ಕಥಾಲೋಕ

ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.


ನಮ್ಮೂರಿನ ಹೆಸರನ್ನು ಒಂದ್ ಬಾರಿ ಹೇಳಿದ್ರೆ ಯಾರ್ಗು ಅರ್ಥಾನೇ ಆಗಲ್ಲ. ‘ಏನೂ .. ಕೊಕ್ಕರೇನಾ ?’ ಅನ್ನೊ ಪ್ರಶ್ನೇನ ಜರೂರು ಕೇಳ್ತಾರೆ. ಮೊದ್ಲು ಮೊದ್ಲು ಹೀಗಿ ಕೇಳಿದ್ರೆ ಕೋಪ ಮಾಡ್ಕೊತಿದ್ದ ನಾನು ಇತ್ತೀಚಿಗಂತು ತಾಳ್ಮೆಯಿಂದಲೆ ‘ಅಲ್ರಿ, ಬೆಕ್ಕರೆ ಅಂತ, ಪುಟ್ಟಣ್ಣ ಕಣ್‍ಗಾಲ್ ಅವರನ್ನ ಕರ್ನಾಟಕಕ್ಕೆ ಕೊಡುಗೆ ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರೊ ಹಳ್ಳಿ ಇದು’ ಅಂತಾನೊ ಇಲ್ಲ …. ‘ನೀವು ಬೈಲುಕುಪ್ಪೆ ಬುದ್ದಿಸ್ಟ್ ಟೆಂಪಲ್‍ಗೆ ಹೋಗೋವಾಗ ಹತ್ತಿರದಲ್ಲಿ ಸಿಗುತ್ತೆ’ ಅಂತಾನೊ, ಕೆಲವೊಮ್ಮೆ ಮೂಡ್ ಇಲ್ದೆ ಇದ್ರೆ, ‘ಬೆಟ್ಟದಪುರದ ಪಕ್ಕ..’ ಎಂದು ಚುಟುಕಾಗಿ ಸಮುಜಾಯಿಸಿ ನೀಡೊ ಕಲೆ ಈಗ ರೂಢಿಯಾದಂತಿದೆ. ಭೂಗೋಳಶಾಸ್ತ್ರಜ್ಞರು ಇದನ್ನು ಟ್ರಾನ್ಸೀಶನಲ್ ಝೋನ್ ಎಂದು ಕಾಂಪ್ಲೆಕ್ಸ್ ಆಗಿ ಅರ್ಥೈಸುತ್ತಾರೆ. ಕಾರಣ ಇಲ್ಲಿನ ವಾತಾವರಣ ಮಲೆನಾಡು, ಕೊಡಗು ಮತ್ತು ಬಯಲುಸೀಮೆ ಮೂರನ್ನು ಮಿಲನಗೊಳಿಸಿದಂತೆ ಕಾಣುವುದು. ಇದರೊಂದಿಗೆ ಕರ್ನಾಟಕದ ತಂಬಾಕು ಕಣಜವೆಂಬ ಕುಖ್ಯಾತಿಯು ಈ ನಮ್ಮ ಪ್ರದೇಶದ್ದು. ಇದೆ ಬೆಕ್ಕರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾನು ಅಆಇಈ ಕಲಿತದ್ದು. ಮಕ್ಕಳು ಪ್ರಕೃತಿಯೊಂದಿಗೆ ಬೆರೆತು ಬೆಳೆಯಲಿ ಎಂಬ ಸದುದ್ದೇಶದಿಂದ ಶಾಲೆಯ ಮುಂದೆ ನಾವೆಲ್ಲ ಸೇರಿ ಬೆಳೆಸಿದ್ದ ಒಂದು ದೊಡ್ಡ ಉದ್ಯಾನವನ ಅಲ್ಲಿ ಈಗಲೂ ಇದೆ. ಕೇವಲ ಕಾಟಾಚಾರಕ್ಕಾಗಿ ಇಲ್ಲ ಮೇಷ್ಟು ಹೇಳಿರುವುದರಿಂದ ಮಾಡಬೇಕು ಎಂಬುದನ್ನು ಇಲ್ಲವಾಗಿಸಲು ಪ್ರತಿಯೊಬ್ಬರಿಗು ಒಂದೊಂದು ಗಿಡವನ್ನು ದತ್ತು ನೀಡುವ ವಿಶೇಷ ಪ್ರಯೋಗಗಳು ಅಲ್ಲಿ ಬಹಳ ಹಿಂದೆಯೆ ನಡೆಯುತ್ತಿದ್ದವು. ಗಿಡವನ್ನು ನೆಟ್ಟು, ಪಾತಿ ಮಾಡಿ, ನೀರು ಗೊಬ್ಬರ ಹಾಕಿ ಪೋಷಿಸಿ ಮೇಲೊಂದು ಹೆಸರಿನ ಬೋರ್ಡು ಹಾಕುವ ಪದ್ಧತಿ ಅಲ್ಲಿ ಜಾರಿಯಲ್ಲಿತ್ತು. ಶಾಲೆಯಲ್ಲಿ ಮಂತ್ರಿ ಮಂಡಲ ಮಾಡಿ ಮುಖ್ಯಮಂತ್ರಿ, ಹಣಕಾಸು, ಆರೋಗ್ಯ, ವಿರೋಧ ಪಕ್ಷದ ನಾಯಕ ಹೀಗೆ ಖಾತೆಗಳನ್ನು ಹಂಚಿ ಜವಾಬ್ದಾರಿಯ ಪ್ರಾಯೋಗಿಕ ಪಾಠವನ್ನು ಯಾವುದೆ ಪಟ್ಟಣದ ಕಾನ್ವೆಂಟ್‍ಗಳಿಗಿಂತಲು ಚೊಕ್ಕವಾಗಿ ಮಾಡಿಸಬಲ್ಲ ಶಿಕ್ಷಕರ ಒಂದು ತಂಡವೇ ಅಲ್ಲಿತ್ತು.

ಇತ್ತೀಚೆಗಷ್ಟೆ ಹೃದಯಾಘಾತದಿಂದ ತೀರಿಕೊಂಡ ರಾಜುಮಾಷ್ಟ್ರು ಅಂದು ನಮಗೆ ಅತ್ಯಂತ ಪ್ರೀತಿಪಾತ್ರರಾದ ಶಿಕ್ಷಕರಲ್ಲೊಬ್ಬರು. ಮಕ್ಕಳಿಗೆ ಇಂಗ್ಲೀಷ್ ಪಾಠ ಮಾಡುತ್ತಾ, ಮಧ್ಯೆ ಬೋರ್ ಆದಾಗ ಕೆಲವೊಮ್ಮೆ ಎಚ್ಚಮನಾಯಕನ ಏಕಪಾತ್ರಾಭಿನಯ ಮಾಡುತ್ತಿದ್ದ ಅವರು ಮತ್ತೆ ಕೆಲವೊಮ್ಮೆ ‘ಭಾರತಿಯರು ನಾವು ಎಂದೆಂದು ಒಂದೆ, ಭಾವೈಕ್ಯದಲ್ಲಿ ಕೂಡಿ ನಡೆಯುವೆವು ಮುಂದೆ….’ ಹಾಡನ್ನು ಅತ್ಯಂತ ರಾಗವಾಗಿ ಹಾಡುತ್ತಿದ್ದರು. ಪಿ.ಇ.ಟೀಚರ್ ಹೊಂದಿರುವಷ್ಟು ಭಾಗ್ಯವಂತರಲ್ಲದ ನಮ್ಮಂತ ಹಳ್ಳಿ ಹೈದರಿಗೆ ಲೆಫ್ಟ್ ರೈಟ್ ಎನ್ನೋದನ್ನ ಕಲಿಸಿದ ಖ್ಯಾತಿಯು ಸಹಾ ಅವರಿಗೇ ಸಲ್ಲಬೇಕು.
ಅಂದು ಸ್ವಾತಂತ್ರ್ಯ ದಿನಾಚಾರಣೆಗೆ ಮುನ್ನ ನಡೆದ ಸ್ಪರ್ಧೆಗಳಲ್ಲಿ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಟ್ಟಿತ್ತು. ರಾಜು ಮಾಷ್ಟರ ಕ್ಲಾಸಿನ ಒಳಗೆ ಬಂದವರೆ ‘ಹಸು’ ಅಥವಾ ‘ರೇಡಿಯೊ’ ಬಗ್ಗೆ ಪ್ರಬಂಧ ಬರೆಯಬೇಕೆಂದು ಅದು ಕನಿಷ್ಟ ಪಕ್ಷ ಹತ್ತು ವಾಕ್ಯದಷ್ಟಾದರು ಇರಬೇಕೆಂದು ಹೇಳಿದರು. ‘ಹಸು’ ಅಂತ ಟೈಟಲ್ ಕೊಟ್ಟು ‘ಹಸು ಹಾಲು ಕೊಡುತ್ತದೆ. ಅದರಿಂದ ಮೊಸರು ಬೆಣ್ಣೆ ತುಪ್ಪ ಮಾಡಬಹುದು. ಹಸು ಸಗಣಿ ಹಾಕುತ್ತದೆ. ಅದರಿಂದ ಗೊಬ್ಬರ ಆಗುತ್ತದೆ.’ ಹೀಗೆ ಕಷ್ಟಪಟ್ಟು ಬರೆದು ಮಧ್ಯದಲ್ಲಿ ಎಣಿಸಿ ಎಣಿಸಿ ಕೊನೆಗೆ ‘ಹತ್ತಾಯ್ತು!’ ಅಂತ ನಿಟ್ಟಿಸಿರು ಬಿಟ್ಟಿದ್ದೆ.

ದಿನಾಚರಣೆಯ ದಿನ ಪ್ರಬಂಧ ವಿಭಾಗದ ಪ್ರಶಸ್ತಿ ವಿತರಿಸುತ್ತಾ, ಮೊದಲನೆ ಬಹುಮಾನ ಎಚ್. ಎಸ್. ಶ್ರೀಧರ್ ಎಂದರು. ಎರಡನೆ ಬಹುಮಾನ ಬಿ.ಸಿ. ಗಿರೀಶ್’ಎಂದಾಗ ಸಂತೋಷ ಆಯಿತಾದರು ಹೆಚ್ಚಿನದಾಗಿ ಆಶ್ಚರ್ಯ ಮನೆಮಾಡಿತ್ತು. ಕಷ್ಟಪಟ್ಟು ನಾನು ಬರೆದಿದ್ದ ಲೇಖನ ಅಷ್ಟಕಷ್ಟೆ ಇತ್ತು. ಆದರೆ ಆಮೇಲೆ ತಿಳಿದಿದ್ದು. ‘ರೇಡಿಯೊ’ ಮೇಲೆ ಶ್ರೀಧರ ಹನ್ನೆರೆಡು ವಾಕ್ಯ ಬರೆದಿದ್ದರೆ, ಹತ್ತರ ಗಡಿ ಮುಟ್ಟಿದ್ದ ಎರಡನೆಯವನು ನಾನೆ ಎಂದು. ಮಿಕ್ಕವರಾರು ಹತ್ತರ ಗಡಿ ದಾಟದ ಕಾರಣ ಮೂರನೇ ಬಹುಮಾನವಾದ ನಟರಾಜ ಪೆನ್ಸಿಲ್ ಯಾರಿಗೂ ಸಿಗದಂತಾಗಿತ್ತು. ಆದರೆ ಕೇವಲ ವಾಕ್ಯಗಳ ಸಂಖ್ಯೆಗಳ ಆಧಾರದಿಂದ ನನಗೆ ಬಹುಮಾನ ಬಂದಿದೆ ಎಂಬುದನ್ನು ನನ್ನ ಅಹಂ ಒಪ್ಪಲಿಲ್ಲ. ಹಸುವಿನ ಮೇಲೆ ಬರೆದಿದ್ದ ಹತ್ತು ವಾಕ್ಯಗಳು ಅತ್ಯಂತ ಉತ್ತಮವಾಗಿದ್ದವೆಂದು, ಶ್ರೀಧರನ ರೇಡಿಯೊ ಲೇಖನಕ್ಕಿಂತ ನನ್ನದು ಚೆನ್ನಾಗಿತ್ತೆಂದು ಸ್ನೇಹಿತರೆದುರು ಬೂರಿ ಬಿಟ್ಟು ಮನಸ್ಸನ್ನು ತಿಳಿಗೊಳಿಸಿಕೊಂಡಿದ್ದೆ.

ಜೇಬಿನಲ್ಲಿದ್ದ ಬಹುಮಾನದ ರೆನಾಲ್ಡ್ಸ್ ಪೆನ್ನನ್ನು ಮನೆಗೆ ಹೋಗಿ ಎಲ್ಲರಿಗು ತೋರಿಸಿ ಬೀಗಿದೆ. ಆದರೆ ಅಜ್ಜಿ ಮನೆಯಲ್ಲಿರಲಿಲ್ಲ. ಕೊಟ್ಟಿಗೆಗೆ ಹೋಗಿ ನೋಡಿದೆ ಅಲ್ಲಿ ಹಾಲು ಕರೆಯುತ್ತಿದ್ದ ಗೌರಮ್ಮಜ್ಜಿ ಬಹುಮಾನ ನೋಡಿ ಮತ್ತಷ್ಟು ಹಿಗ್ಗಿದರು. ಅವರು ಹಸುವಿನ ಕೆಚ್ಚಲಿನ ಮೊಲೆಯನ್ನು ಹಿಡಿದು ಜಗ್ಗುತ್ತಿದ್ದಂತೆ ಪಾತ್ರೆಯಲ್ಲಿ ಹಾಲು ಜರ್ರ್ ಜರ್ರ್ ಎಂದು ತುಂಬುತ್ತಿತ್ತು.
ಅಜ್ಜಿ ಒಳಗೆ ಹೋದವರೆ ಹಾಲನ್ನು ಕಾಯಿಸಿ ದೊಡ್ಡ ಗ್ಲಾಸಿನಲ್ಲಿ ಹಾಕಿ ಕುಡಿಯಲು ಕೊಟ್ಟರು. ಮಿಕ್ಕ ಹಾಲನ್ನು ಕ್ಯಾರಿಯರ್‍ನಲ್ಲಿ ಹಿಡಿದು ಡೈರಿಗೆ ಹಾಲು ಹಾಕಲು ಹೊರಡುತ್ತಾ, ಈ ತಿಂಗಳು ದುಡ್ಡು ಬಂದಾಗ ನನ್ನ ಬಹುದಿನಗಳ ಬೇಡಿಕೆಯಾದ ಅಟೋಮೆಟಿಕ್ ವಾಚನ್ನು ಕೊಡಿಸುವುದಾಗಿ ಆಶ್ವಾಸನೆ ಕೊಟ್ಟರು. ಬಸವೇಶ್ವರ ದೇವಸ್ಥಾನದ ಮುಂದೆ ರಸ್ತೆ ಕ್ರಾಸ್ ಮಾಡಿ ಡೈರಿಯಲ್ಲಿ ಹಾಲು ಹಾಕಿ ವಾಪಸ್ ಮನೆಕಡೆ ಹೊರಟಾಗ ಮೋಡ ಕವಿದಿದ್ದ ಮುಗಿಲಿನಿಂದ ‘ಢಂ’ ಎಂಬ ಸಿಡಿಲಿನ ಶಬ್ದ ಬಂತು. ಟಪಟಪನೆ ಬೀಳುತ್ತಿದ್ದ ಮಳೆಯ ಹನಿಗಳ ನಡುವೆ ಒಂದು ಕೈಯಲ್ಲಿ ಛತ್ರಿ ಹಿಡಿದು ಇನ್ನೊಂದರಲ್ಲಿ ಹಾಲಿನ ಖಾಲಿ ಪಾತ್ರೆಯನ್ನು ಜೊತೆಗೆ ನನ್ನ ಕೈಯನ್ನು ಅಜ್ಜಿ ಹಿಡಿದು ನಡೆಯುತ್ತಿದ್ದರು.

ಅಷ್ಟರಲ್ಲಿ ಒಂದು ದೊಡ್ಡ ಎತ್ತನ್ನು ಹಿಂದೆ ಮುಂದೆ ಕಾಲನ್ನು ಕಟ್ಟಿ, ಅವೆರೆಡನ್ನು ಕಂಬಕ್ಕೆ ಸಮನಾಂತರವಾಗಿ ಸೇರಿಸಿ ತಲೆ ಕೆಳಮುಖವಾಗಿ ನಾಲ್ಕು ಜನ ಕಾಲೋನಿಯವರು ಹೊತ್ತುಕೊಂಡು ಹೋಗುತ್ತಿದ್ದರು. ಮಳೆಯಲ್ಲಿ ನೆನೆದು ಒದ್ದೆಯಾಗಿದ್ದವರನ್ನು ಕಂಡು ಈ ಹೊತ್ತಿನಲ್ಲು ಇವರು ಹೀಗೆ ಆಟ ಆಡುತ್ತಾ ಇದ್ದಾರಲ್ಲ ಎಂದು ಅಜ್ಜಿಗೆ ಕೇಳಿದೆ.
‘ಅಜ್ಜಿ, ಆ ಹಸುವಿಗೆ ಏನಾಗಿದೆ? ಅವರೇಕೆ ಹೊತ್ತಿಕೊಂಡು ಆಟ ಆಡ್ತಾ ಇದ್ದಾರೆ?’
‘ಅದು ಹಸು ಅಲ್ಲ, ಎತ್ತು. ಸತ್ತೋಗಿರದ್ರಿಂದ ಚರ್ಮ ಸುಲಿದು ತಕ್ಕೊಂಡು ಮಿಕ್ಕ ಶರೀರವನ್ನು ಬಿಸಾಕೋಕೆ ಎತ್ಕೊಂಡ್ ಹೋಗ್ತಾ
ಇದ್ದಾರೆ’
‘ಅಯ್ಯೊ ಪಾಪ, ಅದಕ್ಕೆ ಯಾಕೆ ಗುದ್ದ ಮಾಡಲ್ವ?’
‘ಪ್ರಾಣಿಗ್ ಯಾರ್ ಮಾಡ್ತಾರೊ ಮಾರಾಯ, ಮನುಷ್ಯರಿಗೇ ಹೂಳಾಕ್ ಜಾಗ ಇಲ್ಲ’
‘ಅಜ್ಜಿ, ಪ್ರಾಣಿ ಚಿಕ್ಕದಿದ್ರೆ ಮಾಡ್‍ಬಹುದಾ’
‘ನಿನ್ ತಲೆ, ನೀನ್ ಬೇಕಾದ್ರೆ ಮಾಡು, ಚಿಕ್ ಪ್ರಾಣಿ ಅಂದ್ರೆ ಕುರೀನಾ, ಕೋಳೀನಾ?’
ಅಷ್ಟರಲ್ಲಿ ಮಳೆನೀರಲ್ಲಿ ಮಿಂದಿದ್ದ ಪುಟ್ಟ ಕಪ್ಪೆ ಮರಿಯೊಂದು ಚಂಗನೆ ನನ್ನ ಕಾಲ ಮೇಲೆರಗಿತು. ತಕ್ಷಣ ಯೋಚನೆ ಮಾಡದೆ
ಅಜ್ಜಿಯನ್ನು ಕೇಳಿದೆ.
‘ಕಪ್ಪೆ?’
ಅಜ್ಜಿ ನಗು ತಡೆಯಲಾರದೆ ನಕ್ಕರು. ನನಗೆ ನಗು ಬರಲಿಲ್ಲ.
***

ಬಹುಶಃ ಆಗ ನಾನು ಮೂರನೆ ತರಗತಿಯಲ್ಲಿರಬಹುದು. ತಾರೀಖು ಅಕ್ಟೋಬರ್ 2 ಎಂಬುದಂತು ಕರಾರುವಕ್ಕಾದುದು. ಏಕೆಂದರೆ ಆ ದಿನ ಗಾಂದಿಜಯಂತಿ. ರಾತ್ರಿ ಪೂರಾ ಮಲಗದೆ ರಿಹರ್ಸಲ್ ಮಾಡಿದ್ದ ‘ಒಳುಮೆ ಮುಂದೆ ಇನ್ನು ಯಾವುದೂ ಇಲ್ಲ, ಇನ್ನು ನಮ್ಮ ಕಷ್ಟಕ್ಕೆ ಅರ್ಥವೇ ಇಲ್ಲ… ’ ಸುಗ್ಗಿಯ ಕುಣಿತ ರಾಜು ಮಾಸ್ತರ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿ ಸಾಂಸ್ಕøತಿಕ ಕಾರ್ಯಕ್ರಮಗಳ ಹೈಲೈಟ್ ಆಗಿ ಬಾರಿ ಕರತಾಡನ ಗಿಟ್ಟಿಸಿತ್ತು. ಜೊತೆಗೆ ರಾಷ್ಟ್ರಪಿತನ ಹುಟ್ಟುಹಬ್ಬಕ್ಕೆ ನಾ ಹಾಡಿದ ‘ಪುಣ್ಯಾತ್ಮ ಗಾಂಧೀಜೀ ಕರ್ಮಯೋಗಿ ಬಾಪೂಜಿ’ ಹಾಡು ಸೆಂಟಿಮೆಂಟೆಲ್ ಟಚ್ ನೀಡಿ ಭಾವಪೂರ್ಣತೆಗೆ ಸಾಕ್ಷಿಯಾಯಿತು. ಕಾರ್ಯಕ್ರಮ ಮುಗಿದ ಮೇಲೆ ಇನ್ನರ್ಧ ದಿನ ಕಳೆಯಲು, ಜೊತೆಗೆ ದಸರಾ ರಜೆ ಸವಿಯಲು ಅಜೆಂಡಾ ತಯಾರಿಸುತ್ತಿದ್ದ ತಂಡಕ್ಕೆ ಹೊಸಹೊಸ ಯೋಜನೆಗಳ ಬೃಹತ್ ಪಟ್ಟಿಯೇ ಸಿದ್ಧಗೊಳ್ಳುತ್ತಿತ್ತು.

ಬಲಾಢ್ಯ ಭೀಮನಂತಿದ್ದ ಗುಡಿಹಟ್ಟಿ ಹರೀಶನದ್ದು ಯಾವಾಗಲೂ ಸಾಹಸ ಪ್ರಧಾನ ಯೋಚನೆ.
‘ದೊಡ್ಕೆರೆ ತುಂಬೈತೆ, ಊಟ ಮಾಡಿ ಹೊರಡುವ್ಹಾ, ಈಜ್ ಬರ್ದಿದ್ದೋರಿಗೆಲ್ಲ ನಾ ಟೂಬಲ್ಲಿ ಗಾಳಿ ತುಂಬೂಸ್ಕೋಂಡ್ ಬರ್ತೀನಿ, ಸಂಜೆವರ್ಗೆ ನೀರಲ್ಲೆ ಇರೋವ’.
ಹರೀಶನ್ದು ಮುಗಿದೇ ಇರಲಿಲ್ಲ, ವಿಷ್ಣುವರ್ಧನ್ ಅಭಿಮಾನಿ ಮನೋಹರ ‘ನೀವೆಲ್ಲಾದ್ರು ಹಾಳಾಗಿ ಹೋಗಿ, ನಾ ಮಾತ್ರ ಜನನಾಯಕ ಪಿಕ್ಚರ್‍ಗೆ ಬೆಟ್ಟದಪುರ ಟೆಂಟ್‍ಗೆ ಹೋಗ್ತಾ ಇದ್ದೀನಿ’ ಎಂದು ಮೂಗೊರಿಸಿಕೊಂಡು ಎದ್ದೇ ಹೋದ.

ಸದಾ ಹಳೇ ಬಲ್ಬ್‍ಗಳಲ್ಲೆ ಆಟ ಆಡ್ತಿದ್ದ ಮೀಸೆ ಸಣ್ಣಸ್ವಾಮಣ್ಣನ ದಿನೇಶ ‘ಲೋ, ಹೊಸಮಣ್ಣು ಕೆರೆಗೆ ತುಂಬ್‍ಕೊಂಡಿರೊದ್ರಿಂದ ಈಜ್ ಹೊಡೆಯೊ ಐಡಿಯ ಸೇಫ್ ಅಲ್ಲ, ಒಂದ್ ಕೆಲ್ಸ ಮಾಡಿ, ಬಣ್ಣದ ನೀರ್ ತನ್ನಿ ಫಿಕ್ಚರ್ ಮಾಡೋವ’ ಎಂದಾಗ ಅದರ ಹಿಂದಿನ ವರ್ಷವೇ ಕಾಲು ಜಾರಿ ಕೆರೆಗೆ ಬಿದ್ದು ಈಜು ಬಾರದ್ದರಿಂದ ಸತ್ತಿದ್ದ ಮುರುಳಿಯ ನೆನಪಾಯ್ತು. ಮೀನುಗಳು ತಿಂದುಹಾಕಿ ಅರ್ಧ ಉಳಿದಿದ್ದ ಆ ಶವದ ದೃಶ್ಯ ಗೆಳೆಯನನ್ನು ಕಳೆದುಕೊಂಡ ದುಃಖವನ್ನು ಮೀರಿಸುವಷ್ಟು ಭೀಭತ್ಸ ಅನುಭವ ನೀಡಿತ್ತು. ಜೊತೆಗೆ ಮಳೆಗಾಲದಲ್ಲಿ ಈಜಲು ಹೋದರೆ ಮನೆಯವರ ಬೈಗುಳ ಗ್ಯಾರಂಟಿ ಅಂತ ಕಂಪ್ಲೀಟಾಗಿ ಡ್ರಾಪ್ ಮಾಡಿದ್ವಿ. ಆದರೆ ಹಳೆಯ ಬಲ್ಬಲ್ಲಿ ಬಣ್ಣದ ನೀರು ಹಾಕಿ ಟಾರ್ಚ್ ಬಿಟ್ಟು ಕತ್ತಲೆ ರೂಮಲ್ಲಿ ಮಿಂಚಿಸುತ್ತಿದ್ದ ದಿನೇಶನ ಪ್ರಯೋಗ ನೋಡಿ ನೋಡಿ ಬೋರ್ ಆಗಿದ್ದರಿಂದ ಅವನ ಬಣ್ಣದ ನೀರಿನ ಪ್ಲಾನ್ ವಿಶೇಷ ಆಸಕ್ತಿಯನ್ನೇನು ಹುಟ್ಟುಹಾಕಲಿಲ್ಲ. ಅಕ್ಬರ್ ಬೀರಬಲ್ಲನ ಕತೆ ಓದೋಣ ಎಂದ ಐನೋರ ಶಂಕರನನ್ನು ಎಲ್ಲರು ಒಕ್ಕೊರೆಲಿನಿಂದ ರಿಜೆಕ್ಟ್ ಮಾಡಿದ್ದಾಯ್ತು. ಶಂಕರನ ಅವಳಿ ತಮ್ಮ ಗುರು ತನ್ನ ತುಟಿಗಳ ಮದ್ಯೆ ಫೆವಿಕಾಲ್ ಜೋಡಣೆಯನ್ನು ಖಾತ್ರಿಪಡಿಸಿ ಯಾರು ಏನೇ ಹೇಳಿದ್ರೂ ಹೌದು ಅಥವಾ ಇಲ್ಲ ಎರಡನ್ನು ಅನ್ವಯಿಸುವ ಸನ್ನೆ ಮಾಡುತ್ತಾ ಕುಳಿತಿದ್ದ. ಇನ್ನು ಉಳಿದಿದ್ದು ನಾಡ್ನೋರ್ ಲೋಕ ಮತ್ತು ನಾನು. ನಾವಿಬ್ಬರು ಇನ್ನು ಯಾವ ನಿರ್ಧಾರಕ್ಕೆ ಬಂದಿಲ್ಲ ಎಂಬುದನ್ನು ಅರಿತ ಹರೀಶ, ಬ್ಯಾಗ್‍ನಲ್ಲಿದ್ದ ಹಲಸಿನ ಹಣ್ಣಿನ ತೊಳೆಯೊಂದನ್ನು ಆರು ಭಾಗ ಮಾಡಿ ಎಲ್ಲರಿಗು ಒಂದೊಂದು ಕೊಟ್ಟು ಬೀಜಕ್ಕೆ ಅಂಟಿಕೊಂಡಿರುವ ಹಣ್ಣನ್ನು ಹೆಚ್ಚುವರಿಯಾಗಿ ತನ್ನಲ್ಲೆ ಇಟ್ಟುಕೊಂಡ.

ಗಂಟೆ ಮಧ್ಯಾಹ್ನ ಎರಡಾದರು ನಮ್ಮ ಜಿಜ್ಞಾಸೆ ಮುಂದುವರೆದಿತ್ತು. ಹಬ್ಬಕ್ಕೆಂದು ಸ್ಕೂಲಿನಲ್ಲಿ ನೀಡಿದ್ದ ಸ್ಪೆಷಲ್ ಚಿತ್ರಾನ್ನ ಹೊಟ್ಟೆಯನ್ನು ಚುರ್ ಎನ್ನದಂತೆ ನೋಡಿಕೊಳ್ಳುತ್ತಿತ್ತು. ಸೀಗೆಕೊರೆ ಕಾವಲು ಎಂಬ ಪುಟ್ಟ ಹಳ್ಳಿಯೊಂದು ನಮ್ಮೂರಿನ ಹೊಲಗಳ ಹತ್ತಿರ ಇದೆ. ಬಾರಿ ಜಮೀನ್ದಾರರಂತೆ ಇರುವ ನಾಗಭೂಷಣಾರಾಧ್ಯರ ಮನೆಯಲ್ಲಿದ್ದ ಬ್ಲಾಕ್ ಅಂಡ್ ವೈಟ್ ಟಿ.ವಿ. ಐದಾರು ಊರಿನ ಜನರ ಕೇಂದ್ರಾಸಕ್ತಿಯ ವಸ್ತುವಾಗಿದ್ದ ಕಾಲವದು. ಶನಿವಾರ ಸಂಜೆ ಪ್ರಸಾರವಾಗುತ್ತಿದ್ದ ಕನ್ನಡ ಫಿಲ್ಮ್‍ಗೆ ಹೋಗೋಣವೆ ಅಂತ ನಾ ಹೇಳಿದಾಗ ಸುಮಾರಿಗೆ ಓಕೆ ಎಂದೆನಿಸಿ ಸಹಪಾಠಿಗಳೆಲ್ಲ ಎದ್ದು ನಿಂತರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕೆಳಗೆ ಬಿದ್ದಿದ್ದ ವಸ್ತುವೊಂದು ಕಣ್ಣಿಗೆ ಗೋಚರವಾಯಿತು!

ಅದು ಚಿನ್ನದ ಬಳೆಯಾಗಿದ್ದರು ನಾವು ಅಷ್ಟೊಂದು ಕುತೂಹಲ ತಾಳುತ್ತಿರಲಿಲ್ಲವೇನೊ. ಅಲ್ಲಿ ಬಿದ್ದಿದ್ದಿದು ಜೀವ ಕಳೆದುಕೊಂಡಂತೆ ಅಂಗಾತ ಮಲಗಿದ್ದ ಒಂದು ಕಪ್ಪೆ!. ಐದು ನಿಮಿಷ ಕಳೆದರು ಕೊಂಚವೂ ಅಲುಗಾಡದ ಕಾರಣ ಅದು ಸತ್ತಿರಬಹುದೆಂದು ನಿರ್ಧರಿಸಿದೆವು. ದೊಡ್ಡವರಾಗಿದ್ದರೆ ಕಾಲಿನಿಂದ ನೂಕಿ ತಮ್ಮ ದಾರಿ ಹಿಡಿಯುವಂತ ಒಂದು ಸರ್ವೆಸಾಮಾನ್ಯ ಸಂಗತಿಯಾಗಬೇಕಾದುದು ಪುಂಡ ಹುಡುಗರ ಪಾಲಿಗೆ ಮಹತ್ತರವಾದ ಯೋಜನೆಯೊಂದಕ್ಕೆ ಅದು ಪ್ರೇರೇಪಿಸಿತು.
‘ಇದು ಸತ್ತಿದ್ದಾದರೂ ಏಕೆ?’, ‘ಇದರ ತಾಯಿ ತಂದೆ, ಬಂಧು ಬಳಗ ಎಲ್ಲಿ ಹೋದರು?’, ‘ಮನುಷ್ಯ ಸತ್ತರೆ ಪೂಜೆ ಮಾಡಿ ಮೆರವಣಿಗೆ ಕರೆದೊಯ್ದು ಹೂಳುವ ಜನ ಸತ್ತ ಪ್ರಾಣಿಗಳನ್ನೇಕೆ ಕಾಲಿನಿಂದ ನೂಕಿ ಮುಂದೆ ಹೋಗುತ್ತಾರೆ?’ ಪ್ರತಿಯೊಬ್ಬರು ತಾವೊಬ್ಬ ವಿಜ್ಞಾನಿಯಂತೆ, ಸಮಾಜಶಾಸ್ತ್ರಜ್ಞನಂತೆ, ಮಹಾನ್ ವೇದಾಂತಿಗಳಂತೆ ತಮಗನಿಸಿದ್ದನ್ನು ಮಂಡಿಸಿ ಮುಖ ಮುಖ ನೋಡಿಕೊಂಡೆವು. ಈ ಮದ್ಯೆ ಭಾವನಾರಹಿತ ಅಂತಾನೆ ಖ್ಯಾತಿಯಾಗಿದ್ದ ಗುರು ಸತ್ತ ಜೀವಿಯನ್ನು ಎತ್ತಿ ಅಂಗೈ ಮೇಲೆ ಹಾಕಿಕೊಂಡು ‘ಬಾಯ್
ತುದಿಯಲ್ಲಿ ರಕ್ತ ಐತೆ, ಮೋಸ್ಲಿ ಯಾರೋ ತುಳ್‍ದವ್ರೆ ಕಣ್ರೊ’ ಎನ್ನುತ್ತಾ ಅದರ ಮೈ ಸವರಿದ. ‘ಈ ಸತ್ತ ಕಪ್ಪೆಯನ್ನ ಏನ್ ಮಾಡೋಣ?’ಹರೀಶನ ಪ್ರಶ್ನೆಗೆ ಹಿಂದು ಮುಂದು ನೋಡದೆ ಉತ್ತರಿಸಿದ ದಿನೇಶ ‘ಏನ್ ಮಾಡೋಣ ಅಂದ್ರೆ ಎಲ್ಲ ಸೇರಿ ದಫನ್ ಮಾಡೋಣ’ ಅಂದ.

ಕಪ್ಪೆ ಸತ್ತ ತಿಂಗಳ ಹಿಂದೆಯಷ್ಟೆ ದೊಡ್ಡಜ್ಜಿ ತೀರಿಕೊಂಡಿದ್ದಾಗ ದಫನ್ ಅಂದ್ರೆ ಏನು ಅಂತ ಸ್ವಲ್ಪ ತಿಳ್ಕೊಂಡಿದ್ದೆ. ಸತ್ತವರನ್ನು ಬೀದಿಯಲ್ಲಿ ನೀರು ಕಾಯ್ಸಿ, ಮರೆಮಾಡಿ ಸ್ನಾನ ಮಾಡಿಸೋದು, ಆಮೇಲೆ ಮಡಿ ಬಟ್ಟೆ, ಹೂವಿನ ಹಾರ ಹಾಕಿ ಪೂಜೆ ಮಾಡಿ ಮೆರವಣಿಗೆ ಮಾಡ್ಸಿ ಊರಾಚೆ ಇರೊ ದೊಡ್ಕೆರೆ ಬಯಲಿನಲ್ಲಿ ಹೂತೋ ಇಲ್ಲ ಸುಟ್ಟೊ ಬರಾದು ಅಂತ. ಸಣ್ಣ ಮಕ್ಳುಗೆ ಅಲ್ಲಿ ಪ್ರವೇಶ ಇಲ್ದೆ ಇದ್ರು ಕದ್ದು ಮುಚ್ಚಿ ಟೀಮ್‍ನೊಂದಿಗೆ ಪ್ರೋಸೆಸ್‍ಗಳನ್ನೆಲ್ಲಾ ಚೆನ್ನಾಗಿ ಅಬ್ಸರ್ವ್ ಮಾಡಿರ್ತಿದ್ವಿ.

‘ಮೊದ್ಲು ಇದ್ಕೆ ಸ್ನಾನ ಮಾಡ್ಸೊವ’ ಶಂಕರ ಹೇಳಿದ್ದೆ ತಡ, ಗುರು ಒಂದು ಎಳನೀರು ಬುರುಡೆ ತಕೊಂಡು ಹತ್ತಿರದಲ್ಲೆ ಇದ್ದ ಕೆರೆ ಹತ್ರ ಹೊರಟ. ಬಹಿರ್ದೆಸೆಗೆ ಹೋಗೋರಿಗೆ, ದನಗಳಿಗೆ ನೀರು ಕುಡಿಸೋರಿಗೆ ಮತ್ತು ಬಟ್ಟೆ ಒಗೆಯೋರಿಗೆ ಮಲ್ಟಿಪರ್‍ಪಸ್ ಪಾಂಡ್ ಆಗಿದ್ದ ಆ ಕೆರೆಗೆ ಅದ್ಯಾವ ಪುಣ್ಯಾತ್ಮ ಚಂದ್ರನ ಕಟ್ಟೆ ಅಂತ ಹೆಸರಿಟ್ನೊ ಅಂತ ನಾವು ಹಲವು ಬಾರಿ ತಲೆಕೆಡಿಸಿಕೊಂಡಿದ್ದುಂಟು.
ಈ ಮದ್ಯೆ ಸುಂದ್ರಣ್ಣನ ಲೋಕ ‘ಬಂದೆ ಇರ್ರೊ’ ಅನ್ನುತ್ತಾ ಮನೆ ಕಡೆ ಓಡಿ ಹೋದ. ಎಳನೀರು ಬುರುಡೇಲಿ ಎರಡು ಬಾರಿ ಕಪ್ಪೇನ ತೊಳೆದಾಯ್ತು. ಯಾರದೋ ತಿಪ್ಪೆಯಲ್ಲಿ ಸುರಿದಿದ್ದ ಬೂದಿಯನ್ನು ಅದರ ಮೈ ಮೇಲೆ ಬಳಿದೆವು. ಅಲ್ಲೆ ಬಿದ್ದಿದ್ದ ಹಳೆ ಟವೆಲ್ ಒಂದನ್ನ ನಾಲ್ಕು ಕಿಂಡಿ ಮಾಡಿ ಕಾಲುಗಳನ್ನು ತೂರಿಸಿ ಗಂಟು ಹಾಕಿದೆವು. ಆಪರೇಷನ್ ಆದ ನಾಯಿಗಳಿಗೆ ನಾವು ಡ್ರೆಸಿಂಗ್ ಮಾಡೋ ಹಾಗೆ. ಆಟಕ್ಕೆಂದು ಇಟ್ಟುಕೊಂಡಿದ್ದ ಸೀಮೆಸುಣ್ಣದ ಡಬ್ಬಿಗೆ ಕಾಚಿಕಾಯಿಗಳನ್ನು ಚಕ್ರಮಾಡಿ ಹಾಕಿ ಕಪ್ಪೆರಾಯನ ಮೆರವಣಿಗೆಗೆ ಸಿದ್ಧಪಡಿಸಿಕೊಂಡೆವು. ಟೈರ್ ಹೊಡೆಯುತ್ತಾ ನಿಟ್ಟುಸಿರು ಬಿಟ್ಕೊಂಡು ಅಷ್ಟೊತ್ತಿಗೆ ಬಂದ ಲೋಕ ಎಡ ಕೈಯಿಂದ ಅರ್ಧ ಮೊಳ ಮಲ್ಲಿಗೆ ಹೂವನ್ನು ಜೋಪಾನವಾಗಿ ಕಪ್ಪೆರಾಯನ ಮೇಲೆ ಮುಡಿಸಿದ. ಕಪ್ಪೆ ದೊಡ್ಡದಾಗಿತ್ತಾದರು, ಹೂವಿನ ಒಳಗೆ ಬಹುತೇಕ ಮುಚ್ಚೇಹೋಯಿತು.
‘ಕಪ್ಪೆರಾಯನಿಗೆ’ ‘ಜೈ’ ಅಂತ ಘೋಷಣೆ ಕೂಗುತ್ತಾ ಆ ದಿನ ಬೆಳಿಗ್ಗೆ ಗಾಂಧೀಜಿಯನ್ನ ಪೂಜೆ ಮಾಡಿದ್ದ ಧ್ವಜ ಸ್ತಂಭದವರೆಗೆ ಮೆರವಣಿಗೆ ಹೊರಟೆವು. ಈ ವೇಳೆಗಾಗಲೆ ನಮ್ಮ ಚಟುವಟಿಕೆಗಳನ್ನು ದೂರದಿಂದಲೆ ಗಮನಿಸುತ್ತಾ ಇದ್ದ ಇನ್ನಷ್ಟು ಚೋಟುದ್ದ ಹುಡುಗರು ಕುತಾಹಲ ತಡೆಯಲಾರದೆ ಹತ್ತಿರ ಬಂದು ನಿಂತರು. ಕಂಬದ ಪಕ್ಕ ಅರ್ಧ ಅಡಿ ಗುಂಡಿ ಮಾಡಿ ಕಪ್ಪೆರಾಯನ ಒಳಗಿಟ್ಟು ಮಣ್ಣುಮುಚ್ಚಿ ಮೇಲೊಂದು ಸಣ್ಣ ಗುಡ್ಡೆ ಮಾಡಿದೆವು. ಟೀಚರ್ಸ್‍ಗೆ ಗೊತ್ತಾಗೋದು ಬೇಡ ಅಂತ ಸಮಾಧಿಯ ಮೇಲೆ ಬೋರ್ಡ್ ಹಾಕೋ ಐಡಿಯಾನ ಕ್ಯಾನ್ಸಲ್ ಮಾಡಿದೆವು. ಜೂನಿಯರ್ ಹುಡುಗ್ರಿಗೆ ಯಾರಿಗು ಹೇಳಕೂಡದೆಂದು ಎಚ್ಚರಿಕೆ ಕೊಟ್ಟು ಏನೋ ಘನಂದಾರಿ ಕಾರ್ಯ ಸಾಧಿಸಿದವರಂತೆ ಮನೆಯತ್ತ ಹೆಜ್ಜೆ ಇಡತೊಡಗಿದೆವು. ಆಗಲೆ ಸೂರ್ಯ ಮುಳುಗುವ ಹೊತ್ತಾಗಿತ್ತು. ಏನೋ ಮರೆತವನಂತೆ ತಕ್ಷಣ ಜ್ಞಾಪಿಸಿಕೊಂಡು ಹೇಳಿದೆ. ‘ಅಲ್ರೊ ಯಾರೊಬ್ಬರು ಅಳ್ಲೇ ಇಲ್ವಲ್ಲ!’ ಅಂದೆ.
ತಕ್ಷಣವೇ ಎಲ್ಲರು ಕೃತಕವಾಗಿ ಅಳಲಾರಂಭಿಸಿದರು.

ರಾಜಕಾರಣಿಯೊಬ್ಬರು ಗಾಂಧೀಜಿಯವರ ಅಹಿಂಸಾತತ್ವದ ಬಗ್ಗೆ ಆ ದಿನ ಬೆಳಿಗ್ಗೆ ಭಾಷಣ ಬಿಗಿಯುತ್ತಿದ್ದಾಗ ನಿದ್ರೆ ಮಾಡುತ್ತಿದ್ದ ಹರೀಶ ಹೆಡ್‍ಮಾಸ್ತರ ಕೈಲಿ ಬೆತ್ತದ ಏಟು ಸರಿಯಾಗಿ ತಿಂದಿದ್ದ. ಆದರೆ ಕಪ್ಪೆಯ ಅಂತಿಮ ಯಾತ್ರೆ ಮುಗಿದ ಮೇಲೆ ನಾವೆಲ್ಲರು ಕೃತಕವಾಗಿ ‘ಹೋ’ ಎಂದು ಅಳುತ್ತಿದ್ದರೆ ಅವನ ಕಣ್ಣಗಳು ಮಾತ್ರ ನಿಜವಾಗಿಯೂ ಒದ್ದೆಯಾಗಿದ್ದವು. ಅದು ಕಪ್ಪೆ ಸತ್ತದ್ದಕ್ಕೆ ದುಃಖ ಮೂಡಿ ಹುಟ್ಟಿದ ಅಳುವೊ ಇಲ್ಲ ಬೆಳಿಗ್ಗೆ ತಿಂದಿದ್ದ ಏಟಿನ ನೆನಪಾಗಿ ಅತ್ತನೊ ಮಿಕ್ಕವರಿಗ್ಯಾರಿಗೂ ಸರಿಯಾಗಿ ಅರ್ಥವಾಗಲಿಲ್ಲ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.

Leave a Reply

Your email address will not be published. Required fields are marked *