ಭೂತಮೂಲಗನ್ನಡಿಯಿಂದ
ಕನ್ನಡ ಭುವನೇಶ್ವರಿಯ ಛಾಯಾವತಾರಳಾದ “ಮಾತೃ ಭೂತೇಶ್ವರಿ” ಮೈಸೂರಿನಲ್ಲಿ ಮೊನ್ನೆ ಮಹಾಲಯ ಅಮಾವಾಸ್ಯೆಯ ಡಾಕಿಣಿ ಮುಹೂರ್ತದಲ್ಲಿ (ರಾತ್ರಿ 2ರ ಸಮಯ) ವಾಯುಸಂಚಾರದಲ್ಲಿದ್ದಾಗ, ಅಲ್ಲಿ ನೂತನವಾಗಿ ಕಟ್ಟ್ಟಲಾಗಿರುವ ‘ಮಿನಿ’ ವಿಧಾನಸೌಧದ ಮೇಲಿರುವ ಮೂರು ಘೋಷಣೆಗಳನ್ನು ಕಂಡು, ಭಯಭೀತೇಶ್ವರಿ ಆದಳೆಂದೂ, ಆಕ್ಷಣವೇ ‘ಕನ್ನಡ’, ‘ಕರ್ನಾಟಕ’, ‘ರಾಜ್ಯೋತ್ಸವ’ ಇತ್ಯಾದಿ ಘನವಿಚಾರಗಳ ಹುಚ್ಚುಚ್ಚು ಆಲೋಚನೆಗಳು ಆಕೆಯ ಮನಸ್ಸಿನಲ್ಲಿ ಉಕ್ಕುಕ್ಕಿಬಂದು, ಕಡೆಗೆ ಅವಳು ಅಲ್ಲೇ ಇವೆಲ್ಲವನ್ನೂ ‘ಠೀವಿ-007’ ಮುಂದೆ ಹೃದಯಾಘಾತಪೂರ್ವಕವಾಗಿ ಕಾರಿಕೊಂಡಳೆಂದೂ ವರದಿಯಾಗಿದೆ. ಆ ವಿಪರೀತ ಆಲೋಚನೆಗಳ ಆಯ್ದ ಭಾಗಗಳನ್ನು “ಕರ್ನಾಟಕೊಸಗೆ”-2015ರ (ಒಸಗೆ=ಪರಿಶೆ=ಉತ್ಸವ) ಚಿಂತನೆಗಾಗಿ ಇಲ್ಲಿ ಮಂಡಿಸಲಾಗಿದೆ:
“ಕನ್ನಡಮೇವಜಯತೇ”?
ಈ ಸೌಧದ ಮೇಲೆ “ಕನ್ನಡವೇ ಸತ್ಯ~ಕನ್ನಡವೇ ನಿತ್ಯ” ಎಂದಿದೆ; ಹಾಗಾದರೆ, ಕನ್ನಡದಿಂದಾಚೆ ಬೇರೆ ಭಾಷೆಗಳಲ್ಲಿ ಸತ್ಯವೇ ಇಲ್ಲವೇ?, ಕನ್ನಡದಲ್ಲಿ ಅಸತ್ಯವೇ ಇಲ್ಲವೇ?, ‘ಸತ್ಯ-ನಿತ್ಯ’ ಎಂಬ ಶಬ್ದಗಳು ನಿಜಕ್ಕೂ ಕನ್ನಡ ಭಾಷೆಯವೇ? ಒಂದು ‘ಭಾವಾವೇಶ ಗೀತೆ’ ಸಾಲೊಂದು ಹೀಗೆ ಸರ್ಕಾರಿ ಕೇಂದ್ರಕಚೇರಿಯೊಂದರ ಮೇಲೆ ಮಿಂಚಬೇಕೆ? ಇದೇ ಸಾಲಿನಮೇಲಿನಲ್ಲಿ ಹೇಳಿರುವ “ಸತ್ಯಮೇವ ಜಯತೇ” ಎಂಬ ಇನ್ನೊಂದು ವಚನವನ್ನು ಇದು ಅಲ್ಲೇ ಮುರಿದುಹಾಕಬೇಕೆ? “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಇನ್ನೊಂದು ಸಾಲೂ ಇಲ್ಲಿ ಹಾಗೆಯೇ ಬೆಳಗುತ್ತಿದೆ. ಇದರ ಸತ್ಯಾರ್ಥವೂ ಜನರಿಗೆ ಗೊತ್ತಿಲ್ಲದಿಲ್ಲ: ಅದು, “ಕೈಗೂಡಿಸುವುದು ಅವನದು ~ ಕೈಚಾಚುವುದಷ್ಟೇ ನಮ್ಮದು!”ಎಂದಷ್ಟೇ. ಇವನ್ನೆಲ್ಲ ನೋಡಿದ ಮೇಲೆ, “ಸತ್ಯಮೇವ ಜಯತೇ” ತೆಗೆದು, “ನಿತ್ಯ ಮೇಯುವುದೊಂದೇ ಜಯತೇ” ಎಂಬ ‘ಮೇವಿನಗೀತೆ’ ಸಾಲನ್ನು ಅಲ್ಲಿ ಹಾಕುವುದೇ ಉಚಿತವೆನಿಸುವುದಿಲ್ಲವೇ?
ಅದು ಹಾಗಿರಲಿ, ಈಗ ಅಲ್ಲಿರುವ “ಸರ್ಕಾರ” ಎಂಬ ಪದವನ್ನೇ ನೋಡಿ; ಇದು ಪಷ್ರ್ಯನ್/ಉರ್ದು ಪದವಾಗಿದ್ದು, ‘ಸರ್’ ಎಂದರೆ ‘ಮುಖ್ಯ’ ಮತ್ತು ‘ಕಾರ್’ ಎಂದರೆ ‘ಕರ್ತೃ’ ಎಂದಾಗಿ, “ಸರ್ಕಾರ” ಎಂದರೆ “ಮುಖ್ಯಕರ್ತೃ” ಎಂದಾಗುತ್ತದೆ (ಜಿಲ್ಲೆ, ತಾಲ್ಲೂಕು, ತಹಸೀಲು … ಎಲ್ಲ ಇದೇ ಭಾಷೆ!). ಇದರಲ್ಲಿ ಎಲ್ಲಿ ಬಂತು ಕನ್ನಡ? ಅಂತೆಯೇ, ವಿಧಾನಸಭೆ, ಮಂತ್ರಿಮಂಡಲ, ನ್ಯಾಯಾಧೀಶ, ಅಧಿಕಾರಿ, ರಾಜ್ಯ, ಉತ್ಸವ, ಸಾಹಿತ್ಯ, ಶಾಲೆ, ನಗರ – ಏನುಂಟು?ಏನಿಲ್ಲ? – ಎಂಬಂಥ ದಿನನಿತ್ಯದ ಪದಗಳನ್ನು ನೋಡುತ್ತಾ ಬಂದರೆ, ಕನ್ನಡವು ಅಲ್ಲಲ್ಲಿ ಇಣುಕುವುದೇ ಹೊರತು, ಎಲ್ಲವೂ ಸಂಸ್ಕೃತಮಯವೇ. (“ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಹಾಗೂ “ಜಯ ಭಾರತ ಜನನಿಯ ತನುಜಾತೆ!” ಎಂಬುದರಲ್ಲೇ ಇರುವ, ಮತ್ತು ‘ಗುರು-ಜೀ, ಸ್ವಾಮಿ-ಜೀ’ ಎಂದು ಈಚೆಗೆ ಮಾತುಮಾತಿನಲ್ಲೂ ಬರುತ್ತಿರುವ, ‘ಜೀ’ ಎಂಬುದರಲ್ಲಿರುವ ಕನ್ನಡದತ್ತ ಒಮ್ಮೆ ಸುಮ್ಮನೆ ಕಣ್ಣು ಹಾಯಿಸಿ.)
ಇನ್ನು ಬಳಕೆಗನ್ನಡದಲ್ಲಿರುವ ಇಂಗ್ಲಿಷ್ ಪದಗಳನ್ನು ಹುಡುಕುತ್ತಾ ಹೊರಟರೆ, ಅಲ್ಲಿ ಈಗ ಮೊದಲು ಕಾಣುವುದು ರಾಜ್ಯೋತ್ಸವ ದಿನಾಂಕದಲ್ಲೇ ಇರುವ “ನೊವೆಂಬರ್” ಎಂಬ ಲ್ಯಾಟಿನ್ ಪದ; ಈ ನವಮ ಮಾಸದ ಮೂಲವೂ ‘ಗ್ರಿಗೌರಿಯನ್ ಕ್ಯಾಲೆಂಡರ್’; ಯಾವ ಕನ್ನಡ ಪಂಚಾಂಗವೂ ಅಲ್ಲ! ಹಾಗೆಯೇ ಬಂದಾಗ, ತಪ್ಪದೇ ಕಣ್ಣಿಗೆ ಹೊಡೆಯುವುದು “ಡಾ||” ಎಂಬ ಪದ. ಇಂದು, ‘ಡಾ||’ ಅಥವಾ ‘ಪಿಎಚ್. ಡಿ.’ ಇಲ್ಲದಿರುವ ಕನ್ನಡ ಸಾಹಿತ್ಯಾಗ್ರಣಿಗಳೂ ಉಂಟೇ? (ಇದರಲ್ಲಿ, ‘ಗೌ.ಡಾ.’ ಅಥವಾ ಗೌರವ ಡಾಕ್ಟರೇಟ್‍ಗಳೇ ಗೋಚರಿಸುವುವು, ಮತ್ತು ವ್ಯಾಮೋಹವೇ ಇಲ್ಲದಿರಬೇಕೆನ್ನುವ ಸ್ವಾಮಿ-ಸನ್ಯಾಸಿಗಳಲ್ಲೇ ‘ಡಾ||-ಮೋಹ’ ಎದ್ದು ಕಾಣುವುದು, ಬೇರೆ ವಿಚಾರ.) ಅವರನ್ನೆಲ್ಲಾ ಡಾ||, ಫ್ರೊ||, ಪಿಎಚ್. ಡಿ., ಡಿ. ಲಿಟ್., ಇತ್ಯಾದಿ ಇಂಗ್ಲಿಷ್ ಪದ(ವಿ)ಗಳನ್ನು ಆಚೆಹಾಕಿ, ಆ ಜಾಗದಲ್ಲಿ ಪಂಡಿತ-ಕೋವಿದ-ವಿದ್ವಾನ್ ಎಂಬಂಥ ‘ಲೋಕಲ್” ಪದಗಳನ್ನು ಬಳಸಲೊಮ್ಮೆ ಹೇಳಿನೋಡಿ! [‘ಪಿಎಚ್. ಡಿ.’ ಬಿಡಿ; ‘ಎಸ್.ಎಸ್.ಎಲ್.ಸಿ.’ಗೆ ಕನ್ನಡದಲ್ಲೇನು? ‘ಪ್ರೌ.ನಿ.ಪ್ರ.” (“ಪ್ರೌಢಶಾಲಾ ನಿರ್ಗಮನ ಪ್ರಮಾಣಪತ್ರ”) ಎನ್ನೋಣವೇ? (ಇದು ಕೇವಲ ‘ನಿರ್ಗಮನ’ದ ಪ್ರಮಾಣ, ‘ತೇರ್ಗಡೆ’ಯದಲ್ಲ ಎಂಬ ಸ್ವಾರಸ್ಯವು ಇಲ್ಲಿ ಗಮನೀಯ)]. ಇಂದು ಕೇರಿಗೊಂದು ‘ವಿದ್ಯಾಲಯವಿಶ್ವ’ ಕಣ್ಬಡುತ್ತಿದೆ. ಇವುಗಳು ‘ವಿಶ್ವವಿದ್ಯಾ-ವಂತ’ರನ್ನು ಅಟ್ಟಿಸಿಕೊಂಡು ಬಂದು, ಅವರ ಮೇಲೆ ಪೇರಿಸಬಹುದಾದ ‘ಡಾಕ್ಟರ್-ಏಟು’ಗಳನ್ನು ನೆನೆಸಿಕೊಂಡರೆ, ಕೆಲವರ ಹೆಸರಮುಂದೆ ಪುಟಗಟ್ಟಲೆ ‘ಡಾ||’ಗಳು ಹರಿದಾಡಬಹುದು; ಬೀದಿಬೀದಿಗಳಲ್ಲಿ ‘ಡಾ||ಗಳ’ ಸಂತತಿ ಹೆಚ್ಚಬಹುದು; “ಡಾ|| ಪಂಪ,” “ಡಾ|| ಪುರಂದರದಾಸ,” “ಡಾ|| ನೃಪತುಂಗ” ಎಂಬಂಥ ಮರಣೋತ್ತರ ಡಾಕ್ಟರೇಟ್ ಸರಣಿಗಳೂ ಸಾಮಾನ್ಯವಾಗಬಹುದು, ಮತ್ತು ಇವೆಲ್ಲಕ್ಕೆ ಕಲಶಪ್ರಾಯವಾಗಿ, “ಡಾ|| ಮಹಿಷಾಸುರ” ಎಂಬುದನ್ನೂ ಒಂದು ದಿನ ಕಾಣಬೇಕಾಗಬಹುದು! [ಚಿಕ್ನಾಯ್ಕನಹಳ್ಳಿ ‘ಶಿಕ್ಷಣಮುಕ್ತ ಪದವಿ’ ವಿಶ್ವವಿದ್ಯಾನಿಲಯ, ಬಳ್ಳಾರಿ “ಬಂಧಿತ” ಮಹಾವಿಶ್ವವಿದ್ಯಾನಿಲಯ (ಜೈಲ್ ಕ್ಯಾಂಪಸ್), ಬನವಾಸಿ ಹಳಗನ್ನಡ ವಿಶ್ವವಿದ್ಯಾನಿಲಯ, ನಿಪ್ಪಾಣಿ ಪಾಶ್ರ್ವವಿಶ್ವವಿದ್ಯಾನಿಲಯ (ಕರ್ನಾಟಕಕ್ಕೆ ಬೆಳಿಗ್ಗೆ-ಮಹಾರಾಷ್ಟ್ರಕ್ಕೆ ರಾತ್ರಿ), ಶಿಶುನಾಳ ಶರೀಫ ಪ್ರನಾಳಶಿಶು ವಿಶ್ವವಿದ್ಯಾನಿಲಯ, ಕುದುರೆಗುಂಡಿ ಅಶ್ವವಿಶ್ವವಿದ್ಯಾನಿಲಯ, ನಂಜನಗೂಡು ರಸಬಾಳೆ ‘ವಿಶ್ವಮುಕ್ತ’ ವಿದ್ಯಾಲಯ ಮುಂತಾದ ವಿಶೇಷವಿಶ್ವವಿದ್ಯಾನಿಲಯಗಳೂ ಮೈದಳೆದರೆ ಅತಿಶಯವೆನಿಸದು! ಇವುಗಳಲ್ಲಿ ಪಟ್ಟವೇರಲು, ವಿದ್ಯೇಶ್ವರಯ್ಯ-ವಿದ್ಯೇಶ್ವರಮ್ಮರಂತೂ ಈಗಾಗಲೇ ಕಾಲ್ತುದಿಯಲ್ಲಿ ನಿಂತಿದ್ದಾರೆ.]
ಆಂಗ್ಲಭಾಷೆಯೆಂದೊಡನೆ ಆಮ್ಲವೇರಬೇಕೆ ನೆತ್ತಿಗೆ?
ಇಂಗ್ಲಿಷ್ ಬಗ್ಗೆಯೇ ಹೇಳುವುದಾದರೆ, ಕರ್ನಾಟಕ ಮತ್ತು ಬೇರೆಲ್ಲ ರಾಜ್ಯಗಳ ಮತ್ತು ಅಸಂಖ್ಯಾತ ದೇಶಗಳ ದಿನಬಳಕೆಯಲ್ಲಿ ಇಂಗ್ಲಿಷ್ ಯಾವ ಮಟ್ಟಿಗೆ ಒಳಹೊಕ್ಕಿದೆಯೆಂದರೆ, ಅದನ್ನು ಬಿಟ್ಟುಬಿಡುವ ಆಲೋಚನೆಯು ಹಾಸ್ಯಾಸ್ಪದವಲ್ಲ; ಅಪಾಯಾಸ್ಪದವೇ ಆಗುತ್ತದೆ. ಆದರೂ, ಇಂಗ್ಲಿಷ್-ದ್ವೇಷವೇ ‘ಸ್ವಭಾಷಾಪ್ರೇಮ’ ಮತ್ತು ‘ಸ್ವದೇಶಾಭಿಮಾನ’ ಎನ್ನುವ ಮಟ್ಟಿಗೆ ಎಲ್ಲ ರಾಜ್ಯಗಳಲ್ಲಿಂದು ಭಾಷಾ-ಆತಂಕವಾದ ಹೆಚ್ಚುತ್ತಿದೆ. ಆದರೆ, ಈ ಸ್ಥಳೀಯ ಭಾಷಾಭಯೋತ್ಪಾದಕರೂ ದಿನನಿತ್ಯ ಮಾತಾಡುವುದು, ‘ಮೋಬೈಲ್’ ಅಥವಾ ‘ಸ್ಮಾರ್ಟ್ ಫೋನ್’ಗಳಲ್ಲಿ; ನೋಡುವುದು, ‘ಟಿ.ವಿ.’ ಅಥವಾ ‘ಕೇಬಲ್’; ಓಡಾಡುವುದು, ‘ಮೋಟರ್‍ಸೈಕಲ್,’ ‘ಕಾರ್,’ ‘ಪ್ಲೇನ್,’ ಇತ್ಯಾದಿಗಳಲ್ಲಿ; ತಿಂದುಕುಡಿಯುವುದು, ‘ಹೋಟೆಲ್’ಗಳಲ್ಲಿ (‘ಬೈಟೂ’ ಕಾಪಿ!); ತಕರಾರುಗಳಲ್ಲಿ ವ್ಯವಹರಿಸುವುದು, ‘ಪೋಲಿಸ್,’ ‘ಲಾಯರ್’ ಮೊದಲಾದವರೊಡನೆ; ಹಣವಿಡುವುದು, ‘ಬ್ಯಾಂಕ್’ಗಳಲ್ಲಿ; ಮುಸ್ಸಂಜೆಯಾಗುತ್ತಲೇ ಹಾರುವುದು, ‘ಬಾರ್’ ಅಥವಾ ‘ಪಬ್’ ಒಳಗೆ; ಜಾಡ್ಯ ಬಂದರೆ ಎದ್ದೋಡುವುದು, ‘ಡಾಕ್ಟರ್ ಶಾಪ್’ ಅಥವಾ ‘ಕ್ಲಿನಿಕ್’ ಕಡೆಗೆ … ನೂರೇ? ಸಾವಿರವೇ? ಕನ್ನಡದಲ್ಲಿನ ಇಂಗ್ಲಿಷ್ ಪದಗಳಿಗೆ ಲೆಕ್ಕವೆಲ್ಲುಂಟು?
ಅದಿರಲಿ, ಬಿ.ಎಂ.ಶ್ರೀ., ಡಿ.ವಿ.ಜಿ., ಟಿ.ಪಿ. ಕೈಲಾಸಂ, ಜಿ.ಪಿ. ರಾಜರತ್ನಂ, ಕೆ.ಎಸ್. ನರಸಿಂಹಸ್ವಾಮಿ, ಸರ್. ಎಂ.ವಿ. ಮುಂತಾದ ನಾಡೋಜರ ಹೆಸರುಗಳಲ್ಲೇ ಇಂಗ್ಲಿಷ್ ಅಕ್ಷರಗಳು ಮಿನುಗುತ್ತಿವೆಯಲ್ಲ?!
ವಿಜ್ಞಾನ ವ್ಯಾಸಂಗಕ್ಕೆ ಬಂದರಂತೂ, ಕನ್ನಡಕಂದಾಚಾರಿಗಳ ಇಂಗ್ಲಿಷ್‍ವಿರೋಧಿ ಒಣಪೌರುಷ ಮತ್ತು ಅಸಂಬದ್ಧ-ಅವಾಸ್ತವ ನೀತಿಯಿಂದಾಗಿ, ಕನ್ನಡದ ಕಂದಮ್ಮಗಳು ಕಂದುತ್ತಿರುವುದು ಕಣ್ಣಿಗೆ ಕುಕ್ಕುತ್ತದೆ. ನಿಜಕ್ಕೂ, ಕಿರಣಜನ್ಯಸಂಯೋಗ ಕ್ರಿಯೆ/ದ್ಯುತಿ ಸಂಶ್ಲೇಷಣೆ (ಫೋಟಸಿನ್ಥಸಿಸ್), ಅಪಸರಣ/ಅಭಿಸರಣ ಅನಂತ ಶ್ರೇಢಿ (ಡಿವರ್ಜಂಟ್/ಕನ್ವರ್‍ಜಂಟ್ ಇನ್ಫನಿಟ್ ಸೀರೀಸ್), ಮಹಾ-ಅಪಧಮನಿ (ಅಯೋರ್ಟಾ) – ಇಂಥ ಸಂಸ್ಕೃತ ಶಬ್ದಪಟಾಕಿಗಳನ್ನು, ಶಾಲೆಗಳಿಂದಾಚೆಗೆ, ಇಡೀ ಜನ್ಮದಲ್ಲಿ ಯಾರಾದರೂ ಸಿಡಿಸಿರುವುದುಂಟೇ? ಇಷ್ಟವಿದ್ದವರಿಗೆ, ಕನ್ನಡ ಮಾಧ್ಯಮದಲ್ಲಿ ಬೋಧನೆ-ಸಂವಾದ ನಡೆಸುವ ಪ್ರಶ್ನೆ ಬೇರೆ, ಆದರೆ ವೇಯ್ನ್, ಆರ್ಟರಿ, ವೆಂಟ್ರಿಕಲ್, ಅಯೋರ್ಟಾ ಎಂದೇ ಅಲ್ಲಿಯೂ ಕಲಿಸಿದರೆ, ಕನ್ನಡಜ್ಜಿಯ ಗಂಟೇನಾದರೂ ಹೋದೀತೇ? ಕಲಿಯುವ ಮಕ್ಕಳಿಗೆ ಸುಲಭ ಎನಿಸುವುದು, ‘ಮಹಾ-ಅಪಧಮನಿ,’ ‘ಅಭಿಧಮನಿ,’ ‘ಅಕ್ಷಿಪಟಲ’ ಎಂಬ ಸಿಡಿತಗಳೋ, ಅಥವಾ ಅಯೋರ್ಟಾ, ವೇಯ್ನ್, ರೆಟನ ಎಂಬ ಸೌಮ್ಯ-ಉಪಯುಕ್ತ ಪದಗಳೋ? ಕಲಿತವರಿಗೆ, ಇಂಥ ಇಂಗ್ಲಿಷ್ ಪದಗಳು ಮುಂದೆಂದೋ ತಾವೇ ವೈದ್ಯರೋ-ರೋಗಿಗಳೋ ಆದಾಗ ಉಪಯೋಗಕ್ಕೆ ಬರುವುವೇ ಹೊರತು, ಹಠದಿಂದ ಹೇರಿದ ಅಪಧಮನಿ-ಅಭಿಧಮನಿ-ಹೃತ್ಕುಕ್ಷಿ-ಹೃತ್ಕರ್ಣ-ಶ್ಲೇಷ್ಮ-ಗುಲ್ಮ ಎಂಬಂಥ ‘ಸಿಡಿಮಿಡಿನುಡಿ’ಗಳಲ್ಲ. (‘ಹೃತ್ಕುಕ್ಷಿ-ಹೃತ್ಕರ್ಣ’ ಯಾವುದೋ ಪುರಾಣದ ಅಣ್ಣತಮ್ಮ ರಾಕ್ಷಸರಂತೆ, ‘ಅಪಧಮನಿ-ಅಭಿಧಮನಿ’ ಮಹಿಷಾಸುರಮರ್ದಿನಿಯ ಅವಳಿ-ದ್ವಾರಪಾಲಕಿಯರಂತೆ, ‘ಗುಲ್ಮ’ವು ‘ಸಲ್ಮಾ’ಳ ತಂಗಿಯಂತೆ, ‘ಶ್ಲೇಷ್ಮ’ವು ‘ಶೇಷಮ್ಮ’ನಂತೆ ಅನಿಸಿ, ಹೆಚ್ಚೆಂದರೆ ನಗೆ ಬರಿಸುತ್ತವೆಯಷ್ಟೇ.) ಯಾರಾದರೂ ‘ಆ್ಯಂಜೀಯಪ್ಲ್ಯಾಸ್ಟೀ’ ಎಂಬುದಕ್ಕೆ “ಗುಂಡಿಗೆಯಲ್ಲಿ ಗರಣೆಗಟ್ಟಿರುವ ನೆತ್ತರನ್ನು ಹೆರೆದು, ಅಲ್ಲೊಂದು ಪುಟಾಣಿ ಕೊಳವೆಯನ್ನು ತೂರಿಸುವಿಕೆ” ಎಂದರೆ, ಅಥವಾ ‘ಪ್ಯಾನ್‍ಕ್ರಿಯಾಟಿಕ್ ಕ್ಯಾನ್ಸರ್’ ಜಾಗದಲ್ಲಿ ,“ಮೇದೋಜ್ಜೀರಕ ಗ್ರಂಥಿಯಲ್ಲಿ ಏಡಿಗಂತಿ ಉದ್ಭವಿಸಿದೆ” ಎಂದರೆ ಏನರ್ಥವಾದೀತು? (ಅನರ್ಥವೇ ಜಾಸ್ತಿ.) ಅಂತರರಾಷ್ಟ್ರೀಯ ವಿಮಾನಗಳ ಭಾಷಾಂಧ ಚಾಲಕರು ಸಂದೇಶಗಳನ್ನು ಕೊಡುವಾಗ, ಇಂಗ್ಲಿಷ್ ಭಾಷೆಯನ್ನು ತಿರಸ್ಕರಿಸಿದ್ದರಿಂದಾಗಿ, ಅನೇಕ ಅನಾಹುತಗಳೂ ಆಗಿರುವುದುಂಟು. ವಿಜ್ಞಾನದ ಕಲ್ಪನೆಗಳು-ವಿಚಾರಗಳು-ಆವಿಷ್ಕಾರಗಳು-ಸಂಶೋಧನೆಗಳು ಮಾತ್ರ ಇಂಗ್ಲಿಷ್ ಕಡೆಯಿಂದಲೇ ಬರಬೇಕು; ಆದರೆ ಆ ಪದಗಳು ನಾಲಿಗೆಯನ್ನು ಮುಟ್ಟಿಬಿಟ್ಟರೆ ಅದು ‘ಮಹಾಪಾಪ!’ ಇದೆಂಥ ನವಜಾತ ಅಸ್ಪೃಶ್ಯತೆ?! ಹೆಸರುಗಳ ಮೇಲೆ ಬೇಕಾಬಿಟ್ಟಿ ಕೈಯಾಡಿಸಿ, ಅಕಟವಿಕಟ-ಉಪಯೋಗಶೂನ್ಯ-ವಿವೇಕಹೀನ ಪದಗಳನ್ನು ಪಾಠ್ಯಕ್ರಮಗಳಲ್ಲಿ ಅಡುಕುವುದು, ಅರ್ಧ-ಅಕ್ಷರಸ್ಥರ, ಪರಹಿಂಸಾನಂದರ ಕೆಟ್ಟ ಚಟವಷ್ಟೇ. (ಇಂಗ್ಲಿಷ್ ಮೇಲೆ ಕಿಡಿಕಾರುವವರು “ಕ್ರಿಕೆಟ್” ಯಾಕೆ ಆಡಬೇಕು ಮತ್ತು “ಕ್ರಿಕೆಟ್”ಗೆ ಕನ್ನಡದಲ್ಲೇನು?)
“‘ಕನ್ನಡ’ ಎಂಬ ಸತ್ಯವನ್ನು ಬಿಟ್ಟು ಬೇರೇನನ್ನೂ ನೋಡುವುದಿಲ್ಲ” ಎಂದು “ಕನ್ನಡ” ಹಾಕಿಕೊಂಡಿರುವ ‘ಜಾಣ’ಕುರುಡ ತೀವ್ರವಾದಿಗಳಿಗೆ ಇವೇನೂ ಕಾಣವು. (‘ಕನ್ನಡ’ ಎಂಬುದಕ್ಕೆ ‘ಕಣ್ಣಿಗೆ ಕಟ್ಟುವ ಅಡ್ಡಪಟಿ’್ಟ ಅಥವಾ ‘ಕನ್ನಡಕ’ ಎಂಬ ಅರ್ಥವೂ ಇದೆ; ಇದನ್ನು “ಕಣ್ಣಡ” ಎಂದೂ ಕರೆಯುತ್ತಾರೆ.) ಇಂಗ್ಲಿಷ್‍ಗೆ ಡಾಂಬರಾಭಿಷೇಕ ಮಾಡುವ ಆಡಂಬರದ ಡೊಂಬರಾಟ ಮಾತ್ರ ಅವರಿಗೆ ಗೊತ್ತು. ಸಂಸ್ಕೃತ, ಇಂಗ್ಲಿಷ್, ಉರ್ದು, ಮರಾಠಿ ಎಲ್ಲ ಪದಗಳನ್ನೂ ಕನ್ನಡದಿಂದ ಅಳಿಸಿ, ಕಡೆಗೆ ಅಪ್ಪಟಗನ್ನಡದಲ್ಲಿ ಉಳಿಯುವುದೇನೆಂಬುದನ್ನು ತೋರ್ಪಡಿಸಲು ಅವರಿಗೆ ಸವಾಲೆಸೆಯಬೇಕು. ಪ್ರತಿನಿತ್ಯ ತಾವು ಬಳಸುವ ಧನ್ಯವಾದ/ಕೃತಜ್ಞತೆ, ಶುಭಾಶಯ, ಸುಸ್ವಾಗತ, ಅಭಿನಂದನೆ, ಸುಪ್ರಭಾತ, ಶುಭರಾತ್ರಿ ಮುಂತಾದ ಪದಗಳಿಗೆ, ಅಚ್ಚಗನ್ನಡದಲ್ಲಿ “ಥಟ್ ಅಂತ ಹೇಳಿ!” ಎಂದು ಕೇಳಿದರೆ, ಈ ವೀರಕನ್ನಡವಾದಿಗಳು ಎಲ್ಲಿಗೋಡುವರೋ ನೋಡಬೇಕು.
… ಮುಂದುವರೆಯುವುದು
[…] ಇಲ್ಲಿಯವರೆಗೆ ಇಂಗ್ಲಿಷ್ ಭಾಷೆಯು ಭಾರತೀಯರಿಗೆ ದತ್ತವಾಗಿರುವ ಒಂದು ಅಮೂಲ್ಯ-ಪಾರಂಪರಿಕ ಸಂಪತ್ತು. ಭೌಗೋಳೀಕರಣವು ಭರದಿಂದ ಸಾಗುತ್ತಿರುವ ಈ ಯುಗದಲ್ಲಿ, ಇಂಗ್ಲಿಷ್ ಭಾಷೆಯನ್ನು ಬಿಸಾಡುವುದು ಕೇವಲ ತಿಳಿಗೇಡಿತನವಷ್ಟೇ ಅಲ್ಲ, ವಿದ್ಯೆ- ಮತ್ತು ಪ್ರಗತಿ-ವಿರೋಧಿ ಕೃತ್ಯವೂ ಹೌದು. […]