ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ- ಡಿವಿಜಿ: ಹನಿಯೂರು ಚಂದ್ರೇಗೌಡ

 

ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ ಡಿವಿಜಿ.ಇವರ ಅನೇಕ ಅನನ್ಯ  ಸಾಧನೆಗಳ  ನಡುವೆ ನಮಗೆ ಶ್ರೇಷ್ಠವೆನಿಸಿರುವುದು  ತತ್ವಾಧಾರಿತವಾದ ಅವರ ಕಾವ್ಯಗಳಾದ "ಮಂಕುತಿಮ್ಮನ ಕಗ್ಗ" ಮತ್ತು "ಮರುಳ ಮುನಿಯನ ಕಗ್ಗ" ಗಳೇ  ಎನ್ನುವುದು ಸರ್ವವಿದಿತ. ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿವಿಜಿ ಸಾಹಿತ್ಯ ಲೋಕಕ್ಕೆ ಪಾದವಿರಿಸಿದ್ದು ಮಾತ್ರ ಅನಿರೀಕ್ಷಿತವೇ.ಆದರೂ ಅವರೊಬ್ಬ ದಾರ್ಶನಿಕ ಬರಹಗಾರ. 1887 ರ ಮಾರ್ಚ್ 17 ಜನಿಸಿದ  ಇವರಿಗೆ ಇಂದಿಗೆ  (ಮಾರ್ಚ್ 17, 2013ಕ್ಕೆ ) 126 ವಸಂತದ ಸಂಭ್ರಮ. ಈ ನೆಪದಲ್ಲೊಂದು ಅವರ ಬದುಕು-ಬರಹ-ಸಾಧನೆಗಳೆಡೆಗೊಂದು ಗೌರವಪೂರ್ಣ ನುಡಿನೋಟ.                                                                                                                                                                   

          ಜೀವ ಜಡರೂಪ ಪ್ರಪಂಚವನದಾವುದೋ|   

          ಆವರಿಸಿಕೊಂಡುಮೊಳನೆರೆದುಮಿಹುದಂತೆ||

          ಭಾವಕೊಳಪಡದಂತೆ ಅಳತೆಗಳವಡದಂತೆ|

          ಆ ವಿಶೇಷಕೆ ಮಣಿಯೋ -ಮಂಕುತಿಮ್ಮ||                                                    

ಹೌದು, ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ ಡಿವಿಜಿ. ಕನ್ನಡದ ಆಧುನಿಕ ಸರ್ವಜ್ಞ' ಎಂದೇ ಖ್ಯಾತರಾದ ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ.  ಇವರಿಗೀಗ 126 ವಸಂತದ ಸಂಭ್ರಮ. ಕೋಲಾರದ ಮುಳಬಾಗಿಲಿನ ದೇವನಹಳ್ಳಿ ಗ್ರಾಮದಲ್ಲಿ 1887 ರ ಮಾರ್ಚ್ 17 ಜನಿಸಿದ ಇವರ ಮೂಲಸ್ಥಳ ತಮಿಳುನಾಡಿನ ತಿರುಚಿನಾಪಳ್ಳಿ. ಅಲ್ಲಿಂದ ವಲಸೆಬಂದ ಇವರ  ಮುತ್ತಾತ  ಮುಳಬಾಗಿಲಿನ ಶೇಕದಾರರಾಗಿದ್ದರು.

ಶಿಕ್ಷಣ:  

ಚಿಕ್ಕಂದಿನಿಂದಲೂ ಜಾಣವಿದ್ಯಾರ್ಥಿಯಾಗಿದ್ದ ಡಿವಿಜಿ 1898ರಲ್ಲಿ ತಮ್ಮ ಹುಟ್ಟೂರಲ್ಲೇ ಲೋಯರ್ ಸೆಕಂಡರಿ ಪಾಸು ಮಾಡಿದರು. ತದನಂತರ ಸಂಬಂಧಿಕರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆ ಸೇರಿದರು. ಆದರೆ, ಮೆಟ್ರಿಕ್ಯಲೇಷನ್ ಪರೀಕ್ಷೆಯಲ್ಲಿ ನಪಾಸಾದ ಗುಂಡಪ್ಪ ತಮ್ಮ ಶಾಲಾ ಶಿಕ್ಷಣಕ್ಕೆ ಎಳ್ಳುನೀರುಬಿಟ್ಟರು. ಆದರೆ ಇಂಗ್ಲಿಷ್ ನಲ್ಲಿ ಉತ್ತಮ ಪಾಂಡಿತ್ಯ ಗಳಿಸಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. ಈ ನಡುವೆ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ಅವಧಿಯಲ್ಲೇ ಮದುವೆಯಾದ ಡಿವಿಜಿ ಗೆ ಜೀವನ ನಿರ್ವಹಣೆಯೂ ಮುಖ್ಯವಾಗಿತ್ತು. ಅದಕ್ಕಾಗಿ ಅವರು ಮುಳಬಾಗಿಲಿನ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾದರು.

ಇದು ಅವರ ವೃತ್ತಿ ಜೀವನಕ್ಕೆ ಹೊಸದೊಂದು ತಿರುವು ನೀಡಿತು. ಆದರೂ ಅದನ್ನು  ಮುಂದುವರಿಯಲಾಗದೆ ಕೋಲಾರದ ಚಿನ್ನದ ಗಣಿ ಮತ್ತು ಸೋಡಾ ಫ್ಯಾಕ್ಟರಿಯಲ್ಲಿ ದುಡಿದರು. ಅಲ್ಲಿಯೂ ಬಹಳದಿನ ಇರಲಾಗದೆ ಬೆಂಗಳೂರಿಗೆ ಬಂದು ಪಡಲಾರದ ಪಾಡು ಪಟ್ಟರು. ಕೆಲಸಕ್ಕಾಗಿ ಬೀದಿ ಬೀದಿ ಅಲೆದು ಹೈರಾಣಾದರು. ಆದರೆ, ಮೊದಲೇ ವಿವಾಹಿತರಾಗಿದ್ದ ಡಿವಿಜಿ ಗೆ ಕುಟುಂಬದ ನಿರ್ವಹಣೆಗಾದರೂ ದುಡಿಯಲೇಬೇಕಾದ ಅನಿವಾರ್ಯತೆಯಿತ್ತು.  ಹಾಗಾಗಿ 'ಸೂರ್ಯೋದಯ ಪ್ರಕಾಶಿಕೆ' ಪತ್ರಿಕೆಯಲ್ಲಿ ವರದಿಗಾರಿಕೆ ಮಾಡಿದರು.ದುರದೃಷ್ಟ ವಷಾತ್ ಆ ಪತ್ರಿಕೆ ಮುಚ್ಚಿಹೋದಾಗ ಮತ್ತೊಂದು ಪತ್ರಿಕೆ ಬಾಗಿಲಿಗೆ

ಎಡತಾಕಿದರು.  ಈ ನಡುವೆ ಅವರ ಕುಟುಂಬದ ಸ್ಥಿತಿ ಹದಗೆಡುತ್ತಾ ಸಾಗಿತ್ತು. ದಿನನಿತ್ಯದ ಖರ್ಚಿಗಾಗಿಯಾದರೂ ಏನಾದರೂ ಮಾಡಲೇಬೇಕಿದ್ದಾಗ ಕೈಹಿಡಿದದ್ದು ಮಾತ್ರ ಅವರ ಇಂಗ್ಲಿಷ್ ಜ್ಞಾನ ಮಾತ್ರ. ಅವರ ಇಂಗ್ಲಿಷ್ ಪಾಂಡಿತ್ಯ ಅರಿತ ಅನೇಕ ಇಂಗ್ಲಿಷ್ ಪತ್ರಿಕೆಗಳು ಅವರಿಗೆ ಅವಕಾಶದ ದೊಡ್ಡಬಾಗಿಲನ್ನೆ ತೆರೆದವು. ಆ ಪತ್ರಿಕೆಗಳಿಗೆ ಬರೆದು  ಹೆಚ್ಚಿನ ಅನುಭವ ದಕ್ಕಿಸಿಕೊಂಡರು.  ಅಲ್ಲದೆ ಅನೇಕ ಪತ್ರಿಕೆಗಳು, ನಿಯತಕಾಲಿಕೆಗಳಿಗೆ ಲೇಖನ ಬರೆದು ತಮ್ಮ ಛಾಪನ್ನು ಹೊತ್ತಿದರು.   ಹೀಗೆ ಸಾಗುತ್ತಿರುವಾಗಲೇ 'ವೀರಕೇಸರಿ' ಪತ್ರಿಕೆಯ ಕೆಲಸ ನಿಮಿತ್ತ ಮದ್ರಾಸ್ ಗೆ ಹೋದಾಗ ಪ್ರಖ್ಯಾತ 'ಹಿಂದೂ' ಪತ್ರಿಕೆಯ ಸಂಪರ್ಕ ಸಾಧಿಸಿದರು. ಅಲ್ಲಿಂದ ಅವರ ಜೀವನಕ್ಕೆ ಅದೃಷ್ಟ ದೇವತೆಯ ಪ್ರವೇಶ.  ಅಂದಿನ ಪ್ರಸಿದ್ಧ 'ಮೈಸೂರ್ ಟೈಮ್ಸ್' ಪತ್ರಿಕೆಯ ಸಹಾಯಕ ಸಂಪಾದಕರಾಗಿ ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲನ್ನು ಮೀರಿನಿಂತರು. 

ಸಾಹಿತ್ಯ: 

ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿವಿಜಿ ಸಾಹಿತ್ಯ ಲೋಕಕ್ಕೆ ಪಾದವಿರಿಸಿದ್ದು ಮಾತ್ರ ಅನಿರೀಕ್ಷಿತವೇ. ಒಮ್ಮೆ ಅಂದಿನ ಮೈಸೂರು ದಿವಾನರಾದ ರಂಗಾಚಾರ್ಲು ಬಗ್ಗೆ ಬರೆದ ಇಂಗ್ಲಿಷ್ಲೇಖನ ಅವರ ಬದುಕನ್ನು ಹೊಸದಿಕ್ಕಿನತ್ತ ಕೊಂಡೊಯ್ಯಿತು. ಪ್ರಕಟಗೊಂಡ ಈ ಲೇಖನ ಡಿವಿ ಗುಂಡಪ್ಪ ರಿಗೆ ಬೃಹತ್ ಮೊತ್ತದ ಹಣವನ್ನೇ ತಂದುಕೊಟ್ಟಿತು. ಸಹಜವಾಗಿಯೇ ಇದು ಅವರಿಗೆ ಇನ್ನೂ ಹೆಚ್ಚುಬರೆಯಲು ಉತ್ತೇಜನ ನೀಡಿತು.  ಇದರಿಂದ ಲೇಖನ ಬರಹ, ಕಾವ್ಯರಚನೆಯನ್ನು ಮುಖ್ಯಮಾಧ್ಯಮವಾಗಿ ಮಾಡಿಕೊಂಡರು. ಇದಕ್ಕೆ ಅವರ ಇಂಗ್ಲಿಷ್  ಮೇಲಿರುವ ಪ್ರಭುತ್ವವೂ ಕಾರಣ. ಹಾಗಾಗಿ ಅನುವಾದ ಸಾಹಿತ್ಯ ಅವರಿಗೆ ಬಹುದೊಡ್ಡ ಹೆಸರು ನೀಡಿತು. ಹೀಗಾಗಿ ಅವರು ನಾಡಿನಾದ್ಯಂತ ಮನೆಮಾತಾದರು. ಇದು ಡಿವಿಜಿ ಸಾಹಿತ್ಯರಚನೆಯಲ್ಲಿ ತೊಡಗಲು ಮತ್ತಷ್ಟು ಸ್ಫೂರ್ತಿ ನೀಡಿತು.ಅಂದಿನಿಂದ  ರಾಜಕೀಯ ವಿಡಂಬನೆ, ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಮತ್ತು  ಲೇಖನ ರಚನೆಯತ್ತ ಮುಖಮಾಡುವಂತೆ ಮಾಡಿತು. ಈ ಯಶಸ್ಸು ಡಿವಿಜಿಯವರ ಕಷ್ಟದ ಮಗ್ಗುಲುಬದಲಾಗುವಂತೆ ಮಾಡಿ, ಸುಖದ ಮಗ್ಗುಲ ಪರಿಚಯಿಸಿತು.

ಇಷ್ಟೆಲ್ಲಾ…ಸಾಧನೆಯ  ನಡುವೆ ನಮಗೆ ಪರಿಚಿತರಾಗಿರುವುದು ಮಾತ್ರ  ತತ್ವಾಧಾರಿತವಾದ ಅವರ ಕಾವ್ಯ "ಮಂಕುತಿಮ್ಮನ ಕಗ್ಗ" ಮತ್ತು "ಮರುಳ ಮುನಿಯನ ಕಗ್ಗ" ಗಳಿಂದಲೇ ಎನ್ನುವುದುಸರ್ವವಿದಿತ.ಈ ಎರಡು ಕಾವ್ಯಗಳು ಡಿವಿ ಗುಂಡಪ್ಪ ಮತ್ತಷ್ಟು ಜನಮಾನಸದಲ್ಲಿ ಬೇರೂರುವಂತೆ ಮಾಡಿದವು.

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ.

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು!

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು

ಪದಕುಸಿಯೆ ನೆಲವಿಹುದು – ಮಂಕುತಿಮ್ಮ||

ಮಂಕುತಿಮ್ಮನ ಕಗ್ಗದ ಈ ಸಾಲುಗಳು ಡಿವಿಜಿಯವರ ಘನ ವಿದ್ವತ್ತನ್ನು ಅನಾವರಣ ಮಾಡುತ್ತದೆ. "ಮಂಕುತಿಮ್ಮನ ಕಗ್ಗ" ಮತ್ತು "ಮರುಳ ಮುನಿಯನ ಕಗ್ಗ" ಎಂಬಿವೆರಡು ಕಾವ್ಯಗಳು ಕನ್ನಡ ಸಾರಸ್ವತ ಲೋಕದ 'ಅಭಿನವ ಭಗವದ್ಗೀತೆ'ಯೇ ಆಗಿ ಜನಮಾನಸದಲ್ಲಿ  ಅಮರವಾಗಿವೆ. ಇದಿಷ್ಟೇ ಅಲ್ಲದೆ, ಹಳತನ್ನು ಬಿಡಲಾರದೆ.ಹೊಸತನ್ನು ಸೃಷ್ಟಿಸಲಾರದ ಭಾರತೀಯ ಮನೆಮನಸ್ಸುಗಳನ್ನು ಜೋಡಿಸುವ ವೈಚಾರಿಕ ಪ್ರಜ್ಞೆಯನ್ನು ಗುಂಡಪ್ಪನವರು ಈ ರೀತಿ ವ್ಯಾಖ್ಯಾನಿಸುತ್ತಾರೆ.

              ಹೊಸ ಚಿಗುರು

               ಹಳೆ ಬೇರು ಕೂಡಿರಲು

               ಮರ ಸೊಬಗು.

ಕೃತಿಗಳು:

ಮೂಲತಃ ಉತ್ತಮ ಪತ್ರಕರ್ತರಾದ ಡಿವಿಜಿ, ಕವಿಗಳು ಹೌದು. ಇವರದು ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಲೇಖನಗಳ ರಚನೆಯಲ್ಲೂ ಸಿದ್ಧಹಸ್ತ ಪ್ರತಿಭೆ. ಇದಕ್ಕೆ ಅವರ ' ಮಹನೀಯರು'ಮತ್ತು 'ಜ್ಞಾಪಕ ಚಿತ್ರಸಾಲೆ' ಎಂಬ ವೈಚಾರಿಕ ಪ್ರಜ್ಞೆ ಹರಡುವ ಯಶಸ್ವಿ ಕೃತಿಗಳು ಸಾಕ್ಷೀಭೂತವಾಗಿವೆ.

*ಅವರ ಸಮಗ್ರ ಕೃತಿಗಳು:  ಡಿವಿಜಿ ಅವರು ಬರೆದ ಸಮಗ್ರ ಕೃತಿಗಳು ಇಂತಿವೆ.

ಕವಿತೆ:

ನಿವೇದನ,

ಉಮರನ ಒಸಗೆ,

ಮಂಕುತಿಮ್ಮನ ಕಗ್ಗ-1,

ಮರುಳ ಮುನಿಯನ ಕಗ್ಗ-2,

ಶ್ರೀ ರಾಮ ಪರೀಕ್ಷಣಂ,

ಅಂತಃಪುರ ಗೀತೆ,

ಗೀತ ಶಾಕುಂತಲಾ,

*ನಿಬಂಧಗಳು:

ಜೀವನ ಸೌಂದರ್ಯ ಮತ್ತು ಸಾಹಿತ್ಯ.

ಸಾಹಿತ್ಯ ಶಕ್ತಿ.

ಸಂಸ್ಕೃತಿ.

ಬಾಳಿಗೊಂದು ನಂಬಿಕೆ.

ಜ್ಞಾಪಕ ಚಿತ್ರ ಶಾಲೆ.

*ನಾಟಕಗಳು:

ವಿದ್ಯಾರಣ್ಯ ವಿಜಯ.

ಜಾಕ್ ಕೇಡ್.

ಮ್ಯಾಕ್ ಬೆತ್.

*ಇತರೆ:

ಪುರುಷ ಸೂಕ್ತ.

ದೇವರು.

ರುತ, ಸತ್ಯ ಮತ್ತು ಧರ್ಮ.

ಈಶವಾಸ್ಯ ಉಪನಿಷತ್.

ಹಲವು ಮಹಾನೀಯರು.

ಮೈಸೂರಿನ ದಿವಾನರು.

ಕಲೋಪಾಸಕರು.

ಪ್ರಶಂಸೆ:

ಡಿವಿಜಿ ಅವರನ್ನು ಅವರ ಸಮಕಾಲೀನ ಕವಿಗಳು, ಸಾಹಿತಿಗಳು ಹಾಡಿ, ಹೊಗಳಿರುವುದು ಅವರ ವಿದ್ವತ್ ಪೂರ್ಣ ಬುದ್ಧಿಮತ್ತೆಯ ಅರಿವಾಗುತ್ತದೆ. ಖ್ಯಾತ ಸಾಹಿತಿ ಪ್ರೊ.ಹಾ.ಮಾ.ನಾಯಕರು ಹೇಳುವಂತೆ,"ಸತ್ಯ, ಶಿವ, ಸೌಂದರ್ಯಗಳ ಸಮ್ಮಿಶ್ರಣದ ಸಾಹಿತ್ಯವೇ ಹೌದು".  ಅಲ್ಲದೆ ಭಾರತೀಯ ಸಾಹಿತ್ಯದ  ಅರಳೀಮರ ಮತ್ತು ವಿದ್ವತ್ ಚಿಂತನೆಯ ರಸವುಳ್ಳ ಋಷಿ. ಈ ನಿಟ್ಟಿನಲ್ಲಿ ಗುಂಡಪ್ಪ ಸಾಹಿತ್ಯ ಬದುಕಿಗೊಂದು ನಂಬಿಕೆ, ಸಾಂತ್ವನ ,ಭರವಸೆ ನೀಡುವಲ್ಲಿ ಸಾರ್ಥಕವಾಗಿದೆ, ಎಂದಿದ್ದಾರೆ.

ಸಾಧನೆಗೆ ಸಂದ ಗೌರವ ಪುರಸ್ಕಾರಗಳು:

ಪತ್ರಕರ್ತ, ಸಾಹಿತಿ, ಕವಿ, ವಿಚಾರವಂತ, ತತ್ವಜ್ಞಾನಿ, ಮಾನವೀಯ ವಿಚಾರಗಳ ಪ್ರತಿಪಾದಕರಾದ ಡಿವಿಜಿ ಅವರಿಗೆ ಸಂದ ಸನ್ಮಾನ, ಗೌರವ ಅನೇಕ. ಅಂಥ ಮಹಾನ್ ಸಾಧಕನಿಗೆ ದೊರೆತ ಪುರಸ್ಕಾರಗಳ ಪಟ್ಟಿ ಇಂತಿದೆ.

  *1937 ರ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

  *1965 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಗೌರವ ಪದವಿ ಸ್ವೀಕಾರ.

  * 1967 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,   ಶ್ರೀ ಮದ್ಭಗವದ್ಗೀತಾ ತಾತ್ಪರ್ಯ ಗ್ರಂಥಕ್ಕೆ.

  * 1973 ರಲ್ಲಿ ಡಿವಿಜಿ ಸನ್ಮಾನ ಸಮಿತಿ ಯಿಂದ 1 ಲಕ್ಷ ರೂಗಳ ಗೌರವ ಸಮರ್ಪಣೆ.

  * 1974 ರಲ್ಲಿ ಭಾರತದ ನಾಗರಿಕ ಗೌರವವಾದ 'ಪದ್ಮ ಭೂಷಣ ಪ್ರಶಸ್ತಿ.'.

  * 1935 ರಲ್ಲಿ  ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪನೆ.

  * 1988 ರಲ್ಲಿ ಡಿವಿಜಿ ನೆನಪಿಗಾಗಿ ಅಂಚೆ ಚೀಟಿಯನ್ನು  ಭಾರತ ಸರ್ಕಾರವು ಹೊರತಂದಿತು.

ಉಪಸಂಹಾರ: ಕನ್ನಡ ಸಾರಸ್ವತ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ ಡಿವಿಜಿ ಅನನ್ಯ ಸಾಧಕರು. ಮಾನವತೆಯ ಪಾಠವನ್ನು ಜಗತ್ತಿಗೆ ಸಾರಿದ ಇವರು 1975 ರ ಅಕ್ಟೋಬರ್ 7ರಂದುವಿಧಿವಶರಾದರು. ಕಗ್ಗದ ಪದ್ಯಗಳು ಕನ್ನಡದ ಭಗವದ್ಗೀತೆ. ಮಾನವತೆಯ ಉದ್ಧಾರಕ್ಕಾಗಿಯೇ ನೀಡಿದ ಅವರ ಕೊಡುಗೆ ಸದಾ ಸ್ಮರಣೀಯ.ಇಂತಹ ಎಲ್ಲಾ ಕಾಲಕ್ಕೂ ಸಲ್ಲುವ ಪ್ರತಿಭಾಶಕ್ತಿಯ ಡಿವಿಗುಂಡಪ್ಪನವರದು ಬಹುಮುಖಿ ಕಾರ್ಯ. ಅವರ 125 ನೇ ಜಯಂತಿಯಂದು ಚಿಂತನಾ ಬರಹಗಳು ನಾಡ ಜನತೆಯ ಮನದಲ್ಲಿ ಚಿಗುರಿ, ಕುಡಿಯೊಡೆಯಲಿ ಎಂಬುದು ಆಶಯ. ಅದರಂತೆ ಎಲ್ಲರೂ ಸಾಗುವತ್ತ ಮನಸು ಮಾಡೋಣ..ಮತ್ತೆ ಮತ್ತೆ ಎಲ್ಲರೊಳಗೊಂದಾಗಿ ಬಾಳುವ, ಇತರರೊಂದಿಗೆ ಸಹಕರಿಸುತ್ತಾ, ಬಾಳುವ ಅಗತ್ಯವನ್ನು ಅವರದೇ ಆದ ಈ ಸಾಲುಗಳು ತಿಳಿಸುತ್ತವೆ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು|

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ||

ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ|

ಎಲ್ಲರೊಳಗೊಂದಾಗು – ಮಂಕುತಿಮ್ಮ||

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

good collective information.

Santhoshkumar LM
11 years ago

Informative!!

Rukmini Nagannavar
11 years ago

good information

ಸುಮತಿ ದೀಪ ಹೆಗ್ಡೆ

ಒಳ್ಳೆಯ ಮಾಹಿತಿ..

Badarinath Palavalli
11 years ago

ಸಂಗ್ರಹ ಯೋಗ್ಯ ಬರಹ.

5
0
Would love your thoughts, please comment.x
()
x