ಕಪ್ಪು ಚಿಮಣಿಯ ಹಿಂದೆ ಕಳೆದು ಹೋದ ಗೆರೆಗಳು: ಸಚೇತನ

ಬರ್ಲಿನ್ ನಗರದ ಎಲ್ಲ ರಸ್ತೆಗಳಲ್ಲಿ 'ಬ್ರೂನೋ' ಎನ್ನುವ ಪುಟ್ಟ ಬಾಲಕ ಮತ್ತವನ ಗೆಳೆಯರ  ಗಾಡಿ ಹಾದು ಹೋಗುತ್ತದೆ. ಮಳೆ ಸುರಿದ ಬೀದಿಗಳಲ್ಲಿ, ಮಹಿಳೆಯರು ಮತ್ತವರ ಪುರುಷರು ಆರಾಮವಾಗಿ ಚಹಾ ಹೀರುತ್ತಿರುವ ಕೆಫೆಗಳ ಬಳಿ, ಹೊಸದಾಗಿ ತಂದ ಕೈ ಚೀಲದಂತ ಬಟ್ಟೆ ಧರಿಸಿದ ಸೈನಿಕರನ್ನು ಹೊತ್ತು ಕುಳಿತ ಮೋಟಾರಿನ ಬಳಿ,  ಬಟ್ಟೆ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ ಬೊಂಬೆಯಂತೆ ಒಂದೆ ಸಮನೆ ನಿಂತೆ ಇರುವ ದ್ವಾರಪಾಲಕರ ಬಳಿ  ಹಾದು ಮನೆಯ  ಎದುರು ಗೆಳೆಯರನ್ನು ಬೀಳ್ಕೊಟ್ಟು ಕೈ ತೋಟದ ಮೂಲಕ ಮನೆ ಸೇರುತ್ತದೆ.  'ಬ್ರೂನೋ ' ನ ಮನೆಯಲ್ಲಿ ಇವತ್ತು ಹಬ್ಬದ ವಾತಾವರಣ. ಸಮಾರಂಭವೊಂದಕ್ಕೆ ಎಲ್ಲರೂ  ಸಿದ್ಧರಾಗುತ್ತಿದ್ದಾರೆ  ಬ್ರೂನೋನ ತಂದೆಗೆ  ಸೈನ್ಯದಲ್ಲಿ ಉನ್ನತ ಹುದ್ದೆಗೆ ಬಡ್ತಿ ದೊರಕಿದೆ. ಬಡ್ತಿ ಆದ ಮೇಲೂ ತಂದೆ ಸೈನಿಕನೆ ಆಗಿರುತ್ತಾನೆಯೇ ಎನ್ನುವ  ಪ್ರಶ್ನೆಯನ್ನು ಪುಟ್ಟ  ಬ್ರೂನೋ  ಅಮ್ಮನನ್ನು ಕೇಳಿದ್ದಾನೆ.  ಬ್ರೂನೋನ ಅಪ್ಪನ ಬಡ್ತಿಯಿಂದಾಗಿ ಅವರು ಬರ್ಲಿನ್ ನಗರದಿಂದ ಬಲುದೂರದಲ್ಲಿರುವ ಗ್ರಾಮಾಂತರ ಪ್ರದೇಶಕ್ಕೆ ಹೊರಡಬೇಕಾಗಿದೆ. ಆದರೆ ಬ್ರೂನೊಗೆ ತನ್ನ ಗೆಳೆಯರಾದ ಕಾರ್ಲ್, ಲಿಯೋನ್ ಹಾಗೂ ಮಾರ್ಟಿನ್ ಇವರನ್ನು ಬಿಟ್ಟು ಹೋಗುವದು ಅಷ್ಟೇನೂ ಒಪ್ಪಿತವಿಲ್ಲ. 

ಹೊರಡುವ ದಿನ ಕಾರಲ್ಲಿ ಕೂತ ಬ್ರೂನೋ ಮತ್ತವನ ಪರಿವಾರವನ್ನು  ಹಿಂಭಾಲಿಸಿ ಓಡಿ ಬರುವ ಕಾರ್ಲ್, ಲಿಯೋನ್ ಹಾಗೂ ಮಾರ್ಟಿನ್ ಅವರ ಪುಟ್ಟ ಕಾಲುಗಳಿಗೆ ಕಾರಿನ ಚಕ್ರದ ರಭಸದ ಜೊತೆಗೆ ಹೊಂದಿಕೆಯಿಲ್ಲ. ಗೆಳೆಯರ ಜೊತೆಗೆ ಬರ್ಲಿನ್, ಬೆಳೆದ ಮನೆ, ಓಡಾಡಿದ ರಸ್ತೆ, ಬೀದಿ, ಕೈತೋಟ ಎಲ್ಲವೂ ಮರೆಯಾಗುತ್ತಿದೆ. 

ಆಕಾಶದೆತ್ತರಕ್ಕೆ ಮುಖ ಮಾಡಿದ ಹೆಂಚಿನ ಕಾರ್ಖಾನೆಯ ಚಿಮಣಿಯನ್ನೆ ಗುತ್ತಿಗೆ ತೆಗೆದುಕೊಂಡಂತ ರೈಲಿನಲ್ಲಿ ಕುಳಿತು  ಬ್ರೂನೋ ನ ಅಕ್ಕ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದ್ದಾಳೆ.  ಬಿಟ್ಟು ಬಂದ ಮನೆಯ ಕನವರಿಕೆಯಲ್ಲಿರುವಾಗಲೇ ಹೊಸ ಮನೆಯ ಮುಂದೆ ಬಂದಾಗಿದೆ. ಬೃಹದಾಕಾರದ  ಮಾಸಿದ ಕಟ್ಟಡ ದೊಳಗೆ ಅಪ್ಪ ಕೆಲಸ ಮಾಡುತ್ತಿರುವ ನಾಜಿ ದಳದ ಸೈನಿಕರು ಓಡಾಡುತ್ತಿದ್ದಾರೆ.  ಬಂದಾಕ್ಷಣ,ಮನೆಯೊಳಗೇ ಆಫೀಸು, ಕೆಲಸವಿದೆ ಎಂದು ಬಾಗಿಲು ಕೋಣೆಯೊಳಗೆ ಹೋಗಿ  ಬಾಗಿಲು ಮುಚ್ಚಿದ  ಅಪ್ಪನನ್ನು ನೋಡಿ ಅಮ್ಮ ಒಂದು ಕ್ಷಣ ಪೆಚ್ಚಾಗಿದ್ದಾಳೆ. 

ಈಗ ಸುತ್ತಲಿನ ಗೇಟುಗಳಿಗೆ ಬೀಗ ಹಾಕಿರುವ  ಹೊಸ ಮನೆಯ ಮುಂದಿನ ಖಾಲಿ ಜಾಗದಲ್ಲಿ ಬ್ರೂನೋ ನ ಮೋಟಾರು ಗಾಡಿ ಏಕಾಂಗಿಯಾಗಿ ಓಡುತ್ತಿದೆ.ಗಾಡಿ ಕೆಲವೊಮ್ಮೆ  ಭಾರಿ ಗಾತ್ರದ ಕಾವಲು ನಾಯಿಗಳನ್ನು ಅವುಗಳ ಸರಪಳಿ ಹಿಡಿದ ಯಜಮಾನರನ್ನು ಸುತ್ತುವರೆದು ಓಡುತ್ತದೆ.  ಒಬ್ಬನೇ ಆಟವಾಡಿ ಬೇಸರವಾದ ಬ್ರೂನೋ ಮರದ ಕೆಳಗೆ ಆಕಾಶವನ್ನು ದಿಟ್ಟಿಸುತ್ತಾನೆ. ಅಪ್ಪ ಹಿರಿಯ ಅಧಿಕಾರಿಯಾಗಿ ಸೇನೆಯಲ್ಲಿ  ಬಡ್ತಿ ಪಡೆದಿದ್ದು , ನಾಜಿ ಹಿಡಿತ, ಸೈನಿಕರ ಓಡಾಟ, ಮನೆಯಲ್ಲಿ ತಮ್ಮ ಜೊತೆಗೆ ವಾಸಿಸುವ ಕಠಿಣ ಸ್ವಭಾವದ ಯುವ ಸೈನಿಕನ ಶಿಸ್ತು, ಮನೆಯ  ಹಿಂಭಾದಲ್ಲಿರುವ ಗೇಟು, ಬಿಟ್ಟು ಬಂದ ಬರ್ಲಿನ್ ಇವೆಲ್ಲ ಬ್ರೂನೋ ನ ಪುಟ್ಟ ಕಣ್ಣುಗಳಲ್ಲಿ ಸೆರೆಯಾಗಿದೆ. ಬ್ರೂನೋ ನ ಅಕ್ಕ ಮತ್ತು ಮನೆಯಲ್ಲಿನ ಕಿರಿಯ ವಯಸ್ಸಿನ ಸೈನಿಕನ ನಡುವೆ ಸ್ನೇಹ ಶುರುವಾಗಿದೆ ಮತ್ತು  ನಾಜಿ ಸಿದ್ಧಾಂತಗಳೆಡೆ ಆಕರ್ಷಿತಳಾಗುತ್ತಿದ್ದಾಳೆ.   

ಇವುಗಳ ಮಧ್ಯೆ ಬ್ರೂನೋಗೆ  ಮನೆಯಲ್ಲೇ ಕೆಲಸ ಮಾಡುತ್ತಿರುವ ಪವೆಲ್ ಎನ್ನುವ ಯಾವತ್ತಿಗೂ ಮಾಸಿದ ಮತ್ತು  ಗೆರೆಯುಳ್ಳ ಉಡುಪು ಧರಿಸುವ   ಅಕಾಲಿಕ ವೃದ್ಧನ ಪರಿಚಯವಾಗಿದೆ.  ಡಾಕ್ಟರ್ ಆಗಿದ್ದೇ ಎನ್ನುವ ಪವೆಲ್ ಈಗೇಕೆ ನಮ್ಮ ಮನೆಯಲ್ಲಿ ಆಲುಗಡ್ಡೆ ಸಿಪ್ಪೆ ತೆಗೆಯುವ, ತೋಟದ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾನೆ ಎನ್ನುವದು ಪುಟ್ಟ ಮನಸ್ಸಿಗೆ ಪ್ರಶ್ನೆಯಾಗೇ ಉಳಿದಿದೆ.  ಜ್ಯೂ ಎನ್ನುವ ಅಸಹಾಯಕತೆ, ಭಯ ಪವೆಲ್ ಮುಖದ ಮೇಲೆ ಇಳಿಯುತ್ತಿರುವದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವನಾಗಿಲ್ಲ ಬ್ರುನೋ. ಅದಕ್ಕಾಗಿಯೆ ಮನೆಗೆ ಪಾಠ  ಹೇಳಲು ಬರುತ್ತಿರುವ ಮೇಷ್ಟ್ರು ಕಲಿಸುತ್ತಿರುವ ನಾಜಿ ಇತಿಹಾಸ ಮತ್ತು ಸಾಧನೆ, ಸಾಹಸಮಯ ಕಾಮಿಕ್ ಪುಸ್ತಕದ ಮುಂದೆ ಸಪ್ಪೆಯಾಗಿ ಕಾಣಿಸಿದೆ. 

ಬ್ರೂನೋ ರೂಮಿನಲ್ಲಿರುವ ಕಿಟಕಿಯಿಂದ ನೋಡಿದರೆ ದೂರದಲ್ಲಿ ಒಂದು ಹೊಲ ಕಾಣಿಸುತ್ತಿದೆ.ಈ  ನಾಜಿ ಕ್ಯಾಂಪನಲ್ಲಿ  ಹಲವಾರು ಮಂದಿ ಉದ್ದ ಗೆರೆಯುಳ್ಳ ದೊಗಲೆ ಅಂಗಿ ಮತ್ತು ಪೈಜಾಮ ಧರಿಸಿ ಕೆಲಸ ಮಾಡುತ್ತಿದ್ದಾರೆ, ಅವರಲ್ಲಿ ಕೆಲವಷ್ಟು ಮಂದಿ ಚಿಕ್ಕ ಮಕ್ಕಳು ಇದ್ದಾರೆ. ಈ ಚಿಕ್ಕ ಮಕ್ಕಳು ತನಗೆ ಆಡಲು ಜೊತೆಯಾಗುತ್ತಾರೆ ಎಂದು ಬ್ರೂನೋ ಸಂತಸ ಪಡುತ್ತಿದ್ದಾನೆ.  ಜೊತೆಗಾರರು ಸಿಕ್ಕಿದ್ದಕ್ಕಾಗಿ ಖುಷಿಯಾದ ಬ್ರೂನೋ ಯಾರಿಗೂ ಗೊತ್ತಾಗದಂತೆ  ಹಿಂಬಾಗಿಲು ತೆಗೆದು ಕ್ಯಾಂಪ್ ಕಡೆಗೆ ಓಡಿದ್ದಾನೆ. ದೊಡ್ಡವರ ಕ್ರೌರ್ಯದ ಆಟಗಳಿಗೆ ಪಗಡೆಗಳಾದ ಇವರ ಮಧ್ಯೆ ಇರುವ ಚಿಕ್ಕ ಮಕ್ಕಳನ್ನು ಹುಡುಕುತ್ತ ಬ್ರುನೋನ ಗಾಡಿ ಸಾಗಿದೆ. 

ಮುಳ್ಳಿನ  ಬೇಲಿಗಳಿಂದ  ಸುತ್ತುವರೆದ ಕ್ಯಾಂಪ್ ನ ಮೂಲೆಯೊಂದರಲ್ಲಿ ಬಕ್ಕ ತಲೆಯ ಚಿಕ್ಕ ಹುಡುಗನೊಬ್ಬ ಕುಳಿತಿದ್ದಾನೆ.  ಶ್ಮುಲ್ ಎನ್ನುವ ಅವನ  ಹೊಸ  ಹೆಸರನ್ನು ಕೇಳಿ ಬ್ರುನೋಗೆ ಆದಷ್ಟೇ ಆಶ್ಚರ್ಯ ಬ್ರೂನೋ ಎನ್ನುವ  ಹೊಸ  ಸರನ್ನು ಕೇಳಿ ಶ್ಮುಲ್ ಗೆ ಆಗಿದೆ. ದಿನಗಳು ಕಳೆದಿವೆ  ಶ್ಮುಲ್  ಮತ್ತು ಬ್ರೂನೋ ಇಬ್ಬರೂ ಪರಿಚಿತರಾಗಿದ್ದಾರೆ. ಪ್ರತಿದಿನ ಬ್ರೂನೋ ಮನೆಯವರ ಕಣ್ಣು ತಪ್ಪಿಸಿ ಶ್ಮುಲ್ ಗೆ ತಿನ್ನುವದಕ್ಕೆ ತಂದು ಕೊಡುತ್ತಿದ್ದಾನೆ.  ಹಸಿದ, ಆಹಾರಕ್ಕಾಗಿ ಹಾತೊರೆಯುವ ಶ್ಮುಲ್  ಬ್ರೂನೋ ಕಣ್ಣಿನಲ್ಲಿ ಅಚ್ಚರಿಯಾಗಿದ್ದಾನೆ.
ಇತ್ತ ಮನೆಯಲ್ಲಿ ನಾಜಿ ಕ್ಯಾಂಪ್ ಹತ್ತಿರವೇ ಮನೆಯಿರುವ ಕುರಿತು ಬ್ರೂನೋ ಅಮ್ಮ ಕಳವಳ ವ್ಯಕ್ತ ಪಡಿಸುತ್ತಿದ್ದಾಳೆ. ಕ್ಯಾಂಪ್ ನಲ್ಲಿ ಸಾವಿನ ಮನೆಗೆ ಜ್ಯೂ ಗಳನ್ನು ನೂಕಿ ಗ್ಯಾಸ್ ಹಾಯಿಸಿ ಅವರನ್ನೆಲ್ಲ ಕಾರ್ಖಾನೆಗಳ ಕಚ್ಚಾ ವಸ್ತುಗಳಂತೆ ಕರಗಿಸುವಾಗ ಹೊರಡುವ ಅಸಾಧ್ಯ ವಾಸನೆ, ಹೊಗೆ  ಮತ್ತು ಅವುಗಳ ಭಯಾನಕತೆಗೆ ಅಮ್ಮ ನಡುಗಿದ್ದಾಳೆ. ಈ ವಾತವರಣದಲ್ಲಿ ಮಕ್ಕಳು,  ಮನಸ್ಸಿಗೆ ಕ್ಯಾಂಪ್ ನ ಹೊಗೆ ಹಿಡಿದು ಕರಕಲಾದರೆ ಎನ್ನುವ ಭಯ ಆತಂಕದ ನಡುವೆ ಮನೆ ಬದಲಿಸಲು ಅಪ್ಪನ ಜೊತೆ ಜಗಳವಾಡುತ್ತಿದ್ದಾಳೆ  
ಈ ಮಧ್ಯೆ ಒಂದು ದಿನ ಬ್ರೂನೋ ನ ಮನೆಗೆ ಗಾಜಿನ ಲೋಟಗಳನ್ನು ಒರೆಸಿಡಲು ಶ್ಮುಲ್ ಬಂದಿದ್ದಾನೆ. ಇವತ್ತು ಸಹ ಬ್ರೂನೋ ಕೊಟ್ಟ ಕೇಕ್ ತಿನ್ನುತ್ತಿರುವ ಶ್ಮುಲ್ ನನ್ನು ಮನೆಯಲ್ಲಿರುವ ಕಿರಿಯ ಸೈನಿಕ ನೋಡಿದ್ದಾನೆ. ಶ್ಮುಲ್ ನನ್ನು ಕೇಳಲಾಗಿ, ಬ್ರೂನೋ ಮತ್ತು ಅವನು ಸ್ನೇಹಿತರು ಎನ್ನುವ ಉತ್ತರ ನೀಡಿದ್ದಾನೆ, ಆದರೆ ಸೈನಿಕನ ಕ್ರೂರ ನೋಟಕ್ಕೆ ಹೆದರಿ ಬ್ರೂನೋ ಅದನ್ನು ಅಲ್ಲಗಳೆದಿದ್ದಾನೆ. ಪರಿಣಾಮವಾಗಿ ಧರಿಸಿದ್ದ ಅಂಗಿಯ ಮೇಲಿರುವ ಬಾಸುಂಡೆಯಂತ ಗೆರೆಗಳು, ಶ್ಮುಲ್ ನ ಮುಖದ ಮೇಲು ಬರುವಂತೆ ಸೈನಿಕ ನೋಡಿಕೊಂಡಿದ್ದಾನೆ.  ಈ ಘಟನೆ ನಂತರ ಕ್ಯಾಂಪ್ ನ ಬೇಲಿಯಂಚಿನಲ್ಲಿ ಶ್ಮುಲ್, ಬ್ರೂನೋ ನನ್ನು ಭೇಟಿಯಾಗಲು ಬರುತ್ತಿಲ್ಲ.  ಬ್ರೂನೋ ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಿದ್ದಾನೆ, ಕ್ಷಮೆ ಕೇಳಲು ಪ್ರತಿ ದಿನ ಅವನು ಬೇಲಿಯ ಬಳಿ  ಕಾಯುತ್ತಿದ್ದಾನೆ . ಮನೆಯಲ್ಲಿ ಅಮ್ಮ ಮಕ್ಕಳೊಂದಿಗೆ ಬೇರೆಡೆಗೆ ಹೋಗುವ ನಿರ್ಧಾರ ತೆಗೆದುಕೊಂಡಾಗಿದೆ.  

ಇವತ್ತು ಬೇಲಿಯ ಬಳಿ ಶ್ಮುಲ್ ಬಂದಿದ್ದಾನೆ, ಬ್ರೂನೋ ಸಾರಿ ಕೇಳಿ ಮತ್ತೆ ಗೆಳೆಯನಾಗಿದ್ದಾನೆ. ಶ್ಮುಲ್ ತನ್ನ ಅಪ್ಪ ಕಾಣಿಸುತ್ತಿಲ್ಲ ಎನ್ನುವ ಖೇದಕರ ವಿಷಯವನ್ನು ಹೇಳುತ್ತಿದ್ದಾನೆ. ಬ್ರೂನೋ ಗೆ ತಾನು ಮಾಡಿದ ತಪ್ಪನ್ನು ಸರಿಪಡಿಸಲು ಇದು ಒಳ್ಳೆಯ ಅವಕಾಶ ಎನಿಸುತ್ತಿದೆ. ಶ್ಮುಲ್ ನ ಅಪ್ಪನನ್ನು ಹುಡುಕಲು ಸಹಾಯ ಮಾಡುವುದಾಗಿ ಹೇಳುತ್ತಿದ್ದಾನೆ. ಅದರಂತೆ  ಮಾರನೆಯ ದಿನ ಶ್ಮುಲ್ ಮತ್ತು ಬ್ರೂನೋ ಬೇಲಿಯ ಬಳಿ ಒಂದು ಹೊಂಡವನ್ನು ತೋಡಿ ಬೇಲಿಯ ಒಳಗೆ ನುಗ್ಗಿದ್ದಾರೆ. ಶ್ಮುಲ್ ತಂದ ಕ್ಯಾಂಪ್ ನ ಉಡುಪನ್ನು ಧರಿಸಿದ ಬ್ರೂನೋ  ನಾಜಿಗಳ ಕ್ರೌರ್ಯದ  ಕ್ಯಾಂಪ್ ಒಳಗೆ  ಜ್ಯೂ ಅಲ್ಲದ ಜ್ಯೂ ಆಗಿ ನಡೆದಿದ್ದಾನೆ. ಕ್ಯಾಂಪ್ ನಲ್ಲಿ ಇವತ್ತು ಕಾರ್ಖಾನೆಯ ಚಿಮಣಿಯನ್ನು ಉರಿಸುವ ದಿನ, ಉರುವಲುಗಳಾಗಿ ಜ್ಯೂ ಜೀವಗಳು ಬೇಕಾಗಿವೆ, ಮನುಷ್ಯ ಮನುಷ್ಯನನ್ನು ಕರಕಲಾಗಿಸುವ ಆಟವಿದೆ, ಪುಟ್ಟ ಬ್ರೂನೋ ಮತ್ತವನ ಸಣ್ಣ ಗೆಳೆಯ ಶ್ಮುಲ್ ಅಪ್ಪನನ್ನು ಹುಡುಕುತ್ತ ಉರುವಲುಗಳ ಗುಂಪಿಗೆ ಸೇರಿದ್ದಾರೆ, ಗುಂಪನ್ನು ತಳ್ಳಲಾಗಿತ್ತಿದೆ.  ಗೆರೆಯುಳ್ಳ ಅಂಗಿ ಪೈಜಾಮಾ ಧರಿಸಿದ ಎಲ್ಲರು ಜೀವವಿಲ್ಲದ ಅಸಹಾಯಕ ಮೂರ್ತಿಗಳಂತೆ, ಪಶುಗಳಂತೆ ಮೂಕವಾಗಿ ನಡೆದಿದ್ದಾರೆ, 
ಉರುವಲಾಗಲು  ಕೆಲವೇ ಕ್ಷಣಗಳಿವೆ.

ಇತ್ತ ಬ್ರೂನೋ ಮನೆಯಲ್ಲಿ  ಅವನು ನಾಪತ್ತೆಯಗಿರುವ ವಿಷಯ ತಿಳಿದಿದೆ, ಎಲ್ಲೆಡೆಗೆ ಗಾಬರಿ ಆತಂಕ, ಹಿಂಭಾಗಿಲು ಹೊರ ತೆರೆದಿರುವದು ಪತ್ತೆಯಾಗಿದೆ,  ಅಲ್ಲಿಂದ ಹೊರಬೀಳುವ ದಾರಿ ನಾಜಿ ಕ್ಯಾಂಪ್ ನ ಕಡೆಗೆ ಸಾಗುವದು ತಿಳಿಯುತ್ತಿದ್ದಂತೆ ತಲ್ಲಣದ ಅಲೆಗಳು ವ್ಯಾಪಿಸಿವೆ, ಅಪ್ಪ ಎಲ್ಲ ಸೈನಿಕರಿಗೆ ತತ್ ಕ್ಷಣ ಕಾರ್ಯನಿರತರುವಂತೆ ಆದೇಶಿಸುತ್ತಿದ್ದಾರೆ, ಎಲ್ಲೆಡೆ ಸಮರೋಪಾದಿಯಲ್ಲಿ ಬ್ರೂನೋನನ್ನು ಹುಡುಕುವ ಕೆಲಸ ಶುರುವಾಗಿದೆ ,  ಕಾವಲು ನಾಯಿಗಳು ವಾಸನೆ ಹಿಡಿದು ಕ್ಯಾಂಪ್ ಕಡೆಗೆ ಓಡುತ್ತಿವೆ, ಬೇಲಿಯ ಬಳಿಯಲ್ಲಿ ಅಗೆದ ಹೊಂಡ ಮತ್ತು  ಬ್ರುನೋನ  ಬಟ್ಟೆಗಳು ಪತ್ತೆಯಾಗಿವೆ. ಕ್ಯಾಂಪ್ ನೊಳಗೆ ಬ್ರೂನೋ ನುಸುಳಿರುವದು  ಪತ್ತೆಯಾಗಿದೆ.  

ಅಪ್ಪ ಅಮ್ಮ ಅಕ್ಕ ಸೈನಿಕರು ಎಲ್ಲರು ದೂರದಲ್ಲಿ ಕೂಗಿಕೊಳ್ಳುತ್ತಿರುವಂತೆಯೆ  ಕ್ಯಾಂಪ್ ಒಳಗೆ ಕಾರ್ಖಾನೆಯ ನಾಜಿ ಸೈನಿಕರು ಉರುವಲಿಗೆ ಗ್ಯಾಸ್ ಹಾಯಿಸಿದ್ದಾರೆ,  ಚಿಮಣಿಗಳು ಮಾನವರನ್ನು ಕಪ್ಪು ಹೊಗೆಗಳಾಗಿಸಿವೆ. 

ಪುಟ್ಟ ಬ್ರೂನೋ, ಪುಟ್ಟ  ಶ್ಮುಲ್,  ಸಾವಿರಾರು ಜ್ಯುಗಳು, ಬಾಂಬ್ ಧಾಳಿಯಲ್ಲಿ ಸತ್ತ ಬ್ರೂನೋ ನ ಅಜ್ಜಿ,  ಅಪ್ಪನ ಎದೆಯ ಮೇಲಿರುವ ನಾಜಿ ಪದಕಗಳು, ಬ್ರೂನೋ ನ ಅಮ್ಮನ  ಪ್ರೀತಿ ತನ್ನ ಅಪ್ಪ ಜರ್ಮನಿಯಲ್ಲಿ ಇಲ್ಲ ಎನ್ನುವದನ್ನು ಮುಚ್ಚಿಟ್ಟಿದ್ದಕ್ಕೆ ಅಮಾನತಾದ ಮನೆಯಲ್ಲಿದ್ದ ಕಿರಿ ಸೈನಿಕ , ನಾಜಿ ತತ್ವಕ್ಕೆ ಮಾರುಹೋಗಿದ್ದ ಅಕ್ಕ, ಮೂಲೆ ಸೇರಿದ್ದ ಅವಳ ಗೊಂಬೆಗಳು, ರೂಮು ಸೇರಿದ್ದ ಸೈನಿಕರ ನಾಯಕರ ಫೋಟೋ,  ಮಗ ಸೈನ್ಯದಲ್ಲಿ ಅಧಿಕಾರಿ  ಎನ್ನುವ  ಬ್ರೂನೋ ನ ಅಜ್ಜನ ಹೆಮ್ಮೆ ,  , ಅಸಹಾಯಕ ವೃದ್ಧ  ಪವೆಲ್,ನಾಜಿ ಕ್ಯಾಂಪ್ ಗಳ ಬಗ್ಗೆ ಸೃಷ್ಟಿಸಿದ ಸುಳ್ಳು ಡಾಕ್ಯುಮೆಂಟರಿಗಳು, ಜ್ಯೂಗಳೇ ಏಕೆ ಕೆಟ್ಟವರು ಎನ್ನುವ ಅರ್ಥವಾಗದ ಪ್ರಶ್ನೆ, ಕಳೆದುಹೋದ ಶ್ಮುಲ್ ನ ಅಪ್ಪ, ಬೆತ್ತಲೆ ನಿಂತು ಚಿಮಣಿಯ ಹೊಗೆಯಾಗುವ ಸರದಿಗೆ  ನಡುಗುತ್ತಿರುವ ಜ್ಯುಗಳು, ಇತಿಹಾಸ, ಕಲ್ಪನೆ, ಕ್ರೌರ್ಯ, ಕಳೆದುಹೋದ ಎಲ್ಲರೊಳಗಿನ ಮನುಷ್ಯ, ಅಟ್ಟಹಾಸ, ಶಿಸ್ತು  ಎಲ್ಲವು ಸುಟ್ಟು ಕರಕಲಾಗಿ ಹೊಗೆಯಾಗಿ ಚಿಮಣಿಗಳು ಶತಶತಮಾನದ ಹೊಗೆಯನ್ನು ಹೊರಹಾಕುತ್ತಿದ್ದಂತೆ ಕಲ್ಲಾಗಿ ನಿಂತಿದ್ದಾರೆ ಅಪ್ಪ ಅಮ್ಮ ಅಕ್ಕ. 

ಸಿನಿಮಾ : ದ ಬಾಯ್ ಇನ್ ದ ಸ್ಟ್ರಿಪ್ಡ್ ಪೈಜಾಮ   (The Boy in The Stripped Pyjama)
ಭಾಷೆ : ಇಂಗ್ಲೀಶ್ 
ದೇಶ : ಅಮೇರಿಕ  
ನಿರ್ದೇಶನ : ಮಾರ್ಕ್ ಹರ್ಮನ್
ಕಥೆ : ಜಾನ್ ಬೋಯ್ನ್

Final Cut :

ಬ್ರೂನೋ : ನಾನು ಏನನ್ನೋ  ಕೇಳಲ ? ನೀವ್ಯಾಕೆ ಯಾವಾಗಲು ಪೈಜಾಮ  ಹಾಕೊಳ್ಳುವದು 
ಶ್ಮುಲ್ :  ಅವು ಪೈಜಾಮಗಳಲ್ಲ 
ಬ್ರೂನೋ : ಇಲ್ಲ ಅವು ಪೈಜಾಮಾಗಳೆ 
ಶ್ಮುಲ್ :  ಯಾಕೆಂದ್ರೆ ಅವರು ನಮ್ಮ ಎಲ್ಲ ಬಟ್ಟೆಗಳನ್ನು ಕಿತ್ತುಕೊಂಡಿದ್ದಾರೆ 
"ಯಾರು ಕಿತ್ತುಕೊಂಡಿದ್ದು ?"
"ಸೈನಿಕರು "
"ಸೈನಿಕರೇ ? ಯಾಕೆ ?"
" ನನಗೆ ಸೈನಿಕರೆಂದರೆ ಒಂಚೂರು ಇಷ್ಟವಿಲ್ಲ. ನಿನಗೆ  ? "
"ನನಗೆ ಇಷ್ಟ. ನನ್ನಪ್ಪ ಸೈನಿಕ. ಆದರೆ ಅವರು ಯಾವತ್ತು ಯಾರ ಬಟ್ಟೆನೂ ಕಿತ್ತುಕೊಳ್ಳುವದಿಲ್ಲ "
" ಮತ್ತೆ, ಯಾವ ಥರದ ಸೈನಿಕ ?"
"ಹ್ಮ್ಹ್ಮ್ ಹಮ್ ಅವರು ಭಾರಿ ಮುಖ್ಯವಾದ ಸೈನಿಕರು. ಅದಕ್ಕೆ ನನ್ನ ಅಪ್ಪ ಎಲ್ಲರಿಗೂ ಒಳ್ಳೆಯದು ಮಾಡುವ ಕೆಲಸದಲ್ಲಿ ಮಾಡುತ್ತಿದ್ದಾರೆ  "
"ಹ್ಮ್ "
"ಈ ಮುಳ್ಳಿನ  ಬೇಲಿಯೆಕೆ ಇಲ್ಲಿ ಹಾಕಿದ್ದಾರೆ ? ಇದು ಪ್ರಾಣಿಗಳಿಗೆ ಮಾತ್ರವಲ್ಲವೆ "
"ಇಲ್ಲ ಇದು ಜನರು ಹೊರಗೆ ಹೋಗಬಾರದು ಎಂದು "
" ಅರೇ ಯಾಕೆ ? ನೀನೇನು ಮಾಡಿದೆ ?"
"ಯಾಕೆಂದರೆ ನಾನು ಜ್ಯೂ "

ಇಂತಿ, 
ಸಚೇತನ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x