ಅಮರ್ ದೀಪ್ ಅಂಕಣ

ಕರ್ನಾಟಕ ರಾಜ್ಯ ಲಾಟರಿ “ಅಂದು ಡ್ರಾ ” ಇಂದಿಗೆ ಬಹು “ಮಾನ “: ಅಮರ್ ದೀಪ್ ಪಿ.ಎಸ್.

ಇಪ್ಪತ್ತೊಂದರ ವಯಸ್ಸಿನ ಹುಡುಗ, ಅವನ ತಮ್ಮ ಮತ್ತವರ ತಾಯಿ  ಆಗತಾನೇ ಆ ಹುಡುಗನ ತಂದೆಯ ಶವ ಸಂಸ್ಕಾರ, ಕ್ರಿಯಾ ಕರ್ಮಗಳನ್ನೆಲ್ಲಾ ಮುಗಿಸಿ ಮನೆಗೆ ಬಂದು ಕುಳಿತಿದ್ದರು. ಎದು ರಿಗಿದ್ದವರಿಗೆ ಆಡಲು ಮಾತುಗಳು ಖಾಲಿ ಖಾಲಿ.  ತಾಯಿ ಮಕ್ಕಳ ಮುಖಗಳನ್ನು ನೋಡುತ್ತಲೇ ಹಂಗೆ ಅವರ ನೆನಪು ವರ್ಷದಿಂದ ವರ್ಷ ಹಿಂದಕ್ಕೆ, ಮೂವತ್ತು ವರ್ಷಗಳ ಹಿಂದಕ್ಕೆ ಜಾರಿದವು….. 

ಅದೊಂದು ಪುಟ್ಟ ಗ್ರಾಮ. ಬಿಸಿಲಿಗೂ ಬರಕ್ಕೂ ಮತ್ತೊಂದು ಹೆಸರಾಗಿದ್ದ ಊರದು. ಆ ಊರಿಗೆ ಒಂದೇ ಮುಖ್ಯ ರಸ್ತೆ ಮೂರು ಬಸ್ ನಿಲ್ದಾಣ. ಇಡೀ ರಾಜ್ಯದಲ್ಲಿ ಎರಡೆರಡು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ ಏಕೈಕ ಊರು ಎಂಬ ಖ್ಯಾತಿ ಬೇರೆ. ಅಲ್ಲಿ ಹಗೆಯಲ್ಲದ ಹಗೆ, "ಇಸಂ"ಗಳು ಊರನ್ನು ಆಳುತ್ತಿವೆಯೇ ಹೊರತು ಇಷ್ಟಾರ್ಥಗಳು ಈಡೇರುತ್ತಿಲ್ಲ.  ನಲವತ್ತು ವರ್ಷಗಳ ಹಿಂದೆ ಇದ್ದ ಊರಿಗೂ, ಈಗಿರುವ ಊರಿಗೂ ಬದಲಾವಣೆ ಎಂದರೆ ಕಾಲ, ಕಾಲುಗಳು, ಮಾನಗಳು, ಮನುಷ್ಯರು  ಮತ್ತು ರೇಟುಗಳು ಮಾತ್ರ. ಅದು ಬಿಟ್ಟರೆ ಆ ಊರಲ್ಲಿ ಯಥಾ ಪರಿಸ್ಥಿತಿ.  ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲಾದ ಒಂದು ಗೃಹೋಪಯೋಗಿ ವಸ್ತುಗಳ ತಯಾರಿಕಾ ಕಾರ್ಖಾನೆ ಒಂದಿತ್ತು. ಅದೀಗ  ನೆನಪು  ಮಾತ್ರ.  ಹಾಗಾಗಿ ಆ ಊರಿನಲ್ಲಿ ವಾಸಿಸಿರುವ ಈಗಿನ "ಹಳೆಯ" ಕಾಲದ ಮಂದಿ ಏನಿದ್ದಾರಲ್ಲ? ಅವರೆಲ್ಲರೂ ಆ ಕಾರ್ಖಾನೆಯಲ್ಲಿ ದುಡಿದು ಮೈ ದಣಿಸಿಕೊಂಡವರೇ. ಒಂದು ಕಾಲದಲ್ಲಿ ಸೇರಿನಲ್ಲಿ ಬಂಗಾರವನ್ನು ತುಂಬಿ ಸೆರಗಲ್ಲಿ ಕಟ್ಟಿಕೊಂಡು ಊರೂರು ಅಲೆದರೂ ಗೊತ್ತಾಗದ, ಗೊತ್ತಾದರೂ ಅದನ್ನು ಕದಿಯುವ ಸಾಹಸಕ್ಕೆ ಸಾಮಾನ್ಯಾರ್ಯಾರು ಧೈರ್ಯ ಮಾಡದ ದಿನಗಳವು. ಅಂಥ ಊರಿನಲ್ಲಿ ಎಲ್ಲಾ ಕುಟುಂಬಗಳಂತೆ ಆ ಕುಟುಂಬವೂ ಅದ್ಯಾವುದೋ ದೊಡ್ಡ ಆಣೆ ಕಟ್ಟು ಕಟ್ಟುವ ಸಲುವಾಗಿ ಒಕ್ಕಲೆಬ್ಬಿಸಿದ ಊರಿಂದ  ಕೊಟ್ಟ ಪರಿಹಾರ ಇಸಿದುಕೊಂಡು ಬಂದು ಈ ಊರಿನಲ್ಲಿ ನೆಲೆಗೊಂಡ ಕುಟುಂಬವಿತ್ತು 

ಮನೆಯ ಮಾಲೀಕ ಕಲ್ಲಪ್ಪಜ್ಜನಿಗೆ ಒಂದಲ್ಲ ಅಂತ ಆರು ಮಕ್ಕಳು. ಹಗಲು ಹೊತ್ತಿನಲ್ಲಿ ಬಿಸಿಲ ಬೆಳಕು,  ರಾತ್ರಿಯಾದರೆ ಕಂದೀಲು. ಹಗಲಾದರೆ ಕೇಜಿಗೆ ಎಂಟಾಣೆ, ರುಪಾಯಿಯಂತೆ ಆಳೆತ್ತರ ಹೂವಿನ ರಾಶಿ; ಕಟ್ಟಿ ಕೊಡಲು. ರಾತ್ರಿಯೂ ಮನೆ ಮಂದಿಯ ನಿದ್ದೆಗೆಟ್ಟ ದುಡಿಮೆ; ಕಂದೀಲು ಬೆಳಕಿನ ಜೊತೆ.  ಬಡತನ ಎಷ್ಟೇ ಇದ್ದರೂ ಬೆನ್ನ ಹಿಂದೆ  ಹೆಜ್ಜೆ ಹಾಕುವ ನಾಯಿಯಂತೆ ಬಿದ್ದಿರಬೇಕೆ ವಿನಃ ಎದೆ ಮುಂದೆ ಹುಲಿಯಂತೆ ಎಗರಲು ಅವಕಾಶ ನೀಡದ ಆತ್ಮವಿಶ್ವಾಸವಿತ್ತು ಆ ಕುಟುಂಬದವರಲ್ಲಿ. ಬಹುಶಃ ಸ್ವಾಭಿ ಮಾನ ಇರುವ ಯಾವನೇ ಆದರೂ ಹೀಗೆ ಇರುತ್ತಾರೇನೋ. ಇರುವ ಒಂದೇ ಖಾನಾವಳಿಯಲ್ಲಿ  ಹಿಂಡು ಮಂದಿ ಬಂದು ಉಣ್ಣಲು ಕುಳಿತು ಬಡಿಸಿದ ತಟ್ಟೆಯಲ್ಲಿ, ಹುಡುಕಿದರೂ ನಾಲ್ಕು ಬ್ಯಾಳಿ ಕಾಳು ಸಿಗದ ಸಾರಿನಲ್ಲಿ  ಅನ್ನವನ್ನು ಕಲೆಸಿ ಉಸಿರೆತ್ತದೆ ಗಂಟಲಿಗಿಳಿಸಿ ಹೊಟ್ಟೆ ಮೇಲೆ ಕೈಯಾಡಿಸಿ ಹೊರ ಬೀಳುವಂಥ  ಆ ಮನೆಯ ಅಡುಗೆ ಮನೆ. 

ಇರುವ ಮಕ್ಕಳಲ್ಲೇ ಹೆಣ್ಣುಗಳನ್ನು ಮದುವೆ ಮಾಡಿಕೊಡಬೇಕು. ಒಂದಲ್ಲಾಂಥ ಮೂರು ಬೇರೆ. ಹಾಗೂ ಹೀಗೂ ಬೀಡಿ ಸೇದುತ್ತಾ, ಕೆಮ್ಮುತ್ತಾ, ತನ್ನ ದುಡಿಮೆಯ ದಿನಗಳನ್ನು ನೆನೆಸಿಕೊಳ್ಳುತ್ತಲೇ ಕಾಲ ಕಳೆ ವಂಥ ಕಲ್ಲಪ್ಪಜ್ಜ.ಮತ್ತು ಮನೆಯಲ್ಲಿ ಓಬವ್ವನಂಥ ಕಲ್ಲಪ್ಪಜ್ಜನ ಹೆಂಡತಿ. ಮೂರು ಹೆಣ್ಣು ಮಕ್ಕಳ ಮದುವೆ ಏನೋ ಮಾಡಿದ, ಹಗುರಾದ. ಬದುಕೆ ನ್ನುವುದು ದಿನಗಳು ಚೆನ್ನಾಗಿದ್ದರೆ ಸರ ಸರ ಸರ ಬೋರಾಗದ ಸಿನಿಮಾ ಓಡಿದಂತೆ ಸಾಗುತ್ತದೆ. ದುರ್ಬರ ದಿನ ಗಳೇನಾದರೂ ಒಕ್ಕರಿಸಿದವೊ? ಭಗ ವಂತನು ಸಹ ಅಸಹಾಯಕ ಮತ್ತು ಸ್ತಬ್ಧನಾಗಿ ಬಿಡುತ್ತಾನೆ; ಫೋಟೋದಲ್ಲಿರುವಂತೆ. ಎರಡು ಹೆಣ್ಣು ಮಕ್ಕಳ ಬದುಕೇನೋ ಮಧ್ಯಮ ಕುಟುಂಬವಾದ್ದರಿಂದ ಹೇಗೋ ಸಾಗಿತ್ತು. 

ಅದೊಬ್ಬಳು (ಎರಡನೇ )ಹೆಣ್ಣು ಮಗಳ ಮದುವೆ ಮಾತ್ರ ಆಸ್ತಮಾ ಕೆಮ್ಮು, ಕಫ, ಸುಸ್ತು  ವಯಸ್ಸಿನ ಮುಪ್ಪು ಎಲ್ಲವೂ ಒಟ್ಟೊಟ್ಟಿಗೆ ಕಾಡುವಂತೆ ಕಾಡಿ ಹಿಂಡಿ ಹಿಪ್ಪೆ ಮಾಡಿತ್ತು ಆ ಹಿರಿಯನನ್ನು. 

ಅದೊಂದಿನ ಐನೊರ ಚಂದ್ರಯ್ಯ ಅನ್ನೋರು ಒಂದು ವರ ಕರ್ಕಂಬಂದ್ರು… ಆ ದಿನ ಗುರುವಾರ. ಎರಡನೇ ಮಗಳನ್ನು ನೋಡೋದಿಕ್ಕ ದೂರದ ಉಳಿವಿಯಿಂದ  ಕೆಂಪು ಬಸ್ಸಿನಲ್ಲಿ ಟಿಕೆಟ್ ಚೆಕ್ಕು ಮಾಡೋ ಕೆಲಸ ಮಾಡುವ ಹುಡುಗ; ಹೆಸರು ದಂಡೆಪ್ಪ ಅಂತಿಟ್ಟುಕೊಳ್ಳೋಣ. ನೋಡೋಕೆ ಮಿಲ್ಟ್ರಿ ಕಟ್ಟಿಂಗು, ಪೋಲಿಸು ಎತ್ತ್ರ, ಗಂಟು ಮುಖ, ಎಣಿಸಿ ತಾಸಿಗೆ ನಾಲ್ಕು ಮಾತು. ಅರ್ಧ ಗಂಟೆಗೆ ಒಮ್ಮೆ ನಕ್ಕ ನಸೀಬು. ಭಾಷೆ ಬೇರೆ ಕಡಕ್ಕು.  ಅದಕ್ಕೂ ಮುಂಚೆ ಬಂದ ವರಗಳೆಲ್ಲ ನೋಡಿ ಹೋಗೋರು.  ಆದ್ರೆ ಅವರಿಂದ  ವಾಪಸ್ಸು ತಮ್ಮ ಒಪ್ಪಿಗೆ ಹೇಳಿ ಪತ್ರ ಬರ್ತಾ ಇರ್ಲಿಲ್ಲ.ಮದುವೆ ಕಗ್ಗಂಟು ಅನ್ನಿಸ್ತಿತ್ತು . ಅಂತೂ ಬಂದ ವರ ಒಪ್ಪಿಕೊಂಡಿದ್ದು ಆಯಿತು. ಮುಂದೆ ? 

ಮದುವೆ ಮಾಡಬೇಕು, ಅದಕ್ಕೆ ದುಡ್ಡು ಜೋಡಿಸಬೇಕು.. ಸಾಲ ಸೋಲ ಮಾಡಿದ್ರು ಆಯ್ತು ಅಂದು ಕೊಂಡ – ಯಜಮಾನ ಕಲ್ಲಪ್ಪಜ್ಜ. ಮನೆ ಮುಂದೆ ಇರುವ ಬಯಲಲ್ಲಿ ವಾರದಲ್ಲಿ ಒಂದೆರಡು ಸರ್ತಿ "ಕರ್ನಾಟಕ ರಾಜ್ಯ ಲಾಟರಿ- ಇಂದೇ ಡ್ರಾ… " ಎಂದು ಮೈಕಿನಲ್ಲಿ  ಕೂಗುತ್ತಾ ಕಾರಿನಲ್ಲಿ ಬರೋರು. ಆ ದಿನ ಆಯ್ತ್ವಾರ (ಆದಿತ್ಯವಾರ ) ಇತ್ತು. ಮನೇಲಿ ಇದ್ದ ಅಜ್ಜನ ಮಗ ಕರೆದು ಎರಡು ರುಪಾಯಿ ಕೊಟ್ಟ.  ಒಂದು ಲಾಟರಿ ಆರಿಸಿ ಖರೀದಿಸಿ ತಂದು ಕೈಗಿಟ್ಟಿದ್ದ ಹುಡುಗನಿಗೆ ಆಗಿನ್ನೂ ಐದು ವರ್ಷ. 

ಅದೃಷ್ಟಕ್ಕೆ ಎಂಭತ್ತರ ದಶಕದಲ್ಲಿ ಕೊಂಡ ಅದೇ ಲಾಟರಿಗೆ ಹತ್ತು ಸಾವಿರದ ಬಹುಮಾನ ಹತ್ತಿಬಿಟ್ಟಿತ್ತು. ಏನ್ ಕೇಳ್ತೀರಿ ಸಂಭ್ರಮ. ಮದುವೆ ಖರ್ಚಿನ ದುಃಖವೆಲ್ಲ ಮಾಯವಾಗಿತ್ತು. ನಂಬುತ್ತೀರೋ ಇಲ್ಲವೋ ಅದೇ ಹತ್ತು ಸಾವಿರದಲ್ಲಿ ಆಗತಾನೇ ಪಿಯುಸಿ ಓದುತ್ತಿದ್ದ ಆ ಯಜಮಾನ ಕಲ್ಲಪ್ಜಜ್ಜನ ಮಗನು  ಅಕ ಸ್ಮಾತ್ತಾಗಿ ತೆಗೆದುಕೊಂಡ ಲಾಟರಿಗೆ ಬಂದ ಬಹುಮಾನ ಒಂದು ಮದುವೆಯ ಖರ್ಚನ್ನು ನಿಭಾಯಿ ಸಿತ್ತು. ಲಾಟರಿ ಟಿಕೆಟ್ಟಿನಲ್ಲಿ ಬಂದ ಬಹುಮಾನದ ದುಡ್ಡನ್ನು ಬಸ್ ಟಿಕೆಟ್ಟು ಚೆಕ್ಕು ಮಾಡುವ ವರನಿಗೆ ಕಲ್ಲಪ್ಪಜ್ಜ ಮಗಳನ್ನು  ಕೊಟ್ಟು ಮದುವೆ ಮಾಡಿದ ಖರ್ಚಿಗೆ ಸರಿಯೇನೋ ಆಯಿತು. ಆಗ ಡ್ರಾ ಆದ ಟಿಕೆಟ್ಟು ಮುಂದೆ ಆ ಮದುವೆ ಸಂಭಂಧದಲ್ಲಿ  ನಾನಾ ವಿಧದಲ್ಲಿ ಬಹು "ಮಾನ "ಕ್ಕೆ ಕಾರಣವಾಗುತ್ತ ದೆಂದು ಯಾರೂ ಊಹಿಸಿರಲಿಲ್ಲ.  

ಮದುವೆ ಆದ ಒಂದೆರಡು ತಿಂಗಳಲ್ಲಿ ಒಮ್ಮೆ ಧಾರವಾಡದಿಂದ ಹೊರಟ ಬಸ್ಸಿನಲ್ಲಿ ನವಲಗುಂದದ ಹತ್ತಿರ ನಿಲ್ಲಿಸಿದ ಬಸ್ನಲ್ಲಿ ಅದೇನೋ ಗದ್ದಲವಾಯಿತೋ ಗೊತ್ತಿಲ್ಲ. ಅಂತೂ ಕರ್ತವ್ಯದ ಮೇಲಿದ್ದ ದಂಡೆಪ್ಪ ತನ್ನ ಜೊತೆಗೆ ಬಂದಿದ್ದ ತನ್ನ ಮೇಲಾಧಿಕಾರಿ ಮೇಲೆ ಕೈ ಮಾಡಿ ತಾನು  ಕೆಲಸದಿಂದ ಅಮಾನತ್ತಾದ. ಮತ್ತೆ ಪುನಃ ಕೆಲಸಕ್ಕೂ ಸೇರಿದ. ಮತ್ತೆ ಅಮಾನತ್ತು. ಕೊನೆಗೆ ಕೆಲಸದಿಂದ ಕಿತ್ತೇ ಬಿಟ್ಟರು.  ಹೀಗೆ ಸಾಗಿತ್ತು ನೌಕರಿಯ ಬದುಕು. ಅವನ ತಂದೆ ಸ್ವಾತಂತ್ರ್ಯ ಹೋರಾಟಗಾರನಂತೆ. ಹಾಗಂತ ಹೇಳುತ್ತಿದ್ದ. ಅವರಪ್ಪನ ಪಿಂಚಣಿ, ಅವನ ತಾಯಿ, ಸ್ವಂತ ಮನೆ ಎಲ್ಲಾ ಇತ್ತು, ಜೊತೆಗೆ ಮೊಂಡಾಟ, ಹಠಮಾರಿತನ ಮತ್ತು ಅಸಾಧ್ಯ ತಿಕ್ಕಲು. ಹುಶಃ ಆತನ ತಿಕ್ಕಲುತವೇ ತನ್ನೆಲ್ಲಾ ಬದುಕಿನ ಅವಗಢಗಳಿಗೆ ಕಾರಣವಾಗಿದ್ದರೂ ಆಶ್ಚರ್ಯವಿಲ್ಲ.  

ಮದುವೆಯಾದ ಹೊಸತರಲ್ಲಿ "ನನ್ನ ಬಗ್ಗೆ ತವ್ರಿನ್ಯಾಗ ಇಲ್ಲದ್ದು ಹೇಳಿ ಬರ್ಲಾಕ ಹೋಗಿದ್ಯ" ಎಂದು ದಂಡೆಪ್ಪ ಹೆಂಡತಿಯನ್ನು ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ರಾತ್ರಿ ಆದರೆ ಸಾಕು ಬಾಗಿಲು ತೆಗೆದು "ನನ್ನನ್ನು ಯಾರೋ ಹುಡಿಕ್ಯಂದು ಬಂದಾರ, ಆವ ಯಾರಂತ ಪತ್ತೆ ಮಾಡಕಬೇಕ ಇವತ್ತ" ಅಂತಂದು ಬಡಿಗಿ ಹಿಡುದು ಕತ್ತಲಲ್ಲಿ ಹೊಗೊರ್ನು ಬರೋರ್ನು ಅನುಮಾನಿಸುತ್ತಾ ಕುಳಿತುಬಿಡುತ್ತಿದ್ದ. ಹೊತ್ತೊ ತ್ತಿಗೆ ಊಟ ಮಾತ್ರ ರಗಡು ತಿಂದು ಯಾವಗಲೂ ಪ್ಯಾಂಟಿನಲ್ಲಿ ಇಟ್ಟಿರುತ್ತಿದ್ದ ಎಲೆ ಅಡಿಕೆಗೆ  ಸುಣ್ಣ ಸವರಿ ಅಗಿಯುತ್ತಾ ಬೀದಿಗುಂಟ ಅಲೆದು ಯಾರಾದ್ರೂ ದಾರಿಯಲ್ಲಿ ಈತನ ಕಡೆ ಅನುಮಾನದಿಂದ ನೋಡಿದ್ರೂ  ಬಂತು, "ಯಾಕ್  ನೋಡ್ತೀಲೇ" ಅಂದವನೇ ಕುತ್ತಿಗೆಗೆ ಕೈ ಹಾಕುತ್ತಿದ್ದ. ಮದುವೆಗೂ ಮುಂಚಿನಿಂದಲೂ  ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆಯೇ ಎಲ್ಲರೂ ಮಲಗಿದರೆಂದು ಖಾತರಿ ಯಾದ ಮೇಲೆಯೇ ತಾನೊಬ್ಬನೇ ಪ್ರತ್ಯೇಕ ಖೋಲಿಯಲ್ಲಿ ಮಲಗುತ್ತಿದ್ದ; ಜೊತೆಗೆ ಒಂದು ಕಬ್ಬಿಣದ ಸಲಾಕೆಯೊಂದನ್ನು ಇಟ್ಟುಕೊಂಡು. ಮದುವೆಯ ನಂತರವೂ ಹೀಗೆ ಇದ್ದ ಆದರೆ, ಕಬ್ಬಿಣದ ಸಲಾಖೆ ಬದಲಿಗೆ ಹಿಡಿ ಗಾತ್ರದ ಬಡಿಗಿ ಇಟ್ಟುಕೊಳ್ಳುತ್ತಿದ್ದ . ಇವನ ವರ್ತನೆಯೇ ವಿಚಿತ್ರವಾಗಿ ಕಾಡಿತ್ತು. ವಯ ಸ್ಸಾದಂತೆ ಅವನ ಅಮ್ಮ ತೀರಿದಳು. ಬಂಧುಗಳು ದೂರಾದರು. ಆದರೆ ಸಂಪರ್ಕ ಕಡಿದುಕೊಳ್ಳಲಿಲ್ಲ.  ಕಾರಣ ಪೂರ್ವಜರ ಆಸ್ತಿ ಮೇಲಿನ ಕಣ್ಣು ಮತ್ತು ದುರಾಸೆ.  

"ಇನ್ನೂ ಮಕ್ಕಳಿಲ್ಲ, ಮಕ್ಕಳಾದ್ರೆ ಹೆಂಗಪ್ಪಾ" ? ಚಿಂತೆಗೆ ಬೀಳುತ್ತಿದ್ದಳು ಹೆಂಡತಿ.  ಇನ್ನು ಅವನ ಹಿಂಸೆ ತಾಳಲಾರದೇ ತನ್ನ ಕೈಲಿದ್ದ ಓದಿನ ಗಂಟು ಹೊತ್ತುಕೊಂಡು ಹಳಿಯಾಳ ರಸ್ತೆಯ ಊರೊಂದ ರಲ್ಲಿ  ಒಂದು ಕಡೆ ಶಾಲೆ ಯಲ್ಲಿ "ಶಿಕ್ಷಕಿ" ಯಾಗಿ ಬದುಕು ಆರಂಭಿಸಿ ತನ್ನನ್ನು "ಟೀಚರಮ್ಮ" ನೆಂದೇ ಗುರುತಿಸಿಕೊಂಡಿದ್ದಳು; ತವರಿಗೆ ಹೋಗದೇ. ತನ್ನನ್ನು  ಬಿಟ್ಟಿರಕೂಡದೆಂದು ಮತ್ತೆ ಜೊತೆಯಾಗಿದ್ದ. ಒಂದಾರು ವರ್ಷಗಳ ಕಾಲ ಹಾಗೂ ದುಡಿಯದೇ ಹೆಂಡತಿ ದುಡಿಮೆ ಮೇಲೆ ಅವಲಂಭಿಸಿ ಜೊತೆಗಿದ್ದ. ಎರಡು ಗಂಡು ಮಕ್ಕಳಾದವು. ಉಹೂ… ಏನೂ ಬದಲಾವಣೆ ಇಲ್ಲ. ತನ್ನ ಊರು ತಿರುಗುವ ಅಲೆ ಮಾರಿತನದಲ್ಲಿ ಬಸ್ಸಿಂದ ಬಸ್ಸಿಗೆ ಊರಿಂದ ಊರಿಗೆ ಹೋಗುವಾಗ ಕಂಡಕ್ಟರ್ "ಟಿಕೆಟ್ ಟಿಕೆಟ್" ಎಂದು  ಕೂಗುತ್ತಾ ಬಂದೊಡನೆ ಇವನ ಕೆಲಸದಲ್ಲಿದ್ದಾಗಿನ ಬುದ್ಧಿ ಜಾಗೃತವಾಗಿ "ನಾನ್ ಚೆಕಿಂಗ್ ಆಫೀಸರ್ ಆದೀನಿ…… ನನ್ನೇ ಟೆಕೆಟ್ ಕೇಳ್ತಿ ಏನ " ? ಎನ್ನುತ್ತಲೇ ಸರ ಸರ ಇಳಿದು ನಡೆದು ಬಿಡುತ್ತಿದ್ದ. ಮತ್ತೆ ಇನ್ನ್ಯಾವುದೋ ಬಸ್ಸಿನಲ್ಲಿ ಮತ್ತೆ ತನ್ನ ಹೆಂಡತಿ ಕೆಲಸ ಮಾಡುತ್ತಿದ್ದ ಊರಿಗೆ ಬರು ತ್ತಿದ್ದ.  ಅಷ್ಟಕ್ಕೂ ಆತನು k.s.r.t.c. ಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ನಿರ್ವಹಿಸುತ್ತಿದ್ದಂಥ, ನೋಡಿದ  ಕೆಲ ಕಂಡಕ್ಟರ್ ಗಳು ಇವನನ್ನು ನೋಡಿ ಸುಮ್ಮನೇ "ಹೋಗ್ಲಿ ಬಿಡು ಅತ್ಲಾಗೇ, ತಿಕ್ಕಲು ಮುಂಡೇದು " ಅಂದು ಬಿಟ್ಟುಬಿಡುತ್ತಿದ್ದರು.  

ಒಮ್ಮೆ ಅದೇನಾಯಿತೆಂದರೆ, ಮಕ್ಕಳು ಆಗಲೇ ಐದಾರು ವರ್ಷಗಳ ವಯಸ್ಸನ್ನು ಕಳೆದಿದ್ದವೋ ಏನೋ ರಾತ್ರಿ ಹತ್ತರ ಸುಮಾರಿಗೆ "ಟೀಚರಮ್ಮ"ನ ಮನೆಯಿಂದ ಅರೆಚಾಟ ಚೀರಾಟ ಕೇಳಿದ ಸದ್ದಿಗೆ ಅಕ್ಕ ಪಕ್ಕದ ಹಳ್ಳಿಯ ಜನಕ್ಕೆ ಗಾಬರಿಯಾಗಿ ಬಂದು ನೋಡಿದರೆ, ದಂಡೆಪ್ಪ ಹೆಂಡತಿಯನ್ನು ಬಡಿಯುತ್ತಿದ್ದ. 
"ರೀ… ಸುಮ್ನೆ ಟೀಚರಮ್ಮ, ಮಕ್ಕಳ ಜೊತೆ ಬೇಷಿದ್ದೀ ಸರೀ ಹೋತು" ಇಲ್ಲಾಂದ್ರ.. ನಾವ್ ಮಾತಾ ಡಲ್ಲ.. ನಮ್ ಬಡಿಗಿ ಮಾತಾಡ್ತಾವು" ಅಂದುಬಿಟ್ಟರು. ಅಂದಿನಿಂದ ಊರಿನಲ್ಲಿ "ಬಯಲಿಗೆ" ಹೋಗ ಬೇಕಾದರೂ ಜೊತೆಗೆ ಒಂದು ಕುಡುಗೋಲು ಹಿಡಿದೇ ನಡೆಯುತ್ತಿದ್ದ.  ಹೆಂಡತಿ, ಮಕ್ಕಳು ಮನೆಯಲ್ಲಿ, ಹೊರಗೆ ಅಕ್ಕಪಕ್ಕದವರು ಎಲ್ಲರೂ ಇವನ ವರ್ತನೆಗೆ ರೋಸಿದರು. ಒಂದಿನ ಮನೆಯಲ್ಲಿ ರಾತ್ರಿ ಊಟ ಮಾಡಿ ಕುಳಿತಿದ್ದ. ಸಮಯ ಹತ್ತಾಗಿತ್ತು.. 

"ಹೊತ್ತಾತು ಇನ್ನಾ ಮಕ್ಕಾಳ್ಲಾದಿಲ್ಲೇನು" ಹೆಂಡತಿ ಕೇಳಿದಳು. 

ಕುಡುಗೋಲು ಬಂಡೆಗಲ್ಲಿಗೆ ಮಸೆಯುತ್ತಿದ್ದ  ದಂಡೆಪ್ಪ;

"ಇಲ್ಲ , ಇವತ್ತು ನಿನ್ನ, ನಿನ್ ಮಕ್ಕುಳ್ನ ಕೊಚ್ಚಿ ಹಾಕೇ ನಾನ್ ಮಕ್ಕಳ್ಲಾದು " ಅಂದ. 

ಆಗತಾನೇ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಿದ್ದಳು.  ಯಾವಾಗ ದಂಡೆಪ್ಪ ಹಾಗೆಂದನೋ ಎದೆ ಬಡಿದುಕೊಳ್ಳುತ್ತಲೇ ನಿದ್ದೆ ಮಬ್ಬಿನಲ್ಲಿದ್ದ ಮಕ್ಕಳನ್ನು ಎಬ್ಬಿಸಿ ಕೈ ಹಿಡಿದು ಹೊರಗೋಡಿದಳು. ಮತ್ತದೇ ಜನರು ಧಾವಿಸಿ ಬಂದು ನಿಂತು ಅಬ್ಬರಿಸಿಬಿಟ್ಟರು; "ಹೇ … ದಂಡೆಪ್ಪ ಇವತ್ ನೀ ಹೊರಗ್ ಬಾ… ಇಲ್ಲೇ ನಿಂಗೆ ಗುಂಡಿ ತೊಡ್ತೀವಿ ….. "

ಅವತ್ತಿಡೀ ರಾತ್ರಿ, ಬೆಳಗಿನ ಜಾವ ಐದು ಗಂಟೆವರೆಗೆ ಆ ಹಳ್ಳಿಗೆ ಹಳ್ಳಿಯೇ ಟೀಚರಮ್ಮನ ಮನೆ ಮುಂದೆ ಜಮಾಯಿಸಿತ್ತು. ಆದರೂ ದಂಡೆಪ್ಪ ಬಾಗಿಲ ಅಗುಳಿಯನ್ನು ಅಲುಗಿಸಲೂ ಇಲ್ಲ. ಒಳಗೇ ದೀಪವಾರಿಸಿ ಕತ್ತಲಲ್ಲಿ ಮೂಲೆಯಾಗಿದ್ದ. ನೋಡಿ, ನೋಡಿ, ಸಾಕಾದ ಜನ ತಿರುಗಾ ಹೊಲಕ್ಕೆ ಹೋಗುವ ಸಮಯವಾಗಿದ್ದರಿಂದ ಟೀಚರಮ್ಮ ಮತ್ತು ಅವರ ಮಕ್ಕಳನ್ನು ಅಂಗನವಾಡಿ ಶಾಲೆಯಲ್ಲಿ ಆಯಾಳನ್ನು ಜೊತೆಗಿರಿಸಿ ನಡೆದರು.  ರಾತ್ರಿಯೆಲ್ಲ ನಿದ್ದೆಗೆಟ್ಟ ಮಬ್ಬಿಗೆ ಎಚ್ಚರವಾಗಿದ್ದೇ ಬೆಳಗ್ಗೆ ತಡವಾಗಿ. ಅದೂ ಯಾರೋ ಕೂಗುವ ಸದ್ದಿಗೆ.  ಬಾಗಿಲು ತೆರೆದ ಟೀಚರಮ್ಮಳಿಗೆ ಆಶ್ಚರ್ಯ 
ಕಾದಿತ್ತು. 

" ದಂಡೆಪ್ಪ ನಿಮ್ ಮನೇಲಿ ಕಾಣ್ತಾ ಇಲ್ಲ …ಮನೆ ಬಾಗಿಲು ಮುಂದು ಮಾಡಿ ಅದ್ಯಾವಾಗ ಊರು ಬಿಟ್ಟನೋ ಏನೋ ಒಟ್ಟಿನಲ್ಲಿ ದಂಡೆಪ್ಪ ಇಲ್ಲ. " ಪಕ್ಕದ ಮನೆಯ ಮೈಲಾರಪ್ಪ ಹೇಳಿದ್ದ.  ಅಂದು ಊರು ಬಿಟ್ಟು ಹೋದ ದಂಡೆಪ್ಪ ಇಡೀ ಹದಿನೈದು ವರ್ಷ ಹೆಂಡತಿ ಮಕ್ಕಳಿಗೆ ಮುಖ ತೋರಿಸಿದ್ದಿಲ್ಲ. 
ಈ ಹೊತ್ತಿಗೆಲ್ಲ ಕಲ್ಲಪ್ಪಜ್ಜ, ಮತ್ತವನ ಒಬವ್ವನಂಥ ಹೆಂಡತಿ ಕೈಲಾಸ ಸೇರಿದ್ದರು. ಕಲ್ಲಪ್ಪಜ್ಜನ ಮಗ ತನ್ನ ಕುಟುಂಬದ ಜೊತೆ  ಇರುವ ತಟುಗು ದುಡಿಮೆಯಲ್ಲೇ ಅಕ್ಕ ಟೀಚರಮ್ಮನಿಗೆ ಹಣದ ಸಹಾಯ ಮಾಡುತ್ತಿದ್ದ.  ಟೀಚರಮ್ಮನ ಮಕ್ಕಳು ಚೆನ್ನಾಗಿ ಓದುತ್ತಿದ್ದವು. 

ಹದಿನೈದು ವರ್ಷಗಳ ನಂತರ ಮತ್ತೊಂದು  ಆಘಾತ ಕಾದಿತ್ತು ಟೀಚರಮ್ಮ ಮತ್ತು ಮಕ್ಕಳಿಗೆ. ಮಕ್ಕಳು ಓದುತ್ತಿದ್ದ ಶಾಲೆಗೇ ಫೋನು ಬಂದವು.

"ದಂಡೆಪ್ಪ ನಿಮಗ್ ಗೊತ್ತೇನ್ " ? ಫೋಟೋ ಸಮೇತ ಬೆಂಗಳೂರಿಂದ ಪೋಲಿಸ್ ಕಾನ್ಸ್ಟೇಬಲ್ ಒಬ್ಬ ನೇರವಾಗಿ ಟೀಚರಮ್ಮ ಇರುವ ಊರಿಗೆ ಬಂದಿದ್ದ. 

"ಯಾಕ್ … ಏನಾತು "  ಮಕ್ಕಳು ಕೇಳಿದವು. 

"ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಇದಾರ….  ಶವಗಾರದಾಗ  ನಾಲ್ಕೈದು ದಿನ ಆತು. ಗುರುತು ಪತ್ತೆ ಮಾಡ್ಬೇಕಿತ್ತು  ನಡೀರಿ " ಅಂದ. 

ಅಲ್ಲಿಗೆ ಟೀಚರಮ್ಮ  ಮತ್ತು ಮಕ್ಕಳು ಹೋದಾಗಲೇ ಗೊತ್ತಾಗಿದ್ದು; ದಂಡೆಪ್ಪ ಊರಿಂದ ಊರಿಗೆ ಬಸ್ಸಿಂದ ಬಸ್ಸಿಗೆ ಭಾಷೆ ಗೊತ್ತಿರದ ಕೊಲ್ಕೊತ್ತಾಕ್ಕೂ ರೈಲಿನಲ್ಲಿ ಹೋಗಿ, ಮತ್ತೆ ಹೈದರಾಬಾದು, ಬೆಂಗಳೂರು, ಸಿಕ್ಕ ಸಿಕ್ಕಲ್ಲಿ ಅಡ್ಡಾಡಿದ್ದ. ಆಗೆಲ್ಲ ಅವನ ಹತ್ತಿರ ಹದಿನೈದು ವರ್ಷದ ಹಿಂದೆ ಹಿಡಿದಿದ್ದ ಕುಡುಗೋಲು ಅವನ ಹತ್ತಿರವೇ ಇತ್ತಂತೆ. ಪೊಲೀಸರು, ಅಪರಿಚಿತರು ಕೇಳಿದರೆ, "ನಾನು ಹೊಲ್ದಾಗ  ಕೆಲ್ಸ ಮಾಡ್ದೋನು, ಇಲ್ಲೇನರ ಆಜುಬಾಜು ಕೆಲ್ಸ ಕೊಟ್ರ ಮಾಡ್ತೇನಿ" ಅಂದಿದ್ದನಂತೆ. ಬಹಳ ದಿನ ಮೆಜಸ್ಟಿಕ್ ಬಸ್ ನಿಲ್ದಾಣದಲ್ಲೇ ಮಲಗುತ್ತಿದ್ದನಂತೆ.  ಟೆರರಿಸ್ಟ್, ಆಗುಂತಕರು, ಕಳ್ಳರು, ಎಲ್ಲರನ್ನೂ ನೋಡುವಂತೆ ಅಲ್ಲೇ ಬಹಳ ದಿನಗಳಿಂದ ಮಲಗುತ್ತಿದ್ದ ದಂಡೆಪ್ಪನನ್ನು ಪೊಲೀಸರು ಗದರಿಸಿ ಕೇಳಿ ದ್ದಾರೆ… ಉಹೂ … ಆಸಾಮಿ ಜಗ್ಗಿಲ್ಲ. ಅಷ್ಟರಲ್ಲಾಗಲೇ ದಂಡೆಪ್ಪನ ಆರೋಗ್ಯವೂ ಕ್ಷೀಣಿಸಿದೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ವಿವಿರಗಳನ್ನು ಆತನಿಂದ ಪಡೆದು ನಮೂ ದಿಸಿ ಚಿಕಿತ್ಸೆ ಕೊಟ್ಟಿ ದ್ದಾರೆ. ಬಸ್ ಚಾರ್ಜ್ ಕೊಟ್ಟು ಅದೇ ಮೆಜಸ್ಟಿಕ್ ನಲ್ಲಿ ಪೊಲೀಸರು ದಂಡೆಪ್ಪ ಹೇಳಿದ ಊರಿನ ಬಸ್ ಹತ್ತಿಸಿ ಕಂಡಕ್ಟರ್ ಗೆ ಒತ್ತಿ ಒತ್ತಿ ಹೇಳಿ ಕಳಿಸಿದ್ದಾರೆ.  ಬಸ್ ನಿಲ್ದಾಣ ದಾಟಿ ಎರಡು ಕಿಲೋಮೀಟರು ದಾಟಿರಲಿಕ್ಕಿಲ್ಲ, ದಂಡೆಪ್ಪ ಪುನಃ ಬಸ್ಸಿಳಿದು ಮೆಜಸ್ಟಿಕ್ ಗೆ ಬಂದು ರಾತ್ರಿ ಮಲಗಿದ್ದಾನೆ. ಆ ರಾತ್ರಿ ಅವನ ಹತ್ತಿರ ಬೆಂಗಳೂರಿನಲ್ಲಿ ಅನಾಥ ಶವಗಳನ್ನು ದಫನು ಮಾಡುವ ಮಹಾದೇವಪ್ಪ ಅವತ್ಯಾಕೋ ಮೆಜಸ್ಟಿಕ್ ನಲ್ಲಿ ಈತನನ್ನು ಎಬ್ಬಿಸಿ ಮಾತಾಡಿದ್ದಾನೆ. ಮಹಾದೇವಪ್ಪ ನೊಂದಿಗೆ ಸುಮಾರು ಹೊತ್ತು ದಂಡೆಪ್ಪ ಮಾತಾಡಿದ್ದಾನೆ.  

ಒಂದು ಕಾಲದಲ್ಲಿ ಇದೇ ಕೆಂಪು ಬಸ್ಸಿನಲ್ಲಿ ಹತ್ತಿಳಿವ ಪ್ರಯಾಣಿಕರನ್ನು ವಿಚಾರಿಸಿ ಟಿಕೆಟ್ಟು ಚೆಕ್ಕು ಮಾಡು ತ್ತಿದ್ದ ತಾನು ಅದೆಷ್ಟು ಊರುಗಳಿಗೆ ರೈಲೆಂದರೆ ರೈಲು ಬಸ್ಸೆಂದರೆ ಬಸ್ಸು ಯಾವಾಗೆಂದರೆ ಆವಾಗ ಬದುಕಿನ ದಿಕ್ಕೇ ತಪ್ಪಿದವನಾಗಿ ಟಿಕೆಟ್ಟೆ ಇಲ್ಲದೇ ಅಲೆದು ಬಿಟ್ಟೆನಲ್ಲ ? ಎಂಬ ಕೊರಗು ಕಾಡಿತ್ತಂತೆ… ದುಡಿಯುವ, ಬದುಕುವ, ಹೆಂಡತಿ ಮಕ್ಕಳು ಎನ್ನದೇ ವರ್ಷಗಳಷ್ಟು ಕಾಲ ಅನುಮಾನ, ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ತನಗೆ ಯಾರೋ ಎನೋ ಮಾಡಲೆತ್ನಿಸುತ್ತಿದ್ದಾರೆ ಮತ್ತು ತನ್ನ ಬಗ್ಗೆ ಯಾರೋ ಯಾರಿಗೋ ಏನೇನೋ ಹೇಳುತ್ತಿದ್ದಾರೆಂಬ ದುಡುಕಿನಲ್ಲೇ ಬದುಕು ಕಳೆದು ಕೊಂಡ ಬಗ್ಗೆ ಹೇವರಿಕೆ ಬಂದು ತನ್ನವರು  ಯಾರಿಗೂ ಗೊತ್ತಾಗದಂತೆ ಇಲ್ಲೇ ಬಿದ್ದು ಸಾಯುತ್ತೇನೆ ಅಂತಲೂ ಹೇಳಿದ್ದನಂತೆ. ಆಗ ಅವನ ಕೈಯಲ್ಲಿ ಕುಡುಗೋಲು ಇರಲಿಲ್ಲ.  ಮಹಾದೇವಪ್ಪ ಇಂಥ  ಅದೆಷ್ಟೋ ಜನರ ಕಥೆಗೆ ಸಾಕ್ಷಿ ಆಗಿದ್ದಾನೋ ಏನೋ. ತಲೆಯಾಡಿಸಿ ನಡೆದಿದ್ದಾನೆ; ಸಾಧ್ಯಂತವಾಗಿ ಸಮಾ ಧಾನಿಸಿ.  ಸರ ಹೊತ್ತಿನ ಕತ್ತಲ ಮಬ್ಬಿನಲ್ಲಿ ದಂಡೆಪ್ಪ ಮೆಜಸ್ಟಿಕ್ ನ ಪ್ಲಾಟ್ ಫಾರ್ಮ್ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ. ಬೆಳಿಗ್ಗೆ ಅದೇ ಮಹಾದೇವಪ್ಪನೇ  ದಂಡೆಪ್ಪನ ಹೆಣ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಪೊಲೀಸರಿಗೆ ತಿಳಿಸಿದ್ದಾನೆ.ಮತ್ತೆ ಪೊಲೀಸರು ದಂಡೆಪ್ಪನ ಹೆಂಡತಿ ಮಕ್ಕಳಿಗೆ ಆತನ ಹೆಣ ಗುರುತು ಪತ್ತೆ ಮಾಡಲೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆಸಿದಾಗ ಇವೆಲ್ಲಾ ಬಹಿರಂಗವಾಗಿವೆ.

ಒಂದು ಸಂಭಂಧ ಲಾಟರಿ ಟಿಕೆಟ್ಟು ಹತ್ತಿದ ಬಹುಮಾನದಿಂದ ಬಸ್ಸಿನ ಟಿಕೆಟ್ಟು ಚೆಕ್ಕು ಮಾಡುವವ ನೊಂದಿಗೆ ಆರಂಭವಾಗಿ  ಟಿಕೆಟ್ಟು ಇಲ್ಲದೇ ಇಳಿವ ಊರಿನ ಪರಿವೇ ಇರದೇ ಸಾಗಿದ ಬದುಕು ಕೊನೆಗೆ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲೆ ಪ್ರಾಣ ಬಿಟ್ಟವನ ಅಂತ್ಯ ಸಂಸ್ಕಾರ ಮುಗಿಸುವುದರೊಂದಿಗೆ ನಿಂತ ಕಥೆ ಕಣ್ಣ ಮುಂದೆ ನಡೆದ ಟ್ರಾಜಿಡಿ ಸಿನಿಮಾದಂತೆ ಸಾಗಿ ಹೋಯಿತು.. 

ಟೀಚರಮ್ಮ ಮತ್ತು ಮಕ್ಕಳು  ನಡೆದ ಘಟನೆ ಹೇಳಿ ಸುಮ್ಮನೆ ಕುಳಿತಿದ್ದರು, ಎದುರಿಗಿದ್ದವರೂ ಸಹ; ನೀರವ ಮೌನದೊಂದಿಗೆ…… 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

13 thoughts on “ಕರ್ನಾಟಕ ರಾಜ್ಯ ಲಾಟರಿ “ಅಂದು ಡ್ರಾ ” ಇಂದಿಗೆ ಬಹು “ಮಾನ “: ಅಮರ್ ದೀಪ್ ಪಿ.ಎಸ್.

  1. ಅಮರ್ ದೀಪ್, ಸೊಗಸಾದ ಬರವಣಿಗೆ. ಓದಿದ ನಂತರ ನನ್ನಲ್ಲಿ ಎದ್ದ ಪ್ರಶ್ನೆ, ಇದನ್ನ ಕತೆಯನ್ನಲೇ? ಬದುಕೆನ್ನಲೇ? ದಟ್ಟ ವಿವರಗಳೊಡನೆ ಬರೆದಿದ್ದೀರಿ. ಹೀಗೆ ಬರೆಯುತ್ತೀರಿ. 

  2. Jeevanalkke eshtella thiruvugalu? Eshtella sankashtagalu! Nimma lekhanadalli baalina vaichithryagalannu sariyaagiye bimbisiddeeri Amar. 

  3. ಯಾರಿಗೆ ಅನುಕಂಪ  ಸೂಚಿಸಬೇಕೆಂದೇ ತಿಳಿಯಲಿಲ್ಲ.. 🙁 ಒಳ್ಳೆಯ ಬರವಣಿಗೆ 

  4. ಲೇಖನ ಓದಿ ಅಭಿಪ್ರಾಯ ದಾಖಲಿಸಿದ ಎಲ್ಲಾ ಸ್ನೇಹಿತರಿಗೂ ನನ್ನ ಧನ್ಯವಾದಗಳು …. 

Leave a Reply

Your email address will not be published. Required fields are marked *