ಕನ್ನಡ ಸಾಹಿತ್ಯವನ್ನು ಓದುವವರು ಯಾರು?: ಕೆ ಟಿ ಸೋಮಶೇಖರ್ ಹೊಳಲ್ಕೆರೆ


ಹಬ್ಬ ಎಂಬುದು ಸಂತೋಷ ಉಂಟುಮಾಡುವ ವಿಷಯ. ಕನ್ನಡದ ಸಾಧನೆ ಸಾರುವ, ಸಾಧನೆಗೆ ಮಣೆ ಹಾಕುವ, ಸಾಧಕರಿಗೆ ಕಿರೀಟವಿಡುವ, ಆಸಕ್ತರಿಗೆ ಪ್ರೋತ್ಸಾಹಿಸುವ, ಕವಿಗೋಷ್ಟಿ, ಸಾಹಿತ್ಯಕ ಚರ್ಚೆ, ಚಿಂತನ, ಮಂಥನದ ಹಬ್ಬವಾಗಬೇಕಿರುವ ಸಾಹಿತ್ಯಸಮ್ಮೇಳನಗಳಲ್ಲಿ ಕನ್ನಡ ಉಳಿಸುವುದು ಹೇಗೆ ಎಂಬ ವಿಷಯ ತಾಲ್ಲೂಕು ಮಟ್ಟದ ಸಮ್ಮೇಳನಗಳಿಂದ ಹಿಡಿದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಗಳವರೆಗೂ ಉದ್ಘಾಟನಾ ಸಭೆಯಿಂದನೇ ಚರ್ಚೆ ಆರಂಭವಾಗಬೇಕಾಗಿರುವ ಸಂದರ್ಭ ಬಂದಿರುವುದು ಕನ್ನಡಿಗರ ದುರದೃಷ್ಟ! ನುಡಿ ಹಬ್ಬದಲ್ಲಿ ಕನ್ನಡದ ಉಳಿಸುವ ಬೆಳೆಸುವ ಬಗ್ಗೆ ಚರ್ಚಿಸಿ ಇದಕ್ಕೆ ಪೂರಕವಾದ ಕೆಲವು ನಿರ್ಣಯಗಳನ್ನು ನುಡಿಹಬ್ಬದ ಕೊನೆಯಲ್ಲಿ ಕೈಗೊಂಡು ಸರಕಾರದ ವಶಕ್ಕೆ ಕೊಟ್ಟು ತನ್ನ ಕಾರ್ಯ ಮುಗಿಯಿತೆಂದು ನುಡಿಹಬ್ಬದ ಜವಾಬ್ದಾರಿಯುತರು ತೃಪ್ತಿಪಟ್ಟುಕೊಳ್ಳಬೇಕಾಗಿರುವ ಪರಿಸ್ಥಿತಿಗೆ ಒಗ್ಗಿ ಹೋಗಿರುವುದು ಇನ್ನೂ ಖೇದಕರ! ಕನ್ನಡ ಭಾಷೆ ಉಳಿಸಿ, ಕನ್ನಡ ಸಾಹಿತ್ಯ ಬೆಳೆಸಬೇಕಾಗಿರುವ ಸರಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡರೂ ಇಚ್ಛಾ ಶಕ್ತಿ ಕೊರತೆಯಿಂದ ಸಮರ್ಥ ಪ್ರಯತ್ನಗಳು ಸಾಧ್ಯವಾಗುತ್ತಿಲ್ಲ! ಪ್ರಾಮಾಣಿಕ ಪ್ರಯತ್ನ ಮಾಡದಿರುವ ಪರಿಸ್ಥಿತಿಗೆ ಸಿಲುಕಿರುವುದು‌ ನಿರಭಿಮಾನದ ಶಿಖರ! ಕನ್ನಡ ಭಾಷೆಯನ್ನು ಹೇಗೆ ಉಳಿಸಿ ಬೆಳೆಸಬೇಕೆಂಬ ಚಿಂತನೆಗಳು ನಡೆಯುತ್ತಿರುವಾಗ, ಇಂಗ್ಲೀಷ್ ಮಾಧ್ಯಮದ ಶಾಲೆಗಳು ಮೇರೆ ಮೀರಿರುವಾಗ ಕನ್ನಡಿಗರು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳ ಎಷ್ಟಾದರೂ ಡೊನೇಷನ್ ಆಗಲಿ ಕೊಟ್ಟು ಸೇರಿಸಲು ತಾಮುಂದು ನಾಮುಂದೆಂದು ಮುಗಿಬೀಳುತ್ತಿರುವಾಗ, ಸರಕಾರಗಳು ಸಹ ಇಂಗ್ಲಿಷ್ ಮಾಧ್ಯಮದ ಶಾಲೆಗಳ ತೆರೆದು ಕನ್ನಡ ಶಾಲೆಗಳ ಮುಚ್ಚಲು ಪರೋಕ್ಷವಾಗಿ ಸಹಕರಿಸುತ್ತಿರುವಾಗ ಕನ್ನಡಾಭಿಮಾನ ಮೂಡಿಸಲು, ಕನ್ನಡ ಸಾಹಿತ್ಯ ರಚಿಸುವಂತೆ ಮಾಡಲು ಕನ್ನಡ ಸಮ್ಮೇಳನಗಳಿಗೆ ಹೇಗೆ ಸಾಧ್ಯವಾದೀತು? ಕನ್ನಡ ಎಂಬುದು ಒಂದು ಭಾಷೆಯಲ್ಲ! ಒಂದು ಜನಾಂಗ! ಒಂದು ಸಂಸ್ಕೃತಿ! ಕನ್ನಡದ ಅಳಿವು ಕನ್ನಡದ ಸಂಸ್ಕೃತಿಯ ಮತ್ತು ಒಂದು ಜನಾಂಗದ ನಾಶ!

ಎಲ್ಲಾ ಪಕ್ಷ, ಜಾತಿ, ಧರ್ಮ, ಸಮಾಜ, ಮತ, ಲಿಂಗ, ವಯೋಬೇಧ ಮಾಡದೆ ಕನ್ನಡಿಗರೆಲ್ಲಾ ಸೇರಿ ಆಚರಿಸುವ ಹಬ್ಬ ಕನ್ನಡ ಸಾಹಿತ್ಯ ಸಮ್ಮೇಳನ! ಪ್ರತಿವರುಷ ನವಂಬರಿಂದ ಆರಂಭವಾಗುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನವಾದ ಕನ್ನಡ ನುಡಿಹಬ್ಬ ಸಾಮಾನ್ಯವಾಗಿ ಎಲ್ಲಾ ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ನಡೆಯುತ್ತಿರುವುದು ಇಂಗ್ಲಿಷ್ ಧಾಳಿಗೆ ಸಿಲುಕಿ ಮರೆತು ಹೋಗುವಂತಾಗಿರುವ ಕನ್ನಡವನ್ನು ನಾವು ಆಡುತ್ತಿರುವ ಭಾಷೆ ಕನ್ನಡ. ಅದು ನಮ್ಮ ಮಾತೃ ಭಾಷೆ ಎಂದು ಕನ್ನಡಿಗರಿಗೆ ಸಾರಿ ಹೇಳುವ ಹಬ್ಬವಾಗಿದೆ! ಅದೂ ಕಾನ್ವೆಂಟಿಗೆ ಹೋಗುವ ಮಕ್ಕಳಿಗೆ ಮನೆಯಲ್ಲಿ ಮಮ್ಮಿ ಡ್ಯಾಡಿ ಅನ್ನುವವರಿಗೆ ನಮ್ಮ ಮಾತೃ ಭಾಷೆ ಅಮ್ಮ ಅಪ್ಪ ಎಂಬ ಕನ್ನಡ ಎಂದು ತಿಳಿಸುವಂತಾಗುತ್ತಿದೆ. ಕಾನ್ವೆಂಟಿಗೆ ಕಳುಹಿಸುವ ಪೋಷಕರಿಗೆ ನಾವು ಕನ್ನಡ ನಾಡು, ನುಡಿ , ನೆಲ, ಜಲ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿ, ಕನ್ನಡತನಗಳಿಂದ ಬದುಕು ಕಟ್ಟಿಕೊಂಡು ಸುಖವಾಗಿದ್ದರೂ ಇಂಗ್ಲೀಷ್ ಭಾಷೆಯಲ್ಲಿಯೇ ಮಕ್ಕಳ ಭವಿಷ್ಯ ಹುಡುಕಲು ಪ್ರಯತ್ನಿಸುತ್ತಿರುವ ವಿಪರ್ಯಾಸಗಳು ಅರ್ಥವಾಗುತ್ತಿದ್ದರೂ ಅಸಹಾಯಕರಾಗುವಂತೆ ಮಾಡಿರುವ ವ್ಯವಸ್ಥೆಯನ್ನು ಸೃಷ್ಟಿಸಿ ಕನ್ನಡ ಸಾರವನ್ನು ಹೀರಿ ಬೆಳೆದವರಿಂದನೇ ತಮ್ಮನ್ನು ಬೆಳೆಸಿದ ಭಾಷೆಯ ಚರಮಗೀತೆ ಬರೆಯಿಸುವಂತೆ ಮಾಡಿರುವ ವ್ಯವಸ್ಥೆಯನ್ನು ಏನೆನ್ನಬೇಕು? ಕನ್ನಡ ಭಾಷೆ ಉಳಿಯಲಿ ಬೆಳೆಯಲಿ ಕನ್ನಡ ಸಾಹಿತ್ಯ ವಿಶ್ವವಿಖ್ಯಾತವಾಗಲಿ ಎಂಬ ಕಟ್ಟಾ ಕನ್ನಡಾಭಿಮಾನಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವಂತೆ ನಯ ನಾಜೂಕಿನ ಬಲೆ ನೇಯ್ದು ಆ ಬಲೆಗೆ ಕನ್ನಡಾಭಿಮಾನಿಗಳನ್ನು ಮಿಕವಾಗಿಸುತ್ತಿರುವ ನಮ್ಮದೆ ವ್ಯವಸ್ಥೆಯನ್ನು ಹೇಗೆ ಸಹಿಸಲಿ? ಬದುಕಲು ಇಂಗ್ಲಿಷ್ ಭಾಷೆ ಅನಿವಾರ್ಯ ಎಂಬಂತಾಗಿರುವುದು ಸತ್ಯವಾದರೂ ಚಿಕ್ಕಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತ ಕನ್ನಡದ ಗಾಳಿಗಂಧ ತಾಗದಂತೆ ನೋಡಿಕೊಳ್ಳುತ್ತಿರುವ ಮಕ್ಕಳಿಗೆ ಕನ್ನಡದ ಕಂಪನ್ನು ಸೂಸಿ ಅವರಲ್ಲಿ ಕನ್ನಡಾಭಿಮಾನ ಬೆಳೆಯುವಂತೆ ಮಾಡಲು ಹೇಗೆ ಸಾಧ್ಯ? ಇಂಥಹ ವ್ಯವಸ್ಥೆಯಿಂದ ಕನ್ನಡ ಹೇಗೆ ಉಳಿದೀತು?

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾರಸ್ವತ ಲೋಕದ ಕೀರ್ತಿ ಪತಾಕೆಗಳು, ಆಣಿ ಮುತ್ತುಗಳು ಆಗಿರುವ ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಸಾಹಸಭೀಮವಿಜಯ, ಜನ್ನನ ಯಶೋಧರ ಚರಿತೆ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿಭಾರತ ಮುಂತಾದ ಕೃತಿಗಳ, ಪ್ರಸಿದ್ದ ಸಾಹಿತಿಗಳ ಆಂಡಯ್ಯ, ರತ್ನನಂತಹ ಕಟ್ಟಾ ಕನ್ನಡಾಭಿಮಾನಿಗಳನ್ನು ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡದ ಹಿರಿಮೆ ಗರಿಮೆಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದು ಸತ್ಯ. ವಿಶ್ವ ಸಾಹಿತ್ಯದಲ್ಲೇ ಅಪರೂಪವಾದ ವಚನಸಾಹಿತ್ಯವನ್ನು , ಅನಕ್ಷರಸ್ಥರಿಂದ ಕಟ್ಟಿ ಪೋಷಿಸಲ್ಪಟ್ಟ ಹಳ್ಳಿಯ ಜನರ ಬದುಕು, ಕಷ್ಟ – ಸುಖ, ಸೊಗಸು, ಸೊಗಡನ್ನು, ಚಿತ್ರಿಸಿರುವ ಜನಪದ ಸಾಹಿತ್ಯವನ್ನು ಮೆಲುಕು ಹಾಕಿದಂತಾಗುತ್ತದೆ. ಉದಯೋನ್ಮುಖ ಸಾಹಿತಿಗಳ ಪರಿಚಯ, ಪ್ರೋತ್ಸಾಹ ಕೊಡುವ ಕಾರ್ಯನಡೆದು ಕನ್ನಡ ಸಾಹಿತ್ಯ ಬೆಳೆಸುವ ಕಾರ್ಯ ಕನ್ನಡಿಗರ ಬದುಕಿನ ಹೆಜ್ಜೆ ಗುರುತುಗಳ ಗುರುತಿಸಿ ಅದರ ಪರಂಪರೆಯ ಮೂಡಿಸುವ ಧಾಖಲೆಯಾಗಿ ಸಾಹಿತ್ಯಸಮ್ಮೇಳನ ಮೈದಳೆಯುವುದು.

ಕನ್ನಡ ಸಾಹಿತ್ಯ ಸಮ್ಮೇಳನಗಳ ಉದ್ದೇಶ ಕನ್ನಡ ಸಿರಿಯ ಪ್ರದರ್ಶಿಸಿ, ಕನ್ನಡ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ! ಇಂದು ಕನ್ನಡ ಸಾಹಿತ್ಯಾಭಿರುಚಿಯನ್ನು ಯಾರಿಗೆ ಬೆಳೆಸಬೇಕು ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತದೆ. ಹಳ್ಳಿಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಇಂದೂ ಸಹ ಕನ್ನಡವನ್ನೇ ಮಾತನಾಡುತ್ತಾರೆ, ಕನ್ನಡದಲ್ಲೇ ವ್ಯವಹರಿಸುತ್ತಾರೆ, ಕನ್ನಡವನ್ನೇ ಉಸಿರಾಗಿಸಿಕೊಂಡು ಕನ್ನಡದಲ್ಲೇ ಬದುಕು ಕಟ್ಟಿಕೊಂಡು ಕನ್ನಡದಲ್ಲೇ ಜೀವಿಸುತ್ತಿದ್ದರೂ ತಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಕಲಿಯಲಿ ಎಂಬ ವ್ಯಾಮೋಹ ತೋರುತ್ತಿರುವುದರಿಂದ ತಮ್ಮ ಊರಿನಲ್ಲೇ ಇರುವ ತಮ್ಮವೇ ಆದ ತಾವೇ ಪೋಷಿಸಿ ಬೆಳೆಸಿದ, ಅವುಗಳಿಂದನೇ ಇದುವರೆವಿಗೂ ಬದುಕು ರೂಪಿಸಿಕೊಂಡ ಕನ್ನಡ ಶಾಲೆಗಳ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದು ವಿಪರ್ಯಾಸ! ಇದಕ್ಕೆ ಹಳ್ಳಿಗರು ಮಾತ್ರ ಕಾರಣರಲ್ಲ! ಇದರಲ್ಲಿ ಸರಕಾರ, ಸರಕಾರದ ದ್ವಂದ್ವ ನಿಲವುಗಳು, ಅಧಿಕಾರಿಗಳ ಇಂಗ್ಲೀಷ್ ವ್ಯಾಮೋಹ, ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿರುವುದು, ಕನ್ನಡವನ್ನು ಎಲ್ಲರಿಗೂ ಅನ್ನ ನೀಡುವ ಭಾಷೆಯಾಗುವಂತೆ ಮಾಡದಿರುವುದು ಮುಂತಾದವು ಕಾರಣವಾಗಿವೆ. ರಾಜ್ಯದಾದ್ಯಂತ ಒಂದೇ ಮಾಧ್ಯಮ ಜಾರಿಗೆ ತರದೆ ಹಳ್ಳಿಯ ಮತ್ತು ಬಡ ಮಕ್ಕಳಿಗೆ ಕನ್ನಡ ಮಾಧ್ಯಮ ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಎಂದು ಬೇಧಭಾವ ಮಾಡುವಂತಾಗಿ ಕನ್ನಡ ಭಾಷೆಯನ್ನು ಕೆಲವರು ಕಲಿಯದಂತಹ ಪರಿಸ್ಥಿತಿ ಉಂಟಾಗಿದೆ. ಕನ್ನಡ ಭಾಷೆಯನ್ನು ಬೆಳೆಸುವ ಸರಕಾರದ ಇಚ್ಛಶಕ್ತಿಯ ಕೊರತೆಯಿಂದನೆ ಕನ್ನಡಶಾಲೆಗಳು ಬಳಲುತ್ತಿರುವುದು ಆಂಗ್ಲ ಮಾಧ್ಯಮದ ಶಾಲೆಗಳು ಎಲ್ಲಾಕಡೆ ರಕ್ತಬೀಜ ಮಹಿಶಾಸುರನಂತೆ ಹುಟ್ಟಿ ಹೂಂಕರಿಸುತ್ತಾ ಕನ್ನಡವನ್ನು ಕೊಲ್ಲುತ್ತಿವೆ. ಇದರಿಂದ ಕನ್ನಡ ಭಾಷೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಮಕ್ಕಳಿಂದ ದೂರವಾಗುತ್ತಾ ಹೋಗುತ್ತಿದೆ. ಹೀಗೆ ಕನ್ನಡ ಭಾಷಾ ಜ್ಞಾನವೇ ಇಲ್ಲದಮೇಲೆ ಯಾರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಬೇಕಿದೆ? ನನ್ನ ಪ್ರಶ್ನೆ ಆಂಗ್ಲ ಮಾಧ್ಯಮದ ಶಾಲೆಗಳು ಅವಶ್ಯಕವೋ ಅನವಶ್ಯಕವೋ ಎಂಬುದಾಗಿರದೆ ಕನ್ನಡ ಸಾಹಿತ್ಯವನ್ನು ಮುಂದೆ ಓದುವವರು ಯಾರು? ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಮುಂತಾದವರ ಯಾರು ಓದುತ್ತಾರೆ? ಅವರು ಯಾರಿಗೆ ಅರ್ಥವಾಗುತ್ತಾರೆ? ಎಂಬುದಕ್ಕೆ ಉತ್ತರ ಹುಡುಕುವುದಾಗಿದೆ! ಹಾಗೇ ಕನ್ನಡ ಸಾಹಿತ್ಯ ಸಮ್ಮೇಳನಗಳು ಹೇಗೆ ಸಾಹಿತ್ಯಾಭಿರುಚಿ ಬೆಳೆಸಲು ಪೂರಕವಾಗುತ್ತವೆ? ಕನ್ನಡ ಸಾಹಿತ್ಯವನ್ನು ಓದುವಂತೆ ಮಾಡಿಸುತ್ತವೆ? ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿವೆ!

ಆಂಗ್ಲ ಮಾಧ್ಯಮದ ಶಾಲೆಗಳು ಹೆಚ್ಚುತ್ತಿರುವುದರಿಂದ ಬಡವರನ್ನು ಸಹ ಆ ವ್ಯವಸ್ಥೆ ನುಂಗಿನೊಣೆಯುತ್ತಿರುವುದರಿಂದ ಅ ಮಕ್ಕಳಿಗೆ ಕನ್ನಡ ಭಾಷೆ ಕಬ್ಬಿಣದ ಕಡಲೆಯಾಗುತ್ತಿದೆ. ಕೆಲವು ಆಂಗ್ಲ ಮಾಧ್ಯಮದ ಶಾಲಾಕಾಲೇಜುಗಳ ಕ್ಯಾಪಸ್ಸುಗಳಲಿ ಕನ್ನಡದಲ್ಲಿ ಮಾತನಾಡಿದರೆ ತರಗತಿಯ ಹೊರಗೆ ನಿಲ್ಲಿಸುವ, ದಂಡ ವಿಧಿಸುವ, ಟಿಸಿ ಕೊಡುವ ಬೆದರಿಕೆಗಳು, ಶಿಕ್ಷೆಗಳು ಕನ್ನಡ ನೆಲದಲ್ಲೇ ನಡೆಯುತ್ತಿರುವಾಗ, ಕನ್ನಡ ಮಾತನಾಡುವುದು ಅಪರಾಧ ಎಂದು ಕಾನ್ವೆಂಟಿನವರು ಭಾವಿಸಿರುವುದನ್ನು ಯಾರೂ ವಿರೋಧಿಸದಿರುವಾಗ ಕನ್ನಡ ಮಾತನಾಡುವುದು ಅಪರಾಧ ಎಂಬ ಭಾವನೆ ಮಕ್ಕಳಲ್ಲಿ ನೆಲೆ ನಿಲ್ಲುವಂತಾಗಿ ಅದನ್ನು ಅವರು ಇಷ್ಟಪಡದಂತಾಗುವುದು ಸಹಜವಾಗಿದೆ. ಕನ್ನಡ ಭಾಷೆಯನ್ನು ಮಾತನಾಡುವುದು ಅಪರಾಧ ಆಗಿರುವಾಗ ಮಕ್ಕಳು ಕನ್ನಡವನ್ನು ಹೇಗೆ ಪ್ರೀತಿಸಿಯಾರು? ಅದು ಒಂದು ತುಚ್ಚಭಾಷೆ ಎಂಬ ಭಾವನೆ ಬಂದು ಅದನ್ನು ದ್ವೇಷಿಸುವಂತೆ ಮಾಡಿದಂತಾಗಲಿಲ್ಲವೆ? ಪೋಷಕರು ನಮ್ಮ ಮಕ್ಕಳನ್ನು ಕಳುಹಿಸುವ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವಂತೆಯೇ ಇಲ್ಲ’ ಎಂದು ಪೋಷಕರು ಇತರರೊಂದಿಗೆ ಹಿಗ್ಗಿನಿಂದ ಹೇಳಿಕೊಳ್ಳುವಾಗ ಅವರಿಗೆ ತಮ್ಮನ್ನು ಪೋಷಿಸಿ ಬೆಳೆಸಿದ ಭಾಷೆಯನ್ನು ನಾವೇ ಕತ್ತು ಹಿಚುಕಿ ಸಾಯಿಸುತ್ತಿದ್ದೇವೆ ಎಂಬುದು ಹೇಗೆ ಅರ್ಥವಾಗಬೇಕು? ಹೀಗಿರುವಾಗ ಕನ್ನಡ ಓದುಗರು, ಮಾತನಾಡುವವರು ಮುಂದೆ ಸಿಗಬಹುದೇ? ಎಲ್ಲೆಡೆ ಇಂತಹ ವಾತಾವರಣ ಸೃಷ್ಟಿಯಾಗಿರುವಾಗ ಕನ್ನಡ ಯಾರಿಗೆ ಓದಲು ಬರುತ್ತದೆ? ಇವರಿಂದ ಎಂತಹ ಸಾಹಿತ್ಯ ನಿರೀಕ್ಷಿಸಬಹುದು? ಆಂಗ್ಲ ಮಾಧ್ಯಮದ ಮಕ್ಕಳು ಇಂಗ್ಲೀಷನ್ನು ಸಲೀಸಾಗಿ ಓದಿದಂತೆ ಬರೆದಂತೆ ಕನ್ನಡವನ್ನು ಓದಲಾಗುತ್ತಿಲ್ಲ! ಬರೆಯಲಾಗುತ್ತಿಲ್ಲ! ಕನ್ನಡ ಅನ್ನುತ್ತಿದ್ದಂತೆ ಉಕ್ಕಿನ ಕಾಠಿಣ್ಯತೆಯ ಭಾವನೆ ಪ್ರದರ್ಶಿಸುತ್ತಾರೆ. ಕನ್ನಡ! ಅದನ್ನು ಯಾರು ಓದುತ್ತಾರೆ? ಓದುವುದು ಕಷ್ಟ! ಬರೆಯುವುದು ಇನ್ನೂ ಕಷ್ಟ! ನನಗೆ ಕನ್ನಡ ಅರ್ಥವಾಗುತ್ತಿಲ್ಲ ಎನ್ನುತ್ತಿವೆ ಇಂದಿನ ಬಹುತೇಕ ಮಕ್ಕಳು! ಕನ್ನಡವೆ ?ಯಾರಾದರೂ ಓದಿ ಅರ್ಥ ಹೇಳಿ ಎನ್ನುತ್ತಿವೆ! ಇತ್ತೀಚೆಗೆ ಇನ್ನಿಲ್ಲದಂತೆ ಕನ್ನಡ ಮಾಧ್ಯಮ ಶಾಲೆಗಳ ಮಾರಣಹೋಮ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಪ್ರತಿವರುಷ ಇಂತಿಷ್ಟು ಕನ್ನಡ ಶಾಲೆಗಳಿಗೆ ಕೊನೆಯ ಮೊಳೆ ಹೊಡೆಯುವುದು ನಡೆಯುತ್ತಿರುವುದು ಮುಚ್ಚಿಡಲಾಗದ ಸತ್ಯ! ಹೀಗೆ ಕನ್ನಡ ಓದುವವರು ಪ್ರತಿವರುಷ ಕರಗಿಹೋಗುತ್ತಿರಬೇಕಾದರೆ ಕನ್ನಡ ಸಾಹಿತ್ಯವನ್ನಿರಲಿ ದಿನ ಪತ್ರಿಕೆಯನ್ನಾದರೂ ಓದುವವರು ಹೇಗೆ ಮುಂದೆ ಸಿಗಲು ಸಾಧ್ಯ? ಕರ್ನಾಟಕದಲ್ಲಿ ಕನ್ನಡ ಮಾತನಾಡಲು ಬರದವರು, ಮಾತನಾಡಲು ಬಂದರೂ ಮಾತನಾಡಲು ಇಚ್ಚಿಸದವರು, ಅರ್ಥವಾಗದವರು, ಅರ್ಥವಾದರೂ ಕನ್ನಡದಲ್ಲಿ ಪ್ರತಿಕ್ರೀಯಿಸದವರು, ಅವರ ಭಾಷೆಯಲ್ಲಿ ಮಾತನಾಡಬೇಕೆಂದು ಬಯಸುವವರು, ಕನ್ನಡ ಓದದವರು ಇವರೆಲ್ಲಾ ಹಾಯಾಗಿ ಕರ್ನಾಟಕದಲ್ಲಿ ಬದುಕುತ್ತಿರುವಾಗ ಅವರು ಕನ್ನಡವನ್ನು ಏಕೆ ಕಲಿತಾರು? ಅವರು ಬದುಕಲು ಭಾಷೆ ಅಡ್ಡಿಯಾಗಿದ್ದರೆ ಕನ್ನಡ ಕಲಿಯುತ್ತಿದ್ದರು! ಕನ್ನಡಿಗರಾಗುತ್ತಿದ್ದರು. ಇದನ್ನು ರಾಜ್ಯದ ಜನ ಹೇಗೆ ಸರಿಪಡಿಸಲು ಸಾಧ್ಯ? ಇದಕ್ಕೂ ಸರಕಾರಗಳೇ ಹೊಣೆ! ಹೀಗಿರುವಾಗ ಕನ್ನಡ ಯಾರು ಓದಿಯಾರು? ಅದು ಹೇಗೆ ಉಳಿದೀತು? ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸಲಾದರೂ ಹೇಗೆ ಸಾಧ್ಯವಾದೀತು?

ಕೆಲವು ಮಹನಿಯರು ಹೇಳುತ್ತಾರೆ ಕನ್ನಡ ಎಂದೂ ಸಾಯುವುದಿಲ್ಲ, ಅದು ಸಾಯುವ ಭಾಷೆಯಲ್ಲ! ನಿತ್ಯವೂ ಬೆಳೆಯುವ ಭಾಷೆ ಎಂದು! ಹಾಗೆ ಆಗಲಿ ಎಂಬುದು ಎಲ್ಲಾ ಕನ್ನಡಿಗರ ಆಶಯ! ಅಂತರ್ಜಾಲದಲ್ಲಿ ಕೆಲವು ಕನ್ನಡ ಬಲ್ಲವರು ಕನ್ನಡ ಬಳಸುತ್ತಿರುವುದು ಸಂತೋಷದ ವಿಷಯ! ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏನು ಮಾಡಬಹುದು ಕನ್ನಡ ಬಲ್ಲವರಿಗೆ ಅದರ ಸಾಹಿತ್ಯದ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಬಹುದು. ಕನ್ನಡ ಅರಿಯದವರೇ ಇರುವಾಗ ಅವರನ್ನು ಏನು ಮಾಡಲು ಸಾಧ್ಯ? ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ, ಇತಿಹಾಸ, ಪರಂಪರೆ, ಕನ್ನಡಿಗರ ಸಂಸ್ಕಾರ, ಸಂಸ್ಕೃತಿ, ಕನ್ನಡತನ ಕನ್ನಡ ಸಾಹಿತ್ಯದಲ್ಲಿದೆ. ಅದನ್ನು ಓದದಮೇಲೆ ಓದಿ ಅರ್ಥ ಮಾಡಿಕೊಳ್ಳದಮೇಲೆ ಕನ್ನಡ ಸಂಸ್ಕೃತಿ ಹೇಗೆ ಅರ್ಥವಾಗಲಾಗಲಿ, ಅನುಸರಿಸಿ ಉಳಿಸಲಾಗಲಿ ಪ್ರಯತ್ನಿಸಲು ಸಾಧ್ಯ! ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕ ಇವರ ಕೃತಿಗಳನ್ನು ಓದಲಿಕ್ಕೇ ಬರದಿರುವಾಗ ಅವುಗಳ ಅರ್ಥಮಾಡಿಕೊಳ್ಳುವ ಕನಸು ಕಾಣಲು ಹೇಗೆ ಸಾಧ್ಯ? ಕನ್ನಡ ಸಂಸ್ಕೃತಿ, ಕನ್ನಡತನ, ಕನ್ನಡದ ಬದುಕು ಅರ್ಥವಾಗುವುದಾದರೂ ಹೇಗೆ? ಅನುಸರಿಸಿದರೆ ಉಳಿದೀತು! ಅರ್ಥವಾಗದೆ ಅನುಸರಿಸಲು ಹೇಗೆ ಸಾಧ್ಯ? ಅದನ್ನು ಗೌರವಿಸುವುದು ಕನಸಿನ ಮಾತೇ!

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ

ಎಂದು ಬರೆದಿರುವ ಶಾಸನವನ್ನು ಬಲ್ಲವರು ಓದಿದರೆ ಇದು ಮಲೆಯಾಳವೋ ತಮಿಳೋ ಎಂದು ಕನ್ನಡಿಗರೇ ಕೇಳುವ ಪರಿಸ್ಥಿತಿ ಉಂಟಾಗಿರುವಾಗ ಆ ಪದ್ಯದಲ್ಲಿ ವರ್ಣಿತವಾಗಿರುವ ಕನ್ನಡಿಗನ ಗುಣವನ್ನು ತಿಳಿಯುವುದಾದರೂ ಹೇಗೆ? ಆ ಕನ್ನಡಿಗನ ಬಗ್ಗೆ ಅಭಿಮಾನ ಬೆಳೆಯುವುದಾದರೂ ಹೇಗೆ?

ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್, ಕಾವೇರಿಯಿಂದಂ ಗೋದಾವರಿವರಮಿರ್ದ ನಾಡದಾ ಕನ್ನಡದೋಳ್ – ಇಲ್ಲಿನ ಕನ್ನಡ ನಾಡು, ನುಡಿ, ಜನರ ಪ್ರತಿಭೆಗಳ ಬಗ್ಗೆ ಕವಿರಾಜ ಮಾರ್ಗಕಾರ ಹೇಳಿರುವ ಮಾತುಗಳು ಅರ್ಥ ಆಗಬೇಕಾದರೆ ಕವಿರಾಜಮಾರ್ಗ ಅರ್ಥ ಆಗಬೇಕು. ಇಂದು ಅದನ್ನು ಕನ್ನಡಿಗರಿಗೆ ಓದಲು ಬರುತ್ತಿಲ್ಲವೆಂದರೆ ಅರ್ಥವಾಗುವುದು ಕನಸು! ಹೀಗಿರುವುದರಿಂದ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬರಲು ಹೇಗೆ ಸಾಧ್ಯ?

ಚಲದೋಳ್ ದರ್ಯೋಧನಂ ನನ್ನಿಯೋಳ್ ಇನತನಯಂ ಗಂಡಿನೋಳ್ ಭೀಮಸೇನಂ
ಬಲದೋಳ್ಮದ್ರೇಶನತ್ಯುನ್ನತಿಯೊಳಮರ ಸಿಂಧೂದ್ಬವಂ ಚಾಪವಿದ್ಯಾ
ಬಲದೋಳ್ ಕುಂಬೋದ್ವವಂ ಸಾಹಸದ ಮಹಿಮೆಯೋಳ್ ಫಲ್ಗುಣಂ ಧರ್ಮದೋಳ್ ನಿ
ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ – ಈ ವೃತ್ತದಲ್ಲಿ ಪಂಪ ಮಹಾಭಾರತ ಏಕೆ ಪೂಜನೀಯ ಎಂದು ಹೇಳಿರುವುದು ಯಾರಿಗೆತಾನೆ ಅರ್ಥವಾದೀತು? ಆ ವೃತ್ತವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಂಪನ ಕಾಲದ ಯುಗಧರ್ಮದ ಮೌಲ್ಯಗಳ ಸರಣಿ ಇದರಲ್ಲಿ ಅಡಕವಾಗಿದೆ ಎಂಬಂತಿದೆ ಆ ವೃತ್ತ! ಜತೆಗೆ ಇಲ್ಲಿ ಹೇಳಿರುವ ಮೌಲ್ಯಗಳು ಸಾರ್ವಕಾಲಿಕವಾದವುಗಳಾಗಿವೆ! ಕನ್ನಡ ಬಾರದವರು ಮಹಾಭಾರತದ ಮಹಾನ್ ಮೌಲ್ಯಗಳನ್ನು ಪಂಪನ ದೃಷ್ಟಿಯನ್ನು ಹೇಗೆ ತಿಳಿಯಲು ಸಾಧ್ಯ? ” ಕರ್ಣರಸಾಯನಮಲ್ತೆಭಾರತಂ ” ಎಂದು ಒಂದೇ ಮಾತಿಂದ ಮಹಾಭಾರತದ ಬಗ್ಗೆ ಹೇಳಬಯಸಿರುವುದು ಯಾರಿಗೆ ತಿಳಿಯಲು ಸಾಧ್ಯ? ಗೇಯದಗೋಷ್ಠಿಯ ಅಲಂಪಿನಿಂಪುಗಳಿಗೆ ಆಗರಮಾದ ಮಾನಸರೇ ಮಾನಸರ್ ಎಂಬ ವಾಕ್ಯ ಓದಿ ಕನ್ನಡಿಗರ ಹೇಗೆ ಅರ್ಥಮಾಡಿಕೊಂಡಾರು? ” ಸುಲಿದ ಬಾಳೆಯ ಹಣ್ಣನಂದದಿ ” ಇದ್ದ ಕನ್ನಡವ ಉಕ್ಕಿನಂತೆ ಕಠಿಣವಾಗಿರುವುದ ಸುಲಭೀಕರಿಸಲು ಹೇಗೆ ಸಾಧ್ಯ?

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಮೈಯಲಿ ಮಿಂಚಿನ ಹೊಳೆ ಹರಿದಾಡುವುದು – ಎಂದು ಕುವೆಂಪು ಹಾಡಿ ಹೊಗಳಿರುವ ಕರ್ನಾಟ ಭಾರತ ಕಥಾಮಂಜರಿಯನ್ನು ಓದಲು ಹೇಗೆ ಸಾಧ್ಯ? ಓದಲು ಬರದ ಮೇಲೆ ಅರ್ಥವಾಗಲು ಹೇಗೆ ಸಾಧ್ಯ? ಅರ್ಥವಾಗದ ಮೇಲೆ ಅದರ ಮಹತ್ವವನ್ನು ಹೇಗೆ ತಿಳಿಯಲು ಸಾಧ್ಯ?

ಕಟ್ಟಿಯುಮೆನೋ ಮಾಲೆಗಾರನ ಪೊಸಬಾಸಿಗಂ
ಮುಡಿವ ಬೋಗಿಗಳಿಲ್ಲದೆ ಬಾಡಿಪೋಗದೆ? ಆ ಸುಂದರ ಹಾರವ ಗುರುತಿಸಿ ಮುಡಿದು ಆಸ್ವಾದಿಸುವವರು ಇರದಿದ್ದರೆ ಆ ಮಾಲೆಯನ್ನು ಹೊಸತಾಗಿ ( ನವನೂತನವಾಗಿ ) ನವನೂತನವಾಗಿ ಕಟ್ಟಿ ಏನುಫಲ? ಶ್ರೇಷ್ಠ ಸಾಹಿತ್ಯವಿದ್ದು, ರಚಿಸುವ ಕಲಾಕಾರರಿದ್ದೂ ಓದುಗರೇ ಇಲ್ಲದಿದ್ದರೆ ಏನು ಉಪಯೋಗ? ಹಾಗಾಗಿದೆ ಕೆಲವೇ ಕೆಲವು ಸಾಹಿತಿಗಳು ರಚಿಸುತ್ತಿರುವ ಸಾಹಿತ್ಯದ ಪರಿಸ್ಥಿತಿ. ಲೈಬ್ರರಿ ಪುಸ್ತಕಗಳಿಂದ ತುಂಬುತ್ತಿರುವುದು ಜನ ಗ್ರಂಥಾಲಯದ ಕಡೆಗೆ ಬರಲಿ ಎಂದು ಆದರೆ ಲೈಬ್ರರಿ ಪುಸ್ತಕಗಳಿಂದ ತುಂಬುತ್ತಿದೆಯೇ ಹೊರತು ಓದುಗರಿಂದಲ್ಲ! ಸರಕಾರಗಳು ಮಾಡಬೇಕಾಗಿರುವುದು ಕೃತಿಗಳಿಂದ ಕನ್ನಡ ಗ್ರಂಥಾಲಯವನ್ನು ತುಂಬಿಸವ ಕಾರ್ಯದ ಜತೆಗೆ ಗ್ರಂಥಾಲಯದತ್ತ ಕನ್ನಡ ಭಾಷೆಯ ಓದುಗರು ಹರಿದು ಬರುವಂತಾಗುವ ಕಾರ್ಯವನ್ನು! ಗ್ರಂಥಾಲಯದ ಕಡೆಗೆ ಓದುಗರು ಹರಿದು ಬರಲು ಸಾಧ್ಯವಾಗದಿರುವುದು ಕನ್ನಡಿಗರಿಗೆ, ರಾಜ್ಯ ಸರಕಾರಕ್ಕೆ ಅವಮಾನ! ಕೇಳುಗರೆ ಇಲ್ಲದ ದಸರ ಕವಿಗೋಷ್ಟಿ ಆರಂಭಿಸಲು ಏಕೆ ವಿಳಂಭವಾಯಿತು ಅದನ್ನು ಹೇಗೆ ನಡೆಸಿದರೆಂಬುದು ಇನ್ನೂ ಅವಮಾನ!

ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮವನ್ನು ಉಳಿಸುವುದು ಜನಸಾಮಾನ್ಯರ, ಕನ್ನಡಿಗರ ಕಾರ್ಯದಂತೆ ಕಂಡರೂ ಅದು ನಿಜವಾಗಿ ಸರಕಾರದ ಜವಾಬ್ದಾರಿಯಾಗಿದೆ! ಸರಕಾರದ ಸಹಾಯವಿಲ್ಲದೆ ಅದು ಅಸಾಧ್ಯ ಎಂಬಂತಹ ಸ್ಥಿತಿ ಉಂಟಾಗಿದೆ. ಜನ ಸಾಮಾನ್ಯರನ್ನು ಇಂಗ್ಲೀಷ್‌ ಮಾಧ್ಯಮದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಸರಕಾರವೇ ಮಾಡಿರುವುದರಿಂದ, ಅದು ಜನರಿಂದಾಗದು. ಸರಕಾರವೆ ಮಾಡಬೇಕಿದೆ. ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಅವರ ಭಾಷೆಯಲ್ಲಿಯೇ ಅವರು ವಿಜ್ಞಾನ , ತಂತ್ರಜ್ಞಾನ ಅಧ್ಯಯನ ಮಾಡುತ್ತಿದ್ದಾರೆಂದರೆ ನಮ್ಮಿಂದ ಏಕೆ ಅಸಾಧ್ಯ? ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ಸರಕಾರಗಳು ಏಕೆ ಕನ್ನಡಾಭಿಮಾನ ಶೂನ್ಯವಾಗುತ್ತಿವೆ? ಅವುಗಳ ಕೆಲಸ ಅಭಿಮಾನ ಶೂನ್ಯವಾಗುವುದಲ್ಲ. ಅಭಿಮಾನ ಬೆಳೆಸುವುದು! ಆದರೆ … ! ಚೀನಾ, ಜರ್ಮನಿ, ಜಪಾನಿನಂತೆ ವಿಜ್ಞಾನ ತಂತ್ರಜ್ಞಾನವನ್ನು ಅವರ ಭಾಷೆಯಲ್ಲಿ ಅಧ್ಯಯನ ಮಾಡುವಂತೆ ಮಾಡಲು ಸಾಧ್ಯವಾಗದಿದ್ದರು ಎಲ್ಲಾ ವಿದ್ಯಾರ್ಥಿಗಳು ಹಳಗನ್ನಡ ಓದುವಂತಹ ಅರ್ಥ ಮಾಡಿಕೊಳ್ಳುವಂತಹ ಕೌಶಲ ಬೆಳೆಸಿ ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಭಿಮಾನ ಬೆಳೆಯುವಂತೆ ಮಾಡಬಹುದಾಗಿದೆ. ತಂತ್ರಜ್ಞಾನ, ವೈದ್ಯ ವಿಜ್ಞಾನ ಕೋರ್ಸ್ ಅದ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲು ಕನ್ನಡಾಭಿಮಾನ ಬೆಳೆಯುವಂತೆ ಮಾಡಬಹುದಾಗಿದೆ. ಸರಕಾರಗಳು ಕನ್ನಡಾಭಿಮಾನಿಗಳು ಈ ಕಡೆ ಗಮನಹರಿಸಿದರೆ ಸಾಧ್ಯ!

-ಕೆ ಟಿ ಸೋಮಶೇಖರ್ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
3 years ago

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

1
0
Would love your thoughts, please comment.x
()
x