ಕನ್ನಡ ಹಾಡು ಬರೆಯಲು ಮದ್ರಾಸಿಗೆ ಹೋದ ಕಥೆಯು: ಹೃದಯಶಿವ ಅಂಕಣ"ಬಿಳಿ ಕೂದಲಿಗೆ ಬೆಳ್ಳಿ ರೇಟು ಬಂದುಬಿಟ್ಟರೆ ಹೆಂಗಿರುತ್ತೆ ಶಿವಾ?" ಅಂತ ಮುರಳಿಮೋಹನ್ ರವರು ಹೇಳುತ್ತಿದ್ದಂತೆಯೇ ಡ್ರೈವರ್ ಗಕ್ಕನೆ ಗಾಡಿ ಸೈಡಿಗೆ ಹಾಕಿದ. ಕ್ಷಣಹೊತ್ತಿನ ಮೌನದ ನಂತರ ನಾನು, "ಅಣ್ಣತಮ್ಮಂದಿರು ಭಾಗ ಆಗುವ ಸಂದರ್ಭದಲ್ಲಿ ತಂದೆತಾಯಿಗಳು ತಮ್ಮ ಕಡೆಗೇ ಇರಲಿ ಅಂತ ಪಟ್ಟು ಹಿಡೀಬಹುದು ಸಾರ್" ಅಂದೆ. ಒಂದು "ಗೊಳ್ " ಅನ್ನಬಹುದಾದ ಸಾಮೂಹಿಕ ನಗೆಯ ತರುವಾಯ ಎಲ್ಲರೂ ಗಂಭೀರವಾಗಿ ಕಾರಿನಿಂದ ಕೆಳಗಿಳಿದು ಒಬ್ಬರಿಗೊಬ್ಬರು ಗ್ಯಾಪು ಬಿಟ್ಟುಕೊಂಡು ಬೇಲಿಯೆಡೆಗೆ ಮುಖಮಾಡಿ ನಿಂತು ತಂತಮ್ಮ ಲಕ್ಷ್ಯವನ್ನು ತಂತಮ್ಮ ಪ್ಯಾಂಟಿನ ಜಿಪ್ಪಿನತ್ತ ಹರಿಸಿದರು-

ಇಷ್ಟಕ್ಕೂ, ಮದ್ರಾಸಿನಿಂದ ಬೆಂಗಳೂರಿನ ಕಡೆಗೆ ಹಮ್ಮಿಕೊಂಡಿದ್ದ ರಾತ್ರಿಪಯಣವಾಗಿತ್ತದು. ನಾಗರಹಾವು, ಸಂತ ಚಿತ್ರಗಳ ನಂತರ ತಮ್ಮ ನಿರ್ದೇಶನದ ಮತ್ತೊಂದು ಚಿತ್ರಕ್ಕೆ ಹಾಡುಗಳನ್ನು ಸಿದ್ಧಪಡಿಸಲು ನಮ್ಮನ್ನೆಲ್ಲ ಮದ್ರಾಸಿಗೆ ಕರೆದೊಯ್ದಿದ್ದರು. ಎರಡು ದಿನಗಳ ಕಾಲ ಸಂಗೀತ ನಿರ್ದೇಶಕ ಎಸ್.ಎ.ರಾಜಕುಮಾರ್ ಸ್ಟುಡಿಯೋದಲ್ಲಿ ಹಾಡುಗಳ ಸೃಷ್ಟಿಯ ಕಾರ್ಯ ಜರುಗಿತ್ತು. ಎಸ್.ಎ.ರಾಜಕುಮಾರ್ ಹಾರ್ಮೋನಿಂ ನುಡಿಸುತ್ತಾ ಟ್ಯೂನ್ ಹಾಡುತ್ತಿದ್ದರೆ ನಾವೆಲ್ಲಾ ಆ ರಾಗಕ್ಕೆ ತಕ್ಕಂಥ ಸಾಲುಗಳನ್ನು ಪೋಣಿಸುತ್ತಿದ್ದೆವು. ಶ್ರುತಿ, ಚಂದ್ರಚಕೋರಿ, ಯಜಮಾನ, ಸೇವಂತಿ ಸೇವಂತಿ, ಪೂವೆ ಉನಕ್ಕಾಗ, ಸೂರ್ಯವಂಶಂ, ಪುತ್ತಂ ಪುದು ಪೂವೆ, ಉನ್ನಿಡತ್ತಿಲ್ ಎನ್ನೈ ಕೊಡುತ್ತೇನ್, ತುಳ್ಳಾದ ಮನಮುಂ ತುಳ್ಳುಂ, ಉನ್ನೈ ಕೊಡು ಎನ್ನೈ ತರುವೇನ್, ಮಾಯಿ, ಪ್ರಿಯಮಾನವಳೇ, ವಾನತ್ತೈ ಪೋಲಾ, ಪುನ್ನಗೈ ದೇಶಂ, ನಮ್ಮ ವೀಟ್ಟು ಕಲ್ಯಾಣಂ, ವಸೀಗರ, ಪ್ರಿಯಮನ ತೊಳಿ, ಕನ್ನಡಿ ಪೂಕಳ್, ಪೆಳ್ಳಿ, ರಾಜಾ, ಸ್ನೇಹಂ ಕೋಸಂ, ಕಲಿಸುಂದಾಂ ರಾ, ನುವ್ವು ವಸ್ತಾವನಿ, ನಿನ್ನೇ ಪ್ರೇಮಿಸ್ತಾ, ಪ್ರಿಯಮೈನ ನೀಕು, ಸಿಂಹರಾಶಿ, ವಸಂತಂ, ಚೆಪ್ಪಾವೆ ಚಿರುಗಾಲಿ, ಸಂಕ್ರಾಂತಿ- ಸೇರಿದಂತೆ ಅನೇಕ ಹಿಟ್ ಗೀತೆಗಳನ್ನು ನೀಡಿದ ದಿಗ್ಗಜ ಸಂಗೀತ ನಿರ್ದೇಶಕರೊಬ್ಬರ ಪಕ್ಕದಲ್ಲಿ ಕೂತು ಸಾಲು ಕಟ್ಟುವ ಕೆಲಸ ನಿಜಕ್ಕೂ ರೋಮಾಂಚನ ಉಂಟುಮಾಡುವಂಥದ್ದು.

ತಕ್ಷಣಕ್ಕೆ ಹೊಳೆದ ಒಂದಷ್ಟು ಸಾಲುಗಳನ್ನು ಅಲ್ಲೇ ಬರೆದುಕೊಂಡು ನಂತರ ರೂಮಿಗೆ ಹೋಗಿ ಆರಾಮಾಗಿ ದಿಂಬಿಗೆ ಒರಗಿಕೊಂಡು ಕಿಟಕಿಯಾಚೆ ಕಣ್ಣಾಡಿಸಿ ಉಳಿದ ಸಾಲುಗಳನ್ನು ಬರೆಯಬಹುದಿತ್ತು. ಹೀಗೆ ಎಲ್ಲರೂ ಒಂದು ಮಧ್ಯಾಹ್ನ ಸರವಣ ಭವನದಲ್ಲಿ ಬಾಳೆಯೆಲೆ ಮೇಲೆ ಹರಡಿದ್ದ ಪಕ್ಕಾ ಶೈವಂ ಮಾದರಿಯ ಊಟ ಮುಗಿಸಿ ಬಂದೆವು. ಕನ್ನಡದ ಸಸ್ಯಾಹಾರಕ್ಕೆ ತಮಿಳಿನಲ್ಲಿ ಶೈವಂ ಎಂತಲೂ ಮಾಂಸಾಹಾರಕ್ಕೆ ಅಶೈವಂ ಎಂತಲೂ ಕರೆಯುತ್ತಾರೆ. ಸರವಣ ಭವನದ ಊಟ ನಿಜಕ್ಕೂ ರುಚಿಕರ, ಅಲ್ಲಿಯ ವಾತಾವರಣವೂ ಶುಚಿಕರವೇ. ಈ ಸರವಣ ಗ್ರೂಪಿನವರು ಇಡೀ ಜಗತ್ತಿನ ಬಹುತೇಕ ಕಡೆ ತಮ್ಮ ಹೋಟೆಲುಗಳನ್ನು ಹೊಂದಿದ್ದಾರೆ. ಅವರ ಶಾಖೆಗಳನ್ನು ಕರ್ನಾಟಕದಲ್ಲಿ ತೆರೆಯಲು ನಮ್ಮಲ್ಲಿನ ಹೋಟೆಲು ಮಾಲೀಕರ  ತಕರಾರೂ ಉಂಟು. ಅವರು ಬಂದರೆ ಇಲ್ಲಿನ ತಮ್ಮ ಗಿರಾಕಿಗಳು ಸರವಣ ಭವನದ ಬಾಳೆಯೆಲೆಗಳ ಮುಂದೆ ಖಾಯಮ್ಮಾಗಿ ಕೂತುಬಿಡುತ್ತಾರೆಂಬ ಆತಂಕ. ಇಂಥದೊಂದು ನಿಟ್ಟಿನಲ್ಲಿ ಕನ್ನಡಿಗರಾದ ನಾವು ಆನಂದ್ ಭವನದ ಸ್ವೀಟನ್ನಷ್ಟೇ ತಿನ್ನಬಹುದು. ಅದು ಒತ್ತಟ್ಟಿಗಿರಲಿ.

"ಪಲ್ಲವಿ ತುಂಬಾ ಕ್ಯಾಚಿಯಾಗಿದ್ರೆ ಹಾಡು ಬೇಗ ಬಾಯಿಗೆ ಬಂದ್ಬಿಡುತ್ತೆ ಶಿವಾ" ಎಂದು ಮುರಳಿಮೋಹನ್ ಯಾವಾಗ ಹೇಳಿದರೋ ತಲೆ ಕೆಳಗೆ ಮಾಡಿ ನಿಂತರೂ ಒಂದೇ ಒಂದು ಸಾಲು ಹುಟ್ಟಲಿಲ್ಲ. ಬದಲಿಗೆ ನಿದ್ದೆ ತುದಿರೆಪ್ಪೆಯ ಮೇಲೆ ನಿಂತಿತ್ತು. ಸ್ವಲ್ಪ ಯಾಮಾರಿದರೆ ಸಾಕು ಕಣ್ಣಿನೊಳಕ್ಕೆ ಪುಳಕ್ಕನೆ ನುಗ್ಗಿ ರಪ್ಪನೆ ರೆಪ್ಪೆಗಳ ಬಾಗಿಲು ಹಾಕಿಕೊಳ್ಳುವುದರಲ್ಲಿತ್ತು. ಡೈರೆಕ್ಟರ ಮುಂದೆ ತೂಕಡಿಸಿದರೆ ಹೇಗೆ? ಅದೂ ಅಲ್ಲದೆ ಇವರದೇ ಸಂತ ಚಿತ್ರಕ್ಕಾಗಿ 'ಢವ ಢವ ಢವ ಢವ ಢವ ಢವ ಎದೆಯ ಬಡಿತ ಏರುಪೇರು…' ಎಂಬ ಗೀತೆಯನ್ನು ಬರೆದಿದ್ದೆ. ಆದರೆ ಆ ಕ್ಷಣಕ್ಕೆ ಹಾಡು ಹುಟ್ಟಲಿಲ್ಲ. ಎದ್ದು ಹೊರಕ್ಕೆ ನಡೆದೆ.ಇಡೀ ಸಾಲಿಗ್ರಾಮವನ್ನು ಒಂದು ರೌಂಡು ಹಾಕಿದೆ. ಯಾವುದೋ ಸೈಬರ್ ಸೆಂಟರಿಗೆ ಹೋಗಿ ಅರ್ಧಗಂಟೆ ಕೂತು ಫೆಸ್ಬುಕ್ಕಿಗಾಗಿ ಮದ್ರಾಸು ಕುರಿತಂತೆ ಒಂದು ಸ್ಟೇಟಸ್ ಹಾಕಿದೆ. ಮತ್ತೆ ಹೊರಗೆ ಬಂದು ಅಲ್ಲಿಯ ಜನಜೀವನವನ್ನು, ಬೀದಿಬೀದಿಗಳಲ್ಲಿನ ವೈಶಿಷ್ಟ್ಯತೆ, ವೈಚಿತ್ರ್ಯತೆ ಕಂಡು ಬೆರಗಾದೆ:

ಒಂದು ಕುಲುಮೆ. ಅದರ ಪಕ್ಕದಲ್ಲಿ ಸ್ಟಾರ್ ಹೋಟೆಲ್. ಅದರ ಪಕ್ಕದಲ್ಲಿ ವಾಸದ ಹೆಂಚಿನ ಮನೆ. ಅದರ ಪಕ್ಕದಲ್ಲಿ ವಿಶಾಲವಾದ ಬಟ್ಟೆಯಂಗಡಿ. ಅದರ ಪಕ್ಕದಲ್ಲಿ ಒಂದು ಖಾಲಿ ಸೈಟು; ಅದರಲ್ಲಿ ನಿಂತಿದ್ದ ಗಲೀಜು ನೀರು-ಜೊತೆಗೊಂದು ಹಂದಿ ಫ್ಯಾಮಿಲಿ. ಅದರ ಪಕ್ಕದಲ್ಲಿ ಜ್ಯೂಸ್ ಸೆಂಟರ್. ಅದರ ಪಕ್ಕದಲ್ಲಿ ಗಣಪತಿ ದೇವಸ್ಥಾನ. ಅದರ ಪಕ್ಕದಲ್ಲಿ ಪಬ್ಲಿಕ್ ಟಾಯ್ಲೆಟ್ಟು. ಅದರ ಪಕ್ಕದಲ್ಲಿ ಒಂದು ಓಣಿ, ನಾಲ್ಕಾರು ಮನೆಗಳು, ಒಂದೆರಡು ಕಸದ ಗುಡ್ಡೆಗಳು, ಒಂದು ನೀರೆತ್ತುವ ಕೈಬೋರು, ಒಂದಿಬ್ಬರು ಮುದುಕರು, ಅವರ ಒಂದೊಂದು ಕಣ್ಣನ್ನು ಮರೆಸಿದ್ದ ಕಣ್ಣಾಸ್ಪತ್ರೆಯ ನೀಲಿ ಬಟ್ಟೆಯ ತುಂಡು, ಕಿವಿಗಳ ಪಕ್ಕ ನೇತಾಡುವ ಬೆವರುಗಟ್ಟಿದ ದಾರಗಳು. ಇವೆಲ್ಲದರಿಂದ ತುಸು ದೂರದಲ್ಲೇ ಫುಟ್ಪಾತಿನ ಸೈಜುಗೊಲ್ಲೊಂದರ ಮೇಲೆ ಅಂಡೂರಿ ಕುಕ್ಕುರುಗಾಲಲ್ಲಿ ಕೂತು ಸತ್ತ ಮೀನುಗಳನ್ನು ಮಾರುವ ಕಪ್ಪು ಮಾನವ. ಅವನ ಪಕ್ಕದಲ್ಲೇ ಹಾಸಿದ್ದ ಗೋಣಿಚೀಲದ ಮೇಲೆ ಬೆಂಡೆಕಾಯಿ, ಬೀನ್ಸು, ಟೊಮ್ಯಾಟೋ, ಆಲೂಗಡ್ಡೆ. ಕೊತ್ತಂಬರಿ ಸೊಪ್ಪು ಮಾರುವ ತಾಂಬೂಲಪ್ರಿಯೆ ಹುಳುಕುಹಲ್ಲು ಅಜ್ಜಿ. ಆಕೆಯಿಂದ ಎರಡು ಮಾರು ದೂರಕ್ಕೆ ಹರಿದ ಚಪ್ಪಲಿಗೆ ದಾರ ತೂರಿಸುವ ಕಾಯಕದವ. ಇವರೆಲ್ಲರ ಗಮನ ಸೆಳೆಯುವ ಸಾಹಸಕ್ಕೆ ಕೈ ಹಾಕಲು ಇನ್ನೊಬ್ಬ ವ್ಯಕ್ತಿ ಸೈಕಲ್ ಮೇಲೆ ಕೂತು ಬರುತ್ತಾನೆ-

ಆತ ಅಂದಾಜು ಅರವತ್ತರ ಆಸುಪಾಸಿನವನು. ತಲೆಯ ಮೇಲೆ ದಪ್ಪನೆಯ ಬುತ್ತಿಯಂಥ ಜಟೆ, ಮೈ ಮೇಲೆ ಕೊಳೆಯಾದ ಕೆಂಪು ಪಂಚೆ, ಬರಿಗೊರಳ ಸುತ್ತುವರಿದ ರುದ್ರಾಕ್ಷಿಮಾಲೆಗಳು, ಹಣೆಯ ತುಂಬಾ ವಿಭೂತಿ. ಕಣ್ಣಿಗೆ ಕೂಲಿಂಗ್ ಗ್ಲಾಸು, ಕಾಲಿಗೆ ಪಾರಾಗಾನ್ ಚಪ್ಪಲಿ, ಎಡಗೈಗೆ ಚೈನ್ ವಾಚು, ಸೈಕಲ್ ಹಿಂದೆ ದಾರದ ಬಂಧನದಲ್ಲಿ ಕುಳಿತ ಹಲಸಿನ ಹಣ್ಣು! ಆತ ಸಾಗುವೆಡೆಗೇ ದೃಷ್ಟಿ ನೆಟ್ಟು ನಿಂತರೆ ರಸ್ತೆಯಂಚಿನ ಧೂಳಿನಲ್ಲಿ ಮಾಯವಾಗಿಬಿಡುತ್ತಾನೆ. ಮಂಜುಗಟ್ಟಿದ ಕಣ್ಣುಗಳು ಸ್ವಲ್ಪ ಪಕ್ಕಕ್ಕೆ ಹೊರಳಿದರೆ ತಿರುಮಣ ಭವನ! ಅದರ ಮುಂದೆ ನಿಂತ ಎಂ.ಜಿ.ಆರ್-ಜಯಲಿತಾ ಕಟೌಟುಗಳು. ಗೋಡೆಗಳ ಮೇಲೆಲ್ಲಾ ದಪ್ಪ ದಪ್ಪ ಮೀಸೆ ಹೊತ್ತ, ಅರೆತೋಳಿನ ಬಿಳಿಯಂಗಿ ತೊಟ್ಟ ರಾಜಕಾರಣಿಗಳ ಚಿತ್ರಗಳು, ಅವರ ಘೋಷಣೆಗಳು. ಅವ್ಯಾವನ್ನೂ ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಸೈಕಲ್ ತುಳಿದುಕೊಂಡು ಹೋಗುವ ಹೆಂಗಸರು, ಮುದುಕಿಯರು!

ಒಟ್ಟಾರೆ ಮದ್ರಾಸು ಒಂದು ಸಿನಿಮಾ ಸೆಟ್ಟಿನಂತೆ ಕಂಡುದರಲ್ಲಿ ಅನುಮಾನವಿಲ್ಲ. ಮೌಂಟ್ ರೋಡು, ಬೆಸೆಂಟ್ ನಗರ, ಅಡೆಯಾರ್, ಹಾಗು ಟಿ.ನಗರದ ಪಾಂಡಿ ಬಜಾರ್ ನಂತ ಕೆಲವು ಕಮರ್ಷಿಯಲ್ ಏರಿಯಾಗಳಿಗಿಂತ ನನಗೆ ಹೆಚ್ಚು ಪ್ರಿಯವೆನಿಸುವುದು ಇಂಥ ಏರಿಯಾಗಳೇ. ಇಂಥ ಕಡೆ ಸಹಜತೆ ಎದ್ದು ಕಾಣುತ್ತದೆ. ನಾಗರೀಕತೆಯ ವಿಕಾಸದ ಹೆಸರಿನಲ್ಲಿ ಅವಲೋಕಿಸಬಹುದಾದ ಒಂದು ದೃಷ್ಟಿಕೋನ ಇಲ್ಲಿ ಹಲವು ಚಿಂತನೆಗಳನ್ನು ಹಡೆಯುವುದಲ್ಲದೆ ಒಂದು ಪ್ರದೇಶದ ಮಾನವಪ್ರಕೃತಿಯ ಒಳವಿನ್ಯಾಸವನ್ನೂ ತನ್ಮೂಲಕ ಬಿಂಬಿಸುತ್ತದೆ. ಇದರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಅನ್ನುವ ಹಳೆಯ ಮಾತಿಗಿಂತ ಮಿಗಿಲಾಗಿ ಗ್ರಹಿಸಬೇಕಾದ್ದು, ಗ್ರಹಿಸಿದ ತರುವಾಯ ನಮ್ಮನ್ನು, ನಮ್ಮ ಸಂವೇದನೆಯನ್ನು ಅದರೊಳಗೆ ಮಿಳಿತಗೊಳಿಸಿ ನೋಡಿದಾಗ ಪಡಿಮೂಡುವ ಫಲಿತಾಂಶವನ್ನು ಮುಂದಿಟ್ಟುಕೊಂಡು ಚಿಂತಿಸಿದಾಗ ಹೊಸ ಹೊಳಹು ಜೀವತಳೆಯುತ್ತದೆ. ಮಾತ್ರವಲ್ಲದೆ, ನಮ್ಮರಿವಿಗೇ ಬಾರದೆ ನಮ್ಮೊಳಗೇ ಕಲೆತುಹೋಗಿರುವ ಮೂಲಸಂಸ್ಕೃತಿಯ ಧಾತು ಆಳದಲ್ಲಿ ಧ್ವನಿಯೆತ್ತುವ ಮೂಲಕ ನಮ್ಮ ನಮ್ಮ ಬೇರುಗಳೆಡೆಗೆ ನಮ್ಮ ನಮ್ಮ ಮುಖಗಳು ತಿರುಗುತ್ತವೆ. ಇದೂ ಒತ್ತಟ್ಟಿಗಿರಲಿ.

ಮಾರನೇ ಬೆಳಗ್ಗೆ ಪ್ರಸನ್ನ ಮನಸ್ಸಿನಿಂದ ಕೂತು ಒಂದಷ್ಟು ಸಾಲುಗಳನ್ನು ಬರೆದೆ. ನಿರ್ದೇಶಕರಿಗೂ ಖುಷಿಯಾಯಿತು. ಆನಂದ್ ಕೂಡ ಚೆನ್ನಾಗಿ ಬರೆದಿದ್ರು. ಜಿಂಕೆ ಮರೀನಾ ಅನ್ನೋ ಹಾಡಿನ ಅಪ್ಪ ಇವರೇ. ಜೊತೆಗೆ ನನ್ನ ಹತ್ತಿರದ ಮಿತ್ರ. ಇವರೀಗ 'ಮೇಸ್ತ್ರಿ' ಅನ್ನೋ ಹೆಸರಿನ ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಘವೇಂದ್ರ ಕಾಮತ್ ಪ್ರಯತ್ನ ಚೆನ್ನಾಗಿತ್ತು. ಆದರೆ, ನಿರ್ದೇಶಕರು ಇನ್ನೂ ಒಳ್ಳೆಯ ಸಾಲುಗಳನ್ನು ನಿರೀಕ್ಷಿಸಿದ್ದರು. ಅವತ್ತಿಡೀ ದಿನ ಬರೆದು, ಪುನಃ ಸ್ಟುಡಿಯೋಗೇ ಹೋಗಿ ಹಾಡಿಸಿ ಕೇಳಿ ಸಣ್ಣಪುಟ್ಟ ಮಾರ್ಪಾಟುಗಳನ್ನೂ ಮಾಡಿದೆವು. ಒತ್ತಡಕ್ಕೆ ಹುಟ್ಟದ ಸಾಲುಗಳನ್ನು ಟೈಮ್ ನೋಡಿ ತಾಳ್ಮೆಯಿಂದಲೇ ಪಳಗಿಸಿಕೊಳ್ಳಬೇಕೆಂಬ ಅನುಭವ ಪಡೆದೆವು. ರಾತ್ರಿ ಹೊರಟೆವು. ದಾರಿ ಮಧ್ಯದ ಧಾಬಾವೊಂದರಲ್ಲಿ ಊಟ ಮಾಡಿ ಮತ್ತೆ ಗಾಡಿ ಹತ್ತಿದೆವು.

ಅಲ್ಲಿ ಹೊರಟ ಕಾರು ಈ ಇಲ್ಲಿ ಈ ಬರಹ ಶುರುವಾದಲ್ಲಿ ಬಂದು ನಿಂತಿತ್ತು. ಎಲ್ಲರೂ ಜಿಪ್ಪು ಎಳೆದುಕೊಂಡು ಮೈ ಮುರಿದೆವು. ಒಂದು ನಿರಾಳತೆಯ ಉತ್ತುಂಗದಲ್ಲಿ ವಿಹರಿಸುತ್ತಿದ್ದ ನಾನು ತಕ್ಷಣ, "ಸಾರ್, ಮೂತ್ರಕ್ಕೆ ಪೆಟ್ರೋಲ್ ರೇಟು ಬಂದುಬಿಟ್ಟರೆ ಹೆಂಗಿರುತ್ತೆ?" ಅಂದುಬಿಟ್ಟೆ! ಮತ್ತೊಂದು "ಗೊಳ್" ನಮ್ಮನ್ನಾವರಿಸಿತ್ತು.

-ಹೃದಯಶಿವ


ರೇಖಾಚಿತ್ರ:ಉಪೇಂದ್ರ ಪ್ರಭು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Rukmini Nagannavar
Rukmini Nagannavar
10 years ago

ಸರಳ ಹಾಗೂ ಸುಂದರ ನಿರೂಪಣೆ ..
ತುಂಬಾ ಹಿಡಿಸಿತು
ಧನ್ಯವಾದಗಳು

prashasti
10 years ago

ನೀವೋ ನಿಮ್ಮ ಕಲ್ಪನೆಗಳೋ.. ಶಿವಣ್ಣ. ಗೊಳ್ 🙂
ಚೆನ್ನಾಗಿತ್ತು ಲೇಖನ.

ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
10 years ago

 'ಢವ ಢವ ಢವ ಢವ ಢವ ಢವ ಎದೆಯ ಬಡಿತ ಏರುಪೇರು…' ಎಂಬ ಗೀತೆ  ವೇಗದಲ್ಲಿ ಸಾಗುವಂತದ್ದು -ಆ ಹಾಡಿನ ಸಂದರ್ಭ – ಚಿತ್ರೀಕರಣ ನಂಗೆ ಇಷ್ಟ ಆಯ್ತು . ಈಗ ಅದು ಬರೆಡದು ನೀವೇ ಎಂದು ತಿಳಿಯಿತು .. 
 
ಚಿತ್ರ ರಂಗ – -ನಟರು ನಟಿಯರು – 


ಚಿತ್ರೀಕರಣ  ಇತ್ಯಾದಿ ಬಗೆಗೆ  ಬಹುತೇಕರ ಹಾಗೆ ನನಗೂ ಅತೀವ ಆಸಕ್ತಿ – ಮಾತು -ಕನ್ನಡ  ತೆಲುಗು- ಹಿಂದಿ – ಆಂಗ್ಲ ಭಾಷೆಗಳ  ೧೦೬  ಸಿನೆಮ  ನೋಡಿರುವೆ – ಕೆಲ ಚಿತ್ರಗಳ ಬಗ್ಗೆ ಬರೆದಿರುವೆ – ಈಗಲೂ ದಿನ ನಿತ್ಯ ಹಲವು ಚಿತ್ರಗಳನ್ನು ಡೌನ್ಲೋಡ್ ಮಾಡಿ ನೋಡುವೆ . . 
ಒಂದು ಸಿನೆಮ ತಯಾರಗುವುದರ ಹಿಂದೆ ಎಷ್ಟು ಜನರ ಎಷ್ಟು ಶ್ರಮ ಇರುತ್ತೆ ಯಾವ್ಯಾವ ವಿಭಾಗದಲ್ಲಿ ಹೇಗೆಲ್ಲ  ಆ ಪ್ರಕ್ರಿಯೆ ನಡೆಯುತ್ತೆ – ಒಂದು ಸನ್ನಿವೇಶ  ಹಾಡು ಸಂಗೀತ ಹೇಗೆಲ್ಲ ಉಟ್ಟಿತು  ಎಂದೆಲ್ಲ ಪತ್ರಿಕೆಗಳಲ್ಲಿ ಹಲವು ಜನರ  ಅನುಭವದಲ್ಲಿ ಓದಿರುವೆ . ಈಗ ನೀವು ಸಹಾ ಚಿತ್ರರಂಗದಲ್ಲಿದ್ದು ಅಲ್ಲಿನ ಹಲವು ವಿಷಯಗಳ ಬಗ್ಗೆ ಸರಳವಾಗಿ ನಿರೂಪಿಸಿ  ನಮ್ ಕುತೂಹಲವನ್ನು ತಣಿಸುತ್ತಿರುವಿರಿ  
ನಿಮಂ ಸರಣಿ ನಂಗೆ ಇಸ್ತವಾಯ್ತು .. 


ಸರಣಿ ಬರಹ .. ಸದಾ ಮುಂದುವರೆಯಲಿ .. 
ಶುಭವಾಗಲಿ 
 
\।/ 
 
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು 

Utham Danihalli
10 years ago

Chenagidhe shivanna madrasna rodugallali nave nadedadidanthithu

sharada.m
sharada.m
10 years ago

nice

ಗಂಗಾಧರ ದಿವಟರ

ಸಾಹಿತ್ಯ ಬ್ರಹ್ಮ ಸೃಷ್ಟಿಯಂತೆ ನಿಗೂಢವಲ್ಲಾ…. ನಮ್ಮ ಸುತ್ತ ಹರಡಿ ಬಿದ್ದಿರುವ ಪರಿಸರವನ್ನು ಗ್ರಹಿಸುವ ಸೂಕ್ಷ್ಮತೆ ಒಲಿದರೆ ಮಾತ್ರ ಸಾಹಿತ್ಯ ಒಲಿಯುವುದು ಎಂಬುದನ್ನು ಮದ್ರಾಸ್ (ಇಂದಿನ ಚೆನ್ನೈ) ನಗರದ ಬಡಾವಣೆಯೊಂದರ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ಅತ್ಯಂತ ಚುಟುಕಾಗಿ ಪ್ರಸ್ತುತಪಡಿಸಿದ್ದೀರಿ. ಅಂಕಣದ ಪರಿಧಿಯೊಳಗೆ ಇಳಿಸಲು ಇಂತಹ ಕ್ರಮ ಅನಿವಾರ್ಯವಿರಬಹುದು. ನಿಮ್ಮ ಮದ್ರಾಸ್ ನಗರದ ಆ ಬಡಾವಣೆಯ ಪ್ರತಿಯೊಂದು ಸಂದಿ-ಗೊಂದಿಗಳಲ್ಲಿ ಕಥೆ, ಕವಿತೆಯನ್ನು ಹೆಕ್ಕಿ ತೆಗೆಯುವ ಸಾಮರ್ಥ್ಯ ನಿಮ್ಮ ಲೇಖನಿಗಿದೆ. ಪ್ರಾಯಶಃ ಅದನ್ನೆಲ್ಲಾ ನಿಮ್ಮ ಲೇಖನಿ ಪ್ರಸವಿಸಿದರೇ ಬೃಹತ್ ಕಾದಂಬರಿಯಾದೀತು….
ಅಭಿನಂದನೆಗಳು

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
10 years ago

ಗೊತ್ತೇ ಆಗದಂತೆ ಓದಿಸಿಕೊಂಡು ಹೋದ ಬರಹ!

ಹೃದಯಶಿವ
ಹೃದಯಶಿವ
10 years ago

ಓದಿದ,ಸ್ಪಂದಿಸಿದ,ಸರ್ವರಿಗೂ ನನ್ನ ಕೃತಜ್ಞತೆಗಳು.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

8
0
Would love your thoughts, please comment.x
()
x