ಕಾವ್ಯಧಾರೆ

ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.

( ಕಮಲಾದಾಸ್ ರ ‘My Grandmother’s House’ ಕವನದ ಕನ್ನಡರೂಪ )

ನನ್ನ ಪ್ರೀತಿಯ ಮನೆ
ದೂರದಲ್ಲಿದೆ.
ಆ ಮುದುಕಿ ಸತ್ತಮೇಲೆ
ಅವಳ ಬಿಳಿ ಸೀರೆಯಂತೆ
ಮೌನವನ್ನುಟ್ಟ ಮನೆಯ
ಪುಟಗಳ ನಡುವೆ,
ಗೋಡೆಯ ಬಿರುಕುಗಳಲ್ಲಿ
ಹಾವುಗಳು ಹರಿದಾಡಿದವು.
ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು.

ಅದೆಷ್ಟು ಬಾರಿ ಅಲ್ಲಿಗೆ ಹೋಗುವ
ಯೋಚನೆ  ಮಾಡಿಲ್ಲ ನಾನು?
ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ
ಹೆಂಚಿನ ಕಾವಿಗೆ ಮೈಯ್ಯೊಡ್ಡಿ
ನೀರವದ ಸದ್ದಿಗೆ ಕಿವಿಗೊಟ್ಟು
ಅಥವಾ ಕಡೇ ಪಕ್ಷ
ಹುಚ್ಚು ನಿರಾಸೆಯಿಂದ
ಬೊಗಸೆ ತುಂಬಾ ಕತ್ತಲು ತಂದು
ಕೊನೆ ಬಾಗಿಲಲ್ಲಿ ಬಿದ್ದುಕೊಂಡಿರಲು
ನಾಯಿಯಂತೆ ನೇಮಿಸುವುದಕ್ಕಾಗಿ…

ಇಲ್ಲ,
ಆ ಮನೆಯ ಅಂಗಳದಲ್ಲಿ
ಜಿಟಿ ಮಳೆಯ ತಂಪಲ್ಲಿ
ಗುಲಾಬಿ,ಜಾಜಿ,ಮಲ್ಲಿಗೆಗಳೆದುರು
ನಾ ಹೊಸ ಗೆಜ್ಜೆ ಕಟ್ಟಿ ಕುಣಿದಿದ್ದನ್ನ
ನಿನ್ನಿಂದ ಊಹಿಸಲೂ ಆಗುವುದಿಲ್ಲ ಬಿಡು.
ಈ ಹೊತ್ತಿ ಗೆ ಉಳಿದಿರುವುದು
ದಾರಿಯೊಡನೆ ಹೆಜ್ಜೆಗಳನ್ನೂ ಕಳೆದುಕೊಂಡು
ನೀರಸದಲ್ಲಿ ಮುಳುಗಿ
ಒಂದು ಚಿಕ್ಕ ಬದಲಾವಣೆಗಾಗಿ
ಯಾರ್ಯಾರದೋ ಮನೆ ಬಾಗಿಲು ತಟ್ಟಿ
ಬೇಡುತ್ತಿರುವ ನಾನು ಮಾತ್ರ.

******

(ಕಮಲಾದಾಸ್ ರ ‘An Introduction’ ಕವನದ ಕೊನೆಯ ಕೆಲವು ಸಾಲುಗಳ ಕನ್ನಡರೂಪ)

ನಾನು ಒಬ್ಬನನ್ನ ಭೇಟಿಯಾದೆ,ಅವನನ್ನೇ ಪ್ರೀತಿಸಿದೆ.

ಅವನಿಗೂ ಒಂದು ಹೆಸರಿಟ್ಟು

ಜಾತಿ ಕುಲ ಗೋತ್ರಕ್ಕಾಗಿ ಹುಡುಕಬೇಡಿ.

ಹೇಗೆ ಪ್ರೀತಿಗಾಗಿ ಹುಡುಕಾಡುವ

ಪ್ರತೀ ಹೆಣ್ಣಿನಂತೆ ನಾನೋ

ಹಾಗೆಯೇ ಹೆಣ್ಣಿಗಾಗಿ ಹುಡುಕಾಡುವ

ಪ್ರತೀ ಗಂಡು ಆತ.

ಅವನಲ್ಲಿ…ತುರ್ತಿನಲ್ಲಿ ಓದುವ ಹಸಿದ ನದಿಗಳು.

ಮತ್ತೆ ನನ್ನಲ್ಲಿ…ಶಾಂತವಾಗಿ ಕಾಯುವ ಆಳವಾದ ಸಾಗರಗಳು.

ನೀನ್ಯಾರೆಂದು ಕಂಡ ಕಂಡವರನ್ನೆಲ್ಲ ಕೇಳಿದ್ದೇನೆ.

ನಾಲ್ಕು ಗೋಡೆಗಳ ಮಧ್ಯೆ

ಬಂಧಿಯಾದ ಪ್ರತಿಯೊಬ್ಬನ

ಉತ್ತರವೂ ಒಂದೇ

‘ನಾನು’.

 

ಅಪರಿಚಿನ ಊರಿನ ಬಾರುಗಳಲ್ಲಿ

ಮಧ್ಯರಾತ್ರಿಯವರೆಗೆ ಕುಡಿಯುತ್ತ ಕೂರುವ

ನಗುವ,ಪ್ರೀತಿಸುವ

ಮತ್ತು ಮರುಕ್ಷಣವೇ ಮಾಡಬಾರದ್ದು ಮಾಡಿದವಳಂತೆ

ಹೇಸುತ್ತ ಮರುಗುವ ನಾನೇ

ಬಡಬಡಿಸುತ್ತ ಸಾಯಲು ಬೀಳುವುದು.

ನಿಮಗದರ ಚಿಂತೆ ಬೇಡ.

ನಾನು ಪಾಪಿ,ಸಂತಳೂ ಕೂಡ

ಪ್ರೀತಿಸಿ ಹಿಗ್ಗಿದವಳು,

ಕುಗ್ಗಿದವಳು ಕೂಡ.

ನಿಮ್ಮದಲ್ಲದ ಯಾವ ಸುಖವೂ ನನ್ನದಲ್ಲ,

ನೋವೂ ಕೂಡ.

ನಿಮ್ಮಂತೆ ನಾನು ಕೂಡ ನನ್ನ ಕರೆದುಕೊಳ್ಳುತ್ತೇನೆ

‘ನಾನು’.

 

– ಚಿನ್ಮಯ್ ಎಂ.

ಖೈರೆ,ಮಿರ್ಜಾನ್ ಪೋಸ್ಟ್

ಕುಮಟಾ ತಾಲ್ಲೂಕು

ಉತ್ತರಕನ್ನಡ – ೫೮೧೪೪೦

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.

  1. ಕನ್ನಡರೂಪದ ಕವನಗಳು ಚೆನ್ನಾಗಿ ಮೂಡಿಬಂದಿವೆ….ಶುಭಾಶಯಗಳು !

  2. chinmay  avare  ' my grandmother's house  poem  nalli kamala balyadalli padeda preeti , eegilla emba vishaada dinda   'i  who have lost

                                     My way and beg now at stranger's doors to

                                      Receive love, at least in small change.    emba saalugalannu neevu tappagi grahisiddeeri.   small change  andare chillare kaasu[ chillare hana]  emba arthadalli balasiddare.  idee padya preetiya hudukaata, hambal. nimma anuvaadadalli adu illa

  3. small change  andare  illi chillare kaasu, emdau artha.  sanna badalaavane alla. ondu chooru preetigaagi nadesuva hudukaata.  haavu pustakada naduve haridaaduttade.mattomme kavite odhi.

Leave a Reply

Your email address will not be published. Required fields are marked *