ಕಳೆದ ಒಂದೆರಡು ತಿಂಗಳಿನಿಂದ ಇದು ತುಂಬಾ ಕಷ್ಟವಾಗಿಬಿಟ್ಟಿದ್ದರೂ ಅಭ್ಯಾಸವಾಗಿ ಹೋಗಿದೆ.
ನನ್ನ ಸಮಸ್ಯೆಯೇನೆಂದರೆ ನಾನು ನೋಡುತ್ತಿರುವ ದೃಶ್ಯಗಳೆಲ್ಲಾ ತಿರುಗುಮುರುಗಾಗಿ ಕಾಣಿಸುತ್ತಿವೆ. ಮಿರರ್ ಇಮೇಜ್ ಅಂತೀವಲ್ಲಾ, ಆ ಥರಾನೇ. ಪುಸ್ತಕದಲ್ಲಿರುವ ಅಕ್ಷರಗಳು, ಬೀದಿಯ ಸೈನ್ ಬೋರ್ಡುಗಳು, ಕಟ್ಟಡಗಳಿಗೆ ಜೋತುಬಿದ್ದಿರುವ ಫಲಕಗಳು ಹೀಗೆ ಎಲ್ಲವೂ, ಎಲ್ಲೆಲ್ಲೂ ಕನ್ನಡಿಯಿಂದ ನೋಡಿದಂತೆ ಕಾಣುತ್ತಿವೆ. ಮಗುವೊಂದು ಮೊಟ್ಟಮೊದಲ ಬಾರಿಗೆ ನಡೆದಾಡಲು ಆರಂಭಿಸಿದಾಗ ಜಗತ್ತನ್ನು ಹೇಗೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತದೆಯೋ ಹಾಗೇ ನನಗೂ ಅನುಭವವಾಗುತ್ತಿದೆ. ಎಲ್ಲವೂ ನಿಗೂಢ, ಎಲ್ಲವೂ ವಿಚಿತ್ರ. ಮೊದಲೊಮ್ಮೆ ಭಯಭೀತನಾಗಿದ್ದರೂ ಈಗ ಸಾಮಾನ್ಯವಾಗಿ ಹೋಗಿದೆ. ತಿಂದೇ ಇಲ್ಲ ಅನ್ನುವಷ್ಟು ಸ್ವಲ್ಪ ಊಟ, ನಿದ್ರೆ ಮತ್ತು ಹೊತ್ತು ಕಳೆಯಲು ಓದು ಹೀಗೆ ನಾನು ಅಕ್ಕನ ಕೋಣೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಸುಖವಾಗಿದ್ದೇನೆ. ಆದರೆ ಅಕ್ಕ ನನ್ನ ಈ ಸಮಸ್ಯೆಯಿಂದ ತೀರಾ ಖಿನ್ನಳಾಗಿದ್ದಾಳೆ. ಅವಳು ಅಷ್ಟು ಯಾಕೆ ಚಿಂತೆ ಮಾಡುತ್ತಾಳೆ ಎಂದು ನನಗೆ ಗೊತ್ತಿಲ್ಲ. ಆದರೆ ಅವಳು ತನ್ನನ್ನು ತುಂಬಾನೇ ಜೋಪಾನ ಮಾಡುತ್ತಾಳೆ. ಥೇಟು ಅಮ್ಮನಂತೆ.
ದೃಷ್ಟಿಯನ್ನು ಹೊರತುಪಡಿಸಿದರೆ ನನ್ನನ್ನು ತೀವ್ರವಾಗಿ ಈಚೆಗೆ ಚಿಂತೆಗೀಡುಮಾಡಿದ್ದು ನನ್ನ ನೆನಪಿನ ಶಕ್ತಿ. ಜೀವನವೆನ್ನುವುದು ದೈನಿಕ ಪತ್ರಿಕೆಯಂತಾಗಿದೆ ನನಗೆ. ನಿನ್ನೆ ಏನೇನು ತಿಂದೆ, ಎಲ್ಲಿ ಹೋಗಿದ್ದೆ, ಏನು ಓದಿದ್ದೆ ಹೀಗೆ ಚಿಕ್ಕ ಚಿಕ್ಕ ವಿಷಯಗಳನ್ನೂ ನೆನಪಿಗೆ ತಂದುಕೊಳ್ಳಲು ಹರಸಾಹಸ ಮಾಡಬೇಕಾಗುತ್ತಿದೆ. ಅಲ್ಪ ಸ್ವಲ್ಪ ನೆನಪಾದರೂ ಅವು ಚೆಲ್ಲಾಪಿಲ್ಲಿಯಾಗಿದ್ದ ನೂರಾರು ಚಿತ್ರಗಳಂತೆ; ಈ ತುಣುಕುಗಳನ್ನು ಮನಸ್ಸಿನಲ್ಲೇ ಜೋಡಿಸಬೇಕಾದ ಅನಿವಾರ್ಯತೆ ನನ್ನನ್ನು ಇನ್ನಷ್ಟು ಗೊಂದಲಕ್ಕೀಡುಮಾಡುತ್ತವೆ. ಬಹುಶಃ ಇದೇ ಕಾರಣಕ್ಕೋ ಏನೋ, ಅಕ್ಕ ನನ್ನನ್ನು ಅವಳ ಕೋಣೆಯಿಂದ ಹೊರಹೋಗಲು ಬಿಡುವುದಿಲ್ಲ. ನನಗೂ ಹೊರಗೆ ಹೋಗಿ ಸುತ್ತಾಡುವುದರಲ್ಲಿ ಅಂಥಾ ಆಸಕ್ತಿಯೇನೂ ಇಲ್ಲ. ಬಂಗಲೆಯ ಬಾಲ್ಕನಿಯಿಂದ ಹೊರನೋಡಿದರೆ ಸುತ್ತಲಿನ ಭೂಮಿಗೆ ಕಂಬಳಿಯಂತೆ ಹೊದ್ದಿರುವ ಚೆಂದದ ಉದ್ಯಾನ ಬಿಟ್ಟು ಇನ್ನೇನೂ ಕಾಣುವುದಿಲ್ಲ. ಒಮ್ಮೆ ನಗರದಾಚೆಗೆ ಅಕ್ಕನೊಂದಿಗೆ ಹೋಗಿದ್ದೆ ಅನ್ನಿಸುತ್ತದೆ. ಕಟ್ಟಿರುವೆಗಳಂತೆ ಓಡಾಡುತ್ತಿರುವ ಜನಗಳು, ಕಿರುಚಾಡುತ್ತಾ ಸಾಗುತ್ತಿರುವ ವಾಹನಗಳ ಮೆರವಣಿಗೆ ಹೀಗೆ ತುಂಡು ತುಂಡು ಮಬ್ಬು ನೆನಪುಗಳು. ಆದರೂ ಕೆಲವೊಮ್ಮೆ ಅಕ್ಕನ ಕಣ್ಣು ತಪ್ಪಿಸಿ ಕೋಟೆಯಂಥಾ ಈ ಮನೆಯೊಳಗೆಲ್ಲಾ ಸುತ್ತಾಡುತ್ತೇನೆ. ಪುನಃ ಸದ್ದಿಲ್ಲದೆ ಕಣ್ಣು ಮುಚ್ಚಿ ಬಟ್ಟಲಿನ ಹಾಲು ಕುಡಿದ ಬೆಕ್ಕಿನಂತೆ ಅಕ್ಕನ ಬಳಿ ಬರುತ್ತೇನೆ. ಅವಳ ಹಾಸಿಗೆಯಲ್ಲಿ ಬಿದ್ದುಕೊಂಡಿರುವ ಪುಸ್ತಕಗಳಿಂದ ಒಂದನ್ನು ಆರಿಸಿ ಸುಮ್ಮನೆ ಓದತೊಡಗುತ್ತೇನೆ. ತಕ್ಷಣ ಅಕ್ಕ ಕನ್ನಡಿ ಹಿಡಿದು ನನ್ನೆದುರಿಗೆ ಕೂರುತ್ತಾಳೆ. ನನ್ನ ಓದು ಸರಾಗವಾಗಲೆಂದು.
ಅಪ್ಪ ಅನ್ನೋ ಆಕೃತಿಯನ್ನು ಆಗೊಮ್ಮೆ ಈಗೊಮ್ಮೆ ಡ್ರಾಯಿಂಗ್ ಹಾಲ್ ನಲ್ಲಿ ನೋಡುತ್ತಿರುತ್ತೇನೆ. ಹೋಗಿ ತಬ್ಬಿಕೊಳ್ಳಬೇಕಿನಿಸುತ್ತದೆ. ಆದರೆ ಅವನೋ ಸ್ಕಾಚ್ ತುಂಬಿದ ಗ್ಲಾಸ್ ಹಿಡಿದುಕೊಂಡು ನಿರ್ಲಿಪ್ತನಾಗಿರುತ್ತಾನೆ. ಕೆಲವೊಮ್ಮೆ ರಾತ್ರಿ ಹತ್ತರ ಆಸುಪಾಸಿಗೆ ಅಕ್ಕನ ಕೋಣೆಗೆ ಬಂದು ಅವಳ ಹಣೆಗೆ ಮುತ್ತಿಕ್ಕಿ ಗುಡ್ ನೈಟ್ ಸ್ವೀಟಿ ಎನ್ನುತ್ತಾ ಮಾಯವಾಗುತ್ತಾನೆ. ನನ್ನತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಕೆಲವೊಮ್ಮೆ ಅಕ್ಕನೇ ಕೋಣೆಯ ಅಲ್ಮೆರಾದ ಕಡೆ ಕೈ ತೋರಿಸಿ ಟೆಡ್ಡಿಗೂ ಗುಡ್ ನೈಟ್ ಅನ್ನಿ ಅನ್ನುತ್ತಾಳೆ. ಅವನು ನಾಟಕೀಯವಾಗಿ ನನ್ನೆಡೆಗೆ ಗುಡ್ ನೈಟ್ ಟೆಡ್ಡಿ ಅಂದು ಮೆಲ್ಲಗೆ ಕೋಣೆಯಿಂದ ಜಾರಿಕೊಳ್ಳುತ್ತಾನೆ. ಅಕ್ಕ ಬೆಡ್ ಲ್ಯಾಂಪ್ ಆರಿಸಿ ಗುಡ್ ನೈಟ್ ಬೇಬಿ ಅನ್ನುತ್ತಾಳೆ. ನಾನು ನಸುನಗುತ್ತೇನೆ.
ಹೌದು, ನನಗೆ ಗೊತ್ತಿರುವಂತೆ ನನ್ನ ಹೆಸರು ಟೆಡ್ಡಿ. ಅಕ್ಕ ಲೀಸಾ ನನ್ನ ಏಕಮಾತ್ರ ಮತ್ತು ಬೆಸ್ಟ್ ಫ್ರೆಂಡ್. ಇದೇ ನನ್ನ ಪುಟ್ಟ ಜಗತ್ತು.
*
ದೆಹಲಿಯ ಛತರ್ ಪುರ್ ನಗರದ ಬಡಾವಣೆಯಲ್ಲೊಂದು ಭವ್ಯ ಬಂಗಲೆ. "ಲವ್ ನೆಸ್ಟ್" ಎಂದು ಅದರ ಹೆಸರು. ಆದರೂ ಫೆರ್ನಾಂಡಿಸ್ ವಿಲ್ಲಾ ಅಂತಲೇ ನಗರದಲ್ಲಿ ಜನಪ್ರಿಯ. ಈಜು ಕೊಳ, ಸ್ಪಾ, ಬಾರ್, ಜಿಮ್, ಸ್ಪೋರ್ಟ್ಸ್ ರೂಂ ಹೀಗೆ ಏನೇನೋ ಇವೆ ಈ ಮ್ಯಾನ್ಷನ್ನಿನ ಕಂಪೌಂಡಿನೊಳಗೆ. ಆಗಾಗ ಉದ್ದುದ್ದದ ವಿಲಾಸಿ ಕಾರುಗಳು ಅಂಗಳದಲ್ಲಿ ಬಂದು ಹೋಗುತ್ತಿರುತ್ತವೆ. ಐವತ್ತರ ಆಸುಪಾಸಿನ ವಿಧುರ, ರಿಯಲ್ ಎಸ್ಟೇಟ್ ಉದ್ಯಮಿ ಎರಿಕ್ ಫೆರ್ನಾಂಡಿಸ್ ಈ ಮನೆಯ ಮಾಲೀಕ. ಮೂಲತಃ ಬೆಂಗಾಲಿಯಾದರೂ ಇಪ್ಪತ್ತೈದು ವರ್ಷಗಳ ಕಾಲ ಲಂಡನ್ನಿನಲ್ಲಿದ್ದ. ಕಳೆದ ಹತ್ತು ವರ್ಷಗಳಿಂದ ಎರಿಕ್ ದೆಹಲಿಯಲ್ಲಿ ನೆಲೆಯೂರಿದ್ದಾನೆ.
ಎರಿಕ್ ತನ್ನ ಬಂಗಲೆಯನ್ನು ಅರವತ್ತರ ದಶಕದ ಬ್ರಿಟಿಷ್ ಕೌಂಟಿ ಹೌಸ್ ಮಾದರಿಯಲ್ಲಿ ನಿರ್ಮಿಸಿದ್ದಾನೆ. ಪಾಶ್ಚಾತ್ಯ ಶೈಲಿಯ ಬಗ್ಗೆ ಎಂಥದ್ದೋ ಒಂದು ವಿಚಿತ್ರ ಆಕರ್ಷಣೆ ಅವನಿಗಿತ್ತು. ಆಂಗ್ಲಭಾಷೆ ಶುದ್ಧವಾಗಿದ್ದರೂ ವಿನಾಕಾರಣ ನುಸುಳುವ ನಕಲಿ ಆಕ್ಸೆಂಟು, ಸದಾ ಸೇದುತ್ತಿರುವ ಪೈಪು, ಗೆಲುವಿನ ಗರಿಯಂತೆ ಧರಿಸುತ್ತಿದ್ದ ಟಕ್ಸಿಡೋ ಹೀಗೆ ಎರಿಕ್ ನ ಜೀವನಕ್ಕೆ ತನ್ನದೇ ಆದ, ಆದರೆ ಎರವಲು ಪಡೆದ ಒಂದು ರಾಯಲ್ ಶೈಲಿಯಿತ್ತು. ಮನೆಯೊಳಗೂ ರೊಮ್ಯಾಂಟಿಕ್ ಪಿರೇಡ್ ನ ಯೂರೋಪಿಯನ್ ತೈಲಚಿತ್ರಗಳು, ಮೈಕಲೇಂಜಲೋ ಮಾದರಿಯ ಕೆಲವು ಶಿಲ್ಪಗಳು, ವಿಶಾಲವಾದ ಡೈನಿಂಗ್ ಟೇಬಲ್ಲು, ದೈತ್ಯ ಲೈಬ್ರರಿ ಇನ್ನೂ ಏನೇನೋ. ಇವೆಲ್ಲದಕ್ಕೂ ಕಳಸವಿಟ್ಟಂತೆ ಕಳೆದ ಐದಾರು ವರ್ಷಗಳಿಂದ ಎರಿಕ್, ಸೈಂಟಾಲಜಿ ಎಂಬ ಕಲ್ಟ್ ನ ಬದ್ಧ ಅನುಯಾಯಿ.
ಎಂದಿನಂತೆ ಇಂದೂ ಎರಿಕ್ ಡ್ರಾಯಿಂಗ್ ಹಾಲಿನಲ್ಲಿ ಕುಳಿತು ತಣ್ಣಗೆ ಸ್ಕಾಚ್ ಹೀರತೊಡಗಿದ್ದ. ಸೋಡಾದ ಕ್ವಾಲಿಟಿ ಚೆನ್ನಾಗಿದ್ದರೂ, ಇನ್ನೆರಡು ಐಸ್ ಕ್ಯೂಬ್ ಗಳನ್ನು ಗ್ಲಾಸಿಗೆ ಹಾಕಿಕೊಂಡರೂ ಯಾಕೋ ಇಂದು ಡ್ರಿಂಕ್ ಮಜಾ ಕೊಡುತ್ತಿರಲಿಲ್ಲ. ಅವನ ಹಣೆಯ ಮೇಲಿನ ಅಚ್ಚಾಗಿದ್ದ ವಯಸ್ಸಿನ ಗೆರೆಗಳು, ಮೂಡಿ ಮರೆಯಾಗುವ ಚಿಂತೆಯ ಗೆರೆಗಳ ಜೊತೆಗೆ ಸದ್ದಿಲ್ಲದೆ ಸೆಣಸಾಡುತ್ತಿದ್ದವು. ಎರಿಕ್ ತನ್ನ ತೆಳು ಫ್ರೇಮ್ ಲೆಸ್ ಕನ್ನಡಕವನ್ನು ಗಾಜಿನ ಮೇಲ್ಮೈಯುಳ್ಳ ಪಕ್ಕದ ಮಹಾಗನಿ ಟೀಪಾಯಿಯ ಮೇಲಿಟ್ಟು ಒಂದು ದೀರ್ಘ ಉಸಿರನ್ನೆಳೆದ. ಇವತ್ತು ಎರಿಕ್ ನ ಮಗಳು ಲೀಸಾ ಡಾ. ಪಿಂಟೋ ರ ಕ್ಲಿನಿಕಿನಲ್ಲಿ ಅಚಾನಕ್ಕಾಗಿ ಹೈಪರ್ ಆದ ಸುದ್ದಿ ಅವನನ್ನು ಕಂಗೆಡಿಸಿತ್ತು. ಡಾ. ಪಿಂಟೋರ ಅಸಿಸ್ಟೆಂಟ್ ತಮ್ಮ ಕಾರಿನಲ್ಲಿ ಲೀಸಾಳನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದರು. ಡಾ. ಪಿಂಟೋ ಒಬ್ಬ ಸಭ್ಯ ವೈದ್ಯ, ಫೆರ್ನಾಂಡಿಸ್ ಕುಟುಂಬದ ಹಿತೈಷಿ. ವೈದ್ಯರೂ ಕೂಡ ಫೋನಾಯಿಸಿ "ವಿ ನೀಡ್ ಟು ಟಾಕ್ ಅಬೌಟ್ ಯುವರ್ ಡಾಟರ್, ಮಿಸ್ಟರ್ ಫೆರ್ನಾಂಡಿಸ್" ಎಂದು ಹಿಂಟ್ ಕೊಟ್ಟಿದ್ದರು. ಕೃತಜ್ನತಾಪೂರ್ವಕವಾಗಿ ಒಂದು ಹೂಗುಚ್ಛ ಡಾ. ಪಿಂಟೋರ ಕ್ಲಿನಿಕನ್ನು ತಲುಪಿತು ಕೂಡ. ಆದರೆ ವೈದ್ಯರಿಗೆ ಭೇಟಿಯಾಗುವ ಸಮಯವನ್ನು ಇನ್ನೂ ಎರಿಕ್ ನೀಡಿರಲಿಲ್ಲ.
ಪರಿಸ್ಥಿತಿ ಕೈ ಮೀರುತ್ತಾ ಇರುವ ವಾಸನೆ ಈ ಮೊದಲೇ ಎರಿಕ್ ನ ತೀಕ್ಷ್ಣ ಮೂಗಿಗೆ ಅಡರಿದ್ದರೂ ಯಾಕೋ ಅವನು ಅಷ್ಟು ಗಂಭೀರವಾಗಿ ಕಾರ್ಯಪ್ರವೃತ್ತನಾಗಿರಲಿಲ್ಲ. ಆದರೆ ಈ ಬಾರಿ ಅಂಥ ಆಯ್ಕೆ ಅವನಿಗೆ ಕಾಣಲಿಲ್ಲ. ಕುಟುಂಬದ ರೆಪ್ಯುಟೇಷನ್ ಮಣ್ಣು ಪಾಲಾಗುವುದು ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ಯೆಸ್, ವಿ ಡು ನೀಡ್ ಟು ಟಾಕ್ ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾ ಕಂದು ಬಣ್ಣದ ಡೈರಿಯೊಂದನ್ನು ತೆಗೆದು ನಂಬರೊಂದನ್ನು ಡಯಲ್ ಮಾಡತೊಡಗಿದ.
ಲಂಡನ್ನಿನಲ್ಲಿ ವೃದ್ಧ ದನಿಯೊಂದು ಎರಿಕ್ ನ ಕರೆಗೆ ಉತ್ತರಿಸಿ ಹಲೋ ಎಂದಿತು.
ಮುಂದೆ ನಡೆದದ್ದು ಅಜಮಾಸು ನಲವತ್ತು ನಿಮಿಷಗಳ ಒಂದು ಸುದೀರ್ಘ ಸಂಭಾಷಣೆ. ಕೊನೆಗೂ ನಿರಾಳವಾದ ಭಾವದೊಂದಿಗೆ ಎರಿಕ್ ರಿಸೀವರನ್ನು ಫೋನಿನ ತೆಕ್ಕೆಯಲ್ಲಿರಿಸಿದ. ಸಮಯ ಹತ್ತು ಮೀರಿತ್ತು. "ಟೈಮ್ ಟು ಸ್ಲೀಪ್", ಎಂದು ಎರಿಕ್ ನ ಮನಸ್ಸು ಹೇಳಿದರೂ ಬುದ್ಧಿ ಇನ್ನೇನನ್ನೋ ಹೇಳುತ್ತಿತ್ತು. ಡ್ರಿಂಕ್ ನ ಕೊನೆಯ ಸಿಪ್ ಅನ್ನು ಮುಗಿಸಿ ಎರಿಕ್ ತನ್ನ ಲೈಬ್ರರಿಯತ್ತ ನಡೆಯತೊಡಗಿದ. ಶಾಂತವಾಗಿದ್ದ ಬಂಗಲೆಯಲ್ಲಿ ಗಡಿಯಾರದ ಮುಳ್ಳುಗಳು, ಎರಿಕ್ ನ ಹೆಜ್ಜೆ ಸಪ್ಪಳದೊಂದಿಗೆ ಹೆಜ್ಜೆಹಾಕಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದ್ದವು. ಮುಂದಿನ ಒಂದೆರಡು ಘಂಟೆಗಳಲ್ಲಿ ಸೈಂಟಾಲಜಿ ವಿಭಾಗದ ಬುಕ್ ರ್‍ಯಾಕ್ ಗಳಲ್ಲಿ ಶಾಂತವಾಗಿ ಮಲಗಿದ್ದ ಹಲವು ಪುಸ್ತಕಗಳು ಎರಿಕ್ ನ ಹುಡುಕುವ ವೇಗಕ್ಕೆ ಬೆಚ್ಚಿಬಿದ್ದು ಮೈ ಕೊಡವಿಕೊಂಡವು.
ದೆಹಲಿಯ ವೈದ್ಯ ಡಾ. ಪಿಂಟೋ, ಎರಿಕ್ ನ ಕರೆಗೆ ಕಾದು ಕಾದು ಕಂಗೆಟ್ಟು ಕೋಣೆಯ ದೀಪಗಳನ್ನಾರಿಸಿ ನಿದ್ರೆಗೆ ಜಾರಿದರು.
*
ಅಪ್ಪ ಅಷ್ಟು ಸಿಡಿಮಿಡಿಗೊಂಡವರಂತೆ ಅಕ್ಕನನ್ನು ಯಾಕೆ ನೋಡಿದರು ಎಂದು ತಿಳಿಯಲಿಲ್ಲ. ನಿನ್ನೆ ಅಕ್ಕನೊಂದಿಗೆ ಆ ಬಕ್ಕ ತಲೆಯ ವೈದ್ಯರ ಕ್ಲಿನಿಕಿಗೆ ಹೋದ ತುಣುಕುಗಳ ನೆನಪು. ಅಕ್ಕ ನನ್ನ ಬಗ್ಗೆ ಅತೀವ ಕಾಳಜಿಯಿಂದ ನನ್ನ ದೃಷ್ಟಿಯ ಬಗ್ಗೆ, ನನ್ನ ಯದ್ವಾ-ತದ್ವಾ ಹರಿದುಹೋಗುವ ನೆನಪಿನ ಬಗ್ಗೆ ವೈದ್ಯರಿಗೆ ಹೇಳುತ್ತಿದ್ದಳು. ವೈದ್ಯರ ಮುಂಭಾಗದ ಎಡಗಡೆಯ ಕುರ್ಚಿಯಲ್ಲಿ ಕುಳಿತಿದ್ದ ನಾನು ಸಭ್ಯ ಮಗುವಿನಂತೆ ಕೈ ಕಟ್ಟಿ ಕುಳಿತಿದ್ದೆ. ಅದ್ಯಾವ ಕ್ಷಣದಲ್ಲಿ ವೈದ್ಯರು ನನ್ನ ಕಡೆಗೆ ಲಕ್ಷ್ಯ ಕೊಡುತ್ತಿಲ್ಲ ಎಂದು ಗೊತ್ತಾಯಿತೋ ಅಕ್ಕ ಒಮ್ಮೆಲೇ ಖಿನ್ನಳಾದಳು. ಅಯ್ಯೋ, ಅಷ್ಟು ಟೆನ್ಷನ್ ತಗೋಬೇಡಕ್ಕಾ ಎಂದು ಅಂದೆ ಕೂಡ ನಾನು. ಆದರೆ ಯಾಕೋ ಅವಳು ಹೈಪರ್ ಆಗುತ್ತಾ ಹೋದಳು. ಕೊನೆಗೆ ವೈದ್ಯರು, "ಹೀಗೆಲ್ಲಾ ಒಬ್ಬಳೇ ಇಷ್ಟು ದೂರ ಬರಬಾರದಮ್ಮಾ. ಈಗ ನೀನು ಮನೆಗೆ ಹೋಗು. ಸಂಜೆ ನಾನೇ ಮನೆಗೆ ಬರುತ್ತೇನಂತೆ" ಎಂದು ಭೂಮಿಯಷ್ಟೇ ತಾಳ್ಮೆಯ ದನಿಯಲ್ಲಿ ಅವಳ ತಲೆ ನೇವರಿಸುತ್ತಾ ಹೇಳಿದರು.
ಆದರೆ ಅಕ್ಕ ಬಹುಷಃ ಕೇಳುವ ವ್ಯವಧಾನದಲ್ಲಿರಲಿಲ್ಲ. ಪುನಃ ಪುನಃ ವೈದ್ಯರಿಗೆ ಒಂದು ಕೈಯಿಂದ ಕನ್ನಡಿಯನ್ನು ತೋರಿಸುತ್ತಾ, ಇನ್ನೊಂದು ಕೈಯಿಂದ ನನ್ನನ್ನು ತೋರಿಸುತ್ತಾ ಏನೇನೋ ಅನ್ನುತ್ತಿದ್ದಳು ಅನ್ನಿಸುತ್ತೆ. ದನಿಗಳು ಏರುತ್ತಿದ್ದಂತೆಯೇ ಅವುಗಳು ಛಿದ್ರವಾಗುತ್ತವೆ ನನ್ನ ಕಿವಿಗಳಲ್ಲಿ. ಸುಮಾರು ಅರ್ಧಘಂಟೆಯ ತರುವಾಯ ಮಧ್ಯವಯಸ್ಸಿನ ಹೆಂಗಸೊಬ್ಬಳು ಅವಳನ್ನು ವೈದ್ಯರ ಕೊಠಡಿಯಿಂದ ಕರೆದೊಯ್ದಂತೆ ನೆನಪು. ತಕ್ಷಣ ನಾನೂ ಅವಳೆಡೆಗೆ ಓಡಿದೆ. "ನಿನ್ನ ಜೊತೆಗೇ ಬರುತ್ತಿದ್ದೇನೆ ಅಕ್ಕಾ, ಡೋಂಟ್ ವರಿ", ಎಂದು ಹೇಳುತ್ತಾ, ಏದುಸಿರು ಬಿಟ್ಟು ಅವಳೆಡೆಗೆ ಓಡುತ್ತಾ ಹೋದೆ. ಅಕ್ಕ ಮುಗುಳ್ನಕ್ಕಳು. ಕೊನೆಗೆ ನಾವಿಬ್ಬರೂ ಒಂದು ಕಾರಿನಲ್ಲಿ ಮನೆಗೆ ಬಂದೆವು ಎಂದು ಅಕ್ಕ ನನಗೆ ಇಂದು ಮುಂಜಾನೆ ಹೇಳಿದಳು.
ಆ ಬಕ್ಕ ತಲೆಯ ವೈದ್ಯ ಏನು ಹೇಳಿದನೋ ಏನೋ. ಅಪ್ಪ ಅಸಮಧಾನದಿಂದ ಶಥಪಥ ತಿರುಗಾಡುತ್ತಿರುವುದು ಅವನ ಬೂಟುಗಾಲಿನ ಸದ್ದಿನಷ್ಟೇ ಸ್ಪಷ್ಟವಾಗಿತ್ತು. ನಾನ್ಯಾಕೋ ತುಸು ಹೆಚ್ಚೇ ಹೆದರಿಕೊಂಡಿದ್ದೆ. ಅವ್ಯಕ್ತ ಭಯದಿಂದ ಬಿಳಿಚಿಕೊಂಡಿದ್ದ ನನ್ನ ಮುಖವನ್ನು ಅಕ್ಕನಿಗೆ ತೋರಿಸಲು ನನಗೆ ನಾಚಿಕೆಯಾಯಿತು. ಸುಮ್ಮನೆ ಒಂದು ಪುಸ್ತಕವನ್ನು ಹಿಡಿದುಕೊಂಡು ಮುಖವನ್ನು ಪುಟಗಳ ನಡುವೆ ಹುದುಗಿಸಿದೆ.
ಅಕ್ಕ ಎಂದಿನಂತೆ ಕನ್ನಡಿಯ ಜೊತೆ ಬಂದಳು. "ಏನೂ ಆಗೋದಿಲ್ಲ ಕಣೋ, ನನ್ನ ಮುದ್ದು ತಮ್ಮ" ಎಂಬ ಅಭಯದ ದನಿಯನ್ನು ಅವಳ ಕಣ್ಣುಗಳು ಹೊರಸೂಸುತ್ತಿದ್ದವು.
*
ಅಕ್ಕ ಮೌನವಾಗಿ ಒಂದೆರಡು ಘಂಟೆ ಯಾವುದೋ ಚಿತ್ರ ಬಿಡಿಸುವುದರಲ್ಲಿ ತಲ್ಲೀನಳಾಗಿದ್ದಳು. ಹೇರ್ ಬ್ಯಾಂಡಿನಿಂದ ಹೊರಬಂದು ಭುಜಕ್ಕೆ ಮುತ್ತಿಕ್ಕುತ್ತಿದ್ದ ನುಣುಪು ಕೂದಲುಗಳ ಪರಿವೆಯಿರಲಿಲ್ಲ ಅವಳಿಗೆ. ತುಂಬಾನೇ ಸುಸ್ತಾಗಿದ್ದಳು ಅನ್ನಿಸುತ್ತೆ. ನಡುನಡುವೆ ತೂಕಡಿಸುತ್ತಲೂ ಇದ್ದಳು. ನಾನು ಸುಮ್ಮನೆ ಅವಳನ್ನು ನೋಡುತ್ತಿದ್ದೆ. ಜಗತ್ತಿನಲ್ಲಿ ಎಲ್ಲಾ ಹೆಣ್ಣು ಜೀವಗಳು ಹೀಗೇ ಪ್ರೀತಿಯನ್ನೇ ಸಾಗರದಷ್ಟು ತಮ್ಮಲ್ಲಿ ತುಂಬಿಕೊಂಡು ಇರುತ್ತವೆಯೇನೋ ಎಂದು ನಾನು ಬೆರಗಾಗುತ್ತಿದ್ದೆ. ಒಂದೆರಡು ಬಾರಿ ಅವಳಲ್ಲಿ ಕೇಳಿದ್ದೆ ಕೂಡ. "ಸ್ಟುಪಿಡ್ ಟೀನೇಜರ್" ಎನ್ನುತ್ತಾ ನಾನೇನೋ ಜೋಕ್ ಹೇಳಿದೆ ಅನ್ನೋ ಶೈಲಿಯಲ್ಲಿ ನಕ್ಕು ಬಿಟ್ಟಿದ್ದಳು.
ನಾನು ನನ್ನ ಯೋಚನಾಲಹರಿಯಲ್ಲಿ ತೇಲಾಡುತ್ತಿದ್ದಂತೆಯೇ ಅಪ್ಪ ಒಳಗೆ ಬಂದ. "ಇಟ್ಸ್ ಟೂ ಲೇಟ್ ಬೇಬಿ" ಅನ್ನುತ್ತಾ, ಅವಳ ಪೈಂಟ್ ಬ್ರಷ್ ಮತ್ತು ಪಾಲೆಟ್ ಅನ್ನು ಕೋಣೆಯ ಬದಿಯಲ್ಲಿರಿಸಿದ. ಅವಳನ್ನು ಮಲಗಿಸಿ, ರೇಶಿಮೆಯಂಥಾ ಕಂಬಳಿಯನ್ನು ಹೊದಿಸಿ, ಅವಳ ಹಣೆಗೆ ಮೃದುವಾಗಿ ಮುತ್ತಿಕ್ಕಿ ಗುಡ್ ನೈಟ್ ಅಂದ. ಅಪ್ಪನ ಮುಖದಲ್ಲಿ ಈಗಲೂ ಅಸಮಧಾನ ಹೊಗೆಯಾಡುತ್ತಿತ್ತು. ಅಕ್ಕ ಮೆಲುದನಿಯಲ್ಲಿ ಗುಡ್ ನೈಟ್ ಪಾಪಾ ಅಂದಳು. ಗಡಿಬಿಡಿಯಲ್ಲಿದ್ದವನಂತೆ ಅಪ್ಪ ಸರಸರನೆ ಹೊರಟುಹೋದ. ನನ್ನೆಡೆಗೆ ನೋಡಲಿಲ್ಲ, ನನಗೆ ಗುಡ್ ನೈಟ್ ಕಿಸ್ ಕೊಡಲಿಲ್ಲ ಎಂದೆಲ್ಲಾ ನನಗೆ ಬೇಸರವಾಗಲಿಲ್ಲ. ನನ್ನ ದೃಷ್ಟಿ ವೈಪರೀತ್ಯದಂತೆಯೇ, ನೆನಪಿನ ಗೊಂದಲದಂತೆಯೇ ಬಹುಷಃ ಇದೂ ಕೂಡ ಅಭ್ಯಾಸವಾಗಿ ಹೋಗಿತ್ತು.
ನಾನು ಅಕ್ಕನಿಗೆ ಗುಡ್ ನೈಟ್ ಅನ್ನಲು ಬಾಯ್ತೆರೆದೆ. ಆದರೆ ಅವಳು ಅಷ್ಟರಲ್ಲೇ ಬಹುಬೇಗನೆ ಸುಖ ನಿದ್ರೆಗೆ ಜಾರಿದ್ದಳು. ಅವಳ ನಿದ್ದೆಯ ಶಾಂತ ಕೊಳಕ್ಕೆ ಕಲ್ಲೆಸೆಯಲು ಮನಸ್ಸಾಗಲಿಲ್ಲ. ನಾನೂ ಮಲಗಲು ಪ್ರಯತ್ನಿಸಿದೆ.
ಆದರೆ ಹೊರಗಡೆ ನಡೆಯುತ್ತಿರುವ ಅಪ್ಪನ ಮತ್ತು ಓರ್ವ ಆಂಗತುಕನ ಸಂಭಾಷಣೆಗಳು ನನ್ನ ಕಿವಿಯನ್ನು ಹರಿತಗೊಳಿಸಿದ್ದವು.
*
ಅಪ್ಪ ಮತ್ತು ಆತ ಒಂದು ದೊಡ್ಡನೆಯ ಸೋಫಾದಲ್ಲಿ ಕುಳಿತಿದ್ದರು. ಇಬ್ಬರ ತಲೆಯ ಮೇಲೆ, ಸೀಲಿಂಗಿಗೆ ಫಿಕ್ಸ್ ಮಾಡಲಾಗಿದ್ದ ಬೃಹತ್ತಾದ ವೃತ್ತಾಕಾರದ ಶೋ ಲ್ಯಾಂಪ್ ಒಂದು ಕಂಗೊಳಿಸುತ್ತಿತ್ತು. ಕೆಲವೇ ಕೆಲವು ಕಂದು ಕೂದಲನ್ನು ಹೊಂದಿದ್ದ ಆತ ತೆಳ್ಳಗಿದ್ದರೂ ಉತ್ತಮವಾದ ಮೈಕಟ್ಟನ್ನು ಹೊಂದಿದ್ದ. ಮಧ್ಯವಯಸ್ಕನಿದ್ದು ಮೇಕೆಯಂತೆ ಗಲ್ಲದ ಮುಂಭಾಗದಲ್ಲಿ ಕುರುಚಲು ಗಡ್ಡವನ್ನೂ ಬೆಳೆಸಿಕೊಂಡಿದ್ದ. ತನ್ನ ಜೊತೆಗೆ ಒಂದು ಬ್ಯಾಗನ್ನೂ, ಕಂಕುಳಲ್ಲಿ ನಾಲ್ಕೈದು ಭಾರದ ಪುಸ್ತಕಗಳನ್ನೂ ತಂದಿದ್ದ. ಇಷ್ಟುದ್ದ ಸ್ಪೆಲ್ಲಿಂಗ್ ಇದ್ದ ಅದರ ಟೈಟಲ್ಲನ್ನು ದೂರದಿಂದಲೇ ಓದಲು ಪ್ರಯತ್ನಿಸಿದೆ. "ಥಿಯರಿ ಆಫ್ ಸೈಂಟಾಲಜಿ" ಎಂದು ತಿಳಿದುಬಂತು. ಹಾಗೆಂದರೇನು ಎಂದು ಗೊತ್ತಾಗಲಿಲ್ಲ. ಅಕ್ಕನಲ್ಲಿ ಕೇಳೋಣ ಎಂದರೆ ಅವಳು ಮಲಗಿದ್ದಳು. ನನ್ನ ನಿದ್ದೆಯಂತೂ ಈಗಾಗಲೇ ಹಾರಿಹೋಗಿತ್ತು. ಅದೇನು ಮಾತನಾಡುತ್ತಿದ್ದಾರೆ ಎಂದು ಬಾಗಿಲಿನ ಸಂದಿಯಲ್ಲಿ, ಪರದೆಯ ಮರೆಯಲ್ಲಿ ನಿಂತು ಕೇಳತೊಡಗಿದೆ.
ಅಕ್ಕನಿಗೇನೋ ಆಗಿದೆ ಎಂದು ಅಪ್ಪ ಅವನಲ್ಲಿ ಹೇಳಿಕೊಳ್ಳುತ್ತಿದ್ದರು. ಆತ ತಲೆಯಾಡಿಸುತ್ತಾ ವೈದ್ಯರಿಗೆಲ್ಲಾ ತೋರಿಸಬೇಡಿ. ಸೈಂಟಾಲಜಿಯಲ್ಲಿ ಅದು ನಿಷಿದ್ಧ ಎನ್ನುತ್ತಿದ್ದ. ಅಪ್ಪನ ಚಿಂತೆಗೆ ಸಾಕ್ಷಿಯಾಗಿ ಅವರ ಕೈಗಳು ರೆಸ್ಟ್ ಲೆಸ್ ಆಗಿದ್ದವು. ಒಮ್ಮೆ ತೊಡೆಯ ಮೇಲೆ ಆಡುತ್ತಿದ್ದರೆ, ಇನ್ನೊಮ್ಮೆ ಅವು ಹೊಳಪಿನ ಮರದ ಟೀಪಾಯಿಯ ಮೇಲೆ ಸರಸರನೆ ಅಡ್ಡಾಡುತ್ತಿದ್ದವು. ಅವನು ಒಂದರ ಹಿಂದೊಂದರಂತೆ ತನ್ನ ಲೆದರ್ ಬ್ಯಾಗಿನಿಂದ ಮಣ ಭಾರದ ಪುಸ್ತಕಗಳನ್ನು ತೆರೆಯುತ್ತಾ ಅಪ್ಪನಿಗೆ ಏನೇನೋ ತೋರಿಸುತ್ತಿದ್ದ. ಈ ಬಾರಿ ಅಪ್ಪ ತಲೆಯಾಡಿಸುತ್ತಿದ್ದರು. ಆದರೂ ಅಪ್ಪ ಯಾಕೋ ಕನ್ವಿನ್ಸ್ ಆಗಲಿಲ್ಲ ಎಂದು ಅವರ ಹಾವಭಾವದಿಂದ ನನಗೆ ತಿಳಿಯುತ್ತಿತ್ತು. ನನಗಂತೂ ಅವರ ಮಾತುಗಳ ತಲೆ-ಬುಡ ಅರ್ಥವಾಗುತ್ತಿರಲಿಲ್ಲ. ನಾನಂತೂ ಪೆದ್ದನಂತೆ ಸುಮ್ಮನೆ ನೋಡುತ್ತಿದ್ದೆ.
ಅಷ್ಟರಲ್ಲಿ ಬಂಗಲೆಯ ಕಾಲಿಂಗ್ ಬೆಲ್ ರಿಂಗಣಿಸಿತು. ಈ ಹೊತ್ತಿಗೆ ಯಾರಿರಬಹುದು ಎಂದು ಗೊಣಗುತ್ತಲೇ ಬಾಗಿಲತ್ತ ನಡೆದ ಅಪ್ಪ. ಈ ಬಾರಿ ಬಕ್ಕ ತಲೆಯ ವ್ಯಕ್ತಿಯೊಬ್ಬ ಮೆಲ್ಲಗೆ ಅಪ್ಪನೊಂದಿಗೆ ಒಳಬಂದ. ಅಯ್ಯೋ ಈ ಮುಖವನ್ನು ಎಲ್ಲೋ ನೋಡಿದ್ದೆನಲ್ಲಾ ಎಂದು ತಲೆ ಪರಚಿಕೊಳ್ಳುವಷ್ಟರಲ್ಲೇ ಅಪ್ಪ ಈ ಬಕ್ಕ ತಲೆಯ ವ್ಯಕ್ತಿಯನ್ನು ಡಾ. ಪಿಂಟೋ ಎಂದು ಆ ಆಗಂತುಕನಿಗೆ ಪರಿಚಯಿಸಿದ. ಅವನೂ ಕೂಡ ನಾನು ಆರ್ಥರ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ. ಇಬ್ಬರೂ ಕೈ ಕುಲುಕಿಕೊಂಡು ಸೋಫಾದಲ್ಲಿ ಕುಳಿತುಕೊಂಡರು. ಅಪ್ಪ ಇಬ್ಬರಿಗೂ ಡ್ರಿಂಕ್ ತರಲು ಒಳನಡೆದ. ವೈದ್ಯರ ಅನಿರೀಕ್ಷಿತ ಆಗಮನದ ಕಸಿವಿಸಿ ಅವರ ಮುಖದಲ್ಲಿ ಸ್ಪಷ್ಟವಾಗಿತ್ತು.
ಅಪ್ಪನ ಪುನರಾಗಮನದ ನಂತರ ಚರ್ಚೆ ಪುನಃ ಮುಂದುವರೆಯಿತು. ಈ ಬಾರಿ ಈ ಆರ್ಥರನಿಗೂ, ವೈದ್ಯರಿಗೂ ಅಕ್ಕನ ಬಗೆಗಿನ ಯಾವುದೋ ಒಂದು ವಿಚಾರದಲ್ಲಿ ಸರಿಬರಲಿಲ್ಲ. ಇಬ್ಬರೂ ತಮ್ಮದೇ ಸರಿ ಎಂಬ ಧಾಟಿಯಲ್ಲಿ ಮಾತನಾಡರಂಭಿಸಿದರು. ಅದೃಷ್ಟವಶಾತ್ "ಸೈಂಟಾಲಜಿ" ವಿಷಯಗಳು ಒಮ್ಮಗೇ ಕಮ್ಮಿಯಾದ ಪರಿಣಾಮ ನನಗೆ ಒಂದೊಂದೇ ಅರ್ಥವಾಗತೊಡಗಿತು. ಆದರೂ ಚರ್ಚೆಯಲ್ಲಿ ಭಿನ್ನಾಭಿಪ್ರಾಯಗಳು ಮುಂದುವರೆದ ಪರಿಣಾಮ ಹತಾಶಗೊಂಡವನಂತೆ ಕಂಡ ಆರ್ಥರ್ ಹೊರನಡೆದ. ನನಗಂತೂ ಒಳಗೊಳಗೇ ಖುಷಿಯಾಯಿತು. ಆರ್ಥರನ ನಿರ್ಗಮನದಿಂದಾಗಿ ಅಪ್ಪನ ಮುಖ ಪೇಲವವಾಗಿತ್ತು. ವೈದ್ಯರು ಅಪ್ಪನ ಜೊತೆಗೆ ಗಂಭೀರವಾಗಿ ಮಾತನಾಡಲಾರಂಭಿಸಿದರು.
ಅಕ್ಕನಿಗೇನೋ ಆಗಿದೆ ಎಂದು ಅರಿತು ಭಯಭೀತನಾಗಿದ್ದ ನಾನು ವಿಷಯವಾದರೂ ಏನು ಎಂಬ ಕುತೂಹಲಕ್ಕಷ್ಟೇ ಅವರ ಸಂಭಾಷಣೆಯನ್ನು ಕೇಳುತ್ತಿದ್ದೆ. ಅವಳನ್ನು ಜೋಪಾನ ಮಾಡುವ ಕರ್ತವ್ಯ ಈಗ ನನ್ನದು ಎಂದು ನನಗನ್ನಿಸುತ್ತಿತ್ತು. ಒಂದು ಕ್ಷಣ ಒಳ ಬಂದು ಅಕ್ಕನನ್ನು ನೋಡಿದೆ. ಪಾಪ! ಸುಖವಾಗಿ ಮಲಗಿದ್ದಳು ಅವಳು. ಕಪ್ಪು ಫ್ರೇಮಿನ ಕನ್ನಡಿಯೂ ಹಾಸಿಗೆಯ ಎಡಭಾಗದಲ್ಲಿ ಭದ್ರವಾಗಿ ಮಲಗಿತ್ತು. ನಾನು ಡ್ರಾಯಿಂಗ್ ರೂಮಿಗೆ ವಾಪಸ್ಸಾದೆ.
ಆದರೆ ಮುಂದೆ ಕೇಳಲಿರುವ ಮಾತುಗಳು ನನ್ನನ್ನು ಬುಡಸಮೇತ ಅಲುಗಾಡಿಸಲಿದ್ದವು ಎಂಬುದು ನನಗೆ ನಿಜಕ್ಕೂ ಗೊತ್ತಿರಲಿಲ್ಲ.
*
ಮುಂದಿನ ಮಾತುಕತೆಯಲ್ಲಿ ರಾತ್ರಿಯ ಒಂದೆರಡು ಘಂಟೆಗಳು ಹೊರಳಿಕೊಂಡವು. ಅಕ್ಕ ಸ್ಕೀಝೋಫ್ರೀನೀಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾಳಂತೆ. ಈ ಶಬ್ದ ನನಗೆ ನಿಮಿಷಗಳ ಹಿಂದೆ ಕೇಳಿದ "ಸೈಂಟಾಲಜಿ"ಯಷ್ಟೇ ಹೊಸತು. ಅವಳನ್ನು ಆದಷ್ಟು ಬೇಗ ಮನೋ ವೈದ್ಯರಿಗೆ ತೋರಿಸು ಅಂತ ವೈದ್ಯರು ಅಪ್ಪನಿಗೆ ಹೇಳುತ್ತಿದ್ದರು. ಅಪ್ಪನೋ ಡೀಮನ್, ಇವಿಲ್, ಸೈಂಟಾಲಜಿ, ಸಟಾನ್ ಅಂತ ಬಡಬಡಿಸುತ್ತಿದ್ದ. ಡಾಕ್ಟರ್ ಪಿಂಟೋ ಅಕ್ಕನಿಗೆ ಏನಾಗಿದೆ ಎಂಬುದು ಅವರಿಗೆ ತನ್ನ ಹಸ್ತರೇಖೆಯಷ್ಟೇ ಸ್ಪಷ್ಟವಾಗಿ ಗೊತ್ತಿದೆಯೆಂಬಂತೆ ಅಪ್ಪನಿಗೆ ತಿಳಿಹೇಳುತ್ತಿದ್ದರು.
ಅಂತೂ ಇಂತೂ ನನ್ನ ತಲೆಗೆ ಹೊಕ್ಕಿದ್ದಿಷ್ಟು.
ಮೂರು ತಿಂಗಳುಗಳ ಹಿಂದೆ ಅಕ್ಕ ತನ್ನ ಬೆಲ್ಜಿಯಂ ಪ್ರವಾಸ ಮುಗಿಸಿ ದೆಹಲಿಯ ನಿವಾಸಕ್ಕೆ ವಾಪಸ್ಸಾಗಿದ್ದಳು. ಆದರೆ ಬರುವಾಗ ಯಾವನೋ ಒಬ್ಬ ಕೆಂಚು ಕ್ರಾಪು ಕೂದಲಿನ, ಮೈತುಂಬಾ ಟ್ಯಾಟೂ ಧರಿಸಿದ, ತುಟಿಗೆ, ಹುಬ್ಬಿನ ತುದಿಗೆ ಆಭರಣ ಧರಿಸಿ ಕೋಡಂಗಿಯಂತಿದ್ದ ಒಬ್ಬ ಬಿಳಿಯನನ್ನು ಬಾಯ್ ಫ್ರೆಂಡ್ ಅಂತ ಕರೆದುಕೊಂಡು ಬಂದು ಮನೆಯಲ್ಲಿರಿಸಿದ್ದಳು. ಅಪ್ಪನ ಆರ್ಭಟವೂ ಅವಳಿಗೆ ಭಯವನ್ನುಂಟುಮಾಡಿರಲಿಲ್ಲ. ಆ ಬಿಳಿಯನಂತೂ ಹಗಲು ರಾತ್ರಿಯೆಂಬುದರ ಪರಿವೆಯಿಲ್ಲದೆ ಅದೇನನ್ನೋ ಸೇದಿಕೊಂಡು ವಿಚಿತ್ರ ಸ್ಥಿತಿಯಲ್ಲಿ ಕಣ್ಣನ್ನು ಕೆಂಪುಮಾಡಿಕೊಂಡು ಮೈಲ್ಡ್ ಆಗಿ ತೂರಾಡುತ್ತಲೇ ಇದ್ದ. ಅಚ್ಚರಿಯ ವಿಷಯವೇನೆಂದರೆ ಅವನು ಒಂದು ಚಿಕ್ಕ ರಿವಾಲ್ವರ್ ಅನ್ನೂ ತನ್ನ ಜೊತೆ ಇಟ್ಟುಕೊಂಡಿದ್ದ. ಅಪ್ಪ ಗದರಿದಾಗ ಇವೆಲ್ಲಾ ಅವನ ದೇಶದಲ್ಲಿ ಸಾಮಾನ್ಯ ಅಂತ ಅವಳು ಹೇಳಿಕೊಂಡಿದ್ದಳಂತೆ. ಅಪ್ಪನಿಗೆ ಈ ಹಿಪ್ಪಿಯಂತೆ ಕಾಣುವ ಬಿಳಿಯನ ವಿಚಿತ್ರ ವೇಷ ಇರಿಸು ಮಾಡಿರಬಹುದೆಂದೂ, ಅವನು ರಿವಾಲ್ವರ್ ಇಟ್ಟುಕೊಂಡಿದ್ದ ಎಂಬ ವಿಷಯ ಬಹುಷಃ ಕೊಂಚ ಆತಂಕವನ್ನೂ ಉಂಟುಮಾಡಿರಬಹುದೆಂದೂ ನಾನು ಅಂದುಕೊಳ್ಳುತ್ತೇನೆ. ಬಟ್ ಐ ಗೆಸ್ ಶಿ ವಾಸ್ ಇನ್ ಲವ್ ವಿದ್ ಹಿಮ್.
ಅಕ್ಕನಿಗೆ ಆ ಸಮಯದಲ್ಲೂ ಒಬ್ಬ ನನ್ನದೇ ವಯಸ್ಸಿನ ಹದಿಹರೆಯದ ಒಬ್ಬ ತಮ್ಮನಿದ್ದನಂತೆ. ಅಕ್ಕ ಒಂದು ದಿನ ಯಾವುದೋ ಪಾರ್ಟಿಗೆ ಹೋಗಲು ಅಂತ ರೆಡಿಯಾಗುತ್ತಿದ್ದಳಂತೆ. ಈ ಮುಂಗೋಪಿ ಬಿಳಿಯ ಬಾಯ್ ಫ್ರೆಂಡ್ ಮತ್ತು ಹರೆಯದ ತಮ್ಮ ಅದೇ ಕೋಣೆಯಲ್ಲಿ ಏನೋ ಆಡಿಕೊಂಡಿದ್ದರು. ಅವನು ಎಂದಿನಂತೆ ಆ ದಿನವೂ ಮತ್ತಿನ ನಶೆಯಲ್ಲಿದ್ದ. ಆಡುತ್ತಾ, ಎಳೆದಾಡುತ್ತಾ ಯಾವುದೋ ಮಾತಿಗೆ ಮಾತು ಬೆಳೆದು ಅವನು ರಿವಾಲ್ವರಿನ ಟ್ರಿಗರನ್ನು ತಮ್ಮನೆಡೆಗೆ ಒತ್ತಿಬಿಟ್ಟನಂತೆ. ಕನ್ನಡಿಗೆ ಕಣ್ಣನ್ನು ಒತ್ತಿಕ್ಕಿ ಐ-ಲೈನರ್ ಅನ್ನು ನೈಪುಣ್ಯತೆಯಿಂದ ಹಾಕುತ್ತಿದ್ದ ಅಕ್ಕ ಕನ್ನಡಿಗೆ ಕೆಂಪು ದ್ರವ ರಾಚಿದಾಗಲೇ ಬೆಚ್ಚಿಬಿದ್ದಿದ್ದು. ಗುಂಡು ಅವನ ಮೆದುಳನ್ನು ಸೀಳಿ ಎಡಕಿವಿಯನ್ನು ಹರಿದು ಹಾಕಿತ್ತು. ಕನ್ನಡಿಯಲ್ಲಿ ತನ್ನ ಮುದ್ದಿನ ತಮ್ಮ ಬೆಡ್ ರೂಮಿನ ಗೋಡೆಗೆ ಆತುಕೊಂಡು ಅಲ್ಲೇ ಕುಸಿಯುತ್ತಿದ್ದುದನ್ನು ಕಂಡ ಅಕ್ಕ, ಕನ್ನಡಿಗೆ ರಾಚಿದ ರಕ್ತ ನಿಧಾನವಾಗಿ ಕೆಳಗಿಳಿಯುತ್ತಿದ್ದಂತೆಯೇ ಮೂರ್ಛೆ ಹೋದಳು. ದುರ್ಘಟನೆಯ ಆಘಾತದಿಂದ ಒಂದು ವಾರ ಕೋಮಾದಲ್ಲಿದ್ದ ಅಕ್ಕ ಮತ್ತೆ ನಿಧಾನಕ್ಕೆ ಚೇತರಿಸಿಕೊಂಡ ಬಳಿಕವಷ್ಟೇ "ಟೆಡ್ಡಿ… ಟೆಡ್ಡಿ…" ಎನ್ನುತ್ತಾ ಶೂನ್ಯದ ಜೊತೆಗೆ ಮಾತನಾಡಲು ಪ್ರಾರಂಭಿಸಿದ್ದಂತೆ.
ನಾನು ಭೀಕರವಾಗಿ ನಡುಗಿಹೋಗಿದ್ದು ಇಲ್ಲೇ.
ಇವರಿಬ್ಬರ ಪ್ರಕಾರ ನಾನು, ನನ್ನ ಅಕ್ಕನ ಮುದ್ದಿನ ತಮ್ಮ, "ಟೆಡ್ಡಿ" ಇರಲೇ ಇಲ್ಲ. ಲೀಸಾ ಯಾವುದೋ ಕಾಲ್ಪನಿಕ ಪಾತ್ರವನ್ನು ಮನಸ್ಸಿನಲ್ಲೇ ಕಲ್ಪಿಸಿಕೊಂಡು, ಅದನ್ನು ಕಳೆದುಕೊಂಡ ತಮ್ಮನಂತೆ ಭಾವಿಸಿ, ಅದಕ್ಕೆ "ಟೆಡ್ಡಿ" ಎಂಬ ಹೆಸರು ಬೇರೆ ಇಟ್ಟು ಕನ್ನಡಿಯೊಂದಿಗೆ ಒಂದೆರಡು ತಿಂಗಳುಗಳಿಂದ ಏನೇನೋ ಬಡಬಡಿಸುತ್ತಿದ್ದಾಳೆ ಒಂದು ಅಪ್ಪ ಡಾಕ್ಟರ್ ಪಿಂಟೋರಲ್ಲಿ ಹೇಳಿಕೊಂಡರು. ವೈದ್ಯರೂ ಕೂಡ ಲೀಸಾ ಇದನ್ನೇ ಹೇಳಿಕೊಂಡು ನಿನ್ನೆ ನನ್ನ ಕ್ಲಿನಿಕಿಗೆ ಬಂದಳೆಂದೂ, ಅವಳನ್ನು ಸಮಾಧಾನವಾಗಿಯೇ ಅಲ್ಲಿಂದ ಸಾಗಹಾಕಿದೆಯೆಂದು ಹೇಳಿದರು. ಅಪ್ಪನ ಮುಖದಲ್ಲಿ ನಾಚಿಕೆ ಮತ್ತು ಕಣ್ಣ ಕೊನೆಯಲ್ಲಿ ಹನಿಗಳು ಮಡುಗಟ್ಟಿದ್ದವು. ಸೈಂಟಾಲಜಿ, ಅದು-ಇದು, ಮಣ್ಣು-ಮಸಿ ಅಂತೆಲ್ಲಾ ಹೇಳಿಕೊಂಡು ವಿಳಂಬ ಮಾಡಿದರೆ ಅವಳ ಪ್ರಾಣಕ್ಕೇ ಅಪಾಯ. ಅವಳು ಸೂಸೈಡಲ್ ಆಗಿಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಎಂದೆಲ್ಲಾ ಡಾಕ್ಟರ್ ಪಿಂಟೋ ಹೇಳುತ್ತಾ ಹೋದರು. ಅಪ್ಪನೂ ಮೌನವಾಗಿ ತೊಡೆಯ ಮೇಲಿದ್ದ ಸೈಂಟಾಲಜಿಯ ಭಾರದ ಪುಸ್ತಕಗಳನ್ನು ಸವರುತ್ತಾ ಸುಮ್ಮನೆ ಬ್ಲ್ಯಾಂಕ್ ಆಗಿ ತಲೆಯಾಡಿಸುತ್ತಿದ್ದರು.
ನಾನು ನಿಂತಲ್ಲೇ ಕುಸಿದುಹೋದೆ. ಮುಂದೆ ಅವರಾಡಿದ ಯಾವ ಮಾತುಗಳೂ ನನ್ನ ಕಿವಿಯೊಳಕ್ಕೆ ಹೋಗಲಿಲ್ಲ.
*
ನಿಮಿಷಾರ್ಧದಲ್ಲಿ ಅಕ್ಕನ ಕೋಣೆಯೊಳಗೆ ಬಂದ ನಾನು ಮಾಡಿದ ಮೊದಲ ಕೆಲಸವೆಂದರೆ ಕನ್ನಡಿಯ ಮುಂದೆ ನಿಂತು ನನ್ನ ಪ್ರತಿಬಿಂಬವನ್ನು ಪರೀಕ್ಷಿಸಿಕೊಂಡಿದ್ದು.
ಭೌತಿಕವಾಗಿ ಈ ಜಗತ್ತಿನಲ್ಲಿ ಇರುವುದರಿಂದಲೇ ಈ ಪ್ರತಿಬಿಂಬವೂ ನನಗೆ ಕಾಣುತ್ತಿದೆ ಎಂದು ನನಗೆ ನಾನು ಸ್ಪಷ್ಟವಾಗಿ ಹೇಳಿಕೊಂಡೆ. ಆದರೂ ಮೂಲೆಯಲ್ಲಿ ಹತಾಶನಾಗಿ ಕುಳಿತ ನನಗೆ ಪ್ರಶ್ನೆಗಳು ಒಂದರ ಮೇಲೊಂದರಂತೆ ಅಪ್ಪಳಿಸತೊಡಗಿದವು. ಹಾಗಾದರೆ ಇವರು ಹೇಳುತ್ತಿರುವುದು ಸುಳ್ಳೇ? ನಾನು ನಿಜವಾಗಿಯೂ ಇದ್ದೀನಾ ಅಥವಾ ಇಲ್ಲವಾ? ಅಪ್ಪನಿಗೆ ನಾನು ಕೋಣೆಯಲ್ಲಿ ನಿಜಕ್ಕೂ ಕಾಣಿಸುತ್ತಿರಲಿಲ್ಲವೇ? ಕ್ಲಿನಿಕಿನಲ್ಲಿ ಡಾ. ಪಿಂಟೋರ ಸಮ್ಮುಖ ಅಕ್ಕನ ಪಕ್ಕದಲ್ಲಿ ಇದ್ದ ಕುರ್ಚಿ ಖಾಲಿ ಕಾಣಿಸುತ್ತಿತ್ತೇ? ಅಕ್ಕನಿಗೆ ನಾನು ನಿಜಕ್ಕೂ ಕಾಣಿಸುತ್ತಿದ್ದೇನೆಯೇ? ಅಥವಾ ನಾನೊಂದು ಅವಳ ಕಲ್ಪನೆಯ ಪಾತ್ರವಷ್ಟೇ? ನಿಜಕ್ಕೂ ನಾನ್ಯಾರು? ಅವಳ ಸತ್ತು ಹೋದ ಮುದ್ದಿನ ತಮ್ಮನೇ? ಅಥವಾ ಅವಳ ಕಲ್ಪನೆಯ ತೀವ್ರತೆಗೆ ರೂಪುಗೊಂಡ ಒಂದು ಕ್ಷಣಿಕ, ಕಾಲ್ಪನಿಕ, ನಿರಾಕಾರ ಜೀವವೇ?
ನಿಜಕ್ಕೂ ಪ್ರಶ್ನೆಗಳು ಜಾಸ್ತಿಯಾಗುತ್ತಿದ್ದಂತೆಯೇ ನನ್ನ ಅಸ್ತಿತ್ವವೇ ಭೂಕಂಪದ ಹೊಡೆತಕ್ಕೊಳಗಾದ ಬಹುಮಹಡಿ ಕಟ್ಟಡದಂತೆ ಜೋರಾಗಿ ಭಯದಿಂದ ಗಡಗಡನೆ ನಡುಗಲಾರಂಭಿಸಿತು. ನನ್ನೊಳಗಿನ ಯಾವುದೋ ಒಂದು ದನಿ, ಸಂಜೆಯಾದಂತೆ ಅಪ್ಪ ಕುಡುಕನಾಗುತ್ತಾನೆ ನಿಜ; ಆದರೆ ವೈದ್ಯರು ಸುಳ್ಳಾಡಲು ಸಾಧ್ಯವೇ ಎಂದು ಕೇಳಿದಂತಾಯಿತು. ಒಂದು ಕರಾಳ ಕ್ಷಣವಂತೂ "ನಾನು", "ಟೆಡ್ಡಿ"ಯೆಂಬ "ನಾನು" ಇಲ್ಲವೇ ಇಲ್ಲ ಎಂದು ತಲೆಯೊಳಗೇನೆ ಡಂಗುರ ಹೊಡೆದಂತೆ ಕಟುವಾಗಿ ಹೇಳಿತು.
ಭಯ ತಡೆದುಕೊಳ್ಳಲಾರದ ನಾನು ಬಹುತೇಕ ಶೂನ್ಯ ಭರವಸೆಯೊಂದಿಗೆ ಇನ್ನೊಮ್ಮೆ ಕೋಣೆಯ ಕನ್ನಡಿಯತ್ತ ಓಡಿದೆ. ಬಿಂಬ ಈ ಬಾರಿ ದೆಹಲಿಯ ದಟ್ಟ ಚಳಿಗಾಲದಲ್ಲಿ ಕಂಡ ಬೀದಿಯಂತೆ ನಿಜಕ್ಕೂ ಮಬ್ಬೆನಿಸಿತು.
ಆರುತ್ತಿದ್ದ ದೀಪದಂತಾದೆ ನಾನು. ಒಮ್ಮೆ ಜೋರಾಗಿ ಉರಿದು ಕ್ಷೀಣವಾಗುವ ಅದರ ಉರಿಯ ಹಾಗೆ. ನಾನು ಇದ್ದೇನೆ… ನಾನು ಇದ್ದೇನೆ… ನಾನು ನಿಜವಾಗಿಯೂ ಇದ್ದೇನೆ ಎಂದು ಚೆಲ್ಲಾಪಿಲ್ಲಿಯಾಗಿ ಹೋಗಿದ್ದ ಮನೋಬಲವನ್ನು ಒಗ್ಗೂಡಿಸುತ್ತಾ ಹೋದಂತೆ ಬಿಂಬ ಕನ್ನಡಿಯಲ್ಲಿ ಸ್ವಲ್ಪವೇ ಆಕಾರವನ್ನು ಪಡೆದುಕೊಳ್ಳುತ್ತಿತ್ತು. ನನ್ನ ಅಸ್ತಿತ್ವದ ಈ ಸಂಶಯದ ಹುಳು ನಡುವಿನಲ್ಲೆಲ್ಲೋ ಮೆಲ್ಲನೆ ತಲೆಯೆತ್ತುತ್ತಲೇ ಈ ಆಕಾರ ಕರಗಲಾರಂಭಿಸುತ್ತಿತ್ತು.
ನನಗೇನು ಮಾಡಬೇಕೆಂದೇ ತಿಳಿಯಲಿಲ್ಲ. ಅಕ್ಕನ ಮಂಚದ ಬಳಿಗೆ ಹೋದೆ. ಅವಳು ಸುಖವಾಗಿ ನಿದ್ರಿಸುತ್ತಿದ್ದಳು. ಅವಳ ಮಂಚದ ಬಳಿ ಒಂದು ಪುಟ್ಟ ಆಲ್ಟರ್ ಅನ್ನು ಮಾಡಿಡಲಾಗಿತ್ತು. ಜೀಸಸ್ ಚಿತ್ರದಲ್ಲಿ ಮುಗ್ಧವಾಗಿ ನಗುತ್ತಿದ್ದ. ಎರಡು ಪುಟ್ಟ ಕ್ಯಾಂಡಲ್ ಗಳು ಚಿತ್ರದ ಎರಡೂ ಬದಿಯಲ್ಲಿ ಕೊನೆಯುಸಿರೆಳೆಯುತ್ತಿದ್ದವು. ಮಂದವಾಗಿ ಅಪ್ಪನ ಮತ್ತು ವೈದ್ಯರ ದನಿಗಳು ಈಗಲೂ ಡ್ರಾಯಿಂಗ್ ರೂಮಿನಿಂದ ಕೇಳಿಬರುತ್ತಿದ್ದವು.
*
ಮಂಡಿಯೂರಿ ಆಲ್ಟರ್ ಕೆಳಗೆ ಕೂತ ನಾನು ಗಟ್ಟಿಯಾಗಿ ಕಣ್ಣುಗಳನ್ನು ಮುಚ್ಚಿ, ಎರಡೂ ಕೈಗಳ ಬೆರಳುಗಳನ್ನು ಒಂದಕ್ಕೊಂದು ಬಿಗಿಯಾಗಿ ಬೆಸೆದು ಪ್ರಾರ್ಥಿಸತೊಡಗಿದೆ. ಅಕ್ಕನನ್ನು ಗುಣಮುಖಳಾಗಿ ಮಾಡು ಎಂದು ಗೊತ್ತಿಲ್ಲದ ಶಕ್ತಿಗೆ ಬೇಡತೊಡಗಿದೆ. ನಾಳೆಯ ದಿನ ಬರಲಿ, ಅವಳ ಸೇವೆ ಮಾಡಬೇಕು ಎಂದು ಮನಃಪೂರ್ವಕವಾಗಿ ಆಶಿಸತೊಡಗಿದೆ.
ಅಂತೆಯೇ ನಾಳೆಯ ದಿನ ಬರಲೇ ಬೇಕೆಂದೂ, ಜೊತೆಗೆ ಇವತ್ತಾದ ಯಾವ ಘಟನೆಯೂ, ಕೇಳಿದ ಯಾವ ಮಾತುಗಳೂ ತಲೆ ಹೋಳಾದರೂ ನಾಳೆ ನೆನಪಿಗೆ ಬಾರದಿರಲೆಂದೂ ದೈನ್ಯದಿಂದ ಪ್ರಾರ್ಥಿಸತೊಡಗಿದೆ.
******