ಪಂಜು-ವಿಶೇಷ

ಕನ್ನಡವೇ ನಿತ್ಯ: ಸ್ಮಿತಾ ಅಮೃತರಾಜ್

ನಾವು ಎಲಿಮೆಂಟರಿ ಶಾಲೆಗೆ ಹೋಗುವ ಹೊತ್ತಿಗೆ ಅಲ್ಲೊಂದು ಇಲ್ಲೊಂದರಂತೆ ಅಕ್ಕಪಕ್ಕದ ಊರುಗಳಲ್ಲಿ  ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗಳು ಹಣಕಿ ಹಾಕುತ್ತಿದ್ದವಷ್ಟೆ. ಉಳ್ಳವರು ಹಾಗು  ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗೆ  ಸೇರಿಸಬೇಕೆಂಬ ಮಹಾತ್ಕಾಂಕ್ಷೆ ಹೊತ್ತ ಹೆತ್ತವರ ಮಕ್ಕಳಿಗೆ ಮಾತ್ರ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನೊಳಕ್ಕೆ ಹೊಕ್ಕು ಲಯ ಬದ್ಧವಾಗಿ ಇಂಗ್ಲೀಷ್ ಪ್ರಾರ್ಥನೆಯನ್ನು  ಉಸುರುವ ಭಾಗ್ಯ. ನಾವೆಲ್ಲಾ ಬರೇ ಕಾಲಿನಲ್ಲಿ. ಹೆಚ್ಚೆಂದರೆ ಹವಾಯಿ ಚಪ್ಪಲನ್ನು ತೊಟ್ಟು ಬಲು ದೂರದಿಂದ ನಡೆದು ಕೊಂಡೇ ಬರುವಾಗ,  ಅವರುಗಳೆಲ್ಲಾ ಗರಿ ಗರಿ ಇಸ್ತ್ರಿ ಮಾಡಿದ ಯೂನಿಫಾರಂ ಗೆ ಟೈ ಕಟ್ಟಿ, ಮಿರಿ ಮಿರಿ ಮಿಂಚುವ ಕರಿ ಬೂಟು ಹಾಕಿ, ಮನೆ ಬಾಗಿಲಿಗೇ ಬರುವ ರಿಕ್ಷಾ ಏರಿ ಟಾ, ಟಾ,  ಬಾಯ್ ಬಾಯ್ ಹೇಳುತ್ತಾ ಮರೆಯಾಗುವಾಗ ನಾವುಗಳು ಒಂಟಿ ಕೈಯ ಬಟ್ಟೆ ಚೀಲದ ತುಂಬಾ ಪುಸ್ತಕಗಳನ್ನು ಹೊರಲಾರದೆ, ಆಯಾಸವಾಗಿ  ಮತ್ತೊಂದು ಭುಜಕ್ಕೆ ರವಾನಿಸುತ್ತಾ ಅವರು ಹೋದ ದಾರಿಯನ್ನೇ ಬೆರಗುಗಣ್ಣಿನಿಂದ ನೋಡುತ್ತಾ ಸಾಗುತ್ತಿದ್ದೆವು. ಆ ಕಾಲಕ್ಕೆ  ಅದು  ಮನಸಿಗೆ ಸುಖ ತರುವ ಸಂಗತಿಯೇ ಆಗಿತ್ತು. ಕಾನ್ವೆಂಟ್ ಮಕ್ಕಳ ಜೊತೆ ಮಾತಿಗಿಳಿಯುವುದಕ್ಕೂ ಏನೋ ಒಂದು ರೀತಿಯ ಮುಜುಗರ. ಆ ಮಕ್ಕಳೂ ಅಷ್ಟೆ ಸರಕಾರಿ ಕನ್ನಡ ಶಾಲೆಗೆ ಹೋಗುವ ನಮ್ಮಗಳ ಜೊತೆಗೂ  ಒಂಥರಾ ಅಸಡ್ಡೆ. ನಾವು ಶಾಲೆ ಬಿಡುವ ಹೊತ್ತಿಗೆ ಒಮ್ಮೊಮ್ಮೆ ಅಪರೂಪಕ್ಕೆಂಬಂತೆ ಅವರುಗಳು ಸಿಕ್ಕರೆ, ನಾವುಗಳೆಲ್ಲಾ ಕಾಡು ಹರಟೆ ಬಿಟ್ಟು ಸದ್ದಿಲ್ಲದೆಯೇ ಅವರ ಹಿಂದೆಯೇ ನಡೆಯುತ್ತಿದ್ದೆವು. ಅವರ ಬಾಯಿಂದ ಪುತ ಪುತನೆ ಉದುರುವ ಇಂಗ್ಲೀಷ್ ಪದಗಳನ್ನು ಹೆಕ್ಕಿ ಹೆಕ್ಕಿ ನಮ್ಮ ಚೀಲದೊಳಗೊಂದಷ್ಟು,  ತಲೆಯೊಳಗೊಂದಿಷ್ಟು ತುರುಕಲು ಪ್ರಯತ್ನಿಸುತ್ತಿದ್ದೆವು. ಅವರು ಮಾತನಾಡಿದ್ದೆಲ್ಲಾ ಟಸ್ ಪುಸ್ ಅಂತ ಕೇಳುತ್ತಿತ್ತೇ ವಿನಃ ಬೇರೇನೂ ತಲೆ ಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಅವರು ಹೋದ ನಂತರವೂ ಅವರಾಡಿದ  ಶಬ್ದಗಳು ಗಾಳಿಯೊಂದಿಗೆ ಗಿರಕಿ ಹೊಡೆದಂತಾಗಿ ಎಷ್ಟೋ ಹೊತ್ತಿನವರೆಗೂ ನಿಶ್ಯಬ್ದದಿಂದ್ದ  ನಾವುಗಳು ಒಮ್ಮೆಗೇ ಎಚ್ಚೆತ್ತುಕೊಂಡವರಂತೆ ಎಲ್ಲ ಮರೆತು ನಮ್ಮ ದಿನನಿತ್ಯದ  ಕಾಡು ಹರಟೆಯತ್ತ ಹೊರಳಿಕೊಂಡು ಬಿಡುತ್ತಿದ್ದೆವು.

ಆಗೆಲ್ಲಾ ನಾವುಗಳು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಇಂಗ್ಲೀಷ್ ಪದಗಳು ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ನಾವೆಲ್ಲಾ ಹಳ್ಳಿಯ ಮೂಲೆಯಿಂದ ಶಾಲೆಗೆ ಬರುತ್ತಿದ್ದ ಕಾರಣ ನೆಟ್ಟಗೆ ಕನ್ನಡ ಮಾತನಾಡಲೂ ಬರುತ್ತಿರಲಿಲ್ಲ. ತರಗತಿಯೊಳಗೆ ಮಾತ್ರ ಕನ್ನಡ ಮಿಸುಕಾಡುತ್ತಿತ್ತೇ ವಿನಃ,  ಉಳಿದೆಲ್ಲಾ ಸಂದರ್ಭಗಳಲ್ಲೂ ಆಡು ನುಡಿಯೇ  ಓಲಾಡಿಬಿಡುತ್ತಿತ್ತು. ಇದರಿಂದಾಗಿ ನಮಗೆ ಕನ್ನಡ ಮಾತನಾಡುವ ಸಂದರ್ಭದಲ್ಲೂ ಗ್ರಾಮ್ಯ ಪದಗಳೇ ಹೆಚ್ಚಿನ ಮಟ್ಟಿಗೆ ನಾಲಗೆ ತುದಿಯಲ್ಲಿ ಹಣಕಿ ಹಾಕಿ ಬಿಡುತ್ತಿತ್ತು. ಇನ್ನು ನಾವು ಬಳಸುವ ಇಂಗ್ಲೀಷ್ ಪದಗಳೋ ದೇವರಿಗಷ್ಟೆ ಅಕ್ಕರೆ. ಸ್ಕೂಲ್ ಗೆ ಇಸ್ಕೂಲ್,  ಕ್ಲಾಸ್ ಮೆಟ್ ಗೆ ಕ್ಲಾಸ್ ಮೆಂಟ್, ಕನೆಕ್ಷನ್ ಗೆ ಕಲೆಕ್ಷನ್. ಹೀಗೆ ನಮ್ಮಿಂದಲೇ ರೂಪಾಂತರಗೊಂಡ ಇಂಗ್ಲೀಷ್. ಹೈಸ್ಕೂಲ್ ಮೆಟ್ಟಿಲು ತಲುಪುವವರೆಗೂ ನಾವು ಮಾತಾಡಿದ್ದು ತಪ್ಪು ಅಂತ ನಮಗೂ ಗೊತ್ತಿರಲಿಲ್ಲ, ಗೊತ್ತಿದ್ದವರು ಹೇಳಿ ಕೊಡುವ ಸಾಹಸಕ್ಕೆ ಕೈ ಹಾಕಿಯೂ ಇರಲಿಲ್ಲ.

ಆಗ ತಾನೇ ನನಗೆ ಐದನೇ ಈಯತ್ತೆಗೆ ಹೋಗುವ ಸಂಭ್ರಮ. ಹೊಸ ಭಾಷೆ ಇಂಗ್ಲೀಷನ್ನು  ಕಲಿಯುವ ಸಡಗರ,  ಉಮೇದು. ಎಬಿಸಿಡಿಯ ದೊಡ್ಡಾಕ್ಷರ,  ಸಣ್ಣಾಕ್ಷರಗಳನ್ನೆಲ್ಲಾ ಅನಾಯಾಸವಾಗಿ ಕಲಿತು ಬಿಟ್ಟಾಗ, ಇಂಗ್ಲೀಷ್ ಏನು ದೊಡ್ಡ ಕುಂಬಳಕಾಯಿ? ಖಂಡಿತಾ ಕಲಿಯಬಹುದು ಅನ್ನೋ ಮನೋಭಾವ ಅಂತರ್ಗತವಾಗಿಬಿಟ್ಟಿತ್ತು. ಎಲ್ಲಕ್ಕಿಂತ ಹೆಚ್ಚಾಗಿ  ಆ ಕಾನ್ವೆಂಟ್ ಮಕ್ಕಳ  ಟುಸ್ ಪುಸ್ ಸದ್ದುಗಳು  ಇನ್ನು ಅರ್ಥವಾಗಿಬಿಡಬಹುದೆಂಬುದೇ ಹೆಚ್ಚು ಖುಷಿ ಕೊಡುವ ಸಂಗತಿಯಾಗಿತ್ತು. ಇಷ್ಟೆಲ್ಲಾ ಕಲಿಯೋ ಹೊತ್ತಿಗೆ ನಮ್ಮ ಶಾಲೆಗೆ ಆಗಮಿಸಿದ್ದ ಟಿ. ಸಿ. ಹೆಚ್. ತರಬೇತು  ಶಿಕ್ಷಕರು ನಮ್ಮ ತರಗತಿಯೊಳಗೂ ಬಂದೇ ಬಿಟ್ಟರು. ಅವರೆಲ್ಲಾ ಇನ್ನೂ  ಎಳೆಯರು. ಅದರಲ್ಲಿ ಇಂಗ್ಲೀಷ್  ಕಲಿಸಲು ಬರುತ್ತಿದ್ದ ಮೇಸ್ಟ್ರೊಬ್ಬರಿಗೆ ಅವರಿಗೆ ಗೊತ್ತಿದ್ದ  ವಾಕ್ಯಗಳನ್ನೆಲ್ಲಾ ನಮ್ಮ ಮೇಲೆ ಪ್ರಯೋಗಿಸಿ ಅವರಿಗೂ ಕಲಿಯುವ ಹಂಬಲವಿದ್ದಿರಬೇಕು.  ಹಾಗಾಗಿ ಇಂಗ್ಲೀಷ್ ಪಿರಿಯೆಡ್ ತುಂಬಾ ಓತಪ್ರೇರೀತವಾಗಿ ಇಂಗ್ಲೀಷೇ ಕುಣಿದಾಡುತ್ತಿತ್ತು.  ನಾವುಗಳೋ ಕಷ್ಟದ  ಪದಗಳನ್ನೆಲ್ಲಾ ಡಿಕ್ಷ್ನರಿಯಲ್ಲಿ ಹುಡುಕಿ ತಿಳಿದು ಕೊಳ್ಳುವಷ್ಟು ಪ್ರವೀಣರಾಗಿ ಬಿಟ್ಟಿದ್ದೆವು. ಅದೂ ನಾಳಿನ ಪಾಠದ ಕ್ಲಿಷ್ಟ  ಶಬ್ದಗಳ ಬಗ್ಗೆ ಮಾತ್ರ. ಅದರಾಚೆಗೆ ಏನೂ ಗೊತ್ತಿರಲಿಲ್ಲ. ಹಾಗಾಗಿ ಒಮ್ಮೆ ape ಅಂದರೆ ಗೊರಿಲ್ಲ ಅಂತ ತಿಳಿದು ಕೊಂಡು ಹೋಗಿದ್ದೆವು. ಆ ಸಲ ಮೇಷ್ಟ್ರು ಯಾರ ಜೊತೆಗೂ ಪದದ ಅರ್ಥ ಕೇಳುವ ಗೋಜಿಗೇ ಹೋಗದೆ ತಾವೆ ಅದರ ಅರ್ಥ ಆಪಲ್‍ ಎಂದು,  ಅಂದ್ರೆ ಸೇಬು ಹಣ್ಣು ಅಂದಾಗ ತಪ್ಪೋ ಸರಿಯೋ ಒಂದೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ಮತ್ತೆಂದೂ ಪದ ಹುಡುಕಿ ತಯಾರಿ ಮಾಡಿಕೊಂಡು ಹೋಗುವ ಒಳ್ಳೆ ಅಭ್ಯಾಸಕ್ಕೆ ಹೋಗಲಿಲ್ಲ. ಹಾಗೂ ಹೀಗೂ ಒಂದು ದಿನ ಪಾಠ ಮುಗಿಸಿ ಎಲ್ಲರನ್ನು ಉದ್ದೇಶಿಸಿ ಅಂಡರ್ ಸ್ಟ್ಯಾಂಡ್?  ಅಂತ ಕೇಳುವಾಗ  ಮಕ್ಕಳೆಲ್ಲರೂ ಗಪ್ ಚಿಪ್. ಯಾರ ಬಾಯಿಂದಲೂ ಸದ್ದೇ ಹೊರಡದಷ್ಟು. ಯಾಕೆಂದರೆ ಅಂತ ಒಂದು ಪದವನ್ನು ನಾವು ಮೊದಲ ಬಾರಿಗೆ ಕೇಳಿದ್ದು. ಹಾಗಾಗಿ ಅವರು ಪ್ರಶ್ನೆ ಹಾಕಿದ್ದೋ? ಉತ್ತರ ಹೇಳಿದ್ದೋ ಒಂದೂ ಅರ್ಥವಾಗದೆ ಗೊಂದಲಕ್ಕೆ ಬಿದ್ದು ತಡವರಿಸುವಂತಾಯಿತು. ನಮ್ಮೆಲ್ಲರ ಮಹಾ ಮೌನವನ್ನು ಭೇದಿಸಿ ತರಗತಿಯಲ್ಲಿ ತುಸು ಜಾಣೆಯಾದ ನನ್ನೆಡೆಗೇ  ಮತ್ತದೇ ಅಂಡರ್ ಸ್ಟ್ಯಾಂಡ್ ಅಂತ ಬಾಣ ಎಸೆದಂತೆ ಕೇಳಿದರು. ಅಂಡರ್, ಆನ್, ಸಿಟ್,  ಸ್ಟ್ಯಾಂಡ್ ಇವಿಷ್ಟೇ ಪದಗಳ ಅರ್ಥ ಈಗಷ್ಟೇ ಗೊತ್ತಾಗಿದ್ದ ನನಗೆ  ಮೇಷ್ಟ್ರು  ಯಾಕೆ ನನ್ನ  ಕೆಳಗೆ ನಿಲ್ಲೋಕೆ ಹೇಳಿದ್ರು ಅಂತ ಗೊಂದಲವಾಗಿ ಕೆಳಗೆ ಡೆಸ್ಕಿನ ಅಡಿಯಲ್ಲಿ ನಿಲ್ಲಲಾಗದೆ ಹಾಗೇ ಎದ್ದು ನಿಂತುಬಿಟ್ಟೆ. ನಾನು ಎದ್ದು ನಿಂತದ್ದು ನೋಡಿ ತರಗತಿಯ ಉಳಿದ ಮಕ್ಕಳೆಲ್ಲರೂ  ಏಕ್ ದಂ ಶಿಸ್ತಿನ ಸಿಪಾಯಿಗಳಂತೆ  ತರಗತಿಗೆ ತರಗತಿಯೇ ಎದ್ದು ನಿಲ್ಲುವಾಗ ದಂಗಾಗುವ ಸರದಿ ಈಗ ಪಾಪ ಮೇಷ್ಟ್ರದ್ದು. ಮತ್ತೆ ಇಂಗ್ಲೀಷನ್ನ ಬದಿಗೊತ್ತಿ , ಯಾಕೆ ನೀವುಗಳೆಲ್ಲಾ ಎದ್ದು ನಿಂತದ್ದು? ಅಂತ ಅಚ್ಚ ಕನ್ನಡದಲ್ಲಿ ಕೇಳಿದಾಗ  ಹೋದ ಉಸಿರು ಮತ್ತೆ ಬಂದಂತಾಗಿ,  ನಾನೇ ತುಸು ಧೈರ್ಯವಹಿಸಿ, ನೀವು ಅಂಡರ್ ಸ್ಟ್ಯಾಂಡ್ ಅಂದ್ರಿ. . . ಡೆಸ್ಕು ತಡೆಯುವ ಕಾರಣ ಕೆಳಗಡೆ ನಿಲ್ಲಲಾಗಲಿಲ್ಲ. ಹಾಗೇ ಎದ್ದು ನಿಂತುಬಿಟ್ಟೆ  ಅಂತ ಒಂದೇ ಉಸುರಿಗೆ ವಿವರಣೆ ಕೊಟ್ಟು ಅಡಿ ನೋಡುತ್ತಾ  ನಿಂತು ಬಿಟ್ಟೆ. ಮತ್ತೆ ಉಳಿದಂತೆ ನನ್ನನೇ ಅನುಕರಿಸುವ ಮುಗ್ಧ ಸಹಪಾಠಿಗಳು. ಮೇಷ್ಟ್ರಿಗೋ ಇದು ದೊಡ್ಡ ಜೋಕ್ ಅಂತ ಅನ್ನಿಸಿರಬೇಕು. ದೊಡ್ಡದಾಗಿ ನಕ್ಕು ಬಿಟ್ಟರು. ನಮಗೆ ಇಷ್ಟೇ ಸಾಕಿತ್ತು ಕಾರಣ ನಗಲು. ನಾವೂ ದನಿಗೂಡಿಸಿದೆವು ಹೆಂಚು ಹಾರುವಷ್ಟು. ಆ ದಿನ ಈ ಜೋಕ್ ಎಲ್ಲಾ ಟೀಚರ್ ಗಳ ಕೊಠಡಿಗೆ ರವಾನೆಯಾಗುತ್ತಾ  ಹಾಸ್ಯದ ವಾತಾವರಣವನ್ನೇ ನಿರ್ಮಿಸಿಬಿಟ್ಟಿತು. ಇವತ್ತಿಗೂ ಯಾರಾದರೂ ಅಂಡರ್ ಸ್ಟ್ಯಾಂಡ್ ಅಂತ ಹೇಳಿದ್ದು ಕಿವಿಗೆ ಬಿದ್ದರೆ, ಅರ್ಥವಾಗದನ್ನೆಲ್ಲಾ ಮನಸು ಅರ್ಥೈಸಲು ತೊಡಗಿ  ಮುಸಿ ಮುಸಿ ನಗಲು  ಶುರುಮಾಡುತ್ತೆ.

ಮತ್ತೊಮ್ಮೆ ಅದಕೂ ಮುಂಚೆ ನಾನು ಹೊಸ ಫ್ರಾಕ್ ತೊಟ್ಟು ಬಂದಾಗಲೆಲ್ಲಾ ಟೀಚರೊಬ್ಬರು ಚೆಂದ ಇದೆ ಅಂಗಿ. ಯಾರು ತಂದದ್ದು? ಎಲ್ಲಿಂದ ತಂದದ್ದು ಅಂತ  ನಾನ ಪ್ರಶ್ನೆಗಳ ಸುರಿಮಳೆಯನ್ನ ನನ್ನ  ಮೇಲೆ ಸುರಿಯುತ್ತಿದ್ದರು. ಬಹುಷ; ಅವರಿಗೂ ನನ್ನಷ್ಟೇ ಪ್ರಾಯದ ಹೆಣ್ಣು ಮಗಳಿದ್ದಿರಬೇಕು.  ಅದೇ ಡಿಸೈನ್ ಬಟ್ಟೆ ಹೊಲಿಸುವುದಿತ್ತೋ ಏನೋ. .  ನಾನೋ ಅಷ್ಟಕ್ಕೆ ಕಾದಿದ್ದವಳಂತೆ ತುಸು ಬಿಂಕದಿಂದ ಕತ್ತು ಕೊಂಕಿಸಿ ಅದೂ. . ನನ್ನ ಅತ್ತೆ ಫಾರೀನ್ ನಿಂದ ತಂದದ್ದೂ ಅಂತ ರಾಗವಾಗಿ ಉದ್ದಕ್ಕೆ ಹೇಳುತ್ತಿದ್ದೆ. ಆಗೆಲ್ಲಾ ಫಾರೀನ್ ನಲ್ಲಿ ಇರೋದಂದ್ರೆ  ಯಾವುದೋ ಬೇರೆ ಗ್ರಹದಲ್ಲಿದ್ದಂತೆ ಸಿರಿವಂತಿಕೆಯ ಮತ್ತು ಗೌರವಾದರ ಕೊ ಡುವ ಸಂಗತಿಯಾಗಿತ್ತು. ಹಾಗಗಿ ಫಾರೀನ್ ಬಂಧುಗಳು ಕೊಟ್ಟ  ವಸ್ತುಗಳನ್ನು ಬಳಸುವಾಗ ನಮಗೂ ಒಂದು ವಿಶೇಷವಾದ ಮನ್ನಣೆ  ದೊರಕುತ್ತಿತ್ತು. ಮಗದೊಮ್ಮೆ ಆ ಟೀಚರ್ ನಿಮ್ಮ ಆತ್ತೆ ಯಾವ ದೇಶದಲ್ಲಿರೋದು ಅಂತ ಕೇಳಿದಾಗ ನಾನು ಕಣ್ಣರಳಿಸಿ ಫಾರೀನ್ ಅಂತ ತಟಕ್ಕನೆ ಉತ್ತರಿಸಿಬಿಟ್ಟೆ. ಅದೇ ಫಾರೀನ್ ನಲ್ಲಿ ಯಾವ ದೇಶ ಅಂತ ಮಗದೊಮ್ಮೆ ಕೇಳುವಾಗ  ನನಗೆ ಇವರು ಯಾಕೆ ಹೀಗೆ ಅಸಂಬದ್ದ ಪ್ರಶ್ನೆ ಕೇಳುತ್ತಾರೆ ಎನಿಸಿ  ನಾನು ಮತ್ತೂ ಬಿಡದೆ ಫಾರೀನ್ ನಲ್ಲಿ ಫಾರೀನೇ ದೇಶ ಅಂದೆ. ಟೀಚರ್‍ಗೆ ಏನನ್ನಿಸಿತೋ,  ಆಯ್ತು ಕುಳಿತುಕೋ ಅಂತ ಪಾಠ ಶುರು ಮಾಡಿದರು. ಮತ್ತೆ ನಾನು ಮುಂದಿನ ತರಗತಿಗೆ ಅಂದರೆ  ಹೈಸ್ಕೂಲ್ ಗೆ ಹೋದಾಗಲೇ ಗೊತ್ತಾದದ್ದು ಫಾರೀನ್ ಅಂದರೆ ಒಂದು ದೇಶದ ಹೆಸರಲ್ಲ,  ಅದು ಹೊರದೇಶ ಅಂತ. ಆದರೆ ಟೀಚರ್ ಅವತ್ತೇ ಅರ್ಥ ಮಾಡಿಸಬಹುದಿತ್ತು.  ಯಾಕೆ ಅವರು ಹೇಳಿಕೊಡಲಿಲ್ಲವೋ ಇವತ್ತಿಗೂ ಅರ್ಥವಾಗುತ್ತಿಲ್ಲ.

   ಪಕ್ಕದ್ಮನೆ ಕಾಲೇಜಿಗೆ ಹೋಗುವ ಅಕ್ಕ ಒಮ್ಮೆ ಅವಳ ಗೆಳತಿಯರ ಜೊತೆಗೆ ನನ್ನನ್ನ ಪರಿಚಯಿಸುತ್ತಾ ಇವಳು ನನ್ನ ನೇಬರ್ ಅಂತ ಅಂದಿದ್ದಕ್ಕೆ ನಂಗೆ ವಿಪರೀತ ಕೋಪ ಬಂದಿತ್ತು. ಯಾಕಂದರೆ ನಮಗೆ ಲೇಬರ್ ಮತ್ತು ನೇಬರ್  ಇವುಗಳ ಅರ್ಥವ್ಯತ್ಯಾಸ ಗೊತ್ತಿರಲಿಲ್ಲ. ನೇಬರ್ ಅಂದ್ರೆ ಲೇಬರ್ ಅಂತಾನೆ ತಿಳಿದುಕೊಂಡಿದ್ದೆವು. ನನ್ನ ಕೋಪಕ್ಕೆ ಕಾರಣ ತಿಳಿದು ವಿಕೋಪಕ್ಕೆ ಹೋಗದ ಹಾಗೆ ಸಮಾಧಾನಿಸಿ ಪದದ ಅರ್ಥ ಹೇಳಿ ಕೊಟ್ಟ ಮೇಲೆ ಕೊಂಚ ಮಟ್ಟಿಗೆ ನಿರಾಳ  ಆದರೂ ಅಂದಿನಿಂದ ಇಂಗ್ಲೀಷ್ ಅಂದ್ರೆ ಏನೋ ಅವ್ಯಕ್ತ ಭಯ. ಈಗ ಶಾಲಾ ಕಾಲೇಜು ಮುಗಿದು ಇಂಗ್ಲೀಷಿನಲ್ಲೇ ಪರೀಕ್ಷೆ ಬರೆದು ಇಂಗ್ಲೀಷ್ ಮೀಡಿಯಮ್ ಮಕ್ಕಳಿಗಿಂತ ಹೆಚ್ಚು ಅಂಕ ತೆಗೆದು ಪಾಸಾಗಿ  ಮಾತನಾಡುವಷ್ಟರ ಮಟ್ಟಿಗೆ ಆ ಭಾಷೆಯ ಮೇಲೆ ಹಿಡಿತ ಸಿಕ್ಕರೂ  ಮಾತನಾಡಲೊಂಥರಾ ತರ. ಇಂಗ್ಲೀಷ್ ಮೋಹ ಅಂಟಿಸಿ ಕೊಂಡ  ಮಿತ್ರರು ಸಿಕ್ಕಾಗ ಮೆಲ್ಲಗೆ ನುಣುಚಿಕೊಂಡು ಆದಷ್ಟೂ ದೂರವೇ ಉಳಿದು ಬಿಡುತ್ತೇನೆ. ಈಗ ಮೊದಲಿನಂತಲ್ಲ,  ತೊದಲು ನುಡಿಯುವ ಎಳೆ ಮಕ್ಕಳೂ ಕನ್ನಡಕ್ಕಿಂತ ಸಲೀಸಾಗಿ ಇಂಗ್ಲೀಷನ್ನೇ ಬಳಸುವಷ್ಟರ ಮಟ್ಟಿಗೆ ಹವೆ ಬದಲಾಗಿ ಬಿಟ್ಟಿದೆ. ನಾನು ಅಭ್ಯಾಸ ದೋಷದಿಂದ  ಅಚ್ಚ ಕನ್ನಡ ಪದ ಬಳಸಿದರೆ ಅವುಗಳು ಕೊಂಚ ಕನ್ಪ್ಯೂಸ್ ಮಾಡಿಕೊಂಡು  ನನ್ನನ್ನು ಎವೆಯಿಕ್ಕದೆ ಮಿಕಿ ಮಿಕಿ ನೋಡುವಾಗ. . . .  ನಾನೋ ಕನ್ನಡ ಕನ್ನಡ ಅಹಾ ! ಸವಿಗನ್ನಡ.   ಕನ್ನಡವೇ ಸತ್ಯ.  ಕನ್ನಡವೇ ನಿತ್ಯ  ಅಂತ ಸಣ್ಣದಾಗಿ ಗುನುಗಿಕೊಳ್ಳುತ್ತಲೇ ಇರುತ್ತೇನೆ.

*****

ಸ್ಮಿತಾ ಅಮೃತರಾಜ್: ಗೃಹಿಣಿ. ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸ. ಬರವಣಿಗೆ ಇವರ ಹವ್ಯಾಸ. ಪ್ರಕಟಿತ ಕವನ ಸಂಕಲನಗಳು "ಕಾಲ ಕಾಯುವುದಿಲ್ಲ" ಮತ್ತು "ತುಟಿಯಂಚಲ್ಲಿ ಉಳಿದ ಕವಿತೆಗಳು."

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕನ್ನಡವೇ ನಿತ್ಯ: ಸ್ಮಿತಾ ಅಮೃತರಾಜ್

  1. Kaal eshtu bega badalaagide..Iga yeshto vishyagalannu ENGLISH nalli heLuvude sulabha.
    Yaavudakku kannadavanna preethisi bere bhashegalannu (adarallu visheshavagi Englih) gouravisuvudaralli kannadigaru yaavagalu ondu kai munde..allave?

Leave a Reply

Your email address will not be published. Required fields are marked *