ಈ ವರ್ಷ ಕಾಡುಮಾವಿನಮರಗಳ ತುಂಬ ಜೋತಾಡುವ ಗೊಂಚಲು ಗೊಂಚಲು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮನೆಯಂಗಳದಲ್ಲಿ ನಿಂತು ಸುತ್ತ ತಿರುಗಿದಾಗ ಆಕಾಶ ಮುಟ್ಟುವ ಹಾಗೆ ಬೆಳೆದ ಕಾಡುಮಾವಿನ ಮರದ ತುಂಬ ಗಾಳಿಗೆ ತೊನೆಯುವ ಅರೆಹಣ್ಣು, ಕಾಯಿಗಳು . ಬಲವಾಗಿ ಬೀಸುವ ಗಾಳಿ ಉದುರಿಸುವ ಹಣ್ಣು ಹೆಕ್ಕಲು ಮಕ್ಕಳ ಸ್ಪರ್ಧೆ.ಈ ದುರ್ಮುಖ ಸಂವತ್ಸರವನ್ನೇ ಅಪರಾಧಿ ಮಾಡಬೇಕೋ ಅಲ್ಲ ವರುಷ ವರುಷಕ್ಕೂ ಬರಡಾಗುವ ಪ್ರಕೃತಿಗೆ ವಿಷಾದಿಸಬೇಕೋ ಅರಿಯದು. ಹೇಳಿ ಕೇಳಿ ನಮ್ಮದು ಅರಬ್ಬಿ ಸಮುದ್ರದ ಪಕ್ಕದ ಊರು. ಕೇರ ನಾಡಿನ ತುಂಬ ತೆಂಗಿನ ಮರಗಳ ಸಾಲು ಸಾಲು ಇರುವ ಹಾಗೇ ಕಾಡುಮಾವಿನ ಮರಗಳೂ ಇದ್ದವು. ಈಗೆಲ್ಲ ಮರಗಳು ಮರದ ಮಿಲ್ಲಿನ ಪಾಲಾಗಿ ಸಂಖ್ಯೆ ತಗ್ಗುತ್ತಿದೆ. ನಷ್ಟವಾಗುವುದು ನಮಗೆ. ಬೇಸಿಗೆ ಆರಂಭಕ್ಕೆ ಮುನ್ನ ಗಾಳಿ ಜೋರಾಗಿ ಬೀಸಿದಾಗ ಉದುರಿ ಬೀಳುವ ಕಾಡುಮಾವು ಹಣ್ಣುಗಳ ಸವಿ ತಿಂದೇ ಅರಿಯಬೇಕು. ಹುಳಿ, ಸಿಹಿ ಬೆರೆತ ಸುವಾಸನೆಯ ಹಣ್ಣು,. ಯಾವ ಮೂಲೆಯಲ್ಲಿದ್ದರೂ ಅದರ ಪರಿಮಳ ನಾನಿಲ್ಲಿದ್ದೇನೆ ಅಂತ ಬಿಟ್ಟುಕೊಡುತ್ತದೆ.
ಅದನ್ನು ಬೆಳಗಾಗುವುದಕ್ಕೆ ಮೊದಲೇ ಹೆಕ್ಕಿ ತಂದು ಹಸಿ, ಬಿಸಿ ಗೊಜ್ಜು ಮಾಡಿ ಬಿಸಿ ಬಿಸಿ ಕುಸುಬಲಕ್ಕಿ ಗಂಜಿಯ ಜೊತೆಗೆ ಉಂಡರೆ ಆ ರುಚಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಪದ ನೆನಪಾಗಬೇಕು. ಮುಷ್ಟಿಯಲ್ಲಿ ಹಿಡಿಯುವ ಪುಟ್ಟ ಗೊರಟು ಹೀರಿದಷ್ಟೂ ರುಚಿ. ಬೇಸಿಗೆಯ ಬಿರುಬಿಸಿಲಿಗೆ ಊಟ, ತಿಂಡಿ ಬಾಯಿಗೆ ರುಚಿಸುವುದಿಲ್ಲ. ದಾಹ, ದಾಹ, ದಾಹ ಅಷ್ಟೆ. ಅದಕ್ಕಾಗಿ ನಮ್ಮ ಕಡೆ ಮಾರ್ಚ್ ಆರಂಭದಿಂದಲೇ ಗಂಜಿಯೂಟವನ್ನು ಬೆಳಗ್ಗಿನ ಬ್ರೇಕ್ ಫಾಸ್ಟ್ ಆಗಿ ಮನೆ ಮನೆಗಳಲ್ಲಿ ಬದಲಾಯಿಸುತ್ತಾರೆ. ಮನೆ ಮನೆಗಳ ತಾಯಂದಿರಿಗೆ ಕೆಲಸ ಕಮ್ಮಿ.
ದೊಡ್ಡ ಪಾತ್ರೆಯಲ್ಲಿ ನೀರಿಟ್ಟು ಅದಕ್ಕೆ ಕುಸುಬಲಕ್ಕಿ ತೊಳೆದು ಹಾಕಿಮುಚ್ಚಿದರೆ ಹದವಾದ ಉರಿಯಲ್ಲಿ ಬೇಯುತ್ತದೆ. ನೋಡುವುದೇ ಬೇಡ, ಬೆಂದಾಗ ಸುವಾಸನೆ ಮನೆಯಿಡೀ ಹರಡುವ ಕಾರಣ ಬ್ರೇಕ್ ಫಾಸ್ಟ್ ಗೆ ಕರೆಯದೆ ಬರುತ್ತಾರೆ ಮನೆಮಂದಿ. ನಸು ಕಂದು ಬಣ್ಣದ ಉದ್ದನೆಯ ಅಕ್ಕಿ ಅದರ ನಾಲ್ಕು ಪಟ್ಟು ಹಿಗ್ಗಿ ಮೆದುವಾಗಿ ಬೆಂದು ಅದು ಬೆಂದ ನೀರಿನೊಂದಿಗೆ(ಗಂಜಿಯ ತೆಳಿ ಅಂತ ಅಚ್ಚ ಊರಿನ ಭಾಷೆಯಲ್ಲಿ ಕರೀತಾರೆ.) ಸಕಲ ಸತ್ವವನ್ನು ಹಂಚಿಕೊಳ್ಳುತ್ತದೆ. ಅದನ್ನು ಹಾಗೇ ಸೌಟಿನಲ್ಲಿ ತುಂಬಿ ಬಡಿಸುತ್ತಾರೆ. ನಂಚಿಕೊಳ್ಳಲು ಮಿಡಿ ಉಪ್ಪಿನಕಾಯಿ ಸಿದ್ಧವಾಗಿರುತ್ತದೆ. ಹಸುವಿನ ತುಪ್ಪದ ಜೊತೆಗೆ ಉಪ್ಪಿನಕಾಯಿಗೆ ರುಚಿ ಜಾಸ್ತಿ.ವರ್ಷದ ಮಗುವಿನಿಂದ ಹಿಡಿದು ಎಂಭತ್ತರ ವೃದ್ಧರ ತನಕ ಹೊಟ್ಟೆಯ ಆರೋಗ್ಯಕ್ಕೆ ಪೂರಕ.
ಕಾಡುಮಾವಿನ ಹಣ್ಣುಗಳಿದ್ದಾಗ ಅದನ್ನು ಹಾಗೆ ಸಿಪ್ಪೆ ಬಿಡಿಸಿ ಉಪ್ಪು, ಹಸಿಮೆಣಸು ನುರಿದು ಎಲೆಯಲ್ಲೇ ದಿಢೀರ್ ಗೊಜ್ಜು ಮಾಡಿಕೊಳ್ಳುವ ನಳಮಹಾರಾಜರಿದ್ದಾರೆ. ಬೇಯಿಸಿ ಮಾಡಿದ್ದಕ್ಕಿಂತ ಹೆಚ್ಚು ಸೊಗಯಿಸುತ್ತದೆ ಹಸಿ ಗೊಜ್ಜು. ಗಂಜಿಯ ಜೊತೆಗೆ ಮಾವಿನಕಾಯಿ ಚಟ್ನಿಯೋ, ಬದನೆ ಬೋಳು ಕೊದ್ದೆಲ್, ಇದ್ದರೆ ಎಷ್ಟಕ್ಕೂ ಸಾಕು. ಊರಿನ ಗದ್ದೆಗಳಲ್ಲಿ ಭತ್ತದ ಬೆಳೆ ಕೊಯಿದ ಮೇಲೆ ಸೌತೆ, ಬದನೆ, ಮೆಣಸು ಬೆಳೆಸುವ ಕಾರಣ ಕೈ ನೀಡಿದಾಗ ತರಕಾರಿ ಸಿಗುತ್ತದೆ. ಬೋಳು ಕೊದ್ದೆಲ್ ಅಂದರೆ ಅದು ಗಂಜಿಯ ಜೊತೆಗೆ ಉತ್ತಮ ಕಾಂಬಿನೇಶನ್. ಬದನೆ ಕಾಯಿ ಹೆಚ್ಚಿ ಬೇಯಲಿಡುವಾಗ ಕಾಡುಮಾವಿನ ಹಣ್ಣು ಹಾಕಿದರೆ ಸಮೀಪದ ಮನೆಗೂ ಇಂಥದ್ದೇ ಗೊಜ್ಜು ಅಂತ ಮೂಗು ಹೇಳುತ್ತದೆ. ಅಲ್ಲಿಯೂ ಅದರದೇ ಮತ್ತೊಂದು ರೂಪ ಎಲೆಗೆ ಬಡಿಸಲು ಸಿದ್ಧವಾಗಿರುವ ಕಾರಣ ಆಸೆ ಇಲ್ಲವೇಇಲ್ಲ.ಕುಸುಬಲಕ್ಕಿಯ ಗಂಜಿ ಅನೇಕ ರೋಗಗಳಿಗೆ ರಾಮಬಾಣ ಅನ್ನುವುದು ನಿಜ.
ಕರಾವಳಿಯಿಂದ ನಾನಾ ನಗರಗಳಿಗೆ ಉದ್ಯೋಗ ನಿಮಿತ್ತ ಹಂಚಿಹೋದ ಮಂದಿ ಊರಿಂದ ಹಿಂದಿರುಗುವಾಗ ಉತ್ತಮ ಜಾತಿಯ ಕುಸುಬಲಕ್ಕಿ ಒಯ್ಯಲು ಮರೆಯುವುದೇ ಇಲ್ಲ. ನಿತ್ಯ ನಿತ್ಯ ಬೆಳ್ತಿಗೆ ಅನ್ನ ಉಂಡರೆ ಉಂಡ ಹಾಗೇ ಆಗುವುದಿಲ್ಲ; ನಮ್ಮ ಕುಚ್ಚಲಿಗೆ ಸಮಾನ ಇಲ್ಲ ಅನ್ನುವ ಸಂತೃಪ್ತಿ. ಬೆಳೆಯುವ ಭತ್ತ ಒಂದೇ. ಬೆಳೆಸುವ ಕ್ರಮವೂ ಭಿನ್ನವಲ್ಲ. ಕೊಯ್ಲು ಒಂದೇ ರೀತಿಯದು. ನಂತರವೇ ಅದರ ಪ್ರತ್ಯೇಕತೆ ಇರುವುದು. ಒಣಗಿಸಿದ ಭತ್ತವನ್ನು ಹಾಗೇ ಅಕ್ಕಿ ಮಾಡಿದಾಗ ಅದು ಬೆಳ್ತಿಗೆ ಅಕ್ಕಿ. ಬಹುತೇಕ ಕಡೆ ಅದೇ ರೂಢಿ. ಬೆಳ್ತಿಗೆ ಹಳತಾದಷ್ಟೂ ಗುಣಮಟ್ಟ ಶ್ರೇಷ್ಟ. ಭತ್ತವನ್ನು ಕೊಯಿಲು ಮಾಡಿದ ಮೇಲೆ ಒಣಗಿಸಿದ ನಂತರ ಅದಕ್ಕಾಗೇ ಇರುವ ದೊಡ್ಡ ಗಾತ್ರದ ಒಲೆಯಲ್ಲಿರಿಸಿದ ತಾಮ್ರದ ಹಂಡೆಯಲ್ಲಿ ತುಂಬಿಸಿ ಅದು ಮುಳುಗುವಷ್ಟು ನೀರು ತುಂಬಿಸಿ ಇಡುತ್ತಾರೆ ರಾತ್ರೆ. ಬೆಳಗ್ಗೆದ್ದು ದೊಡ್ಡ ಸೌದೆಯ ಕುಂಟೆಯನ್ನು ಹಾಕಿ ಬೆಂಕಿ ಮಾಡಿ ಭತ್ತವನ್ನು ಬೇಯಿಸುತ್ತಾರೆ.
ಹೀಗೆ ಭತ್ತವನ್ನು ಬೇಯಿಸುವುದು ನಾಜೂಕಿನ ಕೆಲಸ. ಹದವಾಗಿ ಬೆಂದು ನೆನೆದ ಭತ್ತ ಸ್ವಲ್ಪೇ ಸ್ವಲ್ಪ ಒಡೆದು ( ಬಿರುಕು ಬಿಟ್ಟು) ಆದಾಗ ಬೆಂಕಿ ನಿಲ್ಲಿಸಿ ಬಿಡತಕ್ಕದ್ದು. ಬುಡಕಟ್ಟು ಜನಾಂಗದವರು ಹೆಣೆದು ಮಾರುವ ಬೆತ್ತದ ಬುಟ್ಟಿಗೆ ಅದನ್ನು ತೋಡಿ ಹಾಕಬೇಕು. ನೀರೆಲ್ಲ ಕೆಳಗೆ ಬಸಿದು ಭತ್ತ ಮಾತ್ರ ಉಳಿಯುತ್ತದೆ. ಆಗ ನೆರಳಿನಲ್ಲಿ( ಸಾಮಾನ್ಯವಾಗಿ ಭತ್ತದ ಬೆಳೆಗಾರರಲ್ಲಿ ವಿಶಾಲವಾದ ಅಂಗಳವಿರುತ್ತದೆ. ನೆಲ ಸಮತಟ್ಟಾಗಿರುವುದನ್ನು ಸೆಗಣಿ ಹಾಕಿ ಚೊಕ್ಕವಾಗಿ ಸಾರಿಸಿ ಇಟ್ಟುಕೊಳ್ಳುತ್ತಾರೆ. ಅದರ ಮೇಲೆ ಬೆಂದು ನೀರು ಬಸಿದ ಭತ್ತವನ್ನು ನೆರಳಿಗೆ ಹರವಿದಾಗ ಗಾಳಿಗೆ ಆರುತ್ತದೆ. ನಾಲ್ಕಾರು ಬಾರಿ ಕೈಹಾಕಿ ಅಡಿಮೇಲೆ ಹರವಿದರೆ ಮುಗಿಯಿತು. ಸಂಜೆ ಬಾಚಿ ಬಿಡಬೇಕು. ಹೀಗೆ ಒಣಗಿಸಿದ ಭತ್ತವನ್ನು ಮಿಲ್ಲಿಗೆ ಕೊಟ್ಟು ಅಕ್ಕಿ ಮಾಡಿದಾಗ ಸಿಗುವುದು ನಸು ಕಂದು ಬಣ್ಣದ ನೀಳವಾದ ಕುಸುಬಲಕ್ಕಿ ಅಥವಾ ಕುಚ್ಚಲಕ್ಕಿ. ಮೊದಲಿಗೆ ಮನೆಗಳಲ್ಲಿ ಅಕ್ಕಿಯನ್ನು ಮುಡಿ ಕಟ್ಟುವ ಪದ್ಧತಿಯಿತ್ತು. ಹುಲ್ಲಿನ ಹಗ್ಗ ಬಳಸಿ ಅದನ್ನು ಹರಡಿ ಉರುಟಾಗಿಸಿ ಅದರ ಮೇಲೆ ಅಕ್ಕಿ ಹರಡಿ ಹೊರಗಿನಿಂದ ನೇಯ್ದುಕೊಂಡು ಬಿಗಿಯಾಗಿ ಕಟ್ಟಿಬಿಡುತ್ತಾರೆ. ಸಪೂರವಾದ ಸೂಜಿಯ ಹಾಗಿರುವ ಉದ್ದನೆಯ ಕಡ್ಡಿ ಹಾಕಿ ಒಂದೆರಡು ಅಕ್ಕಿಯ ಕಾಳು ಹೊರತೆಗೆದು ಖರೀದಿಸುವವರು ಪರಿಶೀಲಿಸುತ್ತಾರೆ. ಈಗ ಮುಡಿ ಕಟ್ಟುವ ನೈಪುಣ್ಯತೆ ಇರುವ ಬೇಸಾಯಗಾರರು ಕಮ್ಮಿ. ಗೋಣಿಗಳಲ್ಲಿ ತುಂಬಿ ಕಟ್ಟಿ ದಾಸ್ತಾನು ಮಾಡುವುದು ಉತ್ತಮ. ಹೆಚ್ಚಾಗಿದ್ದರೆ ಮಾರಾಟ ಮಾಡಿಬಿಡುತ್ತಾರೆ. ಈಗೀಗ ಈ ಎಲ್ಲ ಶ್ರಮ, ಕಷ್ಟ ಅಕ್ಕಿ ಮಿಲ್ಲುಗಳಿಗೆ ಭತ್ತವನ್ನು ಮಾರಿಬಿಡುತ್ತಾರೆ. ಹೀಗೆ ಬೇಯಿಸಿದ ಭತ್ತದಿಂದ ಮಾಡುವ ಅಕ್ಕಿಯೇ ಕುಸುಬಲಕ್ಕಿ. ಹಾಗೆಂದು ಇದನ್ನು ದೇವತಾಕಾರ್ಯಗಳಲ್ಲಿ ಬಳಸುವುದಿಲ್ಲ; ಕಾರಣ ಒಂದುಬಾರಿ ಬೇಯಿಸಿದ್ದು ದೇವತಾಕಾರ್ಯಕ್ಕೆ ನಿಷಿದ್ಧ. ಅದಕ್ಕೆ ಬೆಳ್ತಿಗೆಯೇ ಬೇಕು.
ಕರಾವಳಿಯ ಹವೆಗೆ ಕುಸುಬಲಕ್ಕಿ ಅತ್ತ್ಯುತ್ತಮವಾದ ಆಹಾರ. ಕೇರಳಿಗರಿಗೆ ವೈಟ್ ರೈಸೆಂದು ಕರೆಯುವ ಬೆಳ್ತಿಗೆ ಹಿಡಿಸುವುದಿಲ್ಲ. ಅಲ್ಲಿ ಹೋಟೆಲುಗಳಲ್ಲಿ ಕುಸುಬಲು ಅನ್ನ. ತುಳುವರಲ್ಲಿ, ಮಲಯಾಳಿಗರಲ್ಲಿ ಮದುವೆಗೂ ಕುಸುಬಲು ಅನ್ನದ ಬಳಕೆಯಾಗುತ್ತದೆ. ಇಲ್ಲಿ ಅನ್ನವೆಂದರೆ ಅದರ ಗಂಜಿ ಅಥವಾ ನೀರು ಬಸಿದು ಮಾಡುವ ಕ್ರಮದ ಅನ್ನ. ಗಂಜಿ ಎಂದರೆ ಬೆಂದ ನೀರು ಸಮೇತ ಉಣ್ಣುವ ಆಹಾರ ಗಂಜಿ. ಬೆಳಗ್ಗೆ ಉಂಡ ಗಂಜಿಯ ಸವಿ ಮಧ್ಯಾಹ್ನದ ಅನ್ನಕ್ಕೆ ಬಾರದು. ಕೇವಲ ಉಪ್ಪಿನಕಾಯಿಯೋ, ಮಾಂಸಾಹಾರಿಗಳಾದರೆ ಸುಟ್ಟ ಮೀನೋ, ತತ್ತಿಯೋ, ಮಣ್ನಿನ ಮಡಕೆಯಲ್ಲಿ ಬೇಯಿಸಿ ಮಾಡಿದ ಮುನ್ನಾ ರಾತ್ರೆಗಾಗಿ ಉಳಿದ ಗಸಿಯೋ ನಂಚಿಕೊಳ್ಳುತ್ತಾರೆ. ಮಜ್ಜಿಗೆ, ಮೊಸರು ಇದ್ದೇಇರುತ್ತದೆ. ನಿಜ ಹೇಳಬೇಕಾದರೆ ಕೇವಲ ತರಕಾರಿಯ ಹೋಳು ಹಾಕಿ, ಬೇಯುವಾಗ ಉಪ್ಪು, ಖಾರ ಹಾಕಿ ಒಗ್ಗರಣೆ ಹಾಕುವ ಬೋಳುಕೊದ್ದೆಲ್ ಅದ್ಭುತ ರುಚಿ ಕೊಡುತ್ತದೆ.
ಸುಡು ಬಿಸಿಲಿನ ಧಗೆಗೆ ಕುಸುಬಲನ್ನ ತಂಪು. ಒಡಲಿಗೆ ಸೇರಿದಾಗ ಅದು ದಾಹ ನಿವಾರಕ. ಗಂಟಲು ಒಣಗಿ ಬಾರದು. ತಿಂಡಿ ಸೇವಿಸಿ ಹೊರಟರೆ ನೀರು ಕುಡಿದಷ್ಟೂ ದಾಹ ಅಡಗದು. ಗಂಜಿ ಬೇಯಿಸಿ ಇಟ್ಟರೆ ಸೌತೆಯೋ, ಬದನೆಯೋ ಬೋಳು ಕೊದ್ದೆಲ್( ತೆಂಗಿನ ತುರಿ ಹಾಕದೆ ಬರಿದೇ ತರಕಾರಿ ಬೇಯಿಸಿ ಉಪ್ಪು ಖಾರ ಹಾಕಿ ಒಗ್ಗರಣೆ ಹಾಕಿದರಾಯಿತು), ಕಾಡು ಮಾವಿನ ಹಣ್ಣೋ ನೆಂಚಿಕೆಗೆ ಸಿಗುತ್ತದೆ.ಅದಲ್ಲವಾದರೆ ಗಿಡದ ಮಾವಿನಕಾಯಿ ಕಿತ್ತು ಹಸಿಮೆಣಸು ಹಾಕಿದ ಚಟ್ನಿ ಬಲು ಸವಿಯಾಗಿರುತ್ತದೆ. ಹದವಾದ ಬಿಸಿಯ ಗಂಜಿ ಮನೆಯೊಡತಿ ಬಡಿಸಿಕೊಟ್ಟರೆ ಅದರ ರುಚಿಯ ಮುಂದೆ ಪಂಚಭಕ್ಷ್ಯ ಪರಮಾನ್ನವೂ ಸರಿಸಾಟಿಯಾಗದು. ವಿಶೇಷವೆಂದರೆ ಬೆಳಗಿನ ಗಂಜಿಯ ಮತ್ತೊಂದು ಅವತಾರವಾಗಿ ಮಧ್ಯಾಹ್ನದ ಅನ್ನ, ರಾತ್ರೆಯ ಅನ್ನಕ್ಕೆ ಇರುವ ರುಚಿಯೇ ಬೇರೆ.ರಣಬಿಸಿಲಿನ ಕಾವಿಗೆ ಶರೀರದಲ್ಲಿ ನೀರಿನ ಅಂಶ ಸಾಕಷ್ಟು ಇರಬೇಕು. ಅದಕ್ಕೆ ಪೂರಕ ನಮ್ಮ ಕರಾವಳಿಯ ಕುಚ್ಚಲು ಗಂಜಿಯೂಟ. ಮನೆಮನೆಗಳ ಬೆಳಗಿನ ತಿಂಡಿ ಅದು.
–ಕೃಷ್ಣವೇಣಿ ಕಿದೂರ್.