ಕನ್ನಡಿ ಗೊತ್ತಿಲ್ಲದವರಿಲ್ಲ. ಅದೊಂದು ಹೆಚ್ಚು ಬೆಲೆಬಾಳದ, ಕೆಳಗೆ ಬಿದ್ದರೆ ಸಾಕು ಒಡೆದೇಹೋಗುವ ವಸ್ತು. ಗಾಜಿನ ಒಂದು ಮುಖವನ್ನು ಮೆರುಗುಗೊಳಿಸಿದರೆ ಕನ್ನಡಿ ಸಿದ್ದ! ವಿವಿಧ ಆಕಾರ, ಎತ್ತರಗಳಲ್ಲಿ ಮಾರುಕಟ್ಟಿಯಲ್ಲಿ ದೊರೆಯುವ ನುಣುಪಾದ ಮೇಲ್ಮೈಯುಳ್ಳ ವಸ್ತು! ಹಾಗೆ ನೋಡಿದರೆ ಅದು ವಸ್ತುವೇ ಅಲ್ಲ! ವಿರೂಪ ತೊಡೆದು ಸುರೂಪಿಯಾಗಿಸುವ ಮೂಕ ಸಲಹೆಗಾರ, ಆತ್ಮೀಯ ಸ್ನೇಹಿತ, ಮನೆಯ ಸದಸ್ಯ, ಅಜಾತ ಶತೃ!
ಕನ್ನಡಿಯನ್ನು ಪ್ರೀತಿಸದವರಿಲ್ಲ. ಕನ್ನಡಿಯನ್ನು ಯಾರು ಎಷ್ಟು ಪ್ರೀತಿಸುತ್ತಾರೋ ಅವರು ಅವರನ್ನು ಅಷ್ಟೇ ಪ್ರೀತಿಸುತ್ತಾರೆ. ಅದಕ್ಕೇ ಪ್ರತಿ ಮನೆಯಲ್ಲಿ ಚಿಕ್ಕ ಪುಟ್ಟ, ಆಳೆತ್ತರದ ಕೆಲವು ಕನ್ನಡಿಗಳಿರುವುದು. ತಂದೆ, ತಾಯಿ, ಗಂಡ, ಹೆಂಡತಿ, ದೇವರ, ಪ್ರೀತಿ ಪಾತ್ರರ ದರ್ಶನ ಮಾಡದೆ ಹೊರ ಹೋಗುವವರು ಇದ್ದರೆ ಇರಬಹುದು. ಆದರೆ ಕನ್ನಡಿ ದರ್ಶನ ಮಾಡದೆ ಹೊರ ಹೋಗುವವರು ಇರಲಿಕ್ಕಿಲ್ಲ! ಅಷ್ಟು ಕನ್ನಡಿಯ ಭಕ್ತರು ನಾವು! ಸ್ತ್ರೀಯರಿಗಂತೂ ಕನ್ನಡಿ ಪ್ರೀತಿ ಅಪರಿಮಿತ! ಕನ್ನಡಿ ಸಿಕ್ಕರೆ ಸ್ವರ್ಗವೆ ಸಿಕ್ಕಂತಾಗುತ್ತದೆ! ಸೌಂದರ್ಯವರ್ದಕಗಳ ಅಂಗಡಿ ತೆರೆದು ಅಪ್ಸರೆಯರಾಗುವತನಕ ಕನ್ನಡಿ ಪ್ರೀತಿ ಕಡಿಮೆಯಾಗದು.
ಸಾಮಾನ್ಯವಾಗಿ ಎಲ್ಲರಲ್ಲೂ ಸ್ವರಥಿ ಇದ್ದೇ ಇರುತ್ತದೆ! ಕೆಲವರಲ್ಲಿ ಹೆಚ್ಚೂಕಮ್ಮಿ ಆಗಬಹುದು. ನಿತ್ಯ ಹತ್ತಾರು ಸಲ ಕನ್ನಡಿ ಮುಂದೆ ನಿಲ್ಲುತ್ತೇವೆ. ಅದು ನಮ್ಮ ಸುಂದರತೆಯ ಹಾಳು ಮಾಡಲು ಹವಣಿಸುವ ಕುರೂಪ ಕಾರಕಗಳ ತೋರುತ್ತದೆ. ಆ ಕುರೂಪಕಾರಕಗಳ ತೆಗೆದು ಹಾಕುವಂತೆ ಸೂಚಿಸುತ್ತದೆ! ಎಷ್ಟು ತೆಗೆದಿರಿ ಇನ್ನೂ ಎಷ್ಟಿವೆ, ಹೇಗೆ ತೆಗೆಯಬೇಕು ಅಂತ ಸೂಚಿಸುತ್ತನೇ ಇರುತ್ತದೆ! ಅವು ಇಲ್ಲವಾಗುವವರೆಗೆ ಮತ್ತೆ ಮತ್ತೆ ಕನ್ನಡಿ ನೋಡಿ ಸರಿಪಡಿಸುವಲ್ಲಿ ಮಗ್ನರಾಗುತ್ತೇವೆ! ಬೇಡವಾದುದ ನಿವಾರಿಸುತ್ತಾ ಬೇಕಾದುದ ಸೇರಿಸುತ್ತಾ ಸುಂದರಗೊಳಿಸುತ್ತೇವೆ. ಮಧ್ಯೆ ಮಧ್ಯೆ ಈ ಬಣ್ಣದ ಡ್ರೆಸ್ ಒಪ್ಪದು, ಆ ಬಣ್ಣದ ಉಡುಪು ಒಪ್ಪುತ್ತದೆ. ಮೀಸೆ ನೀಟಾಗಿಲ್ಲ, ನೀಟಾಗಿಸು, ಎಡ ಭಾಗದ ಮೀಸೆಯ ಕೆಳ ಕೂದಲಿಗೆ ಬಣ್ಣ ಸರಿಯಾಗಿ ಹಚ್ಚಿಲ್ಲ. ಬಣ್ಣ ಹಚ್ಚು, ಇಲ್ಲವಾದರೆ ಮುದುಕನ ಥರ ಕಾಣಿಸುತ್ತೀಯ, ಕಣ್ಣಲ್ಲಿ ಪಿಸುರು ಹಾಗೇ ಇದೆ, ಸರಿಯಾಗಿ ತೊಳೆದುಕೋ, ಸೇವಿಂಗು ಸರಿಯಾಗಿ ಮಾಡಿಕೊಂಡಿಲ್ಲ, ಗದ್ದದ ಕೆಳಗೆ ಕೂದಲು ಹಾಗೇ ಇವೆ, ಕತ್ತರಿಸಿಕೋ, ಎಡ ಬುಜ ಮೇಲಕ್ಕೆ ಎದ್ದಿದೆ? ಜಿಪ್ ಹಾಕಿಕೊಂಡಿಲ್ಲ, ಹಾಕಿಕೋ! ಬಾಗಿ ನಿಂತುಕೊಳ್ಳುತ್ತೀಯ ಸರಿಯಾಗಿ ಎದೆ ಉಬ್ಬಿಸಿ ನಿಲ್ಲು, ಇಲ್ಲವೆಂದರೆ ಸ್ವಲ್ಪ ದಿನಕ್ಕೆ ಗೂನ ಆಗುತ್ತೀಯ! ಮದುವೆ ಮನೆಗೆ ಹೊರಟಂತಿದೆ? ಹೀಗಾ ಹೊರಡುವುದು? ಸ್ನೇಹಿತರು, ಬಂದುಗಳು ಆಗಮಿಸಿರುತ್ತಾರೆ. ಆ ಸಫಾರಿ ಹಾಕಿಕೋ ರಾಜಕುಮಾರ ಕಂಡಂತೆ ಕಾಣ್ತಿಯ! ಇಂಥದ್ದನ್ನೆಲ್ಲಾ ಹೆಣ್ಮಕ್ಕಳನ್ನು ನೋಡಿ ಕಲಿಬೇಕು. ನಿನ್ನ ಹೆಂಡತಿಯನ್ನು ನೋಡು. ದಸರದ ಬೊಂಬೆ ಥರ ರೆಡಿಯಾಗಿದ್ದಾಳೆ. ಹಾಗೆ ಕಲಿ! ಹೀಗೆ ಆ ಕನ್ನಡಿ ಸಲಹೆ ನೀಡುತ್ತಾ ಅಡಿಯಿಂದ ಮುಡಿವರೆಗೆ ಸುಂದರಗೊಳಿಸುತ್ತದೆ!
ಯವ್ವಿ! ಯವ್ವಿ! ಯವ್ವಿ! ಬಂದದ್ದು ಮದುವೆಯಿಂದ, ಈಗ ಹೋಗಬೇಕಿರುವುದು ಸ್ಮಶಾನಕ್ಕೆ! ಸಂತಾಪ ಸೂಚಿಸಲು! ಅದೆ ರೇಷ್ಮೆ ಸೀರೆ, ಲಿಪ್ಟಿಕ್, ಮೇಕಪ್, ಅಲಂಕಾರದಿಂದ ಹಾಗೆ ಹೊರಟಿದಿಯ? ಮೊದಲು ಸೀರೆ ಬಿಚ್ಚು! ಆ ಬೆಲೆ ಬಾಳುವ ಆಭರಣಗಳನ್ನು ಅದರ ಜಾಗಕ್ಕೆ ಸರಿಯಾಗಿ ಇಡು. ಎಲ್ಲೋ ಅವಸರದಲ್ಲಿ ಇಟ್ಟು ಮರೆತು ಮನೆನೆಲ್ಲಾ ಹುಡುಕುವಂತಾಗುವುದನ್ನು ತಪ್ಪಿಸಿಕೋ! ಎಲ್ಲಿಗೆ ಹೇಗೆ ಹೊರಡಬೇಕಂಥ ಗೊತ್ತಾಗಲ್ಲ? ಸ್ಮಶಾನಕ್ಕೆ ತಕ್ಕಂತೆ ಹೊರಡು! ಎಂದು ಮುಂತಾಗಿ ಈ ಥರ ಹೊರಟವರಿಗೆ ಸಲಹೆ ನೀಡುತ್ತದೆ. ಹೀಗೆ ನಮ್ಮ ದೇಹ ಸುಂದರಗೋಳಿಸುವ ಜತೆಗೆ ನಮ್ಮ ಅನುಚಿತ ನಡೆಯನ್ನೂ ತಿದ್ದಿ ತೀಡಿ ಉತ್ತಮಗೊಳಿಸುತ್ತದೆ!
ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಮಲಿನವಾಗಿರುವಂತೆ ಕಂಡಾಗ ಕನ್ನಡಿಯೇ ಧೂಳಿನಿಂದ ಆವರಿಸಿರಬೇಕೆಂದು ಅದನ್ನು ಶುಚಿಗೊಳಿಸಿದಾಗ ಅದು ಇನ್ನೂ ನಿರ್ಮಲಗೊಂಡು " ಮಲಿನವಾಗಿರುವುದು ನಾನಲ್ಲ ನೀವು " ಎಂದು ಇನ್ನೂ ಸ್ಪಷ್ಟವಾಗಿ ಹೇಳುತ್ತದೆ. ನಿರ್ಮಲವಾಗಲು, ಸುಂದರವಾಗಲು ಸಲಹೆ ಸೂಚನೆ ನೀಡುತ್ತಾ ಸುರೂಪಿಯಾಗಲು ಸಹಕರಿಸುತ್ತದೆ! ನಮ್ಮನ್ನು ಸುರೂಪಿಯಾಗಿಸಿದ ಇಂಥಾ ಕನ್ನಡಿಗೆ ಹೇಳಬೇಕಲ್ಲವೆ ಥ್ಯಾಂಕ್ಸುಗಳ? ನಾವು ಅದನ್ನು ಶುಚಿಗೊಳಿಸಿದರೆ ಅದು ಸುಂದರವಾಗಿ ನಮ್ಮನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿ, ಸುಂದರಗೊಳಿಸಿ ಕೃತಜ್ಞತೆಯ ಭಾವ ಮೆರೆಯುತ್ತದೆ!
ನಿಂದಕರಿರಬೇಕು ಹಂದಿಯಂದದಿ – ಎಂದು ಪುರಂದರದಾಸರು ಹೇಳುತ್ತಾರೆ. ಹಂದಿ ಅಲ್ಲಿ ಇಲ್ಲಿ ಎಸೆದ ತ್ಯಾಜ್ಯ ಮತ್ತು ಚರಂಡಿಯ ಹೊಲಸನ್ನು ತಿಂದು ಹೊಲಸ ಕಡಿಮೆಗೊಳಿಸುತ್ತದೆ. ಆದ್ದರಿಂದ ನಗರದ ಸ್ವಚ್ಚತೆಯ ಕಾರ್ಯದಲ್ಲಿ ಅದರ ಪಾಲಿರುವುದನ್ನು ಅಲ್ಲಗಳೆಯುವಂತಿಲ್ಲ! ನಮ್ಮ ಗಮನಕ್ಕೆ ಬಾರದ ನಮ್ಮ ದೌರ್ಬಲ್ಯಗಳು, ದುರ್ಗುಣಗಳು ನಿಂದಕರಿಂದ ನಮ್ಮ ಗಮನಕ್ಕೆ ಬರುವಂತೆ ಆಗುತ್ತವೆ. ಆಗ ನಮಗೆ ಅವುಗಳ ತಿದ್ದಿ ಸರಿಪಡಿಸಿಕೊಂಡು ಮಾನವನಾಗಲು ಅನುಕೂಲವಾಗುತ್ತದೆ! ಹಾಗೆ ದೌರ್ಬಲ್ಯಗಳ, ದುರ್ಗುಣಗಳ ನಿವಾರಿಸಿಕೊಂಡು ಉತ್ತಮ ಮಾನವರಾಗಲು ನೆರವಾದ ನಿಂದಕರಿಗೆ ಧನ್ಯವಾದಗಳ ಹೇಳಬೇಕಲ್ಲವೆ? ಅಂತಹವರು ನಿಂದಕರು, ವೈರಿಗಳು ಹೇಗಾದಾರು? ಉತ್ತಮರಾಗಲು, ಚಂದಕಾಣಲು ಮತ್ತೆ ಮತ್ತೆ ಕನ್ನಡಿ ಮುಂದೆ ನಿಂತಂತೆ, ನಮ್ಮ ವ್ಯಕ್ತಿತ್ವ ಉತ್ತಮಗೊಳಿಸಿಕೊಳ್ಳಲು ನಿಂದಕರ ಜತೆ ಆಗಾಗ ಸೇರಿ ಓರೆ ಕೋರೆಗಳ ನಿಂದಕರಕನ್ನಡಿಯಲ್ಲಿ ಕಂಡು ತಿದ್ದಿ ಚಂದ ಮಾಡಿಕೊಳ್ಳಬೇಕಲ್ಲವೆ?
ಕನ್ನಡಿಯ ಮುಂದೆ ನಿಂತು ಕುರೂಪಕಾರಕಗಳ ನೋಡುತ್ತ ತೆಗೆದು ಹಾಕದೆ ಕುರೂಪಿಯಾಗಿಯೇ ಇದ್ದುಬಿಡಲು ಯಾರಾದರೂ ಇಷ್ಟಪಡುತ್ತಾರೆಯೇ? … ಇಲ್ಲ! ನಿಂದನೆಗಳು ಗಮನಕ್ಕೆ ಬಂದಾಗ ತಪ್ಪ ಒಪ್ಪಿಕೊಂಡು ತಿದ್ದಿಕೊಳ್ಳದೆ ಇರುತ್ತಾರೆಯೆ? … ಇಲ್ಲ! ತಪ್ಪನ್ನು ಒಪ್ಪಿ ತಿದ್ದಿ ನಡೆದು ದೊಡ್ಡವರಾಗುವುದು ದೊಡ್ಡತನವಲ್ಲವೆ? ಇಂದು ಉನ್ನತ ಸ್ಥಾನದಲ್ಲಿರುವ ಅನೇಕರು ತಪ್ಪನ್ನು ಒಪ್ಪಿಕೊಳ್ಳುವುದು ಅಪರಾಧ ಎಂದು ಭಾವಿಸಿ ನಿಂದನೆಗೆ ಪ್ರತಿನಿಂದನೆ ಮಾಡುತ್ತಾ ತಮ್ಮ ವ್ಯಕ್ತಿತ್ವ ಕುರೂಪ ಮಾಡಿಕೊಳ್ಳುತ್ತ, ಸಣ್ಣವರಾಗುತ್ತಿರುವುದು ದುರದೃಷ್ಟ! ಇದರಿಂದ ಸಮಾಜ ಅದಃಪತನ ಹೊಂದುತ್ತದೆ! ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಅಲ್ಲವೆ? ಆದ್ದರಿಂದ ಸ್ವವಿಮರ್ಶೆ ಮಾಡಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು. " ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ ಪರರ ನಿಂದಿಸಲು ಚಾಚಿಕೊಂಡಿರುವಂಥ ನಾಲಗೆ … " ಎಂದು ಪುರಂದರದಾಸರು ಸ್ವವಿಮರ್ಶೆ ಮಾಡಿಕೊಂಡು ಉತ್ತಮರಾಗಬೇಕೆಂದು ಹೇಳಿಲ್ಲವೆ? ಹಾಗೇ " ಮಾನವ ಜನ್ಮ ದೊಡ್ಡದು ಇದ ಹಾಳು ಮಾಡದಿರಿ ಹುಚ್ಚಪ್ಪಗಳಿರ " ಎಂದು ಸಹ ಹೇಳಿದ್ದಾರೆ. ಇರುವೆ ಎಂಭತ್ನಾಲ್ಕು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ನ ದೊಡ್ಡದೆಂದಿದ್ದಾರೆ ಅನಭವಿಗಳು. ಮಾನವರು, ಮುಖ್ಯವಾಗಿ ಉನ್ನತ ಸ್ಥಾನದಲ್ಲಿರುವವರು ದುರಾಸೆ, ಸ್ವಾರ್ಥ ಕಡಿಮೆ ಮಾಡಿಕೊಂಡು ಉತ್ತಮರಾದಾಗ ಮಾನವ ಜನ್ಮ ದೊಡ್ಡದಾದೀತು!
* ಕೆ ಟಿ ಸೋಮಶೇಖರ ಹೊಳಲ್ಕೆರೆ.