ಕರ್ನಾಟಕ ಪರಿಶೆ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು

 

ಇಲ್ಲಿಯವರೆಗೆ
ಇಂಗ್ಲಿಷ್ ಭಾಷೆಯು ಭಾರತೀಯರಿಗೆ ದತ್ತವಾಗಿರುವ ಒಂದು ಅಮೂಲ್ಯ-ಪಾರಂಪರಿಕ ಸಂಪತ್ತು. ಭೌಗೋಳೀಕರಣವು ಭರದಿಂದ ಸಾಗುತ್ತಿರುವ ಈ ಯುಗದಲ್ಲಿ, ಇಂಗ್ಲಿಷ್ ಭಾಷೆಯನ್ನು ಬಿಸಾಡುವುದು ಕೇವಲ ತಿಳಿಗೇಡಿತನವಷ್ಟೇ ಅಲ್ಲ, ವಿದ್ಯೆ- ಮತ್ತು ಪ್ರಗತಿ-ವಿರೋಧಿ ಕೃತ್ಯವೂ ಹೌದು. 

ವಿಶೇಷವಾಗಿ, ನೆರೆ‘ಹೊರೆ’ಯ ತಮಿಳರು ಮತ್ತು ಮರಾಠಿಗಳಲ್ಲಿರುವ ಪ್ರಾಂತಾಭಿಮಾನದ ಅತಿರೇಕಾಚಾರಗಳಿಗೆ ಪ್ರತಿಯಾಗಿ, ಭಾಷಾನಿರಪೇಕ್ಷತೆ ಹಾಗೂ ಸರ್ವಜನಾಂಗಶಾಂತಿಯ ತೋಟವಾದ ಕರ್ನಾಟಕದಲ್ಲೂ ಈಗ ಅದೇ ಭಾಷಾದುರಾಗ್ರಹದ ತೀಕ್ಷ್ಣವಿಷಾಣು ಹರಡುತ್ತಿದೆ; ವಿಶಾಲಕರ್ನಾಟಕದ ವಿಶಾಲಹೃದಯದಲ್ಲೊಂದು ಕಂದರ ಏಳುತ್ತಿದೆ; ಕನ್ನಡದ ಹರಿವಿನೆದುರು ಕನ್ನಂಬಾಡಿಕಟ್ಟೆ ಕಟ್ಟುವ ದುಸ್ಸಾಹಸ ನಡೆಯುತ್ತಿದೆ; “ಕನ್ನಡವನ್ನಷ್ಟೇ ನುಡಿ, ಇಲ್ಲವೇ ಆಚೆನಡಿ” ಎಂಬ ‘ಮಡಿ’ ಎಲ್ಲೆಡೆ ತಲೆದೋರುತ್ತಿದೆ. “ಕರ್ನಾಟಕ ಮಾತೆ”, “ಭಾರತ ಜನನಿಯ ಏಕೈಕ ತನುಜಾತೆ” ಅಲ್ಲ; ಆಕೆಗೆ “ಸಹಜಾತೆ-ರಾಜ್ಯಮಾತೆ” ಅನೇಕರುಂಟು ಎಂಬ ಆಗರ್ಭ ತಥ್ಯವನ್ನು, ಜನರು ಮರೆಯಾಗಿಸುತ್ತಿದ್ದಾರೆ, ಮರೆಯುತ್ತಿದ್ದಾರೆ ಎನಿಸುತ್ತಿದೆ. ಹಿಂಬಾಗಿಲಿನಿಂದ ಹಿಂದಿಹೇರಿಕೆ ಮತ್ತು ಕಾರ್ಪೊರೇಟ್ ಧಣಿಗಳ ಆಂಗ್ಲಾಹಂಕಾರ ಇವೂ ಈ ದುಃಸ್ಥಿತಿಗೆ ಸಾಕಷ್ಟು ಕಾಣಿಕೆ ನೀಡಿವೆ. (ಕನ್ನಡವೇ ತಾಯ್ನುಡಿಯಾಗಿದ್ದೂ, “ಮೈ ಕನ್ನಡ ಈಸ್ ತುಂಬ ಬ್ಯಾಡ್ ಅಪ್ಪ” ಎಂದು ಬಾಬಾ ಬ್ಲ್ಯಾಕ್ ಶೀಪ್ ಕುರಿಗನ್ನಡದಲ್ಲಿ, ಕೃತಕ ಅಮೆರಿಕನ್ನಾಲಿಗೆಯಲ್ಲಿ ಬೀಗುತ್ತಾ, “ಕನ್ನಡವೇ, ಸತ್ಯಾ-ಬದ್ಕಿದ್ಯಾ’” ಎಂದು ತಿರುಗಿಯೂ ನೋಡದೆ, “ಕನ್ನಡವೇ, ನೀನಿತ್ತೆಯಾ ಏನಾದ್ರೂ ನನ್ಗೆ” ಎಂದೇ ಸದಾ ಕೇಳುವವರು; ಕರ್ನಾಟಕದಿಂದ ಎಲ್ಲ ಸೌಲಭ್ಯವನ್ನೂ ಗಿಟ್ಟಿಸಿಕೊಂಡು, ಕನ್ನಡಕ್ಕೇ ಕನ್ನಗತ್ತರಿಯನ್ನಿಕ್ಕುವ ಅಮೆರಿಕಾತ್ಮಜ ಅಮೀರರು; ಇವರೆಲ್ಲರನ್ನೂ ಇಲ್ಲಿ ಸೇರಿಸಬಹುದು). ಆದರೆ, ಬೇರೆ ಭಾಷೆಗಳ ಬಗ್ಗೆ ಕೆಟ್ಟ ಭಾಷೆಯನ್ನಾಡುವುದು, ಇಂಗ್ಲಿಷ್ ಬೋರ್ಡುಗಳಿಗೆ ಮಸಿ ಮೆತ್ತುವುದು (“ಹಚ್ಚೇವು ಅಕನ್ನಡಕ್ಕ್ಕೆ ಕಪ್ಪ!”) ಮತ್ತು ಅವುಗಳಿರುವ ಜಾಗಗಳನ್ನು ಧ್ವಂಸ ಮಾಡುವುದು, ಇವೆಲ್ಲದರಿಂದ ಒಂದು ಭಾಷಾತಾಲಿಬಾನ್ ಹುಟ್ಟುತ್ತದಷ್ಟೇ; ಇದರಿಂದಾಗಿ, ಕರ್ನಾಟಕವೊಂದೇ ಅಲ್ಲ, ಯಾವ ಪ್ರ್ರದೇಶವಾಗಲೀ, ಒಂದು ನಿಂತ-ಕೊಳೆತ ನೀರಿನ ದ್ವೀಪವಾಗಿ ಸದ್ದಿಲ್ಲದೇ ಕೊಚ್ಚಿಹೋಗುವುದಷ್ಟೇ; ‘ನಾಡು’ ‘ಸುಡುಗಾಡು’ ಆಗುವುದಷ್ಟೇ. ‘ಕಟ್ಟೇವು’ ಎನ್ನಬೇಕಾದ ಬುದ್ಧಿಶಾಲಿಗಳೆಲ್ಲರೂ, “ಕಟ್ಟೆವು, ಕಟ್ಟಿದರೆ ಕೆಟ್ಟೆವು, ಬಿಟ್ಟೇವೀಗಲೇ ಕನ್ನಡದ ದ್ವೀಪ” ಎಂದು, ಹೊಸ ನಾಡೊಂದನ್ನು ಕಟ್ಟಲೊಪ್ಪದೆ, ಹೊರನಾಡೊಂದರ ಕಡೆಗೆ ಒಳೊಳಗೇ ಗುಳೆತೆಗೆಯುತ್ತಾರಷ್ಟೇ. 
      
‘ವಿಶ್ವವೆಲ್ಲ ಒಂದೇಗ್ರಾಮ’ ಎಂಬ ಸವಾಲನ್ನು ಅವಕಾಶವನ್ನಾಗಿ ತಿರುಗಿಸಿಕೊಂಡು, ಕನ್ನಡವೂ-ಕರ್ನಾಟಕವೂ ಜಾಣತನದಿಂದ ಜಾಗತಿಕ ಮಟ್ಟಕ್ಕೇರಲೆತ್ನಿಸಬೇಕು. ತನ್ನ ಉತ್ಪನ್ನ-ಸೇವೆ-ನಡವಡಿಕೆಗಳ ಒಳಸತ್ವ-ಗುಣಮಟ್ಟಗಳನ್ನು ಬೆಳೆಸಿಕೊಂಡು,  ಪ್ರಪಂಚವೇ ತನ್ನೆಡೆಗೆ ಬಂದು, ಕನ್ನಡವನ್ನು ಹಂಬಲದಿಂದ ಕಲಿತು, ಕರ್ನಾಟಕವನ್ನು ಕಟ್ಟಲು ಮುಂದಾಗುವಂಥ, “ಮೇಕ್ ಇನ್ ಕರ್ನಾಟಕ! ನಿರ್ಮಾತೃದೇವೋ ಭವ!!” ಪರಿಸರವನ್ನು ಇಲ್ಲಿ ನಿರ್ಮಿಸಬೇಕು.  “ನಾಡು, ಮುರಿದರೆ ಕೇಡು, ಮುಂಬರಿದರೆ ಲಾಡು-ಹಾಡು!” ಎಂಬುದನ್ನು ನೆನಪಿಡಬೇಕು.

ಹಲವು ಹೆಚ್ಚೇನೂ ಹುಚ್ಚಲ್ಲದ ಹರಟೆಗಳು
ಹೆರನುಡಿ ಹೊರನುಡಿ ಎಂದು ನುಡಿಯದಿರು ಬಿರುನುಡಿ|
ತಾಯ್ನುಡಿಯ ಮಾಡದಿರು ನಾಯ್ನುಡಿ||
ನೋಡಿ ನಡಿ ನೀಡಿ ನಡಿ ನುಡಿದಂತೆ ನಡಿ| 
ಅದೇ ನಾಡ ನಾಡಿ ಅದೇ ಮುನ್ನಡೆಗೆ ಮುನ್ನುಡಿ|| – ಖೇಚರ ಖಾಸಿಮಯ್ಯ (ಸುಮಾರು 21ನೇ ಶತಮಾನ)
      
ಇಂಗ್ಲಿಷ್‍ನಲ್ಲಿ ಓದಲು-ಓದಿಸಲು ಇಚ್ಛಿಸುವವರ ಹಕ್ಕನ್ನು ಕಸಿಯಲು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗುವ ‘ಸಮಾಧಿ’ವಾದಿ ಕನ್ನಡ ಕಟ್ಟಾಳುಗಳು, ಇಂಗ್ಲಿಷ್ ಮೇಲೆ ಹಗೆಯುಗುಳುತ್ತಾ, ಕಂಡವರ ಮಕ್ಕಳಿಗೆ ಕನ್ನಡವನ್ನು ತುರುಕುವ ಬಹುಬಹುಮಾನಿತ, ‘ದಿಗ್ದಂತಿ’ ಸಾಹಿತಿಗಳು ಮತ್ತು ಕನ್ನಡ ಪಂಡಿತ-ಪ್ರಾಧ್ಯಾಪಕರು, ತಮ್ಮದೇ ಮಕ್ಕಳುಮೊಮ್ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ ಹಾಗೂ ಅವರಿಗೆ ಕನ್ನಡವನ್ನು ಕೊಡಿಸಿದ್ದಾರೆಯೇ ಇಲ್ಲವೇ; ಮತ್ತು 21ನೇ ಶತಮಾನದಲ್ಲಿ, ಕನ್ನಡದಲ್ಲೇ ಓದಿದ ಬಲದಿಂದ, ಯಾವುದೇ ವಶೀಲಿಬಾಜಿಯಿಲ್ಲದೆ, ಕನ್ನಡನಾಡಿನಲ್ಲೇ ಎಷ್ಟು ಮಂದಿ ಸೂಕ್ತ ನೌಕರಿ ಪಡೆದಿದ್ದಾರೆ – ಇವೆಲ್ಲಕ್ಕೂ ಒಂದು ಸಮೀಕ್ಷೆಯನ್ನು ಮಾಡಿ, “ಕನ್ನಡದ ಸತ್ಯ”ಕ್ಕೆ ಕನ್ನಡಿ ಹಿಡಿಯಬೇಕು. (ಇತ್ತೀಚಿನ ವರ್ಷಗಳಲ್ಲಿ, “ಕರ್ನಾಟಕದಿಂದ ಅತ್ಯುತ್ಕೃಷ್ಟ ವಿದ್ಯಾರ್ಹತೆ ಪಡೆದ ಎಷ್ಟು ಯುವಜನರು ಬೇರೆಡೆಗೆ ವಲಸೆ ಹೋಗಿದ್ದಾರೆ? ಅವರನ್ನು ರಾಜ್ಯವು ಉಳಿಸಿಕೊಳ್ಳಲಾಗಲಿಲ್ಲವೇಕೆ?” ಎಂದೂ ಒಂದು ಸಮೀಕ್ಷೆ ನಡೆಸಬೇಕು.) 
      
ವಿಶೇಷವಾಗಿ, ಮಕ್ಕಳಲ್ಲಿ ಹಲವಾರು ಭಾಷೆಗಳನ್ನು ಒಟ್ಟಿಗೆ ಕಲಿಯುವ ಸಹಜಸಾಮಥ್ರ್ಯ ಇರುವುದರಿಂದ, ಅವರನ್ನು ಕನ್ನಡದೊಳಗೇ ಕಟ್ಟಿಹಾಕದೆ, ರಾಜ್ಯದ ಎಲ್ಲ ಶಾಲೆಗಳಲ್ಲೂ, ಬೇರೆ ಹಲವಾರು ಭಾಷೆಗಳ ಕಲಿಕೆಗೆ ಆಯ್ಕೆ-ಅನುಕೂಲ-ಉತ್ತೇಜನ ಕೊಡಬೇಕು. ನಾಳೆ, ಯಾರು ಯಾವ ಭಾಷೆಯಲ್ಲಿ ಉಪಯುಕ್ತವಾಗುತ್ತಾರೆ-ಶೋಭಿಸುತ್ತಾರೆ ಎಂದು ಯಾರಿಗೆ ಗೊತ್ತು? ಬಳ್ಳಾರಿ-ಕೋಲಾರದ ಕಡೆಯಲ್ಲಿ ತೆಲುಗು, ಬೀದರ್-ಕಲ್ಬುರ್ಗಿ ಕಡೆಯಲ್ಲಿ ಉರ್ದು, ಬೆಳಗಾವಿ-ವಿಜಾಪುರದ ಕಡೆಯಲ್ಲಿ ಮರಾಠಿ, ಮಂಗಳೂರು-ಕಾರವಾರ ಕಡೆಯಲ್ಲಿ ಕೊಂಕಣಿ, ಮಂಗಳೂರು-ಕೊಡಗು ಕಡೆಯಲ್ಲಿ ಮಲೆಯಾಳಂ, ಮೈಸೂರು-ಬೆಂಗಳೂರು ಕಡೆಯಲ್ಲಿ ತಮಿಳು, ಎಲ್ಲ ಕಡೆಗಳಲ್ಲೂ ಹಿಂದಿ ಮತ್ತು ಇಂಗ್ಲಿಷ್, ಹೀಗೆ ಕೆಲವು ಶಾಲೆಗಳಲ್ಲಿ ಕನ್ನಡೇತರ (ಕಡ್ಡಾಯವಲ್ಲದೆ, ಕೇವಲ ಒಲವಿನಿಂದ ಆರಿಸಿಕೊಂಡ) ಭಾಷೆಗಳ ಕಲಿಕೆಯ ಪ್ರಯೋಗವನ್ನು ಶುರುವಿಗೆ ನಡೆಸಿ ನೋಡಬೇಕು. (ರಾಜಧಾನಿ ದೆಹಲಿಯಲ್ಲಿ  ಅಥವಾ ರಾಜ್ಯದಿಂದಾಚೆಯ ಪ್ರವಾಸದಲ್ಲಿ, ಭಾಷೆ ಗೊತ್ತಿಲ್ಲದೆ ಪೆಚ್ಚುಪೆಚ್ಚಾಗಿ ನಿಲ್ಲಬೇಕಾಗಿ ಬಂದಾಗ, ‘ಹಿಂದಿ ಅಥವಾ ಇಂಗ್ಲಿಷ್ ಕಲಿಯಬೇಕಿತ್ತು!’ ಎಂದು, ಅಥವಾ ಇಂಪಾದ ಹಿಂದಿಹಾಡುಗಳನ್ನು ಕೇಳಿದಾಗ ‘ಅವುಗಳ ಅರ್ಥ ಗೊತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂದು, ಇಲ್ಲಿನ ಎಂಥವರಿಗಾದರೂ ಅನಿಸುವುದಿಲ್ಲವೇ? ಅಸಾಧಾರಣ ಪ್ರತಿಭೆಯಿದ್ದೂ,  ತಮ್ಮ ಇಂಗ್ಲಿಷ್ ಸರಿಯಿಲ್ಲದಿದ್ದ ಒಂದೇ ಕಾರಣದಿಂದ, ಅಂತರರಾಷ್ಟ್ರೀಯ ಬೆಳಕನ್ನು ಕಳೆದುಕೊಂಡ ಲೆಕ್ಕವಿಲ್ಲದಷ್ಟು ವ್ಯಕ್ತಿಗಳಿಲ್ಲವೇ?)
      
ನೆರೆರಾಜ್ಯಗಳಲ್ಲೂ ಇದೇ ಮಾದರಿ ಭಾಷಾಶಿಕ್ಷಣಕ್ಕಾಗಿ ಒಪ್ಪಂದಗಳಾಗಬೇಕು. ಜೊತೆಗೆ, ಬಂಗಾಳಿ, ಗುಜರಾತಿ, ಪಂಜಾಬಿ, ಅಸ್ಸಾಮಿ, ಪಷ್ರ್ಯನ್, ಅರ್ಯಾಬಿಕ್, ಹೀಬ್ರೂ, ಚೀನೀ, ಜಪಾನೀ, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್ ಇತ್ಯಾದಿ ಭಾಷೆಗಳ ಕಲಿಕೆಗಾಗಿ ಕಾಲೇಜುಮಟ್ಟದ ಪ್ರಯೋಗಗಳನ್ನೂ ನಡೆಸಿ ನೋಡಬೇಕು. ಏಕೆಂದರೆ, ಯಾವ ಭಾಷೆಯೂ ಸ್ವಯಂಸಂಪನ್ನವಲ್ಲ; ಹೊರಜಗತ್ತಿನಿಂದ ಕೊಟ್ಟು-ತಂದು ಮಾಡಿದಾಗಲಷ್ಟೇ ಪ್ರತಿಯೊಂದರ ಪ್ರಗತಿಯೂ ಸಾಧ್ಯ. (‘ಕ-ನ್ನ-ಡ’ ಎಂಬಲ್ಲಿ ಎಡಬಲಗಳಲ್ಲಿರುವುದೇ ‘ಕ-ಡ’. ಇದು, ಕನ್ನಡ ಬೇರೆ ಭಾಷೆಗಳಿಂದ ‘ಕಡ’(ಎರವಲು) ಪಡೆದು ನಿಂತಿರುವುದರ ಸೂಚಕ. ಇಲ್ಲಿ ‘ಕ’ ಮತ್ತು ‘ಡ’ ತೆಗೆದರೆ ಉಳಿಯುವುದು ‘ನ್ನ’; ‘ನ’ ಎಂದರೆ ‘ಸೊನ್ನೆ’ ಎಂದು; ಆ ಸೊನ್ನೆಯು ಇಲ್ಲಿ ಒತ್ತಲ್ಪಟ್ಟಿದೆಯೆಂದರೆ, ಮುಂದೇನನ್ನೂ ಒತ್ತಿಹೇಳಬೇಕಿಲ್ಲ. “ಕಡ” ತೆಗೆದರೆ ಕನ್ನಡದ “ನಡ” ಮುರಿದಂತೆಯೇ, ಎಲ್ಲ ಸೊನ್ನೆಯಾದಂತೆಯೇ – ಹೀಗೆಂದು ವಕ್ರವಿಕಟಾತ್ಮರೊಬ್ಬರು ಒಮ್ಮೆ ನುಡಿದರಂತೆ.)
      
ಇಂಗ್ಲಿಷ್ ಮಾತ್ರ, “ಕುಲೀನ”ರ ಸ್ವತ್ತು-ಸವಲತ್ತು ಆಗಿ ಉಳಿಯಬಾರದು. ಉಳ್ಳವರ ಮಕ್ಕಳಂತೆಯೇ, ಉಳುವಊಳಿಗದಲ್ಲಿರುವವರ ಮಕ್ಕಳೂ ಇಂಗ್ಲಿಷ್‍ನಿಂದ ಸಬಲೀಕೃತರಾಗಬೇಕು. ಕನ್ನಡದ ಜೊತೆಯೇ ಇಂಗ್ಲಿಷ್ ಸಾಗಲಿ; ಕನ್ನಡದ ಮಕ್ಕಳು ನಿರುದ್ಯೋಗಿಗಳಾಗದೆ, ತಮ್ಮತಮ್ಮ ವೃತ್ತಿಗಳಲ್ಲಿ ಎಲ್ಲಾದರೂ ಬೆಳೆದು, ಅಭಿಮಾನದಿಂದ ತಮ್ಮ ತಾಯ್ನಾಡನ್ನೂ ಹಿಂದಿರುಗಿ ಬೆಳೆಸುವಂತಾಗಲಿ.   
      
ಕನ್ನಡಕ್ಕೆ ಬೇರೆ ಭಾಷೆಗಳಿಂದಷ್ಟೇ ಅಲ್ಲ, ಕನ್ನಡವೂ ಅಷ್ಟೇ ಮುಖ್ಯವಾಗಿ ಬೇರೆ ಭಾಷೆಗಳಿಗೆ ಅನುವಾದಿತಗೊಂಡು, ಕನ್ನಡ ವಿಚಾರಗಳು ಬೇರೆಯವರಿಗೂ ತಲುಪುವಂತಾಗಬೇಕು. ಮುಸ್ಲಿಮರು, ಈಸಾಯಿಗಳು ಮತ್ತು ಹಿಂದುಳಿದ ಹಿಂದೂಗಳಿಗೆ ಸಂಸ್ಕೃತ ಓದಲು, ‘ಮುಂದುಳಿದ’ ಹಿಂದೂಗಳಿಗೆ ಉರ್ದು-ಪಷ್ರ್ಯನ್-ಅರ್ಯಾಬಿಕ್ ಓದಲು ವಾತಾವರಣ ಕಲ್ಪಿಸಬೇಕು.  ಭಾಷಾಂತರ ಮೂಲಕ ಭಾಷಾಂಧತೆ ತೊಡೆಯಬೇಕು; ಸಂಸ್ಕೃತಿಗಳ ನಡುವಿನ ಅಂತರ-ಅವಾಂತರ ಅಂತ್ಯಗೊಳಿಸಬೇಕು; ಅಂತಃಕಲಹದೆಡೆಯಲ್ಲಿ ಅಂತ:ಕರಣ ಬೆಳೆಸಬೇಕು.   
      
ರೆ|| ಎಫ್. ಕಿಟೆಲ್, ಬಿ.ಎಲ್. ರೈಸ್ ಮೊದಲಾದ ಹಲವಾರು ಪಾಶ್ಚಾತ್ಯ ಮಹನೀಯರು ಕನ್ನಡಕ್ಕೆ-ಕರ್ನಾಟಕಕ್ಕೆ ನೀಡಿರುವ ಅಮೋಘ ಕಾಣಿಕೆ; ಜೇಮ್ಸ್ ಕಸಿನ್ಸ್ ಎಂಬ ಐರಿಷ್ ಕವಿಯು ಕುವೆಂಪು ಅವರಿಗೆ ಕೊಟ್ಟ ಪ್ರೇರಣೆ (ಬೇರೆ ಮದರ್ “ಟಂಗ್”ನಲ್ಲೂ ಇವರೆಲ್ಲರಿಗೆ ‘ಮೈಸೂರ್‍ಪಾಕ್ಕನ್ನಡದ’ ರುಚಿಯೂರಿತ್ತು!); ಕನ್ನಡದ ಅನೇಕ ದಿಗ್ಗಜರು ಇಂಗ್ಲಿಷ್‍ನಲ್ಲಷ್ಟೇ ಅಲ್ಲದೆ, ವಿವಿಧ ದೇಶಿ-ವಿದೇಶಿ ಭಾಷೆಗಳಲ್ಲೂ ಕೋವಿದರಾಗಿದ್ದುದು, ಮತ್ತು ಅವರಲ್ಲನೇಕರು ಕ್ರೈಸ್ತ-ಇಂಗ್ಲಿಷ್ ಸ್ಕೂಲುಗಳಲ್ಲಿ ಓದಿದ್ದುದು; ಮರಾಠಿಯ “ಜ್ಞಾನೇಶ್ವರಿ”ಯಲ್ಲಿ ಸಾವಿರಾರು ಕನ್ನಡ ಪದಗಳಿರುವುದು; ಅರಸೊತ್ತಿಗೆಯ ಯುಗಮಾನದಲ್ಲಿ, ಗುಜರಾತ್-ಬಂಗಾಳದವರೆಗೂ ಕನ್ನಡ ಸಂಸ್ಕೃತಿಯ ಪ್ರಭಾವ ಹರಡಿದ್ದುದು; ಎಲ್ಲ ಪ್ರದೇಶಗಳ ಭಾಷೆಗಳನ್ನೂ ಯಾವುದೇ ಮಡಿವಂತಿಕೆಯಿಲ್ಲದೇ ಅಂಗೀಕರಿಸಿದ್ದರಿಂದಾಗಿ, ಇಂಗ್ಲಿಷ್ ಭಾಷೆಯು ಇಂದು ಜಗದಾದ್ಯಂತ ಜನಸಾಮಾನ್ಯರು ಹಾತೊರೆಯುವಂಥ ಭಾಷೆಯಾಗಿ, ಎಣೆಯಿಲ್ಲದೆ ಬೆಳೆಯುತ್ತಿರುವುದು – ಇಂಥ ಭಾಷೈಕ್ಯ-ಭಾವೈಕ್ಯ ಸಂಗತಿಗಳನ್ನು ಕನ್ನಡಹಬ್ಬಗಳಲ್ಲಿ ಹಬ್ಬಿಸುವುದು ಒಂದು ಅನನ್ಯ ಕನ್ನಡಕಾಯಕವಾಗುತ್ತದೆ. ‘ಸಾಹಿತ್ಯ’ ಎಂಬುದು ಬಂದಿರುವುದೇ ‘ಸಹಿತ” ಎನ್ನುವುದರಿಂದ; ಹಾಗಾಗಿ, ಎಲ್ಲ ಭಾಷೆಗಳ ಗುರಿ, ಅನ್ಯಭಾಷೆಗಳ ‘ಸಹಿತ’ ಬಾಳ್ವೆ-ಏಳ್ಗೆ ಆಗಬೇಕೇ ಹೊರತು, ಅವುಗಳೊಡನೆ “ವ್ಯಾಜ್ಯೋತ್ಸವ” ಆಗಬಾರದು. ಹೊರನಾಡನುಡಿಗಳಿಂದ ಕರುನಾಡ ನುಡಿಗೆ ‘ಸಮುದ್ರ ಸಮೃದ್ಧಿ’ ಸಿಗಬೇಕು.  
      
ಹಳೆಗನ್ನಡ-ಚೆನ್‍ತಮಿಳು ಮೊದಲಾದವುಗಳಿಂದ ಕನ್ನಡಕ್ಕೆ ಸುಲಭ-ಸುಂದರ ಶಬ್ದಗಳನ್ನು ತರಬೇಕು. ಇಂದಿನ ಜಗತ್ತಿಗೆ ತಕ್ಕ ಒಂದು ಪ್ರಮಾಣಿತ ಕನ್ನಡ ಥಿಸೌರಸ್ (ಪರ್ಯಾಯ-ವಿಪರ್ಯಾಯ ಶಬ್ದಕೋಶ) ಬರೆಸಬೇಕು. ಕನ್ನಡವು ಕಂಪ್ಯೂಟರ್‍ಗಳಲ್ಲಿ-ಇಂಟರ್‍ನೆಟ್‍ನಲ್ಲಿ ಹಾಯಾಗಿ-ಹುಲುಸಾಗಿ ಬೆಳೆಯಲು ತಾಂತ್ರಿಕಸಾಧನಗಳನ್ನು ರೂಪಿಸುತ್ತಾ ಹೋಗಬೇಕು. [ಇಂಗ್ಲಿಷ್ ತುತ್ತು ಸೇರದೆ, ‘ಪಥ್ಯ’ ಮಾಡುತ್ತಿರುವವರಿಗಾಗಿ: ತೊಡೆಪಿಡಿ (ಲ್ಯಾಪ್‍ಟಾಪ್), ಫಲಕಗಣಕ (ಟ್ಯಾಬ್ಲೆಟ್), ಮುಖಪುಸ್ತಕ (ಫೇಸ್‍ಬುಕ್), ಟೂವಿಟ್ಟವೂ (ಟ್ವಿಟರ್), ನೀನಾಳ (ಯೂಟ್ಯೂಬ್), ಜಾಲಾಂಕಣ (ಬ್ಲಾಗ್), ಜಾಣವಾಣಿ/ಧ್ವನಿಮಲ್ಲ (ಸ್ಮಾರ್ಟ್ ಫೋನ್), ಸೈಬರಂಬರ (ಸೈಬರ್‍ಸ್ಪೇಸ್), ನನ್ಮೊಗ (ಸೆಲ್ಫೀ), ಏನ್‍ಸುದ್ದಿ (ವಾಟ್ಸ್‍ಆ್ಯಪ್)…] 
 
… ಮುಂದುವರೆಯುವುದು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x