ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ ಈಗ ಮನುಷ್ಯನ ಯೋಗ್ಯತೆಯನ್ನು ಹೊಗಳುತ್ತಾ ಕುಳಿತುಕೊಳ್ಳುವುದು ಬೇಕಿಲ್ಲ. ಮೂಲ ವಿಷಯಕ್ಕೆ ಬರೋಣ.
ಮೊದಲಿಗೆ ಮಕ್ಕಳ ಓದಿಗೆ ಸುಲಭ ಲಭ್ಯವಾಗಿದ್ದ ಚಂದಮಾಮ ಬಾಲಮಿತ್ರಗಳಂತಹ ಪುಸ್ತಕಗಳಲ್ಲಿ ಕಳ್ಳನ ಕಥೆಗಳು ಇರುತ್ತಿದ್ದುದು ಸಾಮಾನ್ಯ. ಕನ್ನ ಹಾಕುವ ಚಿತ್ರಗಳು ಎಷ್ಟು ಚೆನ್ನಾಗಿ ಇರುತ್ತಿತ್ತು ಗೊತ್ತಾ? ಗೋಡೆಯೊಂದರಲ್ಲಿ ಓರೆಕೋರೆಯಾಗಿ ಕೆತ್ತಿದ ಒಂದು ಅಮೀಬಾದ ಚಿತ್ರದಂತಹ ತೂತು. ಅದು ಗೋಡೆಯ ನೆಲಮಟ್ಟದಿಂದ ಸ್ವಲ್ಪ ಮೇಲೆ. ಅಂದರೆ ಕಳ್ಳ ಕಾಲೆತ್ತಿಯೋ ತಲೆ ತೂರಿಸಿಯೋ ಅದರೊಳಗೆ ಸಲೀಸಾಗಿ ಇಳಿಯುವಂತೆ. ಆ ಜಾಗವಲ್ಲದೆ ಬೇರೆಲ್ಲಿಯೂ ಇಡೀ ಗೋಡೆಯಲ್ಲಿ ಕಲೆಯ ಗುರುತೂ ಇಲ್ಲದಂತೆ.. ಕಳ್ಳತನ ಮುಗಿಸಿ ಬರುವಾಗ ಅವನ ಬೆನ್ನ ಮೇಲಿದ್ದ ಚೀಲ ಸಮೇತ ಅವನು ಅದರೊಳಗಿನಿಂದ ಹೊರಬರುವಂತೆ.. ಆಹಾ ಅದೆಷ್ಟು ಕಲಾತ್ಮಕವಾಗಿತ್ತೆಂದರೆ ನಮ್ಮ ಮನೆಯ ಗೋಡೆಗೂ ಅಂತಹುದೇ ಒಂದು ಕನ್ನ ಕೊರೆದು ಕಳ್ಳ ಬರಬಾರದೇ ಅನ್ನಿಸುತ್ತಿತ್ತು.
ಒಮ್ಮೆ ಏನಾಯ್ತು ಅಂದ್ರೆ ನಾನು ’ಬುದ್ಧಿವಂತ ಕಳ್ಳ’ ಎಂಬ ಕಥೆಯೊಂದನ್ನು ಓದಿದ್ದೆ. ಆ ಕಳ್ಳ ಎಂಥೆಂತಹಾ ಅಧಿಕಾರಿಗಳಿಗೂ ಚಳ್ಳೆಹಣ್ಣು ತಿನ್ನಿಸಿ ಶ್ರೀಮಂತರ ಮನೆಗೆ ಕನ್ನ ಕೊರೆದು ಕಳ್ಳತನ ನಡೆಸುವವನು. ಯಾರ ಕೈಗೂ ಸಿಕ್ಕಿ ಬೀಳದವನು. ರಾಬಿನ್ ಹುಡ್ ನಂತೆ ಬಡವರಿಗೆ ಸಹಾಯ ಮಾಡುತ್ತಿದ್ದ ಕಳ್ಳನಾದ ಕಾರಣ ಅವನ ಚಿತ್ರವು ಮಾಮೂಲಿ ಕಳ್ಳರಂತೆ ವಿಕಾರವಾಗಿರದೇ ರಾಜಕುಮಾರನ ಚಿತ್ರದಂತೆ ಸುಂದರವಾಗಿತ್ತು.ಹಾಗಾದ ಕಾರಣವೋ ಏನೋ ಆತ ರಾಜನೊಡನೆ ಪಂಥ ಕಟ್ಟಿ ಅವನ ಮಗಳನ್ನು ಅರಮನೆಗೇ ಕನ್ನ ಕೊರೆದು ಕದ್ದೊಯ್ಯುತ್ತಾನೆ. ಕಥೆಯ ಕೊನೆಗೆ ರಾಜ ಅವನನ್ನೇ ತನ್ನ ಉತ್ತರಾಧಿಕಾರಿಯನ್ನಾಗಿಸಿ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ನನಗಂತೂ ಇಡೀ ದಿನ ಆ ಕಳ್ಳನದ್ದೇ ಆಲೋಚನೆ. ರಾತ್ರೆಯೂ ಅದೇ ಗುಂಗಿನಲ್ಲಿ ಮಲಗಿ ನಿದ್ದೆ ಹೋಗಿದ್ದೆ. ಅದ್ಯಾಕೋ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಪಕ್ಕದ ಕೋಣೆಯಿಂದ ಅಪ್ಪನ ಗೊರಕೆಯ ಶಬ್ಧವಲ್ಲದೆ ಇನ್ನೂ ಒಂದು ಶಬ್ಧವನ್ನು ನನ್ನ ಕಿವಿಗಳು ಗ್ರಹಿಸಿದವು. ಅದೂ ಗೋಡೆಯ ಆ ಕಡೆಯಿಂದ ಬರುತ್ತಿತ್ತು. ಗೋಡೆಗ ಟಪ್ ಟಪ್ ಎಂದು ಬಡಿದಂತೆ. ನನಗಂತೂ ತಿಳಿದೇ ಬಿಟ್ಟಿತು. ಇದು ಯಾವುದೋ ಕಳ್ಳನದೇ ಕೆಲಸ. ಅಂದರೆ ಗೋಡೆಗೆ ಕನ್ನ ಕೊರೆದು ಒಳ ನುಗ್ಗಲು ಯತ್ನಿಸುತ್ತಿದ್ದಾನೆ. ಆದರೆ ಎಲ್ಲಾ ಕಳ್ಳರೂ ಕಥೆಯಲ್ಲಿನ ಒಳ್ಳೆಯ ಕಳ್ಳರಲ್ಲ ಎಂದು ಹಲವಾರು ಕಳ್ಳರ ಕಥೆಗಳನ್ನು ಓದಿದ್ದ ನನಗೆ ತಿಳಿದಿತ್ತು. ಅಮ್ಮ ಅಪ್ಪನನ್ನು ಕೂಗಿ ಏಳಿಸೋಣ ಎಂದುಕೊಂಡೆ. ಆದರೆ ಯಾಕೋ ಅವರ ನಿದ್ದೆ ಹಾಳು ಮಾಡುವುದು ಬೇಡ . ಕಳ್ಳ ಬಂದರೆ ಆ ಕನ್ನದ ತೂತಿನಿಂದಲೇ ತಾನೇ ಒಳ ಬರುವುದು. ಒನಕೆ ಓಬವ್ವಳ ಕಥೆಯನ್ನೂ ಅರೆದು ಕುಡಿದಿದ್ದ ಕಳ್ಳ ಕನ್ನದ ತೂತಿನಿಂದ ಒಳ ಬರುವಾಗಲೇ ಮಂಡೆಗೆ ಬಡಿಯುವ ಐಡಿಯಾವು ಗೊತ್ತಿತ್ತಲ್ಲಾ… ಆದರೆ ಈ ಕತ್ತಲಲ್ಲಿ ಒನಕೆ ಎಲ್ಲಿಂದ ಬರಬೇಕು? ಪಕ್ಕದಲ್ಲಿದ್ದ ಶಾಲೆಯ ಚೀಲದಿಂದ ಹಿಡಿದೆಳೆದ ಮರದ ಸ್ಕೇಲನ್ನೇ ಬಡಿಗೆಯಂತೆ ಕೈಯಲ್ಲಿ ಹಿಡಿದುಕೊಂಡು ಅಲ್ಲಾಡದೇ ಮಲಗಿಯೇ ಇದ್ದೆ. ಯಾಕೆಂದರೆ ಇನ್ನೂ ಗೋಡೆಯ ತೂತು ಆಗಿರದ ಕಾರಣ ನಾನೆಲ್ಲಿ ನಿಲ್ಲಬೇಕು ಎಂದು ನಿರ್ಧಾರವಾಗಿರಲಿಲ್ಲ. ಆ ಸದ್ದು ಅದ್ಯಾವಾಗ ನಿಂತಿತೋ, ಮತ್ಯಾವಾಗ ನನ್ನ ಕಣ್ಣುಗಳು ಮುಚ್ಚಿ ನಿದ್ದೆ ಹತ್ತಿತೋ ನನಗೆ ಗೊತ್ತಿಲ್ಲ ಬೆಳಗ್ಗೆ ಏಳುವಾಗ ಕೈಯಲ್ಲಿ ಇನ್ನೂ ಸ್ಕೇಲ್ ಹಿಡಿದು ಆಯುಧ ಪಾಣಿಯಾಗಿಯೇ ಎದ್ದು ರಾತ್ರೆಯ ಕಥೆಯನ್ನು ಅಪ್ಪ ಅಮ್ಮನಿಗೆ ಅವಸರದಿಂದ ಹೇಳಿದೆ. ಅವರಿಬ್ಬರೂ ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಕ್ಕರು. ಯಾಕೆಂದರೆ ಆ ಶಬ್ಧದ ಮೂಲ ಬೀದಿಯ ಕಜ್ಜಿನಾಯಿಯೊಂದು ಅಲ್ಲಿ ಮಲಗಿ ತನ್ನ ಬೆನ್ನನ್ನೋ ಕಿವಿಯನ್ನೋ ಕೆರೆದುಕೊಂಡದ್ದಾಗಿತ್ತಂತೆ. ಹೀಗೆ ಅವರು ಕನ್ನದ ಮೂಲಕ ಕಳ್ಳ ಬರುವ ನನ್ನ ಕನಸುಗಳಿಗೆ ಕೊಳ್ಳಿ ಇಟ್ಟುಬಿಟ್ಟರು.
ನಾನು ಇತ್ತೀಚೆಗಷ್ಟೇ ನೋಡಿದ ಹಳೆಯ ಇಂಗ್ಲೀಷ್ ಚಲನಚಿತ್ರವೊಂದು ಇಡಿಯಾಗಿ ಕನ್ನ ಕೊರೆಯುವುದರ ಬಗ್ಗೆಯೇ ಚಿತ್ರಿಸಲ್ಪಟ್ಟಿತ್ತು. ಜೈಲುಗಳಿಂದ ತಪ್ಪಿಸಿಕೊಳ್ಳಲು ಒದ್ದಾಡುವ ಯುದ್ಧ ಕೈದಿಗಳು ಕನ್ನ ಕೊರೆಯುವ ಚಿತ್ರಣವದು. ಅದರಲ್ಲಿ ನಾನು ಅದೆಷ್ಟು ಮುಳುಗಿ ಹೋಗಿದ್ದೆ ಎಂದರೆ ಅತ್ತ ಜೈಲರ್ ನ ಶೂಸ್ ಸದ್ದಿನ ಹಿಮ್ಮೇಳ ಕೇಳುತ್ತಿದ್ದಂತೆ ನನ್ನ ಹೃದಯ ಆತಂಕದಿಂದ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಎಲ್ಲಾ ಸರಿಯಾಗಿ ಕನ್ನ ಕೊರೆದು ಮುಗಿಸಿ ಒಬ್ಬೊಬ್ಬರೇ ಹೊರ ಬೀಳುವಾಗ ನಾನು ಬೆವರು ಒರೆಸಿಕೊಂಡಿದ್ದೆ.
ಹಾಗೆಂದು ಈ ಕನ್ನ ಹಾಕುವುದು’ ಎಂಬುದು ಯಾವಾಗಲೂ ಕ್ರಿಯಾಪದವೇ ಆಗಿರಬೇಕಿಲ್ಲ. ಹರೆಯದ ವಯಸ್ಸಿನಲ್ಲಿ ಕತ್ತೆಯೂ ಸುಂದರಿಯೋ, ಸುಂದರನೋ ಆಗಿ ಕಾಣುವಾಗ ಈ ಕನ್ನ ಹಾಕುವುದು ನಾಮ ಪದವಾಗಿ ಬಿಡುತ್ತದೆ. ಅದೂ ಡೈರೆಕ್ಟ್ ಹೃದಯಕ್ಕೇ ಕನ್ನ. ಕಣ್ಣು ಕಣ್ಣೂ ಕಲೆತಾಗಾ.. ಅಂತ ಹಾಡಿ ಎದೆ ಬಡಿತ ಮೇಲಕ್ಕೇರಿ ಗೊತ್ತಿಲ್ಲದಂತೆ ಪಕ್ಕನೆ ಹೃದಯ ಕದ್ದೊಯ್ಯಲ್ಪಡುತ್ತದೆ. ಕದ್ದೊಯ್ಯುವ ಚೋರರ ಕುಲ ಗೋತ್ರ ಪ್ರವರಗಳು ಗೊತ್ತಾಗಿ ಕೆಲವೊಮ್ಮೆ ಅದೇ ವೇಗದಲ್ಲಿ ಮರಳಿ ಸಿಗುವುದೂ ಉಂಟು. ಆದರೆ ಗಂಟೆಗಳ ಅಂತರದಲ್ಲಿ ಜೀವಂತ ಹೃದಯವನ್ನೇ ಊರಿಂದ ಊರಿಗೆ ಒಯ್ದು ಜೋಡಿಸಬಲ್ಲ ಈ ಸಶಕ್ತ ಇಂಟರ್ನೆಟ್ ಯುಗ ಈ ನವಿರಾದ ಭಾವನೆಗಳನ್ನು ಉದ್ದೀಪನಗೊಳಿಸುತ್ತಿದ್ದ ಮಧುರ ಸ್ಮೃತಿಯಾಗಿ ಜೀವನವಿಡೀ ಕಾಡುತ್ತಿದ್ದ ಈ ಕನ್ನ ಹಾಕುವಿಕೆಯನ್ನು ನಿಲ್ಲಿಸಿಬಿಟ್ಟಿದೆ. ಈಗೇನಿದ್ದರೂ ಎಸ್ಸೆಮ್ಮೆಸ್ಸಿನ ಕಾಲ. ಕರೆನ್ಸಿ ಇದ್ದಷ್ಟು ದಿನ ನಿಮ್ಮ ಹೃದಯ ಮಿಡಿಯುತ್ತಿರುತ್ತದೆ. ಮೆಸೇಜ್ ಫಾರ್ವರ್ಡ್ ಮಾಡಿದಂತೆ ಇವನ ಹೃದಯ ಅವಳಿಗೆ ಪಾಸ್ ಮಾಡಲ್ಪಡುತ್ತದೆ. ಒಂದೇ ಮೆಸೇಜನ್ನು ಹಲವರಿಗೆ ಕಳುಹಿಸಿದಂತೆ ಹೃದಯವೂ ಹಲವು ಕಡೆ ಪಯಣಿಸಿ ಮೂಲ ಸ್ಥಾನ ಸೇರುವುದೂ ಉಂಟು.
ಆದರೆ ಇವರೆಲ್ಲರನ್ನೂ ಮೀರಿಸಿದ, ಇಲಿ ಹೆಗ್ಗಣಗಳಂತಹ ’ಕನ್ನ ವೀರ’ ಗುರುಗಳನ್ನೇ ನಾಚಿಸುವ ಇನ್ನೊಂದು ಗುಂಪು ಈ ವಿದ್ಯೆಯನ್ನು ಮುಂದುವರಿಸುತ್ತಾ ಬಂದಿರುವುದೇ ಈಗಲೂ ಕನ್ನಡ ನಿಘಂಟಿನಲ್ಲಿ ಈ ಪದ ಉಳಿಯಲು ಕಾರಣವಾಗಿರುತ್ತದೆ. ಸೇವೆಯೇ ಇವರ ಕೆಲಸವಾದ್ದರಿಂದ ಅವರೇನು ಇದಕ್ಕೆ ಪ್ರತ್ಯೇಕ ಶುಲ್ಕ ವಿಧಿಸದೇ ಸಮಾಜಕ್ಕೂ ಮುಂದಿನ ಜನಾಂಗಕ್ಕೂ ಉಪಕಾರ ಮಾಡುತ್ತಾರೆ. ಆದರೆ ಜನ ಸಾಮಾನ್ಯರು ಅವರ ಸೇವೆಯನ್ನು ಪರಿಗಣಿಸದೇ ಅವರನ್ನು ದೂರುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಆ ಸೇವಾ ಮನೋಭಾವದ ಮಹಾತ್ಮರು ಇನ್ಯಾರು ಅಲ್ಲ. ಭ್ರಷ್ಟ ಅಧಿಕಾರಿಗಳು ಮತ್ತು ಕೆಟ್ಟ ರಾಜಕಾರಿಣಿಗಳು. ಇವರದ್ದಂತೂ ಕಣ್ಣಿಗೆ ಕಾಣದ ಮಾಯಜಾಲದ ಕನ್ನ. ಸರಕಾರದಿಂದ ಮಂಜೂರಾದ ಹಣ ನೇರವಾಗಿ ಇವರ ತಿಜೋರಿಯ ಕಡೆಗೇ ಬೀಳುವಂತೆ ಆಡಳಿತದ ಗೋಡೆಗಳಿಗೇ ಕನ್ನ ಹೊಡೆದುಬಿಟ್ಟಿರುತ್ತಾರೆ. ಅದೂ ಕೊಂಚವೂ ಸದ್ದಾಗದೇ, ಕಿಂಚಿತ್ತೂ ಸುಳಿವು ನೀಡದೇ.. ಆದರೀಗ ಈ ಕನ್ನ ಹಾಕುವ ಕಳ್ಳರು ಕಾಣಿಸುವುದೇ ಇಲ್ಲ. ಏನಿದ್ದರೂ ಬಾಗಿಲು ಒಡೆಯುವುದು, ಸರಳು ಕತ್ತರಿಸಿ ಒಳ ನುಗ್ಗುವುದು ಇಲ್ಲದಿದ್ದರೆ ಚಾಕೂ ಚೂರಿ ಪಿಸ್ತೂಲ್ ಗಳನ್ನು ತೋರಿಸಿ ಹೆದರಿಸಿ ಹಣ ಕೀಳುವುದು ಕಳ್ಳರ ದಂಧೆಯಾಗಿದೆ. ಇನ್ನೂ ದೊಡ್ಡ ಕಳ್ಳರು ಬಾಂಬ್, ಹಾಕಿ ದೇಶವನ್ನೇ ಪುಡಿ ಮಾಡುತ್ತಾರೆ. ಮೊದಲಿನ ಕಳ್ಳರಂತೆ ದೈಹಿಕ ಶ್ರಮ ಬೇಡುವ ಕನ್ನ ಹಾಕುವಿಕೆಯನ್ನು ಬಿಟ್ಟುಕೊಟ್ಟು ಕಳ್ಳತನದ ಸಂಸ್ಕೃತಿಯ ಮೂಲ ಕೊಂಡಿಯನ್ನು ಮರೆತು ಆಧುನಿಕತೆಯತ್ತ ದಾಪುಗಾಲು ಹಾಕುತ್ತಿದ್ದಾರೆ.
ಬೆನ್ನಿನ ಮೇಲೆ ಸಾಂತಾಕ್ಲಾಸಿನ ಉಡುಗೊರೆಯ ಚೀಲದಂತಹಾ ಹೊರಲು ಸಾಧ್ಯವಾಗುವಷ್ಟೇ ತುಂಬಿದ ಚೀಲ ಹೊತ್ತ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ ( ಕೆಲವೊಮ್ಮೆ ಒಂದು ಕಣ್ಣಿಗೆ ಮಾತ್ರ) ದೃಡಕಾಯ ಜೀವಿಯೊಂದು, ತಾನೇ ಬೆವರು ಸುರಿಸಿ ಮಾಡಿದ ಗೋಡೆಯ ನಡುವಿನ ಕನ್ನದಲ್ಲಿ ಸಾಗುವ ಸಾಂಪ್ರದಾಯಿಕ ರೂಪವನ್ನು ಕಾಣುವುದು ಅಪರೂಪವಾಗುತ್ತಿದೆ. ಮೊದಲು ಕಳ್ಳತನ ಎನ್ನುವುದು ಏನೂ ಇಲ್ಲದವನೊಬ್ಬ ತನ್ನದೋ ತನ್ನ ಕುಟುಂಬದ್ದೋ ಹೊಟ್ಟೆ ಹೊರೆಯುವಲ್ಲಿನ ಸಂಪಾದನೆಗೆ ಸೀಮಿತವಾಗಿತ್ತು. ಈಗ ಅದು ಬಡವ ಬಲ್ಲಿದನೆಂಬ ಭೇದವಿಲ್ಲದೆ ಯಾರು ಬೇಕಾದರವರು ಊರೂರನ್ನೇ ಕೊಳ್ಳೆ ಹೊಡೆಯುವ ಮಟ್ಟಕ್ಕೇರಿದ್ದಿದೆಯಲ್ಲಾ ಅದು ದುರಂತ ಎಂದೇ ನನ್ನ ಅನಿಸಿಕೆ.. ನೀವೇನಂತೀರಾ..?
-ಅನಿತಾ ನರೇಶ್ ಮಂಚಿ
*****
"ಕನ್ನ " ವಿಚಾರವಾಗಿ ರಿಸರ್ಚ್ ನಡೆಸಿ ಓದುಗಳ ಮನಸಿಗೆ "ಕನ್ನ"ಹಾಕಿದ್ದಾರೆ. ಚನ್ನಾಗಿದೆ