ಅಮರ್ ದೀಪ್ ಅಂಕಣ

ಕನ್ಯಾ ಕೊಡ್ತೀವಿ, ವರ ಹೆಂಗೇ?: ಅಮರ್ ದೀಪ್ ಪಿ.ಎಸ್.

ವಿಷ್ಣುವರ್ಧನ್ ಅಭಿನಯದ ಒಂದು ಸಿನೆಮಾ ಬಂದಿತ್ತು." ನೀನು ನಕ್ಕರೆ ಹಾಲು ಸಕ್ಕರೆ"ಅಂತ.    ಅದರಲ್ಲಿ ಒಬ್ಬರಲ್ಲಾಂತ ನಾಲ್ಕು ನಾಲ್ಕು ಜನ ಹಿರೋಯಿನ್ ಗಳು.  ವಿಷ್ಣುವರ್ಧನ್ ಜೊತೆ  ಒಬ್ಬರಿಗೂ ಒಂದೊಂದು ಡುಯೆಟ್ ಸಾಂಗ್, ಕಾಮಿಡಿ ಎಲ್ಲಾ ಇದೆ.   ಕೊನೆಗೆ ವಿಷ್ಣುವರ್ಧನ್ ಗೆ  ಒಂದು ಹುಡುಗೀನು ಸಿಗಲ್ಲ. ಆ ಸಿನೆಮಾದಲ್ಲಿ ಹುಡುಗ ಓದಿರೋನು, ಒಂದಷ್ಟು ಆಸ್ತಿ ಇರುತ್ತೆ.  ಕಡಿಮೆ ಅಂದ್ರೆ ಅವನ ಬಾಳಿ ನಲ್ಲಿ ಒಂದು ಹುಡುಗಿ ಎಂಟ್ರಿ ಮತ್ತು ಅವನ ಮದುವೆ. ಅದು ಸಿನೆಮಾದಲ್ಲಿ ಕಡೆಗೂ ಆಗೋದಿಲ್ಲ ಅನ್ಸುತ್ತೆ. ಸಿನೆಮಾ ನೋಡಿ ತುಂಬಾ ವರ್ಷಗಳಾದವು… ಪೂರ್ತಿ ನೆನಪಿಲ್ಲ. 
 
ಈ ಮದುವೆ ವಿಚಾರಕ್ಕೆ ಬಂದರೆ ಕನ್ಯಾ ನೋಡುವ ಶಾಸ್ತ್ರ, ವರನ ಮನೆತನ ನೋಡುವ ಶಾಸ್ತ್ರ ಎಲ್ಲಾ ಮುಗಿದ ಮೇಲೆ, ಹುಡುಗಿ ಬಗ್ಗೆ ವರನಿಗೆ, ವರನ ಬಗ್ಗೆ ಹುಡುಗಿಯ ತಂದೆಗೆ ಅನಾಮಿಕ, ಬೇವಾ ರಸು ಪತ್ರಗಳು/ಫೋನ್ ಕಾಲ್ ಗಳು ಬಂದು ಸಂಭಂಧಗಳು ಹಳಸಿ, ಹಾಳಾದಂಥ ಉದಾಹರಣೆ ಸಾಕಷ್ಟು ಸಿಗುತ್ತವೆ. ಹೆಚ್ಚಿನ ಸಂಧರ್ಭದಲ್ಲಿ ವರನ ಕಡೆಯವರಿಗಿಂತ ಕನ್ಯಾ ಕಡೆಯ ಕುಟುಂಬದವರಿಗೆ ಜಾಸ್ತಿ ಮುಜುಗರ, ಅಡೆತಡೆ ಉಂಟಾಗುವುದು. ಒಮ್ಮೊಮ್ಮೆ ವ್ಯತಿರಿಕ್ತವಾಗಿ ವರನಿಗೂ ಉಂಟಾಗುತ್ತೆ. 
 
ಯಾವುದೇ ತೊಂದರೆ ಇಲ್ಲವಾದರೆ…. 
 
ಹುಡುಗಿಯ ಓದು ಮುಗಿದು ಮದುವೆ ವಯಸ್ಸಿಗೆ ಬರುತ್ತಿದ್ದ ಹಾಗೆ ತಂದೆ ತಾಯಿ ಹುಡುಗಿಯ ವಿವರ ಫೋಟೋ ಕೊಟ್ಟು ವರ ಹುಡುಕಲು ಗೊತ್ತಿದ್ದ, ಪರಿಚಯದ ಸಂಭಂಧಿಕರು, ಗೆಳೆಯರಿಗೆ ತಿಳಿಸುತ್ತಾರೆ.  ಪ್ರತಿ ಬಾರಿ ವರ ಬಂದಾಗಲೂ ಭರ್ಜರಿಯಾಗಿ ಹುಡುಗಿಯನ್ನು ಸಿಂಗರಿಸಿ,ಬಂಗಾರ ತೊಡಿಸಿ, ಆಕೆ ಕೈಯಲ್ಲಿ  ಅಯ್ಯಂಗಾರಿ ಬೇಕರಿ ಮೈಸೂರು ಪಾಕು,ಸಣ್ಣ ಡಾಣಿ , ಮನೆ ಉಪ್ಪಿಟ್ಟು, ಆಮೇಲೊಂದಿಷ್ಟು ಟೀ, ಕಾಫಿ  ಕುಡಿಸಿ, ಕಳಿಸಿ  "ವರ "ನ  ಒಪ್ಪಿಗೆಗೆ ಕಾದು  ಕುಳಿತಿರುತ್ತಾರೆ.  ಈಗ ಬಿಡಿ, ಬಹಳ ಸಿಂಪಲ್; ಒಂದೆರಡು ಗುಡ್ ಡೇ ಬಿಸ್ಕೆಟ್ ಪ್ಯಾಕೆಟ್ಟು ಟೂ ಬೈ ಫೋರ್ ಟೀ ಅಥವಾ ಕಾಫಿ ಕೊಟ್ಟುಬಿಟ್ಟರೆ ಸಾಕು,  ಹತ್ತು  ನಿಮಿಷದಲ್ಲಿ ಕನ್ಯಾ ನೋಡೋ ಶಾಸ್ತ್ರ ಮುಗಿದಿರುತ್ತೆ. ಆ ಕಡೆಯಿಂದ "ಹ್ಞೂ" ಅಂದರೆ ಈ ಕಡೆಯಿಂದ  "ಹೊ" ಎಂದು ನಗು. ಆ ನಂತರ ವರನ ಮನೆತನ ನೋಡಿಕೊಂಡು ಬರುವುದು, ಮಾತುಕತೆ, ನಿಶ್ಚಿತಾರ್ಥ, ಮದುವೆ ಎಲ್ಲಾ ಸಡಗರ.  ಕ್ಯಾನ್ಸಲ್ ಆಯಿತಾ? ನೆಕ್ಸ್ಟ್. 
 
ಮನೆಯಲ್ಲಿ ಹಿರಿಯರು ನೋಡಿ ಮನೆತನದಿಂದ  "ಇದ್ದಂಥ" ವನನ್ನು ನೋಡಿ ಮಗಳು ಚೆನ್ನಾಗಿದ್ದರೆ ಸಾಕೆಂದು ಮದುವೆ ಮಾಡಿಕೊಡುತ್ತಿದ್ದರು. ಆ ಸಂಧರ್ಭದಲ್ಲಿ ಮನೆತನದ ಬಗ್ಗೆ ಆತ್ಮೀಯರಿಂದ ಮಾತ್ರ ಎಷ್ಟು ತಿಳಿಯುತ್ತಿದ್ದರೋ ಅಷ್ಟೇ ವಿವರ "ವರ"ನ ಬಗ್ಗೆಯೂ ಕೇಳುತ್ತಿದ್ದರು.  ಅದು ಸರ್ವೇಸಾಮಾನ್ಯವೇ.  ಮನೆತನದವರು ಒಕ್ಕಲುತನದವರಾದರೆ "ಎಷ್ಟೆಕರೆ ಹೊಲ, ನೀರಾವರಿ, ಓದಿದವರು, ಒಕ್ಕಲುತನ ಮಾಡುವವರು, ಒಂಟಿ ಕುಟುಂಬ, ಜಂಟಿ ಕುಟುಂಬ ಎಲ್ಲಾ ಜಾತಕವನ್ನು ಬರೀ ಬಾಯಲ್ಲೇ ತುಂಬಿಕೊಂಡು ಮನಸ್ಸಿನಿಂದ  ವಿಚಾರ ಮಾಡಿ ಹೆಣ್ಣು ಕೊಡುವುದು ಅಥವಾ "ವರ"ನ ಕಡೆಯಿಂದ ಹೆಣ್ಣು ತರುವುದು ನಡೆಯುತ್ತಿತ್ತು; ಬಲ್ಲವರ ಒಂದೇ ಮಾತಿನಿಂದ, ನಂಬಿಕೆಯಿಂದ.   ಇತ್ತೀಚಿಗೆ ಸಾಫ್ಟ್ವೇರು ನೌಕರಿ, ಹಾರ್ಡ್ವೇರ್ ಅಂಗಡಿ, ಬೈಕಲ್ಲಿ, ಕಾರಲ್ಲಿ, ಲುಕ್ಕಲ್ಲಿ ಅಪ್ರೋಚ್ನಲ್ಲಿ ಎಲ್ಲಾ ಮೊಡರ್ನೈಜ್  ಆಗಿವೆ, ಪರಿಸ್ಥಿತಿ ಗಳು. ಎಷ್ಟರ ಮಟ್ಟಿಗೆಂದರೆ ಆಸ್ತಿ ಇದೆ ಎಂದಾದಲ್ಲಿ ಎಲ್ಲಿದೆ, ಎಷ್ಟಿದೆ, ವರನ ಪಾಲೆಷ್ಟು, ಪೂರ್ವಜರ ಆಸ್ತಿಯಾಗಿದ್ದರೆ ಮುಂದೆ ವರನಿಗೆ ದಕ್ಕಬಹುದಾದ ಶೇರು ಎಷ್ಟು ಎಂದು ದಾಖಲೆ ಪತ್ರ ಪರಿಶೀಲಿಸುವಷ್ಟು. ಹೆಣ್ಣು ಒಪ್ಪಿಗೆ ಆಯಿತಾ? ವರ, ವರನ, ನೌಕರಿ ದುಡಿಮೆ, ಮನೆತನ  ಇನ್ನು ಶುರು ಮಾತುಕತೆ, ವರದಕ್ಷಿಣೆ, ಬಂಗಾರ, ಮದುವೆ ಯಾರ ಕಡೆಗೆ, ಯಾರ ಉಸ್ತುವಾರಿ, ನೋಡಬೇಕದನ್ನು.  
 
ಒಂದಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.. ಯಾರು, ಯಾರವು, ಯಾವಾಗ, ಎಲ್ಲಿಯದು  ಅದೆಲ್ಲಾ ಬೇಡ. ನಮ್ಮ ನಡುವೆ ಇರುವ ಅದೆಷ್ಟೋ ಗಂಡಸರಾಗುವ ಮುನ್ನ "ಹುಡುಗರು"  "ಹೆಂಗಸಾಗುವ" ಮುನ್ನ ಹುಡುಗಿಯರೂ ಇಂಥ ಪರಿಸ್ಥಿತಿಯನ್ನು ಅನುಭವಿಸಿಯೇ ಇರುತ್ತಾರೆ. 
 
ಮೊದಲು ಹುಡುಗಿಯರ ವಿಷಯಕ್ಕೆ ಬರೋಣ. ಮದುವೆ ವಿಚಾರಕ್ಕೆ ಬಂದಾಗ ಹುಡುಗಿ ತನಗೆ ಇಷ್ಟವಾದ ಯಾರಾದರೂ ಹುಡುಗನಿದ್ದರೆ  ಮನೆಯವರನ್ನು ಒಪ್ಪಿಸಿ ಇಷ್ಟದ ಹುಡುಗನನ್ನು ಮದುವೆ ಆದ ಸಂಖ್ಯೆಗಳು ಕಡಿಮೆಯೇ.  ಅದರಂತೆ ಹುಡುಗರದೂ ನೋಡಿದರೆ, ಅದರ ಸಂಖ್ಯೆ ಸ್ವಲ್ಪ ಜಾಸ್ತಿ. ಎರಡು ಕುಟುಂಬಗಳು ಪರಸ್ಪರ ಒಪ್ಪಿ ಜೊತೆಗೂಡಿ ಮದುವೆ ಮಾಡಿದ ಉದಾಹರಣೆಗಳೂ ಅಷ್ಟಕ್ಕಷ್ಟೇ. ಒಂದೋ ಓಡಿ ಹೋಗಿ ಮದುವೆ ನಂತರ ಕುಟುಂಬದವರನ್ನು ಸಾಧ್ಯಂತ್ಯವಾಗಿ ಸಮಾಧಾನಿಸಿ ಸಂಪರ್ಕ ಇಟ್ಟುಕೊಂಡ ಕೆಲವ ರಿರಬಹುದು.  ಇನ್ನು ಕೆಲವೆಡೆ "ಇವತ್ತಿಂದ ನೀನ್ ನಮ್ ಪಾಲಿಗ್ ಸತ್ತೆ" ಅಂತ ದುಸುಮುಸು ಮಾಡಿ ಸಂಭಂಧ ತುಂಡರಿಸಿದ ಮದುವೆಗಳಿವೆ.   ಮೊದ ಮೊದಲು ಪ್ರೀತಿಸಿ ಮದುವೆಯಾಗುವುದನ್ನು ನಿರಾ ಕರಿಸಿ "ವಿಷ ಕುಡಿತೀನಿ, ಉರ್ಳು ಹಾಕ್ಕೊತ್ತೀನಿ" ಅಂತೆಲ್ಲಾ ಹೆದರಿಸಿ ಎಲ್ಲರಿಗಿಂತ ಮುಂಚೆ ಮದುವೆ ಮಂಟಪದಲ್ಲಿ ಮುಂದಿನ ಸಾಲಲ್ಲಿ ಕುಂತು ಅಕ್ಷತೆ ಹಾಕಿದ ತಂದೆ ತಾಯಿಯರ ವಿಚಾರ ನಾಗತಿಹಳ್ಳಿ ಚಂದ್ರಶೇಖರ ಅವರ ಮದುವೆ ಪ್ರಸಂಗದಲ್ಲಿನ ಬರಹವನ್ನು ನೋಡಬಹುದು.    
 
ಬಿಡಿ, ನಾನು ಲವ್ ಮಾಡಿ ಮದುವೆ ಆಗೋಣ ಅಂದ್ರೆ ಲವ್ವು ದಕ್ಕಲಿಲ್ಲ ಮುಂದೆ ಹೆಜ್ಜೇನೂ ಇಡ್ಲಿಲ್ಲ.  ನನ್ನ ಮದುವೆ ಸಂಧರ್ಭದಲ್ಲಿ ಕನ್ಯಾ ನೋಡೋದಿಕ್ಕೆ ಹೋದ ಸಂಧರ್ಭದಲ್ಲಿ ನನಗಿದ್ದ ಒಂದೇ ಒಂದು ಸಮಾ ಧಾನ, ಆಧಾರ ಅಂದ್ರೆ "ನನ್ನ ಸರ್ಕಾರಿ ನೌಕರಿ".  ಅದರಿಂದ ಎಷ್ಟು ಬರುತ್ತೋ, ಎಷ್ಟು ಖರ್ಚಾಗುತ್ತೋ, ಇನ್ನೆಷ್ಟು ಉಳಿಸುತ್ತೇನೋ ಗೊತ್ತಿಲ್ಲ.  ಆದರೆ "ವರ"ನಿಗೆ ಗೌರ್ಮೆಂಟ್ ನೌಕ್ರಿ ಐತಪಾ" ಅನ್ನೋದಷ್ಟೇ ಖರೆ. ಎಲ್ಲಾ ಸರಿ, ಒಮ್ಮೊಮ್ಮೆ ಕೆಲವರು "ಹುಡುಗ್ಗಾ, ಹೊಲ, ಮನಿ, ಸೈಟು, ಆಸ್ತಿ ಏನಾರ ಐತಾ?" ಅಂದಾಗ ಮಾತ್ರ ನನಗೆ  "ಯಾರದಾದ್ರೂ ಅಸ್ತಿ ಕೇಳಿದರೆ ತಂದು ಕೊಡಬಹುದು, ಆಸ್ತಿ ಎಲ್ಲಿಂದ ಹುಡಿ ಕ್ಕ್ಯಂಡು ಬರ್ಲ್ಯಪ್ಪ" ಅನ್ನಿಸಿಬಿಡೋದು.  ಒಂದೊಂದು ಸಲ ಇವನೌನ "ಹುಡುಗೀನ ಆಸ್ತಿಗೆ  ಕೊಟ್ಟು  ಮದುವೆ ಮಾಡುತ್ತಿದ್ದಾರೋ ಇಲ್ಲ ವರನಿಗೆ ಕೊಟ್ಟೋ?" ಅನ್ನುವಷ್ಟು ರೋಸಿಗೆ ಬರ್ತಿತ್ತು.  ನನ್ನ ಪುಣ್ಯ, "ಆಸ್ತಿ ಎಲ್ಲಿದೆ, ಎಷ್ಟಿದೆ, ಆಸ್ತಿ ಇದ್ದದ್ದಕ್ಕೆ ಪುರಾವೆ ತೋರ್ಸಿ" ಅಂತ ನನ್ನ ಮದುವೆಯಲ್ಲಿ ಮಾತುಕತೆಯಲ್ಲಿ ಯಾರೂ ಕೇಳಿದ್ದಿಲ್ಲ. 
 
ದೊಡ್ಡ ದೊಡ್ಡ ಹುದ್ದೆಯಲ್ಲಿದ್ದೇವೆಂದು ಕನ್ಯಾ ಕೇಳಲು ಹೋದಾಗ ಕೆಲವೆಡೆ ಕೇವಲ ಬಂದವರ ಬಡಾ ಬಾಯಿ ಮತ್ತು ಬಡಪ್ಪನ್ (ಅವರಷ್ಟು ಇದ್ದರೂ ಅವರ ನಿಲುವು, ನಿಯತ್ತು ಸಂಭಂಧಗಳಿಗೆ ಬೆಲೆ ಕೊಡುವಂಥ ಮನಸ್ಥಿತಿ ಇಲ್ಲದವರೆಂದು ಆಮೇಲೆ ಅರಿವಾಗಿರುತ್ತೆ)  ನೋಡಿಯೇ ಮನೆ ಮಗಳನ್ನು, ಮನೆಯಲ್ಲಿದ್ದ ಆಸ್ತಿ, ಬಂಗಾರ ಕೊಟ್ಟು ಭರ್ಜರಿ ಮದುವೆ ಮಾಡಿ ಕಳಿಸಿರುತ್ತಾರೆ. ದುರಾದೃಷ್ಟವೆಂದರೆ, ಅಲ್ಲಲ್ಲಿ ನೋಡಿದಂತೆ ಕೆಲವರು  ಎಲ್ಲವನ್ನೂ ಉಳಿಸಿಟ್ಟು ಒಂದು ಹೆಣ್ಣು ಜೀವವನ್ನೇ ಬಲಿ ತೆಗೆದುಕೊಂಡು ಬಿಟ್ಟಿರುತ್ತಾರೆ. ಅಂಥವರ ಪೂರ್ವಾಪರ ಯಾರಾದರೂ ತಿಳಿಸಿರಲಿಕ್ಕಿಲ್ಲವಾ? ಅಥವಾ ಹೆಣ್ಣೆತ್ತವರು ಬರೀ ದೊಡ್ಡ ಹುದ್ದೆ, ದೊಡ್ಡ ಆಸ್ತಿ, ದೊಡ್ಡಸ್ತಿಕೆ ಬೆಹವಿಯರ್ ನೋಡಿಯೇ  ಬಕ್ಕ ಬೋರಲು ಬಿದ್ದಿರುತ್ತಾರೇನೋ.  
 
"ನಮಗೆ ಆಸ್ತಿ ಇಲ್ಲ ನಿಜ, ಆದರೆ ತಿನ್ನಲು, ಇದ್ದವರನ್ನು ಸಾಕಲು ದುಡಿಮೆ ಇದೆ.  ಅದಕ್ಕಿಂತ ಹೆಚ್ಚು ತಂದು ಹಾಕಲು ಬದುಕು ಕಲಿಸಿದ ಪಾಠ ಜೊತೆ ಇದೆ.  ನೀವು ಬರೀ ಹೆಣ್ಣು ಕೊಟ್ಟು ಮದುವೆ ಮಾಡಿದರೆ ಸಾಕು" ಅಂದರೆ ಅನುಮಾನದಿಂದ ನೋಡುವವರಿದ್ದಾರೆ. "ಎಲ್ಡನೆ ಮದ್ವೆ ಏನೋ, ಮೊದ್ಲೇನೆ ದಾಕಿಗೆ ಏನಾಗಿತ್ತೋ ಏನೋ, ಇವನೇ ಏನಾರ ಮಾಡ್ಯಾನ ಏನ್ ಕತೀನೋ"  ಗುಸುಗುಸು ಶುರು ವಾಗುತ್ತೆ.  ಅದು ಹಂಗಲ್ಲ,  ನಂಗೆ ಸಿಂಪಲ್ ಆಗಿ ಮದುವೆ ಆಗಬೇಕಂತ ಆಸೆ, ಅಷ್ಟೇ.  ಅಷ್ಟಕ್ಕೂ ನಿಮಗೆ ನಿಮ್ ಮಗಳ ಮೇಲೆ ಅಷ್ಟು ಪ್ರೀತಿ ಇದ್ದರೆ, ಈಗ ನೀವೇನ್ ಮದುವೆ, ವರದಕ್ಷಿಣೆ, ವರೋಪಚಾರ ಅಂತೆಲ್ಲಾ ನೀಡ್ಬೇಕಂತಿದ್ರೋ ನೀವೇ ಇಟ್ಕೊಳ್ಳಿ  ಅಥವಾ ಅದ್ರಲ್ಲಿ ನಿಮ್ಗೆ ಎಷ್ಟು ತಿಳಿಯುತ್ತೋ ಅಷ್ಟನ್ನು ಅವಳ ಹೆಸರ ಮೇಲೇನೆ ಬ್ಯಾಂಕ್ ನಲ್ಲಿಟ್ಟುಬಿಡಿ, ನಂಗೇನೂ ಬೇಡ" ಅಂತೇನಾದ್ರೂ ಹುಡುಗ ಹೇಳಿದ ಅಂತಿಟ್ಕೊಳ್ಳಿ.  ಮುಗೀತು ಕಥೆ.  " ಒಹ್…  ಹೆಂಡ್ತಿ ಹೆಸರಲ್ಲಿ ಇಟ್ಟ ದುಡ್ಡಲ್ಲಿ ಬಂದ ಬಡ್ಡಿಯಲ್ಲೇ ಈ ನನ್ಮಗ ತಿಂದ್ ಬದುಕ್ಬೇಕೆನೋ" ಅನ್ನಲಿಲ್ಲ ಅಂದ್ರೆ ಕೇಳಿ. 
 
ಒಂದು ಮದುವೆ ನಾನು ನೋಡಿದ್ದು, ಮಾಡಿದ್ದು ಕಂಡಂತೆ ಹೇಳುವುದಾದರೆ, ಒಬ್ಬ ಹುಡುಗನಿಗೆ ಕನ್ಯಾ ಓಕೆ. ವರದಕ್ಷಿಣೆ ಬೇಡ, ಮದುವೆಯೊಂದನ್ನು ಮನೆ ಮುಂದೇನೋ, ಬಯಲಲ್ಲೋ, ಛತ್ರದಲ್ಲೋ ಅನುಕೂಲವಾದ ಜಾಗದಲ್ಲಿ ಮಾಡಿಕೊಟ್ಟರೆ ಸಾಕೆಂದು ಹೇಳಿತ್ತು.  ಕನ್ಯಾ ಕೊಡಲು ಅವರು ಒಪ್ಪಿದ್ದು  ಮೊದಲ ನೇದು  ಹುಡುಗನನ್ನು ನೋಡಿ.  ಜೊತೆಗೆ ಆ ಹುಡುಗನ ಹೆಸರಿಗೆ ಒಂದು ಸೈಟ್ ಇತ್ತೆಂಬ ಕಾರಣಕ್ಕೆ.. ತಮಾಷೆ ಎಂದರೆ, ಆ ಹುಡುಗನ ಹೆಸರಿಗೆ ಇದ್ದ ಸೈಟಿನಕ್ರಯ ಪತ್ರದ ಪ್ರತಿಯನ್ನು ಪರಿಶೀಲಿಸಿಯೇ ಹುಡುಗಿಯ ಪೋಷಕರು ಮದುವೆ ಮಾತುಕತೆಗೆ ಮುಂದಾಗಿದ್ದರು.  ಆಮೇಲೆ ಮದುವೆಯನ್ನು ಹುಡುಗನ ಕಡೆಯವರೇ ಮಾಡಿಕೊಂಡರು ಆ ಮಾತು ಬೇರೆ.    
 
ಮೇಲಿನದೆಲ್ಲಾ ಒತ್ತಟ್ಟಿಗಿರಲಿ. ಕೊನೆದಾಗಿ ಇತ್ತೀಚಿಗೆ ನನ್ನ ಸ್ನೇಹಿತರೊಬ್ಬರು ಹೇಳಿದ ಸಂಗತಿ ಹೇಳುತ್ತೇನೆ.  ಒಬ್ಬ ಹುಡುಗ.  ಒಳ್ಳೆ ಟ್ಯಾಲೆಂಟೆಡ್.  ಜಸ್ಟ್ ಬಿ. ಎ. ಓದಿ ಮನೆ ಕಡೆ ಒಕ್ಕಲುತನ, ಹೊಲ ಮನೆ, ಒಟ್ಟು ಕುಟುಂಬ ಎಲ್ಲಾ ಇದ್ದಂಥವರು.  ಓದು ಮುಗಿದ ಕೂಡಲೇ ನೌಕರಿ ಅಂತೆಲ್ಲಾ ಹೋಗದೇ ತಮ್ಮ ಹೊಲದ ಬಿತ್ತು, ಬೆಳೆ, ಕೆಲಸ ಅಂತೆಲ್ಲಾ ಮಾಡಿಕೊಂಡಿದ್ದರು.  ಅದೊಂದಿನ ಒಬ್ಬ ಸಾಧಕ, ಕೃಷಿ ಕುಟುಂಬದಿಂದ ಬಂದಂಥವ ಯು.ಪಿ ಎಸ್. ಸಿ.ನಡೆಸುವ  ಪರೀಕ್ಷೆ ಬರೆದು, rank ಪಡೆದು ಇಂಡಿಯನ್ ರೆವಿನ್ಯೂ ಸರ್ವಿಸ್ ಅಧಿಕಾರಿಯಾದ  ಯಶೋಗಾಥೆಯನ್ನು  ದಿನಪತ್ರಿಕೆಯಲ್ಲಿ  ಓದಿ ಪ್ರೇರಣೆಗೊಂಡು ಸೀದಾ ನಡೆದು ಕಷ್ಟ ಪಟ್ಟು ಓದಿ ಅದೊಂದಿನ ಯು. ಪಿ.ಎಸ್ ಸಿ. ಪರೀಕ್ಷೆ ಬರೆದ.  ಪಾಸೂ ಆಗಿ ಇಂಡಿಯನ್ ಟ್ರೇಡ್ ಸರ್ವಿಸ್ (ITS)  ಹುದ್ದೆಗೆ ಸೇರಿದ.   ಮದುವೆಗೆಂದು ಕನ್ಯಾ ನೋಡಿದರೆ ಕನ್ಯಾ ಕೊಡುವವರಿಗೆ  "ಅವರಿವರು"  "ಆ ಹುಡುಗ ನಿನ್ನೆ ಮೊನ್ನೆ ಇದೇ ಊರಲ್ಲಿ ಅವರ ಹೊಲ ಮನಿ ಕೆಲಸ ಮಾಡ್ಕೊಂಡು ಇದ್ದೋನು ಅದ್ಹೆಂಗೆ ಅಷ್ಟೊಂದು ದೊಡ್ಡ ಕೆಲಸ ಮಾಡೋಕ್ ಸಾಧ್ಯ, ಇಲ್ಲ ಬಿಡ್ರಿ" ಅಂದರಂತೆ. ಅಷ್ಟಕ್ಕೇ ಕನ್ಯಾ ಕೊಡುವವರು ಸತ್ಯಾಸತ್ಯತೆ  ನೋಡದೇ ಹಿಂದೇಟು ಹಾಕಿದ್ದಾರೆ.   ಅದಾಗಿ ಎರಡು ಮೂರು ವರ್ಷದ ಬಳಿಕ ಅದೇ ಪೋಷಕರು  "ವರನ" ಸರ್ಕಾರಿ ನೌಕರಿಯ ನೇಮಕಾತಿ ಆದೇಶ, ವೇತನ ಪಟ್ಟಿ ತೋರಿಸಿದ ನಂತರ ನಂಬಿ ಕನ್ಯಾ ಕೊಟ್ಟು ಮದುವೆ ಮಾಡಿದರಂತೆ.  
 
ಈ ತರಹದ ಸಾಕಷ್ಟು ಮದುವೆಗಳು ದೊಡ್ಡ ದೊಡ್ಡ ಹುದ್ದೆಯ ನೌಕರಿಯಲ್ಲಿರುವವರದು, ಕಡಿಮೆ ಓದಿ ದವರ, ಕಡಿಮೆ ಸಂಬಳದವರ, ಬಡವರ, ಮಧ್ಯಮ ವರ್ಗದವರ ಕುಟುಂಬಗಳಲ್ಲಿ ನಡೆದು ಸುಖವಾಗಿಯೂ ಇವೆ, ಸಂಸಾರಗಳೂ ಚೆನ್ನಾಗಿವೆ; ಸಾಲದ ಹೊರೆ ಒಂದು ಬಿಟ್ಟು.  ಅದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆದರೆ, ಪ್ರಾಮಾಣಿಕವಾಗಿದ್ದಂಥ ಪರಿಸ್ಥಿತಿಯ ಜನರಲ್ಲಿ ನಡೆಸುವ ಇಂಥ ತಪಾಸಣೆಗಳಿಂದ ಆನಂತರದ ದಿನಗಳಲ್ಲಿ ಯಾರಾದರೂ ಯಾರೊಂದಿಗಾದರೂ ಎಷ್ಟರ ಮಟ್ಟಿಗೆ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ? ಉಳಿದರೆ ಸಂತೋಷ.  ಉಳಿಯದಿದ್ದರೆ? ಯಾವುದಕ್ಕೆ ಇರುತ್ತೆ ಬೆಲೆ?
*****
ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ಕನ್ಯಾ ಕೊಡ್ತೀವಿ, ವರ ಹೆಂಗೇ?: ಅಮರ್ ದೀಪ್ ಪಿ.ಎಸ್.

 1. ನಮ್ಮ ಊರಿನಲ್ಲೂ ಒಬ್ಬ ಭೂಪ ಇದ್ದ (ಈಗಲೂ
  ಇದ್ದಾನೆ) ಈಗ ವಯಸ್ಸು ೬೦ ಆಗಿದೆ. ಪ್ರಾಯದಲ್ಲಿ
  ಸುಮಾರು ೪೫೦ ಕನ್ಯಾಮಣಿಗಳನ್ನು ನೋಡಿ
  ಉಪ್ಪಿಟ್ಟು ಕೇಸರಿಬಾತ್ ತಿಂದು ದುಂಡಗಾದ.
  ಎಲ್ಲಾ ಕನ್ಯಾಮಾಣಿಗಳನ್ನು ತಿರಸ್ಕರಿಸುತ್ತಾ ಹೋದ.
  ಈಗ ಮದುವೆಯಿಲ್ಲದೆ ರಿಟೈರ್ ಆಗಿದ್ದಾನೆ.

 2. ಚೆನ್ನಾಗಿದೆ ಬರಹ. ಮದುವೆ ಬಗ್ಗೆ ಹೇಳಲು ಹೋದರೆ ತುಂಬಾ ಇದೆ ಬಿಡಿ.ಅಲ್ಲವೇ…?

 3. story thumba chennagide…. ನಮ್ಮ ಆಫೀಸ್​ನಲ್ಲಿ ಕೆಲಸ ಮಾಡೋ ಓರ್ವ ಮಹಾಶಯ ನೋಡಿರೋ ಹುಡಿಗಿಯರ ಲೆಕ್ಕವೇ ಇಲ್ಲ. ಈಗ ಸುಮಾರು 55 ವರ್ಷ. ಇನ್ನೂ ಮದುವೆಯಾಗಿಲ್ಲ. ಆದರೂ ಹುಡುಗಿಯರನ್ನು ಜರಿಯೋದು ಬಿಟ್ಟಿಲ್ಲ….

 4. chennagithu sir.  Nanagu aneka bari eerithiya anubhava agide.  Esto bari nannna anumanadinda nodidare.  Amele paschathapa pattidare…

 5. ಬರುವ ಹಾದಿಯಲ್ಲಿ ಬವಣೆಗಳು ಬಹಳ
   ಬಿಳಿಯ ಹಾಳಿಯಲ್ಲಿ ಬರವಣಿಗೆ ವಿರಳ,
   ನಿ ನಡೆವ ಹಾದಿಯಲ್ಲಿ ನೆನಪುಗಳು ಹೇರಳ. 
  ಹೇಳ ಹೊರಟರೆ ಅದುವೇ ನನಗೆ ಹಳ ಹಳ 

Leave a Reply

Your email address will not be published. Required fields are marked *