ಕನ್ನಡ v/s ಇಂಗ್ಲಿಷ್ : ಸೂರಿ ಹಾರ್ದಳ್ಳಿ


ನಮ್ಮ ಕಂಪನಿಯಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅಕ್ಷರಗಳ ಮಾಲೆ ಕೊಟ್ಟಾಗ ‘ಓಹ್ ಮೈ ಗಾಡ್,’ ಎಂಬೊಂದು ಉದ್ಗಾರ ಹಿಂದಿನಿಂದ ಬಂತು. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳು ಸರಿಯೆಂದ ನಮ್ಮವರು ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳೇ, ಕಲಿಯಲು ಕಷ್ಟ ಎಂದು ಮೂಗು ಮುರಿಯುತ್ತಾರೆ. ಆದರೆ ಚೀನೀ ಭಾಷೆಯಲ್ಲಿ ಸುಮಾರು 43 ಸಾವಿರ ಅಕ್ಷರಗಳಿವೆ ಎಂದರೆ ನಂಬುವಿರಾ? ನಂಬಲೇಬೇಕು. ಆದರೆ ಒಬ್ಬ ವ್ಯಕ್ತಿಯು ಮಾತನಾಡಲು ಮೂರನೆಯ ಒಂದು ಭಾಗ ಮಾತ್ರ ಕಲಿತರೆ ಸಾಕಂತೆ. ಆದರ ಇನ್ನೊಂದು ದುರಂತ ಎಂದರೆ ಅದು ಧ್ವನಿ ಭಾಷೆ, ಫೊನೆಟಿಕ್ ಲ್ಯಾಂಗ್‍ವೇಜ್. ಒಂದೇ ಪದವನ್ನು ಬೇರೆ ಬೇರೆ ರೀತಿ ಉಚ್ಚರಿಸಿದರೆ ಅದರ ಅರ್ಥ ಬೇರೆ ಬೇರೆಯೇ ಆಗಿಬಿಡುತ್ತದೆ. ಆದರೆ ಬರೆಯುವಾಗ?

ಇಂಗ್ಲಿಷ್ ಏನೂ ಕಡಿಮೆ ಇಲ್ಲ ಬಿಡಿ live ಎಂಬುದನ್ನು ಲಿವ್ ಮತ್ತು ಲೈವ್ ಆಗಿಯೂ, lead ಎಂಬುದನ್ನು ಲೀಡ್, ಲೆಡ್ ಆಗಿಯೂ, read ಎಂಬುದನ್ನು ರೆಡ್ ಅಥವಾ ರೀಡ್ ಆಗಿಯೂ ಓದಬಹುದಾಗಿರುತ್ತದೆ. ಇಲ್ಲಿ ನಾನು ‘ಇತ್ಯಾದಿ’ ಎಂದು ಬರೆಯುತ್ತೇನೆ. ಇತ್ಯಾದಿ ಎಂದರೆ ತನಗೆ ಇನ್ನಷ್ಟು ಗೊತ್ತು ಎಂದು ಗೊತ್ತಿಲ್ಲದಿದ್ದರೂ ಹೇಳುವ ವಿಧಾನ.

ಹೋಗಲಿ, ಇಂಗ್ಲಿಷಿನಲ್ಲಿ ಎಷ್ಟು ಅಕ್ಷರಗಳಿವೆ? ನೀವು ಸುಲಭವಾಗಿ ಹೇಳಿಬಿಡುತ್ತೀರಿ, 26 ವರ್ಣಮಾಲೆಗಳಿವೆ ಎಂದು. ಆದರೆ ಹಿರಿದಕ್ಷರಗಳು (uppercase) ಕಿರಿದಕ್ಷರಗಳಂತೆ (lowercase) ಇಲ್ಲ. ಓದುವಾಗ ಹಿರಿದಕ್ಷರಳಿಗೆ ಏನಾದರೂ ವಿಶೇಷತೆ ಇದೆಯೇ? ಇಲ್ಲ. ಅದು ಬರೀ ಬರೆಯುವಾಗ ಮಾತ್ರ. ಕ್ಯಾಪಿಟಲ್ ಅಕ್ಷರಗಳು ಎಷ್ಟೋ ಬಾರಿ capital punishment ಆಗಿಬಿಡುತ್ತವೆ.

ಇಂಗ್ಲಿಷಿನಲ್ಲಿ ಕೈಲಿ ಬರೆಯುವ ಅಕ್ಷರಗಳು ಮುದ್ರಣದ ಅಕ್ಷರಗಳಂತಿಲ್ಲ. ಜೊತೆಗೆ ಸಂಕೇತಾಕ್ಷರಗಳು ಅಥವಾ ಸ್ಪೆಷಲ್ ಕ್ಯಾರೆಕ್ಟರುಗಳು (ಕನ್ನಡದಲ್ಲಿ ಇವಿರಲಿಲ್ಲ, ಇಂಗ್ಲಿಷಿನ ಪ್ರಭಾವದಿಂದ ನಾವೂ ಅಳವಡಿಸಿಕೊಂಡೆವು) ಇವೆ. ಇವನ್ನೆಲ್ಲಾ ಒಟ್ಟಿಗೆ ಪರಿಗಣಿಸಿದರೆ ನಾವು ಕಲಿಯಬೇಕಾದ ಒಟ್ಟು ಅಕ್ಷರಗಳು ಸುಮಾರಾಗಿ 150 ಮೀರುತ್ತದೆ. ಅಷ್ಟಲ್ಲದೇ ಕಿರಿಯಕ್ಷರ ಎಲ್ ಮತ್ತು ಐ (I) ಇವುಗಳು, ಇವು ಒಂದೇ ಥರ ಇವೆ. ಅದು ಒಂದು ಎಂಬ ಅಂಕೆಯೂ ಆಗುತ್ತದೆ. ಕರ್ನಾಟಕದಲ್ಲಿ ವಾಹನಗಳ ರಿಜಿಸ್ಟ್ರೇಶನ್ ಸಂಖ್ಯೆ ಬರೆಯುವಾಗ ಅಲ್ಲಿ ಈ ಅಕ್ಷರವನ್ನ ಬರೆಯುವುದಿಲ್ಲ. JHಸರಣಿಯ ನಂತರ JJ ಬರುತ್ತದೆ. ವಿಮಾನಗಳಲ್ಲಿ ಆಸನಗಳ ಅಡ್ಡ ಸಂಖ್ಯೆಯನ್ನು ಬರೆಯುವಾಗ ಈ I ಇರುವುದಿಲ್ಲ. ಉದಾಹರಣೆಗೆ A, B, C, D, E, F, G, H, J ಇರುತ್ತದೆ. ಅಂದರೆ I ಮಿಸ್ಸಿಂಗು. ಅಂತಹದೇ ಇನ್ನೊಂದು ಪಾಪದ ಅಕ್ಷರವೆಂದರೆ o. ಅದು ಸೊನ್ನೆಯಾಗಿಯೂ ಕಾಣುತ್ತದೆ. ಮತ್ತೆ ಕನ್‍ಫ್ಯೂಷನ್ನು! ಝಡ್ ಅನ್ನು ಜೀ ಎಂದೂ ಓದುತ್ತಾರೆ. ಒಂದು ಥರ ಬರೆದು ಇನ್ನೊಂದು ಥರ ಓದುವ ಇನ್ನೊಂದು ವಿಧಾನ ಇದೆ. ಉದಾಹರಣೆಗೆ ‘ಡಿ’ ಅಕ್ಷರ. ಇದು ಡ, ದ, ಜ (graduate) ಎಂದೆಲ್ಲಾ ಓದಲ್ಪಡುತ್ತದೆ. ಕೆಲವೊಮ್ಮೆ ಸೈಲೆಂಟ್ ಲೆಟರ್ ಕೂಡಾ ಆಗುತ್ತದೆ (budget).

ಈ ಸಾಲಿನಲ್ಲಿ ಸಿ ಅಕ್ಷರ ಮೊದಲ ಸ್ಥಾನದಲ್ಲಿದೆ. ಅದು ಕ, ಸ, ಷ, ಸ, ಎಂದೆಲ್ಲಾ ಓದಲ್ಪಟ್ಟರೆ ಟಿ ಅಕ್ಷರವು ಚ, ತ, ಟ ಎಂದೆಲ್ಲಾ ಅಗುತ್ತದೆ. ಈ ಪಟ್ಟಿಯನ್ನು ಇಲ್ಲಿಗೇ ನಿಲ್ಲಿಸುತ್ತೇನೆ. ಕನ್ನಡದವನಾದ ನನಗೆ ಇದು ಗೊಂದಲವನ್ನು ಹುಟ್ಟಿಸಿದ್ದಂತೂ ಬಲು ಸತ್ಯ. ಈ ಎಲ್ಲಾ ಅಕ್ಷರಗಳಲ್ಲಿ ನನ್ನ ಸಹಾನುಭೂತಿಯನ್ನು ಪಡೆದ ಅಕ್ಷರವೆಂದರೆ ಕ್ಯೂ (Q). ಪಾಪ, ಇದು ಒಂದೇ ಅಕ್ಷರವಾದರೂ ಇದರ ಹಿಂದೆ (ಬರೆಯುವಾಗ ಮುಂದೆ) ನಾಯಿಯ ಹಿಂದೆ ಬಾಲ ಇರುವ ಹಾಗೆ ಯು (U) ಬರುತ್ತದೆ. ಯು ಇಲ್ಲದೇ ಇದಕ್ಕೆ ಅಸ್ತಿತ್ವವೇ ಇಲ್ಲ! accenture ಅನ್ನು ಅಕ್ಸೆಂಚರ್ ಎಂದು ಓದಬೇಕು, ಇಲ್ಲಿ ಮೊದಲ ‘ಸಿ’ಯು ‘ಕ’ ಆಗಿಯೂ, ಎರಡನೆಯ ‘ಸಿ’ಯು ‘ಸ’ ಅಗಿಯೂ ಉಚ್ಚರಿಸಲ್ಪಡುತ್ತದೆ. Volkeswagen ಎಂಬ ಖ್ಯಾತ ಹೆಸರನ್ನು ನಾನು ಎಂದಿಗೂ ವೋಲ್ಸ್‍ವ್ಯಾಗನ್ ಎಂದೇ ಓದುತ್ತಿದ್ದೆ. ಆದರೆ ಅದು ತಪ್ಪಂತೆ! ಇಲ್ಲಿ ‘ವಿ’ ಅನ್ನು ‘ಪÀ ಎಂದು ಓದಬೇಕು ಮತ್ತು ‘ಎಲ್’ ಸೈಲೆಂಟ್! ಹಾಗಾಗಿ ಅದು ಪೋಕ್ಸ್‍ವ್ಯಾಗನ್! ಕರ್ನಲ್, ಲೆಫ್ಟಿನೆಂಟ್ ಎಂಬ ಪದಗಳ ಸ್ಪೆಲಿಂಗ್ ಏನಿದೆ ಗೊತ್ತೇ? ಬರೆದುದನ್ನು ಅಂತೆಯೇ ಓದುವ, ಹೇಳಿದ್ದನ್ನು ಅಂತೆಯೇ ಬರೆಯುವ ಕನ್ನಡ ಗ್ರೇಟ್ ಅಲ್ಲವೇ?

ಈ ಸೈಲೆಂಟ್ ಲೆಟರ್‍ಗಳ ಬಗ್ಗೆ ಹೇಳುವಾಗ ನನಗೆ ಹಳೆಯದೊಂದು, ಬಹುಶಃ ಕಾಲ್ಪನಿಕವೇ ಆಗಿರಬಹುದಾದ ಜೋಕೊಂದು ನೆನಪಿಗೆ ಬರುತ್ತದೆ. ಒಂದಾನೊಂದು ಕಾಲದಲ್ಲಿ ಅಂದಿನ ಪ್ರಧಾನಮಂತ್ರಿಣಿಯವರಾದ ಇಂದಿರಾಗಾಂಧಿ ಮತ್ತು ಅಂದಿನ ರಾಷ್ಟ್ರಾಧ್ಯಕ್ಷರಾದ ಜೈಲ್ ಸಿಂಗ್, ಇವರು ಬೆಂಗಳೂರಿಗೆ (ಬ್ಯಾಂಗಲೂರ್‍ಗೆ) ಬಂದರಂತೆ. ಇವರಿಬ್ಬರೂ ಕುಳಿತ ಕಾರು ಸಾಗುತ್ತಿದ್ದಾಗ ಬೆಂಗಳೂರನ್ನು ಕಂಡು ಸಿಂಗ್ ಎಷ್ಟು ಖುಷಿಯಾದರೆಂದರೆ ಆಗಾಗ ‘ವಾಹ್, ಬ್ಯಾಂಗಲೂರು, ವಾಹ್ ಬ್ಯಾಂಗಲೂರು,’ ಎಂದು ಉದ್ಘರಿಸುತ್ತಿದ್ದರಂತೆ. ಇದರಿಂದ ಕಿರಿಕಿರಿಯಾದ ಶ್ರೀಮತಿ ಗಾಂಧಿ, ‘ಸಿಂಗ್ ಜೀ, ಬಿ ಸೈಲೆಂಟ್’ ಎಂದರಂತೆ. ಅದರ ನಂತರ ಸಿಂಗ್ ಹೇಳತೊಡಗಿದರಂತೆ, ‘ವಾಹ್ ಆ್ಯಂಗಳೂರ್,’ ಎಂದು!
ಬ್ಯಾಂಗಲೂರ್ ಬೆಂಗಳೂರು ಆಗಿ ಬದಲಾದ ಮೇಲೆ ಇದು ಬೆಂಗಾಳಿ ಊರು ಯಾಕಾಗಬಾರದು?

ಇಂಗ್ಲಿಷಿನಲ್ಲಿ ಅಕ್ಷರಗಳನ್ನು ಕ್ರಮರಹಿತವಾಗಿ ಹೇಗೆ ಹೇಗೋ ಬರೆದಿದ್ದಾರೆ. ಆದರೆ ನಮ್ಮ ಕನ್ನಡದಲ್ಲಿ? ಮೊದಲು ಸ್ವರಗಳು, ಆಮೇಲೆ ಯೋಗವಾಹಗಳು. ನಂತರ ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳು (ಬಾಯಿ ನೀರು ಬಂತೇ?). ವ್ಯಂಜನಗಳಲ್ಲಿ ಅಕ್ಷರಗಳನ್ನು ಅವುಗಳು ಬಾಯಿಯಲ್ಲಿ ಅಥವಾ ಗಂಟಲಿನಲ್ಲಿ ಹುಟ್ಟುವ ಜಾಗಗಳಂತೆ ವಿಂಗಡಿಸಲಾಗಿದೆ. ಅರ್ಥವಾಗಬೇಕಾದರೆ ಅವನ್ನು ಉಚ್ಚರಿಸಿ ನೋಡಿ. ನಂತರ ಕೊನೆಯಲ್ಲಿ (ಪ್ರತೀ ಸಾಲಿನ ಐದನೆಯ ಅಕ್ಷರ, ಒಟ್ಟು ಐದು ಸಂಖ್ಯೆಗಳು) ಅನುನಾಸಿಕಗಳು. ಇಲ್ಲಿ ಮೂಗಿನ ಅವಶ್ಯಕತೆ ಇದೆ. ನಾವು ಚಿಕ್ಕ ವಯಸ್ಸಿನಲ್ಲಿ ಸಂತೆ ಎಂದು ಮೂಗು ಮುಚ್ಚಿ ಉಚ್ಚರಿಸುವಾಗ ಅದು ಸತ್ತೆ ಆಗುತ್ತಿತ್ತು. ಮತ್ತು ಪ ವರ್ಗದ ಐದು ಅಕ್ಷರಗಳನ್ನು ಹೇಳಲು ತುಟಿಗಳು ಬೇಕು. ಇದನ್ನು ಡಬ್ಬಿಂಗ್ ಕಲಾವಿದರು ಬಹಳವಾಗಿ ತಿಳಿದಿರುತ್ತಾರೆ. ಒಟ್ಟು ಇಪ್ಪತ್ತೈದು ವರ್ಗೀಯ ವ್ಯಂಜನಗಳಲ್ಲಿ ಹತ್ತು ಅಲ್ಪ ಪ್ರಾಣಗಳು, ಹತ್ತು ಮಹಾಪ್ರಾಣಗಳು ಮತ್ತು ಐದು ಅನುನಾಸಿಕಗಳು.

ಅನುನಾಸಿಕಗಳಲ್ಲಿ ಙ, ಞ ಮತ್ತು ಣ ಅಕ್ಷರಗಳಿಂದ ಯಾವುದೇ ಕನ್ನಡ ಪದಗಳು ಹುಟ್ಟುವುದಿಲ್ಲ ಮತ್ತು ಅವರ್ಗೀಯ ವ್ಯಂಜನಗಳಲ್ಲಿ ‘ಳ’ದಿಂದಲೂ ಕನ್ನಡ ಪದಗಳಿಲ್ಲ.
ಇಂಗ್ಲಿಷಿನಲ್ಲಿ ಕೆಲವು ವಿಶಿಷ್ಠ ಪದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಪಟ್ಟಿ ಮಾಡಿದಂತೆ, ಇವನ್ನು ಓದಿ: Banana, Dresser, Potato, Revive, Uneven, Assess.

ಮೇಲಿನ ಇಂಗ್ಲಿಷ್ ಪದಗಳಲ್ಲಿ ಏನಿದೆ ಗೊತ್ತಾ? ಮೊದಲನೆಯ ಅಕ್ಷರವನ್ನು ಕೊನೆಗೆ ಹಾಕಿ, ಕೊನೆಯಿಂದ ಮೊದಲು ಓದಿದರೆ ಅದೇ ಪದ ಉತ್ಪತ್ತಿಯಾಗುತ್ತದೆ. ತಮಾಷೆ ಅಲ್ಲವೇ? ಈಗ ನಿಮಗೊಂದು ಪ್ರಶ್ನೆ. ಇಂಗ್ಲಿಷಿನ ಎ, ಬಿ, ಸಿ ಮತ್ತು ಡಿ ಗಳು ಇಲ್ಲದ ನೂರು ಪದಗಳನ್ನು ಹೇಳಿ?
ತಲೆ ಕೆರೆದುಕೊಳ್ಳಬೇಡಿ, ಅವುಗಳು zeroದಿಂದ ninetynine ವರೆಗೆ!

ಇಂಗ್ಲಿಷ್ ಎಂಬ ಭಾಷೆಯು ಅತೀ ವಿಚಿತ್ರವಾದ ಮತ್ತು ಅಸಂಗತ ಭಾಷೆ ಆಗಿದೆ. ಜಗತ್ತಿನ ಇನ್ನೂ ಕೆಲವು ಭಾಷೆಗಳೂ ಇಂತೆಯೇ ಇರಬಹುದೇನೋ, ಆದರೆ ನನಗದು ತಿಳಿದಿಲ್ಲವಾದ ಕಾರಣ ನನ್ನ ಹೇಳಿಕೆಗಳನ್ನು ಆಂಗ್ಲ ಭಾಷೆಗೆ ಮಾತ್ರ ಸೀಮಿತಗೊಳಿಸಿದ್ದೆ. ಉದಾಹರಣೆಗೆ ಈ ಕೆಲವನ್ನು ಓದಿ:

Eggplantನಲ್ಲಿ ಎಗ್ (ಮೊಟ್ಟೆ) ಇರುವುದಿಲ್ಲ ಹಾಗೆಯೇ hambergನಲ್ಲಿ ಹ್ಯಾಮ್ ಇರುವುದಿಲ್ಲ. pineappleನಲ್ಲಿ ಆ್ಯಪಲ್(ಸೇಬು) ಇರದಂತೆಯೇ ಇಂಗ್ಲಿಷ್ ಮಫಿನ್ಸ್. ಇಂಗ್ಲಿಷಿನ ಜಿಡಿeಟಿಛಿh ಜಿಡಿಥಿ ಫ್ರಾನ್ಸಿನದೂ ಅಲ್ಲ. sweetmeatಗಳು ಸಿಹಿ ತಿಂಡಿಗಳು, ಅಲ್ಲಿ ಮಾಂಸ (ಮೀಟ್) ಇಲ್ಲ. ಇವನ್ನು ನಾವು ಮರು ಮಾತನಾಡದೇ ಒಪ್ಪಿಕೊಂಡಿದ್ದೇವೆ. ಜಿನಿಯಾ ಪಿಗ್ ಪಿಗ್ (ಹಂದಿ) ಅಲ್ಲ ಅಂತೆಯೇ ಅದು ಜಿನಿಯಾದ್ದೂ ಅಲ್ಲ. tooth (ಹಲ್ಲು) ಪದದ ಬಹುವಚನ ಟೀತ್ ಆಗಬಹುದಾದರೆ booth ಪದದ ಬಹುವಚನ ಬೀತ್ ಅಲ್ಲ ಯಾಕೆ? ಓವರ್‍ಲುಕ್ ಮತ್ತು ಓವರ್‍ಸೀ ಪದಗಳ ಅರ್ಥವು ಬೇರೆ ಬೇರೆ ಯಾಕೆ? ಲುಕ್ ಮತ್ತು ಸೀ ಒಂದೇ ಅಲ್ಲವೇ? ಕ್ವಯಟ್ ಎ ಲಾಟ್ ಮತ್ತು ಕ್ವಯಟ್ ಎ ಫ್ಯೂ, ಎರಡೂ ಒಂದೇ ಅರ್ಥವಂತೆ.
ಕೆಳಗೆ ಕೆಲವು ವಾಕ್ಯಗಳ ಮೊದಲಿನ ಪದವನ್ನು ಸರಿ ಅಥವಾ ಇಲ್ಲ ಎಂದು ತುಂಬಿ (ಯಸ್ ಅಥವಾ ನೋ). ಏನು ಅರ್ಥ ಕೊಡುತ್ತದೆ ಎಂದು ನೋಡಿ:

…… ಡೋಂಟ್ ಹ್ಯಾವ್ ಎ ಬ್ರೈನ್
…… ಡೋಂಟ್ ಹ್ಯಾವ್ ಎ ಸೆನ್ಸ್
…… ಐ ಆ್ಯಮ್ ಎ ಸ್ಟುಪಿಡ್.
ಎರಡೂ ಪದಗಳು ಒಂದೇ ಅರ್ಥ ಕೊಡುತ್ತವೆ.

ಒಂದೇ ಪದವು ಬೇರೆ ಬೇರೆ ಅರ್ಥ ಕೊಡುವ ಒಂದು ಉದಾಹರಣೆ ಇಲ್ಲಿದೆ. ಒಬ್ಬನಿಗೆ ಸಾಲ ಕೊಟ್ಟಿದ್ದೆ, ಅಸಲೂ ಇಲ್ಲ, ಬಡ್ಡಿಯೂ ಇಲ್ಲ. ಕೊಡಲು ಹೇಳಿದೆ, ಆತ ಹೀಗಂದ: My principl is not to pay the interest. . ಹೋಗಲಿ, ಅಸಲಾದರೂ ಕೊಡಪ್ಪ, ಎಂದೆ, ಅದಕ್ಕೆ ಅವನೇನೆಂದ ಗೊತ್ತಾ? I am not interested to pay the principle. ಈ ಕೆಟ್ಟಿಂಗ್ಲಿಷಿನಿನಿಂದ ನನ್ನ ಅಸಲೂ ಹೋಯಿತು, ಬಡ್ಡಿಯೂ ಬರಲಿಲ್ಲ.

ಮೊದಲೇ ಹೇಳಿದಂತೆ punctuation markಗಳು ಮೂಲತಃ ಕನ್ನಡವಲ್ಲ. ನಾವು ಹತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ (ಸರಿಯಾದ ಪದ ವ್ಯಾಸಂಗ ಮಾಡುತ್ತಿದ್ದಾಗ) ಕನ್ನಡದ ಮೊದಲ ಪಾಠದ ಮೊದಲ ಸಾಲುಗಳು ಹೀಗಿದ್ದವು: ಒಂದು ಮಹಾಟವಿಯೊಳ್ ಕಂಬಳಕನೆಂಬ ಬೇಡನೊಂದು ಪುಲಿ ತನ್ನನ್ನಟ್ಟಿಬರೆ ಪ್ರಾಣಭಯದಿಂ ದೆಸೆಗಾಣದೇ ಪುರಾಣ ಕೂಪದೊಳ್ ಬಿರ್ದಂ. ಆ ಪುಲಿಯುಂ ಕೋಪಾಂಧನಪ್ಪುದರಿಂದಲ್ಲಿಯೇ ಬಿರ್ದುದು. ಅಲ್ಲಿಗಂ ಚಪಲಕನೆಂಬೊಂದು ಕಪಿ ನೀರ್ಗುಡಿಯಲೆಂದು ಬಾವಿಯಂ ಪುಗುತಂದು…. ಇಂತಹ ಕಡೆ ಕೊಮ, ಕೋಟ್, ಕೊಲನ್, ಸೆಮಿ ಕೊಲನ್, ಚಿಕ್ಕ ಅಥವಾ ದೊಡ್ಡ ಡ್ಯಾಷ್. ಇವೆಲ್ಲಾ ಬೇಕೇ? ನಾವು ಈಗ ಇವಿಲ್ಲದೇ ವಾಕ್ಯ ರಚನೆಗಳನ್ನು ಮಾಡಲಾರೆವು. ತುಸುವೇ ತಪ್ಪಾದರೂ ಮೂಲಾರ್ಥವೇ ವ್ಯತ್ಯಯವಾಗುತ್ತದೆ. ಉದಾಹರಣೆಗೆ ಕೆಳಗಿನ ವಾಕ್ಯವೃಂದವನ್ನು ಓದಿ. ಕೊಮ ಮತ್ತು ಹಿರಿದಕ್ಷರ-ಕಿರಿದಕ್ಷರಗಳ ಬದಲಾವಣೆ ಅರ್ಥವನ್ನೇ ಬದಲಿಸಬಹುದು.

ಬಾಳೆ ಹಣ್ಣು ಸಿಪ್ಪೆ ಸುಲಿದು ತಿನ್ನಬೇಕು ಎಂಬುದೇನೋ ಸರಿ, ಆದರೆ ಏನ್ನನ್ನು ತಿನ್ನಬೇಕು? ಬಾಳೆ ಹಣ್ಣನ್ನೊ, ಸಿಪ್ಪೆಯನ್ನೋ. ಶುದ್ಧ ಹಸುವಿನ ಹಾಲು ಎಂಬುದನ್ನು ಓದಿದ್ದೀರಿ, ಅಂದರೆ ಹಸುವನ್ನು ಶುದ್ಧಗೊಳಿಸಿ ಕರೆದ ಹಾಲೋ? ದಪ್ಪದ ಎಮ್ಮೆಯ ತುಪ್ಪ ಎಂದರೆ ಸಣ್ಣಗಿರುವ ಎಮ್ಮೆಯದಲ್ಲ ನಾವು ತಿಳಿಯಬೇಕೇ? ಕೆಲವೆಡೆ ಬ್ರಾಹ್ಮಣರ ಕಾಫಿ ಬಾರ್, ಲಿಂಗಾಯತರ ಖಾನಾವಳಿ, ಇವನ್ನು ಓದಿದ್ದೇವೆ. ಆದರೆ ಬೆಂಗಳೂರಿನಲ್ಲಿ ಕಂಡ ಪದಗಳು ಏನು ಅರ್ಥ ಕೊಡುತ್ತವೆ? ಗಂಡಸರ ಶೌಚಾಲಯ, ಹೆಂಗಸರ ಶೌಚಾಲಯ,

ಚಿಕ್ಕ ವಯಸ್ಸಿನಲ್ಲಿ ನಮಗೆ ಒಂದು ಪ್ರಶ್ನೆ ಕೇಳಲಾಗುತ್ತಿತ್ತು. ಅದೆಂದರೆ ತಲೆ ಕೆಳಗಾಗಿ ನೇತಾಡುತ್ತೆ, ಹೆಸರು ಸಿಕ್ಕ (ಸಿಗುವುದಿಲ್ಲ). ಏನೆಂದು ತಲೆ ಕೆಡಿಸಿಕೊಂಡರೆ ಸಿಕ್ಕ ಎಂಬುದೇ ನಾಮಪದ. ಮೊಸರು, ಹಾಲುಗಳನ್ನು ಬೆಕ್ಕಿನಿಂದ ತಪ್ಪಿಸಲು ಹಗ್ಗಗಳಿಂದ ಮಾಡಿದ, ತಲೆ ಕೆಳಗಾಗಿ ನೇತಾಡುವ ಒಂದು ಚೀಲವನ್ನು ಮಾಡಲಾಗುತ್ತಿತ್ತು. ಅದರ ಹೆಸರು ಸಿಕ್ಕ! ಇನ್ರ್ನೆಂದು ಕನ್ನಡ ಮತ್ತು ಆಂಗ್ಲಗಳದ್ದು. ಇಟ್ಟದು ಬಟ್ಟಾದರೆ ವಾಟೇನು? ಎಂಬುದು. ಅದು it ಅದು but ಆದರೆ what ಏನು ಎಂಬುದಾಗಿದೆ. ಪ್ರಶ್ನೆಯಲ್ಲಿಯೇ ಉತ್ತರ ಇದೆ.

ಪಾನಗೋಷ್ಠಿಯಲ್ಲಿ ಗೆಳೆಯನನ್ನು ಕೇಳಿದನಂತೆ, ನಿಮಗೆ ಏನು ಬೇಕು? ಸೋಡಾವೋ, ನೀರೋ? ಉತ್ತರ ಬಂತು, ನೀರು ಬೇಡ, ಸೋಡ. ಏನು ಅರ್ಥ ಮಾಡಿಕೊಳ್ಳುತ್ತೀರಿ?

ಪಂಕ್ಚುವೇಶನ್ ಮಾರ್ಕ್ ತಪ್ಪಾದಾಗ ಏನೇನು ಅನಾಹುತಗಳಾಗುತ್ತವೆ ಎಂಬ ಒಂದು ಪ್ಯಾರಾ ಕನ್ನಡದಲ್ಲಿ ನನಗೆ ದೊರಕಿದೆ. ಅದನ್ನು ಕೆಳಗೆ ಓದಿ:
ಮಹಿಳೆಯೊಬ್ಬಳು ತನ್ನ ಗಂಡನಿಗೆ ಪತ್ರ ಬರೆದಳು: ‘ಪ್ರಿಯ ಪತಿರಾಯ, ವಂದನೆಗಳು. ಏನು ಸಮಾಚಾರ? ನೀವು ಬಹಳ ದಿನಗಳಿಂದ ಕಾಗದ ಬರೆದೇ ಇಲ್ಲ ನನ್ನ ಗೆಳತಿ ಮೀನಾಳಿಗೆ. ಕೆಲಸ ಸಿಕ್ಕಿದೆ ನಮ್ಮ ನಾಯಿಗೆ. ಕರು ಆಗಿದೆ ನನ್ನ ತಾತನಿಗೆ. ತಲೆ ನೋವು ಶುರು ವಾಗಿದೆ ನಮ್ಮ ನಾಯಿಗೆ. ಗಾಯ ಆಗಿದೆ ನಮ್ಮ ಜಮೀನಿನಲ್ಲಿ. ಭತ್ತ ಬೆಳೆದಿದೆ ನಮ್ಮ ಚಿಕ್ಕಪ್ಪನ ತಲೆಯಲ್ಲಿ. ಹೇನಾಗಿದೆ ನನ್ನ ಕಾಲಿನಲ್ಲಿ. ಬಹಳ ನೋವಾಗುತ್ತಿದೆ ನಿಮ್ಮ ತಮ್ಮನಿಗೆ. ಸಿಗರೇಟಿನ ಚಟ ಶುರುವಾಗಿದೆ ನನಗೆ. ಸ್ವಲ್ಪ ಹಣ ಬೇಕಾಗಿದೆ ನಾಯಿಮರಿ. ಅನ್ನ ತಿನ್ನುತ್ತಿಲ್ಲ ರೇಶನ್ನಿನ ಸಕ್ಕರೆಯನ್ನು. ರಜೆಯಲ್ಲಿ ಬರುವಾಗ ತನ್ನಿ ಒಂದು ಸುಂದರ ಮಹಿಳೆ. ನನ್ನ ಹೊಸ ಗೆಳತಿಯಾಗಿದ್ದಾಳೆ ಐಶ್ವರ್ಯ ರೈ. ಈ ಸಮಯದಲ್ಲಿ ಟಿವಿಯಲ್ಲಿ ನಟಿಸುತ್ತಿದ್ಧಾಳೆ ನಮ್ಮ ಕುರಿ. ಮಾರಿದೆ ನಾನು ನಿಮ್ಮ ತಾಯಿಯನ್ನು. ಆಸ್ಪತ್ರೆಗೆ ಸೇರಿಸಿದ್ದೇನೆ ನಿಮ್ಮ ಪತ್ರವನ್ನು. ಓದುವುದಕ್ಕೆ ಕಾಯುತ್ತಿದ್ದೇನೆ. ನಿಮ್ಮ ಪ್ರೀತಿಯ ಪತ್ನಿ. ವಂ ದನ.’ ಇಲ್ಲಿ ನಿಮ್ಮ ತಲೆಗಿಷ್ಟು ಕೆಲಸ ಕೊಡಿ. ಕೆಲವೆಡೆ ಕೊಮ, ಫುಲ್‍ಸ್ಟಾಪ್ ಬದಲಾಯಿಸಿ ಓದಿ. ನಕ್ಕುಬಿಡಿ.
ಬೀಚಿಯವರು ಕನ್ನಡದ ನಗೆಲೇಖಕರಲ್ಲಿ ಪ್ರಮುಖರು. ಎಂದಿಗೂ ಅವರ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಒಂದೆಡೆ ಅವರು ಬರೆದಿದ್ದಾರೆ, ‘ಅಪ್ಪ ಅದೂ ಇದೂ ಮಾಡಿ ಮನೆ ಕಟ್ಟಿದ. ಮಗ ಅದು, ಇದು ಮಾಡಿ ಮನೆ ಮಾರಿದ,’ ಅದೇ ಪದಗಳು, ಸಂದರ್ಭಾನುಸಾರ ವಿವಿಧ ಅರ್ಥಗಳನ್ನು ಕೊಡುತ್ತವೆ.
-ಸೂರಿ ಹಾರ್ದಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x