ಕಪ್ಪೆ ಉಚ್ಚೆಯೂ ಬೆಳ್ಳಿ ಕಪ್ಪೆಯೂ. . . : ರಮೇಶ್ ನೆಲ್ಲಿಸರ. ತೀರ್ಥಹಳ್ಳಿ


ಮೀನುಶಿಕಾರಿಯಾಗದೆ ಹದಿನೈದು ದಿನಗಳೇ ಆಗಿ ಹೋಗಿದ್ದವು, ಸಿಕ್ಕ ಒಂದೆರಡು ಸೋಸಲು ಸಾಂಬಾರಿಗೆ ಸರಿಯಾಗಿ, ಅಲ್ಲಿ ಇಲ್ಲಿ ಕೂಲಿಮಾಡಿಕೊಂಡು ರಾಮಯ್ಯ ಹೇಗೋ ಬಿಕನಾಸಿ ಜೀವನದ ಗಾಲಿಯಿರದ ಚಕ್ಕಡಿಯನ್ನು ನೂಕುತ್ತಿದ್ದ ಅಥವಾ ಅದೇ ಇವನನ್ನು ದಿಕ್ಕುದಸೆಯಿಲ್ಲದೆ ಎಳೆಯುತ್ತಿತ್ತು.

ನಲವತ್ತು ವರ್ಷದ ಹೆಂಡತಿಗೆ ಮತ್ತು ಐವತ್ತು ವರ್ಷದ ಆತನಿಗೆ ಜನಿಸಿದ ನಾಗನೆಂಬ ಮಗ ಹೇಗೋ ಹುಟ್ಟಿದರಾಯಿತೆಂದು ಹುಟ್ಟಿದಂತಾಗಿ ಐದು ವರ್ಷ ಸರಿದರೂ ನಾಲ್ಕೋ ಐದೋ ಕೆಜಿ ಮಾಂಸವನ್ನು ಎಲುಬು ಚಕ್ಕಳದ ದೇಹದಲ್ಲಿ ಅಲ್ಲಲ್ಲಿ ಅಡಗಿಸಿಟ್ಟುಕೊಂಡು ಒಂದು ಜೀವವಿರಬಹುದೇನೋ ಎಂದು ಅನಿಮಾನಿಸುವಂತೆ ಬದುಕಿದ್ದ.

ಎರಡು ಮೂರು ದಿನಗಳಿಂದಲೂ ಯಾರೂ ಕೂಲಿಗೆ ಕರೆಯದೆ ಇದ್ದ ಸೊಸೈಟಿ ಅಕ್ಕಿಯೂ ಮುಗಿದು ಒಂದು ರಾತ್ರಿ ಉಪವಾಸ ಮಲಗಿದ ಮೇಲೆ ರಾಮಯ್ಯನಿಗೆ ಅದೇನೋ ಹೊಳೆದಂತಾಗಿ ಕಪ್ಪೆಗಾಣವನ್ನಾದರೂ ಬಿಟ್ಟು ಮೀನುಶಿಕಾರಿ ಮಾಡುವ ಎಂಬ ಓಲ್ಡ್ ಐಡಿಯಾವೊಂದು ಹೊಳೆಯಿತು. ಕಪ್ಪೆಯ ಮೇವನ್ನು ಹಾಕಿ ಮೀನುಹಿಡಿಯುವುದು ಸಾಮಾನ್ಯವಾದರೂ ಅದು ಮಳೆಗಾಲದ ಕೊನೆಯ ತಿಂಗಳಿಗೆ ಸೀಮಿತ, ಆದರೆ ಈಗಾಗಲೇ ಜನವರಿ ತಿಂಗಳು! ತಿಪ್ಪರಲಾಗ ಹಾಕಿ ಕಾಡೆಲ್ಲ ಹುಡುಕಿ ಹಳ್ಳಕೊಳ್ಳಗಳು ಸುತ್ತುಹಾಕಿದರೂ ಕಪ್ಪಗೆಳು ಸಿಗುವುದು ಒತ್ತಟ್ಟಿಗಿರಲಿ ಸಿಕ್ಕರೂ ಹಿಡಿಯುವುದು ಡಿಫಿಕಲ್ಟ್ ಕೆಲಸ ಎಂದು ಅವನಿಗೂ ಗೊತ್ತಿತ್ತು. ಹತ್ತೋ ಇಪ್ಪತ್ತು ಗೊದಮೊಟ್ಟೆ ಕಪ್ಪೆಗಳು ಸಿಕ್ಕಿದರೆ ಮೀನುಗಳಲ್ಲೇ ಹೆಚ್ಚಿನ ಡಿಮ್ಯಾಂಡ್ ಇರುವ ಅವಲು ಮೀನು ಶಿಕಾರಿಮಾಡುವುದೆಂದು ಅವನ ಬಯಕೆ.

ಹೊತ್ತಾರೆಯೇ ಎದ್ದು ಹೆಂಡತಿ ಶಾಂತಿಯ ಬಳಿ ಬೀಡಿ ತೆಗೆದುಕೊಳ್ಳಲು ಐದುರೂಪಾಯಿಯನ್ನು ತೆಗೆದುಕೊಂಡವನೇ ಅಂಗಡಿ, ಅಲ್ಲಿಂದ ಕಾಡಿನ ದಾರಿ ಹಿಡಿದನು. ಪಟ್ರವಳ್ಳಿಯ ಗದ್ದೆಸಾಲು ದಾಟಿ ಬೊಮ್ಮನಹಳ್ಳಿಯ ದುರ್ಗಮ ಅರಣ್ಯ ಎದುರಾಯಿತು, ಒಂದೊಂದು ಮರಗಳು ಆಕಾಶಕ್ಕೆ ಏಣಿಯಿಟ್ಟಂತೆ ತಮ್ಮ ಎಲೆಗಳನ್ನುದುರಿಸಿಕೊಂಡು ಚಳಿಗಾಲದ ಮುಕ್ತಾಯವನ್ನೇ ಎದುರು ನೋಡುತ್ತಿರುವಂತೆ ಭಾಸವಾಗುತ್ತಿತ್ತು.

ರಾಮಯ್ಯ ನೀರಿನ ಪಸೆಯಿರುವ ಒಂದಿಂಚು ಜಾಗವನ್ನು ಬಿಡದೆ ತನ್ನ ಅರ್ಧಂಭರ್ಧ ಕಾಣುವ ಕಣ್ಣುಗಳನ್ನು ಗುರಿಯತ್ತಲೇ ಕೇಂದ್ರೀಕರಿಸಿ ಕಪ್ಪೆಗಳಿಗಾಗಿ ಹೊಂಚುಹಾಕುವ ಹಾವಿನಂತೆ ಹುಡುಕತೊಡಗಿದ. ಆದರೆ ಕಪ್ಪೆಗಳ ಸುಳಿವು ಮಾತ್ರ ಸಿಗದೆ ಹೈರಾಣಾಗಿ ಈ ಬಿಕನಾಸಿ ಜೀವನದ ಬಗ್ಗೆ ಹಳಿದುಕೊಂಡು ಒಂದು ಬೀಡಿಯನ್ನು ಸುಟ್ಟು ದೀರ್ಘವಾಗಿ ಉಸಿರನ್ನೆಳೆಯುತ್ತಿದ್ದಂತೆ ಶ್ವಾಸಕೋಶ ಹಿಂಡಿದಂತಾಗಿ ಕಫದ ಕೆಮ್ಮು ಸ್ಟಾರ್ಟ್ ಆಯಿತು, ಹಳ್ಳದ ರಾಡಿನೀರನ್ನು ಕುಡಿದು ಮತ್ತೆ ಮುಂದುವರಿದ.

ಕಾಡಿನ ಪೊದೆಗಳಲ್ಲಿ ಕಪ್ಪೆಗಳ ವಟಗುಟ್ಟುವಿಕೆಯ ಶಬ್ಧ ಕೇಳಿ ರಾಮಯ್ಯನ ಕಿವುಡ ಕಿವಿಯೂ ನಿಮಿರಿತು, ಮೆಲ್ಲನೆ ತರಗೆಲೆಗಳ ಮೇಲೆ ಸರಿಯುತ್ತಾ ಒಂದು ಕಪ್ಪೆಯನ್ನು ಹಿಂಬದಿಯಿಂದ ಅಮುಕಿ ಹಿಡಿದ, ಆತ್ಮರಕ್ಷಣೆಗೆ ಕೊಸರಾಡಿದ ಕಪ್ಪೆ ತನ್ನ ಉಚ್ಚೆಯನು ಕಾರಂಜಿಯಂತೆ ಸಿಡಿಸಿತು ಅದು ರಾಮಯ್ಯನ ಸ್ನಾನ ಮಾಡದ ಮೈಗೆ ಸಣ್ಣ ಸ್ನಾನ ಮಾಡಿಸಿದಂತಿತ್ತು. ಕಪ್ಪೆಹಿಡಿಯುವಾಗ ಅದು ಆತ್ಮರಕ್ಷಣೆಗಾಗಿ ಉಚ್ಚೆಹೊಯ್ಯುವುದು ಸಾಮಾನ್ಯ ಸಂಗತಿಯಾದ್ದರಿಂದ ರಾಮಯ್ಯ ತಲೆಕೆಡಿಸಿಕೊಳ್ಳದೆ ಪೊದೆಯ ಸುತ್ತಲೂ ಹುಡುಕಿ ನಾಲ್ಕಾರು ಕಪ್ಪೆಗಳನ್ನು ಹಿಡಿದು ಚೀಲಕ್ಕೆ ತುರುಕಿದ. ಇಪ್ಪತ್ತು ಕಪ್ಪೆಗಳು ಸಿಗುವವರೆಗೆ ಗಂಟೆ ಎರಡಾಗಿತ್ತು, ರಾಮಯ್ಯನ ಮೈಯಿಂದ ಕಪ್ಪೆಉಚ್ಚೆಯ ವಾಸನೆ ಹೊಡೆಯಿತ್ತಿತ್ತು. ಇದ್ಯಾವುದರ ಪರಿವೆಯಿರದೆ ರಾಮಯ್ಯ ಲಗುಬಗನೆ ತುಂಗಾ ನದಿಯತ್ತ ಹೊರಟ. ಮೊದಲೇ ತಂದಿದ್ದ ಗಾಣಗಳನ್ನು ಸರಿಪಡಿಸಿಕೊಂಡು ತೆಪ್ಪವನ್ನು ನೀರಿಗೆ ಹಾಕಿ ಅವಲು ಮೀನುಗಳು ಕಂಡುಬರುವ ಬೊಮ್ಮನಹಳ್ಳಿಯ ಹೊಂಡದತ್ತ ಹುಟ್ಟು ಹಾಕುತ್ತಾ ಸಾಗಿದ.

ಬೀಡಿ ಮುಗಿಯುವವರೆಗೆ ಗಾಣಗಳಿಗೆ ಕಪ್ಪೆಯ ಮೇವು ಹಾಕಿ ನೀರಿಗಿಳಿಸಿದ ನೀರಿನಲ್ಲಿ ತನ್ನ ಅಸ್ಪಷ್ಟ ಬಿಂಬ ನಾಳೆಯ ಶಿಕಾರಿಯ ಕುರಿತು ಯೋಚನೆಗಳು ಹಾದು ಹೋದವು. ದಡಕ್ಕೆ ಬಂದವನೇ ತನ್ನ ಹಾಳು ಜೀವನವ ನೆನೆಸಿ ಒಮ್ಮೆ ಉಗಿದು, ಮುಂಡುಬೀಡಿಯನ್ನು ತುಟಿಗೆ ಸಿಕ್ಕಿಸಿ ಮನೆಯತ್ತ ಮರಳಿದ.

ಕಾಲಿಗೆ ಒಂದು ಚೆಂಬು ನೀರು ಸುರಿದು ಶಾಂತಿ ಮಾಡಿಟ್ಟ ರಾಗಿ ಅಂಬಲಿಯನ್ನು ಕುಡಿದು ಹಾಗೆ ಚಾಪೆಯ ಮೇಲೆ ಕಾಲುಚಾಚಿ ಮಲಗಿಕೊಂಡ. ಕತ್ತಲು ಗಾಢವಾಗಿ ಊರೆಲ್ಲ ಮಲಗಿರುವಾಗ ರಾಮಯ್ಯನಿಗೇಕೋ ತಳಮಳ ಆರಂಭವಾಯಿತು, ಗಂಟಲು ಒಣಗಿ ಮೈಯೆಲ್ಲಾ ಸೆಟದು ಬಿರುಕು ಉಂಟಂತಾಗಿ ಕುಮುಟಿ ಹಾರಿದ. ಶಾಂತಿ ಗಂಡನಿಗೆ ಸಾಧ್ಯವಾದಷ್ಟು ಉಪಚರಿಸಿ ”ಚೌಡವ್ವ ಕಾಪಾಡವ್ವ, ಗಂಡ್ಸಿಗ್ ದೆಯ್ಯ ಮೆಟ್ದಂಗ್ ಅಗೆದೆ” ಎಂದು ಒಂದು ಚೆಂಬು ನೀರನ್ನು ಅದರೊಳಗೆ ಸ್ವಲ್ಪ ಕುಂಕಮವೂ ಸೇರಿಸಿ ರಾಮಯ್ಯನ ಮೈಮೇಲೆ ನಿವಾಳಿಸಿ ಮನೆ ಮುಂದಿನ ಹಾದಿಗೆ ಸುರಿದು ಬಂದಳು.

ನಕ್ಷಿಮಿ ಅತ್ತೆಯ ಬಳಿ ಗಣವನ್ನಾದರೂ ಕೇಳಿಸುವ ಯೋಚನೆ ಬಂದಿತಾದರೂ ಈ ಅಪರಾತ್ರಿಯಲಿ ಹೋಗುವುದು, ಮಾವನ ಬಳಿ ಉಗಿಸಿಕೊಳ್ಳುವುದು ಬೇಡವೆಂದು ಮುಂಜಾನೆಯವರೆಗೂ ಕಾಯಲು ನಿರ್ಧರಿಸಿ ನಾಗನನ್ನು ಎಳೆದು ಮಲಗಿಸಿ ಗಂಡನಿಗೆ ಸಮಾಧಾನಿಸಿ ತಾನೂ ನಿದ್ದೆ ಹೋದಳು.

ಬೆಳಿಗ್ಗೆ ಮೀನುಶಿಕಾರಿಗೆ ಗಂಡ ಹೋಗಬಹುದಾ!, ಎಂದು ಶಾಂತಿ ನಿಧಾನವಾಗಿ ಅಲ್ಲಾಡಿಸಿ ನೋಡಿದಾಗ ರಾಮಯ್ಯ ಜ್ವರದಿಂದ ಏದುಸಿರು ಬಿಡುತ್ತಿದ್ದ, ಮೈಯೆಲ್ಲಾ ಕಾದ ಕಬ್ಣದಂತೆ ಸುಡುತ್ತಿತ್ತು ಮೈ ಪೂರ್ತಿ ಸಣ್ಣ ಗುಳ್ಳೆಗಳು ಎದ್ದಿದ್ದವು, ತುರಿಸಿ ತುರಿಸಿ ಹೊಟ್ಟು ಹಾರುತ್ತಿತ್ತು, ದೆಯ್ಯ ಮೆಟ್ಟಿರಲಕ್ಕೆ ಸಾಕು ಎಂದು ಶಾಂತಿ ನಕ್ಷಿಮಿ ಅತ್ತೆಯನ್ನು ಗುಡುಲಿಗೆ ಕರೆದುಕೊಂಡು ಬಂದಳು. ನಕ್ಷಿಮಿ ರಾಮಯ್ಯನ ಹಣೆಯನ್ನು ಪರೀಕ್ಷಿಸುವಾಗ ಮುಖ, ಕೈ-ಕಾಲುಗಳಲ್ಲಿ ಗುಳ್ಳೆಗಳೆದ್ದು ಮೈಯೆಲ್ಲಾ ಹಾವಿನ ಪೊರೆಯಂತೆ ಬಿರುಕು ಬಿರುಕಾಗಿ ಹಾವೇ ಇರಬಹುದಾ ಎನ್ನುವಷ್ಟರ ಮಟ್ಟಿಗೆ ವಿಕಾರವಾಗಿ ಹೋಗಿತ್ತು. ನಕ್ಷಿಮಿ ಅತ್ತೆಗೆ ಇದು ಕಪ್ಪೆ ಹುಚ್ವೆಯಿಂದಾದ ರ್ವಾಗವೆಂದೂ ಡಾಕಟ್ರು ಕೈಯಿಂದ ಹುಷಾರಾಗದ ಖಾಯಿಲೆಯೆಂದು ತೀರ್ಪು ಕೊಟ್ಟಳು. ಅಲ್ಲೇ ಮೈಮೇಲೆ ದೇವರು ಬಂದಂತಾಗಿ

“ಬೊಮ್ನಳ್ಳಿ ಕಾಡಾಗ್, ಈಸುರ್ ದ್ಯಾವ್ರ ಗಂಟ್ಲಲ್ ಸುತ್ತಿರೋ ಆಹಾರ ಕಪ್ಪಿಗಳ್ನ ಹಿಡ್ಕಂಡು ಸಾಯ್ಸಿದ್ಕೇ ಹೀಗ್ ಆಗ್ಯದೆ, ನಾಗಪ್ಪ ಬಿಡಾಂಗಿಲ್ಲ, ಈಸುರ ಕ್ಸಮ್ಸಾಂಗಿಲ್ಲ”

ನಾಗತ್ತೆಯ ಗುಟುರು ಸುತ್ತಲಿನ ನಾಲ್ಕಾರು ಕೇರಿಗೂ ವ್ಯಾಪಿಸಿ ಎಲ್ಲರೂ ಮನೆಮುಂದೆ ನೆರೆದು ರಾಮಯ್ಯನ ಖಾಯಿಲೆಯನ್ನೂ ದೇವರನ್ನೂ ಕೂಡಿಸಿ, ಭಾಗಿಸಿ, ಕಳೆದು ಸುಸ್ತಾದರು.

ಶಾಂತಿ ಪಾಪ ಪರಿಹಾರಕ್ಕಾಗಿ ನಕ್ಷಿಮಿ ಅತ್ತೆಯನ್ನು ಪರಿಪರಿಯಾಗಿ ಬೇಡಿಕೊಂಡಳು, “ಬೊಮ್ನಳ್ಳಿ ಈಸುರ್ ದೇವ್ರಿಗೆ ಬೆಳ್ಳಿಕಪ್ಪೆ ಮಾಡ್ಸಿ ಹಾಕಿದರೆ ಪರ್ಹಾರ ಆಗೇತು”ಎಂದು ನಕ್ಷಿಮಿ ಅತ್ತೆಯ ಮೈಮೇಲಿನ ದೇವರು ಹೇಳಿ ಸರಕ್ಕನೆ ಇಳಿದು ಮಾಯವಾಯಿತು.

ಮಂತ್ರಿಸಿದ ನಿಂಬೆಹಣ್ಣನ್ನು ಮೈಯೆಲ್ಲಾ ಸವರಿ, ರಾಮಯ್ಯನಿಗೆ ಅಂಬಲಿ ಕುಡಿಸಿದಳು ಶಾಂತಿ, ರಾಮಯ್ಯನ ನರಳಾಟ ಊರೆಲ್ಲಾ ತಲುಪಿಿ, ಯಾರೋ ಒಬ್ಬರು ‘ಕಪ್ಪೆ ಉಚ್ಚೆಯ ಅಲರ್ಜಿ’ ಇದೆಂದು ಸ್ನಾನ ಮಾಡದಿರುವುದಕ್ಕೆ ಹೀಗಾಗಿರಲೂ ಸಾಕು ಎಂದು ನುಡಿದರೂ ಊರವರೆಲ್ಲ ಇದ್ದು ಪಕ್ಕಾ ಚೌಡಿಯ ತೊಂದರೆಯೆಂದು, ನಾಗಪ್ಪನ ಕಾಟವೆಂದೇ ಬಗೆದು ರಾಮಯ್ಯನಿಗೆ ಪುಕ್ಸಟ್ಟೆ ಸಲಹೆಯನ್ನು ನೀಡಿ ನಿಟ್ಟುಸಿರು ಬಿಟ್ಟು ಮರಳುತ್ತಿದ್ದರು.

ಈಕಡೆ ತಿನ್ನಲು ಗಂಜಿಗೆ ಗತಿಯಿರದ ಶಾಂತಿ ಅಪ್ಪೇಗೌಡರ ಬಳಿಯಾದರೂ ಖಾಯಂ ಆಳಾಗಿ ದುಡಿದಾದರೂ ಬೆಳ್ಳಿಕಪ್ಪೆಯನ್ನು ಮಾಡಿಸಿ ತನ್ನ ಗಂಡನನ್ನು ಬದುಕಿಸಲು ಪಣತೊಟ್ಟಳು, ಗೌಡರಿಗೆ ಒಪ್ಪಿಸಿ ನಾಗನನ್ನು ಹಾಸಿಗೆಯಲ್ಲಿದ್ದ ಗಂಡನ ಬಳಿ ಬಿಟ್ಟು ದುಡಿಯಲು ಹೊರಟಳು, ಅಕ್ಕಸಾಲಿಗ ರಾಮಾಚಾರಿ ಬಳಿ ಸಣ್ಣದರಲ್ಲೇ ಸಣ್ಣದಾದ ಬೆಳ್ಳಿಕಪ್ಪೆಯನ್ನು ಮಾಡಿಸಲು ಹಾಕಿದಳು, ಸಾವಿರದ ಕಡಿಮೆಗೆ ಏನೂ ಬರುವುದಿಲ್ಲವೆಂದು ಕೇಳಿದಾಗ ಆತಂಕಗೊಂಡಳು. ಆದರೆ ಮನೆಯ ಆಸರೆಯಾದ ಗಂಡನಿಗಿಂತ ಯಾವುದೂ ಅವಳಿಗೆ ಮುಖ್ಯವಾಗಿರಲಿಲ್ಲ.

ಗಂಟೆಗಳ ದುಡಿಮೆ ತಿಂಗಳುಗಳನ್ನೆ ಅಪೋಶನ ತೆಗೆದುಕೊಂಡಿತು. ಬೆಳ್ಗಾತಿ ಕೊಟ್ಟಿಗೆಗೆ ಎರಡು ಹೊರೆ ಸೊಪ್ಪಿನಿಂದ ಹಿಡಿದು, ಹಾಲುಕರೆದು ದನಗಳನ್ನು ಬ್ಯಾಣಕ್ಕೆ ಅಟ್ಟಿ, ಗೊಬ್ಬರ ತೆಗೆಯುವುದರಿಂದ ಹಿಡಿದು ಕಸ- ಮುಸುರೆ, ಗದ್ದೆ- ತ್ವಾಟದ ಕೆಲಸ, ಸಂಜೆ ಮತ್ತೆ ದನಗಳನ್ನು ಕೊಟ್ಟಿಗಗೆ ಕಟ್ಟಿ ಪುನಃ ಹಾಲು ಕರೆಯುವುದರೊಂದಿಗೆ ಕೊನೆಗೊಳ್ಳುತ್ತಿತ್ತು. ಈ ನಡುವೆ ಹೆಲ್ತ್ ಕ್ಯಾಂಪಿಗೆಂದು ಬಂದ ವೈದ್ಯರ ತಂಡ, ರಾಮಯ್ಯನಿಗಾದ್ದದ್ದು ಅಲರ್ಜಿಯೆಂದೂ ಔಷಧಿ ನೀಡಿ ಎರಡು ದಿನಕ್ಕೆ ರೋಗ ಗುಣವಾಗುವಂತೆ ಮಾಡಿದರೂ, ದೇಹಸ್ಥಿತಿ ಮಾತ್ರ ಕಫದ ಕೆಮ್ಮು ಕ್ಷಯಕ್ಕೆ ತಿರುಗಿ ಬಿಗಡಾಯಿಸುತ್ತಲೇ ಹೋಯಿತು. ರಾಮಯ್ಯ ಮಾತ್ರ ಮತ್ತೆ ವೈದ್ಯರ ಬಳಿ ಹೋಗುವ ಧೈರ್ಯ ಮಾಡಲಿಲ್ಲ. ಶಾಂತಿಯೂ ದೆಯ್ಯ ದೇವರೆಂದು ದುಡಿದು ಗಂಡನತ್ತ ಗಮನಕೊಟ್ಟಳೆ ವಿನಃ, ಮೊದಲೆ ಕೃಶನಾಗಿದ್ದ ಮಗ ನಾಗನತ್ತ ಗಮನ ಕೊಡುವುದನ್ನು ಅನಿವಾರ್ಯವಾಗಿ ಮರೆತುಬಿಟ್ಟಳು.

ರಾಮಯ್ಯನ ದೇಹಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಡಯಿಸುತ್ತಾ ಹೋದಂತೆ ಅತ್ತಕಡೆ ಸರಿಯಾದ ಆರೈಕೆಯಿಲ್ಲದೆ ಮೊದಲೇ ಅಪೌಷ್ಟಿಕ ಎಲುಬಿನ ಚಕ್ಕಳವಾಗಿದ್ದ ನಾಗ ಹಾಸಿಗೆ ಹಿಡಿದನು. ‘ಇವನ್ದು ಇದ್ದದ್ದೆ, ತಿಂಗ್ಳಾಗ್ ಮೂರ್ ಸರ್ತಿ’, ಎಂದು ಶಾಂತಿ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ, ಮುಂಜಾನೆ ಗಂಜಿಮಾಡಿ ಹೋದವಳು ಬರುವಾಗ ಸಂಜೆಯ ಸೂರ್ಯ ಕಾಣಿಯಾಗಿರುತ್ತಿದ್ದ.

ತಾನೂ ಆರೋಗ್ಯವಾಗುತ್ತಿರುವುದಾಗಿಯೂ ಬದುಕಿ ಬಾಳಬೇಕಾದ ಒಬ್ಬನೇ ಮಗ ನಾಗನನ್ನು ದವಾಖಾನೆಗೆ ಒಯ್ಯಬೇಕೆಂಬ ರಾಮಯ್ಯನ ಮಾತಿಗೆ ಶಾಂತಿ ಸಿಟ್ಟಾದಳು
“ದುಡ್ಯೋರ್ ನೀವ್ ಹಾಸ್ಗೇಲ್ ಬಿದ್ಕಂಡೀರ, ನಿವ್ಯಾನೂ ಯೋಚ್ನೆ ಮಾಡ್ಬೇಡ್ರಿ, ನಕ್ಷಿಮಿ ಅತ್ತೆ ಕೊಟ್ಟಿದ್ ಭಂಡಾರನ ಅವ್ನ್ ಮೈಯಿಗ್ ಹಾಕೀನಿ, ಏನೂ ಹೆದ್ರಿಕೆಯಿಲ್ಲ, ಇನ್ನೂ ನಾಳಿಕೆ ಬೆಳ್ಳಿಕಪ್ಪೆ ಆತದೆ, ಆ ನಮ್ಮಪ್ಪ ಈಸುಂರಂಗೆ ಹಾಗೇ ಅವ್ನ್ ಕೊರ್ಳಾಗಿರೋ ನಾಗಪ್ಪನ್ಗೆ ತಪ್ ಕಾಣ್ಕೆ ಸಲ್ಸುದ್ರೆ ಸಾಕು, ಎಲ್ಲಾ ಸರಿ ಹೋತದೆ’ ಶಾಂತಿಯ ಮಾತಿಗೆ ರಾಮಯ್ಯ ಸುಮ್ಮನಾದನು.

ಮಂಡಗದ್ದೆಯಲ್ಲಿ ಈ ದಿನ ‘ನಾಗ-ನಾಗಿಣಿ’ ಯಕ್ಷಗಾನ ಪ್ರಸಂಗ ಇರುವುದಾಗಿ ಮೈಕೊಂದು ಒದರಿ ಹೋದುದನು ಕೇಳಿ ಶಾಂತಿ ಖುಷಿಗೊಂಡಳುು. ಒಬ್ಬನೇ ಮಗ ನಾಗನ ಹೆಸರಿನಲ್ಲಿ ಹಾಗೂ ನಾಗಪ್ಪನ್ನ ಆಹಾರ ಕದ್ದ ರಾಮಯ್ಯನ ಹೆಸರಿನಲ್ಲಿ ನಾಗಪೂಜೆ ಮಾಡಿಸಿದರಾಯಿತೆಂದು ನಡೆದಾಡುವಂತಾದ ಗಂಡನನ್ನು ಕರೆದುಕೊಂಡು ನಾಗನನ್ನು ಸೊಂಟದಲಿ ಕೂರಿಸಿ, ಯಕ್ಷಗಾನದ ಪೆಂಡಾಲ್ ಬಯಲಾಟವಾದ್ದರಿಂದ ಮೊದಲೇ ತುಂಬಿ ಹೋಗಿದ್ದರಿಂದ ಹೊರಭಾಗದಲ್ಲಿ ಕುಳಿತಳು, ತಂದಿದ್ದ ಚಾಪೆಯನ್ನು ಹಾಸಿ ಇಬ್ಬರನ್ನೂ ಮಲಗಿಸಿ, ತಾನು ಪೂಜೆಗೆ ಹೂಹಣ್ಣು ನೀಡಿ ಪ್ರಸಾದವನ್ನು ತಂದು ಗಂಡನಿಗೆ ಹಾಗೂ ಮಗನಿಗೆ ಕೊಟ್ಟಳು.

ಯಕ್ಷಗಾನ ಆರಂಭವಾಗಿ ಕತ್ತಲು ಕವಿದು ಇಬ್ಬನಿ ಬೀಳಲು ಪ್ರಾರಂಭವಾಯಿತು. ರಾಮಯ್ಯನಿಗೆ ಕೆಮ್ಮು, ನಾಗನಿಗೆ ಏದುಸಿರು ಒಮ್ಮೆಲೆ ಪ್ರಾರಂಭವಾಯಿತು, ರಾಮಯ್ಯನಿಗೆ ನೀರು ಕುಡಿಸಿ ಟವೆಲ್ಲು ಹೊದಿಸಿ ಸಮಾಧಾನಿಸುವ ಸಮಯದಲ್ಲಿಯೇ ನಾಗನ ಕ್ಷೀಣಧ್ವನಿಯ ಕಿರುಚಾಟ ಇಬ್ಬರಿಗೂ ಕೇಳಿಸಲಿಲ್ಲ, ನಾಗನನ್ನು ಒಂದು ಕೈಲಿ ತಟ್ಟುತ್ತಾ ಗಂಡನಿಗೆ ಆರೈಕೆ ಮಾಡುತ್ತಾ ಇನ್ನು ಕೆಮ್ಮು ನಿಲ್ಲುವುದಿಲ್ಲವೆಂದು ಮನೆಗೆ ಮರಳಲು ಸಿದ್ದರಾದರು. ಮಲಗಿದ್ದ ಮಗನನ್ನು ಭುಜಕ್ಕೆ ಆನಿಸಿ ಮಲಗಿಸಿ ಗದ್ದೆ ತೋಡುಗಳನ್ನು ದಾಟುತ್ತಾ ಗುಡುಲಿಗೆ ಬಂದಳು. ಮಗನನ್ನು ಎಬ್ಬಿಸದೆ ಸೀರೆಯ ತೊಟ್ಟಿಲಲಿ ಅಂಗಾತ ಮಲಗಿಸಿ ತಾನೂ ಒರಗಿಕೊಂಡಳು, ನಾಳೆ ಬೆಳ್ಳಿಕಪ್ಪೆ ದೇವರಿಗೆ ಅರ್ಪಿಸುವುದನ್ನು ನೆನೆದು ಸಂತಸಪಟ್ಟಳು. ಆ ನಂತರ ನಾಗನನ್ನು ಡಾಕಟ್ರು ಬಳಿ ಒಯ್ಯಬೇಕೆಂದೆನಿಸಿ ನಿದ್ದೆಹೋದಳು.

ಲಗುಬಗೆಯಿಂದ ಇಂದು ಆಗಬೇಕಾದ ಕೆಲಸಗಳನ್ನು ನೆನೆದು ಶಾಂತಿ ಎಚ್ಚರವಾಗಿ ಮಗನನ್ನು ಏಳಿಸಲು ಮುಂದಾದಳು. ತಡವಿದಳು, ಕರೆದಳು ನಾಗ ಮಿಸುಕಾಡಲಿಲ್ಲ, ತೊಟ್ಟಿಲಿಂದ ಹೊರತೆಗೆದು ಅಲ್ಲಾಡಿಸಿದಳು, ನೀರು ಚುಮುಕಿಸಿದಳು ಏನೆಂದರೂ ನಾಗ ಓಗೊಡಲಿಲ್ಲ ನಕ್ಷಿಮಿ ಅತ್ತೆ ಪರೀಕ್ಷಿಸಿದರು ದೇಹ ತಣ್ಣಗಾಗಿ ಬಹುಹೊತ್ತು ಕಳೆದಿತ್ತು, ರಾಮಯ್ಯ ಚಾಪೆಯಲ್ಲಿ ಕೆಮ್ಮುತ್ತಲೇ ಇದ್ದ. . . .

-ರಮೇಶ್ ನೆಲ್ಲಿಸರ. ತೀರ್ಥಹಳ್ಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x