ಕರಿಸುಂದರಿಯ ಕಿರಿಗೂಡು-2: ಅಖಿಲೇಶ್ ಚಿಪ್ಪಳಿ

ಕರಿಸುಂದರಿಯ ಕಿರಿಗೂಡು-1
[ಎರಡು ವಾರದ ಹಿಂದೆ ಬರೆದಿದ್ದ ಈ ಸತ್ಯಕಥೆಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇದ್ದುದ್ದರಿಂದ, ನಂತರದಲ್ಲಿ ನಡೆದ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿದ್ದರೆ, ಪ್ರಪಂಚ ಸುಲಲಿತವಾಗಿಯೇ ಇರುತ್ತಿತ್ತೇನೋ. ಇಲ್ಲಿ ಪುಟ್ಟ ಕಣಜವೊಂದು ತನ್ನ ವಂಶಾಭಿವೃದ್ಧಿಯ ಪ್ರಯತ್ನದಲ್ಲಿದ್ದಾಗಲೇ, ದೂರದ ಅಸ್ಸಾಂನಲ್ಲಿ ಮಾನವನ ಶೋಕಿಗಾಗಿ ಒಂದು ಅಪ್ರಿಯ ಘಟನೆ ನಡೆಯಿತು. ಜೀವಜಾಲದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ] 
 
ತನ್ನ ಗೂಡಿಗೆ ಲಪ್ಪ ಹಾಕಿ ಮೆತ್ತಿದಂತೆ, ಜೇಡಿ ಮಣ್ಣನ್ನು ಮೆತ್ತಿ ಹೋದ ಕಪ್ಪು ಸುಂದರಿ ಸರಿಯಾಗಿ ಹತ್ತು ದಿವಸದ ನಂತರ ತಿರುಗಿ ಬಂದಳು. ಇಷ್ಟರಲ್ಲೆ ನಮ್ಮ ಕಲ್ಪನೆಯ ಗಾಳಿಪಟ ಬಾಲಂಗೋಚಿ ಕಳೆದುಕೊಂಡು ಎತ್ತೆತ್ತಲೋ ಹಾರುತ್ತಿತ್ತು. ಕಪ್ಪುರಂಧ್ರದೊಳಗಿನ ಮೊಟ್ಟೆಗಳು ಮರಿಯಾಗಿರಬಹುದೆ? ಮೊಟ್ಟೆಯೊಡೆದ ಮರಿಗಳಿಗೆ ಆಹಾರವಾಗಿ ಇಟ್ಟಿದ್ದ ಹುಳುಗಳನ್ನು ಮರಿಗಳು ತಿಂದವೇ? ಮರಿಗಳಿಗೀಗ ರೆಕ್ಕೆ ಬಂದಿರಬಹುದೇ? ಇಂತವೇ ಯೋಚನೆಗಳು, ಬರೀ ಕೆಲಸಕ್ಕೆ ಬಾರದವು ಎಂದು ಕೊಂಡರೂ ಅಡ್ಡಿಯಿಲ್ಲ. ವಾಪಾಸು ಬಂದ ಕರಿಸುಂದರಿಯ ಹತ್ತಿರ ಗಟ್ಟಿಯಾದ ಗೂಡಿನ ಬಾಗಿಲನ್ನು ಒಡೆಯಲು ಉಳಿ-ಸುತ್ತಿಗೆಗಳಂತಹ ಸಲಕರಣೆಗಳೇನು ಇರಲಿಲ್ಲ. ನಾವೂ ಗೂಡಿಗೆ ತೀರಾ ಹತ್ತಿರ ಹೋದರೂ ಅದು ತನ್ನ ಕೆಲಸವನ್ನೇನು ನಿಲ್ಲಿಸಲಿಲ್ಲ. ಒಂದು ಬಾರಿಯಂತೂ ಅದರ ರೆಕ್ಕೆಗೇ ಕೈಬೆರಳು ತಾಗಿತು. ಆದರೂ ಅದು ಗಲಿಬಿಲಿ-ಗಾಬರಿಯಾಗಲಿ ಆಗಲಿಲ್ಲ. ಉಳಿದ ಕೀಟಗಳಿಗೆ ಹೋಲಿಸಿದರೆ, ಇದರ ಹಾರಾಟದ ವೇಗ ತುಸು ಕಡಿಮೆಯೆಂದೇ ಹೇಳಬೇಕು. ಅಂದರೆ ಜೇನ್ನೊಣ ಅಥವಾ ನೊಣಗಳ ವೇಗ ಇದಕ್ಕಿಲ್ಲ ಎಂಬುದು ನಾವು ಗಮನಿಸಿದ ಸಂಗತಿ.  ಬಹುಷ: ತನ್ನ ಇಕ್ಕಳದಂತಹ ಹಲ್ಲಿನಿಂದಲೇ ಕೊರೆದು ಬಾಗಿಲನ್ನು ತೆಗೆಯುವ ಪ್ರಯತ್ನ ಮಾಡುತ್ತಿತ್ತು. ಮಧ್ಯೆ-ಮಧ್ಯೆ ಹೊರಗೆ ಹಾರಿಹೋಗುತ್ತಿತ್ತು.

ಆ ದಿನ ಬಂದ ದಿನಪತ್ರಿಕೆಯ ಮೊದಲ ಪುಟದ ಎಡಭಾಗದಿಂದ ಕೊನೆಯ ಪುಟದ ಬಲಭಾಗದವರೆಗೂ ಎಲ್ಲಾ ಸುದ್ಧಿಗಳನ್ನು ಓದಿಯಾಯಿತು. ಅತ್ಯಾಚಾರ-ಅನಾಚಾರ-ಭ್ರಷ್ಟಾಚಾರಗಳ ರಕಾರಗಳೇ ಬಹುಮುಖ್ಯವಾದ ಪುಟಗಳನ್ನು ಭರ್ತಿಯಾಗಿಸಿದ್ದವು. ಜೊತೆಗೆ ಬಿಹಾರ ಚುನಾವಣೆಯ ರಂಗಿನ ಕೆಸರೆರಚಾಟದ ಸುದ್ಧಿಗಳು. ಈ ದಿನಪತ್ರಿಕೆಗಳ ಸುದ್ದಿಗಳೂ ಬಲು ವಿಚಿತ್ರವಾಗಿರುತ್ತವೆ. ಕೆಲವು ದಿನಪತ್ರಿಕೆಗಳು ಆಳುವವರ ಪರವಾದ ಸುದ್ಧಿಗಳನ್ನಷ್ಟೇ ಪ್ರಕಟಿಸಿದರೆ, ಇನ್ನು ಕೆಲವು ಪತ್ರಿಕೆಗಳು ವಿರೋಧಪಕ್ಷಗಳಿಗೆ ಮಣೆ ಹಾಕುತ್ತಾ, ಆಳುವವರನ್ನು ತೆಗಳುತ್ತಿರುತ್ತವೆ. ನಿಷ್ಪಕ್ಷಪಾತವಾದ ವರದಿಯನ್ನು ಕಾಣುವುದು ಕಷ್ಟಸಾಧ್ಯ. ಎರಡೂ ತರಹದ ಪತ್ರಿಕೆಗಳನ್ನು ಓದಿಕೊಂಡು ನಿಮ್ಮದೇ ಒಂದು ನಿರ್ಧಾರಕ್ಕೆ ನೀವು ಬರಬೇಕಾಗುತ್ತದೆ. ಇದನ್ನೇ ಪೇಯ್ಡ್ ಮೀಡಿಯಾ ಎನ್ನುತ್ತಾರೇನೋ. ಬಹುಮುಖ್ಯವಾದ ಸುದ್ಧಿಗಳು ವರದಿಯಾಗುವುದು ಕಡಿಮೆಯೇ. ಅದರಲ್ಲೂ ಎಲ್ಲಾ ಪತ್ರಿಕೆಗಳು ಒಂದು ಅಲಿಖಿತ ನಿಯಮವನ್ನು ಅಳವಡಿಸಿಕೊಂಡಂತೆ ತೋರುತ್ತವೆ. ಮಾನವ ಕೇಂದ್ರಿತ ಚಟುವಟಿಕೆಗಳಷ್ಟೇ ಬಹು ಪ್ರಾಮುಖ್ಯತೆ ನೀಡುತ್ತವೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ನಿರ್ಭಂಧಿತ ಪ್ರದೇಶದಲ್ಲೇ ಮಧ್ಯ ತಯಾರಿಸುವ ಬಲುದೊಡ್ಡ ಕಾರ್ಖಾನೆಯ ಗಾಲ್ಫ್ ಕ್ಲಬ್ ಅಕ್ರಮವಾಗಿ ತಲೆಯೆತ್ತಿದ ಸುದ್ಧಿ ಬಹುಜನರ ಅವಗಾಹನೆಗೆ ಬಂದಿಲ್ಲ. ಈ ಹೆಂಡ (ಹೆಂಡವೆಂದು ಕರೆದರೆ ಭಾಷಾ ಶುದ್ಧಿಯಿಲ್ಲದವನು ಎನ್ನಬಹುದು, ಸ್ಕಾಚ್ ಎನ್ನೋಣ) ತಯಾರಿಸುವ ಕಂಪನಿಯ ಹೆಸರು ಎನ್.ಆರ್.ಎಲ್. ತಮ್ಮ ಕಂಪನಿಯ ಪ್ರತಿಷ್ಠಿತ ಸದಸ್ಯರುಗಳ ಮನರಂಜನೆಗಾಗಿ ನಿಷೇಧಿತ ಪ್ರದೇಶದಲ್ಲಿ ಈ ಕಂಪನಿ ಗಾಲ್ಫ್ ಮೈದಾನವನ್ನು ನಿರ್ಮಿಸಿದೆ. 

ಅಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು ಹಾಕಲಾಗಿದೆ. ಅದಕ್ಕಿಂತ ಮುಖ್ಯವಾಗಿ ಮೈದಾನದ ಸುತ್ತಲೂ ಇರುವೆ ನುಸುಳದ ಹಾಗೆ 8 ಅಡಿ ಎತ್ತರದ ಕಾಂಕ್ರೀಟ್ ಕಾಂಪೌಂಡು ನಿರ್ಮಿಸಿ, ಕಾಂಪೌಂಡಿನ ಮೇಲೆ ಸುರುಳಿ ತಂತಿಯನ್ನು ಎಳೆದು ಭದ್ರಗೊಳಿಸಲಾಗಿದೆ. ಯಾವುದೇ ತರಹದ ಮಾನವ ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳಿಗೆ ನಿಷಿದ್ಧವಾದ ಈ ಸ್ಥಳ ಮುಖ್ಯವಾಗಿ ಅಲ್ಲಿ ವಾಸಿಸುವ ಆನೆಗಳ “ಚಲಿಸುವ ಪಥ” ಅಥವಾ ಕಾರಿಡಾರ್ ಆಗಿದೆ. 

ಸುಮಾರು 50ರ ಸಂಖ್ಯೆಯಲ್ಲಿದ್ದ ಆನೆಗಳು ತಮ್ಮ ಪಾರಂಪಾರಿಕ ಪಥದಲ್ಲಿ ಈ ಕಾಂಕ್ರಿಟ್ ಕಾಂಪೌಂಡ್ ನಿರ್ಮಿತವಾಗಿದ್ದರಿಂದ, ಆನೆಗಳ ಹಿಂಡು ಮುಂದೆ ಚಲಿಸಲು ಆಗಲಿಲ್ಲ. ಅನುವಂಶಿಕವಾಗಿ ಬಂದ ಆನೆಪಥದಲ್ಲಿ ಅಡಚಣೆಗಳೇನಾದರೂ ಇದ್ದಲ್ಲಿ ಆನೆಹಿಂಡು ದಾರಿ ಬದಲಿಸಿ ಬೇರೆಡೆಗೆ ಹೋಗುವ ಸಾಧ್ಯತೆ ಕಡಿಮೆ. ಅದೂ ಅಲ್ಲದೇ ಗ್ಯಾಲನ್‍ಗಟ್ಟಲೆ ನೀರು ಬೇಡುವ ಆನೆಗಳಿಗೆ ಬೇಕಾದ ಸಮೃದ್ಧ ಕೆರೆಯ ಅಡ್ಡಲಾಗಿ ಶೋಕಿಗಾಗಿ ನಿರ್ಮಿಸಲಾದ ಗಾಲ್ಪ್ ಮೈದಾನದ ಕಾಂಪೌಂಡ್ ಕಟ್ಟಿ ಆನೆಪಥವನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಘೀಳಿಡುತ್ತಾ ಆನೆ ಹಿಂಡು ವಾಪಾಸು ಹೋದವು. ನೀರಿಲ್ಲದೆ ಬದುಕಲಾರದ ದೈತ್ಯದೇಹಿಗಳು ಮತ್ತೆ ಅದೇ ಪಥದಲ್ಲೇ ವಾಪಾಸು ಬಂದವು. 

ಇದರಲ್ಲಿ 7 ವರ್ಷದ ಗಂಡಾನೆಗೆ ತುಸು ಹೆಚ್ಚೇ ಬಾಯಾರಿಕೆಯಾಗಿತ್ತೇನೋ, ಅಡ್ಡವಿರುವ ಕಾಂಪೌಂಡಿಗೆ ತಲೆಯಿಂದ ಘಟ್ಟಿಸಿತು. ಖಾಸಗೀ ಕಂಪನಿಯವರು ಸರಿಯಾದ ಸಿಮೆಂಟ್ ಮಿಶ್ರಣವನ್ನು ಬಳಸಿ ಕಾಂಪೌಂಡ್ ಕಟ್ಟಿದ್ದು (ಸರ್ಕಾರಿ ಕಾಂಪೌಂಡ್ ಆಗಿದ್ದರೆ, ಆನೆಯ ಶಕ್ತಿಯ ಮುಂದೆ ನಿಲ್ಲುತ್ತಿರಲಿಲ್ಲ ಬಿಡಿ) ಪಾಪ ಆ ಆನೆಮರಿಗೆ ತಿಳಿಯಲಿಲ್ಲವೇನೋ? ತಲೆಯನ್ನು ಘಟ್ಟಿಸುತ್ತಾ ವಿಫಲ ಯತ್ನವನ್ನು ನಡೆಸಿತು. ಸಂಜೆಯ ಹೊತ್ತಿಗೆ ಮಿದುಳಿನಲ್ಲೆ ರಕ್ತಸ್ರಾವವಾಗಿ ಕಾಂಪೌಂಡಿನ ಪಕ್ಕದಲ್ಲೇ ಸತ್ತು ಹೋಯಿತು. ತನ್ನ ಗುಂಪಿಗೊಂದು ದಾರಿ ಮಾಡುವ ಯತ್ನದಲ್ಲಿ ವೀರಮರಣವನ್ನೇ ಅಪ್ಪಿತು. ಮನುಷ್ಯ ಸಮಾಜದಲ್ಲಾದರೆ ಇಂತಹ ಸಾಹಸಕ್ಕೆ ಸರ್ಕಾರ ಮರಣೋತ್ತರ ಶೌರ್ಯಪ್ರಶಸ್ತಿಯನ್ನು ನೀಡುತ್ತಿತ್ತು. ಹೆಂಡ ತಯಾರಿಸುವ ಬಲಿಷ್ಟವಾದ ಕಂಪನಿಯ ಈ ಕೃತ್ಯ ನೆಲಮೂಲದ ಬಲಿಷ್ಟ ಪ್ರಾಣಿಯ ಪ್ರಾಣವನ್ನು ತೆಗೆಯಿತು. ಪರಿಸರಪ್ರೇಮಿಗಳು ಈ ಅಕ್ರಮದ ವಿರುದ್ಧ ಸರ್ಕಾರದ ಗಮನ ಸೆಳೆಯುವಲ್ಲಿ ನಿರತರಾಗಿದ್ದಾರೆ. ತನ್ನ ಹಣದ ಬಲದಿಂದ ಅಕ್ರಮವಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ತಡೆಗೋಡೆಯನ್ನು ನಿರ್ಮಿಸಿದ ಕಂಪನಿಗೆ ಅದನ್ನು ಉಳಿಸಿಕೊಳ್ಳಲು ಕೆಳಮಟ್ಟದಲ್ಲಿ ಲಕ್ಷಾಂತರ ರೂಪಾಯಿಗಳನ್ನು ತೆರುವುದು ಕಷ್ಟದ ಕೆಲಸವೇನಲ್ಲ. ಆನೆಗಳ ಪರವಾಗಿ ರಾಯಭಾರ ನಡೆಸುವ ಜನರಲ್ಲಿ ಮೂಲ ಬಂಡವಾಳದ್ದೇ ಕೊರತೆಯಿರುತ್ತದೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳ ನೆರವಿನಿಂದ ಮಾನವೀಯತೆ ಹೊಂದಿದ ಕೆಲವರು ಇದರ ವಿರುದ್ಧ ಬಂಡೆದ್ದಿದ್ದಾರೆ. ಇದಕ್ಕಾಗಿ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಬಹುದು. ಉನ್ನತ ಸಮಿತಿಯ ಉನ್ನತ ಮಟ್ಟದ ಅಧಿಕಾರಿಗಳು ಸತ್ಯ ವರದಿಯನ್ನೇ ನೀಡಬಹುದು. ಈ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ತನ್ಮಧ್ಯದಲ್ಲೇ ಇನ್ನೊಂದಿಷ್ಟು ಆನೆಗಳು ಕಲ್ಲಿನಂತಹ ಕಾಂಪೌಂಡಿಗೆ ಡಿಕ್ಕಿ ಹೊಡೆದು ಸಾಯಬಹುದು. ಇಷ್ಟೆಲ್ಲಾ ಹೋರಾಟದ ನಂತರದಲ್ಲಿ ಆನೆಗಳ ಪರವಾದ ಹೃದಯವಂತರಿಗೆ ಗೆಲವೂ ಸಿಗಬಹುದು. ಸತ್ತ ಎಳೆ ಮರಿಯೇನು ತಿರುಗಿ ಬರುವುದಿಲ್ಲ. ಇನ್ನಷ್ಟು ಆನೆಗಳ ಹತ್ಯೆಯಾಗುವುದರಲ್ಲಿ ಹೆಂಡದ ಕಂಪನಿಯ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂಬುದಷ್ಟೇ ದೂರ ಕುಳಿತ ನಮ್ಮಂತವರ ಹಾರೈಕೆ.

ಆನೆ ಕತೆ ಬರೆಯುತ್ತಾ, ಯಕಶ್ಚಿತ್ ಹುಳದ ಬಗ್ಗೆ ಮರೆತೇ ಹೋಯಿತಾ ಎಂದು ಕೇಳಬಹುದು. ಇಲ್ಲಾ ಮರೆತಿಲ್ಲ, ಈಗ ಮುಗಿಸುವುದಕ್ಕೂ ಮುನ್ನ ಅಲ್ಲಿಗೇ ಬರುತ್ತಿದ್ದೇನೆ. ಈ ಹಿಂದೆಯೂ ಸಾಕಷ್ಟು ಬಾರಿ ಹೇಳಿದ್ದೇನೆ. ಮನೆಯೆದುರಿನ ಹತ್ತಡಿ-ಇಪ್ಪತ್ತಡಿ ಜಾಗದಲ್ಲಿ ಕಾಲಕ್ಕನುಗುಣವಾಗಿ ಬೆಳೆಯುವ ತರಕಾರಿಗಳನ್ನು ಹಾಕುತ್ತೇವೆ. ಹೀಗೆ ಹೇಳಿದರೆ ಸರಿಯಾಗಲಿಕ್ಕಿಲ್ಲ ಅಥವಾ ತಪ್ಪಾಗಬಹುದು. ನಿಮ್ಮ ದೃಷ್ಟಿಯಲ್ಲಿ ಅಲ್ಲ. ಬೆಳೆಯುವುದು ನನ್ನ ಮಡದಿಯಾದ್ದರಿಂದ, ತರಕಾರಿ ಬೆಳೆಯುವ ಕ್ರೆಡಿಟ್ ಅವಳಿಗೇ ಸಲ್ಲಬೇಕು. ಹತ್ತಾರು ಬಳ್ಳಿ ಅಲಸಂದೆ ಬಳ್ಳಿಗಳು ಹೂ ಬಿಟ್ಟಿವೆ. ಹಾಗೆಯೇ ಮನೆಯ ಸುತ್ತ ಚೆನ್ನಾದ ಹಸಿರಿರುವುದರಿಂದ, ಚಿಕ್ಕ-ಪುಟ್ಟ ಪಕ್ಷಿಗಳಿಗೆ ಆಶ್ರಯತಾಣವೂ ಆಗಿದೆ. ಪಿಕಳಾರ ಹಕ್ಕಿಗಳು ಮಿಶ್ರಾಹಾರಿಗಳು, ತಮ್ಮ ಮರಿಗಳಿಗೆ ಸಮತೋಲನ ಆಹಾರ ನೀಡುವುದರಲ್ಲಿ ಅವು ನಿಷ್ಣಾತ. ಕೆಲವೊಮ್ಮೆ ಅಲಸಂದೆ ಬಳ್ಳಿಯಲ್ಲಿರುವ ಹುಳುಗಳನ್ನು ತಿಂದರೆ, ಅಪರೂಪಕ್ಕೊಮ್ಮೆ ಅಲಸಂದೆ ಹೂಗಳನ್ನು ಕೀಳುತ್ತವೆ. 

ಬೆಳಗಿನಿಂದಲೇ ಶುರುವಾದ ಕಪ್ಪುಸುಂದರಿಯ ಪ್ಯಾರಾಥಾನ್ ಕ್ರಿಯೆಯನ್ನು ಅಲಸಂದೆ ಬಳ್ಳಿಯ ಮೇಲೆ ಕುಳಿತಿದ್ದ ಜೋಡಿಗಣ್ಣುಗಳು ಗಮನಿಸುತ್ತಲೇ ಇದ್ದವು. ಮೊದಲೇ ಹೇಳಿದಂತೆ ಕಪ್ಪುಸುಂದರಿ (ಲೀಫ್ ಕಟರ್ ವ್ಯಾಸ್ಪ್) ಕಣಜದ ಸ್ವಾಭಾವಿಕ ಹಾರುವ ವೇಗ ಕಡಿಮೆ. ಗಮನಿಸುತ್ತಿದ್ದ ಜೋಡಿಗಣ್ಣುಗಳು ಲೆಕ್ಕಾಚಾರ ಹಾಕುತ್ತಲೇ ಇದ್ದವು. ಬೆಳೆಯುತ್ತಿರುವ ತನ್ನ ಮರಿಗಳಿಗೆ ಪೌಷ್ಟಿಕ ಆಹಾರದ ಹುಡುಕಾಟದಲ್ಲೂ ಇದ್ದವು. ಕಪ್ಪುಸುಂದರಿಗೆ ಮನುಷ್ಯರ ಭಯವಿರಲಿಲ್ಲ. ಆದರೆ ಪಿಕಳಾರ ತೀರಾ ಮನುಷ್ಯರ ಹತ್ತಿರ ಸುಳಿಯುವುದಿಲ್ಲ. ನಿಸರ್ಗದಲ್ಲಿ ನಡೆಯುವ ನೈಸರ್ಗಿಕ ಲೆಕ್ಕಾಚಾರಗಳೆಲ್ಲಾ ಎಲ್ಲಾಬಾರಿಯೂ ಸೂತ್ರಬದ್ಧವಾಗಿಯೇ ನಡೆಯುತ್ತವೆ ಎಂದು ಹೇಳಲು ಆಗುವುದಿಲ್ಲ. ಈ ಬಾರಿ ಜೋಡಿಗಣ್ಣುಗಳ ಲೆಕ್ಕಾಚಾರ ತಪ್ಪಾಗಲಿಲ್ಲ. ನಿಧಾನವಾಗಿ ಹಾರಿಬರುತ್ತಿದ್ದ, ಕರಿಸುಂದರಿಯನ್ನೇ ಗುರಿಯಾಗಿಟ್ಟುಕೊಂಡು ವೇಗವಾಗಿ ತೇಲಿ ಬಂದ ಪಿಕಳಾರ ಅದನ್ನು ಕೊಕ್ಕಿನಲ್ಲಿ ಹಿಡಿಯುವಲ್ಲಿ ಸಫಲವಾಯಿತು. ಒಂದೇಟಿಗೆ ಕಣಜದ ಪ್ರಾಣ ಹೋಗಿರಬೇಕು. ಆಹಾರ ಸಿಕ್ಕಿದ ಖುಷಿಯಲ್ಲಿ ಪಿಕಳಾರ ಹಾರಿಹೋಯಿತು. 

ಹತ್ತಾರು ದಿನದಿಂದ ಅತೀವ ಕುತೂಹಲದಿಂದ ಕಾಯುತ್ತಿದ್ದ ನಮ್ಮ ಆಸೆಗಳೆನ್ನೆಲ್ಲಾ ಪಿಕಳಾರ ಒಂದೇಟಿಗೆ ನೀರುಪಾಲು ಮಾಡಿತು. ಆಮೇಲೆ ಗಮನಿಸಿದ ಸಂಗತಿಯೆಂದರೆ, ಬೆಳಗಿನಿಂದ ತಾಯಿ ಕಣಜ ಗೂಡಿನ ಬಾಗಿಲನ್ನು ಬಹುತೇಕ ಒಡೆಯುವಲ್ಲಿ ಯಶಸ್ವಿಯಾಗಿತ್ತು. ಗೂಡಿನೊಳಗೆ ಗಾಳಿಯಾಡಿ ಮರಿಗಳು ಹೊಸಪ್ರಪಂಚಕ್ಕೆ ಕಾಲಿಡಲು ತಯಾರಾಗಿದ್ದವೇನೋ? ಗೊತ್ತಿಲ್ಲ. ಒಂದೆರೆಡು ದಿನ ಬಿಟ್ಟು ನೋಡಿದಾಗ ಗೂಡು ಖಾಲಿಯಾಗಿದ್ದು ಕಂಡುಬಂತು. ಅಳಿದುಳಿದ ಜೇಡಿಮಣ್ಣನ್ನು ಚೊಕ್ಕಟಗೊಳಿಸಿಟ್ಟೆವು. ಇಷ್ಟೊತ್ತಿಗೆ ನನ್ನ ಗೃಹಬಂಧನದ ಅವಧಿಯೂ ಮುಗಿದಿತ್ತು. ಕಾಜಿರಂಗದ ಕಾಡಿನ ಆನೆ ಕತೆ ದುಖಾಂತ್ಯವಾದರೆ, ನನ್ನ ಕತೆ ಸುಖಾಂತ್ಯವಾಯಿತು. ಕಣಜದ ಕತೆ ದುಖಾಂತ್ಯವೋ? ಸುಖಾಂತ್ಯವೋ? ಹೇಳಲು ನಾವ್ಯಾರು???


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x