ಕನ್ನಡ ಕಲಿಯುವುದು ಬೆಣ್ಣೆಯನ್ನು ತಿಂದಷ್ಟೇ ಸುಲಭ: ಬಂದೇಸಾಬ ಮೇಗೇರಿ

(ಕನ್ನಡ ರಾಜ್ಯೋತ್ಸವ ಕುರಿತು ಒಂದು ಲೇಖನ)

ಕನ್ನಡ ಗಂಧದ ಗುಡಿ. ಕನ್ನಡ ಭಾಷೆಯು ನಿಂತ ನೀರಲ್ಲ. ಅದು ಸರೋವರ ಭಾಷೆ ಸತ್ಯ ಸುಂದರ. ನಿತ್ಯ ನಿರಂತರ. ಕಾಲ ಸರಿದಂತೆ ಭಾಷೆ ತನ್ನ ನೈಜತೆಯನ್ನು ಬದಲಿಸುತ್ತಾ ಸಾಗುತ್ತಿದೆ. ಇದು ಆಶ್ಚರ್ಯವೇನಲ್ಲ. ಬದಲಾವಣೆ ಜಗದ ನಿಯಮ. ನಮ್ಮ ಮಾತೃ ಭಾಷೆ ಕನ್ನಡಕ್ಕೆ ಸುಮಾರು 2000 ವರ್ಷಗಳ ಇತಿಹಾಸ ಇದೆ. ಇಂಗ್ಲೀಷ್, ಹಿಂದಿ, ಪರ್ಷಿಯನ್ ಭಾಷೆಯ ಪದಗಳು ಸಾಮಾನ್ಯವಾಗಿ ಕನ್ನಡ ಭಾಷಾ ಪದಗಳಲ್ಲಿ ಸರಾಗವಾಗಿ ಸೇರಿವೆ. ಇಂದಿನ ಯುವ ಜನತೆ ಹಲವಾರು ಭಾಷೆಯ ಶಬ್ದಗಳನ್ನು ಕನ್ನಡದಲ್ಲಿ ಅನುಕರಿಸುತ್ತಿದ್ದಾರೆ. ಸೆಷನ್ ಕೋರ್ಟ್ ಎಂಬ ಆಂಗ್ಲ ಭಾಷೆಯ ಪದದ ಕನ್ನಡದ ಅರ್ಥ ಸತ್ರ ನ್ಯಾಯಾಲಯ ಎಂದಾಗುತ್ತದೆ. ಆದರೆ ಇದನ್ನು ಉಚ್ಚರಿಸುವುದು ತಪ್ಪಾಗುತ್ತದೆ. ಹಾಗಾಗಿ ಸೆಷನ್ ಕೋರ್ಟ್ ಎಂದು ಕರೆಯುವುದೇ ಉತ್ತಮ.

ಇಂದಿನ ಜನ ಸಾಮಾನ್ಯ ಓದುಗ ದೊರೆಗಳಿಗೆ ಬೇಕಾಗಿರುವುದು ಮನರಂಜನೆಯ ರೂಪದ ಬರಹಗಳ ಸಾರ. ಮನರಂಜನೆಯನ್ನು ಸರಬರಾಜು ಮಾಡುವುದರ ಮೂಲಕ ಓದುಗನನ್ನು ಕೊನೆಯ ಪುಟದ ಕಡೆಯ ಪದದ ವರೆಗೂ ಅವರನ್ನು ಕರೆದೊಯ್ಯುವ ಭಾಷಾ ಶೈಲಿ ಮುಖ್ಯ. ಕನ್ನಡ ಕಲಿಯುವುದು ಬೆಣ್ಣೆಯನ್ನು ತಿಂದಷ್ಟೇ ಸುಲಭ, ಸರಳ. ಆಂಗ್ಲ ಭಾಷೆಯ ನಿಘಂಟಿಗೆ ದಿನಕ್ಕೆ ನೂರಾರು ಶಬ್ಧಗಳು ಸೇರುತ್ತಿರುವಾಗ ಕನ್ನಡಕ್ಕೆ ಪರ ಭಾಷಾ ಪದಗಳು ಸೇರುವ ವಿಳಂಬವೇಕೆ?

ತಾಯಿಯಂತೆ ಮಗಳು, ನೂಲಿನಂತೆ ದಾರ ಎಂಬ ನಾಣ್ಣುಡಿಯಂತೆ ಯುವ ಜನತೆಗೆ ಮಾರ್ಗದರ್ಶಿ ಭಾಷೆ. ಅದರ ಬೆಳವಣಿಗೆಗೆ ಪ್ರಾಥಮಿಕ ಶಿಕ್ಷಣವೇ ಭದ್ರ ಬುನಾದಿ ಕುಸಿಯುತ್ತಿದೆ. ಇಂದಿನ ಶಿಕ್ಷಕರಿಗೆ ಅಲ್ಪ ಪ್ರಾಣ, ಮಹಾಪ್ರಾಣ, ಹೃಸ್ವಸ್ವರ, ಧೀರ್ಘಸ್ವರ, ಛಂದಸ್ಸುಗಳು ಶಾಲೆಯಲ್ಲಿ ನಶಿಸಿ ಹೋಗುತ್ತಿವೆ. ಯುವ ಜನತೆಯ ಇಂಗ್ಲೀಷ್‍ನ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಸಮೂಹ ಮಾಧ್ಯಮಗಳು ಇಂದು ಕಂಗ್ಲೀಷ್ ಪದಗಳನ್ನು ನೀರು ಕುಡಿದಂತೆ ಸರಾಗವಾಗಿ ಬಳಸುತ್ತಿದ್ದಾರೆ. ಇದರಿಂದ ಕನ್ನಡದ ಇಂಪು, ಕಂಪು ಸೊರಗುತ್ತಿದೆ. ಕನ್ನಡದ ಗೌರವ, ಗಾಂಭೀರ್ಯ ನಶಿಸಿ ಹೋಗುತ್ತಿದೆ. ಇದು ನಮ್ಮ ದುರಾದೃಷ್ಟ. ಕರುನಾಡಿನ ದೊಡ್ಡ ದೊಡ್ಡ ನಗರಗಳಲ್ಲಿ ಕನ್ನಡವೇ ಮರೆತು ಹೋದ ಪರಿಸ್ಥಿತಿ ಹಬ್ಬಿದಂತಾಗಿದೆ. ಕನ್ನಡ ಬಂದರೂ ಹಿಂದಿ, ತೆಲುಗು, ತಮಿಳಿನಲ್ಲಿ ಗುಂಯ್ ಗುಟ್ಟುತ್ತಾರೆ. ಇವರಪ್ಪ ಅಮ್ಮ ಇಂಗ್ಲೆಂಡ್‍ನಲ್ಲಿ ಹುಟ್ಟಿ ಬಂದೋರ್ ತರ ಆಡ್ತಾರೆ. ಯಾಕೆ ಹೀಗೆ ? ಕನ್ನಡವನ್ನು ಕನ್ನಡ ನಾಡಿನಲ್ಲಿ ಮಾತನಾಡದೇ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಮಾತನಾಡೋಕೆ ಆಗುತ್ತಾ? 

ಅನ್ಯ ಭಾಷಿಗರು ನಮ್ಮ ನಾಡಿನಲ್ಲಿ ಎಷ್ಟೋ ವರ್ಷಗಳಿದ್ದರೂ ನಮ್ಮ ಭಾಷೆಯನ್ನು ಕಲಿತುಕೊಳ್ಳಲ್ಲ. ಆದ್ರೆ ನಮ್ ಜನ ಗೋವಾ, ಹೈದರಾಬಾದ್ ಅಂತಹ ಪ್ರದೇಶಗಳಿಗೆ ಗುಳೆ (ಕೆಲಸಕ್ಕೆ) ಹೋದ್ರೆ ತಿಂಗಳಲ್ಲೇ ಆ ಭಾಷಾ ಮಾಧ್ಯಮವನ್ನು ಕರಗತ ಮಾಡಿಕೊಳ್ಳುವರು. ನಮಗೇಕೆ ನಮ್ಮತನ ಎಂಬುದು ಬರುತ್ತಿಲ್ಲ? ಬೃಹತ್ ನಗರ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟುಗಳು ಇಂಗ್ಲೀಷ್ ಭಾಷೆಯಲ್ಲಿಯೇ ಬೋರ್ಡನ್ನು ತೂಗು ಹಾಕಿರ್ತವೆ. ‘ಸಾಯಿ ಟೆಕ್ಷ್‍ಟೈಲ್’, ‘ದಿ ರಾಯಲ್ ಬಾರ್ ಆ್ಯಂಡ್ ರೆಸ್ಟೊರೆಂಟ್’ ‘ಝರಾಕ್ಸ್ ಸೆಂಟರ್’ ಎಂಬ ಬೋರ್ಡುಗಳೇ ರಾರಾಜಿಸುತ್ತವೆ. ಗ್ರಾಮೀಣ ಪ್ರದೇಶದ ಓದೋಕೆ ಬರದ ಮುಗ್ದ ಜನರಿಗೆ ತೊಂದರೆ. ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುವ ಶಿಕ್ಷಕರು, ಉಪನ್ಯಾಸಕರು ಕನ್ನಡವನ್ನೇ ಮರೆತಿರುವ ಹಾಗಿದೆ. ಪಾಠ ಮಾಡುವಾಗ ಎಷ್ಟೋ ಇಂಗ್ಲೀಷ್ ಶಬ್ಧಗಳ ಸಲೀಸಾಗಿ ಬೆರೆತು ಹೋಗಿರುತ್ತವೆ. ಇವರೇ ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾದ್ರೆ ಇನ್ನೂ ಉಳಿದ ಜನರ ಪಾಡೇನು?

ಭಾಷೆ ಈಗ ಸರಳೀಕರಣಗೊಂಡಿದೆ. ಇದರಿಂದ ಹೆಚ್ಚು ಜನರನ್ನು ತಲುಪುವುದಾದರೆ ಒಳ್ಳೆಯದೇ. ಗಾಂಭೀರ್ಯದಿಂದ ಕೂಡಿದ ಸಾಹಿತ್ಯ ಇಂದು ಎಲ್ಲರನ್ನು ರಂಜಿಸುವುದಿಲ್ಲ. ಆಡು ಮಾತು ಎಂಥಹ ಭಾಷೆಯಲ್ಲಿಯೂ ಆಕರ್ಷಿಸುವುದು. ನಮ್ಮ ವಚನಕಾರರು ಆಡು ಭಾಷೆಯಲ್ಲಿಯೇ ವಚನ ಕೀರ್ತನೆಗಳನ್ನು ರಚಿಸಿದ್ದಾರೆ. ಅವು ಇಂದಿಗೂ ನಿತ್ಯ ನೂತನ. ‘ಗೊತ್ತಿರದ ಶಬ್ಧಗಳನ್ನು ಬಳಸುವುದಕ್ಕಿಂತ, ಸುಮ್ಮನಿರುವುದೇ ಲೇಸು’ ಎಂದು ಡಿ.ವಿ.ಜಿ.ಯವರು ಹೇಳಿದ್ದಾರೆ. 
-ಬಂದೇಸಾಬ ಮೇಗೇರಿ                                      

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x