ಲೇಖನ

ಕನ್ನಡ ಭಾಷೆಯ ಅಳಿವು ಉಳಿವು: ಎಂ.ಎಚ್. ಮೊಕಾಶಿ. 

ಕನ್ನಡಿಗರೆಲ್ಲರೂ ಒಂದು ಭೌಗೋಳಿಕ ವ್ಯಾಪ್ತಿಗೆ ಒಳಪಟ್ಟ ಸಂದರ್ಭಕ್ಕೆ ಈಗ 64 ವರ್ಷಗಳ ಸಂಭ್ರಮ. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುದಿನ. ಒಂದು ಭಾಷೆ ಸಮಾಜ ಮುಕ್ತವಾಗಿ ಅರಳಬೇಕು. ಪ್ರತಿಯೊಂದು ಜನರ ಅಭಿವೃದ್ದಿಯೇ 1956 ರಲ್ಲಾದ ಭಾಷಾವಾರು ಪ್ರಾಂತದ ರಚನೆಯೇ ಮೂಲ ಉದ್ದೇಶವಾಗಿತ್ತು.
ಇಂದು ಹೊಸ ಬದುಕಿಗೆ ಕಾಲಿಡುತ್ತಿರುವ ನಾವು ಈ 64 ವರ್ಷಗಳಲ್ಲಿ ಸಾಧಿಸಿದ್ದೇನು? ಸಾಧಿಸಬೇಕಾದದ್ದೇನು? ಎಂದು ತಿಳಿಯಲು ಇದು ಸಕಾಲವಾಗಿದೆ. 64 ವರ್ಷಗಳ ಹೊಸ್ತಿಲಲ್ಲಿ ನಿಂತು ಹಿಂದೆ ನೋಡಿದರೆ ಸಾಧಿಸಿದ್ದು ಸಾಕಷ್ಟು, ಆದರೆ ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಕನ್ನಡ 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಪಾಣಿನಿಯ ಅಷ್ಟಾಧ್ಯಾಯಿ, ಅಶೋಕನ ಶಾಸನಗಳು, ಮಳವಳ್ಳಿ ಶಾಸನ ವಿದೇಶೀಯರ ಬರಹಗಳು, ತಮಿಳಿನ ‘ಶಿಲಪ್ಪಾದಿಗಾರಂ’ ಕೃತಿ, ಮೊದಲಾದ ಕುರುಹುಗಳು ಕನ್ನಡ ಭಾಷೆಯ ಅಭಿಜಾತ ಸ್ಥಾನವನ್ನು ಸಾಬೀತು ಪಡಿಸುತ್ತವೆ. ಇಷ್ಟೆಲ್ಲ ಪ್ರಾಚೀನ ಇತಿಹಾಸವನ್ನು ಹೊಂದಿದ ನಮ್ಮ ರಾಜ್ಯ ಇಂದು ಕನ್ನಡದಲ್ಲಿಯೇ ಆಡಳಿತ ನಡೆಸಬೇಕೆನ್ನುವ ಏಕೀಕರಣದ ಮೂಲ ಆಶಯವೇ ಮಂಕಾಗುತ್ತಿದೆ. ಇಂದು ಕನ್ನಡದ ಏಳಿಗೆ, ಉಳಿವಿಗಾಗಿ ಹೋರಾಟ ಮಾಡಬೇಕಾದಂಥ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ.

ಕನ್ನಡ ಎಂದಾಗ ಹಲವು ಭಾವನೆಗಳು, ಹಲವು ಮಾತಿನ ವಿಧಾನಗಳು ಕಣ್ಣು ಕಟ್ಟುತ್ತವೆ. ಭಾಷೆ ಎಂದರೆ ಕೇವಲ ವರ್ಣಮಾಲೆಯಲ್ಲ. ಒಂದಿಷ್ಟು ಧ್ವನಿಗಳಲ್ಲ, ಪದ, ವಾಕ್ಯಗಳ ಸಮುಚ್ಚಯವೂ ಅಲ್ಲ, ಅದೊಂದು ಜನಾಂಗದ ಉಸಿರು, ಹೆಸರಾಗಿದೆ. ರಾಷ್ಟ್ರಕವಿ ಕುವೆಂಪುರವರು “ಕನ್ನಡವೆಂದರೆ ಎದೆ ಕುಣಿದಾಡುತ್ತದೆ. ಕನ್ನಡ ಭಾಷೆ ಕೇಳಿದರೆ ಕಿವಿ ನೆಟ್ಟಗಾಗುತ್ತವೆ”ಎಂದಿದ್ದಾರೆ. ಭಾಷೆಯು ಮಗುವಿಗೆ ಕೇವಲ ಕಲಿಕೆಯಷ್ಟೇ ನೀಡುವುದಿಲ್ಲ. ಇದು ಸಂಸ್ಕೃತಿ, ಭಾವನೆ, ವ್ಯಕ್ತಿತ್ವ ಮೊದಲಾದವುಗಳನ್ನು ತುಂಬಿಕೊಡುತ್ತದೆ. ಯಾರಿಗೇ ಆಗಲಿ ತನ್ನ ಮಾತೃಭಾಷೆ ಕಿವಿಗೆ ಬಿದ್ದಾಗ ತನ್ನ ತಾಯಿಯನ್ನು ನೋಡಿದಷ್ಟೇ ಸಂತೋಷವಾಗುತ್ತದೆ. ಇದು ಸಹಜವೂ ಕೂಡ ಆಗಿದೆ. ಡಾ||ಚಿದಾನಂದ ಮೂರ್ತಿರವರು “ಉತ್ತರ ಕನಾಟಕದ ಕನ್ನಡ ಸ್ವಾಭಾವಿಕವಾಗಿ ಆಡುವ ಭಾಷೆ, ದಕ್ಷಿಣ ಕನ್ನಡದ್ದು ಓದುವ ಭಾಷೆ” ಎಂದಿದ್ದಾರೆ. ಅದೇನೆ ಇರಲಿ ಭಾಷೆಗೆ ಭಾವನೆ ಮುಖ್ಯ. ಕನ್ನಡ ಯಾವುದೇ ಭಾಗದ್ದಾಗಿರಲಿ ಪ್ರೀತಿಯಿಂದ ಮಾತನಾಡಿದಾಗ ಪರಿಣಾಮ ಕೋಗಿಲೆಯ ಕಂಠ ಕೇಳಿದ ಹಾಗೆ ಭಾಸವಾಗುವುದು. ಯಾವುದೇ ವಿಷಯವನ್ನು ಸರಳ ಮತ್ತು ಗಂಭೀರವಾಗಿ ಹೇಳಲು ಬೇಕಾದ ಸರ್ವ ಸಂಪತ್ತು ಕಸ್ತೂರಿ ಕನ್ನಡವಾಗಿದೆ.

ಇಂದು ಉದ್ಯೋಗಗಳಿಸಲು ಆಂಗ್ಲ ಭಾಷೆ ಅನಿವಾರ್ಯ ಎಂಬುದು ಕಟು ವಾಸ್ತವ. ಹಾಗೆಂದು ಕನ್ನಡವನ್ನು ನಿರ್ಲಕ್ಷಿಸಬೇಕಾಗಿಲ್ಲ. ಕನ್ನಡತನವನ್ನು ಉಳಿಸಿಕೊಳ್ಳಬೇಕು. ಕನ್ನಡದೊಂದಿಗೆ ಲೋಕಜ್ಞಾನಕ್ಕಾಗಿ ಇತರೆ ಭಾಷೆಗಳನ್ನು ಕಲಿಯಬೇಕು. ಕನ್ನಡ ಭಾಷೆ ಮಾತ್ರ ಇರಬೇಕು ಇತರ ಭಾಷೆಗಳು ಇರಬಾರದೆಂಬ ಧೋರಣೆ ಸರಿಯಾದುದಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡಿನಲ್ಲಿ ನಮ್ಮ ಮಾತೃಭಾಷೆಯ ಬಗ್ಗೆ ಅತಿಯಾದ ಅಭಿಮಾನ ತೋರಿಸಲು ಇತರ ಸೋದರ ಭಾಷೆಗಳ ವಿರುದ್ಧ ಸಮರ ಸಾರುವುದು ತಪ್ಪಾಗುತ್ತದೆ. ನಮ್ಮ ಭಾಷೆಯ ಬಗ್ಗೆ ದುರಭಿಮಾನ ಅನ್ನಲಾಗದಂಥ ಅಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕು. ದುರ್ದೈವದ ಸಂಗತಿಯೆಂದರೆ ಬಹಳಷ್ಟು ಸಂದರ್ಭಗಳಲ್ಲಿ ನಾವು ಕಾಣುವುದು ದುರಭಿಮಾನ, ಇಲ್ಲದಿದ್ದರೆ ನಿರಭಿಮಾನ. ಕನ್ನಡದೊಂದಿಗೆ ಇತರೆ ಭಾಷೆಗಳನ್ನು ಕಲಿಯಬೇಕು. ಈ ಸಮನ್ವಯವೇ ಪ್ರಸ್ತುತ ಭಾಷಾ ಸುಧಾರಣೆಗೆ ಉತ್ತಮ ದಾರಿಯಾಗಿದೆ.

ಆಂಗ್ಲ ಭಾಷಾ ಕವಿ ಕೀಟ್ಸ್ “ಭಾಷೆಯ ನಾಶವೆಂದರೆ ಅದು ಸಂಸ್ಕೃತಿಯ ನಾಶ” ಎಂದಿದ್ದಾನೆ. ಇಂದು ಕನ್ನಡ ಭಾಷೆಯು ನಾಶವಾಗುತ್ತಿದೆಯೆಂದರೆ ಅಕ್ಷರಗಳ ನಾಶ, ಮಾತುಗಳ ನಾಶ, ಎಂದರ್ಥವಲ್ಲ ಸಂಸ್ಕೃತಿಯ ನಾಶ. ಇದರೊಂದಿಗೆ ಆಚಾರ-ವಿಚಾರ, ಕಲೆ-ಸಂಗೀತ, ಸಾಹಿತ್ಯಗಳ ನಾಶ. ಒಟ್ಟಾರೆಯಾಗಿ ಒಂದು ಜೀವಂತ ನಾಗರಿಕತೆಯ ನಾಶ ಎಂದಾಗಿದೆ. ಮೆಕಾಲೆ “ಒಂದು ಸಂಸ್ಕೃತಿಯ ನಾಶ ಮಾಡಬೇಕಾಗಿದ್ದರೆ ಮೊದಲು ಅಲ್ಲಿನ ಭಾಷೆಯನ್ನು ನಾಶಮಾಡಿ, ಜನರನ್ನಲ್ಲ”ಎಂದಿದ್ದಾನೆ.

ಜಾಗತೀಕರಣದ ಭಾಗವಾಗಿರುವ ವಿಜ್ಞಾನ ತಂತ್ರಜ್ಞಾನದ ಕ್ರಾಂತಿ ಜನರ ಬದುಕನ್ನೇ ಬದಲಾಯಿಸುತ್ತದೆ. ಹಾಗೆಯೇ ನಮ್ಮ ಬದುಕಿಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗಿಯೂ ಇಲ್ಲ. ನಮ್ಮ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡು ಆಧುನಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆಯೇ? ಎಂದು ಮೊದಲು ಯೋಚಿಸಬೇಕಾಗಿದೆ. ನಮ್ಮ ಬದುಕು ಸುಧಾರಣೆಯಾಗಲು ಭಾಷಾಭಿವೃದ್ಧಿಯೊಂದೇ ಸುಲಭದ ದಾರಿಯಾಗಿದೆ. ಸರಕಾರವು ಕನ್ನಡ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಅಲ್ಲದೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ. ಸರಕಾರದೊಂದಿಗೆ ಹಲವಾರು ಕನ್ನಡ ಸಂಘ, ಸಂಸ್ಥೆಗಳು ಹೆಗಲಿಗೆ ಹೆಗಲು ಕೊಟ್ಟು ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ. ಉದಾಹರಣೆಗೆ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಬಾರಿಗೆ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನದೊಂದಿಗೆ ಅಂತರಾಷ್ಟ್ರೀಯ ಒಪ್ಪಂದ ಮಾಡಿಕೊಂಡು ಪರಸ್ಪರ ಭಾಷೆಗಳ 50ಕ್ಕೂ ಹೆಚ್ಚು ಕವಿಗಳ ಕವನಗಳನ್ನು ಭಾಷಾಂತರಿಸುವ ಯೋಜನೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಾರಂಭಿಸಲಾಯಿತು. ಸರಕಾರವು ಕನ್ನಡಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಸಾಧಕರನ್ನು ಗುರ್ತಿಸಿ ಪ್ರಶಸ್ತಿ, ಪ್ರೋತ್ಸಾಹಗಳನ್ನು ಇನ್ನೂ ಹೆಚ್ಚಾಗಿ ನೀಡಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯ ಜರುಗಬೇಕಾಗಿದೆ.

ಭಾಷೆ ಎಂಬುದು ಬದುಕಿಗೆ ಪೂರಕ ಮತ್ತು ಪ್ರೇರಕ. ಭಾಷೆಯು ನಮ್ಮ ಬುದ್ಧಿಶಕ್ತಿ ಮತ್ತು ವಿವೇಕವನ್ನು ವಿಸ್ತರಿಸುತ್ತದೆ. ಕೇವಲ ಕನ್ನಡ ರಾಜ್ಯೋತ್ಸವದಂದು ಉತ್ತಮ ಬಟ್ಟೆಯುಟ್ಟು ಬಾವುಟದೊಂದಿಗೆ ಸಾಗಿದರೆ ಭಾಷಾಭಿಮಾನ ಮೂಡದು. ಭಾಷಾಭಿಮಾನ ಕೇವಲ ಪುಸ್ತಕ ಅಥವಾ ಭಾಷಣದ ಸರಕಾಗಬಾರದು. ಬದಲಾಗಿ ಕನ್ನಡವೇ ಉಸಿರಾಗಿಸಿಕೊಂಡು ಪ್ರತಿಯೊಬ್ಬರಲ್ಲಿ ಮೇಳೈಸಬೇಕು. ಅಲ್ಲದೇ ಹೊಸ ತಲೆಮಾರಿನವರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತ ಕಾರ್ಯ ನಡೆಯಬೇಕು. ಇಲ್ಲದಿದ್ದರೆ. ಪ್ರಮುಖ ನಗರಗಳಿಂದ ಕನ್ನಡವು ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಳ್ಳುವ ಅಪಾಯವಿದೆ.

-ಎಂ.ಎಚ್. ಮೊಕಾಶಿ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *