ಅತ್ಯಾಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಇಂದು ವೈಜ್ಞಾನಿಕವಾಗಿ ಸಾಕಷ್ಟು ಸಾಧಿಸಿದ್ದೇವೆ, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬುದ್ಧಿವಂತರೆಂದು ಬೀಗುತ್ತಿದ್ದೇವೆ, ಉನ್ನತ ಶಿಕ್ಷಣವನ್ನು ಪಡೆದು, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ನೌಕರಿ ಹಿಡಿದುಕೊಂಡು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇವೆ. ತಾಂತ್ರಿಕವಾಗಿ ಮುಂದುವರೆದು ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ವಿದ್ಯಮಾನ ಘಟಿಸಿದರೂ ಕ್ಷಣಾರ್ಧದಲ್ಲಿ ವೀಕ್ಷಿಸುವ ಮಾಧ್ಯಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮಂಗಳನ ಅಂಗಳದಲ್ಲಿ ಆಟವಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ, ಚಂದ್ರನ ಮೈಲ್ಮೈಯಲ್ಲಿ ತುಸುಹೊತ್ತು ವಿರಮಿಸುವಷ್ಟರ ಮಟ್ಟಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಕಂಡಿದ್ದೇವೆ. ವೈದ್ಯಕೀಯ ಲೋಕದ ಅದ್ಭುತವಾದ ಆವಿಷ್ಕಾರಗಳೊಂದಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ಕಂಡುಕೊಂಡು ಆಯುಷ್ಯವನ್ನು ಹಿಗ್ಗಿಸಿಕೊಳ್ಳುತ್ತಿದ್ದೇವೆ. ಸಾಗರಗರ್ಭವನ್ನು ಭೇದಿಸುವ, ಭೂಗರ್ಭದಾಳವನ್ನು ಅಳೆಯುವ, ಸಕಲ ಜೀವಜಂತುಗಳ ಮೇಲೆ ನಿಯಂತ್ರಣ ಸಾಧಿಸುವ ತಾಕತ್ತು ಹೊಂದಿದ್ದೇವೆ….. ಹೀಗೆ ನಮ್ಮ ವಿಶೇಷ ಬುದ್ಧಿ ಶಕ್ತಿಯನ್ನು ನಾನಾ ರೀತಿಯಲ್ಲಿ ಬಳಸುವ ಮೂಲಕ ದೈಹಿಕ ಶ್ರಮರಹಿತವಾಗಿ ಕಾರ್ಯ ಸಾಧಿಸಿಕೊಳ್ಳುವುದರೊಂದಿಗೆ ಅತ್ಯಂತ ಸುಖೀ(!?) ಬದುಕನ್ನು ನಡೆಸುತ್ತಿದ್ದೇವೆ.
ಆದರೇ………!
ಕಣ್ಣಿಗೆ ಕಾಣದ ಕೊರೋನಾ ವೈರಸ್ ಹಾವಳಿಯಿಂದ ಪಾರಾಗಲು ಅನಿವಾರ್ಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೇಡಿಯಂತೆ ಮನೆಯೊಳಗೆ ಬಂಧಿಯಾಗಿದ್ದೇವೆಯೆಂದರೆ ನಮ್ಮ ಬುದ್ಧಿವಂತಿಕೆಗೆ ನಾಚಿಕೆಪಟ್ಟುಕೊಳ್ಳಬೇಕೋ, ನಗಬೇಕೋ, ಮುಖವನ್ನು ಮುಚ್ಚಿಕೊಳ್ಳಬೇಕೋ ತಿಳಿಯದಾಗಿದೆ. ಪ್ರಕೃತಿಯ ಮೇಲೆ ಸ್ವಾರ್ಥಕ್ಕಾಗಿ ಆಕ್ರಮಣ ಮಾಡುತ್ತಾ, ಅಭಿವೃದ್ಧಿಯ ನೆಪದಲ್ಲಿ ಪರಿಸರ ಸಮತೋಲದ ಸರಪಣಿಯನ್ನು ಸವೆಸುತ್ತಾ, ಪ್ರಗತಿಯ ಹೆಸರಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಸ್ವೇಚ್ಛಾಚಾರದ ಮೂಲಕ ನಾಶಪಡಿಸುತ್ತಿರುವ ಇಡೀ ವಿಶ್ವದ ಜನತೆಯನ್ನು ಪ್ರತೀಕಾರವೆಂಬಂತೆ ಆಹುತಿ ತೆಗೆದುಕೊಳ್ಳಲು ದಾಪುಗಾಲಿಡುತ್ತಿರುವ ಯಕಶ್ಚಿತ್(!) ಕೊರೋನಾ ವೈರಸ್ ಪುರಾಣ ಕಾಲದ ಮಾಯಾಸ್ತ್ರದಂತೆ ಆರ್ಭಟಿಸುತ್ತಿದೆ. ಈ ಮಾಯಾಜೀವಿಯ ವಿರುದ್ಧ ಹೋರಾಡಲು ಇರುವ ಏಕೈಕ ಮಾರ್ಗವೆಂದರೆ “ಸಾಮಾಜಿಕ ಅಂತರ”ವನ್ನು ತಿಂಗಳಾನುಗಟ್ಟಲೆ ಕಾಯ್ದುಕೊಳ್ಳುವುದಾಗಿದೆ. ಅದಕ್ಕಾಗಿ ನಮ್ಮ ದೇಶವು ‘ಲಾಕ್ ಡೌನ್’ ಹೆಸರಿನಲ್ಲಿ ಸಾರ್ವಜನಿಕ ಸಾರಿಗೆ, ಸಭೆ, ಸಮಾರಂಭಗಳು, ಜಾತ್ರೆ ಮಹೋತ್ಸವ, ಸಾಮೂಹಿಕ ಪ್ರಾರ್ಥನೆಯಂತಹ “ಸಮೂಹ ಸಮ್ಮಿಲನ” ವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರ ಅನುಪಾಲನೆಯ ಸಂದರ್ಭದಲ್ಲಿ ಆಗುವ ಅನಾನುಕೂಲಗಳನ್ನು ಪರಿಹರಿಸಲು, ಮೂಲಭೂತ ಅಗತ್ಯಗಳನ್ನು ಒದಗಿಸಲು ಸರ್ಕಾರ, ಸಂಘ ಸಂಸ್ಥೆಗಳು ನಿಯಮಗಳ ಪಾಲನೆಯೊಂದಿಗೆ ಹಗಲಿರುಳು ಶ್ರಮಿಸುತ್ತಿವೆ. ಕೊರೋನ ಶಂಕಿತರನ್ನು ಹುಡುಕುವ, ಪರೀಕ್ಷಿಸುವ, ಸೋಂಕಿತರಿಗೆ ಚಿಕಿತ್ಸೆ ನೀಡುವ, ಸರ್ಕಾರ ನಿಗದಿಪಡಿಸಿದ ಮುನ್ನೆಚ್ಚರಿಕೆ ಕ್ರಮಗಳ ಅನುಪಾಲನೆಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾಯಕದಲ್ಲಿ ವೈದ್ಯರು, ನರ್ಸ್ ಗಳು, ಪೋಲಿಸ್ ಸಿಬ್ಬಂದಿ, ಸೇನಾ ಪಡೆ, ಜನಪ್ರತಿನಿಧಿಗಳು, ಸ್ವಸಹಾಯಕರು ಎಲ್ಲರೂ ದಿನದ ಇಪ್ಪತ್ನಾಲ್ಕು ಗಂಟೆಗಳೂ ಅವಿರತವಾಗಿ ಸೇವೆ ಗೈಯುತ್ತಿದ್ದಾರೆ. ಇವರೆಲ್ಲರಿಗೂ ಕೃತಜ್ಞರಾಗಿರಬೇಕಾದುದು ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಇವೆಲ್ಲದರ ನಡುವೆಯೂ ಈ “ಕೊರೋನಾ ಪರಿಣಾಮ”ವು ನಮಗೆಲ್ಲ ಕೆಲವು ಪಾಠಗಳನ್ನು ಕಲಿಸುತ್ತಿರುವುದನ್ನು ಗ್ರಹಿಸಬೇಕಾದುದು ಅತ್ಯಗತ್ಯವಾಗಿದೆ. ಅಂತಹವುಗಳನ್ನು ಈ ಮುಂದಿನಂತೆ ಅವಲೋಕಿಸಬಹುದಾಗಿದೆ.
●ಹೆಚ್ಚಿರುವ ತವರಿನ ಪ್ರೀತಿ…..
ಉನ್ನತ ಶಿಕ್ಷಣ, ಉತ್ತಮ ನೌಕರಿ ಮುಂತಾದ ಕಾರಣಗಳಿಂದ ಹೆತ್ತವರು, ಒಡಹುಟ್ಟಿದವರಿಂದ ದೂರದ ವಿದೇಶಗಳಲ್ಲಿ ನೆಲೆಸಿದ್ದ ಲಕ್ಷಾಂತರ ಜನರು ಆ ದೇಶಗಳಲ್ಲಿ ಕಂಡು ಬಂದ ಕೊರೋನಾ ವೈರಸ್ ಪ್ರಕರಣಗಳಿಂದ ಎಚ್ಚೆತ್ತುಕೊಂಡು, ನಮ್ಮ ದೇಶಕ್ಕೆ ವಾಪಾಸಾಗಿ ಜೀವವನ್ನು ಉಳಿಸಿಕೊಳ್ಳೋಣವೆಂಬ ಮಹದಾಸೆಯಿಂದ ವಾಪಾಸಾಗಿ “ಬದುಕಿದೆಯಾ ಬಡ ಜೀವವೇ” ಎಂದು ನಿಟ್ಟುಸಿರು ಬಿಡುತ್ತಿದ್ದಾರಷ್ಟೇ ಅಲ್ಲ, ತಮ್ಮ ಕುಟುಂಬ ಸದಸ್ಯರ ಜೊತೆಗೆ ಪ್ರೀತಿಯಿಂದ ಬಾಳಲು ನಿಶ್ಚಯಿಸಿರುವ ಮಾತುಗಳನ್ನಾಡುತ್ತಿದ್ದಾರೆ. ಸೋಂಕಿರುವವರು “ಸತ್ತರೆ ನಮ್ಮ ಜನ್ಮ ಭೂಮಿಯಲ್ಲೇ ಸಾಯಬೇಕು” ಎಂಬ ಅಂತಿಮ ಆಸೆಯೊಂದಿಗೆ ಮರಳಿ ಸಾವಿನ ಘಳಿಗೆಯಲ್ಲಿ ತವರು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
●ಹಳ್ಳಿಯ ಬದುಕೇ ಸ್ವರ್ಗ…..
ನಗರ ಜೀವನವೆಂದರೆ ತುಂಬಾ ಸುಸಜ್ಜಿತ, ಅನುಕೂಲಕರ, ಸಂಪಾದನೆಯ ಸುಲಭ ಕ್ಷೇತ್ರ, ವೃತ್ತಿ ಪ್ರವೃತ್ತಿಗಳಿಗೆ ಹೆಚ್ಚು ಅವಕಾಶಗಳು ಸಿಗುವ ತಾಣ…ಎಂದೆಲ್ಲಾ ಆಲೋಚಿಸಿ, ಹಳ್ಳಿ ಬಿಟ್ಟು ಪಟ್ಟಣ, ನಗರಗಳನ್ನು ಸೇರಿದ ಸಾವಿರಾರು ಕುಟುಂಬಗಳು ಕೊರೋನಾ ಎಫೆಕ್ಟ್. ಭಯದಿಂದಾಗಿ ರಿವರ್ಸ್ ಗೇರ್ ನಲ್ಲಿ ಹಳ್ಳಿಯ ಕಡೆಗೆ ವೇಗವಾಗಿ ವಾಪಾಸಾಗಿ, ತಮ್ಮ ಹಿರಿಯ ಸದಸ್ಯರ ಜೊತೆಗಿನ ಪ್ರೀತಿಯ ಕಕ್ಷೆಯನ್ನು ಸೇರಿಕೊಂಡಿದ್ದಾರೆ. ಅಗತ್ಯವಿರಲೀ ಇಲ್ಲದಿರಲಿ, ಫ್ಯಾಶನ್ ಬದುಕಿನ ವ್ಯಾಮೋಹಕ್ಕೆ ಮನಸೋತು ಮೈಸೂರು, ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ವಾಸಿಸುತ್ತ, ಹೆತ್ತವರಿಗೆ ಜನ್ಮ ಕೊಟ್ಟಿದ್ದಕ್ಕೆ ಭಕ್ಷೀಸು ಎಂಬಂತೆ ಆಗಾಗ ಹಣ ಕಳಿಸುತ್ತ ದೌಲತ್ತಿನ ಜೀವನ ಸಾಗಿಸುತ್ತಿದ್ದವರು “ಗಂಜೀ ಕುಡಿದಾದರೂ ಹಳ್ಳಿಯಲ್ಲೇ ಬದುಕೋಣ” ಎಂಬಂತೆ ಓಡೋಡಿ ಗೂಡು ಸೇರಿಕೋಂಡಿದ್ದಾರೆ.
●ಪೋಷಕರ ಪ್ರೀತಿ ಅನುಭವಿಸಿದ ಮಕ್ಕಳು…
ಕೆಲವು ಕುಟುಂಬಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಉದ್ಯೋಗದ ನಿಮಿತ್ತವಾಗಿ ಮಕ್ಕಳನ್ನು ನೋಡಿಕೊಳ್ಳಲಾಗದೆ ಬೇಬಿ ಸಿಟ್ಟಿಂಗ್, ಕಿಡ್ಸ್ ಕೇರ್ ಗಳಿಗೆ ಸೇರಿಸಿ ಅಥವಾ ಆಯಾಗಳನ್ನು ನೇಮಕ ಮಾಡಿಕೊಂಡು ಯಾಂತ್ರಿಕ ಬದುಕಿಗೆ ಹೊಂದಿಕೊಂಡಿದ್ದರಿಂದ ಪುಟ್ಟ ಮಕ್ಕಳು ಅಮೂಲ್ಯವಾದ ತಾಯಿಯ ಸ್ಪರ್ಶ, ತಂದೆಯ ಪ್ರೀತಿಯಿಂದ ವಂಚಿತರಾಗುತ್ತಿದ್ದರು. ಎರಡು ಸಂಬಳದ ಆಸೆಗಾಗಿ ತಮ್ಮ ಕರುಳ ಬಳ್ಳಿಗಳ ವಾತ್ಸಲ್ಯವನ್ನೇ ಧಿಕ್ಕರಿಸಿದ್ದ ಸಾವಿರಾರು ಪೋಷಕರು ಗೃಹಬಂಧನದ ನೆಪದಿಂದಲಾದರೂ ತಮ್ಮ ಮಕ್ಕಳ ಜೊತೆಯಲ್ಲಿ ಹಲವಾರು ದಿನಗಳನ್ನು ಕಳೆಯಲು ಈ ಕೊರೋನಾ ಕರ್ಫ್ಯೂ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈಗಲಾದರೂ ಅಂಥವರಿಗೆ ಜ್ಞಾನೋದಯ ಆಗುವುದೇ ಎಂಬುದನ್ನು ಈಗಲೇ ಹೇಳಲಾಗದು.
●ಹೆಚ್ಚಿದ ಪುಸ್ತಕಗಳನ್ನು ಓದುವ ಅಭಿರುಚಿ…
ಕೊರೋನಾ ವೈರಸ್ ಗೆ ಹೆದರಿ ಮನೆಯೊಳಗೆ ಸೇರಿಕೊಂಡ ಅನೇಕ ಹಿರಿಯರು, ಕೆಲ ಯುವಕರು ಟೈಮ್ ಪಾಸ್ ಗಾಗಿಯಾದರೂ ತಮ್ಮ ಹಳೆಯ ಪೆಟ್ಟಿಗೆ, ಅಲ್ಮೇರಾಗಳಲ್ಲಿ ಹುಳು ಹಿಡಿಯುತ್ತಿದ್ದ ಕತೆ, ಕವನ, ಕಾದಂಬರಿ, ನಾಟಕ , ಆತ್ಮಚರಿತ್ರೆ ಮುಂತಾದ ಅನೇಕ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಅನ್ಯಮಾರ್ಗವಿಲ್ಲದೇ ರೂಢಿಸಿಕೊಂಡಿದ್ದಾರೆ. ಸಾಲದೆಂಬಂತೆ ತಮ್ಮ ಆಂಡ್ರಾಯ್ಡ್ ಮೊಬೈಲ್ ಗಳ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಾಹಿತಿಗಳು, ರಸಪ್ರಶ್ನೆಗಳು, ವರ್ಕ್ ಫ್ರಮ್ ಹೋಮ್ ನ ಯೋಜಿತ ಚಟುವಟಿಕೆಗಳು, ಆನ್ಲೈನ್ ಕಥೆ, ಕವಿತೆಗಳ ರಚನೆ ಮತ್ತು ವಾಚನ ಸ್ಪರ್ಧೆ, ಹಿರಿಯ ಕವಿಗಳ ಮಾರ್ಗದರ್ಶನದಲ್ಲಿ ಕಿರಿಯ ತಲೆಮಾರಿನ ಬರಹಗಾರರಿಗೆ ಸಂವಾದ, ವಿಮರ್ಶೆ, ಪುಸ್ತಕ ಪರಿಚಯ ಮುಂತಾದ ಅಭ್ಯಾಸಗಳನ್ನು ಮಾಡಿಕೊಳ್ಳಲು ಸಹಾಯಕವಾಗಿದೆ.
●ಹಳೆಯ ಆಟಗಳೊಂದಿಗೆ ಕುಟುಂಬ ಸದಸ್ಯರ ಟೈಮ್ ಪಾಸ್…
ನೂರಾರು ಮೊಬೈಲ್ ಗೇಮ್ ಗಳು ಅಂಗೈ ಎಂಬ ಅಂಗಳಕ್ಕೆ ಬಂದು ಕುಣಿಯುತ್ತಿರುವುದರಿಂದ ಹಳೆಯ ಆಟಗಳಾದ ಕಟ್ಟೇಮನೆ, ಅಳಗುಳಿ ಮನೆ, ಕೇರಮ್, ಚದುರಂಗ, ಚೌಕಾಬಾರ ಇತ್ಯಾದಿ ಗ್ರಾಮೀಣ ಕ್ರೀಡೆಗಳು ಮೂಲೆ ಗುಪಾಗಿದ್ದವು. ಆದರೆ ಈಗ ಆ ಎಲ್ಲಾ ಆಟಗಳನ್ನು ಸಮಯ ಹರಣದ ಸೌಕರ್ಯಕ್ಕಾಗಿ ಮಕ್ಕಳ ಜೊತೆಗೆ ಮನೆಯ ಹಿರಿಯರು ಕೂಡಿ ಆಡುತ್ತಾ, ಒಗ್ಗಟ್ಟಿನ ಆಟದ ಮಜಾವನ್ನು ಅನುಭವಿಸುತ್ತಿದ್ದಾರೆ. ಈ ಮೂಲಕ ಕಳೆದುಹೋಗಿದ್ದ ಗ್ರಾಮೀಣ ಆಟಗಳ ಪರಿಚಯ ಮತ್ತು ಪರಿಜ್ಞಾನವನ್ನು ಈಗಿನ ಮಕ್ಕಳು ಹೊಂದುವ ಸದವಕಾಶ ದೊರಕಿದಂತಾಗಿದೆ.
●ಕಡಿಮೆಯಾದ ಜಂಕ್ ಫುಡ್ ಗಳ ವ್ಯಾಮೋಹ…
ಹೊರಗಡೆಯಿಂದ ಬರುವ ಅಪ್ಪ ಅಮ್ಮ, ನೆಂಟರಿಷ್ಟರು ಮನೆಗೆ ಬರುವಾಗ ಪ್ರೀತಿಯ ದ್ಯೋತಕವಾಗಿ ಬೇಕರಿಯಿಂದ ಬ್ರೆಡ್, ಪಪ್ಸ್, ಚಿಪ್ಸ್, ಬಿಸ್ಕತ್, ಪಿಜ್ಜಾ, ಬರ್ಗರ್ ತರಹದ ಹಾಳು ಮೂಳು ತರುವುದು ವಾಡಿಕೆಯಾಗಿತ್ತು. ಈ ಥರದ ಜಂಕ್ ಫುಡ್ ತಿನ್ನುವ ಅಭ್ಯಾಸವು ಚಟವಾಗಿ ಮಾರ್ಪಟ್ಟು, ನಾಲಿಗೆ ರುಚಿಯ ಅಡಿಯಾಳಾಗಿ ದಿನನಿತ್ಯವೂ ತಿನ್ನುವ ಪರಿಪಾಠವನ್ನು ಪುಟ್ಟ ಮಕ್ಕಳು ಹೊಂದುತ್ತಿದ್ದರು. ಈ ಕೊರೋನ ಕರ್ಫ್ಯೂ ದಿಂದಾಗಿ ಬೇಕರಿ ಪದಾರ್ಥಗಳು ದೊರೆಯದೆ, ಜಂಕ್ ಫುಡ್ ಇಲ್ಲದೆಯೂ ಮನೆಯ ಸತ್ವಯುತ ಆಹಾರವನ್ನು ಸೇವನೆ ಮಾಡಿ ಬದುಕಬಹುತು ಮತ್ತು ಅನಗತ್ಯ ಖರ್ಚುಗಳನ್ನು ಉಳಿಸಬಹುದು ಎಂಬ ಪಾಠವನ್ನು ಅರ್ಥ ಮಾಡಿಕೊಳ್ಳಲು ನೆರವಾಗಿದೆ.
ಇವೆಲ್ಲ ಕೆಲವು ಸ್ಯಾಂಪಲ್ ಗಳಷ್ಟೇ! ಮನೆ ಬಿಟ್ಟು ಬೀದಿ ಬೀದಿ ಅಲೆಯುವ ಕೆಲವು ಬೇಜವಾಬ್ದಾರಿ ಯುವಕರು, ಕೆಲಸವಿರದಿದ್ದರೂ ಪಟ್ಟಣಗಳಿಗೆ ಬಸ್ ಹತ್ತುತ್ತಿದ್ದ ಹಿರಿಯರು, ಹೆಂಡತಿ ಮಕ್ಕಳ ಬಗ್ಗೆ ಚಿಂತೆ ಮಾಡದೆ ಕಲಿತ ದುಶ್ಚಟದಿಂದಾಗಿ ಮನೆಗೇ ಬಾರದಿದ್ದ ಮದ್ಯವ್ಯಸನಿಗಳು, ಮೋಜು, ಮಸ್ತಿ, ಸಿನಿಮಾ, ಕ್ಲಬ್ ಎಂದು ಹಣವನ್ನು ಪೋಲು ಮಾಡುತ್ತಿದ್ದ ಜನರು ಇದೀಗ ಅಂತಹ ಯಾವುದೇ ಅನುಕೂಲ, ಅವಕಾಶಗಳು ಇಲ್ಲದೆ ಮಿತವ್ಯಯದ ಮಹತ್ವವನ್ನು ಅರಿಯುವಂತಾಗಿದೆ. ಒಟ್ಟಿನಲ್ಲಿ ಕೊರೋನಾ ಕರ್ಫ್ಯೂ ಒದಗಿಸಿದ ಈ ಅರಿವಿನ ಪಾಠವನ್ನು ಅರ್ಥ ಮಾಡಿಕೊಂಡು, ನಮ್ಮ ಮುಂದಿನ ಬದುಕಿನಲ್ಲೂ ಅನಗತ್ಯ ಖರ್ಚು, ಓಡಾಟಗಳಿಗೆ ಕಡಿವಾಣ ಹಾಕಿ, ಸಂಬಂಧಗಳಿಗೆ ಬೆಲೆ ಕೊಟ್ಟು, ಕೂಡಿಬಾಳುವ ಮನಸ್ಥಿತಿಯನ್ನು ರೂಢಿಸಿಕೊಂಡು ಸಂತಸದಾಯಕ ಬದುಕನ್ನು ನಮ್ಮದಾಗಿಸಿಕೊಳ್ಳೋಣ.
–ಹೊ.ರಾ.ಪರಮೇಶ್ ಹೊಡೇನೂರು