುರ್ಗಿ ಅಕ್ಷರಶಃ ಬಿಸಿಲೂರು. ಆದರೆ, ನನಗೆ ಇದು ಬಹುಸಂಸ್ಕೃತಿಗಳ ನಗರಿ. ಸಂಸ್ಕೃತಿಯಲ್ಲಿ ಅಷ್ಟೇ ಭಾಷೆ, ಜಾತಿ, ಧರ್ಮ, ತಿಂಡಿ, ಊಟ, ಜೀವನಶೈಲಿಯಲ್ಲೂ ಬಹುತ್ವ ಎಂಬುದು ಗಾಳಿಯಂತೆ ನಿರಾಯಸವಾಗಿ ಹಾಸುಹೊಕ್ಕಿದೆ. ಅದು ಯಾವ ಪರಿಯೆಂದರೆ, ಇಂತಿಂಥ ಜಾತಿ-ಧರ್ಮದವರು ಇಂತಿಂಥ ದೇವರನ್ನು ಮಾತ್ರ ಆರಾಧಿಸಬೇಕು. ಇಂಥ ತಿಂಡಿಗಳನ್ನು ಮಾತ್ರ ಸವಿಯಬೇಕು ಎಂಬ ಕಟ್ಟಪ್ಪಣೆಗಳು ಇಲ್ಲಿಲ್ಲ. ನಿರ್ಬಂಧವೂ ಇಲ್ಲಿಲ್ಲ. ಇಲ್ಲಿನ ಬಂದಾ ನವಾಜ್ ದರ್ಗಾ ಮುಸ್ಲಿಮರಷ್ಟೇ ಪ್ರಮಾಣದಲ್ಲಿ ಅನ್ಯ ಧರ್ಮೀಯರು ಬರುತ್ತಾರೆ. ಬುದ್ಧ ವಿಹಾರ, ಶರಣಬಸವೇಶ್ವರ ದೇಗುಲಕ್ಕೆ ನಿಯಮಿತ ಭಕ್ತರಿಗಿಂತ ಅನ್ಯ ಜಾತಿ-ಧರ್ಮೀಯರು ಹೆಚ್ಚು ಭೇಟಿ ನೀಡುತ್ತಾರೆ.

ಹಬ್ಬಗಳ ಸಂದರ್ಭದಲ್ಲಿ ಭೇಟಿ ನೀಡಿದರಂತೂ ಕಲಬುರ್ಗಿಯ ಖದರ್ರೇ ವಿಭಿನ್ನವಾಗಿರುತ್ತದೆ. ರಂಜಾನ್ ವೇಳೆಯಲ್ಲಂತೂ ಅದರಲ್ಲೂ ರಾತ್ರಿ ವೇಳೆ ಮುಸ್ಲಿಂ ಚೌಕ್ ಸೇರಿದಂತೆ ಕೆಲ ಕಡೆ ಹೋದರಂತೂ ಬಗೆಬಗೆಯ ವಿಶಿಷ್ಟ ತಿಂಡಿ ತಿನಿಸುಗಳು ಸವಿಯದೇ ಮರಳುವುದಿಲ್ಲ. ಸ್ವಾದಿಷ್ಟ ಮಾಂಸಾಹಾರ, ಪಾನೀಯ ಸವಿದಷ್ಟು ಇನ್ನಷ್ಟು ಬೇಕು ಅನ್ನಿಸುತ್ತದೆ. ಕ್ರಿಸ್ಮಸ್, ಹೊಸ ವರ್ಷದ ಆಚರಣೆಗಂತೂ ಬಣ್ಣಬಣ್ಣದ ವಿಶಿಷ್ಟ ವಿನ್ಯಾಸದ ಕೇಕ್ಗಳಿಗೆ ಹೆಚ್ಚು ಬೇಡಿಕೆ. ಸ್ವತಃ ಬೇಕರಿಯವರೇ ರಸ್ತೆ ಬದಿ ಕೇಕ್ಗಳನ್ನು ಪ್ರದರ್ಶನಕ್ಕೆ ಇಟ್ಟು ಗ್ರಾಹಕರನ್ನು ಸೆಳೆಯುತ್ತಾರೆ. ದಸರಾ ಆಚರಣೆಯ ನವರಾತ್ರಿ ವೇಳೆ ಭವಾನಿ ದೇವಿಯ ಮೂರ್ತಿಗಳನ್ನು ಅಂದವಾಗಿ ಅಲಂಕರಿಸುತ್ತಾರೆ. ಯುವಜನರ ಸಂಭ್ರಮ ತಾರಕಕ್ಕೇರಿರುತ್ತದೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅರ್ಥಪೂರ್ಣವಾಗಿ ಗೌರವ ಸಲ್ಲಿಸುವುದನ್ನು ಮತ್ತು ಆರಾಧಿಸುವುದನ್ನು ಕಣ್ಣಾರೆ ನೋಡಬೇಕಿದ್ದರೆ ಏಪ್ರಿಲ್ 14ರ ಹಗಲು ಮತ್ತು ರಾತ್ರಿಯನ್ನು ಇಲ್ಲಿ ಕಳೆಯಬೇಕು. ಅಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಜಿಲ್ಲೆ ಪೂತರ್ಿ ಮೆರವಣಿಗೆ, ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ, ರಾತ್ರಿ ವೇಳೆಯಂತೂ ನಗರ-ಗ್ರಾಮೀಣ ಪ್ರದೇಶದ ಗಲ್ಲಿಗಲ್ಲಿಗಳಿಂದ ಅಂಬೇಡ್ಕರ್ ಮೂರ್ತಿ ಮತ್ತು ಭಾವಚಿತ್ರಗಳ ಮೆರವಣಿಗೆ ಹೊರಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಸವೇಶ್ವರ ಸೇರಿದಂತೆ ಕೆಲ ಮಹನೀಯರ ಜಯಂತ್ಯುತ್ಸವದ ಸಂದರ್ಭಗಳಲ್ಲಿ ಇದೇ ತರಹದ ವಾತಾವರಣ ಕಾಣಸಿಗುತ್ತದೆ.

-ರುಕ್ಮಿಣಿ ನಾಗಣ್ಣವರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x