ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ… ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು ಕೇಳಿದ ನೆನಪೇ ಇಲ್ಲ. ಇನ್ನು ಇವರ ಬರಹ ಹೇಗಿರುತ್ತೋ ಅಂತ ಗೊಂದಲದಿಂದಲೇ ಸಪ್ನ ಆನ್ ಲೈನ್ ಅಲ್ಲಿ ಬುಕ್ ಆರ್ಡರ್ ಮಾದಿದೆ. ಮೊದಲೇ ಸ್ವಲ್ಪ ಗೊಂದಲದಲ್ಲಿದ್ದ ನನಗೆ ಬುಕ್ ೧೫ ದಿನ ಆದರೂ ಬರದೇ ಇದ್ದಿದ್ದಕ್ಕೆ ಬೇಸರವಾಗಿತ್ತು. ಸಪ್ನ ಬುಕ್ ಹೌಸ್ ಗೆ ಫೋನಾಯಿಸಿ ವಿವರ ತಗೋಂಡು ನಾನೇ ಖುದ್ದಾಗಿ ಹೋಗಿ ಪುಸ್ತಕ ತರಬೇಕಾಯಿತು. ಆದರೆ ಪುಸ್ತಕ ಸಿಕ್ಕ ಮೇಲೆ ಇದ್ಯಾವುದರ ಪರಿವೆ ಇಲ್ಲದೇ ಯಾವಾಗ ಓದುತ್ತೀನೋ ಅನ್ನುವಂತೆ ಆಗಿತ್ತು. ಇನ್ನೇನು ಒಮ್ಮೆ ನಿರ್ಧಾರ ಮಾಡಿದ ಮೇಲೆ ಮಾಡಿಯೇ ತೀರುವುದು ನನ್ನ ಸ್ವಭಾವ.
ನೋಡು ನೋಡುತ್ತಿದ್ದಂತೆಯೆ ಪುಟಗಳು ಸರಿಯತೊಡಗಿದ್ದವು ನಾನು ಪುಸ್ತಕದೊಳಗೆ ಮುಳುಗಿಹೋಗಿದ್ದು ನನಗೇ ತಿಳಿಯಲಿಲ್ಲ. ವಾಸ್ತವಿಕತೆಗೆ ತೀರ ಹತ್ತಿರವೆನಿಸುವ ಅಥವಾ ವಾಸ್ತವಿಕತೆಯೇ ಅನ್ನುವಂತೆ ಕಥೆ ಮುಂದುವರೆಯಿತ್ತಿತ್ತು. ಸಾವು ಉಂಟಾದಾಗ ಮುಂದೆ ಹದಿನೈದು ದಿನ ನಡೆಯುವ ಶ್ರಾದ್ದ ಕರ್ಮಗಳು, ಅದರಲ್ಲೂ ನಗರದ ನಿವಾಸಿಯಾಗಿದ್ದವನು ಹಳ್ಳಿಯಲ್ಲಿ ಬಂದು ಈ ಕರ್ಮಗಳನ್ನು ಮಾಡುವಾಗ ಆತನಲ್ಲಾಗುವ ತೊಳಲಾಟಗಳು ಈ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಂಬಿಕೆ ಮತ್ತು ಶ್ರದ್ದೆ ಇವುಗಳ ನಡುವಿನ ಸಂಬಂಧ ಅಥವಾ ವ್ಯತ್ಯಾಸ ಇದೇ ಕಥೆಗೆ ಜೀವ ಅಂದರೆ ತಪ್ಪಾಗಲಾರದು. ತೀರ ಸಾಧಾ ಕಥೆ ಅನಿಸಿದರೂ ತಿರುಳು ಅಪ್ಪಟ ಹೊನ್ನಂತೆ ಹೊಳೆಯುತ್ತದೆ. ಕಥೆಗೆ ವಸ್ತು ವಿಷಯ ಯಾವುದೇ ಆದರೂ ಆ ವಿಷಯದ ಬಗ್ಗೆ ಸತ್ಯಾಸತ್ಯತೆಯನ್ನು ಬರೆದಾಗ ಮಾತ್ರ ಅದಕ್ಕೊಂದು ಬೆಲೆ ಅನ್ನುವುದನ್ನ ಲೇಖಕರು ಉತ್ತಮವಾಗಿ ನಿರೂಪಿಸಿದ್ದಾರೆ.
ಬೆಂಗಳೂರು ನಿವಾಸಿ ಸುರೇಂದ್ರ ತನ್ನ ತಂದೆ ತೀರಿಕೊಂಡಾಗ ತನ್ನ ಹಳ್ಳಿಗೆ ಬಂದು ಹದಿನೈದು ದಿನಗಳ ಕಾಲ ಮಾಡುವ ಶ್ರಾದ್ದ ಕರ್ಮವೇ ಈ ಕಥೆಗೆ ಜೀವಾಳ. ಹದಿನೈದು ದಿನದಲ್ಲಾಗುವ ಘಟನೆಗಳು, ಆತನಲ್ಲಾಗುವ ಬದಲಾವಣೆಗಳು, ದೇವರು, ಭಕ್ತಿ, ಶ್ರದ್ಧೆ, ನಂಬಿಕೆ, ಕಾಮ ಹೀಗೆ ಅನೇಕಾನೇಕ ವಿಷಯಗಳನ್ನ ಉತ್ತಮವಾಗಿ ಬಿಂಬಿಸಿದ್ದಾರೆ. ಒಂದೂವರೆ ವರ್ಷದ ಲೇಖಕರ ಪ್ರಯತ್ನ ಫಲ ಕೊಟ್ಟಿದೆ ಅಂತಲೇ ಹೇಳಬಹುದು. ಯಾವುದೇ ಕೃತಿ ರಚಿಸುವಾಗ ಅದಕ್ಕೆ ಬೇಕಾದ ವಿಷಯ, ವಿಷಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಕೃತಿಕಾರನಿಗೆ ಇರಲೇ ಬೇಕು. ಅದರಂತೆ ಕರಣಂ ಪವನ್ ಪ್ರಸಾದ್ ಕೂಡ ಕೃತಿಗೆ ಬೇಕಾದ ಎಲ್ಲ ಮಾಹಿತಿಗಳನ್ನು ಒಟ್ಟುಗೂಡಿಸಿ, ಜ್ಞಾನಿಗಳಿಂದ ಎಲ್ಲ ವಿವರಗಳನ್ನೂ ಕೂಲಂಕುಶವಾಗಿ ತೆಗೆದುಕೊಂಡು ತಮ್ಮ ಜೀವವನ್ನೇ ಈ ಕೃತಿಯಲ್ಲಿ ಎರೆದಿದ್ದಾರೆ ಎನ್ನಬಹುದು. ಈ ಕಷ್ಟಕ್ಕಾಗಿ ಭೇಷ್ ಎನ್ನಲೇಬೇಕು.ಅನೇಕ ಘಟಾನುಘಟಿಗಳು ಈ ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಕೃತಿಯ ಪರಿಪಕ್ವತೆಯನ್ನು ಬಿಂಬಿಸುತ್ತದೆ.
ನಂಬಿಕೆ ಮತ್ತು ಶ್ರದ್ಧೆಯ ನಡುವಿನ ವ್ಯತ್ಯಾಸ ತಿಳಿಸುತ್ತಾ "ನಮ್ಮ ಸಮಾಜ ಸಿದ್ಧಾಂತಗಳನ್ನು ನಂಬಲಿಲ್ಲ, ತರ್ಕ ಮಾಡಿತು, ವಿಶ್ಲೇಷಿಸಿತು. ನಮ್ಮದು ನಂಬಿಕೆಯ ಸಮಾಜವಲ್ಲ, ಶ್ರದ್ಧೆಯ ಸಮಾಜ.ದೇವರು, ಕ್ರಿಯೆ ಆಚರಣೆ ಎಲ್ಲವೂ ನಿಂತಿರುವುದು ನಂಬಿಕೆಯ ಮೇಲಲ್ಲ ಶ್ರದ್ಧೆಯ ಮೇಲೆ.ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ, ನಮ್ಮವರಿಗೂ ಇದು ತಿಳಿದಿಲ್ಲ." ಎನ್ನುತ್ತಾರೆ ಲೇಖಕರು. ಮುಂದೆ "ಸಾಮೂಹಿಕ ನಂಬಿಕೆ, ಸಾಮೂಹಿಕ ದರ್ಶನ ಎಲ್ಲವೂ ಸುಳ್ಳು. ದೈವ, ಪುರಾಣ, ಧರ್ಮ ಎಲ್ಲವೂ ವ್ಯಕ್ತಿಗತವಾದದ್ದು. ಕೆಲವರಿಗೆ ಮೂರ್ತಿಯ ಮೇಲೆ ಶ್ರದ್ದೆ, ಕೆಲವರಿಗೆ ಪುರಾಣಗಳ ಬಗ್ಗೆ ಶ್ರದ್ಧೆ ಇನ್ನೂ ಕೆಲವರಿಗೆ ಕಾಣದ ಅಗೋಚರದ ಬಗ್ಗೆ ಶ್ರದ್ಧೆ. ಆ ಶ್ರದ್ಧೆಯನ್ನೇ ಧರ್ಮ ಕಲಿಸಿದ್ದು.ಅವರವರ ಭಾವಕ್ಕೆ ಅವರವರ ಶ್ರದ್ಧೆ" ಅನ್ನುತ್ತಾರೆ. ನಂಬಿಕೆ ಮತ್ತು ಶ್ರದ್ಧೆಯ ನಡುವಿನ ಗೊಂದಲವನ್ನು ದೂರ ಮಾಡುತ್ತಾ " ಶ್ರದ್ಧೆ ಎಂದರೆ ಅಚಲವಾದದ್ದು, ನಂಬಿಕೆ ಚಂಚಲವಾದದ್ದು. ಧರ್ಮದ ಅಸ್ತಿತ್ವ ಮತ್ತು ಆದರ್ಶಕ್ಕೆ ಶ್ರದ್ಧೆ ಮುಖ್ಯವೇ ಹೊರತು ನಂಬಿಕೆಯಲ್ಲ. ನಂಬಿಕೆಗಳು ಬದಲಾಗುತ್ತವೇ ಶ್ರದ್ಧೆ ಬದಲಾಗಲಾರದು. ಹಿಂದೂ ಧರ್ಮ ಶ್ರದ್ಧೆಯ ಮೇಲೆ ನಿಂತಿದೆ ಅದು ಕೇವಲ ನಂಬಿಕೆಯ ಮೇಲೆ ನಿಂತಿದ್ದರೆ ಎಂದೋ ಅಳಿಸಿಹೋಗುತ್ತಿತ್ತು, ಬೇರೆ ನಾಗರಿಕ ಜೀವನ ಶೈಲಿಯ ರೀತಿ" ಅನ್ನುತ್ತಾ ಸ್ಪಷ್ಟೀಕರಣ ನೀಡುತ್ತಾರೆ. ಬಹಳ ದಿನಗಳಿಂದ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡುತ್ತಿದ್ದ ನನಗೆ ಅನೇಕ ಮಾಹಿತಿಗಳು ದೊರೆತಂತಾಯಿತು. ಶಹರದ ಬದುಕಿಗೆ ಒಗ್ಗಿಕೊಂಡು ತಮ್ಮ ಮನೆಯ ರೀತಿ ರಿವಾಜುಗಳನ್ನೆಲ್ಲ ಮರೆತ ಕಥಾನಾಯಕ ತಂದೆಯ ಶ್ರಾದ್ದಕ್ಕೆ ಮನೆಗೆ ಬಂದು ಎಲ್ಲ ಕಾರ್ಯವನ್ನು ಮಾಡುತ್ತಿರುವುದನ್ನು ಕಂಡ ತಾಯಿ ಪ್ರೀತಿಯಿಂದ ಮಗನನ್ನು ತಬ್ಬಿಕೊಂಡಾಗ, ತಾನು ಮಾಡುವ ಕ್ರಿಯೆಗಿಂತ ಒಂದು ಜೀವಕ್ಕೆ ಸಮಾಧಾನ ಸಿಗುವುದಾದರೆ ಆ ಕ್ರಿಯೆಗಿಂತ ಈ ಸಮಾಧಾನ ಮುಖ್ಯ ಅಂದುಕೊಳ್ಳುವ ದೃಶ್ಯ ಮೈ ನವಿರೇಳಿಸುತ್ತದೆ. ವೈಜ್ನಾನಿಕವಾಗಿ ನಮ್ಮ ಧರ್ಮದ ಕೃತಿಗೆ ಇರುವ ಸಂಬಂಧವನ್ನು ಸಾಕ್ಷಾಧಾರವಾಗಿ ನಿರೂಪಿಸಿದ್ದಾರೆ. ಪೂರ್ಣ ಕಾದಂಬರಿ ಒಂದು ಸಿನೆಮಾದ ತರಹ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಪ್ರತಿ ಪಾತ್ರಗಳು ನಮ್ಮ ಕಣ್ಮುಂದೆ ನಟಿಸುತ್ತಿರುವಂತೆ ಭಾಸವಾಗುತ್ತದೆ. ಈ ಕೃತಿ ಮುಂದೆ ಸಿನೆಮಾ ರೂಪ ಕಂಡರೆ ಅಚ್ಚರಿಯೇನಿಲ್ಲ. ಅನೇಕ ತಿರುವುಗಳು, ಗೊಂದಲಗಳು, ತಿಳಿ ಹಾಸ್ಯ, ತೊಳಲಾಟ, ನಗು, ಅಳು ಎಲ್ಲವನ್ನೂ ಒಳಗೊಂಡ ಕೃತಿಯೇ "ಕರ್ಮ". ಅನೇಕ ಗೊಂದಲಗಳಿಗೆ ಉತ್ತರವೇ "ಕರ್ಮ". ಒಟ್ಟಿನಲ್ಲಿ ಹೇಳಬೇಕೆಂದರೆ ಒಂದು ಪರಿಪೂರ್ಣ ಕೃತಿ "ಕರ್ಮ".
ಅಂತೂ ಪುಸ್ತಕವನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ಸಮಾಧಾನ ನನಗೆ. ಓದುಗಾರನಿಗೆ ಎಲ್ಲೂ, ಯಾವ ರೀತಿಯಲ್ಲೂ ಅಸಮಾಧಾನವಾಗದಂತೆ ಕಾಳಜಿವಹಿಸಿದ್ದಾರೆ ಲೇಖಕರು. ಹೇಗೆ ಅಮೀರ್ ಖಾನ್ ತನ್ನ ಚಿತ್ರಕ್ಕಾಗಿ ಕಷ್ಟಪಟ್ಟು ಮಿ.ಪರಫೆಕ್ಟ್ ಅನಿಸಿಕೊಂಡಿದ್ದಾರೋ ಅದೇ ರೀತಿ ಕರಣಂ ಕೂಡ ನನಗನಿಸಿದಂತೆ "ಕರ್ಮ"ಕ್ಕಾಗಿ ಮಿ.ಪರಫೆಕ್ಟ್ ಆಗಿದ್ದಾರೆ. ಮುಂಗಾರು ಮಳೆಯಂತ ಚಲನಚಿತ್ರಗಳು ಹೇಗೆ ಅದರ ಕಥೆ, ಹಾಡುಗಳಿಂದ ಪ್ರಸಿದ್ದವಾಗಿದೆಯೋ ಅದೇ ರೀತಿ ಕರ್ಮ ತನ್ನ ಒಳ ತಿರುಳು ಮತ್ತು ಪರಿಪಕ್ವತೆಯಿಂದ ಎಲ್ಲ ಓದುಗರ ಮನಸೂರೆಗೊಂಡರೆ ತಪ್ಪೇನಿಲ್ಲ. ನನ್ನ ಅನೇಕ ಪ್ರಶ್ನೆಗಳಿಗೆ ಈ ಕೃತಿಯ ಮೂಲಕ ಉತ್ತರವನ್ನ ಕಂಡುಕೊಂಡಿದ್ದೇನೆ, ಅದೇ ರೀತಿ ಅನೇಕ ಓದುಗರಿಗೆ ಈ ಕೃತಿ ಮಾದರಯಾಗಬಹುದು ಅನ್ನುವುದು ನನ್ನ ಅನಿಸಿಕೆ. ಶಹರದ ಕಟ್ಟುಪಾಡು ಜೀವನಕ್ಕೆ ಒಗ್ಗಿದವರೆಲ್ಲ ಈ ಕೃತಿಯನ್ನು ಓದಿ ತಾವೆಲ್ಲಿದ್ದೇವೆ ಅನ್ನುವುದನ್ನು ಒಮ್ಮೆ ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತದೆ "ಕರ್ಮ". ಬ್ರಾಹ್ಮಣರಾದವರು ಅವಶ್ಯವಾಗಿಯೇ ಓದಬೇಕಾದ ಕೃತಿ. ಪುಸ್ತಕದ ಬೆಲೆ ಕೇವಲ ನೂರಿಪ್ಪೈದು(೧೨೫/-), ನಿಮ್ಮ ಸಮೀಪದ ಪುಸ್ತಕ ಮಳಿಗೆಯನ್ನ ಇಂದೇ ಸಂಪರ್ಕಿಸಿ. ಆನ್ ಲೈನ್ ಮುಖಾಂತರ ಕೂಡ ಬುಕ್ ಮಾಡಬಹುದು.
"ಕರ್ಮ"ದ ಮೂಲಕ ಅನೇಕ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರವನ್ನು ನೀಡಿದ ಲೇಖಕ "ಕರಣಂ ಪವನ್ ಪ್ರಸಾದ್" ಅವರಿಗೆ ಎಲ್ಲ ಓದುಗರ ಪರವಾಗಿ ಶುಭ ಹಾರೈಕೆಗಳು. ಇದೇ ರೀತಿಯಾಗಿ ನಿಮ್ಮಿಂದ ಇನ್ನೂ ಅನೇಕ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.
ಶುಭವಾಗಲಿ.
-ಗಣೇಶ್ ಖರೆ
*****
ಕರ್ಮ, ಕರಣಮ್ ಪವನ್ ಪ್ರಸಾದರ ಚೊಚ್ಚಲ ಕಾದಂಬರಿ; ಆದರೆ ಓದಿ ಮುಗಿಸಿದಾಗ ಹಾಗಂತೆನಿಸುವುದಿಲ್ಲ. ಭಾಷೆಯ ಬಳಕೆಯಲ್ಲಾಗಲೀ,ಕೊಂಚ ಹದ ತಪ್ಪಿದರೂ ಕಲಸು ಮೇಲೊಗರವಾಗಬಹುದಾದ ಪಾತ್ರಗಳ ಒಳತೋಟಿಯ ಚಿತ್ರಣವಾಗಲೀ,ಕಥಾ ವಸ್ತುವಿನ ಆಯ್ಕೆಯ ಜಾಣ್ಮೆಯಾಗಲೀ,ನಿಭಾಯಿಸಿದ ರೀತಿಯಾಗಲೀ ಮೆಚ್ಚುವಂತದ್ದು. ತಂದೆಯ ಸಾವಿನ ನಂತರದಲ್ಲಿ ಮನೆಗೆ ಬರುವ ಹಿರಿಯ ಮಗ ನಗರ ಜೀವನಕ್ಕೆ ತೆರೆದುಕೊಂಡವನು, ಹಳೆಯ ಸಂಪ್ರದಾಯಗಳ ಧಿಕ್ಕರಿಸಿ ತಂದೆಯ ವಿರೋಧಿಸಿ ಹೋದವನು. ಸಾವಿನ ನಂತರದ ಹದಿನೈದು ದಿನಗಳ ಕರ್ಮ ಹಿಡಿಯುವ ಸಮಯದಲ್ಲಿ ಅವನ ನಂಬಿಕೆ ಮತ್ತು ಶ್ರದ್ಧೆಯ ನಡುವೆ ಹೋರಾಟ ನಡೆಯುತ್ತದೆ, ಅವನ ಪತ್ನಿ ಸಂಪೂರ್ಣ ಆಧುನಿಕಳು, ಅವಳ ಹೊಂದಾಣಿಕೆಯ ಸಮಸ್ಯೆಗಳು, ಮನೆಮಂದಿಯ ಸಮಸ್ಯೆಗಳು ಹೀಗೆ ಕಾದಂಬರಿ ಹತ್ತು ಹಲವು ಮಗ್ಗುಲುಗಳಲ್ಲಿ ಹರಡಿಕೊಂಡಿದೆ. ಅಣ್ಣ ಸುರೇಂದ್ರ ಜಾತಿ ಕೆಟ್ಟವನು ಅವನು ತಂದೆಯ ಕಾರ್ಯ ಮಾಡಬಹುದೆ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಕಾದಂಬರಿ ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಲೇ ,ಕೊನೆಗೆ ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೇಳಿ ಮುಗಿಯುತ್ತದೆ. ಸುರೇಂದ್ರನಿಗೆ ನಗರ ಜೀವನ ಅಭ್ಯಾಸವಾಗಿದೆ. ಅವನು ನೇಹಾ ಜೊತೆ ಲಿವ್ ಇನ್ ಸಂಬಂಧ ಹೊಂದಿದ್ದವ ಆಮೇಲೆ ಮದುವೆಯಾದವನು. ಅವನ ಹಿಡಿತಕ್ಕೆ ಅವಳು ಸಿಗುತ್ತಿಲ್ಲ ಎಂಬ ಅಸಮಧಾನವೂ ಅವನಿಗಿದೆ.ತಂದೆ ತೀರಿ ಹೋದ ಇಂತಹ ಸಮಯದಲ್ಲಿ ತನ್ನ ಪಾತ್ರದ ಕುರಿತು ಅವನಿಗೆ ಗೊಂದಲವಿದೆ. ತಮ್ಮ ನರಹರಿಗೆ ಅಣ್ಣನೆಂದರೆ ಪ್ರೀತಿಯಿದೆ.. ಆದರೆ ಅವನಿಗೂ ಗೊಂದಲಗಳಿವೆ.
ಇನ್ನು ಸುರೇಂದ್ರನ ಬಾಲ್ಯ ಸಖಿ ವಾಣಿ ಅವಳ ಗಂಡ ಭರತ್, ನೆನಪುಗಳಲ್ಲಿ ಬರುವ ತಂದೆ ಶ್ರೀಕಂಠ ಜೋಯಿಸರ ಚಿತ್ರಣ, ತಾಯಿ ಶಾರದಮ್ಮ,ಸುರೇಂದ್ರನ ಚಂದ್ರತ್ತೆ,ಸ್ವಲ್ಪ ಮಟ್ಟಿಗೆ ಆಧುನಿಕರಾದ ಕುಮಾರ್ ಮಾವ,ಅವನ ಬಾಸ್ ಶ್ರೀಕಾಂತ್ ಅವನ ಹೆಂಡತಿ ಪಿಟ್ಟು,ಅವನ ಪತ್ನಿ ನೇಹಾ, ಅವಳ ಆಸೆಗಳು,ಒಗ್ಗಲಾರದ ಸಮಸ್ಯೆಗಳು, ಲೇಖಕಕರೇ ಪಾತ್ರವೋ ಎಂಬ ಅನುಮಾನ ಹುಟ್ಟಿಸುವ ಪುರುಷೋತ್ತಮ(ಇವನು ರಂಗಕರ್ಮಿ) ಹೀಗೆ ನೆನಪಲ್ಲಿ ಉಳಿಯುವ ಹಲ ಪಾತ್ರಗಳಿಂದ ಕಾದಂಬರಿ ಮಹತ್ವದ್ದಾಗಿ ಸ್ಥಾನ ಗಳಿಸುತ್ತದೆ. ಹಾಗಂತ ದೋಷಗಳಿಲ್ಲ ಅಂತ ಅಲ್ಲ. ನೇಹಾ ಮತ್ತು ನರಹರಿಯ ಮಾತುಕತೆ, ನಡವಳಿಕೆ ಓದುವಾಗ ಇದು 'ಅತ್ತಲೇ' ಸಾಗುತ್ತಿದೆಯೋ ಅಂತ ಒಂಥರಾ 'ಸೆಕ್ಶುವಲ್ ಟೆನ್ಷನ್' ಅನ್ನು ಲೇಖಕರು ಹುಟ್ಟುಹಾಕುತ್ತಾರೆ. ಹಾಗೇ ನೇಹಾ ಪಾತ್ರ ಚಿತ್ರಣ, ಅವಳು ದುರ್ಬಲ ಮನಸ್ಸಿನ, ಲೈಂಗಿಕ ಸಂಬಂಧಗಳಿಗೆ ಹಾರಿ ಬೀಳುವ ಹೆಣ್ಣಂತೆ ಭಾಸವಾಗಿಸುತ್ತದೆ. ಆದರೆ ಕಾದಂಬರಿಯ ಒಟ್ಟಂದಕ್ಕೆ ಇದರಿಂದ ಯಾವ ಕುಂದೂ ಆಗುವುದಿಲ್ಲ. ಮೊದಲ ಪ್ರಯತ್ನದಲ್ಲೇ ಕಾದಂಬರಿಯಲ್ಲೇ ತಾನು ಹೇಳ ಬಯಸಿದ್ದನ್ನು ಸ್ಪಷ್ಟವಾಗಿ ನಮಗೆ ದಾಟಿಸುವಲ್ಲಿ ಲೇಖಕ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಾದಂಬರಿಯೂ ಗೆದ್ದಿದೆ.
–ಪ್ರಶಾಂತ್ ಭಟ್
*****
vimarshe chennagide…..pustaka odabekeniside……
ಒಂದೇ ಕಾದಂಬರಿಯ ಬಗ್ಗೆ ಎರಡು ವಿಭಿನ್ನ ವಿಮರ್ಶೆಗಳು !
ಪಂಜುವಿನಲ್ಲಿ ಈ ನಿಟ್ಟಿನ ಪ್ರಯತ್ನ ಆಗುತ್ತಿರುವುದು ಮೊದಲನೆಯ ಬಾರಿ ಅನಿಸುತ್ತೆ. ಚೆನ್ನಾಗಿದೆ . ಮುಂದುವರಿಯಲಿ ಈ ನಿಟ್ಟಿನ ಪ್ರಯತ್ನಗಳು
ವಿಮರ್ಶೆ ಚೆನ್ನಾಗಿದೆ. ಓದಲು ಪ್ರೇರೇಪಿಸುತ್ತಿದೆ!