ಲೇಖನ

ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

 


    ಮೊನ್ನೆ ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದೆ ಹಾಗೆ ಕಾರ್ಯ ನಿಮಿತ್ತ ಹೋದವನು ಅಲ್ಲೆ ರಾಜರಾಜೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಭೇಟಿ ಇತ್ತೆ, ಹೋದ ಕೂಡ್ಲೆ ಎಲ್ಲಿಲ್ಲದ ಖುಷಿಯಿಂದ ಓಡಿ ಬಂದ ಪುಟ್ಟ ಪ್ರಾರ್ಥನ ಕೈ ಹಿಡಿದು ಒಳಗೆ ಎಳೆದೊಯ್ದು ತನ್ನ ಹೊಸ ಆಟಿಕೆಗಳನ್ನ ತೋರಿಸೋಕೆ ಶುರು ಮಾಡಿದ್ಲು, ಸ್ವಲ್ಪ ಸಮಯ ವಿಶ್ರಾಂತಿ ಬಳಿಕ ಮತ್ತೆ ಅವರು ಕಟ್ಟಿಸುತ್ತಿರುವ ಹೊಸ ಮನೆ ತೋರಿಸೋಕೆ ಇಲ್ಲೆ ವಾಕಿಂಗ್ ಹೋಗೋಣ ಬಾ ಮಾಮ ಅಂತ ಕರೆದುಕೊಂಡ್ ಹೋದ್ಲು. ಹೋದ ಸ್ವಲ್ಪ ಸಮಯದ ನಂತರ ಹಾಗೆ ಇನ್ನೂ ರೂಪ ಕಾಣದ ಮನೆ ಹತ್ರ ಸುತ್ತುತಾ ಇದ್ದಾಗ ಬಂದ ಭಾವನನ್ನ ಕೇಳಿದೆ ಏನ್ ಭಾವ ಎಲ್ಲ ಹಿಂದಿ, ತಮಿಳು, ತೆಲುಗು ಮಾತಾಡೊ ಕೆಲ್ಸದವರೆ ಇದಾರೆ ನಮ್ಮ ಕನ್ನಡದವರು ಯಾರು ಇಲ್ಲ ಅಂದೆ? ಅದಕ್ಕವರು ಕೊಟ್ಟ ಉತ್ತರ ಕೇಳಿ ನಾನೇ ಬೆಚ್ಚಿ ಬಿದ್ದೆ ಅವರಂದ್ರು ನಮ್ಮವರು ತುಂಬಾ ಲೇಟ್ ಒಂದ್ ಸಣ್ಣ್ ಕೆಲ್ಸನಾ ಮೂರ್ ದಿನ ಮೂರ್ ಜನ ಮಾಡ್ತಾರೆ ಅದು ಅಲ್ದೆ ದುಡ್ಡು ಜಾಸ್ತಿ ತಗೊತಾರೆ ಮತ್ತೆ ಕೆಲ್ಸಕ್ಕೂ ಸರಿಯಾಗ್ ಬರಲ್ಲ ಅದೆ ಈ ತಮಿಳ್ ಹುಡುಗರು ಒಂದ್ ದಿನದಲ್ಲಿ ಎಲ್ಲ ಮಾಡ್ ಮುಗಿಸಿ ಬಿಡ್ತಾರೆ ಅದ್ಕೆ ಇಲ್ಲಿ ನಮ್ಮವರಿಗಿಂತ ಆ ಹುಡುಗರನ್ನೆ ಜಾಸ್ತಿ ಕೆಲಸಕ್ಕೆ ಕರಿತೀವಿ ಅಂದ್ರು……

          ನೋಡಿ ಎಲ್ಲಿಂದಲೋ ಹೋಟ್ಟೆ ಪಾಡಿಗ್ ಬಂದ್ ಜನ ಇವತ್ತು ನಮ್ಮ ರಾಜ್ಯಾನೇ ತುಂಬ್ತಾ ಇದಾರೆ ಅಂದ್ರೆ ಇದು ನಮ್ಮ ಜನಗಳ ಬೇಜವಾಬ್ದಾರಿತನದಿಂದಲೇ ಅಲ್ವ. ಅಲ್ಪ ಕಾಲದಲ್ಲಿ ಕಷ್ಟಪಟ್ಟು ಕೆಲ್ಸ ಮಾಡಿ, ಬೇಗ ಕೆಲ್ಸ ಮಾಡಿ ನಂಬಿಕೆ ಉಳ್ಸೊಂಡು ಮತ್ತೆ ಕೆಲ್ಸಕ್ಕೆ ಕರಿಯೋ ಹಾಗೆ ಮಡ್ಕೋಳೊದಲ್ದೆ ಮತ್ತಷ್ಟ್ ಮಂದಿನಾ ಅವ್ರ ಊರಿಂದ ಕರೆಸಿ ಕೆಲ್ಸ ಕೊಡ್ಸಿ ನಮ್ಮ ಊರನ್ನ ಅವರ ಊರ್ ಮಾಡೋಕ್ ಹೋಗ್ತಾ ಇರೋದನ್ನ ನಾವ್ ದಿನ ನಿತ್ಯ ನೋಡ್ತ ಇದಿವಿ ನಮ್ಮ ರಾಜಧಾನಿಲಿ. ಅಷ್ಟೆ ಯಾಕೆ ರಾಜ್ಯದ ಎಲ್ಲಾ ಕೂಡಾ ಇದೆ ಚಾಳಿ ಮುಂದುವರಿತಾ ಇದೆ.

            ಚರಿತ್ರೆಯಲ್ಲಿ ಓದಿದ್ವಿ ಕನ್ನಡಿಗರು ಪ್ರೀತಿ, ಔದಾರ್ಯಕ್ಕೆ ಹೆಸರುವಾಸಿ ಅಂತ, ಈ ವಿಷಯವಾಗಿ ಕೂಡ ಕನ್ನಡಿಗರ ಔದಾರ್ಯನ ಮೆಚ್ಚಲೇ ಬೇಕು ವಲಸೆ ಬಂದ ಜನಕ್ಕೆ ತಮ್ಮ ಭಾಷೆ ಕಲಿಸೋ ಬದ್ಲು ನಮ್ಮವರೇ ಅವರ ಭಾಷೆ ಕಲಿತು ಹೄದಯ ವೈಶಾಲ್ಯತೆ ಮೆರಿತಾರೆ ಕನ್ನಡಿಗರು. ಇಪ್ಪತ್ತು ವರ್ಷದಿಂದ ಬೆಂಗಳೂರಲ್ಲಿ ಮನೆ ಕೆಲ್ಸ ಮಾಡ್ತಾ ಇರೋ ಸೆಲ್ವಿಗೆ ಕನ್ನಡ ಇನ್ನೂ ಬರಲ್ಲ ಆದ್ರೆ ಎಂಟು ತಿಂಗಳಿಂದ ಸೆಲ್ವಿ ಕೆಲಸಕ್ಕೆ ಹೋಗ್ತಾ ಇರೋ ಮನೆ ಒಡತಿ ಪರಿಶುದ್ದ ಕನ್ನಡತಿ ಶೋಭಾ ಮಾತ್ರ ಇವತ್ತು ಸೆಲ್ವಿ ಜೊತೆ ಪರಿಶುದ್ದ ತಮಿಳು ಮಾತಾಡ್ತಾಳೆ ಇಂತ ಪರಿಸ್ಥಿತಿ ಕಲ್ಪಿಸ್ತಾ ಇರೋ ಶೋಭಾಳಂತ ಜನಗಳ ಬಗ್ಗೆ ನಗಬೇಕೋ ಅಥವಾ ಅಳಬೇಕೋ ತಿಳಿತಿಲ್ಲಾ. ಸದ್ಯಕ್ಕೆ ಇದು ಕರುನಾಡ ಪರಿಸ್ಥಿತಿ.

       ಪ್ರವಾಸಕ್ಕೆ ಹೋದ ಜನಗಳ ಅನುಕೂಲಕ್ಕೂ ಬೇರೆ ಭಾಷೆಗಳಲ್ಲಿ ಮಾತಾಡೋಕೆ ಹಿಂಜರಿದು ತಮ್ಮ ಭಾಷೆಯಲ್ಲೆ ವ್ಯವಹರಿಸಲಿ ಅನ್ನೋ ಭಾಷಾ ವ್ಯಾಮೊಹಿ ಪರ ರಾಜ್ಯದ ಜನ ನಮ್ಮ ರಾಜ್ಯದಲ್ಲಿ ನಮ್ಮವರ ಮುಟ್ಟಾಳತನನ ಸದುಪಯೋಗ ಪಡ್ಕೊಂಡು ತಮ್ಮ ಬೇಳೆ ಬೇಯ್ಸಿಕೊಳ್ತಾ ಇರೋವಾಗ ನಾವು ಇನ್ನೂ ಕುಂಭಕರ್ಣ ನಿದ್ದೇಲೆ ಇದಿವಿ. ಕನ್ನಡ ಹೋಗಿ ಎನ್ನಡ, ಎಕ್ಕಡ ಅನ್ನೋ ವಾತಾವರಣ ಇವತ್ತು ಸೄಷ್ಟಿ ಆಗಿದೆ ಅಂದ್ರೆ ಅದಕ್ಕೆ ಹೊಣೆ ನಾವೇ ಆಗ್ತಿವಿ ತಾನೆ.

     ಇನ್ನು ದಿನ ಒಂದಲ್ಲ ಒಂದು ಸುದ್ದಿಯಲ್ಲಿ ಇರೋ ಕೆಲವು ಗಡಿ ಭಾಗದ ಜಿಲ್ಲೆಗಳ ಕಡೆಗೆ ಒಂದು ಗಮನ ಹರಿಸಿ ಬರೋಣ. ರಾಜ್ಯದ ಗಡಿ ಜಿಲ್ಲೆಗಳು ಕರ್ನಾಟಕಕ್ಕೆ ಸೇರಿದವು ನಿಜ, ಆದರೆ ಅಲ್ಲಿನ ನಿಜ ಪರಿಸ್ಥಿತಿ ನೋಡಿದ್ರೆ ಅವು ಕೇವಲ ಕಡತಗಳಲ್ಲಿ ಮಾತ್ರ ಕರ್ನಾಟಕದ ಜಿಲ್ಲೆಗಳೇನೋ ಅನ್ನೊ ಸಂಶಯ ಬರೋದಂತು ಕಂಡಿತ, ಯಾಕಂದ್ರೆ ಅಲ್ಲಿನ ಕನ್ನಡದ ಮತ್ತು ಕನ್ನಡಿಗರ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಅಲ್ಲಿ ಕನ್ನಡದ ವಾತವರಣ ಇಲ್ಲವೇನೋ ಅನ್ಸತ್ತೆ ಚಾಮರಾಜನಗರ ತಮಿಳಿನ ಛಾಯೆಗೆ ಒಳಪಟ್ರೆ ಕೋಲಾರ, ಚಿತ್ರದುರ್ಗ, ರಾಯಚುರಿನ ಭಾಗಗಳು ತೆಲುಗುಮಯ, ಬೆಳಗಾವಿ ಮರಾಠಿಯ ಹಿಡಿತದಲ್ಲಿದ್ದರೆ ಇನ್ನು ಬೆಂಗಳೂರು ವೈವಿದ್ಯತೆಯ ಮಡಿಲು. ಇದಕ್ಕೆ ಒಂದು ಸಣ್ಣ ಉಧಾಹರಣೆ ಕೊಡ್ತಿನಿ ಓದಿ ಮೂಲತಃ ನಾನು ಕೄಷಿ ವಿದ್ಯಾರ್ಥಿ ನನ್ನ ಪದವಿಯ ಒಂದು ಅಂಗವಾಗಿ ನಾವು ಒಂದು ಗುಂಪು ವಿಶ್ವವಿದ್ಯಾಲಯದಿಂದ ಗ್ರಾಮೀಣ ಕೄಷಿ ಕಾರ್ಯಾನುಭವದ ಸಲುವಾಗಿ ರಾಜ್ಯದ ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರದ ಕೆಲವು ಆಯ್ದ ಹಳ್ಳಿಗಳಲ್ಲಿ ವಾಸ್ಥವ್ಯ ಹೂಡಿದ್ದೆವು ಅಗ ನನಗೆ ನಿಜವಾಗಿಯೂ ಬೇಸರ ಮೂಡಿಸಿದ್ದ ಸಂಗತಿ ಅಂದ್ರೆ ನಾನು ಆಂದ್ರಪ್ರದೇಶದಲ್ಲಿದ್ದಿನೇನೋ ಅನ್ನೊ ಹಾಗಿದ್ದ ಅಲ್ಲಿನ ವಾತಾವರಣ ತೆಲುಗು ಸಿನಿಮಾ, ತೆಲುಗು ಭಾಷೆಯಿಂದ ತುಂಬಿತ್ತು. ಅಲ್ಲಿನ ಜನರ ಜೀವ ಭಾಷೆ ತೆಲುಗು, ಮಾತೄ ಭಾಷೆ ಕನ್ನಡ ಅದು ಕಡತಗಳಿಗೆ ಮಾತ್ರ ಸೀಮಿತವಾಗಿ. ಇದಷ್ಟೇ ಅಲ್ಲ ಇನ್ನುಳಿದ ಗಡಿಭಾಗಗಳಲ್ಲೂ ಕನ್ನಡದ ಉಸಿರುಗಟ್ಟಿಸುವ ಪರಿಸ್ಥಿತಿ ಇರುವುದನ್ನು ಅಲ್ಲಗಳೆಯುವಂತಿಲ್ಲ.

        ನಮ್ಮ ಭಾಷೆ ನೆಲ ಜಲದ ಮೇಲಿನ ಅಭಿಮಾನ, ಜವಾಬ್ದಾರಿ ಪ್ರತಿಯೊಬ್ಬನಲ್ಲೂ ಅತ್ಯವಶ್ಯಕ. ಇಲ್ಲ ಅಂದ್ರೆ ಕನ್ನಡದ ಅಳಿವು ನಿಶ್ಚಿತ. ಪರ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ನಮ್ಮ ರಾಜ್ಯಕ್ಕೆ ಬಂದು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗಳಿಗೆ ನಿಲ್ಲಿಸುವ ಮಟ್ಟಕ್ಕೆ ತಲುಪಿವೆ ಇನ್ನು ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷವೊಂದರ ನಾಯಕರು ಆಂದ್ರದ ಗಡಿಜಿಲ್ಲೆಗಳಲ್ಲಿ ಪರಭಾಷಿಕರ ಮತ ಸೆಳೆಯಲು ಆಂದ್ರದ ಖ್ಯಾತ ಸಿನಿಮಾ ನಟರೊಬ್ಬರನ್ನು ಪ್ರಚಾರಕ್ಕೆ ಆಹ್ವಾನಿಸಿರುವುದು ನಿಜಕ್ಕು ನಾಚಿಕೆಗೇಡು ಕೆಲಸವಾಗಿದೆ, ಇಂತವರಿಗೆ ರಾಜ್ಯಕ್ಕಿಂತ, ಭಾಷೆಗಿಂತ ಅಧಿಕಾರವೇ ಮುಖ್ಯವಾಗಿದೆ.  ನಾಳಿನ ರಾಜ್ಯದ ಭಾಷೆಯ ಅಳಿವಿಗೆ ರಾಜಕೀಯ ಪಕ್ಷಗಳೇ ನಾಂದಿ ಹಾಡುವಂತಿರುವಾಗ ರಾಜ್ಯದ ಏಳ್ಗೆಯ ಬಗ್ಗೆ ನಾವು ಯೋಚಿಸುವುದಾದರು ಹೇಗೆ?

      ಬೆಳಗಾವಿಯನ್ನು ರಾಜ್ಯದ ಎರಡನೇ ರಾಜ್ಯಧಾನಿ ಎಂದು ಘೋಷಿಸಿ ಕೇವಲ ಕಟ್ಟಡಗಳನ್ನು ಕಟ್ಟಿದರೆ ಮುಗಿಯದು ಇಂದು ಕಟ್ಟಡದ ಬದಲು ಕನ್ನಡ ಮನಸುಗಳನ್ನು ಕಟ್ಟುವ ಕೆಲಸವಾಗಬೇಕು. ಮಹಾರಾಷ್ಟ್ರದ ಮಂತ್ರಿ ನಮ್ಮ ನಾಡಲ್ಲಿ ನಮ್ಮವರ ಮೇಲೆ ಅಬ್ಬರಿಸಿದರೂ ಸುಮ್ಮನಿರುವ ನಾವು ಇಂದಾದರು ಏಳದಿದ್ದಲ್ಲಿ ಕಾಸರಗೋಡನ್ನು ಮರೆತಂತೆ ಬೆಳಗಾವಿಯನ್ನು ಮರೆಯುವ ಸನ್ನಿವೇಶ ಸೄಷ್ಟಿಯಾದೀತು.

     ಕನ್ನಡದ ಪರವಾಗಿ ನಿಂತು ಕನ್ನಡದ ಉಳಿವಿಗೆ ಹೋರಾಡಬೇಕಾದ ಬುದ್ಧಿಜೀವಿಗಳಿಂದು ರಾಜಕೀಯ ಪಕ್ಷ್ಗಗಳಿಗೆ ಜೈಕಾರ ಕೂಗುತ್ತಿರುವಾಗ ನಮಗೆ ಸ್ಪೂರ್ತಿ ನಾವೇ ಆಗಬೇಕಿದೆ, ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ರಾಜ್ಯದಲ್ಲಿ ನಾವೇ ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಇಂದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡದ ಉಳಿವಿಗೆ ಹೋರಾಡುವ ಮನ್ವಂತರವಾಗಬೇಕಾಗಿದೆ. ಎಲ್ಲಿಂದಲೋ ಬಂದು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಭಾಷೆಯನ್ನೂ ಕಟ್ಟುತ್ತಿರುವ ಜನಗಳಿಗೆ ನಮ್ಮ ಬೇಜವಾಬ್ದಾರಿ ಬುನಾದಿ ಆಗಬಾರದು ಅನ್ನೋ ಜಾಗೄತಿ ಪ್ರತಿಯೊಬ್ಬನಲ್ಲೂ ಮೂಡಬೇಕು.

    ಹಲವಾರು ಜೀವಿಗಳ ಸತತ ಪರಿಶ್ರಮದಿಂದ ಉದಯವಾಗಿದ್ದ ಚೆಲುವ ಕನ್ನಡನಾಡು ಇಂದು ಮಂಕು ಕವಿದ ದೀಪವಾಗಿದೆ, ಕನ್ನಡದ ದೀಪ ಆರದೆ ಚಿರಕಾಲ ನಾಡಿನ ಅಂಧಕಾರ ತೊಳೆದು ಪ್ರಜ್ವಲಿಸಬೇಕೆಂದರೆ ಪ್ರತಿಯೊಬ್ಬ ಕನ್ನಡಿಗನೂ ಕವಿ ಅಡಿಗರ ಮಾತಂತೆ ಹೊಸ ನಾಡ ರಸದ ಬೀಡು ಕಟ್ಟಲು ಕಂಕಣ ಬದ್ದರಾಗಿ ಹೋರಾಡಬೇಕಿದೆ.

    “ಸಿರಿಗನ್ನಡಂ ಗೆಲ್ಗೇ, ಸಿರಿ ಗನ್ನಡಂ ಬಾಳ್ಗೆ”

 -ನಿಶಾಂತ್ ಜಿ.ಕೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

  1. ನಾಡಪ್ರೇಮ ; ನುಡಿಪ್ರೇಮದ ಕುರಿತಾದ ಮತ್ತು ಮುನ್ನಚ್ಚರಿಕೆಯನ್ನು ನೀಡುವಂತಹ ವಿಚಾರಪ್ರಚೋಧಕ ಲೇಖನ, ಲೇಖಕರಿಗೆ ಧನ್ಯವಾದಗಳು….ಶುಭದಿನ !

  2. Uttama lekana.. bhasheya, gadibhagagala paristitiyanna nivu tumba neravagi heliddiraa,e lekhana pratiyondu kannada manassannu jagratagolisali… Shubhashayagalu….:)

Leave a Reply

Your email address will not be published. Required fields are marked *