ಆಸಂಗಿಪುರದ ಮಕ್ಕಳು ಎಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧಿ. ಯಾವುದೇ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಓದಿನಲ್ಲಿ ಆಸಂಗಿಪುರದ ಮಕ್ಕಳು ಸದಾ ಮುಂದು. ಪ್ರತಿ ಸಾರಿಯೂ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡೇ ಊರಿಗೆ ಬರುತ್ತಿದ್ದರು. ಆಸಂಗಿಪುರವು ಆ ಊರಿನ ಮಕ್ಕಳಿಂದಲೇ ಪ್ರಸಿದ್ಧಿ ಪಡೆದಿತ್ತು. ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಗಳಿಸಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಆ ಊರಿನ ಶಾಲೆಯ ಗುರುಗಳು. ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಛಲದಿಂದ ಯಾವುದೇ ಕಾರ್ಯವನ್ನಾಗಲೀ ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು.
ಬೇಸಿಗೆ ರಜೆ ಹತ್ತಿರ ಬರುತ್ತಿದ್ದ ಕಾಲ . ಆಸಂಗಿಪುರಕ್ಕೆ ಬೇರೆ ರಾಜ್ಯದಿಂದ ಅಲೆಮಾರಿ ಕುಟುಂಬಗಳು ಬಂದು ಊರ ಹೊರಗಿನ ಮೈದಾನದಲ್ಲಿ ಗುಡಿಸಲನ್ನು ಹಾಕಿಕೊಂಡು ವಾಸಿಸುತ್ತಿದ್ದರು. ಆ ಅಲೆಮಾರಿ ಕುಟುಂಬದವರು ಹಗಲಿನ ವೇಳೆ ಸುತ್ತಮುತ್ತಲಿನ ಊರುಗಳಿಗೆ ಹೋಗಿ ವ್ಯಾಪಾರ ಮಾಡಿ ಸಂಜೆಯ ವೇಳೆಗೆ ಮತ್ತೆ ಗುಡಿಸಲಿಗೆ ಹಿಂದುರುಗುತ್ತಿದ್ದರು. ಅವರ ಮಕ್ಕಳು ಆಸಂಗಿಪುರದ ಮನೆಮನೆಗೆ ತೆರಳಿ ಬಿಕ್ಷೆ ಬೇಡಿ ಊಟ ಮಾಡುವುದು ಅವರ ಪ್ರತಿದಿನದ ಕಾಯಕವಾಗಿತ್ತು. ಆ ಮಕ್ಕಳು ಅನ್ಯ ಭಾಷೆಯನ್ನು ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಹಾಗೂ ಅವರಿಗೆ ಅಕ್ಷರಾಭ್ಯಾಸವೂ ಗೊತ್ತಿರಲಿಲ್ಲ.
ಬೇಸಿಗೆ ರಜೆಯ ಸಮಯ ಬಂದಾಯ್ತು. ಆಸಂಗಿಪುರದ ಶಾಲೆಯ ಗುರುಗಳು ಮಕ್ಕಳನ್ನು ಕರೆದು ” ಮಕ್ಕಳೇ, ನಾಳೆಯಿಂದ ನಿಮಗೆ ಬೇಸಿಗೆ ರಜೆ. ಈ ರಜೆಯನ್ನು ಸಂತೋಷವಾಗಿ ಕಳೆಯಿರಿ. ರಜೆಯ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಮಕ್ಕಳೇ, ಈ ರಜೆಯಲ್ಲಿ ನಿಮಗೆ ‘ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯವನ್ನು ನೀಡುತ್ತೇನೆ. ಮಾಡುವಿರಾ? ” ಎಂದಾಗ ಮಕ್ಕಳು ಸಂತೋಷದಿಂದ “ಆಗಲಿ ಗುರುಗಳೇ ಹೇಳಿ” ಎಂದರು. ” ಮಕ್ಕಳೇ, ಊರ ಹೊರಗಿನ ಮೈದಾನದಲ್ಲಿ ಅಲೆಮಾರಿ ಕುಟುಂಬಗಳು ವಾಸಿಸುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಆ ಕುಟುಂಬದ ಮಕ್ಕಳಿಗೆ ಕನ್ನಡ ಭಾಷೆ ಮಾತನಾಡಲು ಬರುವುದಿಲ್ಲ. ಶಾಲೆ ಪ್ರಾರಂಭವಾಗುವುದರೊಳಗೆ ಅವರಿಗೆ ಕನ್ನಡ ಮಾತನಾಡಲು, ಓದಲು, ಬರೆಯಲು ಕಲಿಸಬೇಕು. ಇದು ನಿಮ್ಮಿಂದ ಸಾದ್ಯವೇ? ನಿಮಗೆ ಬಹುಮಾನವೂ ಇದೆ” ಎಂದಾಗ ಮಕ್ಕಳು ಆಗಲಿ ಗುರುಗಳೇ ಎಂದು ಸಂತೋಷದಿಂದ ಒಪ್ಪಿಕೊಂಡರು.
ಮರುದಿನ ಮಕ್ಕಳೆಲ್ಲಾ ಸೇರಿ ತಮಗೆ ನೀಡಿರುವ ಮಹತ್ವದ ಕಾರ್ಯದ ಬಗ್ಗೆ ಚರ್ಚಿಸಿದರು. ತಮ್ಮದೇ ಆದ ಕ್ರೀಯಾ ಯೋಜನೆ ರಚಿಸಿಕೊಂಡರು. ತಮ್ಮ ತಮ್ಮಲ್ಲೇ ವಿವಿಧ ತಂಡಗಳ ರಚನೆ ಮಾಡಿ ಅಲೆಮಾರಿ ಕುಟುಂಬದ ಮಕ್ಕಳ ಮಾಹಿತಿ ಸಂಗ್ರಹಿಸಿದರು. ಮಕ್ಕಳಿಗೆ ಕಲಿಸಲು ಬೇಕಾದ ವಿವಿಧ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸಿದರು. ಅಲೆಮಾರಿ ಕುಟುಂಬಗಳ ಬಳಿ ಹೋಗಿ ತಮ್ಮ ಉದ್ದೇಶವನ್ನು ತಿಳಿಸಿದರು. ಮೊದಲು ಅವರು ಒಪ್ಪದಿದ್ದಾಗ ಹಿರಿಯರ ಮಾರ್ಗದರ್ಶನದಲ್ಲಿ ಅವರ ಮನವೊಲಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭಿಸಿದರು. ಆ ಮಕ್ಕಳೊಂದಿಗೆ ಆಡುತ್ತಾ , ಕಲಿಯುತ್ತಾ , ಕಲಿಸುತ್ತಾ ಬೇಸಿಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆದರು. ಆಸಂಗಿಪುರದ ಮಕ್ಕಳೂ ಸಹ ಅಲೆಮಾರಿ ಕುಟುಂಬದರಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡರು.
ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಗುರುಗಳಿಗೆ ಆಶ್ಚರ್ಯ ಕಾದಿತ್ತು. ಶಾಲಾ ಮಕ್ಕಳು ತಾವು ವಹಿಸಿಕೊಂಡಿದ್ದ ಕಾರ್ಯದಲ್ಲಿ ಸಫಲರಾಗಿದ್ದರು. ಅಲೆಮಾರಿ ಕುಟುಂಬದವರ ಮಕ್ಕಳು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೇ ಆ ಮಕ್ಕಳಿಗೆ ಕನ್ನಡದಲ್ಲಿ ಓದಲು ಬರೆಯಲು ಬರುತ್ತಿತ್ತು. ಗುರುಗಳು ಶಾಲಾ ಮಕ್ಕಳನ್ನು ಪ್ರಶಂಸಿಸಿದರು. ಊರಿನ ಹಿರಿಯರೊಂದಿಗೆ ಒಂದು ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನವನ್ನು ನೀಡಿದರು. ಮಕ್ಕಳ ಕೀರ್ತಿ ಎಲ್ಲೆಡೆಯೂ ಹಬ್ಬಿತು.
-ವೆಂಕಟೇಶ ಚಾಗಿ