ಸಂಪಾದಕೀಯ

ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನ: ನಟರಾಜು ಎಸ್ ಎಂ

ಕಳೆದ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ದಿನ ಅಂತರ್ಜಾಲ ಪತ್ರಿಕೆಯೊಂದರಲ್ಲಿ “ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..” ಎಂಬ ಲೇಖನ ಓದಲು ಸಿಕ್ಕಿತ್ತು. ಆ ಲೇಖನ ಓದುತ್ತಿದ್ದಂತೆ ಯಾಕೋ ಆ ಲೇಖಕನ ಭಾಷಾ ಶೈಲಿ ಸಿಕ್ಕಾಪಟ್ಟೆ ಇಷ್ಟವಾಯಿತು. ಆ ಲೇಖನಕ್ಕೆ”ತುಂಬಾ ಚಂದದ ಲೇಖನ.. ಶುಭವಾಗಲಿ” ಎಂದು ಪ್ರತಿಕ್ರಿಯೆ ನೀಡಿದ್ದೆ. ನನ್ನ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ ಲೇಖಕನಿಂದ ಆ ದಿನವೇ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದು ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು. ಮಾರನೆಯ ದಿನ ಅಂದರೆ ನವೆಂಬರ್ 1 ರಂದು  “ಲೋ ಅಣ್ಣ, ನಮಸ್ಕಾರ ಕಣೋ..” ಎಂದು ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿದ್ದೆ. ನನ್ನ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮರು ನಮಸ್ಕಾರ ಮಾಡಿದ್ದ ಹುಡುಗನಿಗೆ “ಏನು ಗುರು ನಮ್ ಯೂನಿವರ್ಸಿಟಿನಲ್ಲಿ ಓದ್ ಬಿಟ್ಟು ನನ್ನ ಪರಿಚಯನೇ ಮಾಡಿಕೊಂಡಿಲ್ಲ.. ಈಗ ರ್ಯಾಗಿಂಗ್ ಶುರು ಮಾಡ್ತೀನಿ” ಎಂದು ತಮಾಷೆ ಮಾಡಿದ್ದೆ. ಆ ತಮಾಷೆ ಇಬ್ಬರ ಪರಿಚಯಕ್ಕೆ ನಾಂದಿಯಾಗಿತ್ತು. ತನ್ನ ಸಂದೇಶದಲ್ಲಿ “ನಾನು ಚಿಕ್ಕಮಗಳೂರಿಗ, ಸದ್ಯ ಧಾರವಾಡಿಗ. ಈಗ ಎಮ್ಮೆಸ್ಸಿ ಬಯೋಟೆಕ್ಕು ಕೊನೇ ವರ್ಷ… ಯೂಜಿ ಮಾಡಿದ್ದೂ ಅಗ್ರಿ ಬಯೋಟೆಕ್ಕಲ್ಲೇ, ಹಾಸನದಲ್ಲಿ..” ಎಂದು ತನ್ನ ಬಗ್ಗೆ ಹೇಳಿಕೊಂಡಿದ್ದ ಗೆಳೆಯ ಒಳ್ಳೆಯ ಕಾರ್ಟೂನಿಸ್ಟ್ ಎಂದು ತಿಳಿಯಿತು.

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪಂಜುವಿನ ರೂಪು ರೇಷೆಯನ್ನು ಕುಳಿತು ತಯಾರಿಸುತ್ತಿದ್ದ ದಿನಗಳವು. ಆ ದಿನಗಳಲ್ಲಿ ನನ್ನ ಜೊತೆ ಕೈ ಜೋಡಿಸಲು ಒಂದಷ್ಟು ನಂಬುಗೆಯ ಹೃದಯವಂತರು ಬೇಕಾಗಿದ್ದರು. ಆ ಹುಡುಗನ ಜೊತೆ ಮೊದಲ ಬಾರಿಗೆ ಚಾಟ್ ಮಾಡಿದ ಕ್ಷಣ ನನ್ನ ಮನಸ್ಸು ಪಂಜು ಟೀಮ್ ಗೆ ಒಳ್ಳೆಯ ಸದಸ್ಯ ಈ ಹುಡುಗ ಎಂದು ಡಿಸೈಡ್ ಮಾಡಿತ್ತು. ನಾನು ತಡ ಮಾಡದೆ “ನನ್ನ ಬಳಿ ಏನೇನೋ ಪ್ಲಾನ್ ಇದೆ.. ಸಾಧ್ಯವಾದರೆ ಕೈ ಜೋಡಿಸಿ.. ಜೊತೆಯಾಗಿ ಏನಾದರು ಒಂದು ಮಾಡೋಣ..” ಎಂದು ನನ್ನ ಹೃದಯದ ಮಾತುಗಳನ್ನು ಆ ಹುಡುಗನ ಜೊತೆ ತೆರೆದುಕೊಂಡಿದ್ದೆ. “ಹೀಗೆಲ್ಲಾ ಹೇಳಿ ಕುತೂಹಲ ಹುಟ್ಟಿಸ್ತಿದ್ದೀರ..! ಎರೆಡೂ ಕೈ ಜೋಡಿಸೋಕೆ ನಾನ್ ರೆಡಿ.. ಏನಕ್ಕೂ ಒಮ್ಮೆ ನಾಳೆ ಮಾತಾಡೋಣ..!” ಎಂದು ಹೇಳಿದ ಹುಡುಗನ ಫೋನ್ ನಂಬರ್ ತೆಗೆದುಕೊಂಡು ನನ್ನ ಫೋನ್ ನಂಬರ್ ಸಹ ಕೊಟ್ಟಿದ್ದೆ. ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನಕ್ಕೆ ಆ ಗೆಳೆಯ ವಂದಿಸಿದ್ದ.

ಆ ನಂತರ ಒಂದು ದಿನ ಫೋನ್ ಮಾಡಿ ಪಂಜುವಿನ ನನ್ನ ಕನಸು ಕುರಿತು ಆ ಹುಡುಗನ ಜೊತೆ ಹಂಚಿಕೊಂಡಿದ್ದೆ. ತನ್ನ ಕಾಲೇಜು ದಿನಗಳಲ್ಲಿ ಯುವ ಲಹರಿ ಎಂಬ ವೆಬ್ ಸೈಟ್ ಮಾಡಲು ಹೋಗಿ ಅದನ್ನು ಅರ್ಧಕ್ಕೆ ನಿಲ್ಲಿಸಿದ್ದ ಆ ಹುಡುಗನ ಅಪೂರ್ಣವಾದ ಕನಸನ್ನು ನನ್ನೊಡನೆ ಹಂಚಿಕೊಂಡ. ಆ ಅಪೂರ್ಣವಾದ ಆತನ ಕನಸ್ಸನ್ನು ಪಂಜುವಿನ ಮೂಲಕ ಮತ್ತೆ ಕಟ್ಟೋಣ ಎಂದು ಹೇಳಿದ್ದೆ. ನನ್ನ ಮಾತು ಆ ಹುಡುಗನಿಗೆ ಇಷ್ಟವಾಗಿತ್ತು ಸಹ. ಹೀಗೆ ನಾವಿಬ್ಬರು ಅಪರಿಚಿತರು ಬರೀ ಫೇಸ್ ಬುಕ್ ನ ಸಂದೇಶಗಳಲ್ಲಿ ಪರಿಚಯವಾಗಿ ಮೊಬೈಲ್ ನಲ್ಲಿ ಮಾತನಾಡಿ ಕನಸ್ಸೊಂದನ್ನು ಕಾಣಲು ತೊಡಗಿದ್ದವು. ಒಂದೆರಡು ತಿಂಗಳಿನ ಹೋಮ್ ವರ್ಕ್ ನ ನಂತರ ಡಿಸೆಂಬರ್ ನ ಕೊನೆಯ ವಾರದಲ್ಲಿ ಪಂಜುವಿನ ಮೊದಲ ಪ್ರಮೋಷನಲ್ ಆಡ್ ಅನ್ನು ಈ ಹುಡುಗ ಕ್ರಿಯೇಟ್ ಮಾಡಿ ನನಗೆ ಎಫ್ ಬಿ ಯಲ್ಲಿ ಮೆಸೇಜ್ ಮಾಡಿದ್ದ. ಪಂಜುವಿಗೊಂದು ಫೇಸ್ ಬುಕ್ ಪೇಜ್ ತೆರೆದು ಆ ಪ್ರೊಮೋಷನಲ್ ಆಡ್ ಅನ್ನು ಅಲ್ಲಿ ಹಾಕಿದ್ದೆವು. ಫೇಸ್ ಬುಕ್ ಗೆಳೆಯರು ಪಂಜು ಬೇಗ ಬೆಳಕು ಕಾಣಲಿ ಎಂದು ಹಾರೈಸಿದ್ದರು. ಅದರ ಫಲವಾಗಿ ಜನವರಿ ಮೊದಲ ಮೂರು ವಾರಗಳು ಪಂಜು ಅಂತರ್ಜಾಲ ತಾಣಕ್ಕೆ ಒಂದು ರೂಪು ಕೊಡುವ ಕಾರ್ಯ ತಕ್ಕ ಮಟ್ಟಿಗೆ ಮುಗಿದಿತ್ತು. ಜನವರಿ 21, 2013 ರ ಬೆಳಿಗ್ಗೆ ಪಂಜುವಿನ ಮೊದಲ ಸಂಚಿಕೆ ಹೊರಬಿದ್ದಿತ್ತು. ಆ ಸಂಚಿಕೆಯಲ್ಲಿ ಈ ಹುಡುಗನ ಕಾರ್ಟೂನ್ ಪ್ರಕಟವಾಗಿತ್ತು.

ಮೊದಲ ಐದಾರು ವಾರಗಳು ಒಬ್ಬನೇ ಕುಳಿತು ಪಂಜುವಿನ ಈ ಮೇಲ್ ಐಡಿಗೆ ಬಂದ ಲೇಖನಗಳನ್ನು ಎಡಿಟಿಂಗ್ ಮಾಡಿ ಪಂಜುವಿಗೆ ಅಪ್ ಲೋಡ್ ಮಾಡುತ್ತಿದ್ದೆ. ಒಮ್ಮೊಮ್ಮೆ ಕಾರಣಾಂತರದಿಂದ ನಾನು ಅಪ್ ಲೋಡ್ ಮಾಡಲಾಗದಿದ್ದರೆ ಪಂಜುವಿನ ಓದುಗ ಗೆಳೆಯರಿಗೆ ತೊಂದರೆಯಾಗುತ್ತದೆ ಎಂಬ ಅಳುಕು ನನ್ನನ್ನು ಕಾಡುತ್ತಿತ್ತು. ಆಗ “ಪಂಜು ನಮ್ಮದು.” ಎಂಬ ಭಾವವಿರುವ ಗೆಳೆಯ ಗೆಳತಿಯರಿಗಾಗಿ ಹುಡುಕಾಟ ಶುರು ಮಾಡಿದ್ದೆ. ಯಾಕೋ ಸಿಕ್ಕ ಒಂದಿಬ್ಬರು ಗೆಳೆಯ ಗೆಳತಿಯರು ತಮ್ಮ ಬ್ಯುಸಿ ಜೀವನದ ಮಧ್ಯೆ ಪಂಜುವಿಗಾಗಿ ಸಮಯ ಮೀಸಲಾಗಿ ಇಡಲಾರರು ಎನಿಸಿತ್ತು. ಈ ಹುಡುಗನಿಗೆ ಎಷ್ಟೋ ಬಾರಿ “ಪಂಜುವಿನ ಈ ಮೇಲ್ ಮತ್ತು ವೆಬ್ ಸೈಟ್ ನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಕೊಡ್ತೇನೆ ಎಡಿಟಿಂಗ್ ಮಾಡ್ತೀರ” ಎಂದು ಎಷ್ಟು ಕೇಳಿದರೂ ಈ ಹುಡುಗ “ಈಗಲೇ ಬೇಡ ಸರ್” ಎನ್ನತ್ತಿದ್ದ. ಒಂದು ದಿನ ಪಂಜುವಿನ ಈ ಮೇಲ್ ಮತ್ತು ವೆಬ್ ಸೈಟ್ ನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಎರಡನ್ನೂ ಮೆಸೇಜ್ ಮಾಡಿ ಒಮ್ಮೆ ಮೇಲ್ ಮತ್ತು ವೆಬ್ ಸೈಟ್ ನ ಡ್ಯಾಶ್ ಬೋರ್ಡ್ ಮೇಲೆ ಕಣ್ಣಾಡಿಸುವಂತೆ ಕೇಳಿಕೊಂಡಿದ್ದೆ. ನಂತರ ಫೋನ್ ಮಾಡಿ ಫೋನಿನಲ್ಲೇ ವೆಬ್ ಸೈಟ್ ನ ನಿರ್ವಹಣೆ ಕುರಿತು ವಿವರಿಸಿದ್ದೆ. ಅಂದು ಆ ಹುಡುಗ ಅತಿ ಬೇಗನೆ ಲೇಖನಗಳನ್ನು ಪಂಜುವಿನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವುದನ್ನು ಕಲಿತ್ತಿದ್ದ. ಪಂಜುವಿಗೊಬ್ಬ ದಕ್ಷ ಪ್ರಧಾನ ಉಪಸಂಪಾದಕ ಸಿಕ್ಕ ಖುಷಿಗೆ ನಾನು ಆ ದಿನದ ನಂತರ ನಿರಾಳನಾದೆ.

ತದ ನಂತರ ನಾನು ಬರವಣಿಗೆಯನ್ನು ನಿಲ್ಲಿಸಿ ಪಂಜು ಪ್ರಕಾಶನ, ಪಂಜು ಚುಟುಕ ಸ್ಪರ್ಧೆ ಇತ್ಯಾದಿಗಳ ಕಡೆ ಗಮನಹರಿಸತೊಡಗಿದೆ. ಎಡಿಟಿಂಗ್ ಕೆಲಸವನ್ನು ಇಬ್ಬರೂ ಹಂಚಿಕೊಂಡು ನಮಗೆ ಸಮಯ ಸಿಕ್ಕಾಗಲೆಲ್ಲಾ ಪೂರ್ತಿ ಮಾಡುತ್ತಿದ್ದೆವು. ಪ್ರತಿ ವಾರ “ಸರ್ ಎಲ್ಲಿ ನಿಮ್ಮ ಸಂಪಾದಕೀಯ” ಎಂದು ಫೋನ್ ಮಾಡಿ ಕೇಳುತ್ತಲೇ ಇರುತ್ತಿದ್ದ ಈ ಹುಡುಗನಿಗೆ “ಬರೆಯೋಣ ಇರಿ ಸರ್” ಎನ್ನುತ್ತಲೇ  “ಎಲೆ ಮರೆ ಕಾಯಿ” ಪುಸ್ತಕದ ಕರಡು ಪ್ರತಿ ತಿದ್ದುವ ಕೆಲಸ ಮುಗಿಸಿದ್ದೆ.  ನನ್ನೆರಡು ಪುಸ್ತಕಗಳು ಬಿಡುಗಡೆಗೆ ರೆಡಿ ಇವೆ ಎಂದೆನಿಸಿದಾಗ ಆ ಪುಸ್ತಕಗಳ ಬಿಡುಗಡೆಯ ಸಮಾರಂಭದಂದೇ ಪಂಜು ಅಂತರ್ಜಾಲ ತಾಣದ ಬಿಡುಗಡೆ ಮತ್ತು ಪಂಜು ಚುಟುಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಮಾರ್ಚ್ ತಿಂಗಳ ಕೊನೆಯ ದಿನ ಒಂದು ಪುಟ್ಟ ಕಾರ್ಯಕ್ರಮ ನಡೆಸುವ ಯೋಜನೆ ಮಾಡಿದ್ದೆವು. ದೂರದ ಧಾರವಾಡದಿಂದ ಈ ಗೆಳೆಯ ಪುಸ್ತಕ ಬಿಡುಗಡೆಯ ಹಿಂದಿನ ದಿನವೇ ಬಂದಿದ್ದ. ನನ್ನ ಎಷ್ಟೋ ಆತ್ಮೀಯ ಗೆಳೆಯರೂ ಬೆಂಗಳೂರಿನಲ್ಲೇ ಇದ್ದರೂ ಪುಸ್ತಕ ಬಿಡುಗಡೆಗೆ ಬರಲಿಲ್ಲ ಅಂತಹುದರಲ್ಲಿ ಈ ಹುಡುಗ ಅಷ್ಟು ದೂರದಿಂದ ಒಂದು ದಿನ ಮೊದಲೇ ಬಂದಿರುವುದ ನೋಡಿ ಹೃದಯ ತುಂಬಿ ಬಂದಿತ್ತು. ಆ ದಿನದ ನಂತರ ಯಾಕೋ ಈ ಹುಡುಗ ನನಗೆ ಇನ್ನೂ ಹತ್ತಿರವಾಗಿಬಿಟ್ಟ.

ಸರಿ ರಾತ್ರಿಯಲ್ಲಿ ಲ್ಯಾಬ್ ನಲ್ಲಿ ಕುಳಿತು ಸಂಶೋಧನೆ ಮಾಡುವ ಈ ಹುಡುಗನಿಗೆ ಎಷ್ಟೋ ದಿನ ಕರೆ ಮಾಡಿ “ಹೋಗಪ್ಪಾ ರೂಮಿಗೆ. ಹೋಗಿ ಊಟ ಮಾಡಿ ಮಲಗು” ಎಂದು ಎಷ್ಟು ತಿಳಿ ಹೇಳಿದರೂ “ಸ್ವಲ್ಪ ಹೊತ್ತು ಹೋಗ್ತೀನಿ ಸರ್” ಎಂದು ಹೇಳುತ್ತಾನೆ. ಹೀಗೆ ಸರಿಯಾಗಿ ಊಟ ಮಾಡದೆ ನಿದ್ದೆ ಮಾಡದೆ ಲ್ಯಾಬಿನಲ್ಲಿ ಸಮಯ ಕಳೆಯುವ, ತನ್ನ ಬರವಣಿಗೆ ಮತ್ತು ಕಾರ್ಟೂನ್ ಎಲ್ಲವನ್ನೂ ನಿಲ್ಲಿಸಿರುವ ಈ ಹುಡುಗನ ಬಗ್ಗೆ ನನಗೆ ಒಂಚೂರು ಕೋಪ ಇದ್ದೇ ಇದೆ. ಒಬ್ಬರನ್ನೊಬ್ಬರು ನಂಬುವ ವ್ಯಕ್ತಿಗಳೇ ಕಡಿಮೆ ಇರುವ ಈ ಪ್ರಪಂಚದಲ್ಲಿ ನನ್ನನ್ನು ನಂಬಿ ನನ್ನ ಜೊತೆ ಪಂಜುವಿಗಾಗಿ ಕೈ ಜೋಡಿಸಿರುವ ಈ ಹುಡುಗನನ್ನು ನಿಮಗೆ ಹೀಗೆ ಪರಿಚಯಿಸದೆ ಇರಲಾಗಲಿಲ್ಲ. ಆದ ಕಾರಣ ಈ ಗೆಳೆಯನ ಕುರಿತು ಹೀಗೆ ಬರೆಯಬೇಕಿನಿಸಿತು. ಅಂದ ಹಾಗೆ ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಪಂಜುವಿನ ಓದುಗರಾಗಿದ್ದರೆ ನಿಮಗೆ ಗೊತ್ತಿರುತ್ತೆ. ನಿಮಗೆ ಪಂಜು ಇತ್ತೀಚೆಗೆ ಪರಿಚಯವಾಗಿದೆ ಎಂದರೆ ಆ ಹುಡುಗನ ಹೆಸರನ್ನು ನಾನು ನಿಮಗೆ ತಿಳಿಸಲೇ ಬೇಕಾಗುತ್ತೆ. ನಾನು ಇಷ್ಟು ಹೊತ್ತು ಒಬ್ಬ ಹೃದಯವಂತನ ಕುರಿತು ಬರೆದಿದ್ದೇನೆ. ಆ ಹೃದಯವಂತ ನಮ್ಮ ನಡುವಿನ ಸರಳ ಹುಡುಗ ಮತ್ತು ಯುವ ಕಾರ್ಟೂನಿಸ್ಟ್  ಪ್ರಸನ್ನ ಆಡುವಳ್ಳಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

14 thoughts on “ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನ: ನಟರಾಜು ಎಸ್ ಎಂ

 1. Super nattu. For any adventures we need people who can actively join hands with us. And the biggest challenge is consistency. People may show interest in the beginning, and may not turn up after some days. And finally mutual trust and like minded interest. Since Prasanna Aduvalli has passed in all the above we can trust Panju will definitely glow for a long time. All the best panju!! 🙂

 2. ಸೂಪರ್ ಸರ್..
  ಪ್ರಸನ್ನ ಅವರು ಬರೀತಾರೆ ಅಂತಾನೆ ಗೊತ್ತಿರಲಿಲ್ಲ.. ಆವರು ನನ್ನೊಂದು ಪೋಸ್ಟಿಗೆ ಲೈಕ್ ಹಾಕೋ ಮೂಲಕವೇ ಪರಿಚಯವಾಗಿದ್ದು. ಅವರ ಕಾರ್ಟೂನ್ಗಳ ಬಹಳ ದೊಡ್ಡ ಫ್ಯಾನ್ ನಾನು.. ಪತ್ರಿಕಾ ಸಾಹಿತ್ಯದ ಬಗ್ಗೆ ನಾನು ಬರೆದ ದಿನ ಅವರೂ ತಾವು ಕಾರ್ಟೂನ್ ಬರೆದು ಕಳಿಸಿದ ದಿನಗಳ ಕತೆ ಹೇಳಿದ್ದರು.. ಫೇಸ್ಬುಕ್ಕಿನಲ್ಲಿ ಹೀಗೇ ಹರಟುತ್ತಿದ್ದಾಗಲೇ ತಿಳಿದದ್ದು ಪಂಜು ಬಗ್ಗೆ..
  ಪಂಜು ಈಗ ಈ ಹಂತಕ್ಕೆ ಬಂದು ನಿಂತಿದೆಯೆಂದರೆ ಅದರ ತೆರೆಯ ಹಿಂದೆ ದುಡಿಯುತ್ತಿರುವ ಪ್ರಸನ್ನರ ಪಾತ್ರವೂ ಬಹಳ ಇದೆ.
  ಎಲೆಮರೆಯ ಕಾಯಾಗೇ ಉಳಿದುಬಿಡಬಹುದಾಗಿದ್ದ ಪ್ರಸನ್ನ ಅವರ ಬಗ್ಗೆ ಚೆನ್ನಾಗಿ ಬರೆದಿದ್ದೀರ ನಟ್ವರ್ ಭಾಯ್.. ಇಷ್ಟ ಆಯ್ತು.

 3. ತುಂಬಾ ಚೆನ್ನಾಗಿದೆ ನಟರಾಜಣ್ಣ. ಪ್ರಸನ್ನ ಅವರ ವ್ಯಕ್ತಿ ಪರಿಚಯ ಎಲ್ಲರಿಗೂ ಆಗಬೇಕಾಗಿದೆ. ಇವರೊಬ್ಬರು ಎಲೆ ಮರೆಯ ಕಾಯಿ ಆಗೇ ಉಳಿದಿದ್ದರು, ನಿಮ್ಮ ಈ ಬರಹದಿಂದ ಅವರ ಪರಿಚಯ ಎಲ್ಲರಿಗೂ ಆಗಿದೆ. ಪಂಜು ನಡೆದು ಬಂದ ದಾರಿಯ ವಿವರಣೆಯೂ ಈ ಬರಹದಲ್ಲಿ ಚೆನ್ನಾಗಿ ಮೂಡಿಬಂದಿದೆ. ಪಂಜು ಸಲುವಾಗಿ ದುಡಿಯುತ್ತಿರುವ ಎಲ್ಲರಿಗೂ ನನ್ನ ಮನಃಪೂರ್ವಕ ನಮನಗಳು. ದಿನದಿಂದ ದಿನಕ್ಕೆ ಪಂಜು ಎತ್ತರಕ್ಕೆ ಎರಲಿ.
  ಶುಭವಾಗಲಿ.
   

 4. ಸರ್, ತುಂಬಾ ಆತ್ಮೀಯ ಬರಹ…ಆಪ್ತವಾಗಿ ಹೇಳಿಕೊಳ್ಳುತ್ತಾ…ಇಲ್ಲೆ ಎಲ್ಲೋ ನಮ್ಮ ಹತ್ತಿರವಿದ್ದು (ಧಾರವಾಡ) ಹೋದ ಪ್ರಸನ್ನ ಎಂಬ ದೈತ್ಯಪ್ರತಿಭೆಯ ಕುರಿತು ವಿವರಿಸುವ ನಿಮ್ಮ ಹೃದಯದ ಮಧುರ ನುಡಿಗಳಿಗೆ ನನ್ನ ಸಾವಿರದ ನಮಸ್ಕಾರಗಳು ! ರಾಜ್ಯೋತ್ಸವದ ದಿನದಂದು ಕೂಡಿದ ಸ್ನೇಹದಿಂದ ಶುಭಾರಂಭಗೊಂಡಿರುವ ಈ ಯಾತ್ರೆ ನಿರಂತರ, ನಿತ್ಯ ನೂತನವಾಗಿರಲಿ. ಪಂಜುವಿನ ಬೆಳಕಿನ ಈ ಯಾತ್ರೆಯಲ್ಲಿ ನನ್ನಂಥಹ ಸಾವಿರಾರು ಜನರು ಬೆಳಕು ಕಾಣಲಿ/ಸಹಪಯಣಿಗರಾಗಿರಲಿ ಎಂದು ಹಾರೈಸುತ್ತೇನೆ. ಆತ್ಮೀಯ ಪ್ರಸನ್ನ ಅವರಿಗೂ ಮತ್ತು ನಿಮಗೂ ಶುಭದಿನ ! ಸದಾಕಾಲದ ಶುಭಾಶಯಗಳು…All the Best….

 5. ತುಂಬಾ ದಿನಗಳ ನಂತರದ ಆತ್ಮೀಯ ಸಂಪಾದಕೀಯ… ಇಷ್ಟ ಆಯ್ತು… ಇಬ್ಬರಿಗೂ ಶುಭವಾಗಲಿ… 🙂

 6. ಪಂಜುವಿನ ಹಿಂದೆ ’ನಮ್ಮ ಪ್ರಸನ್ನ ಆಡುವಳ್ಳಿ’ಯೂ ಇದ್ದಾನೆ ಎಂದು ತಿಳಿದು ಖುಷಿಯಾಯ್ತು. 
  ಈ ಹುಡುಗನನ್ನು ಅವನು ಕೊಪ್ಪದಲ್ಲಿ ಪಿ.ಯು.ಸಿ. ಓದುತ್ತಿದ್ದಾಗಿನಿಂದ ನೋದುತ್ತಿದ್ದೇನೆ. ಆಗಲೇ ’ಇಂಚರ’ ಅಂತೊಂದು ವಿದ್ಯಾರ್ಥಿ ತ್ರೈಮಾಸಿಕದ ಸಂಪಾದಕನಾಗಿ ಚಂದದ ಸಂಚಿಕೆಗಳನ್ನು ಹೊರತರುತ್ತಿದ್ದ. ಕ್ಲಾಸ್ ನಲ್ಲಿ ತಮಾಶೆಗೆಂದು ಲೆಕ್ಚರ್ ಗಳ ಕಾರ್ಟೂನ್ ಬರೆಯುತ್ತಿದ್ದವ ಆಗಲೇ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಟೂನ್ ಪ್ರಕಟಿಸುವಷ್ಟರ ಮಟ್ಟಿಗೆ ಬೆಳೆದಿದ್ದ. ಕೊಪ್ಪದ ಬಹುತೇಕ ಸ್ಥಳೀಯ ಪತ್ರಿಕೆಗಳಲ್ಲಿ ಹನಿಗವನ, ಅಂಕಣ ಬರಹ ಕಾರ್ಟೂನ್ ಬರೆಯುತ್ತಿದ್ದ ಹುಡುಗ ಸುಧಾ ಕರ್ಮವೀರ ಮಂಗಳ ವಾರಪತ್ರಿಕೆಗಳಲ್ಲಿ ತಿಂಗಳೆರೆಡು ಬಾರಿಯಾದರೂ ಬರೆಯುತ್ತಿದ್ದ. ಪಿಯು ಓದುತ್ತಿದ್ದಾಗಲೇ ಕೊಪ್ಪದ ಸ್ಥಳೀಯ ಪಾಕ್ಷಿಕ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದ. ಆಗಲೆ ರೇಡಿಯೋದಲ್ಲಿ ಹಲವು ಕಾರ್ಯಕ್ರಮ ನೀಡಿದ್ದ.
  ಎಲ್ಲರಂತೆ ಎಂಜಿನೀರಿಂಗಿನ ಹಿಂದೆ ಬೀಳದೇ ಹಾಸನಕ್ಕೆ ಹೊರಟ ಹುಡುಗ ಅಲ್ಲೂ ಗೆಳೆಯರ ಗುಂಪು ಕಟ್ಟಿ ಕನ್ನಡ ಸಂಘವೊಂದನ್ನು ಶುರುಮಾಡಿ ಗೆಳೆಯರಿಂದ ಬರೆಸುತ್ತಿದ್ದ. ಬರೆಯುವುದಕ್ಕಿಂತ ಓದುವುದರಲ್ಲಿ-ಬರೆಸುವುದರಲ್ಲೇ ಹೆಚ್ಚು ಖುಷಿಯಿದೆ ಅನ್ನುತ್ತಿದ್ದ ಪ್ರಸನ್ನ ಇತ್ತೀಚೆಗ್ಯಾಕೋ ಪತ್ರಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲವಲ್ಲ ಅಂದುಕೊಳ್ಳುತ್ತಿದ್ದೆ. ತಿಂಗಳ ಹಿಂದೆ ಸುಜಾತ ಸಂಚಿಕೆಯಲ್ಲೆಲ್ಲೋ ಅವನ ಬರಹ ಓದಿದ ನೆನಪು… 
  ಪ್ರಸನ್ನನೊಡನೆ ಮಾತನಾಡುವುದು ನನಗೆ ಎಂದಿಗೂ ಸಂಭ್ರಮದ ಸಂಗತಿ. ಸದಾ ಹೊಸ ಸಂಗತಿಗಳನ್ನು ಹಂಚಿಕೊಳ್ಳುವ, ವಾರಕ್ಕೊಂದಾದರೂ ಹೊಸ ಪುಸ್ತಕ ಓದಿ ನಮ್ಮನ್ನೂ ಓದುವಂತೆ ಪ್ರೇರೇಪಿಸುವ, ಇತ್ತೀಚೆಗಿನ ಎರೆಡ್ಮೂರು ವರ್ಷಗಳಲ್ಲಿ ಸಾಹಿತ್ಯಕ್ಕಿಂತ ವಿಜ್ನಾನವನ್ನ ಹೆಚ್ಚಾಗಿ ಧೇನಿಸುವ, ಸದಾ ಪರಿಸರ ಸಂರಕ್ಷಣೆ, ಜೀವ ವೈವಿದ್ಯ, ಕಾಡು ಅಂತೆಲ್ಲ ಕ್ರಿಯಾಶೀಲನಾಗಿರುವ ಇವನು ನನಗಂತೂ ದೊಡ್ಡ ಬೆರಗು!
  ಇಷ್ಟೆಲ್ಲ ಮಾಡಿಯೂ ಯಾರೊಂದಿಗೂ ಬಡಾಯಿ ಕೊಚ್ಚಿಕೊಳ್ಳದ ಹುಡುಗ ಅವನು. ಹಿಂದೊಮ್ಮೆ ಅವನ ಕಾರ್ಟೂನೊಂದಕ್ಕೆ ರಾಷ್ಟ್ರಪ್ರಶಸ್ತಿ ಬಂತೆಂದು ನಾವೆಲ್ಲಾ ಹಿರಿ ಹಿರಿ ಹಿಗ್ಗುತ್ತಿದ್ದರೆ ಈ ಹುಡುಗ ನಿರ್ಲಿಪ್ತನಾಗಿ ಮತ್ತೇನೋ ಮಾಡುತ್ತಾ ಕುಳಿತಿದ್ದ! ಚಂದನದಲ್ಲಿ ಇವನ ಕಾರ್ಟೂನ್ ಗಳ ಬಗ್ಗೆ ಪುಟ್ಟ ವರದಿ ಪ್ರಸಾರವಾಗುತ್ತಿದ್ದಾಗ ಇವನು ಪತ್ರಿಕಾಲಯದಲ್ಲಿ ಕುಳಿತು ಮತ್ತೇನೋ ಬರೆಯುತ್ತಿದ್ದ.
  0ಇಂತಹ ’ಡೌನ್ ಟು ಅರ್ಥ್’ ಗೆಳೆಯ ಸಿಕ್ಕಿದ್ದು ನನ್ನ ಅದೃಷವೇ ಸರಿ. ಪ್ರಸನ್ನ ನಿನಗೆ ಶುಭವಾಗಲಿ…

 7. ಪಂಜು ಪತ್ರಿಕೆಯ ಏಳಿಗೆಗಾಗಿ ನಿಮ್ಮೊಡನೆ ಟೊಂಕ ಕಟ್ಟಿ ನಿಂತಿರುವ ಪ್ರಸನ್ನ ಆಡುವಳ್ಳಿಯವರ ಬಗ್ಗೆ ತುಂಬಾ ಅಕ್ಕರೆಯಿಂದ ಬರೆದಿದ್ದೀರಿ. he deserves it.
  ಅಭಿನಂದನೆಗಳು .

   

 8. ಬಹಳ ದಿನಗಳ ಅಂತರದ ಸಂಪಾದಕೀಯ ಬರಹ ಖುಷಿ ಕೊಟ್ಟಿತು. 
  ಮತ್ತೆ ನಿಮ್ಮ  ಆತ್ಮೀಯ ಗೆಳೆಯನ ಬಗ್ಗೆ ಮನತುಂಬಿದ ಸಂಪಾದಕೀಯ. ಕೆಲವು ಸಂಬಂಧಗಳೆ ಹಾಗೆ ಎಲ್ಲಿಯೊ ಹುಟ್ಟಿತ್ತುವೆ .
  ಮನಸಿಗೆ ಹೃದಯಕ್ಕೆ ಹತ್ತಿರವಾಗುತ್ತರೆ , ಅತ್ಮಬಂದುವಾಗುತ್ತಾರೆ .
  ಆ ಸಂಬಂಧ ಹಾಗೆಯೆ ನಿರಂತರವಾಗಿರಲಿ  ಆ ಸ್ನೇಹ ಮಂಥನದಲ್ಲಿ ಅಮೋಘ  ಅಚ್ಚರಿ ಎನಿಸುವ ಕಾರ್ಯಗಳಾಗಲಿ.
  ಶುಭ ಆಕಾಂಕ್ಷೆಗಳೊಡನೆ 
  ಪಾರ್ಥಸಾರಥಿ

 9. ಪ್ರಸನ್ನ ನಿಮಗೆ ಪ್ರೀತಿಯ 'ಹುಡುಗ' ಆಗಿದ್ದರೂ ನನಗಂತೂ 'ಪ್ರಬುದ್ಧ'

 10. ಲೇಖನ ಮೆಚ್ಚಿದ ಗೆಳೆಯರೆಲ್ಲರಿಗೂ ವಂದನೆಗಳು.. ಪಂಜುವಿನ ಮೇಲೆ ನಿಮ್ಮ ಪ್ರೀತಿ ಹೀಗೆಯೇ ಇರಲಿ…

 11. Really well written itroduction writing about  Prasanna….Keep wriing friend..All the best…………….

Leave a Reply

Your email address will not be published. Required fields are marked *