ಕಬಡೀ… ಕಬಡೀ… whatever!: ಗುರುಪ್ರಸಾದ ಕುರ್ತಕೋಟಿ

ಮಕ್ಕಳು ಎಲ್ಲಿದ್ದರೂ ಮಕ್ಕಳೇ. ಅದರೂ NRI ಮಕ್ಕಳು ವಿಭಿನ್ನ ಅಂತ ನನಗೆ ಅನಿಸುತ್ತಿದ್ದುದು ಅವರ ಮಾತಾಡುವ ಶೈಲಿಯಲ್ಲಿ. ಅದೊಂಥರ ಅರಗಿಸಿಕೊಳ್ಳಲಾಗದ ವಿಷಯ ನನಗೆ. ವಿಶೇಷವಾಗಿ ಅವರು ಮಾತಾಡುವ american accent ನನ್ನಲ್ಲಿ ಆ ಭಾವನೆ ಹುಟ್ಟಿಸುತ್ತಿತ್ತು. ಮಕ್ಕಳು ಎಲ್ಲಿ ಬೆಳೆಯುತ್ತಾರೋ ಅಲ್ಲಿನ ಭಾಷೆ ಸಂಸ್ಕೃತಿಗಳಿಗೆ ಒಗ್ಗಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ. ಹೊಸದಾಗಿ ಅಮೆರಿಕೆಯಲ್ಲಿ ಹೋಗಿ ಅಲ್ಲಿದ್ದ ಮಕ್ಕಳ ಕುರಿತು ಹಾಗೆ ಯೋಚಿಸಿದ್ದು ನನ್ನ ತಪ್ಪು. ಕ್ರಮೇಣ ಅವರ ಮಾತುಗಳು ನನಗೆ ಒಂತರಹದ ಮಜಾ ಕೊಡುತ್ತಿದ್ದವು. ನನ್ನ ಮಗಳೂ ಕೂಡ ಸಣ್ಣಗೆ ಅಲ್ಲಿನ accent ಮೈಗೂಡಿಸಿಕೊಳ್ಳುವುದು ಶುರು ಮಾಡಿದ್ದಳು. ನನಗೆ ಹೆದರಿಕೆ ಶುರುವಾಗಿದ್ದೆ ಆಗ. ಮೊದಲೇ ಬೆಂಗಳೂರಿನಲ್ಲಿ ಬೆಳೆಯುತ್ತಿದ್ದ ಮಗಳಿಗೆ ಮನೆಯಲ್ಲಿ ಮಾತಾಡೋದು ಹಾಗೂ ಶಾಲೆಯಲ್ಲಿ ಎರಡನೇ ಭಾಷೆ ಇದೆ ಅನ್ನೋದು ಬಿಟ್ಟರೆ ಅಷ್ಟೊಂದು ಕನ್ನಡದ ಬಗ್ಗೆ ಒಲವು ಇರಲಿಲ್ಲ. ಈಗಾಗಲೇ ಹೌಸು, ನನ್ಸೆಲ್ಫು (Myself!) ಎಂಬಂತಹ ಅಪರೂಪದ ಹೊಸ ಕನ್ನಡ (!) ಪದಗಳ ಸೃಷ್ಟಿಮಾಡಿ ೯೦% ಅಂಗ್ಲಭಾಷೆಯನ್ನೇ ಹೋಲುತ್ತಿದ್ದ ಕನ್ನಡ ಭಾಷೆಯನ್ನು ಮಾತಾಡುತ್ತಿದ್ದ ಅವಳು ಅಮೇರಿಕೆಯಲ್ಲಿ ಕನ್ನಡಕ್ಕೆ ಪೂರ್ತಿ ಎಳ್ಳುನೀರು ಬಿಟ್ಟು ಬಿಡುತ್ತಾಳೆ ಎಂಬ ವಿಷಯ ನನ್ನನ್ನು ಅಧೀರನನ್ನಾಗಿಸಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಕಣ್ಮಣಿಯಾದ ನಾನು ಸುಮ್ಮನೆ ಕೂಡಲು ಸಾಧ್ಯವೇ?!

ಅಲ್ಲಿನ ದೇವಸ್ಥಾನದಲ್ಲಿ ಒಂದು ದೊಡ್ಡ ಹಾಲ್ ಹಾಗೂ ಒಂದಿಷ್ಟು ಕೊಠಡಿಗಳು ಇದ್ದವು. ಅಲ್ಲಿ ಅವರಕ್ಕೊಮ್ಮೆ ಶ್ಲೋಕ ಹೇಳಿಕೊಡುವುದು, ಚಿತ್ರ ಬಿಡಿಸುವುದು ಹಾಗೂ ಇನ್ನಿತರ ಭಾರತೀಯ ಭಾಷೆಗಳನ್ನು ಕಲಿಸುವುದು ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿದ್ದವು. ಹಿಂದಿ, ತಮಿಳು ಹಾಗೂ ತೆಲುಗು ಕ್ಲಾಸ್ ಗಳು ನಡೆಯುತ್ತಿದ್ದವು. ಅದರಲ್ಲೂ ತಮಿಳಿಗರ ಭಾಷಾಭಿಮಾನವಂತೂ ಅಸಾಮಾನ್ಯ. ಅವರು ಎಲ್ಲಿ ಹೋದರು ತಮಿಳು ಮಾತಾಡೋದು ಬಿಡುವುದಿಲ್ಲ. ಕನ್ನಡಿಗರೂ ಎಲ್ಲಿ ಹೋದರು ಕನ್ನಡ ಮಾತಾಡೋದಿಲ್ಲ! ಅಲ್ಲೊಬ್ಬ ತಮಿಳು ಸಹೋದ್ಯೋಗಿ ಇದ್ದ. ಅವನು ನನ್ನ ಜೊತೆ ಬೇಕು ಅಂತಲೇ ಆಗಾಗ ತಮಿಳು ಮಾತಾಡೋನು. ನಾನು ಅವನಿಗೆ ಉತ್ತರಿಸದೆ, ‘ನನಗೆ ನೀನು ಮಾತಾಡೋ ಪದಗಳು ಒಂದು ಗೊತ್ತಿಲ್ಲ ಮಗನೆ’ ಎಂಬ ವಿಚಿತ್ರ ಮುಖ ಭಾವ ಮಾಡಿದಾಗ “ಅಯ್ಯೋs ಸಾರಿ… ಅಯ್ಯಿ ಫಾರಗಾಟs..” ಅಂತ ಲೊಚ್ ಲೊಚಗುಟ್ಟು, ನನಗೆ ತಮಿಳು ಬರುವುದಿಲ್ಲ ಅನ್ನುವುದು ಅವನಿಗೆ ನೆನೆಪೇ ಇರಲಿಲ್ಲ ಅನ್ನುವ ನಾಟಕ ಮಾಡೋನು. ತಮಿಳಿಗರು ತಮ್ಮ ಭಾಷೆಯನ್ನು ಬೇರೆಯವರ ಮೇಲೆ ಹೇರುವುದೇ ಹೀಗೆ. ಕನ್ನಡಿಗರು ಬಿಡಿ ಬೇರೆ ಭಾಷೆಗಳನ್ನು ಹೇರಿಸಿಕೊಳ್ಳುವುದರಲ್ಲಿ ನಿಸ್ಸೀಮರು! ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಏನೂ ತಪ್ಪಿಲ್ಲ. ನಿರ್ಭೀತಿಯಿಂದ ಕಲಿಯಬಹುದು, ಅದೂ ಒಂದು ಭಾರತೀಯ ಭಾಷೆಯೇ… ಆದರೆ ನಮ್ಮ ಭಾಷೆಯನ್ನೂ ಮರೆತು?

ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಕನ್ನಡ ಬಳಗದಲ್ಲಿ ಒಂದು ಇತಿಹಾಸ ಸೃಷ್ಟಿಸುವ ತವಕ ನನ್ನದಾಗಿತ್ತು. ಕನ್ನಡವನ್ನು ಅಲ್ಲಿನ ಮಕ್ಕಳಿಗೆ ಕಲಿಸಿಕೊಡುವ ಬಯಕೆಯನ್ನು ಅಲ್ಲಿಯವರಿಗೆ ಹೇಳಿದೆ. ತುಂಬಾ ಜನ ಪಾಲಕರು ಖುಷಿಯಾದರು. ಎಷ್ಟೋ ಜನ ಮನೆಯಲ್ಲಿ ತಮ್ಮ ಮಕ್ಕಳ ಜೊತೆಗೆ ಕನ್ನಡದಲ್ಲೇ ಮಾತಾಡುತ್ತಿದ್ದರೂ ಜೊತೆಗೆ ಹೀಗೊಂದು ಕನ್ನಡ ಕಲಿಕೆಯೂ ಇರಬೇಕು ಅಂತ ಈಗಾಗಲೇ ಅವರಲ್ಲಿ ಕೆಲವರು ಬಯಸಿದ್ದರು. ನನಗೂ ಕೂಡ ಸಿಕ್ಕಾಪಟ್ಟೆ ಸಮಯ ಇತ್ತು. ಅದಕ್ಕಿಂತಲೂ ಹೆಚ್ಚಾದ ಕಿಚ್ಚು ಇತ್ತು! ಅಲ್ಲಿನ ದೇವಸ್ಥಾನದಲ್ಲಿ ರವಿವಾರಕ್ಕೆ ಒಂದು ಸಮಯದಲ್ಲಿ ಒಂದು ಕೊಠಡಿ ನನಗೆ ದೊರಕಿಸಿಕೊಟ್ಟರು. ಪ್ರತಿ ವಾರ ನನ್ನ ಕನ್ನಡ ಪಾಠ ಶುರು ಆಯ್ತು. ಮೊದಲೇ ಕನ್ನಡದ ಬಗ್ಗೆ ಎಳ್ಳಷ್ಟೂ ಅಸ್ಥೆ ಇರದ NRI ಮಕ್ಕಳಿಗೆ ಅ, ಆ, ಇ, ಈ … ಓದಿಸಿ ಬರೆಸುವ ವಿಚಾರ ಖಂಡಿತ ನನಗಿರಲಿಲ್ಲ. ಅವರನ್ನು ಜನಪದ ಹಾಡುಗಳು, ಕತೆಗಳನ್ನು ಹೇಳುತ್ತಾ ಹೇಳಿಸುತ್ತ, ಅಭಿನಯ ಮಾಡಿಸುತ್ತ, ಆಟ ಆಡಿಸುತ್ತ ಕನ್ನಡ ಕಲಿಸುವ ಯೋಚನೆ ನನ್ನದಾಗಿತ್ತು. ಹಾಗೇ ಮಾಡುತ್ತಿದ್ದೆ ಕೂಡ. ಅದೇ ಕಾರಣಕ್ಕೆ ಆಗಿನ ಕನ್ನಡ ಸಂಘದ ಅದ್ಯಕ್ಷ ಆಗಿದ್ದ ಗಣೇಶ್ ನಾನು ಸೇರಿ ನಮ್ಮ ಕನ್ನಡ ಶಾಲೆಗೆ “ಕನ್ನಡ ಆಟಶಾಲೆ” ಅಂತ ಹೆಸರಿಟ್ಟಿದ್ದೆವು. ಅವರೂ ಕೂಡ ತುಂಬಾ ಉತ್ಸಾಹಿ ಯುವಕ. ಅವರು ನಡೆಸುತ್ತಿದ್ದ ಕನ್ನಡ ಕರ್ಯಕ್ರಮಗಳಲ್ಲಿ ಯಾವಾಗಲೂ ಒಂದು ಹೊಸತನ ಇರುತ್ತಿತ್ತು. ಕೆಲವು ವಾರಗಳು ಕನ್ನಡ ಆಟಶಾಲೆ ಸಾಂಗವಾಗಿ ನಡೆದಿತ್ತಾದರೂ ಕೆಲವು ಪೋಷಕರಿಗೆ ನಾನು ಕಲಿಸುತ್ತಿದ್ದ ರೀತಿ ಇಷ್ಟವಾಗಲಿಲ್ಲ. ಅವರಿಗೆ ತಮ್ಮ ಮಕ್ಕಳು ಅ, ಆ, ಇ, ಈ ಬರೆಯುವುದನ್ನು ನೋಡುವ ಬಯಕೆ. ಈಗಿನ ಮಕ್ಕಳ ಬಾಯಲ್ಲಿ ಕನ್ನಡ ಮಾತಾಡಿಸಿದರೆ ಅದೇ ದೊಡ್ಡ ಸಾಧನೆ ಎಂದು ನಂಬಿದ್ದವನು ನಾನು. ನನ್ನ ಜೊತೆಗೆ ಕಲಿಸಲು ಇನ್ನೊಬ್ಬ ಗೆಳೆಯನೂ ಒಂದೊಂದು ವಾರ ಬರುತ್ತಿದ್ದ. ಅವನ ಕಲಿಕೆಯ ವಿಧಾನವೇ ಬೇರೆ. ನಾನು ಡೆಸ್ಕ್ ಬೇಡವೇ ಬೇಡ, ನೆಲದಲ್ಲಿ ಕೂಡೋಣ ಅಂತ ಅವೆಲ್ಲವನ್ನೂ ತೆಗೆಸಿದ್ದೆ. ಆದರೆ ಒಂದು ವಾರ ಅವನು ಎಲ್ಲ ಡೆಸ್ಕ್ ಗಳನ್ನೂ ಮರಳಿ ಹಾಕಿಬಿಟ್ಟಿದ್ದ. ವಾರಪೂರ್ತಿ ಶಾಲೆಯ ಡೆಸ್ಕ್ ಗಳಲ್ಲೇ ಕಳೆಯುತ್ತಿದ್ದ ಮಕ್ಕಳಿಗೆ ಬೇರೆಯ ತರಹದ ವಾತಾವರಣದಲ್ಲಿ ಅವರ ಅರಿವಿಗೆ ಬರದಂತೆ ಕನ್ನಡ ಕಲಿಸೋಣ ಎಂಬುದು ನನ್ನ ನಿಲುವಾಗಿತ್ತು. ಶಾಲೆಯ ರೀತಿಯಲ್ಲೇ ಕಲಿಸಬೇಕು ಅನ್ನೋದು ಅವನ ವಿಚಾರವಾಗಿತ್ತು. ನಮ್ಮಿಬ್ಬರಲ್ಲಿ ಯಾಕೋ ಒಮ್ಮತ ಮೂಡಲಿಲ್ಲ. ಹೀಗೆ ಕುಂಟುತ್ತ ಸಾಗಿದ ಆಟಶಾಲೆ ಮುಂದೆ ಒಂದು ದಿನ ತನ್ನ ಆಟ ಮುಗಿಸಿತ್ತು!

ಮಕ್ಕಳಿಗೆ ಕನ್ನಡ ಕಲಿಸುವ ಒಂದು ಮಾರ್ಗವಾಗಿ ಒಂದು ನಾಟಕವನ್ನೂ ಮಾಡಿಸಿದ್ದೆ. ಇಲೆಕ್ಟ್ರಾನಿಕ್ ಮಧ್ಯಮ ಬಿಟ್ಟು ನಮ್ಮ ದೇಸಿ ಆಟಗಳಾದ ಕಬ್ಬಡ್ಡಿ, ಖೋ ಖೋ ಆಡಿ ಎಂಬ ಸಂದೇಶ ಕೊಡುವ ಕಿರು ನಾಟಕ ಅದು. ಇದ್ದುದರಲ್ಲೇ ಚೆನ್ನಾಗಿ ಕನ್ನಡ ಮಾತಾಡುವ ಒಂದಿಷ್ಟು ಮಕ್ಕಳನ್ನು ಸೇರಿಸಿ ಆ ನಾಟಕದ ತಾಲೀಮು ಯಾರದೋ ಒಬ್ಬರ ಮನೆಯಲ್ಲಿ ನಡೆಯುತ್ತಿತ್ತು. ಅದರಲ್ಲಿ ನನ್ನ ಮಗಳೇ ಕನ್ನಡ ತುಂಬಾ ಚೆನ್ನಾಗಿ ಮಾತಾಡುವವಳಾಗಿದ್ದಳು. “ಎಷ್ಟು ಚಂದ ಕನ್ನಡ ಮಾತಾಡ್ತಾಳೆ” ಅಂತ ಅಲ್ಲಿನ ಕೆಲವರು ಆಶ್ಚರ್ಯ ಪಡುತ್ತಿದ್ದರು. ನಿಜ ಹೇಳಬೇಕು ಅಂದರೆ ಅಲ್ಲಿ ಮಾತಾಡಿದಷ್ಟು ಕನ್ನಡ ಬೆಂಗಳೂರಿನಲ್ಲೇ ಮಾತಾಡೋದಿಲ್ಲ ಅವಳು. ಯಾಕೆಂದರೆ ಇಲ್ಲಿ ಅವಳ ಎಲ್ಲ ಗೆಳತಿಯರೂ ಇಂಗ್ಲಿಷ್ ನಲ್ಲೆ ಮಾತಾಡೋದು. ಬೈದು ಬೈದು ಅವರನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿ ಮಾಡಿ ಸೋತಿದ್ದೇನೆ. “why don’t you guys speak kannada” ಅಂತ ಇಂಗ್ಲಿಷ್ ಅಲ್ಲೇ ಬೈದರೂ ಅರ್ಥ ಆಗಲ್ಲ ಈ ಮುಂಡೆವಕ್ಕೆ! ಅದೇಕೋ ಕಾಣೆ ನಮ್ಮವರಿಗೆ ಇರುವ ಇಂಗ್ಲಿಷ್ ವ್ಯಾಮೋಹ ಅಸಾಧ್ಯ. ಮನೆಯಲ್ಲಿ ಅಪ್ಪ ಅಮ್ಮಂದಿರೆ ಇಂಗ್ಲಿಷ್ ಮಾತಾಡಿದರೆ ಮಕ್ಕಳು ಏನು ಮಾತಾಡಬೇಕು?

ಅಲ್ಲಿನ ಎಷ್ಟೋ ಹಬ್ಬಗಳು ಚಳಿಗಾಲದಲ್ಲೇ ಬರುತ್ತವೆ. ಅದರಲ್ಲಿ ಕಾಮಣ್ಣನ ಹೋಳಿ ಹಬ್ಬವೂ ಒಂದು. ಅಲ್ಲಿ ಹಬ್ಬವನ್ನು ಆಚರಿಸುವ ಬಗೆಯೇ ವಿಚಿತ್ರ. ಯಾವುದೇ ಹಬ್ಬದ ಆಚರಣೆಯ ದಿನ ನಿಗದಿ ಆಗೋದು ಹವಾಮಾನ ವರದಿಯ ಮೇಲೆ! ಹುಣ್ಣಿಮೆ ಅಮಾವಾಸ್ಯೆ ಸಂಬಂಧ ಇಲ್ಲ ಅಲ್ಲಿ. ಹೌದು ಮತ್ತೆ … ಭಾರತದಲ್ಲಿ ಹೋಳಿ ಹಬ್ಬ ಇರುವ ದಿನ ಅಲ್ಲಿ ಮೈ ಮರಗುಟ್ಟುವ ಚಳಿ ಇದ್ದರೆ ಬಣ್ಣ ಎಂತ ಆಡುವುದು? ಬಣ್ಣ ಆಡಲು ಜಾಕೆಟ್ ಹಾಕಿಕೊಂಡು ಹೋಗಲಾದೀತೇ? ಹೀಗಾಗಿ ಹವಾಮಾನ ವರದಿ ನೋಡಿ ಆ ವರ್ಷವೂ ಬಣ್ಣ ಆಡಲು ಒಂದು ಮೂಹೂರ್ತ ನಿಗದಿ ಮಾಡಿದ್ದರು. ಅಷ್ಟಾಗಿಯೂ ಆ ಮುಹೂರ್ತ ಎರಡು ಸಲ ಮುಂದೆ ಹಾಕಲಾಯ್ತು. ಅಮೆರಿಕೆಯವರು ಎಷ್ಟೇ ಮುಂದುವರಿದರೂ ಹವಾಮಾನವನ್ನು ಅಷ್ಟು ನಿಖರವಾಗಿ ಹೇಳುವುದಕ್ಕೆ ಅವರೇನು ದೇವದೂತರೆ? ಅದಷ್ಟೇ ಅಲ್ಲ, ಜೊತೆಗೆ ಸ್ಥಳವನ್ನೂ ನಿಗದಿ ಮಾಡಿ ಅದಕ್ಕೆ ಇಷ್ಟು ಅಂತ ಬಾಡಿಗೆ ಕೊಟ್ಟು ಅಲ್ಲಿಗೆ ಬಣ್ಣ ಸಾಮಗ್ರಿಗಳನ್ನು ಒಯ್ದು ಒಬ್ಬರಿಗೊಬ್ಬರು ಎರಚಿಕೊಂಡು ಖುಷಿ ಪಡಬೇಕು. “ಕಾಮಣ್ಣನ ಮಕ್ಕಳು ಕಳ್ಳ ಸೂ… ಮಕ್ಕಳು” ಅಂತ ಜೋರಾಗಿ ಕೂಗುವಂತೆಯೂ ಇಲ್ಲ. ಒಬ್ಬರ ಕಿವಿಯಲ್ಲಿ ಒಬ್ಬರು ಹೇಳಿ ಖುಷಿ ಪಟ್ಟಿದ್ದೆ ಆಯ್ತು. ಇದೆಂತಹ ಕರ್ಮ ಅನಿಸಿದರೂ ಅದೊಂದು ತರಹದ ಐಶಾರಾಮು. ಅಮೆರಿಕೆಯಲ್ಲಿ ಬಣ್ಣ ಆಡಿದೆ ಎಂಬ ಭಾವನೆಯೇ ಎಷ್ಟೊಂದು ಪುಳಕ ಕೊಡುತ್ತೆ ಗೊತ್ತೇ? ಬೇರೆಯವರು ಹೇಳಿದ್ದನ್ನು ಕೇಳಿ ಕೇಳಿ ಸುಸ್ತಾಗಿದ್ದ ನಮಗೆ ನಾವೂ ಹೀಗೆ ಮಾಡಿದ್ದೆವು ಎಂದು ಹೇಳಿಕೊಂಡು, ಬೇರೆಯವರ ಅಸೂಯೆಯನ್ನು ನೋಡಿ ಆಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವೇ?!

ಹೀಗೆ ಬಣ್ಣ ಆಡುವಾಗಲೇ ನಮ್ಮ ಆಟಶಾಲೆಯ ಮಕ್ಕಳನ್ನು ಒಗ್ಗೂಡಿಸಿ, ಬನ್ನಿ ಒಂದು ದೇಸಿ ಆಟ ಹೇಳಿಕೊಡುತ್ತೇನೆ ಅಂತ ಅವರಲ್ಲೇ ಎರಡು ಗುಂಪುಗಳನ್ನು ಮಾಡಿ ಕಬ್ಬಡ್ಡಿ ಆಡಿಸಲು ತೊಡಗಿದೆ. ಉತ್ಸಾಹದಿಂದಲೇ ಪಾಲ್ಗೊಂಡರು ಮಕ್ಕಳು. ಅದರಲ್ಲಿ ಒಬ್ಬನು ಬಾಯಿಂದ ಏನೂ ಹೇಳದೆಯೇ ಎದುರಾಳಿ ಟೀಂ ಮೇಲೆ ದಾಳಿಗೆ ಬರುತ್ತಿದ್ದ. ನಾನು ಅವನನ್ನು ತಡೆದು, ಅದು ಹಾಗಲ್ಲ ನೀನು ಕಬ್ಬಡ್ಡಿ ಕಬ್ಬಡಿ ಅಂತ ಹೇಳುತ್ತಾ ನುಗ್ಗಬೇಕು ಅಂತ ತಿಳಿಸಿ ಹೇಳಿದೆ. ಅವನು ಗೊತ್ತಾಯ್ತು ಎಂಬಂತೆ ಗೋಣು ಹಾಕಿದನಾದರೂ “ಕಬ್ಬಡ್ಡಿ” ಶಬ್ದ ಅವನಿಗೆ ಅಷ್ಟೊಂದು ಪರಿಚಿತ ಇಲ್ಲವಾಗಿತ್ತಾದ್ದರಿಂದ ಅದನ್ನು ಉಚ್ಚರಿಸುವುದು ಅವನಿಗೆ ದೊಡ್ಡ ಸಮಸ್ಯೆಯಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಅವನ ನಾಲಿಗೆ ಹೊಳ್ಳದಾಯ್ತು.
ಆದರೂ ಕಷ್ಟಪಟ್ಟು … “ಕಬಡೀ.. ಕಬಡೀ…” ಅಂತ ಒಂದೆರಡು ಸಲ ಅಂದವನೇ “…whatever” ಅಂದುಬಿಟ್ಟು ಆಟವನ್ನು ಮುಗಿಸಿಯೇ ಬಿಟ್ಟಿದ್ದ. ಅವತ್ತೆಲ್ಲ ನಾನು ನನ್ನ ಮಗಳು “ಕಬಡೀ ಕಬಡೀ whatever…” ಅಂತ ಅಭಿನಯಿಸಿ ಹೇಳಿಕೊಂಡು ನಕ್ಕಿದ್ದೆ ನಕ್ಕಿದ್ದು!

ಗುರುಪ್ರಸಾದ ಕುರ್ತಕೋಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Vinayaka Aralasurali
Vinayaka Aralasurali
4 years ago

Kulitalle omme amerikeyallina kannada devasthanada angalakke hogi bandantenisitu. Chanda baraha.

Ranjana
Ranjana
4 years ago

ಅದ್ಭುತ ಲೇಖನ…

ಗುರುಪ್ರಸಾದ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ
4 years ago

ವಿನಾಯಕ,
ಲೇಖನ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿ ಆಯ್ತು! ಧನ್ಯವಾದಗಳು

ಗುರುಪ್ರಸಾದ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ
4 years ago

ರಂಜನಾ,
ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

4
0
Would love your thoughts, please comment.x
()
x