ಕರ್ನಾಟಕ ಪರಿಶೆ (ಭಾಗ-3): ಎಸ್. ಜಿ. ಸೀತಾರಾಮ್, ಮೈಸೂರು


      
ಕನ್ನಡ ಭಾಷೆಯನ್ನು ಅರಳಿಸುವ ಹೆಸರಿನಲ್ಲಿ, ಅದೇ ಖ್ಯಾತ ಸಾಹಿತಿಗಳನ್ನು ಉತ್ಸವಗಳಲ್ಲಿ ಮತ್ತೆಮತ್ತೆ ಮೆರೆಸಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮೊದಲಾದ ಪದವಿ-ಪ್ರಶಂಸೆಗಳ ಸುಂಟರಮಳೆಯನ್ನು ಅವರ ಮೇಲೆ ಚಳಿಜ್ವರಬರುವಮಟ್ಟಿಗೆ ಸುರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. (“ರಾಜ್ಯಕವಿ” ಬಿರುದು ಯಾವ “ದಾತಾರ” ನೇತಾರರಿಗೂ ಏಕೋ ಇನ್ನೂ ಹೊಳೆದಿಲ್ಲ! ನಿಜಾರ್ಥದಲ್ಲಿ “ರಾಷ್ಟ್ರಕವಿ” ಎಂಬುವುದೂ “ರಾಜ್ಯಕವಿ” ಅಷ್ಟೇ ಅಲ್ಲವೇ?) ಕನ್ನಡ “ಅಕ್ಕ-ಡುಮ್ಮಿ” (‘ಅಕ್ಯಾಡಮಿ’- ಡಿ.ವಿ.ಜಿ. ಕರೆದಂತೆ), ಪರಿಷತ್ತು, ಪ್ರಾಧಿಕಾರ, ಪೀಠ, ವಿಶ್ವವಿದ್ಯಾನಿಲಯ, ಇಲಾಖೆ ಇತ್ಯಾದಿ ಬಗೆಬಗೆಯ ವೇದಿಕೆಗಳಿದ್ದು (“ಕನ್ನಡ ಚಲನಚಿತ್ರಗೀತಾಪುಸ್ತಕ ಮಹಾನಿಗಮ” ಎಂಬ ‘ಮಹತ್ವ’ ಸಂಸ್ಥೆಯೊಂದು ಈಗ ಬಾಕಿಯಿದೆ), ಅವುಗಳಲ್ಲಿ ಪ್ರತಿಯೊಂದೂ ಇಷ್ಟಿಷ್ಟು ಬಿರುದು-ಬಾವಲಿ, ಸಮ್ಮಾನ-ಬಹುಮಾನ ಆಗಾಗ್ಗೆ ಕೊಡುತ್ತಿರಲೇಬೇಕಾದ ‘ಕಟ್ಟುಪಾಡು’ ಇರುವುದರಿಂದಾಗಿ, ಇಂಥ ‘ಪ್ರಶಸ್ತಿವರ್ಷಿಣಿ’ಯನ್ನು “ಅರ್ಥ” ಮಾಡಿಕೊಳ್ಳಬಹುದು! ಆದರೆ, ಕನ್ನಡದ ತಾಯಿಬೇರಿಗೆ ನೀರೆರೆಯುವ ಆವಶ್ಯಕ ಊಳಿಗವನ್ನು ಮಾಡುವುದು ಗ್ರಂಥಸಂತಾನೋತ್ಪತ್ತಿಯಲ್ಲ; ಅದು, ಹಾದಿ-ಹಟ್ಟಿಗಳಲ್ಲಿರುವ ಅನಕ್ಷರಸ್ಥರಿಗೆ-ಕನ್ನಡಾಸಕ್ತ ಅನ್ಯಭಾಷಿಕರಿಗೆ ಅಕ್ಷರಾಭ್ಯಾಸ ಮಾಡಿಸುವ ಸಾದಾ-ಸದ್ದಿಲ್ಲದ-ಸತತ-ಸಾರ್ಥಕ ಸ್ವಯಂಸೇವೆ.  ನ್ಯಾಯವಾಗಿ, ಇಂಥ ಮೂಲಸೇವೆಗಳು ಮೊದಲು “ಲೋಕಾರ್ಪಿತ” ಆಗಬೇಕು; ಗ್ರಂಥರಾಶಿಗಳಲ್ಲ. 

ದಿನಗನ್ನಡವನ್ನು ಸರಿಯಾಗಿ ಬರೆಯುವ-ನುಡಿಯುವ ಅಭ್ಯಾಸವನ್ನೂ ಪೋಷಿಸಬೇಕು. ಕನ್ನಡಿಗರೇ ಕನ್ನಡವನ್ನು ಎಷ್ಟು ಕೀಳಾಗಿ ಕಾಣುತ್ತಿದ್ದಾರೆಂಬುದಕ್ಕೆ “ಕರ್ನಾಟಕ ಉಚ್ಛನ್ಯಾಯಾಲಯ” ಎಂದು ಹೈಕೋರ್ಟ್ ಮೇಲೆ ಕೆತ್ತಿರುವುದೇ ಸಾಕು (ಸದ್ಯ, ‘ಹುಚ್ಚುನಾಯಲಾಯ’ ಎನ್ನಲಿಲ್ಲವಲ್ಲ!). ಎಲ್ಲೆಡೆ ಕಂಗೊಳಿಸುತ್ತಿರುವ ಶುಭಾಷಯ (‘ಸುಭಾಷಯ್ಯ’?), ಸೃಷ್ಠಿ ಮತ್ತು ಸ್ವಾರಸ್ಯಕರವಾಗಿ, ಇಂಗ್ಲಿಷ್ 8ನೇ ಅಕ್ಷರ “H” ಜಾಗದಲ್ಲಿ, ಕನ್ನಡಿಗರು ಹೆಚ್ಚಾಗಿ ಹಚ್ಚುವ “ಹೆಚ್” (ಹೊರಗಿನವರು ಇದರಿಂದಲೇ ಕನ್ನಡಿಗರನ್ನು ಗೊತ್ತುಹಚ್ಚಿ, ‘ಹುಚ್’ ಹಿಡಿಸುತ್ತಾರೆ!), ಮೊದಲಾದಂಥ ಮೂಲದೋಷಗಳ ಬಗ್ಗೆಯೂ, ಮತ್ತು ಟಿ.ವಿ. ವಾಹಿನಿಗಳಲ್ಲಿ ಹಗಲೂರಾತ್ರಿ ಕೊಳೆ ಅಥವಾ ಕೊಲೆಯೇ ಆಗುತ್ತಿರುವ ಕನ್ನಡದೆಡೆಗೂ, “ಕನ್ನಡವೇ ಎನ್ನುಸಿರು” ಎನ್ನುವವರ ಉಸಿರು ತಟ್ಟಬೇಕು.  ಎಸ್.ಎಸ್.ಎಲ್.ಸಿ. ಓದಿರುವವರು ಕನ್ನಡದಲ್ಲಿ ಒಂದು ಪುಟ್ಟ ಅರ್ಜಿಯನ್ನಾದರೂ ಬರೆಯಲು ಕಲಿತಿರಬೇಕು. (ಇಲ್ಲದಿದ್ದರೆ, ‘ಇಂ ಥೂ ನಿಮ್ಮಾವ,’ ‘ಕೃತಘ್ನನಾಗಿದ್ದೇನೆ’ ಇವುಗಳೆಲ್ಲ ಸೇರಿ ಇದೊಂದು ನಗೆಬರಹವಾಗುವುದಷ್ಟೇ.) (ಸರ್ಕಾರವು ಕನ್ನಡವನ್ನು ನೇರ್ಪಡಿಸುವುದು ಎಂದೊಡನೆ, “ಕನ್ನಡ ಕಾಕಗುಣಿತ ಪ್ರಾಧಿüಕಾರ” ಎಂಬೊಂದು ಹೊಸ ಸಂಸ್ಥೆ, ಅದಕ್ಕೊಬ್ಬ ತಿದ್ದೇಶ್ವರ, ಆತನ ಸಂಬಳ-ಸಿಬ್ಬಂದಿ-ಸವಲತ್ತು-ದವಲತ್ತು ಇವೆಲ್ಲದರ ಚಿತ್ರ, ಅದರೊಡನೆಯೇ, ಬೀದಿಗನ್ನಡಕ್ಕಾಗೆಂದು ಒಂದು “ಕಳ್ಳೆಕಾಯಿ ಕನ್ನಡ ಪರಿಷತ್” ಚಿತ್ರ, ಇವೆಲ್ಲ ಕಣ್ಮುಂದೆ ತೇಲಿಬಂದರೆ ಅಚ್ಚರಿಯಿಲ್ಲ.)  

ಸಾಹಿತಿಗಳ ಹೆಬ್ಬೊತ್ತಿಗೆಗಳಿಲ್ಲದಿದ್ದರೆ ರಾಜ್ಯದ ಉಸಿರೇ ಉಡುಗಿಹೋಗುತ್ತದೇನೋ ಎಂಬ ಮಟ್ಟಿನ ಭಾವೋನ್ಮಾದ ಈಚಿನ ದಿನಗಳಲ್ಲಿ ಹರಡುತ್ತಿದೆಯಾದರೂ,  ಅವರ ಘನಕೃತಿಗಳೇ ರಾಜ್ಯದ ಏಕೈಕ-ಅಂತಿಮ-ಅತ್ಯುತ್ತಮ ಉತ್ಪಾದನೆಗಳಲ್ಲ. ಕರ್ನಾಟಕವು ಕನ್ನಡಾಧಾರಿತವಾಗಿ ರಚಿತವಾಗಿದ್ದರೂ, ರಾಜ್ಯೋತ್ಸವವು ಕೇವಲ ಕನ್ನಡೋತ್ಸವವೇ ಅಲ್ಲ; ಅದು ಈ ರಾಜ್ಯದ ‘ಶ್ರೀಮನ್ಮಹಾಜನರ’ ಉತ್ಸವ. ಆದ ಕಾರಣ, ರಾಜಕಾರಣ-ಸಿನಮಾ-ಸಾಹಿತ್ಯ-ಕ್ರೀಡೆ-ಪತ್ರಿಕೋದ್ಯಮ ಮೊದಲಾದವುಗಳಲ್ಲಿ ಬೆಳಕಿನಲ್ಲಿರುವವರು ಹಾಗೂ ಸಾಕಷ್ಟು ಸಮ್ಮಾನಿಸಲ್ಪಟ್ಟಿರುವ ವೈದ್ಯರು, ಶಿಕ್ಷಕರು, ಕೈಗಾರಿಕೋದ್ಯಮಿಗಳನ್ನಲ್ಲದೆ, ಆಸ್ಪತ್ರೆ-ಅಬಲಾಶ್ರಮ-ಕೃಪಾಲಯಗಳಲ್ಲಿನ ನರ್ಸ್‍ಗಳು; ಅಪಾಯ-ಅಸಹ್ಯ ಎನಿಸುವ ಅವಶ್ಯಸೇವೆಗಳಲ್ಲಿ ದುಡಿಯುತ್ತಿರುವವರು; ಪ್ರಾಥಮಿಕ ಆರೋಗ್ಯಕಾರ್ಯಕರ್ತರು;  ಗಾಳಿ-ನೀರು, ಗುಡ್ಡ-ಗಣಿ, ಕಾಡು-ಕೋಟೆಗಳ ಸಂರಕ್ಷಣೆಗೆ, ಸಾರ್ವಜನಿಕ ನೈರ್ಮಲ್ಯ-ಸುರಕ್ಷತೆಗಳಿಗೆ ಹಾಗೂ ವಿಧವಿಧ ಹಕ್ಕುಗಳಿಗೆ ಹೋರಾಡುತ್ತಿರುವವರು; ಸಣ್ಣಪುಟ್ಟ ಸಾಧನ-ವಿಧಾನಗಳನ್ನು ಕಂಡುಹಿಡಿದು ಜೀವನವನ್ನು ಹಸನಾಗಿಸುತ್ತಿರುವ ವಿಜ್ಞಾನಿಗಳು-ತಂತ್ರಜ್ಞರು; ಯಂತ್ರೋಪಕರಣಗಳನ್ನು ನಿರ್ವಹಿಸುತ್ತಿರುವವರು; ಗ್ರಾಮಗಳಲ್ಲಿ ಸ್ಥಳೀಯ ಉದ್ಯೋಗಾವಕಾಶಗಳಿಗೆ ಮತ್ತು ಸ್ವಸಹಾಯ ವ್ಯವಸ್ಥೆಗಳಿಗೆ ಎಡೆಮಾಡುತ್ತಿರುವವರು – ಮುಂತಾದ ಅನೇಕ ಎಲೆಮರೆಯ ಅಲರುಗಳ ಸೇವೆ-ಸಾಧನೆ-ಸಮರ್ಪಣೆಗಳನ್ನೂ  ಕನ್ನಡಮ್ಮನ ತೇರಿನಲ್ಲಿ ನೆನೆಯಬೇಕು, ಮೆರೆಸಬೇಕು. ಇವರಲ್ಲಿಯೂ ಅನೇಕರಿಗೆ ತಮ್ಮ ಕ್ಷೇತ್ರಜ್ಞಾನದ ಜೊತೆಗೆ ಕನ್ನಡಕುತೂಹಲವೂ ಇರುವುದನ್ನು ಗುರುತಿಸಬೇಕು.  
      
ಏಕತೆ-ವೈಚಿತ್ರ್ಯ ಎರಡೂ ದೃಷ್ಟಿಗಳಿಂದ, ಒಂದೊಂದು ವರ್ಷ ಒಂದೊಂದು ಜಿಲ್ಲೆಯನ್ನು ಕರ್ನಾಟಕರಾಜ್ಯ ಮಹಾಮಹೋತ್ಸವದ ಕೇಂದ್ರವನ್ನಾಗಿಸಿ, ಆಯಾ ಜಿಲ್ಲೆಯ ಉಜ್ವಲಾಂಶಗಳನ್ನು ವರ್ಷದ ‘ಥೀಮ್’ ಆಗಿ ಬೆಳೆಸಬೇಕು. ಮನುಷ್ಯ ಹೀರೋಗಳನ್ನು ಬಿಟ್ಟು, ಪ್ರಕೃತಿಗೂ ಒಮ್ಮೆಯಾದರೂ ಬೆಲೆಕೊಟ್ಟು, ಮೈಸೂರಿನಲ್ಲಿ “ಮಲ್ಲಿಗೆ ನಾಡು” (ಕಾಗುಣಿತಾಸುರನಿಂದಾಗಿ ಇದು “ಮೈಲಿಗೆ ನಾಡು” ಆಗಬಹುದು!), ಕೋಲಾರದಲ್ಲಿ “ಬಂಗಾರ ನಾಡು,” ಶಿವಮೊಗ್ಗದಲ್ಲಿ “ಶ್ರೀಗಂಧ ನಾಡು,” ಯಾದ್‍ಗೀರ್‍ನಲ್ಲಿ “ಕೋಹಿನೂರ್ ನಾಡು,” ಕೊಡಗಿನಲ್ಲಿ “ಆನೆ ನಾಡು,” ಉಡುಪಿಯಲ್ಲಿ “ನೀಲಕಂಠ ನಾಡು” ಎಂಬ ರೀತಿ ಮುಂದಿನ ರಾಜ್ಯೋತ್ಸವಗಳನ್ನು ಆಚರಿಸಬಹುದು. [ನೀಲಕಂಠ (ಇಂಡಿಯನ್ ರೋಲರ್) ಮತ್ತು ಆನೆ, ಕರ್ನಾಟಕದ ರಾಜ್ಯಪಕ್ಷಿ ಮತ್ತು ರಾಜ್ಯಪ್ರಾಣಿ ಆಗಿವೆ; ಜಾಣಗಿಣಿಯನ್ನು “ಕನ್ನಡವಕ್ಕಿ” ಎಂದು ಕರೆಯುವುದುಂಟು!]
       
“ಊರು-ನಾಮ-ಭಂಗ” ಎಂಬ ಅಭಿನಯ-ಅಭಿಯಾನದ ಅಂಗವಾಗಿ, ಮೈಸೂರೂ ಸೇರಿದಂತೆ ಕೆಲವು ಊರುಗಳ ಇಂಗ್ಲಿಷ್‍ಶೈಲಿ ಹೆಸರುಗಳನ್ನು ಬದಲಾಯಿಸುವುದು, ಕಳೆದ ಬಾರಿಯ ಕರ್ನಾಟಕೋತ್ಸವದ ‘ಕಿರುನಾಟಕೋತ್ಸವ’ ವೈಭವದಲ್ಲಿ ಸೇರಿತ್ತು. [ಒಂದು ಕಣ್ನೆಲೆಯಿಂದ, “ಮೈಸೂರು,” “ಮಹಿಷೂರು” (“ಬಫಲೋಶೈರ್”) ಎಂದಾಗಬೇಕಿತ್ತು.  ಬಹಳ ಹಿಂದೆಯೇ ಇಲ್ಲಿದ್ದ ‘ಮಹಾಬಲ’ (‘ಮಾರ್ಬಲ’) ದೇವಸ್ಥಾನದಿಂದಾಗಿ, ಚಾಮುಂಡಿಬೆಟ್ಟವು ‘ಮಾರ್ಬಲಬೆಟ್ಟ’ ಎಂದೇ ಒಂದೊಮ್ಮೆ ಕರೆಯಲ್ಪಡುತ್ತಿತ್ತು.  ಹೀಗಾಗಿ, ಮೈಸೂರನ್ನು “ಮಾರ್ಬಲ್‍ಶೈರ್” ಎಂದರೂ ಸರಿಯೇ!].  ಈ  ಉತ್ಸವೋತ್ಸಾಹದಲ್ಲಿ  ನಾಡಿನ ಎರಡು ಜ್ವಲಂತ ಸಮಸ್ಯೆಗಳ ಜುಗಲ್‍ಬಂದಿಯನ್ನು ಮರೆಯುವಂತಿಲ್ಲ.  ಇವುಗಳಲ್ಲಿ ಒಂದು, ಲಾಂಚಿಕ ಬಲಾತ್ಕಾರ (ಲಂಚಗುಳಿತನ); ಮತ್ತೊಂದು, ಲೈಂಗಿಕ ಅತ್ಯಾಚಾರ (ರೇಪ್).  ಕರ್ನಾಟಕದ “ಸ್ಕ್ಯಾಂಡಲ್ ಸ್ಕೋಪ್ ಫ್ಯಾಕ್ಟರಿ ” ಇಂದು ಜಗದಾದ್ಯಂತ ಪರಿಮಳಿಸುತ್ತಿರುವುದು; ಲಂಚ “ಕೈ”ಗಾರಿಕೆಯಿಂದಾಗಿ, ಇಲ್ಲಿ ರುಪಾಯಿಯ ಉಪಾಯವಿಲ್ಲದವರಿಗೆ ಅಪಾಯವು ಕಟ್ಟಿಟ್ಟಿರುವುದು, ಈ ಪ್ರಶ್ನೆ ಬಂದಾಗಲೆಲ್ಲ ನಾಡಪ್ರಭುಗಳು “ಬುಲೆಟ್ ರೈಲ್” ಬಿಡುತ್ತ, “ಕಣ್ಬಡಿಗ” (ಕಣ್ಣು ತಪ್ಪಿಸಿ ಓಡಾಡುವ ಮಂದಿ) ಹಳಿಗಳ ಮೇಲೆ ಕಣ್ಮರೆಯಾಗುತ್ತಿರುವುದು – ಎಲ್ಲವೂ ಈಗ ಇತಿಹಾಸಪ್ರಸಿದ್ಧ ಕಟುಸತ್ಯಗಳು. 
      
ದುರಂತವೆಂದರೆ, ಕರ್ನಾಟಕವು ಈಚೆಗೆ “ರೇಪ್ ಫ್ಯಾಕ್ಟರಿ” (ಒಂದೊಮ್ಮೆ  ರಾಜ್ಯದ ಸಿಲ್ಕ್ ಫ್ಯಾಕ್ಟರಿಯ “ಕ್ರೇಪ್” ಮನೆಮಾತಾಗಿತ್ತು) ರೂಪದಲ್ಲೂ ನಾಚದೆ ನಾಟ್ಯವಾಡುತ್ತಿದೆ. ರಾಜಧಾಮ ಬೆಂಗಳೂರಂತೂ “ಭಂಗಳೂರು” ಆಗಿ, ಮಾನವಂತೆಯರಿಗೆ ಮಾನವತೆಯೇ ಕಾಣಿಸದಂಥ ಭಯಾರಣ್ಯವಾಗಿದೆ. “ತಾಯೆ ಬಾರ ಮೊಗವ ತೋರ” ಎನ್ನಬೇಕಾದವರು ಈಗ ತಾಯಿಯಿಂದಲೇ ಮುಖಮರೆಸಿಕೊಳ್ಳುವಂಥ ಪಾಡು ಬಂದೊದಗಿದೆ.  ಒಂದಂಚಿನಲ್ಲಿ ಈ ಅವಸ್ಥೆಯಿದ್ದರೆ, ಇನ್ನೊಂದಂಚಿನಲ್ಲಿ, ರಮ್‍ಬೆ-ಬೀರ್‍ವಶಿ-ತೈಲೋತ್ತಮೆರೂ, ಪಬ್‍ಲಕ್ಷ್ಮಿ-ಜಿನ್‍ಮಯಿ-ಬ್ರಾಂದಿಮತಿಯರೂ ಗುಂಡುಗೋವಿಗಳೊಡನೆ “ಎಣ್ಣೆಹೊಳೆ”ಯಲ್ಲಿ ಈಜಾಡುತ್ತ, “ಸೋಮರಸಋಷಿಗಳ ಬೀಡು,” “ವೈನ್‍ತೇಯ-ವಿಸ್ಕೀಶ್ವರಯ್ಯರ ಗೂಡು”, “ಸುರೆಇಂದ್ರ ಲೋಕ” ಎಂದು ಹೆಸರುವಾಸಿಯಾಗಿದ್ದ ಬೆಂಗಳೂರಿಗೆ ಇಂದು “ಲಿಂಗಾತೀತ ಬೆಳದಿಂಗಳೂರು” ಎಂಬ ನಶೆನಿಶೆಯ ನವನಿಶಾನೆಯನ್ನೇ ತಂದಿತ್ತಿದ್ದಾರೆ.  ‘ಬಾರ್-ಬಾರ್’ ದೇಖೋ, ಹಜಾರ್ ‘ಬಾರ್’ ದೇಖೋ! ಎಂಬ ಈ ಮದ್ಯಪ್ರದೇಶದ ಮಧ್ಯರಾತ್ರಿಯು ಮತ್ತೆ ಯಾವಯಾವ ಮಾದರಿಯಲ್ಲಿ ಮೆರೆಯುವುದೋ ಅಮಲ-ದಾರುಕೇಶ್ವರನೇ ಬಲ್ಲ!  
      
ಬೃಹದ್ಬೆಂಗಳೂರಿನಲ್ಲಿ ಬಿಗ್‍ಬೆನ್‍ಗಳನ್ನೂರಿ ಬಲೂನುಗಳಾಗುತ್ತಿರುವ ಆಳರಸರಿಗೆ ಈ ಬುಡಪಾಡು ಕಾಣಿಸುವುದು ತ್ರಾಸವಾಗಿರಬಹುದು. ಕಡೇಪಕ್ಷ, ಈ ರಾಜ್ಯೋತ್ಸವವಾದರೂ, ‘ಲಂಚಬಡುಕತನ’-‘ರೇಪ್‍ಗಡುಕತನ’ ಎಂಬ ಅವಳಿ-ಅನಿಷ್ಟಗಳ “ತ್ಯಾಜ್ಯೋತ್ಸವ”ಕ್ಕೆ ನಾಂದಿಯಾಗಬೇಕು; ಅನ್ನಭಾಗ್ಯ, ಕ್ಷೀರಭಾಗ್ಯ, ದಂತಭಾಗ್ಯ, ಶಾದಿಭಾಗ್ಯ ಮೊದಲಾದ “ಭಾಗ್ಯವಿಧಾತ ಸರ್ಕಾರ”ಯೋಜನೆಗಳೊಡನೆ, “ಆರ್ಥಿಕ-ನೈತಿಕ ‘ಶೌಚಭಾಗ್ಯ’” ಸಹ ಸೇರಬೇಕು. ಆದರೆ, ರೇಪೋತ್ತರ “ಮಾನಭಾಗ್ಯ”ವನ್ನು ಯಾರೂ ಕರುಣಿಸುವಂತಿಲ್ಲವಾದ್ದರಿಂದ, ಮಾನಿನಿಯರ ಮಾನ ಕಾಪಿಡಲು ಮಾನ್ಯ ಮಹೀಪಾಲರು ಬೇರೆ ರಣತಂತ್ರವನ್ನೇ ಹೂಡಬೇಕು.  ಈ ನಾಡು ಸ್ವಚ್ಛಂದದ ಬದಲು, ಸ್ವಚ್ಛ-ಚಂದ ಜೀವನದ ನೆಲೆ-ಸೆಲೆ ಆಗಬೇಕು; “ಕನ್ನಡತೆಯು ಸನ್ನಡತೆಗೆ-ಮುನ್ನಡಿಗೆಗೆ ಕನ್ನಡಿಯಾಗಬೇಕು.”  

ಕರ್ನಾಟಕ ರಾಜ್ಯಸ್ತವ      
      
“ಇಷ್ಟು ಹೇಳುವಷ್ಟರಲ್ಲಿ ಹೊತ್ತುಮೂಡಲು, ಭೂತೇಶ್ವರಿಯು ಭುವನೇಶ್ವರಿಯಲ್ಲಿ ಕರಗಿಹೋದಳು” ಎಂಬಲ್ಲಿಗೆ ಕರ್ಣಾಟಮಹಾಪುರಾಣಮೂಲವಾದ, ರಾಜ್ಯೋತ್ಸವವ್ರತವೃತ್ತಾಂತದಲ್ಲಿ, ಭೂತೇಶ್ವರಿ ಉಪಾಖ್ಯಾನಂ ಸಂಪೂರ್ಣಂ||
      
ಕರ್ನಾಟಕ ರಾಜ್ಯೋತ್ಸವ ಜ್ಯೋತಿಯು ರಾರಾಜಿಸಿ, ಷಡ್ಕೋಟಿ ಕನ್ನಡಿಗರಲ್ಲೂ ಒಂದು ನವಚೇತನವನ್ನು ಹೊತ್ತಿಸಲಿ, ನಾಡೊಡೆಯರಿಗೆ ಹೇರಳ “ಬುದ್ಧಿಭಾಗ್ಯ-ಹೃದಯಭಾಗ್ಯ” ನೀಡಲಿ! ಈ ನಾಡು ಹಿನ್ನಾಡಾಗಿ ಹಿಸಿದು ಹೋಗದೆ, ಹೆನ್ನಾಡಾಗಿ ಹಿಮ್ಮತ್ತಿನಿಂದ ಹೊಮ್ಮಲಿ, ಹೊನ್ನಾಡಾಗಿ ಹೊಂಪಿನಿಂದ ಹೊಳೆಯಲಿ! ಎಲ್ಲೆಡೆ ರಾಜ್ಯಸ್ತವ (ರಾಜ್ಯಸ್ತೋತ್ರ) ಅನುರಣಿಸಿ, ಇದೊಂದು ನಾದಹಬ್ಬವೂ ಆಗಿ, ಇಮ್ಮಡಿ ಮುದನೀಡಲಿ!   

“ವಂದೇ ಕರ್ಣಾಟ ಮಾತರಂ!” (ರಾಗ: ದೇಶ್)
“ಚೆಲುವ ಚಿಮ್ಮಲಿ ನಮ್ಮ ಒಲವ ಕನ್ನಡನಾಡು!” (ರಾಗ: ನವರಸಕನ್ನಡ)
“ಎಲ್ಲೆಲ್ಲ್ಲೂ ಕನ್ನಡದ ಮಾತೇ| ಜಯ ಹೇ, ಕರ್ನಾಟಕ ಮಾತೆ||” (ರಾಗ: ದರ್ಬಾರಿ ಕಾನಡ)
“ಜನಗಣಮನ ಅಧಿನಾಯಕಿ ಜಯಹೇ, ಕರ್ಣಾಟ ಭಾಗ್ಯವಿಧಾತ್ರೀ!” (ರಾಗ: ಕರ್ನಾಟಕ ಬೇಹಾಗ್)

ಕಡೆಯದಾಗಿ, ಛಾಯಾವತಾರಿ ಮಾತೃಭೂತೇಶ್ವರಿ ಪ್ರೀತ್ಯರ್ಥ ಒಂದು ಮಹನ್ಮಂಗಳ ಕೀರ್ತನೆ
“ಶ್ರೀ ಮಾತೃಭೂತಂ” (ರಾಗ: ಕನ್ನಡ)

ಎಲ್ಲರ ಏಳ್ಗೆಗಾಗಿ, ಒಟ್ಟಿನ ಒಳ್ಪಿಗಾಗಿ, ಒಡಲಾಳದಿಂದ ನಲ್ವರಕೆಗಳು!

… ಮುಗಿಯಿತು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Anantha Ramesh
8 years ago

ಎಸ್.ಜಿ.ಸೀತಾರಮ್ ಅವರ ಮೂರು ಕಂತಿನ ಬರಹ ಚಿಂತನ ಶೀಲ ಮತ್ತು ಮನನ ಯೋಗ್ಯ. ಸರಳ ಸರಸ ಭಾಷೆ, ಪದಗಳೊಂದಿಗಿನ ಆಟಗಳು ಪಾಠಪೂರ್ಣ. ಪಂಜುವಿಗೆ ಮತ್ತೆ ಲೇಖಕರಿಗೆ ಧನ್ಯವಾದಗಳು.

S.G. Seetharam
S.G. Seetharam
8 years ago
Reply to  Anantha Ramesh

ನಲ್ಮೆಯ ಅನಂತ ರಮೇಶ್ ಅವರಿಗೆ: ನನ್ನ ಸುದೀರ್ಘ ಲೇಖನವನ್ನೋದಿ ಅದು ನಿಮಗೆ  ಇಷ್ಟವಾಯಿತೆಂದು ಸವಿವರ-ಸ್ಫೂರ್ತಿದಾಯಕ ಸ್ಪಂದನವನ್ನಿತ್ತಿದ್ದಕ್ಕಾಗಿ ನನ್ನ ಹಾರ್ದಿಕ ಧನ್ಯವಾದವನ್ನು ಸ್ವೀಕರಿಸಿ. – ಎಸ್.ಜಿ. ಸೀತಾರಾಮ್.

2
0
Would love your thoughts, please comment.x
()
x