ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ: ಚಂದ್ರಿಕಾ ಆರ್ ಬಾಯಿರಿ

“ಹಾಯ್! ಸುಶೀಲಾ ‘ಹವ್ ಆರ್ ಯೂ’?. ಎಲ್ಲಿಗೆ ಹೋಗ್ತಾ ಇದೀಯಾ?”

“ಹಾಯ್! ಸಹನಾ ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀನಿ.”

“ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀಯಾ. ಯಾಕೆ? ಯಾರಿಗೆ ಟ್ಯೂಷನ್?”

“ಅಯ್ಯೋ! ನನ್ನ ಮಗನಿಗೆ ಇನ್ನೂ ಕನ್ನಡ ಓದೋದಕ್ಕೆ ಬರೆಯೋದಕ್ಕೆ  ಸರಿಯಾಗಿ ಬರಲ್ಲ ಕಣೇ. ಅದಕ್ಕೆ ಟ್ಯೂಷನ್ ಗೆ ಹಾಕೋಣ ಅಂತ.”

“ಏನು? ಟ್ಯೂಷನ್ ಗೆ ಹಾಕ್ತೀಯಾ. ನಿನ್ನ ಮದರ್ ಟಂಗ್ ಯಾವುದು ಸುಶೀಲಾ?”

“ಕನ್ನಡ”

“ಮತ್ತೆ ನೀನೇ ಹೇಳಿ ಕೊಡಬಹುದಿತ್ತಲ್ವ.”

“ಇಲ್ಲ ಕಣೇ. ನಾನು ತಪ್ಪು ಮಾಡಿಬಿಟ್ಟೆ. ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿ ನನ್ನ ಮಗನ ಜೊತೆ ಇಂಗ್ಲೀಷ್ ನಲ್ಲೇ ಮಾತಾಡ್ತಾ ಇದ್ದೆ. ನನ್ನ ಮಗ ಇಂಗ್ಲೀಷ್ ಕಲಿಯಬೇಕು. ಇಂಗ್ಲೀಷ್ ನಲ್ಲೇ ಮಾತನಾಡ್ಬೇಕು ಅಂತ ಅವನಿಗೆ ಇಂಗ್ಲೀಷ್ ಕಲಿಸಿದೆ. ಇವತ್ತು ನನ್ನ ಮಗ ಇಂಗ್ಲೀಷ್ ನಲ್ಲಿ ಚೆನ್ನಾಗಿ ಮಾತನಾಡ್ತಾನೆ. ಒಳ್ಳೆಯ ಮಾರ್ಕ್ಸ್ ತೆಗೆಯುತ್ತಿದ್ದಾನೆ. ಆದರೆ 6ನೇ ತರಗತಿ ಬಂದರೂ ಕನ್ನಡ ಸರಿಯಾಗಿ ಕಲಿತಿಲ್ಲ. ಫೇಲ್ ಆಗ್ತಾನೆ. ನನಗಂತೂ ಇದೇ ದೊಡ್ಡ ಸಮಸ್ಯೆಯಾಗಿದೆ ಕಣೇ. ಕನ್ನಡದವರಾಗಿ ನಾವೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಅಂತ ಅನಿಸುತ್ತಿದೆ.”

“ನೋಡಿದ್ಯಾ ಚಿಕ್ಕ ಮಗುವಿದ್ದಾಗ  ನಿನ್ನ ಮಗನ ಜೊತೆ ಕನ್ನಡನೇ ಮಾತಾಡಿದ್ದರೆ ಅವನಿಗೆ ಅರ್ಧದಷ್ಟು ಕನ್ನಡ ಮನೆಯಲ್ಲೇ ಬರುತ್ತಿತ್ತು . ಓದುವುದು ಬರೆಯುವುದನ್ನು ಶಾಲೆಯಲ್ಲಿ  ಕಲಿಯುತ್ತಿದ್ದ. ನೀನು ಇಂಗ್ಲೀಷ್ ಗೆ ಜಾಸ್ತಿ ಒತ್ತು ಕೊಟ್ಟಿದ್ದರಿಂದ ಇಂಗ್ಲೀಷ್ ಚೆನ್ನಾಗಿ ಕಲಿತ. ಈಗ ಎಷ್ಟು ನಾಚಿಕೆಗೇಡು ನೋಡು. ನನ್ನ ಮಗನಿಗೆ ಕನ್ನಡ ಬರಲ್ಲ ಅಂತ ಹೇಳಿಕೊಳ್ಳುವುದಕ್ಕೆ ನಿನಗೆ ನಾಚಿಕೆ ಆಗುತ್ತೆ. ಕನ್ನಡದವರಾಗಿ ನಾವೇ ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಕನ್ನಡವನ್ನು  ಉಳಿಸಿ ಬೆಳೆಸುವವರ್ಯಾರು ಅಲ್ವ. ನಾನು ನಿನಗೆ ಉಪದೇಶ ಮಾಡುತ್ತಾ ಇದೀನಿ ಅಂದುಕೊಳ್ಳಬೇಡ. ನಾನು ನನ್ನ ಮಗನ ಹತ್ತಿರ ಕನ್ನಡವನ್ನೇ ಮಾತನಾಡುತ್ತ ಬಂದೆ. ಅವನಿಗೆ ಯಾವತ್ತೂ ಕನ್ನಡ ಕಷ್ಟ ಆಗಲೇ ಇಲ್ಲ . ಹಾಗಂತ ಇಂಗ್ಲೀಷ್ ಕೂಡಾ ಕಷ್ಟ ಆಗ್ತಾ ಇಲ್ಲ . ಕಾರಣ ಮಾತೃಭಾಷೆ ಮೇಲೆ ಹಿಡಿತ ಸಿಕ್ಕಿದರೆ ಬೇರೆ ಎಲ್ಲಾ ಭಾಷೆಗಳನ್ನು ಕಲಿಯಬಹುದು ಅಂತ ನನ್ನ ಅಭಿಪ್ರಾಯ .”

“ಹೂಂ ಕಣೇ ನೀನು ಹೇಳಿದ್ದು ಸರಿಯಾಗಿದೆ. ನಾನೇ ತಪ್ಪು ಮಾಡಿದೆ. ನೀನು ನನ್ನ ಕಣ್ಣು ತೆರೆಸಿದೆ.”

ನೀವೇ ಓದಿದರಲ್ಲ. ಹೇಗಿದೆ ಇವರ ಸಂಭಾಷಣೆ . ಇದು ಸಾಮಾನ್ಯವಾಗಿ ಹಲವು ಮನೆಯಲ್ಲಿ ನಡೆಯುವ ಕಥೆ. ಜನಸಾಮಾನ್ಯರು ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿ ತಮ್ಮಮಾತೃಭಾಷೆಯನ್ನೇ ಮರೆಯುತ್ತಿರುವುದು ಬೇಸರದ ಸಂಗತಿ ಅಲ್ವ. ಅಷ್ಟೋ ಇಷ್ಟು ಕೂಡಿಟ್ಟ ಹಣವನ್ನು ಫೀಸ್ ಕಟ್ಟಿ ಮಕ್ಕಳನ್ನು ಆಂಗ್ಲ  ಮಾದ್ಯಮ ಶಾಲೆಗೆ ಸೇರಿಸುತ್ತಾರೆ. ಈ ಕಾರಣದಿಂದಾಗಿಯೇ ಇಂದು ಕನ್ನಡ ಮಾದ್ಯಮ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಇಂದು ಎಷ್ಟೋ ಕನ್ನಡ ಮಾದ್ಯಮ ಶಾಲೆಗಳು ಮುಚ್ಚಲು ಪೋಷಕರೇ ನೇರ ಕಾರಣರೇ ಹೊರತು ಶಿಕ್ಷಕರಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಕೂಡ 5 ವರ್ಷ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಅವಶ್ಯಕ  ಎಂದೂ ನಿಯಮ ಜಾರಿಗೆ ತಂದಿದೆ. ಆದರೂ ಕೂಡ ಆಂಗ್ಲ ಮಾದ್ಯಮಕ್ಕೆ ಅವಕಾಶ ನೀಡುತ್ತಲೇ ಇದೆ. ಸರ್ಕಾರದ ಈ ಧೋರಣೆಯು ಎಷ್ಟು ಸರಿ ಎಂದು ನೀವೇ ಹೇಳಬೇಕು. ಕನ್ನಡ ನಮ್ಮ ಮಾತೃಭಾಷೆ ಅದನ್ನು ಮಾತನಾಡಲು ನಾವೆಂದಿಗೂ ಹಿಂಜರಿಯಬಾರದು. ಕರ್ನಾಟಕದಲ್ಲಿ ಇರುವವರೆಗೂ ನಮಗೆ ಕನ್ನಡದ ಬೆಲೆ ಕರ್ನಾಟಕದ ಮಹತ್ವ ತಿಳಿಯುವುದಿಲ್ಲ. ಯಾವಾಗ ನಾವು ನಮ್ಮ ರಾಜ್ಯ ಬಿಟ್ಟು ಹೊರಗಡೆ ಹೋಗಿ ಆಗ ನಮ್ಮ ಕಿವಿಗಳು ಕನ್ನಡದ ಅಮೃತ ನುಡಿಯನ್ನು ಕೇಳೋದಕ್ಕೆ ಹಂಬಲಿಸುತ್ತೆ. ಕನ್ನಡ ಚಾನೆಲ್ ಗಳನ್ನು ನೋಡೋದಕ್ಕೆ ಕಣ್ಣುಗಳು ಹಾತೊರೆಯುತ್ತಾ ಇರುತ್ತವೆ. ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶದಂತಹ ನಗರಗಳಿಂದ ವ್ಯಾಪಾರಕ್ಕೆಂದು ಬೆಂಗಳೂರಿಗೆ ಬಂದ ಅನೇಕ ಜನರು ಇಂದು ಕನ್ನಡವನ್ನು ಕಲಿತು ಮಾತನಾಡುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಇದರಿಂದ ಎಲ್ಲೋ ಒಂದು ಕಡೆ ನಮ್ಮ ಕನ್ನಡ ಭಾಷೆ ಬೆಳೆಯುತ್ತಿದೆ ಅಂತ ನಾವು ಸಂತೋಷ  ಪಡಬಹುದು. ಆದರೆ ಅಚ್ಚಕನ್ನಡಗರೇ ಇಂದು ತಮ್ಮ ಸ್ಟೇಟಸ್ ಗೋಸ್ಕರ ಇಂಗ್ಲೀಷಿನಲ್ಲಿ ಮಾತಾಡೋದನ್ನ ನೋಡಿದ್ರೆ ಕೋಪ ಬರುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಕನ್ನಡಪರ ಸಂಘಟನೆಗಳು ಹುಟ್ಟಿಕೊಂಡಿವೆ. ದಿನ ಬೆಳಗಾದರೆ “ಕನ್ನಡವನ್ನು ಉಳಿಸಿ”, “ಕನ್ನಡವನ್ನು ಬೆಳೆಸಿ” ಎಂಬ ಘೋಷಣೆಗಳನ್ನು ನಾವು ಕೇಳಬಹುದು. ಆದರೆ ಎಲ್ಲವೂ ಬರೀ ಘೋಷಣೆಗಳಾಗಿಯೇ ಉಳಿದಿವೆಯೇ? ಕೇವಲ ಪ್ರಚಾರಕ್ಕಾಗಿ ಕೆಲವು ಸಂಘಟನೆಗಳು ಹುಟ್ಟಿಕೊಂಡಿವೆ ಎಂಬುದು ವಿಪರ್ಯಾಸವೇ ಸರಿ. ಇನ್ನು ಎಲ್ಲಾ ಕಡೆಗಳಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವುದನ್ನು ನಾವು ಕಾಣಬಹುದು. ಆದರೆ ಎಲ್ಲವೂ ಕೇವಲ ಸನ್ಮಾನಕ್ಕಾಗಿ ಪ್ರಶಸ್ತಿಗಳಿಗಾಗಿ ಅಷ್ಟೇನಾ? ಸಂತೆಯಲ್ಲಿ ಮಾಲುಗಳು ವ್ಯಾಪಾರವಾಗುವಂತೆ ಇಂದು ಸಮ್ಮೇಳನಗಳಲ್ಲಿ ಪ್ರಶಸ್ತಿಗಳು ಮಾರಾಟವಾಗುತ್ತಿದೆ ಎಂದು ಕೇಳಲು ಖೇದವಾಗುತ್ತಿದೆ. ಆದರೆ ಇಂದು ಬರಹಗಾರರಿಗೆ, ಸಾಹಿತಿಗಳಿಗೆ  ಬರಗಾಲವಿಲ್ಲ. ಅನೇಕ ಯುವ ಬರಹಗಾರರು ಇಂದು ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿರುವುದು ನಮ್ಮೆಲ್ಲರ ಭಾಗ್ಯವೇ ಸರಿ. ಹಾಗೆಯೇ ಅನೇಕ ಫೇಸ್ ಬುಕ್ ಪೇಜ್ ಗಳು ಕನ್ನಡದ ಬರಹಗಾರರನ್ನು ಹುರಿದುಂಬಿಸುತ್ತಿವೆ. ಅನೇಕ ದಿನಪತ್ರಿಕೆಗಳು ಮಾಸಪತ್ರಿಕೆಗಳು ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿವೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಅತಿ ಪ್ರಮುಖವಾಗಿರುತ್ತದೆ. “ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ” ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ.

-ಚಂದ್ರಿಕಾ ಆರ್ ಬಾಯಿರಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x