ಕನ್ನಡೋದ್ಧಾರ!: ಗುರುಪ್ರಸಾದ್ ಕುರ್ತಕೋಟಿ


ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ ಬೆರಳು ಹಿಡಿದು ತೋರಿಸಿದಾಗ ಗಪ್ಪಣ್ಣನ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿತ್ತು! ಅವಳು ನೋಡಲು ಬಯಸಿದ್ದ ಸಿನಿಮಾ ಶಾಹ್ ರುಖ್ ಖಾನ್ ನ ’ಚೆನ್ನೈ ಎಕ್ಸ್ ಪ್ರೆಸ್’ ಎಂಬ ಹಿಂದಿ ಸಿನಿಮಾ. ಈ ಖಾನ್ ನ ಎಲ್ಲ ಹಲ್ಲುಗಳುದುರಿ ಮುದುಕನಾದರೂ ಅವನ ಅಭಿಮಾನಿಗಳಿಗೇನು ಕೊರತೆಯಿಲ್ಲ. ಆ ಹೆಣ್ಣೂ ಮಕ್ಕಳಿಗಂತೂ ಏನು ಮೋಡಿ ಮಾಡಿದ್ದಾನೋ ನನ ಮಗಾ ಅಂತ ಮಾತ್ಸರ್ಯದಿಂದ ತಾನೇನು ಅವನಿಗೆ ಕಡಿಮೆಯಿರಬಹುದು ಅಂತ ಕನ್ನಡಿ ನೋಡಿಕೊಂಡ. ತನ್ನ ಅಖಂಡವಾದ ಸಿಂಗಲ್ ಪ್ಯಾಕ್ ಬಾಡಿ ಕಂಡು ಬೆಚ್ಚಿ ಬಿದ್ದ! 

ಕನ್ನಡದ ಭಕ್ತನೂ, ಸೇವಕನೂ ಹಾಗೂ ಸಿಕ್ಕಾಪಟ್ಟೆ ಅಭಿಮಾನಿಯೂ ಆದ ಗಪ್ಪಣ್ಣ ಕನ್ನಡೇತರ ಸಿನಿಮಾ ನೋಡುವುದು ಅಕ್ಷಮ್ಯ ಅಪರಾಧವಾಗಿತ್ತು. 

"ಅದು ಬ್ಯಾಡ, ಯಾವ್ದರೆ ಕನ್ನಡ ಪಿಚ್ಚರ್ ನೋಡೋಣ" ಅಂದದ್ದಕ್ಕೆ "ಯಾಕ?" ಅನ್ನುವ ಜಾನುನ ಸರಳ ಪ್ರಶ್ನೆ ಅವನಲ್ಲಿ ಗಲಿಬಿಲಿ ಉಂಟು ಮಾಡಿತಲ್ಲದೇ ಕೋಪವನ್ನೂ ತರಿಸಿತ್ತು. 

"ಯಾಕಂದ್ರ… ಕನ್ನಡಾ ಉದ್ಧಾರಾಗಬೇಕಲ್ಲ ಅದಕ್ಕ!… ನಿಮ್ಮಂಥವ್ರು ಬರೇ ಬ್ಯಾರೆ ಭಾಷಾದ್ದ ಸಿನಿಮಾ ನೋಡಿದ್ದಕ್ಕ ನಮ್ಮ ಕನ್ನಡಾದ ಪರಿಸ್ಥಿತಿ ಹಿಂಗಾಗಿರೋದು" ಅಂತ ಬೀಪಿ ಏರಿಸಿಕೊಂಡು ಕೂಗಾಡುವ ಧೈರ್ಯ ಮಾಡಿದ್ದ.

"ಅದು ಹೆಂಗ ನಾವು ಕನ್ನಡ ಪಿಕ್ಚರ್ ನೋಡಿದ್ರ ಕನ್ನಡ ಉದ್ಧಾರ ಆಗತದ?" ಅಂತ ಮತ್ತೊಂದು ಸರಳ ಪ್ರಶ್ನೆ ಎಸೆದು ಅವನ ಕಂಗಾಲುಗೊಳಿಸಿದಳು. ಅಷ್ಟು ಬೇಗ ಸೋಲೊಪ್ಪುವವನೇ ನಮ್ಮ ಕನ್ನಡ ಕಂಠೀರವ?

"ನೋಡು ಆಕ್ಚುವಲಿ ನಾನೊಬ್ಬಂವ ನೋಡಿದ್ರ ಉದ್ಧಾರಾಗ್ತದ ಅಂತಲ್ಲ. ಎಲ್ಲಾರೂ ಹಿಂಗ ಥಿಂಕ್ ಮಾಡಿದ್ರ ಹೆಂಗ? ನನ್ನ ಹಾಂಗ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಸಿನೆಮಾ ಎನ್ ಕರೇಜ್ ಮಾಡಿದ್ರ ಇನ್ನೂ ಹೆಚ್ಚೆಚ್ಚು ಕನ್ನಡಾದಾಗ ಸಿನೆಮಾ ಮಾಡ್ತಾರ" ಅಂತ ವಿವರಣೆ ನೀಡಿದ.

"ಅದ ರೀ… ಕನ್ನಡದಾಗ ಹೆಚ್ಚೆಚ್ಚು ಸಿನಿಮಾ ಬಂದರ ಹೆಂಗ ಕನ್ನಡ ಉದ್ಧಾರ ಅದಂಗಾತು ಹೆಳ್ರೆಲ್ಲಾ??" ಅಂತ ಹೇಳಿ ಗಪ್ಪಣ್ಣನಿಗೆ ನೀರಿಳಿಯುವಂತೆ ಮಾಡಿದಳು. ಅವಳು ಹೇಳಿದ್ದು ಸರಿ ಇರಬಹುದಾ ಅನಿಸಿತವನಿಗೆ. ಅವಳು  ಮುಂದುವರಿಸಿ… "ಮೊದಲ ನಿಮ್ಮ ಭಾಷಾ ಶುಧ್ಧ ಮಾಡ್ಕೊಳ್ರೀ. ನೀವು ಮಾತಾಡೊ ಕನ್ನಡಾದಾಗ ಬರೇ ಇಂಗ್ಲಿಷ್ ಶಬ್ದಾನ ತುಂಬಿರ್ತಾವು" ಅಂಥೆಳಿ ಅವನು ಪೂರ್ತಿ ಕರಗುವಂತೆ ಮಾಡಿದಳಾದರೂ, ನಮ್ಮ ಕನ್ನಡ ಸುಪುತ್ರ ಸೋಲುಂಡರೂ ಮೀಸೆ ಮಣ್ಣಾಗಿಲ್ಲ ಅನ್ನುವಂತೆ,

"ನೀನೇನು ನನಗ ಹೇಳಿಕೊಡೋದು? ಐ ಕ್ಯಾನ್ ಸ್ಪೀಕ್ ಪ್ಯುರ್ ಕನ್ನಡಾ" ಅಂತ ಶುದ್ಧ ಅಂಗ್ರೇಜಿಯಲ್ಲಿ ಹೇಳಿದ.

ಅಂತೂ ಅವತ್ತು ’ಚೆನ್ನೈ ಎಕ್ಸ್ ಪ್ರೆಸ್ಸೇ’ ನೋಡಿಕೊಂಡು ಬರಲಾಯ್ತು. ಆ ಸಿನಿಮಾ ಹಿಂದಿಯಲ್ಲಿದ್ದರೂ ಅದರ ನಾಯಕಿ ಪಾತ್ರ ವಹಿಸಿದವಳು ಕನ್ನಡವೇ ಮಾತನಾಡದ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಅನ್ನುವ ವಿಷಯವೇ ಅವನಿಗೆ ಸ್ವಲ್ಪ ಮಟ್ಟಿಗಾದರೂ ಸಮಾಧಾನ ತಂದಿತ್ತು. 

ಬರೀ ಸಿನಿಮಾ ನೋಡಿ ಮನೆಗೆ ಬಂದರೆ ಶಿವ ಮೆಚ್ಚುವನೆ? ಒಂದು ಪಿಡ್ಜಾ ತಿಂದಿಲ್ಲವೆಂದರೆ ಹೆಂಗೆ? ಜಾನು ಗೆ ಪಿಡ್ಜಾ ಕ್ಕೆ ಅಂತಾನೇ ಒಂದು ಬೇರೆಯದೇ ಜಠರ ಇದೆ! ಅಂತೂ ಹತ್ತಿರದ ಪಿಡ್ಜಾ ಅಂಗಡಿಗೆ ನುಗ್ಗಿದವರೇ ಖಾಲಿ ಕುರ್ಚಿ ಸಿಕ್ಕು ಆನಂದತುಲಿತರಾಗಿ ಆಸೀನರಾದರು. ಸೂಟು ಬೂಟಿನ ತರಹದ್ದೊಂದು ವೇಷ ಧರಿಸಿದಾತ "ಸರ್ ಆರ್ಡರ್ ಪ್ಲೀಝ್" ಅಂದಾಗ ಗಪ್ಪಣ್ಣ ಇಂಗ್ಲೀಷಿನಲ್ಲೇ ತಮಗೇನು ಬೇಕೆಂದು ಹೇಳಿ ತನ್ನ ಇಂಗ್ಲಿಶ್ ಭಾಷಾ ಜ್ನ್ಯಾನವನ್ನು ಮೆರೆದು ಧನ್ಯ ಭಾವವನ್ನು ಮುಖದಲ್ಲಿ ಪ್ರದರ್ಶಿಸಿದ! ಜಾನು ಸಣ್ಣಗೆ ನಕ್ಕಳು. ಯಾಕೆಂದು ಕೇಳಲಾಗಿ "ನೀವು ಅವನ ಜೋಡಿ ಕನ್ನಡದಾಗ ಮಾತಾಡಿದ್ದರ ಕನ್ನಡ ಸ್ವಲ್ಪ ಮಟ್ಟಿಗಾದರೂ ಉದ್ಧಾರ ಆಗ್ತಿತ್ತೋ ಏನೋ" ಅಂತ ಹೇಳಿ ಮತ್ತವನ ಕೆಣಕಿದಳು. ಅದು ತಕ್ಕ ಮಟ್ಟಿಗೆ ನಿಜವೇ ಆಗಿತ್ತು. ಆ ಪಿಡ್ಜಾ ಪೂರೈಸುವ ಮಾಣಿ ತನ್ನ ಸಹೋದ್ಯೋಗಿಗಳ ಜೊತೆ ಕನ್ನಡದಲ್ಲೇ ಮಾತಾಡುತ್ತಿದ್ದ. ಆದರೆ ನಮ್ಮ ಕನ್ನಡದ ಮಾಣಿ ಅವನೊಟ್ಟಿಗೆ ಇಂಗ್ಲೀಸಿನಲ್ಲಿ ಮಾತಾಡಿದ್ದ! 

ರಾತ್ರಿಯೆಲ್ಲಾ ಜಾನುಗೆ ಕನಸಿನಲ್ಲಿ ಶಾಹ್ ರುಖ್ ಖಾನೇ! ಆದರೆ ಗಪ್ಪಣ್ಣಗೆ ಮಾತ್ರ ಜಾನು ಆಡಿದ್ದ ಮಾತುಗಳ ಗುಂಗು ನಿದ್ದೆಯನ್ನೂ ಹತ್ತಿರ ಸುಳಿಯಲೂ ಬಿಡಲಿಲ್ಲ.

ಮರುದಿನ ಆ ಗುಂಗಿನಿಂದ ಪೂರ್ತಿಯಾಗಿ ಹೊರಬಂದಿರದಿದ್ದರೂ, ಅವನು ತನ್ನ ಕಾರ್ಯಸ್ಥಾನವಾದ ಸಾಫ್ಟ್ ವೇರ್ ಉದ್ದಿಮೆಯ ಕಚೇರಿಗೆ ಹೋಗಲೇ ಬೇಕಿತ್ತು. ಅದೂ ಅಲ್ಲದೇ ಬೆಳಿಗ್ಗೆಯೆ ಅವನದೊಂದು ಮೀಟಿಂಗೂ ಅಮೇರಿಕಾದ ಅವನ ಸಹೋದ್ಯೋಗಿ ಬಾಲಾ ಜೊತೆ. ಅವನು ಬಾಲಕೃಶ್ಣನ್ ಅನ್ನುವ ತಮಿಳು ಭಾಷಿಕ. ಗಪ್ಪಣ್ಣ ಫೋನಿನಲ್ಲಿ ಕರೆ ಮಾಡಿ, "ಹೈ ದಿಸ್ ಇಸ್ ಗಣಪತಿ" ಅನ್ನುತ್ತಲೇ, ಆ ಕಡೆ ಬಾಲಾ ಅವರು "ಸೊಲ್ಲುಂಗ ಗಣಪತಿ" ಅಂತ ತಮಿಳಿನಲ್ಲಿ ಕೇಳಿದರೆ ನಮ್ಮ ಕನ್ನಡ ಕಂಠೀರವನಿಗೆ ಏನಾಗಬೇಡ? ಇವನು ಸಿಟ್ಟಿನಿಂದ ತನಗೆ ತಮಿಳು ಗೊತ್ತಿಲ್ಲವೆಂದರೂ ಆ ಪಾರ್‍ಟಿ "ವೋಕೆ ವೋಕೆ ಸೊಲ್ಲುಂಗ" ಅಂದು ಇವನಿಗೆ ಮತ್ತಷ್ಟು ತಲೆ ಕೆಡಿಸಿದ. ಅಂತೂ ಇಂಗ್ಲಿಶಿನಲ್ಲೇ ಮಾತಾಡಿ ಮೀಟಿಂಗಿಗೆ ಮಂಗಳ ಹಾಡಿದರೆನ್ನಿ…

ಅವತ್ಯಾಕೋ ಅವನ ಮನಸ್ಸೇ ಸರಿ ಇರಲಿಲ್ಲ. ಈ ಘಟನೆಯ ಜೊತೆಗೆ ಜಾನುನ ಮಾತುಗಳೂ ಪದೇ ಪದೇ ನೆನಪಾಗಿ ಅವನನ್ನು ಸಣ್ಣಗೆ ಕೊಲ್ಲುತ್ತಿದ್ದವು. ಮದ್ಯಾಹ್ನ ಊಟಕ್ಕೆಂದು ಹಾಗೇ ನಡೆದುಕೊಂಡು ಹೋಗುತ್ತಿರುವಾಗ "ಹೇ ಗಣಪತಿ ನಿಲ್ರೀ ಸ್ವಲ್ಪ" ಅಂತೊಂದು ಹೆಣ್ಣಿನ ಧನಿ ಕೇಳಿ ಆಶ್ಚರ್ಯದಿಂದ ನಿಂತು ಹಿಂತಿರುಗಿ ನೋಡಿದವನಿಗೆ ಮಾತೇ ಮರೆತು ಹೋಗಿತ್ತು! ಯಾಕೆಂದರೆ ಹಾಗೆ ಕನ್ನಡದಲ್ಲಿ ಅವನ ಕರೆದು ನಿಲ್ಲಿಸಿದವಳು ಮತ್ಯಾರೂ ಅಲ್ಲ, ಹರಿತಾ ಅನ್ನುವ ಆಂದ್ರದ ಸಹೋದ್ಯೋಗಿ. ಅವಳು ಕನ್ನಡದಲ್ಲಿ ಮಾತಾಡಿದ್ದು ಕೇಳಿ ಬಿಸಿ ಬಿಸಿ ಮರಭೂಮಿಯಲ್ಲಿ ನೀರಿನ ಝರಿ ಕಂಡಂತಾಗಿತ್ತವನಿಗೆ. 

"ನಿಮಗೆ ಕನ್ನಡಾ ಮಾತಾಡೊಕೆ ಬರುತ್ತಾ?" ಅಂತ ಆಶ್ಚರ್ಯದಿಂದ ಕೇಳಿದವನಿಗೆ "ಸ್ವಲ್ಪ ಸ್ವಲ್ಪ ಬರುತ್ತೆ" ಅಂಥೇಳಿ ಅವನಲ್ಲಿ ಖುಷಿಯನ್ನು ಉಂಟು ಮಾಡಿದ್ದಳವಳು. ಅವಳು ತಾನು ಕನ್ನಡ ಕಲಿತು ಕನ್ನಡದಲ್ಲೇ ಮಾತಾಡುವ ಉತ್ಸಾಹ ತೋರಿದರೂ ಕೂಡ  ಬೆಂಗಳೂರಲ್ಲಿ ತನಗ್ಯಾರೂ ಕನ್ನಡದಲ್ಲಿ ಉತ್ತರಿಸುವುದಿಲ್ಲವೆಂದೂ, ಅಟೋ ಡ್ರೈವರ್ ಗಳಿಂದ ಹಿಡಿದು ತನ್ನ ಕನ್ನಡದ ಸಹೋದ್ಯೋಗಿಗಳೂ ಅದೇ ತರಹದ ನಿರುತ್ಸಾಹ ತೋರುವರೆಂದು ಹೇಳಿದಳು. ನನಗೆ ಕನ್ನಡ ಕಲಿಸುವವರೇ ಇಲ್ಲಿ ಸಿಗುತ್ತಿಲ್ಲ. ಕಲಿಸುವುದು ಹಾಗಿರಲಿ ತಾನು ತಪ್ಪು ತಪ್ಪು ಕನ್ನಡ ಮಾತಾಡಿದರೆ ನಕ್ಕು ಹೀಯಾಳಿಸುತಾರೆಯೆ ಹೊರತು ತನ್ನ ತಪ್ಪನ್ನು ತಿದ್ದುವುದಿಲ್ಲವೆಂದು ಕಂಪ್ಲೇಂಟುಗಳ ಸುರಿಮಳೆ ಸುರಿಸಿ ಅವನ ಮುಖದಲ್ಲಿ ಬೆವರು ಹರಿಸಿದಳು! ಇವನು ಸಾವರಿಸಿಕೊಂಡು ನಿನಗೆ ನಾನು ಕನ್ನಡ ಕಲಿಸುವೆನೆಂದು ವಾಗ್ದಾನ ಮಾಡಿದ. 

ಅಂತೂ ಅಂದಿನಿಂದ ಹರಿತಾಳಿಗೆ ಕನ್ನಡ ಕಲಿಸುವ ಗುರುವಾದ. ಅವಳ ತಪ್ಪುಗಳ ತಿದ್ದಿ, ಅವಳ ಜೊತೆಗೆ ಕನ್ನಡದಲ್ಲೇ ಮಾತಾಡತೊಡಗಿದ. ಸ್ವಲ್ಪ ದಿನಗಳಲ್ಲೇ ಅವಳು ವ್ಯವಹಾರಿಕಾವಾಗಿ ಕನ್ನಡದಲ್ಲಿ ಮಾತನಾಡುವ ಮಟ್ಟಿಗೆ ಸುಧಾರಿಸಿದಳು. ಅದೂ ಅಲ್ಲದೆ ಗಪ್ಪಣ್ಣ ತಾನು ಮಾತಾಡುವಾಗ ಆದಷ್ಟು ಇಂಗ್ಲಿಷ್ ಪದಗಳ ಬಳಕೆ ಕಡಿಮೆ ಮಾಡಿ ಜಾನುನಿಂದ ಭೇಷ್ ಅನ್ನಿಸಿಕೊಂಡ. ಹೀಗೆ ಅನ್ಯ ಭಾಷಿಕಳೊಬ್ಬಳಿಗೆ ತಾನು ಕನ್ನಡ ಕಲಿಸಿ, ಕನ್ನಡ ಭಾಷಿಕರ ಸಂಖೆಯನ್ನು ಹೀಗಾದರೂ ಹೆಚ್ಚು ಮಾಡಿದ ನಿರಾಳ ಭಾವ ಅವನಲ್ಲಿ ಮೂಡಿತ್ತು. ಈಗ ಯಾವುದೇ ಅಂಗಡಿಗೆ ಹೋದರೂ ಯಾವುದೇ ಹಿಂಜರಿತವಿಲ್ಲದೇ ಕನ್ನಡದಲ್ಲೇ ವ್ಯವಹರಿಸತೊಡಗಿದ್ದಾನಲ್ಲದೇ, ಉಳಿದ ಕನ್ನಡಿಗರಿಗೂ ಒಂದು ಮಾದರಿಯಾಗುತ್ತಿದ್ದಾನೆ ನಮ್ಮ ಗಪ್ಪಣ್ಣ! ಹೀಗಾದರೂ ಕನ್ನಡ ಉಧ್ಧಾರವಾದೀತೆ?

*****   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

34 Comments
Oldest
Newest Most Voted
Inline Feedbacks
View all comments
umesh desai
10 years ago

ಗೊತ್ತಿಲ್ಲ ಆದ್ರ ನಿಮ್ಮ ಲೇಖನ ಸೊಗಸಾಗೇದ..

ಒಟ್ನಲ್ಲಿ ಬೆಂಗಳೂರಿಗರ ಕನ್ನಡ ಪ್ರೇಮ(?) ಎತ್ತಿ ತೋರಿಸಿದ್ದಕ್ಕ ಧನ್ಯೋಸ್ಮಿ..!!

ಗುರುಪ್ರಸಾದ ಕುರ್ತಕೋಟಿ
Reply to  umesh desai

ದೇಸಾಯ್ರ, ಲೇಖನ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು. ಬೆಂಗಳೂರಿನ ಕನ್ನಡ ಪ್ರೇಮಿಗಳು ಯಾವಾಗ ಕನ್ನಡವನ್ನು ನಿಜವಾಗಿಯೂ ಪ್ರೇಮಿಸಲು ಶುರು ಮಾಡುವರೋ ಗೊತ್ತಿಲ್ಲ. ಕನ್ನಡ ಇನ್ನೂ ಜೀವಂತವಾಗಿದ್ದರೆ ಅದು ನಮ್ಮ ಹಳ್ಳಿಗಳಲ್ಲಿ ಮಾತ್ರ ಅನ್ನೋದು ನಾನು ಕಂಡುಕೊಂಡ ಸತ್ಯ.

ಮೂರ್ತಿ.
ಮೂರ್ತಿ.
10 years ago

ಹ..ಹ್ಹಾ ..ಹ್ಹಾ..ಸಖತ್ತಾಗಿದೆ! ಮೊದಲರ್ಧವಂತೂ ಭಲೇ ನಗಿಸುತ್ತದೆ. ಎರಡ್ನೇ ಭಾಗ ವಿಷಾದದ ಸತ್ಯವಾದುದರಿಂದ ನಗಲು ಕಷ್ಟವೆನಿಸುತ್ತದೆ. ಹೆಂಡ್ತಿ ಸಿನೆಮಾ ನೋಡೋಣವೆಂದರೆ; ಈಕೆ ತವರನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಿರಬೇಕು ಅಂತಾ ಗಪ್ಪಣ್ಣ ಅಂದುಕೊಳ್ಳುವುದು ಸೂಪರ್. ಅದು ಲೇಖನವನ್ನು ಎರಡನೇ ಸಾಲಿಗೇ 'ಎಲಿವೇಟ್' ಮಾಡಿಬಿಡುತ್ತದೆ. ಗಪ್ಪಣ್ಣನ ಕನ್ನಡ ಪ್ರೆಮ, ಜಾನೂವಿನೊಡನೆಯ ಸಂಭಾಷಣೆ, ಶಾರೂಖನ ಮೇಲಿನ ಈರ್ಷ್ಯೆ, ಇತ್ಯಾದಿಗಳನ್ನೊಳಗೊಂಡ ವ್ಯಂಗದೊಳಗಣ ಕನ್ನಡ ಕಾಳಜಿ ಮನ ತಟ್ಟುತ್ತದೆ. ನಿಮ್ಮ ಮಾಮೂಲಿ ಶೈಲಿಯ 'ಕ್ಲಾಸ್' ಲಘು ಬರಹ. ಧಾರವಾಡ ಭಾಷೆಯಲ್ಲಿದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತೇನೊ ಅನಸ್ತು !

 

 

ಗುರುಪ್ರಸಾದ ಕುರ್ತಕೋಟಿ

ಮೂರ್ತಿ, ಲೇಖನ ಮೆಚ್ಚಿ ವಿವರವಾಗಿ ಅನಿಸಿಕೆಗಳನ್ನು ಬರೆದದ್ದಕ್ಕೆ ಧನ್ಯವಾದಗಳು. ಅಂದ ಹಾಗೆ ಪೂರ್ತಿ ಲೇಖನವನ್ನು ಧಾರವಾಡ ಭಷೆಯಲ್ಲಿ ಬರೆದರೆ ಬೆಂಗಳೂರು ಕನ್ನಡಿಗರಿಗೆ ಓದಲು ಕಷ್ಟವಾದೀತೆಂದು ಬರೀ ಸಂಭಾಷಣೆಗಳನ್ನು ಮಾತ್ರ ಧಾರವಾಡ ಭಷೆಯಲ್ಲಿ ಬರೆದಿರುವೆ.

ಗುರುಪ್ರಸಾದ ಕುರ್ತಕೋಟಿ

ಗಡಿಬಿಡಿ ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ! ಮೇಲಿನ ನನ್ನ ಅನಿಸಿಕೆಯಲ್ಲಿ "ಭಷೆ" ಯನ್ನು "ಭಾಷೆ" ಅಂತ ತಿದ್ದಿಕೊಂಡು ಓದಿ!

Suman
Suman
10 years ago

🙂 🙂 🙂 🙂 …. Khare ada nivu helodu…. Chanda barediri…

ಗುರುಪ್ರಸಾದ ಕುರ್ತಕೋಟಿ
Reply to  Suman

ಸುಮನ್, ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

SAMJI
SAMJI
10 years ago

Tumba channage idae. Lekhana oduttaa idrae nilsoke manasa barolla 🙂

Innumalae kadae paksha 3 janakkae Naanu kannada lakitene.

ಗುರುಪ್ರಸಾದ ಕುರ್ತಕೋಟಿ
Reply to  SAMJI

ಸಾಮ್ಜಿ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! ಅಂದ ಹಾಗೆ ನನ್ನ ಲೇಖನ ನಿಮಗೆ ಕನ್ನಡ ಕಲಿಸಲು ಸ್ಪೂರ್ತಿ ಕೊಟ್ಟಿದ್ದಕ್ಕೆ ಖುಷಿಯಾಯ್ತು!

ಶ್ರೀಧರ್. ಜಿ
ಶ್ರೀಧರ್. ಜಿ
10 years ago

ನಿಮ್ಮ ಲಲಿತ ಪ್ರಭಂಧ ಶ್ರೀ ನಾರಾಯಣ ಗೌಡರು -ರಕ್ಷಣಾ ವೇದಿಕೆ ಸದಸ್ಯರು ಅಗತ್ಯವಾಗಿ ಓದಲೇಬೇಕಾದ ಪ್ರಭಂಧ . ಸಮಾಜದಲ್ಲಿ ಚೆನ್ನಾಗಿ ಕನ್ನಡವನ್ನು ಉಚ್ಚಾರ ಮಾಡದ ಗಂಡಂದಿರನ್ನು ಅವರುಗಳ ಹೆಂಡತಿ ಯರೇ ಸರೀದಾರಿಗೆ ತಂದು ಕನ್ನಡ ಭಾಷೆಯನ್ನೂ ಉದ್ಧರಿಸಬೇಕು ಎನ್ನುವ ಸಂದೇಶ ಮನಮುಟ್ಟುತ್ತದೆ . 

ಹಾಗೆಯೇ ಕನ್ನಡ ಚಲನ ಚಿತ್ರಗಳು ನೋಡಬೇಕು-ಕನ್ನಡ ಚಿತ್ರ ನಟ-ನಟಿಯರು ಕನ್ನಡ ಮಾತಾಡುವರಾಗಬೇಕು ಎನ್ನುವ ಇಂಗಿತ ಸಂದೇಶ ಈ ಪ್ರಭಂದ ಮೂಡಿದೆ .  

ಗುರುಪ್ರಸಾದ ಕುರ್ತಕೋಟಿ

ಶ್ರೀಧರ್ ಗುರುಗಳೆ, ಪ್ರಬಂಧವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು! ಕನ್ನಡಕ್ಕೆ ಬೇರೆಯದೇ ತರಹದ ರಕ್ಷಣೆ ಬೇಕಾಗಿದೆ. ಪ್ರತಿಯೊಬ್ಬ ಕನ್ನಡಿಗ ಅದಕ್ಕೆ ಕೈಗೂಡಿಸಬೇಕು. ನೀವು ಹೇಳಿದ ಹಾಗೆ, ಹೆಂಡತಿಯರೆ ತಿದ್ದುವ ಕೆಲಸ ಮಾಡಬೇಕು. ಬರೀ ಗಂಡಂದಿರನ್ನಷ್ಟೇ ಅಲ್ಲ, ತಾಯಿಯಾಗಿ ತಮ್ಮ ಮಕ್ಕಳಿಗೂ  ಕನ್ನಡ ಮಾತಾಡಲು ಪ್ರೋತ್ಸಾಹಿಸಬೇಕು. ಆಗಲೇ ಮುಂದಿನ ಪೀಳಿಗೆಯವರಲ್ಲೂ ಕನ್ನಡ ಜೀವಂತವಾಗಿರುವುದು… ಅಲ್ಲವೆ?

Rajashekhar (From Xerox)
Rajashekhar (From Xerox)
10 years ago

 mast lekhana SIR…Neeveu heludu 100% khare ada 🙂 🙂 🙂 🙂 🙂

ಗುರುಪ್ರಸಾದ ಕುರ್ತಕೋಟಿ

ರಾಜಶೇಖರ್, ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!

narayana.M.S.
narayana.M.S.
10 years ago

ಅಂತಹ ಪ್ರಯತ್ನದಿಂದ ಖಂಡಿತ ಕನ್ನಡೋದ್ಧಾರ ಆಗತ್ತೆ ಗುರು ಅವರೆ :), ನಿಮ್ಮ ಲೇಖನ ಓದಿ, "ಕನ್ನಡಿಗರೆಲ್ಲಾ ನನಗೆ ಈಗಾಗಲೇ ಬರೋ ಬೇರೆ ಯವ್ದಾರೂ ಭಾಷೆಯಲ್ಲಿ ನನ್ನನ್ನು ಮಾತಾಡಿಸೋದ್ರಿಂದ ಕನ್ನಡ ಕಲಿಯೋ ಅವಕಾಶನೇ ಇಲ್ಲವಾಗಿದೆ" ಎಂದು  ಕನ್ನಡಿಗರ ಕುರಿತಾಗಿ ಖ್ಯಾತ ಹಿನ್ನಲೆ ಗಾಯಕಿ ಚಿತ್ರ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದ ಮಾತು ನೆನಪಾಯಿತು.

ಗುರುಪ್ರಸಾದ ಕುರ್ತಕೋಟಿ
Reply to  narayana.M.S.

ನಾರಾಯಣ, ಧನ್ಯವಾದಗಳು! ಹೌದು ತುಂಬಾ ಜನ ಕನ್ನಡಿಗರು ಯಾವಾಗಲೂ  ಬೇರೆಯವರ ಭಾಷೆಯಲ್ಲೇ ಮಾತಾಡಿ ಆಯಾ ಭಾಷಿಕರನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಾರೆ. ಅದರಿಂದ ಅನ್ಯಭಾಷಿಕರು ಕನ್ನಡ ಕಲಿಯುವ ಪ್ರಯತ್ನವನ್ನೇ ಬಿಟ್ಟು ಬಿಡುತ್ತಾರೆ.

praveen anjanappa
praveen anjanappa
10 years ago

Naavu saha badhalaadha gapannana hage swalpa kannadabivrudhige shramisonna 🙂

Dhanyavadagalu Guru

ಗುರುಪ್ರಸಾದ ಕುರ್ತಕೋಟಿ

ಪ್ರವೀಣ, ಧನ್ಯವಾದಗಳು! ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದ್ದೇ ಇದೆ! 🙂

Ramesh
Ramesh
10 years ago

Thumba Chennagide!!! Gappanna tanna swantha anubhava bareda hagide!!!   :):)

ಗುರುಪ್ರಸಾದ ಕುರ್ತಕೋಟಿ
Reply to  Ramesh

ರಮೇಶ, ಧನ್ಯವಾದಗಳು! ಇದು ಎಲ್ಲರ ಕತೆ. ನಮ್ಮೊಳಗೊಬ್ಬ ಗಪ್ಪಣ್ಣ ಅನ್ನಬಹುದೆನೊ? 🙂

Renuka
Renuka
10 years ago

Bhava, tumba chennagide Lekhana…… 🙂 Keannada ulisi belesuva paraytana….

ಗುರುಪ್ರಸಾದ ಕುರ್ತಕೋಟಿ
Reply to  Renuka

ರೇಣುಕಾ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು!

ನಿರ್ಮಲಾ
ನಿರ್ಮಲಾ
10 years ago

ೇಖನ ಚೆನ್ನಾಗಿದೆ. ಕನ್ನಡ ನಾಡಲ್ಲಿ ಕನ್ನಡ ಮಾತಾಡಲು ಹಿಂಜರಿಯೋ ಕನ್ನಡಿಗರಿಗೆ ಒಂದೊಳ್ಳೆ ಪಾಠ. ಬದಲಾಗಬೇಕಾದ್ದು ಕನ್ನಡಿಗರೇ ಹೊರತು ಅನ್ನ್ಯ ಭಾಷಿಕರಲ್ಲ ಅನ್ನೋ ವಿಷಯಾನಾ ಚೆನ್ನಾಗೆ ಹೇಳಿದ್ದೀರ!

ಗುರುಪ್ರಸಾದ ಕುರ್ತಕೋಟಿ

ನಿರ್ಮಲಾ, ಹೌದು… ಕನ್ನಡಿಗರು ಬದಲಾಗಲೇಬೇಕು. ಲೇಖನ ಓದಿ ಮೆಚ್ಚಿದ್ದಕ್ಕೆ ಖುಷಿಯಾಯ್ತು!

ಅನಂತ
ಅನಂತ
10 years ago

ಗುರು ಅಣ್ಣಾ ಪ್ರಭಂಧವನ್ನು ಸುಲಲಿತವಾಗಿ, ಚೆನ್ನಾಗಿ ಮಂಡಿಸಿದ್ದಿರಿ. ಬೇಂಗಳೂರಲ್ಲಿ ಬಹಳ ಜನ ಕನ್ನಡ ಗೊತ್ತಿದ್ದರು ಹರಕು ಮುರುಕು ಭಾಷೇಗಳನ್ನು ಮಾತಾಡುತ್ತರೆ, ಗೊತ್ತಿರುವ ಸರಿಯಾದ ಕನ್ನಡವನ್ನು ಮಾತಾಡುವವರು ಕಡಿಮೆನೆ. ಸಂದರ್ಭಕ್ಕೆ ತಕ್ಕ ಲೇಖನವಾಗಿದೆ.

 

ಆಮೇಲೆ ಒಂದು ವಿಷಯ ಬಹಳಷ್ಟು ಜನ ಇಂಗ್ಲಿಷಿನಲ್ಲಿ ಕನ್ನಡ ಬರೆದ್ದಿದ್ದಾರೆ ಸ್ವಲ್ಪ ಈ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟು ನೋಡಿ, ಈ ತಾಣದಲ್ಲಿ ಗಣಕಯಂತ್ರದಲ್ಲಿ(computer) ಕನ್ನಡ ಹೇಗೆ ಬರೆಯುವುದರ ಬಗ್ಗೆ ಕೊಟ್ಟಿದ್ದಾರೆ.

http://vikasavada.blogspot.in/2011/05/kannada-typing-in-computer.html

http://vikasavada.blogspot.in/2011/05/kannada-typing-in-computer.html

ಗುರುಪ್ರಸಾದ ಕುರ್ತಕೋಟಿ
Reply to  ಅನಂತ

ಅನಂತ, ಓದಿ ಇಷ್ಟೊಂದು ಚೆನ್ನಾಗಿ ಪ್ರತಿಕ್ರಿಯಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು! ನೀವು ಕೊಟ್ಟ ಮಾಹಿತಿ ನಿಜಕ್ಕೂ ಉಪಯುಕ್ತವಾಗಿದೆ!

ದಿಗಂಬರ ಮುರಲೀಧರ ಪೂಜಾರ
ದಿಗಂಬರ ಮುರಲೀಧರ ಪೂಜಾರ
10 years ago

ಗುರುಪ್ರಸಾದ ಸಾಹೇಬ್ರ

ಅಂತೂ ಬೇಸ್ಟ್ ಆರ್ಟಿಕಲ್ ಬರದಿರಿ.ನಾನ ಮಾತ್ರ ನಿಮಗ ಪೂತಿ೵ ಕನ್ನಡದಾಗ ಥ್ಯಾಂಕ್ಸ್ ಹೇಳತಿನಿ. ಕನ್ನಡಿಗರ ಪರಿಸ್ಥಿತಿಯನ್ನು ವಸ್ತುನಿಷ್ಟವಾಗಿ ಹೇಳಿರುವ ನಿನ್ನ ಶೈಲಿಗೆ ನಿಜವಾಗಲೂ ಧನ್ಯವಾದ. ಕನ್ನಡವನ್ನು ಕನ್ನಡಿಗರೆ ಮರೆಯುವಂತಹಾ ಪರಿಸ್ಥಿತಿ ಬಂದಿರುವದು ನಿಜಕ್ಕೂ ವಿಪಯಾ೵ಸದ ಸಂಗತಿ ಎನ್ನಬಹುದು. ಒಳ್ಳೆಯ ಲೇಖಕನಾಗುತ್ತಿರುವದಕ್ಕೆ ನಮ್ಮ ಕುತ೵ಕೋಟಿ ಸರ್ ಮಗನಿಗೆ ಹೆಮ್ಮೆಯ  ಅಭಿನಂದನೆಗಳು.

 

ಗುರುಪ್ರಸಾದ ಕುರ್ತಕೋಟಿ

ದಿಗಂಬರ, ಲೇಖನ ನಿಮಗೆ ಮೆಚ್ಚಿಗೆಯಾಗಿದ್ದು ಕೇಳಿ ಖುಷಿಯಾಯ್ತು. ನನ್ನೊಳಗಿನ ಲೇಖಕ ಪ್ರಬುದ್ಧತೆಯೆಡೆಗೆ ಸಾಗುತ್ತಿರುವುದನ್ನು ಗುರುತಿದ್ದು ಇನ್ನೂ ಖುಷಿ ಕೊಟ್ಟಿತು :).

Geetha b u
Geetha b u
10 years ago

Lekhana chennagidhe . Kannada maathaadi, adharalli vyavaharisuvudhu, kannada cinema yennuva bootaatikeya prema….yeradannu chennagi, haasyamishritavaagi helidheeri….thanks

ಗುರುಪ್ರಸಾದ ಕುರ್ತಕೋಟಿ
Reply to  Geetha b u

ಗೀತಾ, ಲೇಖನ ವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!

Venkatesh
Venkatesh
10 years ago

Wonderful

ಗುರುಪ್ರಸಾದ ಕುರ್ತಕೋಟಿ
Reply to  Venkatesh

ವೆಂಕಟೇಶ, ಧನ್ಯವಾದಗಳು!

ಬಾಲಸುಬ್ರಹ್ಮಣ್ಯ .ಕೆ ಎಸ್.

ಕನ್ನಡ ಭಾಷೆಯ ಬಗ್ಗೆ  ಒಂದು ಚಾಟಿ ಏಟು ಈ ಲೇಖನ, ಹಾಸ್ಯ ಮಿಶ್ರಿತವಾಗಿ ನಮ್ಮಲ್ಲಿನ ಒಂದು ದುರಭ್ಯಾಸವನ್ನು ಅಣಕ ಮಾಡಿ ತೋರಿಸಿದ್ದೀರಿ, ಹೌದು ನಮಗೆ ನಮ್ಮ  ಭಾಷೆ ನೆಟ್ಟಗೆ ಮಾತಾಡೋಕೆ ಬರದಿದ್ರೂ ಬೇರೆ ಭಾಷಿಕರೊಂದಿಗೆ  ಅವರ ಭಾಷೆಯಲ್ಲೇ ಮಾತಾಡಿ ಅವರ ಎದುರು ಹೀರೋ ಎನ್ನಿಸಿಕೊಳ್ಳುವ ಖಯಾಲಿ . ಒಳ್ಳೆಯ ಲೇಖನಕ್ಕೆ ವಂದನೆಗಳು ಗುರುಪ್ರಸಾದ್ ಜಿ

ಗುರುಪ್ರಸಾದ ಕುರ್ತಕೋಟಿ

ಬರಹವನ್ನು  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಬಾಲಣ್ಣ! ಬೇರೆಯವರ ಭಾಷೆಯಲ್ಲಿ ಮಾತಾಡಿ ಅವರನ್ನು ಮೆಚ್ಚಿಸುವ ನಮ್ಮವರ ಗುಣ ನಿಜಕ್ಕೂ ದುರಭ್ಯಾಸವೇ ಸರಿ!

gaviswamy
10 years ago

lekhana chennagide.

34
0
Would love your thoughts, please comment.x
()
x