ಊರಿನಲ್ಲಿ ಹೊಸ ಮನೆ ಕಟ್ಟಿಕೊಂಡು, ಬೇಕಾದಷ್ಟು ತರಕಾರಿ ಬೆಳೆದುಕೊಂಡು, ಸೊಂಪಾಗಿ ತಿನ್ನಬಹುದು ಎಂದು ಕನಸು ಕಾಣುತ್ತಿದ್ದವನಿಗೆ, ಎರವಾಗಿದ್ದು ಮಂಗಗಳು, ಏನೇ ಬೆಳೆದರೂ ಅದ್ಯಾವುದೋ ಹೊತ್ತಿನಲ್ಲಿ ಬಂದು ತಿಂದು, ಗಿಡಗಳನ್ನು ಹಾಳು ಮಾಡಿ, ಇಡೀ ಶ್ರಮವನ್ನು ವ್ಯರ್ಥಮಾಡಿ ಹೋಗುತ್ತಿದ್ದವು, ಮಂಗಗಳ ಅಸಹಾಯಕತೆ ಗೊತ್ತಿದ್ದರೂ, ಅದೇಕೋ ಅವುಗಳ ಮೇಲೆ ಸ್ವಲ್ಪ ಕೋಪವೂ ಬರುತ್ತಿತ್ತು. ತರಕಾರಿಗಳನ್ನು ತಿನ್ನುವುದಲ್ಲದೇ, ಗಿಡಗಳನ್ನು ಹಾಳು ಮಾಡುವ ಪರಿಗೆ ಕೆಲವೊಂದು ಬಾರಿ ಖಿನ್ನತೆಯೂ ಆವರಿಸುತ್ತಿತ್ತೇನೋ ಎಂಬ ಅನುಮಾನವೂ ಕಾಡುತ್ತಿತ್ತು. ಇದಕ್ಕೊಂದು ಉಪಾಯವೆಂದರೆ, ನಾಯಿಯೊಂದನ್ನು ತಂದು ಸಾಕುವುದು, ನಾಯಿ ಒಡೆಯನಿಗೆ ನಿಷ್ಟನಾಗಿರುತ್ತದೆ. ಮನೆ ಕಾಯುತ್ತದೆ, ಮಂಗಗಳನ್ನೂ ಕಾಯುತ್ತದೆ ಎಂದೆಲ್ಲಾ ಯೋಚಿಸಿ, ಸೂಕ್ತ ನಾಯಿಮರಿಯ ಹುಡುಕಾಟದಲ್ಲಿ ತೊಡಗಿದೆ. ಅಕ್ಟೋಬರ್-ನವಂಬರ್ ತಿಂಗಳಲ್ಲಿ ನಾಯಿಗಳು ಈಯುವ ಸಮಯ. ಇದು ಡಿಸೆಂಬರ್-ಜನವರಿಯವರೆಗೂ ಮುಂದುವರೆಯುತ್ತದೆ. ಆದರೂ, ಅವರಿವರಲ್ಲಿ ಹೇಳಿ ನನಗೊಂದು ನಾಯಿಮರಿ ಬೇಕು ಎಂದು ಆರ್ಡರ್ ಹಾಕುತ್ತಿದ್ದೆ. ನನ್ನ ಮಗನಿಗೆ ಜಾತಿ ನಾಯಿ ತರುವ ಬಯಕೆಯಿತ್ತು, ಗ್ರೇಟ್‌ಡೇನ್ ಅಥವಾ ರಾಟ್‌ವೀಲರ್ ಅವನ ಆಯ್ಕೆಯಾಗಿತ್ತು. ನಾನು ಖಡಾ-ಖಂಡಿತವಾಗಿ ಜಾತಿ ನಾಯಿಗಳ ವಿರೋಧಿ. ಅವುಗಳಿಗೆ ಕಾಯಿಲೆ ಜಾಸ್ತಿ, ದೇಖರೀಕಿ ನೋಡುತ್ತಾ ಇರಬೇಕು. ವಾರಕ್ಕೊಂದು ಬಾರಿ ಡಾಕ್ಟರ್ ಕರೆಸಬೇಕು ಹೀಗೆ ರಗಳೆ ಜಾತಿಗಳವು. ನನ್ನ ದೃಷ್ಟಿಯಲ್ಲಿ ನಾಯಿ ಜಾತಿಯೇ ಶ್ರೇಷ್ಠ. ಸುಮಾರು ನಾಲ್ಕಾರು ಕಡೆ ಹೇಳಿಟ್ಟಿದ್ದೆ, ಅವರ್‍ಯಾರಿಂದಲೂ ಸಕಾರಾತ್ಮಕ ಉತ್ತರ ಬರದಿರುವುದು, ನನ್ನಲ್ಲಿ ದುಗುಡ ಹೆಚ್ಚಿಸಿತ್ತು. ಜಾತಿ ನಾಯಿ ದುಡ್ಡು ಕೊಟ್ಟರೆ ಸಿಗುತ್ತದೆ. ಆದರೆ ನಾಯಿ ಜಾತಿಗೆ ಕಾಯಲೇ ಬೇಕಾದ ಅನಿವಾರ್ಯತೆ. ಇದರಲ್ಲೂ ನನ್ನ ಆದ್ಯತೆ ಗಂಡು ಮರಿಯಾಗಿತ್ತು.
ವಾಸ್ತವವಾಗಿ, ಎಲ್ಲಾ ಹೊತ್ತಿನಲ್ಲೂ ಮನೆಯ ಕಡೆಯಲ್ಲೇ ಇರುವ ನನ್ನ ಮಡದಿಗೆ ನಾಯಿ ಸಾಕುವುದರ ಬಗ್ಗೆ ಅಷ್ಟೇನು ಒಲವಿರಲಿಲ್ಲ. ಆದರೂ, ಕಷ್ಟಪಟ್ಟು ಬೆಳೆಸಿದ ತರಕಾರಿಗಳು ಮಂಗಗಳ ಪಾಲಾಗುವುದನ್ನು ತಪ್ಪಿಸುವ ಆಶಾಭಾವನೆಯಿಂದ ನಾಯಿಯನ್ನು ತಂದು ಸಾಕಲು, ಒಲ್ಲದ ಮನಸ್ಸಿಂದಲೇ ಕೆಲವು ಕಂಡೀಷನ್‌ಗಳನ್ನು ಹಾಕಿ ಒಪ್ಪಿಗೆ ನೀಡಿದಳು. ಕಂಡೀಷನ್ ಅಂದರೆ, ನಾಯಿಮರಿ ಯಾವುದೇ ಕಾರಣಕ್ಕೂ ಮನೆಯ ಒಳಗೆ ಬರಬಾರದು, ನಾಯಿಯನ್ನು ಮುಟ್ಟಬಾರದು, ಒಂದೊಮ್ಮೆ ಮುಟ್ಟಿದರೂ, ತಕ್ಷಣದಲ್ಲಿ ಕೈ ತೊಳೆಂiಬೇಕು. ನಾಯಿಮರಿಯನ್ನು ತಂದು ಮನೆಯಲ್ಲಿ ಇಟ್ಟರೆ ಆಯಿತೆ? ಅದಕ್ಕೆ ಕಾಲ-ಕಾಲಕ್ಕೆ ಆಹಾರ ನೀಡಬೇಕು, ಅದನ್ನು ಬಹಿರ್ದೆಸೆ ಕರೆದುಕೊಂಡು ಹೋಗಬೇಕು. ಮೇಲಾಗಿ ಅದರ ಮೈ ತೊಳೆಯಬೇಕು. ಕೂಸು ಬರುವುದಕ್ಕೆ ಮುನ್ನವೇ ಕುಲಾವಿ ತಯಾರಾದಂತೆ, ನಾಯಿಮರಿಯೇ ಇಲ್ಲ, ಆದರೆ ಭರಪೂರ ಕಂಡೀಷನ್‌ಗಳು.
ನಮ್ಮ ಮನೆ ಹತ್ತಿರ ರೈಲ್ವೆ ಗೇಟ್ ಬಳಿ ಮೋರಿಯಲ್ಲಿ ಒಂದು ನಾಯಿ ಮರಿ ಹಾಕಿದೆ ಎಂದು ಸುದ್ಧಿ ಹೇಳಿದವರು ನನ್ನ ಜೊತೆಯಲ್ಲಿ ಕೆಲಸ ಮಾಡುವವರು. ಅವರ ಮನೆ ರೈಲ್ವೇ ಗೇಟ್ ಹತ್ತಿರವೇ ಇದೆ. ಸರಿ ನನ್ನ ವರಾತ ಶುರುವಾಯಿತು, ನಾಯಿ ಮರಿ ತಂದು ಕೊಡಿ. ಅವರು ಹೇಳಿದ್ದು, ಇನ್ನೂ ಕಣ್ಣು ಬಿಟ್ಟಿಲ್ಲ ಕಣ್ರೀ? ಎಷ್ಟು ಮರಿ ಇದೆ ಎನ್ನೋದು ಗೊತ್ತಿಲ್ಲ. ಸ್ವಲ್ಪ ದಿನ ತಡೀರಿ. ಹೀಗೆ ಒಂದು ತಿಂಗಳಾಯಿತು. ಅವರ ಪ್ರಕಾರ ತಾಯಿ ನಾಯಿಯ ಆರೋಗ್ಯ ಸರಿಯಿಲ್ಲ. ಅದರ ಒಡಲಲ್ಲಿ ಹಾಲೇ ಇಲ್ಲ. ಐದು ಮರಿಗಳನ್ನು ಹೇಗೆ ಸಾಕುತ್ತೋ ಗೊತ್ತಿಲ್ಲ. ಅದೊಂದು ಬೀಧಿ ನಾಯಿ. ಅದಕ್ಯಾರು ಆಹಾರ ಕೊಡುತ್ತಾರೆ. ಅಲ್ಲೇ ರೈಲು ಗೇಟ್ ಹಾಕುವ-ತೆಗೆಯುವ ಕೆಲಸ ಮಾಡುವ ಮೂರು ಶಿಫ್ಟಿನ ಜನ ತಿಂದು ಬಿಟ್ಟ ಆಹಾರದಿಂದಲೇ ತಾಯಿ ನಾಯಿಯ ಉದರಪೋಷಣೆಯಾಗಬೇಕಿತ್ತು. ಒಂದು ತಿಂಗಳಲ್ಲಿ ಎರಡು ಮರಿಗಳು ಕುಪೋಷಣೆಯಿಂದ ಸತ್ತು ಹೋದವು. ಉಳಿದ ಮೂರು ಮರಿಗಳಲ್ಲಿ ೨ ಹೆಣ್ಣು ಒಂದು ಗಂಡು ಎಂಬ ಸುದ್ಧಿ ಬಂತು. ಅಂತೂ ಒಂದು ಭಾನುವಾರ ಬೆಳಗ್ಗೆ ಮಗನನ್ನು ಕರೆದುಕೊಂಡು, ಅವರ ಮನೆಗೆ ಹೋದೆ. ಮೋರಿಯಲ್ಲಿದ್ದ ಗಂಡು ನಾಯಿಮರಿಯೊಂದನ್ನು ತಂದು ಕೈಗಿತ್ತರು. ಚಿಕ್ಕ ಇಲಿಗಿಂತ ಕೊಂಚ ದೊಡ್ಡದಾದ ಅಲ್ಲಲ್ಲ ದೊಡ್ಡ ಇಲಿಗಿಂತ ಕೊಂಚ ಚಿಕ್ಕದಾದ ಕರಿ ಮರಿ ನನ್ನ ಮಡಿಲೇರಿತು. ಅಲ್ಲಿಂದ ನಮ್ಮ ಮನೆಗೆ ಸುಮಾರು ೧೫ ಕಿ.ಮಿ. ದೂರ. ಮರಿಯ ಮೈಯೆಲ್ಲಾ ಚಿಗಟ-ಉಣ್ಣೆ ತುಂಬಿಕೊಂಡಿದ್ದವು. ಮನೆಗೆ ಹೋದವನೇ ಮಾಡಿದ ಮೊದಲ ಕೆಲಸವೆಂದರೆ, ಅದಕ್ಕೊಂದಿಷ್ಟು ಹಾಲು ಹಾಕಿ ನಂತರ ಬಿಸಿ ನೀರಿನಲ್ಲಿ ಮೈತೊಳೆದದ್ದು. ಬೆಚ್ಚಗಿನ ಹಾಲು ಹಾಗೂ ಬೆಚ್ಚಗಿನ ನೀರಿನ ಸ್ನಾನ ಅದಕ್ಕೆ ಹಿತವಾಯಿತು. ಹಾಗೆಯೇ ನಿದ್ದೆ ಮಾಡಿತು. ಬುಟ್ಟಿಯಲ್ಲಿ ಹಳೇ ಬಟ್ಟೆಗಳನ್ನು ತುಂಬಿ ಮೆತ್ತನೆಯ ಹಾಸಿಗೆ ಸಿದ್ಧವಾಯಿತು. ಈ ಮಧ್ಯ ಹೊರಗಡೆ ಕರೆದುಕೊಂಡು ಹೋದರೆ, ಗಟ್ಟಿಯಾದ ಹಾಲು ಜೀರ್ಣವಾಗಿರಲಿಲ್ಲ. ಬೇಧಿ ಮಾಡಿತು. ಹೀಗೆ ಪ್ರತಿ ೨ ತಾಸಿಗೊಮ್ಮೆ ಅರ್ಧ ಲೋಟ ಹಾಲು. ನೋಡ-ನೋಡುತ್ತಿದ್ದಂತೆ ಸಂಜೆಯಾಯಿತು. ಚಳಿ ಇತ್ತು. ಹಾಲು ಹಾಕಿ ಮಲಗಿಸಿದರೆ, ಅದು ಒಂದೇ ಮಲಗುವುದಿಲ್ಲ ಎಂದು ಹಠ ಹಿಡಿಯಿತು. ಕುಂಯ್-ಕುಂಯ್ ರಾಗ ಶುರುವಾಯಿತು. ಮೋರಿಯಲ್ಲಾದರೆ, ಮೂರು ಮರಿಗಳಿದ್ದವು, ಒಂದರ-ಮೇಲೊಂದು ಮಲಗಿ ಬೆಚ್ಚಗಾಗುತ್ತಿದ್ದವು. ನಮ್ಮಲ್ಲಿ ಬರೀ ಬಿದಿರಿನ ಬುಟ್ಟಿ ಹಾಗೂ ಅದರೊಳಗೆ ಬಟ್ಟೆ, ಬಿಸಿರಕ್ತದ ಇನ್ನೊಂದು ಪ್ರಾಣಿಯಿಲ್ಲ. ಹೀಗೆ ಇದ್ದರೆ ಬೆಳತನಕ ಎಲ್ಲರಿಗೂ ಜಾಗರಣೆ. ಮನೆಯಲ್ಲಿದ್ದ ಹರಕು-ಮುರುಕು ಹಾಸುವ-ಹೊದೆಯುವ ಬಟ್ಟೆಗಳನ್ನು ತೆಗೆದುಕೊಂಡು, ಹಾಸಿಗೆ ಮಾಡಿಕೊಂಡು, ಅದನ್ನೂ ಜೊತೆಗೆ ಮಲಗಿಸಿಕೊಂಡೆ, ತಕರಾರಿಲ್ಲದೆ ನಿದ್ದೆ ಮಾಡಿತು. ಬೆಳ್ಳಂಬೆಳಗೂ ಒಂದೇ ನಿದ್ದೆ.
ನಾಯಿಗೊಂದು ಹೆಸರಿಡಬೇಕಲ್ಲ? ಕಪ್ಪಗಿದೆ ಬ್ಲಾಕಿ ಇಡೋಣ ಎಂದ ಮಗ. ಇಂಗ್ಲೀಷ್ ಬೇಡ ಎಂದೆ. ಕರಿಯ ಇಡೋಣ ಎಂಬ ಸಲಹೆ ಮಡಿದಿಯಿಂದ ಬಂತು. ಮೋಸ ಮಾಡಿದವನ ಹೆಸರು ಮಗನಿಗಿಡಬೇಕು ಎಂದು ದಾಸರು ಹೇಳಿದ್ದಾರೆ ಎಂದು ಬೀಚಿ ಬರೆದ ನೆನಪಿತ್ತು. ಒಬ್ಬರು ಮೋಸ ಮಾಡಿದವರ ಹೆಸರು ನೆನಪಿಗೆ ಬಂತು ಚಂಕಾ ಎಂದಿಟ್ಟುಕೊಳ್ಳಿ. ಅದನ್ನು ಇಡೋಣ ಎಂದೆ. ಕೆಟ್ಟಘಟನೆಗಳನ್ನು ಕೆಟ್ಟ ಸಿನಿಮಾಗಳನ್ನು ಮರೆತಂತೆ ಮರೆತುಬಿಡಬೇಕು, ಮತ್ಯಾಕೆ ಅವನ ಹೆಸರು ಇಡುತ್ತೀರಿ ಎಂದು ವೇದಾಂತರೂಪದ ತಕರಾರು ಮಡದಿಯಿಂದ ಬಂದಿದ್ದರಿಂದ, ಮರಿಗೆ ಕರಿಯ ಎನ್ನುವ ಹೆಸರು ಕಾಯಂ ಆಯಿತು (ಜೊತೆಗೆ ನನ್ನ ೧೨ ಇಂಚು ಬೂಟಿನಲ್ಲಿ ಮಲಗುತ್ತಿದ್ದರಿಂದ, ಬೂಟಾನಂದ ಸ್ವಾಮಿ, ಬೂಟೇಶ್ವರ ಎಂದು ಹಾಗೂ ಮ್ಯಾಟಿನ ಮೇಲೆ ಮಲಗುತ್ತಿದ್ದರಿಂದ ಮ್ಯಾಟನಂದ, ಹೀಗೆ ಉಪನಾಮಗಳು ಹಲವು ಸೇರಿಕೊಂಡವು). ಹೀಗೆ ಒಂದು ಹತ್ತು ದಿನ ಕರಿಯನಿಗೆ ನನ್ನ ಜೊತೆಯೇ ಶಯನಂಚ್ಛಮೆ ಆಯಿತು. ಕೆಲವು ದಿನ ರಾತ್ರಿ ಸೂಸೂವನ್ನು ಹಾಸಿಗೆಯಲ್ಲೇ ಮಾಡಿದ. ಉತ್ತಮ ಆಹಾರ ಲಭ್ಯವಾಗಿ ಮರಿ ಡುಂಮ್ಮಕೆ ಆಯಿತು. ನಾಯಿಮರಿಗೆ ಸ್ನಾನ ಮಾಡಿಸಲು ಸೋಪು ಬೇಕು ಎಂದು ಕೇಳಿದೆ ರೂ.೪೫ ಕೊಡಿ ಎಂದರು. ಮರಿಗೆ ಹೊಟ್ಟೆಹುಳಕ್ಕೆ ಹಾಗೂ ಕ್ಯಾಲ್ಸಿಯಂ ಸಿರಫ್ ಹಾಕಿ ಮತ್ತೊಂದು ೧೫೦ ಬಿಲ್ ಮಾಡಿದ. ಕತ್ತಿಗೊಂದು ಬಟ್ಟೆಯ ದಾರ, ಕಟ್ಟಲಿಕ್ಕೊಂದು ಸೆಣಬಿನ ಹುರಿ. ಹೊರಗೆ ಬಿಡುವ ಹಾಗಿಲ್ಲ, ಇತರೆ ನಾಯಿಗಳು ಬಂದು ಕಚ್ಚಬಹುದು ಅದಕ್ಕಿಂತ ಹೆಚ್ಚಾಗಿ ಮನೆಯೆದುರಿನ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ. ಸಿಗಂದೂರಿಗೆ ಹೋಗುವ ಮಾರ್ಗವನ್ನು ಬಿಚಾವಣೆ ಮಾಡಿದ್ದರಿಂದ, ಬದಲಿ ರಸ್ತೆಯಾಗಿ ನಮ್ಮ ಮನೆಯ ಮುಂದಿನ ರಸ್ತೆಯನ್ನು ಉಪಯೋಗಿಸಲಾಗುತ್ತಿತ್ತು. ಅಮವಾಸ್ಯೆ, ಹುಣ್ಣಿಮೆ, ಶನಿವಾರ-ಭಾನುವಾರಗಳಂದು ದೂರದ ಬೆಂಗಳೂರು, ಹುಬ್ಬಳ್ಳಿ ಹೀಗೆ ರಾಜ್ಯದ ನಾನಾ ಭಾಗಗಳಿಂದ ಜನ ಸಿಗಂದೂರಿಗೆ ಭೇಟಿ ನೀಡುತ್ತಾರೆ, ಕೆಲವಷ್ಟು ವರ್ಷಗಳ ಹಿಂದೆ ಅದ್ಯಾವುದೋ ಟಿ.ವಿ.ಯವರು ಇದು ಅಂತಹ ಶಕ್ತಿ ಸ್ಥಳ, ಹಾಗೆ-ಹೀಗೆ ಎಂದು ಹಾಡಿ ಹೊಗಳಿದ್ದರಿಂದ, ಸಿಗಂದೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ನೋಡಲು ಬಂದ ಹಲವು ಜನ ಅಲ್ಲಿನ ಹಿನ್ನೀರಿನಲ್ಲಿ ಮುಳುಗಿಯೋ, ರಸ್ತೆ ಅಪಘಾತದಲ್ಲೋ ಸತ್ತು ಹೋಗಿದ್ದಾರೆ. ಹಾಗಾಗಿ ಕರಿಯನನ್ನು ರಸ್ತೆ ಬಿಡುವ ಹಾಗಿಲ್ಲ. ರೈಲ್ವೇ ಹಳಿಯ ಪಕ್ಕದಲ್ಲೇ ಜನ್ಮ ಪಡೆದಿದ್ದ ಕರಿಯನಿಗೆ ಸ್ವಾಭಾವಿಕವಾಗಿ ರೈಲು-ರಸ್ತೆಯ ಕುರಿತು ಭಯವಿತ್ತು ಎಂದು ಕಾಣುತ್ತದೆ. ತಾನಾಗಿಯೇ ರಸ್ತೆಗೆ ಹೋಗುತ್ತಿರಲಿಲ್ಲ.
ಒಂದು-ಒಂದುವರೆ ತಿಂಗಳು ಮನೆಯ ಒಳಗಡೆ ಮೂಲೆಯಲ್ಲಿ ಹಾಸಿಗೆ ಹಾಸಿ ಕೊಟ್ಟರೆ ಅಲ್ಲೇ ಮಲಗುತ್ತಿದ್ದ. ರಾತ್ರಿ ಎದ್ದು ಹಾಲು ಹಾಕಿ ಹೊರಗಡೆ ಕರೆದುಕೊಂಡು ಹೋದರೆ, ಅಂಗಳದ ಮೂಲೆಯಲ್ಲಿ ಸೂಸು ಮಾಡಿ ಬರುವ ಅಭ್ಯಾಸವಾಯಿತು. ಕೆಲವೊಮ್ಮೆ ಮನೆಯೊಳಗೇ ಆಗಿ ಬಿಡುತ್ತಿತ್ತು. ಚೂರು ಬೈಯ್ದು ಕೊಳ್ಳದೇ ಮಡದಿ ಕರಿಯನ ಸೂಸುವನ್ನು ಒರೆಸಿ, ಫಿನಾಯಿಲ್ ಹಾಕಿ ತೊಳೆಯುತ್ತಿದ್ದಳು, ಸುಮಾರು ಹದಿನೈದು ವರುಷದ ನಂತರ, ಮತ್ತೊಮ್ಮೆ ಹೆರದೇ ಶಿಶುವಿನ ಬಾಣಂತನ ರೂಪದ ಭಾಗ್ಯ ಅವಳದಾಯಿತು. ಹೆತ್ತವರಿಗೆ ಹೆಗ್ಗಣ ಮುದ್ದಂತೆ, ಹಾಗೆಯೇ ಹೆರದವಳಿಗೆ ನಾಯಿಮರಿ ಮುದ್ದಾಯಿತು. ಮಕ್ಕಳೆಂದರೆ ದೇವರಿಗೆ ಸಮಾನ ಎಂದು ಹೇಳುತ್ತಾರೆ, ಪ್ರಾಣಿಗಳ ಮರಿಗಳಿಗೂ ಈ ಮಾತು ಅನ್ವಯಿಸಬಹುದು. ಮನೆಯೊಳಗೆ ಬಿಟ್ಟುಕೊಳ್ಳಬೇಡಿ, ಅದೇ ಅಭ್ಯಾಸವಾಗುತ್ತದೆ ಎಂದು ಹಲವರು ಎಚ್ಚರಿಸಿದರು. ಕೆಲವರು ಆಂಟಿ ರೇಬಿಸ್ ಚುಚ್ಚುಮದ್ದು ಕೊಡಿಸಿ ಎಂದರು. ಚಿನ್ನಾಟವಾಡುವಾಗ ಅದರ ಸೂಜಿಮೊನೆಯಂತಹ ಹಲ್ಲುಗಳು ನಮ್ಮೆಲ್ಲರ ಕಾಲುಗಳಲ್ಲೂ ನಾಟಿತ್ತು. ರಕ್ತವೂ ಬಂದಿತ್ತು. ನಾಯಿ ವೈದ್ಯರಿಗೆ ಫೋನ್ ಮಾಡಿದರೆ ಮೂರು ತಿಂಗಳ ಮೊದಲು ಚುಚ್ಚುಮದ್ದು ಕೊಡುವ ಹಾಗಿಲ್ಲ ನೀವೇ ಚುಚ್ಚುಮದ್ದು ತೆಗೆದುಕೊಳ್ಳಿ ಎಂದರು. ನಾನು, ಮಡದಿ, ಮಗ ಸೇರಿ ಒಟ್ಟು ೧೫ ಚುಚ್ಚುಮದ್ದು ತೆಗೆದುಕೊಳ್ಳಬೇಕಿತ್ತು. ಮರಿ ಆರೋಗ್ಯವಾಗಿದ್ದರಿಂದ ಯಾವುದೇ ತೊಂದರೆಯಿಲ್ಲ ಎಂದು ನಮ್ಮ ವೈದ್ಯರು ಹೇಳಿದರು. ಅಂತೂ ಚುಚ್ಚುಮದ್ದಿನಿಂದ ಬಚಾವಾದೆವು. ತನ್ಮಧ್ಯೆ ಕರಿಯ ಉದ್ದ, ಅಗಲ, ಎತ್ತರ ಹಾಗೂ ತೂಕದಲ್ಲಿ ಗಣನೀಯವಾಗಿ ಏರಿಕೆಯಾದ. ತೋಟಕ್ಕೆ ನಮ್ಮೊಂದಿಗೆ ಬಂದು ಆಡುವುದು, ಕಾಲುವೆಗೆ ಬಿದ್ದು ಕೆಸರು ಮಾಡಿಕೊಳ್ಳುವುದು ಇತ್ಯಾದಿಗಳು ನಡೆದಿದ್ದವು.
ಅದೊಂದು ದಿನ ಮಂಗಗಳು ದಾಳಿಯಿಟ್ಟವು, ಕರಿಯನ ತಾಕತ್ತಿನ ಪರೀಕ್ಷೆಯ ಸಮಯ. ಹಿತ್ತಿಲಿನಲ್ಲಿದ್ದ ಮಂಗಗಳನ್ನು ತೋರಿಸಿದೆ, ಎತ್ತಿಕೊಂಡು ಹೋಗಿ ಹತ್ತಿರ ಬಿಟ್ಟು ಕೂಗು. . . ಓಡಿಸು. . . ಎಂಬ ಆಜ್ಞೆಗಳನ್ನು ಮಾಡಿದೆವು. ಕರಿಯನಿಗೆ ಮಂಗಗಳೂ ನಾನೂ ಒಂದೇ ಎನಿಸಿರಬೇಕು, ಸುಮ್ಮನೆ ಹತ್ತಿರ ಹೋಗಿ ಕುತೂಹಲದಿಂದ ನೋಡುತ್ತಾ ನಿಂತ, ಜೊತೆಗೆ ಅದರ ಬಾಲವೂ ಅಲ್ಲಾಡುತ್ತಿತ್ತು ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮಧ್ಯೆ ಮತ್ತೊಂದು ಸುದ್ಧಿ ಬಂತು, ಅದ್ಯಾವುದೋ ಊರಿನಲ್ಲಿ ನಾಲ್ಕಾರು ಮಂಗಗಳು ಸೇರಿ ಒಂದು ನಾಯಿಯನ್ನು ಕೊಂದು ಹಾಕಿವೆ. ಈ ಸುದ್ದಿ ಸುಳ್ಳೋ-ನಿಜವೋ ಗೊತ್ತಿಲ್ಲ. ಆದರೂ ಒಂತರಾ ಆತಂಕ ಶುರುವಾಯಿತು. ಆಮೇಲೆ, ಕರಿಯ ಮಂಗಗಳ ಜೊತೆ ಸ್ನೇಹ ಮಾಡಿದ್ದೆ ಸರಿ ಎಂಬ ಕಳ್ಳ ಸಮಧಾನವೂ ಆಯಿತು. ಅದೊಂದು ದಿನ, ಮಧ್ಯಾಹ್ನ, ಮನೆಯಲ್ಲಿ ನಾನೊಬ್ಬನೇ ಇದ್ದೆ, ಮಂಗ ಬಂದು ಪಪ್ಪಾಯಿ ಗಿಡದ ಚಿಗುರೆಲೆಯನ್ನು ಮುರಿದು, ಹೊತ್ತುಕೊಂಡು ಹೋಯಿತು. ಅಂಗಳದಲ್ಲಿ ಕಸಿ ಕಟ್ಟಿದ, ಸೊಗಸಾದ ಎರಡು ಬದನೆ ಗಿಡಗಳಲ್ಲಿ ಹತ್ತಾರು ಕಾಯಿ ಕಚ್ಚಿದ್ದವು. ಮಟ-ಮಟ ಮಧ್ಯಾಹ್ನವಾದ್ದರಿಂದ ಮಂಗಗಳು ದಾಳಿ ಮಾಡುವುದು ನಿಶ್ಚಿತ. ಕರಿಯನಿಗೆ ಊಟ ಹಾಕಿ, ಮಂಗಗಳು ಬಂದರೆ, ಕೂಗು ಎಂದು ಹೇಳಿ, ಊಟಕ್ಕೆ ಹೋದರೆ, ಇದು ಊಟ ಮಾಡಿ ಅಷ್ಟುದ್ದಕ್ಕೆ ತನ್ನ ದೇಹವನ್ನು ಹರಡಿ ಕುಂಭಕರ್ಣನ ನಿದ್ದೆಗೆ ಜಾರಿತ್ತು. ಇಡೀ ಒಂದು ತಾಸು ಕಟ್ಟೆಯ ಮೇಲೆ ಕುಳಿತು ಮಂಗಗಳು ಬಾರದಿರುವ ಹಾಗೆ ಕಾಯುವುದು ನನ್ನ ಕೆಲಸವಾಯಿತು. ಕಾಲೇಜಿನಿಂದ ಬಂದ ಮೇಲೆ ವಿಷಯ ತಿಳಿದ ಮಗ ಹೇಳಿದ್ದು, ಎಲ್ಲರ ಮನೆಯಲ್ಲೂ ನಾಯಿ ಮನೆಯನ್ನು ಕಾಯುತ್ತದೆ, ಆದರೆ ನಮ್ಮಲ್ಲಿ ಉಲ್ಟಾ ನಾವೇ ನಾಯಿಯನ್ನು ಕಾಯಬೇಕು.
ನಾಯಿಯನ್ನು ಸಾಕುವುದು ಅಷ್ಟೇನು ಕಷ್ಟದ ಕೆಲಸವಲ್ಲ, ಹಾಗೆಯೇ ಸುಲಭವೂ ಅಲ್ಲ, ಕಾಲ-ಕಾಲಕ್ಕೆ ಮನೆಗೆ ಬಂದವರಿಂದ ಉಚಿತ ಸಲಹೆಗಳು ಕೇಳಿ ಬರುತ್ತವೆ. ಬರೀ ಅನ್ನ ಹಾಲು ಹಾಕಿ ಸಾಕಬೇಡ, ಸ್ವಲ್ಪ ಸಾಂಬಾರು ಹಾಕಿ, ತರಕಾರಿಗಳನ್ನು ಕೊಡಿ, ರಾಗಿ ಕೊಡಿ ಇತ್ಯಾದಿಗಳು. ಜೊತೆಗೆ ನಾಯಿಗಳಿಗೆ ಹಲ್ಲು ಕಾವು ಬರುತ್ತದೆ, ಅದಕ್ಕೆ ತಿನ್ನಲು ಎಲುಬು ಕೊಡಿ, ಜಿಂಕೆ ಕೋಡು ಕೊಡಿ, ಕಾಡುಕೋಣದ ಕೋಡು ಆದರೂ ಆದೀತು ಹೀಗೆ ಪಟ್ಟಿ ಮುಂದುವರೆಯುತ್ತದೆ. ಎಲ್ಲಾ ಸಲಹೆಗಳನ್ನು ಸಾಕಾರ ಮಾಡುವುದು ಸಾಧ್ಯವಿಲ್ಲ. ಕೆಲವೊಂದನ್ನಾದರೂ ಮಾಡಬಹುದು ಎಂದುಕೊಂಡು, ರಾಗಿ ಅಂಬಲಿ ಮಾಡಿ ಹಾಕಿದರೆ, ಮೂಸಿಯೂ ನೋಡಲಿಲ್ಲ. ಸಾಂಬಾರು ಕಲಸಿದ ಅನ್ನವನ್ನು ಪರಮಶತ್ರುವೆಂಬಂತೆ ನೋಡಿತು. ಅನ್ನ ತಿನ್ನದೆ ಗುರಾಯಿಸಿತು. ಅದರ ಗುರಾಯಿಸುವಿಕೆಯಲ್ಲಿ ಅತ್ಯಂತ ಗಂಭೀರವಾದ ಪ್ರಶ್ನೆಯಿದ್ದಂತೆ ತೋರಿತು. ಏನೇನೊ ಹಾಕಿ ನನ್ನ ಮೇಲೆ ಪ್ರಯೋಗ ಮಾಡ್ತೀರಾ ಎಂಬಂತೆ. ಮತ್ತೆ ಕಲಸಿದ ಅಷ್ಟೂ ಅನ್ನವನ್ನು ಕಾಗೆಗಳಿಗೆ ಹಾಕಿ, ಮತ್ತೆ ಯಥಾಪ್ರಕಾರ ಹಾಲು-ಅನ್ನಕ್ಕೆ ಬಂದು ನಿಂತಿದೆ. ಬೆಳಗ್ಗೆ ಮಾತ್ರ ತಿಂಡಿಪೋತ. ತಿಂಡಿಗಳೆಂದರೆ, ನಾವು ತಿನ್ನುವ ಎಲ್ಲಾ ತಿಂಡಿಗಳನ್ನು ತಿನ್ನದು. ಇಡ್ಲಿ, ದೋಸೆ, ರೊಟ್ಟಿ ಅಥವಾ ಚಪಾತಿ. ಬೆಳಗ್ಗೆ ೭.೩೦ಕ್ಕೆ ಸರಿಯಾಗಿ, ತಿಂಡಿ ರೆಡಿಯಾಗಿರಬೇಕು. ಕಾಲೇಜು ಹೋಗುವ ಮಗನಿಗೆ ೭.೪೫ಕ್ಕೆ ತಿಂಡಿ ಮಾಡಬೇಕು. ಈಗ ಟೈಮ್ ಟೇಬಲ್ ಬದಲಾಯಿಸಿ, ಕಾಲುಗಂಟೆ ಮುಂಚಿತವಾಗಿ ತಿಂಡಿ ರೆಡಿ ಮಾಡಬೇಕು. ಮನೆಗೆ ಬಂದು ಬಹಳ ದಿನ ಕರಿಯನ ಕೂಗು ಕೇಳಿರಲಿಲ್ಲ. ಕೂಗುವ ಅಗತ್ಯ ಅದಕ್ಕೆ ಬಂದಿರಲಿಲ್ಲವೇನೋ? ಅಥವಾ ನಮ್ಮ ನಾಯಿಗೆ ಕೂಗಲು ಬರುವುದೇ ಇಲ್ಲವೇನೊ ಎಂದು ತಿಳಿದಿದ್ದೆವು. ಅದೊಂದು ದಿನ, ಮನೆಯ ಪಕ್ಕದಿಂದ ಹತ್ತಾರು ನವಿಲುಗಳು ಪಟ-ಪಟ ರೆಕ್ಕೆ ಬಡಿಯುತ್ತಾ, ನೆಗೆದು ರಸ್ತೆಯ ಆ ಬದಿ ಹಾರಿದವು. ಹಿಂದೆಂದೂ ನವಿಲು ನೋಡಿರದ ಕರಿಯನಿಗೆ ಭಯವಾಗಿರಬೇಕು, ಕಾಗೆಗಿಂತ ದೊಡ್ಡದಾದ ಹಾರುವ ಇದು ಯಾವ ಪ್ರಾಣಿಯೆಂದು ಗೊತ್ತಾಗದೆ, ತನ್ನ ಜೀವನದ ಪ್ರಥಮ ಕೂಗಾದ ಪೆಕ್-ಪೆಕ್ ಎಂಬ ಕೂಗು ಹೊರಬಂದಿತು. ಕೂಗುವಾಗ ಬಾಲ ಹೊಟ್ಟೆಯ ಕೆಳಭಾಗದಲ್ಲಿತ್ತು. ಹಲ್ಲು ಕಾವಿಗೆ ಏನು ಮಾಡುವುದು ಎಂಬುದಕ್ಕೆ ಖುದ್ದು ಅವನೇ ಪರಿಹಾರ ಕಂಡುಕೊಂಡ, ಒಣಗಿದ ಒಂದು ನಂದಿ ಮರದ ತುಂಡು ಸಿಕ್ಕಿತು. ಅದನ್ನೇ ಕಡಿದು-ಕಡಿದು, ಗೇಣುದ್ದ ಚೂರುನ್ನು ಚೋಟುದ್ದ ಮಾಡಿಟ್ಟಿದ್ದಾನೆ. ಮಾತಿಗೆ ಬಂದಾಗ ಅದ್ಯಾರೋ ಒಬ್ಬರು ಹೇಳಿದ್ದರು ಬ್ರಹ್ಮಚಾರೀ ಶತ ಮರ್ಕಟ ಬ್ರಹ್ಮಚಾರಿ ಅಂದರೆ ಈಗಿನ ಕಾಲಮಾನಕ್ಕೆ ತಕ್ಕ ಹಾಗೆ ಟೀನೇಜ್ ಎಂದು ಅರ್ಥೈಸಿಕೊಳ್ಳೋಣ. ಈ ವಯಸ್ಸಿನ ಮಕ್ಕಳು ನೂರು ಮಂಗಗಳಿಗೆ ಸಮ ಎಂದು. ಈ ನಾಯಿಮರಿ ಮಾತ್ರ ಸಹಸ್ತ ಮರ್ಕಟಕ್ಕೆ ಸಮವೆಂಬಂತೆ ತುಂಟತನ ಮಾಡುತ್ತದೆ. ಇಡೀ ಅಂಗಳವನ್ನು ಗುಡಿಸಿ, ಚೊಕ್ಕಟ ಮಾಡಿಟ್ಟು, ಒಳಕ್ಕೆ ಹೋಗಿ ಹೊರಕ್ಕೆ ಬರುವಷ್ಟರಲ್ಲಿ, ತರಹೇವಾರಿ ಕಸಕಡ್ಡಿಗಳು ಅಂಗಳದ ತುಂಬಾ ಬಿದ್ದಿರುತ್ತವೆ. ಅದರಲ್ಲಿಯೇ ಗಟ್ಟಿಯಾದ ಒಂದು ಕಟ್ಟಿಗೆ ತುಂಡನ್ನು ಕಡಿಯುತ್ತಾ ವಾರೆಗಣ್ಣಿನಲ್ಲಿ ನಮ್ಮನ್ನು ನೋಡುತ್ತಿರುತ್ತದೆ.
ಚಿಕ್ಕವನಿದ್ದಾಗ ನನಗೂ ನಾಯಿ ಸಾಕಬೇಕು ಎಂಬ ಬಯಕೆಯಿತ್ತು. ಆದರೆ, ತಂದೆಯವರು ಬೇಡ ಎನ್ನುತ್ತಿದ್ದರು. ಮೂಲತ: ಅವರಿಗೂ ನಾಯಿಯೆಂದರೆ ಪ್ರೀತಿ ಇದೆ. ಆದರೆ, ನಾಯಿಯ ಆಯುಸ್ಸು ನಮಗಿಂತ ಬಹಳ ಕಡಿಮೆ. ಮನೆಯವರಂತೆ ಹೊಂದಿಕೊಳ್ಳುವ ನಾಯಿಗಳು ಸಾಮಾನ್ಯವಾಗಿ ೧೫ ವರ್ಷ ಬದುಕುತ್ತವೆ. ಸತ್ತ ಮೇಲೆ ವೃಥಾ ದು:ಖ ಅನುಭವಿಸಬೇಕಲ್ಲ ಅಂತ ತಂದೆಯವರು ನಾಯಿಯ ಸಹವಾಸ ಬೇಡ ಎಂದು ಹೇಳುತ್ತಿದ್ದರು. ನಾನು ಇದಕ್ಕೆ ಬೇರೆಯದೇ ಕತೆ ಕಟ್ಟಿದ್ದೆ, ಸ್ವಲ್ಪ ತಮಾಷೆಯಾಗಿ ಕಾಣಬಹುದು. ತಂದೆಯವರು ನನಗೆ ಹೇಳಿದ ಹಾಗೆ, ನೀನು ಇದೀಯಲ್ಲ ಸಾಕು ಮತ್ತೇಕೆ ಇನ್ನೊಂದು ನಾಯಿ!! ಎರೆಡೆರೆಡು ನಾಯಿ ಸಾಕುವುದಕ್ಕೆ ನನ್ನಿಂದಾಗದು. ಈ ಕಾರಣದಿಂದ ನಾಯಿ ಸಾಕಲು ಆಗಲಿಲ್ಲ ಎಂದು ಸ್ನೇಹಿತರಲ್ಲಿ ಹೇಳಿಕೊಂಡು ನಗೆಯಾಡಿದ್ದುಂಟು. ಬೆಳಗ್ಗೆ ತಿಂಡಿಯಾದ ನಂತರ ಕೈಯಲ್ಲೊಂದು ಚಿಕ್ಕ ಕತ್ತಿ ಹಿಡಿದು ನನ್ನ ಹೆಂಡತಿ ತೋಟಕ್ಕೆ ಹೋಗುತ್ತಾಳೆ, ಈಗ ಕರಿಯನ ತಗಾದೆ ಶುರು, ಕಟ್ಟಿ ಹಾಕಿದರೆ, ವಿಚಿತ್ರವಾಗಿ ಕೂಗುತ್ತಾನೆ. ಚಿಕ್ಕ-ಮಕ್ಕಳು ಹಠ ಮಾಡಿದಂತೆ, ನೋಡಿದವರಿಗೆ ಇವರೇನೋ ಕರಿಯನಿಗೆ ಬಾರಿ ಅನ್ಯಾಯ ಮಾಡುತ್ತಿದ್ದಾರೆ ಎನಿಸಬೇಕು ಹಾಗೆ. ಕರಿಯನನ್ನು ತೋಟಕ್ಕೆ ಕರೆದುಕೊಂಡು ಹೋಗದಿದ್ದರೆ ಆ ದಿನ ಸೂರ್ಯ ಮುಳುಗುವುದಿಲ್ಲ. ತೋಟಕ್ಕೆ ಹೋಗಿ, ಹಾರಿ-ಕುಣಿದು-ಕುಪ್ಪಳಿಸಿ, ಪಕ್ಕದ ತೋಟಗಳಿಗೆ ಹೋಗಿ ಸರ್ವೆ ಮಾಡಿ, ಒಂದರ್ಧ ಗಂಟೆ ಕಳೆಯುತ್ತಾನೆ. ಮನೆಗೆ ಬಂದು ಒಂದು ಲೋಟ ನೀರು ಕುಡಿದು ಮಲಗಿದರೆ, ಮಧ್ಯಾಹ್ನ ೨ ಗಂಟೆಯವರೆಗೆ ನಿದ್ದೆ. ಕರಿಯನ ಒಡಹುಟ್ಟಿದವರೆಲ್ಲಾ ತೀರಿಕೊಂಡರಂತೆ, ನನಗೆ ಕರಿಯನನ್ನು ಕೊಟ್ಟು ಉಪಕರಿಸಿದ, ನನ್ನ ಜೊತೆ ಕೆಲಸ ಮಾಡುವ ಮೇರಿಗೆ ಇದನ್ನು ಹೇಳುವಾಗ ಕಣ್ಣಂಚಿನಲ್ಲಿ ನೀರು.
*****
ಪ್ರಿಯ ಅಖಿಲೇಶ್, ತೆಳುವಾದ ಹಾಸ್ಯ ಭರಿತ ನಿಮ್ಮ ಕರಿಯನ ಕಥೆ ತುಂಬಾ ಇಷ್ಟವಾಯ್ತು!