ಕಥಾಲೋಕ

ಕರಿಯ ಮತ್ತು ಕೆಂದಿಯ ಕಥೆ: ನವೀನ್ ಮಧುಗಿರಿ

ಮಲ್ಲಿಗೆಪುರದ ಗಾಳೇರ ಓಣಿಯಲ್ಲಿ ಹನುಮಂತಪ್ಪನ ಮನೆ. ಹನುಮಂತಪ್ಪ ಒಂದು ಕಪ್ಪು ಬಣ್ಣದ ನಾಯಿ ಸಾಕಿದ್ದ. ತುಂಬಾ ದಷ್ಟಪುಷ್ಟ ಹಾಗೂ ನಂಬಿಕಸ್ಥ ನಾಯಿ ಅದು. ಹನುಮಂತಪ್ಪ ಅದನ್ನ ಕರಿಯ ಅಂತ ಕರೆಯುತ್ತಿದ್ದ. ಅಪ್ಪಿತಪ್ಪಿ ಅವನೆದುರು ಯಾರಾದರೂ ಅದನ್ನ ನಾಯಿ ಅಂದರೆ, "ಅದುಕ್ಕೆ ಹೆಸರಿಲ್ವಾ? ನಾಯಿ ಅಂತ್ಯಾಕಂತೀರ? ಕರಿಯ ಅಂತ ಕರೀರಿ" ಎಂದು ದಬಾಯಿಸುತ್ತಿದ್ದ. ಆ ಕರಿಯನ ದೆಸೆಯಿಂದಾಗಿ ಹನುಮಂತಪ್ಪನ ಮನೆಯಂಗಳದ ಮೇಲೆ  ಹೆಜ್ಜೆಯಿಡಲು ಜನ ಹೆದರುತ್ತಿದ್ದರು. ಕರಿಯ ಮನೆಯ ಹಜಾರದಲ್ಲಿ ಮಲಗುತ್ತಿದ್ದ. ಹಾಕಿದ ಊಟ ತಿನ್ನುತ್ತಿದ್ದ. ಯಾರಾದರೂ ಮನೆಯ ಮುಂದೆ ನಡೆದುಹೋದರೆ, ಒಂಚೂರು ಏನಾರ ಸದ್ದಾದರೆ, ಅಂಗಳದಲ್ಲಿ ನಿಂತು ಒಂದಷ್ಟು ಹೊತ್ತು ಒಂದೇ ಸಮನೇ ಅತ್ತಿತ್ತ ನೋಡುತ್ತ ಬೊಗಳುತ್ತಿದ್ದ. ಊರ ಜನ, 'ಕರಿಯ ಹನುಮಂತಪ್ಪನ ಕಿರಿಮಗ' ಎಂದು ಒಮ್ಮೊಮ್ಮೆ ತಮಾಷೆಗೂ, ಕೆಲವೊಮ್ಮೆ ಗಂಭೀರವಾಗಿಯೂ ಮಾತಾಡಿಕೊಳ್ಳುತ್ತಿದ್ದರು.

ಹನುಮಂತಪ್ಪ ಒಮ್ಮೆ ಮೇಕೆಯೊಂದನ್ನು ಕೊಂಡು ತಂದ. ಅದು ಕೆಂದು ಬಣ್ಣದ ಮೇಕೆ. ಮನೆಯವರೆಲ್ಲ ಅದನ್ನ ಕೆಂದಿ ಎಂದು ಕರೆಯಲಾರಂಭಿಸಿದರು. ಹಜಾರದ ಮೂಲೆಗೆ ಗೂಟ ಬಡಿದು ಕೆಂದಿಯನ್ನು ಅಲ್ಲಿಯೇ ಕಟ್ಟಿದರು. ಕೆಂದಿ ಬರುವವರೆಗೂ ಹುಲಿಯಂತೆ ಉದ್ದಕ್ಕೂ ಕಾಲು ಚಾಚಿ ಹಜಾರದಲ್ಲೇ ಮಲಗುತ್ತಿದ್ದ ಕರಿಯ ಹಜಾರದಿಂದ ಹೊರಕ್ಕೆ ಸಗಣಿ ಅಂಗಳದ ಪಾಲಾದ. ಈ ವಿಷಯದ ಸಲುವಾಗಿ ಕರಿಯನ ಒಳಗೊಳಗೆ ಕೆಂದಿಯ ಮೇಲೆ ಸಣ್ಣದಾಗಿ ದ್ವೇಷ ಹುಟ್ಟಿತು. ಮನೆಯವರೆಲ್ಲರೂ ಕೆಂದಿಯ ಮೇಲೆ ವಿಶೇಷವಾಗಿ ಪ್ರೀತಿ ತೋರುತ್ತಿದ್ದುದು ಕರಿಯನ ದ್ವೇಷಕ್ಕೆ ತುಪ್ಪ ಸುರಿಯಿತು.

ಒಮ್ಮೆ ಕೆಂದಿ ಮೂರು ಮರಿಗಳನ್ನು ಹಡೆದಳು. ಅದೇ ಸಮಯದಲ್ಲಿ ಜೋರು ಮಳೆ ಬಂತು. ಮಳೆಯಲ್ಲಿ ನೆನೆಯಲಾಗದ ಕರಿಯ ಹಜಾರದತ್ತ ಓಡಿದ. ಈ ಕರಿಯ ಇನ್ನೆಲ್ಲಿ ತನ್ನ ಮರಿಗಳನ್ನು ಕಚ್ಚಿ ತಿನ್ನುವನೋ ಎಂದು ಹೆದರಿದ ಕೆಂದಿ ಜೋರಾಗಿ ಕರಿಯನ ಹೊಟ್ಟೆಗೊಮ್ಮೆ ತನ್ನ ತಲೆಯಿಂದ ಗುದ್ದಿದಳು. ಕೆಂದಿ ಗುದ್ದಿದ ರಭಸಕ್ಕೆ ಕರಿಯ ಹಜಾರದಿಂದ ಹಾರಿಹೋಗಿ ಅಂಗಳದಲ್ಲಿ ರಪ್ಪನೆ ಬಿದ್ದ. ಬಿದ್ದವನೇ ಒಂದೆರಡು ನಿಮಿಷ 'ಕಯ್ಯೋಂ ಕುಯ್ಯೋಂ' ಎಂದು ಕುಯ್ಗುಡುತ್ತ ಒದ್ದಾಡಿ, ಸಾವರಿಸಿಕೊಂಡು ಮೇಲೆದ್ದು ಮೈಕೊಡವಿ ಹಿಂದೆಮುಂದೆ ಯೋಚಿಸದೆ ಅಲ್ಲಿಂದ ಓಡಿದ. ಹಾಗೆ ಓಡಿದ ಕರಿಯ ಊರಾಚೆ ಮಾರಮ್ಮನ ಗುಡಿಯ ಮುಂದೆ ಇದ್ದ ಸೂರಿನಡಿಯಲ್ಲಿ ನಿಂತ, ಕುಂತ, ಮೇಲೆದ್ದು ಮೈ ಕೊಡವಿದ, ಮತ್ತೆರಡುಸಲ ಹೊರಳಾಡಿದ. ಮೈಯ್ಯ ಕಸುವೆಲ್ಲ ಎಲ್ಲೋ ಬಸಿದುಹೋದಂತೆ ಭಾಸಗುತಿತ್ತು.

ಆ ರಾತ್ರಿಯನ್ನು ಮಾರಮ್ಮನ ಗುಡಿಯ ಮುಂದಿನ ಸೂರಿನಡಿ ಕಳೆದ ಕರಿಯ ಮುಂಜಾನೆ ಕೋಳಿ ಕೂಗಿನ ವೇಳೆಗೆ ಹನುಮಂತಪ್ಪನ ಮನೆಯಂಗಳದಲ್ಲಿ ಹಾಜರಾದ. ಹನುಮಂತಪ್ಪ ಕೆಲಸದ ಕಾರಣ ಯಾವುದೋ ಊರಿಗೆ ಹೊರಡುವವನಿದ್ದ. ಅದಕ್ಕಾಗಿ ಹನುಮಂತಪ್ಪನ ಹೆಂಡತಿ ಆಗಲೇ ಅಡಿಗೆ ತಿಂಡಿಯ ತಯಾರಿಯಲ್ಲಿದ್ದಳು. ಕರಿಯನಿಗೆ ತುಂಬಾ ಹಸಿವಾಗಿತ್ತು. ಕುಂಯ್ಗುಟ್ಟುತ್ತ ಅಂಗಳದ ತುಂಬಾ ಅಲೆದಾಡಿದ. ಕರಿಯನ ಕಂಡ ಹನುಮಂತಪ್ಪ "ರಾತ್ರಿಯೆಲ್ಲ ಎಲ್ಲಿಗೆ ಹೋಗಿದ್ದೋ ಕರಿಯ?" ಎಂದು ತನ್ನ ಮುದ್ದಿನ ನಾಯಿಯನ್ನು ಅಕ್ಕರೆಯಿಂದ ಮೈ ಸವರಿದ. ಕರಿಯ "ಕುಂಯ್ ಕುಂಯ್ಯ್" ಅಂತ ಬಾಲ ಅಲ್ಲಾಡಿಸುತ್ತಾ ನಡೆದ ವಿಷಯ ಹೇಳಿದ. ಹನುಮಂತಪ್ಪನಿಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ರಾತ್ರಿ ಉಳಿದಿದ್ದ ಕರಿಯನ ಪಾಲಿನ ತಂಗಳನ್ನು ಹನುಮಂತಪ್ಪನ ಹೆಂಡತಿ ತಂದು ಪಾತ್ರೆ ತೊಳೆಯುವ ಬಂಡೆಯ ಮೇಲೆ ಸುರಿದಳು. ತಂಗಳಿಗೆ ಬಾಯಿ ಹಾಕಿದ ಕರಿಯ ಒಂದಗಳು ಉಳಿಸದಂತೆ, ಬಂಡೆಯನ್ನೆಲ್ಲ ನಾಲಗೆಯಲ್ಲಿ ನೆಕ್ಕಿಯೇ ತಲೆ ಮೇಲೆತ್ತಿದ್ದು.

ಕರಿಯ ಅಂಗಳದಲ್ಲೇ ಮಲಗುತ್ತಿದ್ದ. ಮಳೆ ಬಂದಾಗ ಹಜಾರದ ಕಡೆಗೆ ಹೋದರೆ ಕೆಂದಿ ಕರಿಯನ ಪಕ್ಕೆಲುಬುಗಳು ಪುಡಿಯಾಗುವಂತೆ ಗುದ್ದುತ್ತಿದ್ದಳು. ಕರಿಯ ಒಂದೆರಡು ಸಲ ಹಿಂಗೆ ಪೆಟ್ಟು ತಿಂದು,  ಆಮೇಲೆ ಹಜಾರದತ್ತ ಹೆಜ್ಜೆಯಿಡಲಿಲ್ಲ. ಮಳೆ ಶುರುವಾದರೆ ಕರಿಯ ಮಾರಮ್ಮನ ಗುಡಿಯತ್ತ ಓಡುತ್ತಿದ್ದ. ಹೀಗೇ ಮೂರು ತಿಂಗಳು ಕಳೆಯಿತು.

ಅವತ್ತು ಊರಜಾತ್ರೆ. ಊರ ತುಂಬಾ ತೋರಣ.  ಮನೆಗಳಿಗೆ ಸುಣ್ಣ ಬಣ್ಣ. ಮನೆ ಮಂದಿಯೆಲ್ಲ ಹೊಸ ಬಟ್ಟೆ ತೊಟ್ಟಿದ್ದರು. ಬಂದ ನೆಂಟರುಗಳು ಬಣ್ಣ ಬಣ್ಣದ ಬಟ್ಟೆ  ತೊಟ್ಟಿದ್ದರು. ಸಂಜೆಗೆ ಆರತಿ ಮುಗಿದು. ಮರುದಿನ ಬೆಳಿಗ್ಗೆ ಎಲ್ಲರ ಮನೆಯಲ್ಲೂ ವಿಶೇಷ ಅಡುಗೆಗಳು. ಹನುಮಂತಪ್ಪನ ಬಳಗ ದೊಡ್ಡದು ಮನೆಯ ಒಳ ಹೊರಗೆಲ್ಲ ಬರೀ ನೆಂಟರೋ ನೆಂಟರು. ಕರಿಯ ಅಂಗಳದಲ್ಲಿ ಕಾವಲಿಗೆ ನಿಂತಿದ್ದ. ಅಕ್ಕಪಕ್ಕದ ಕೇರಿಯ ನಾಯಿಗಳು ಗಾಳೇರ ಓಣಿಗೆ ಬರುತ್ತಿದ್ದಂತೆ ತಮ್ಮ ಮನೆಯ ಅಂಗಳಕ್ಕೆ ಹೆಜ್ಜೆಯಿರಿಸದಂತೆ ಕರಿಯ ಎಲ್ಲವನ್ನೂ ಬೊಗಳಿ ಬೊಗಳಿ ಓಡಿಸುತ್ತ ತನ್ನ ನಿಷ್ಠೆಯನ್ನು,  ಶೌರ್ಯವನ್ನು ಹನುಮಂತಪ್ಪನ ಸೇರಿದಂತೆ ಬಂದಿದ್ದ ನೆಂಟರಿಷ್ಟರಿಗೆಲ್ಲ ಪ್ರದರ್ಶಿಸಿದ. ಗಂಡಸರೆಲ್ಲ ಉಂಡೇಳುತ್ತಿದ್ದರೆ, ಹೆಂಗಸರಿಗೆ ಬಡಿಸುವುದು ಎಂಜಲೆತ್ತುವುದೇ ಸೊಂಟ ಬಿದ್ದೋಗುವಷ್ಟಿತ್ತು. ಮನೆಯೊಳಗೆ ಜಾಗ ಸಾಕಾಗದೇ ಹಜಾರದಲೆಲ್ಲ ಕೂತು ಉಂಡೆದ್ದರು. ಮಧ್ಯಾಹ್ನದ ಮೇಲೆ ಸಂಜೆಯಾಗುತ್ತಾ ಆಗುತ್ತಾ ನಿಧಾನಕ್ಕೆ ಬಂದ ನೆಂಟರ ಗುಂಪು ಕರಗುತ್ತ ಬಂತು. ಕೊನೆಯಲ್ಲಿ ಹನುಮಂತಪ್ಪನ ಹೆಂಡತಿ ಉಳಿದ ಒಂದಷ್ಟು ಮಾಂಸದ ತುಂಡುಗಳನ್ನು,  ಎಂಜಲೆತ್ತಿದ ಮೂಳೆಗಳನ್ನೂ ತಂದು ಪಾತ್ರೆ ತೊಳೆಯುವ ಬಂಡೆಯ ಮೇಲೆ ಸುರಿದಳು. ಒಂದೇ ನೆಗೆತಕ್ಕೆ ಕರಿಯ ಬಂಡೆಯ ಮೇಲಿದ್ದ.

ಅಂದು ರಾತ್ರಿ ಹಜಾರದಲ್ಲಿ ಕೆಂದಿಯನ್ನು ಕಟ್ಟುತ್ತಿದ್ದ ಗೂಟದ ಪಕ್ಕದಲ್ಲೇ ಮಲಗಿದ್ದ ಕರಿಯ ಸಂಜೆ ತಿಂದ ಮಾಂಸ, ಕಡಿದ ಮೂಳೆಗಳು ಹೊಟ್ಟೆಯೊಳಗೆ ಚುಚ್ಚಿದಂತಾಗಿ,  ಒಡಲು ಭಾರವೆನಿಸಿ, ಮಲಗಿದ್ದಲ್ಲೇ ಅತ್ತಿತ್ತ ಒಂದೆರಡು ಸುತ್ತು ಹೊರಳಾಡಿದ.

– ನವೀನ್ ಮಧುಗಿರಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕರಿಯ ಮತ್ತು ಕೆಂದಿಯ ಕಥೆ: ನವೀನ್ ಮಧುಗಿರಿ

  1. ಕೆಂದಿ ಕರಿಯನ ಹೊಟ್ಟೆಯಲ್ಲಿ ಚುಚ್ಚತೊಡಗುವ ಮಾರ್ಮಿಕತೆ – ಓದುಗನನ್ನೂ ಚುಚ್ಚುತ್ತದೆ. 

Leave a Reply

Your email address will not be published. Required fields are marked *