ಲೇಖನ

ಕನ್ನಡದ ಕಣ್ಮಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಂದೆ ತಾಯಿಗೆ ತಮ್ಮ ಮಗ ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಇಂಗ್ಲೀಷ್ ಮಾತನಾಡುತ್ತಾ ದೊಡ್ಡ ಅಧಿಕಾರಿಯಾಗಿ ದೊಡ್ಡ ಪಟ್ಟಣದಲ್ಲಿ ದೊಡ್ಡ ಭಂಗಲೆಯಲ್ಲಿದ್ದು ಎಲ್ಲರ ಹತ್ತಿರ ಸೆಲ್ಯೂಟ್ ಹೊಡೆಸಿಕೊಳ್ಳುತ್ತಾ ಕಾರಲ್ಲಿ ಓಡಾಡಬೇಕಂತ ಕನಸು. ನನಸು ಮಾಡಿಕೊಳ್ಳಲು ಹಳ್ಳಿಯ ಕನ್ನಡ ಶಾಲೆ ಬಿಡಿಸಿ ಪೇಟೆ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಅವನಿಗೂ ಪೇಟೆ ಬಣ್ಣಬಣ್ಣದ ತಳುಕುಬಳುಕಿನ ಬದುಕು ಖುಷಿ! ಹೊಸ ಶಾಲೆ, ದೊಡ್ಡ ಸುಂದರ ಆಕರ್ಷಕ ಕಟ್ಟಡ , ಮನಸ್ಸೆಳೆಯುವ ವಾತಾವರಣ, ಶಿಸ್ತಾಗಿ ಬೆಳೆಸಿದ ಕೈತೋಟ, ಸ್ಮಾರ್ಟ್ ಕ್ಲಾಸ್ ಗಳು, ಸೈನ್ಸ್ ಲ್ಯಾಬು, ಹೊಸ ಶಿಕ್ಷಕರು, ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಹೊಸ ಜತೆಗಾರರು, ಶಿಸ್ತಿಗೆ ಮೊದಲ ಅಧ್ಯತೆ, ಲಂಡನ್ನಿನ ಭಾಷಾ ವಾತಾವರಣ, ಮೈಯನ್ನು ಅಂಕೆಯಲ್ಲಿಟ್ಟ ಸೂಟಿನಂತಹ ಯುನಿಫಾರಂ ಜತೆಗೆ ದೇಹ ಮನಸ್ಸುಗಳೆರಡನ್ನು ಅಂಕೆಯಲ್ಲಿಡುವ ಹೊಸ ರೀತಿ ರಿವಾಜುಗಳು, ಇಂಗ್ಲಿಷ್ ಮುತ್ತುಗಳ ಉದುರಿಸುವ ಶಿಕ್ಷಕರು, ಗಿಳಿ ಪಾಠಗಳು, ಓದುವುದು, ಬರೆಯುವುದು, ಪ್ರಾಜೆಕ್ಟ್ ವರ್ಕ್ ಮಾಡೂ ಮಾಡೂ ಅಂತ ವಿಚಾರಿಸದೆ ಮಾಡುವುದು, ಅಂಕ ಗಳಿಸು ಗಳಿಸು ಅಂತ ಗಳಿಸುವುದು, ಒಂದು ನಗು, ಸಣ್ಣ ಚೇಷ್ಟೆಯ ಉಸಿರು, ಒಂದು ಹಾಸ್ಯದ ನಗೆಯ ಹೆಸರು, ಒಂದೂ ಚೇಷ್ಟೆ ಕುಚೇಷ್ಟೆ ಇಲ್ಲವೇ ಇಲ್ಲ! ಎಲ್ಲಾ ಗಂಭೀರ! ಜಡ್ಜ್ ಹಾಲಿನಂತೆ ಸೈಲೆನ್ಸ್ ಎಲ್ಲಾ ಹೊಸದು ಖುಷಿಯೋ ಖುಷಿ! ಆ ಶಾಲೆ ಯೂನಿಫಾರಮ್ ಹಾಕಿಕೊಂಡು ತನ್ನ ಊರಿನ ಸ್ನೇಹಿತರೊಂದಿಗೆ ಗತ್ತಿನಿಂದ ನಡಿಯುತ್ತಿದ್ದುದು ಇನ್ನೂ ಖುಷಿ! ಹಳ್ಳಿಯಲ್ಲಿ ಒಬ್ಬರ ಹಿಂದೆ ಒಬ್ಬರು ಶಾಲಾವಾಹನ ಹತ್ತುವುದು ಶಾಲೆ ತಲುಪಿದಮೇಲೆ ಒಬ್ಬರನಂತರ ಒಬ್ಬರು ಇಳಿದು ಸಾಲಾಗಿ ಹೋಗುವುದು ಪೋಲೀಸ್ ಪಿರೇಡ್ ನೆನಪಿಸುತಿತ್ತು. ಅರ್ಥವೇ ಗೊತ್ತಿರದ ಇಂಗ್ಲಿಷ್ ಭಾಷಾ ಪ್ರಾರ್ಥನೆಯನ್ನು ಭಕ್ತಿಯಿಂದ ಹಾಡುವುದು ಗಲಾಟೆ ಮಾಡದೆ ಬಾಯಿ ಹೊಲಿದುಕೊಂಡು, ಚೇಷ್ಟೆ ಮಾಡದೆ ಕೈಕಾಲು ಕಟ್ಟಿಕೊಂಡು ಸ್ವಯಂಬಂಧಿಯಾಗಿ ಶಿಸ್ತಿನ ಸಿಪಾಯಿಯ ಪ್ರತಿಮೆಯಂತೆ ಕೂಡುವುದು! ಕಲ್ಲು, ಮಣ್ಣು ಮುಟ್ಟದಂತೆ, ಗಿಡ, ಮರ ಹತ್ತಿ ಅಭ್ಯಾಸವಿದ್ದವ ಅವುಗಳ ಹತ್ತದಂತೆ, ಮುಟ್ಟದಂತೆ, ಎಲೆ, ಹೂ ಕೀಳದಂತಿದ್ದು ತನಗೆ ತಿಳಿದುದ, ಇಷ್ಟವಾದುದ ಮಾಡಲಾಗದೆ ಶಿಕ್ಷಕರು ಹೇಳಿದುದನ್ನಷ್ಟೇ ಪಾಲಿಸುವುದು ಮೊದಮೊದಲು ಖುಷಿಯೆನಿಸಿದರೂ ಸ್ವಂತಿಕೆಗೆ ಸ್ವತಂತ್ರವೇ ಇರದಿರುವುದರಿಂದ, ಇಂಗ್ಲಿಷಲ್ಲೇ ಎಲ್ಲವನ್ನು ಅಭಿವ್ಯಕ್ತಿಸಲು, ಅನಿಸಿದ್ದನ್ನು ಸಲೀಸಾಗಿ ಹೇಳಲು ಆಗದಿರುವುದರಿಂದ ಶಾಲೆ ಜೈಲು, ತನ್ನ ಸ್ನೇಹಿತರು ಪಂಜರದ ಗಿಳಿಗಳು ಅನಿಸತೊಡಗಿತು. ಜತೆಗೆ ಅರ್ಥವಾಗದ ಪಾಠಗಳಿಂದನೂ ಆನಂದ ಕೆಲವೇ ದಿನಗಳಲ್ಲಿ ಮಾಯವಾಯಿತು.

ಒಂದು ದಿನ ಯುಕೆಜಿ ಮಕ್ಕಳಿಗೆ ಒಂದು ರೈಮ್ ಹೇಳಿಕೊಡುತ್ತಾ ಸ್ವಲ್ಪಸಮಯ ಅವರನ್ನು ಗಲಾಟೆ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ಹಳ್ಳಿಹೈದನಿಗೆ ಒಬ್ಬ ಶಿಕ್ಷಕರು ವಹಿಸಿದರು. ಯಾವ ರೈಮ್ ಹೇಳಿಕೊಡಲಿ ಸರ್ ಎಂದು ಕೇಳಿದ. ಅವರು ಒಂದು ರೈಮ್ ಹೇಳಿಕೊಟ್ಟು ಒಂದು ಪುಸ್ತಕವನ್ನೂ ಕೊಟ್ಟರು ಅದನ್ನು ಓದುವಂತೆ ಸೂಚಿಸಿದರು. ಮಾದರಿಯಾಗಿ ಓದಿದ. ಶಿಕ್ಷಕರಿಗೆ ಇನ್ನಿಲ್ಲದ ಖುಷಿಯಾಯ್ತು. ಆಯ್ತು ಹೋಗಿ ಯುಕೆಜಿ ಮಕ್ಕಳಿಗೆ ಹೀಗೇ ಮತ್ತೆ ಮತ್ತೆ ಹೇಳಿಕೊಡು ನಂತರ ಒಬ್ಬೊಬ್ಬರನ್ನೇ ಹೇಳಿಸು ಎಂದರು. ಆ ಪದ್ಯದ ಕನ್ನಡ ಅರ್ಥ ಏನು ಸರ್ ಅಂದ. ಕನ್ನಡದಲ್ಲಿ ಮಾತನಾಡುವಂತಿಲ್ಲ ಇಂಗ್ಲೀಷ್ ನಲ್ಲಿ ಮಾತ್ರ ಮಾತನಾಡಬೇಕು ಅಂತಹದರಲ್ಲಿ ನೀನು ಬಂದು ಇನ್ನೂ ಒಂದು ವಾರನು ಆಗಿಲ್ಲ ಕನ್ನಡದಲ್ಲಿ ಮಾತನಾಡುತ್ತಾ ಕನ್ನಡ ಅರ್ಥಬೇರೆ ಹೇಳೂ ಅಂತ ಕೇಳ್ತಿಯ? ಆದರೂ ಜಾಣ ಇದಿಯ! ಪರವಾಗಿಲ್ಲ ಇವತ್ತೊಂದಿನ ಕನ್ನಡ ಅರ್ಥ ಹೇಳುತ್ತೇನೆ! ನಾಳೆಯಿಂದ ಕನ್ನಡ ಮಾತನಾಡಬಾರದು! ಎಂದು ಆಜ್ಞಾಪಿಸಿ ಆದರೆ ಅಯ್ಯೋ! ಕನ್ನಡ ನಾಡಲ್ಲಿ ಹುಟ್ಟಿದರೂ ಕನ್ನಡ ಅರ್ಥ ನನಿಗೂ ಸರಿಯಾಗಿ ಹೇಳಲು ಬರುತ್ತಿಲ್ಲವೆ ಇವನಿಗೆ ಹೇಗೆ ಹೇಳುವುದು? ಎಂದು ನಾಚಿಕೊಳ್ಳುತ್ತಾ, what a shame, what a shame ಎಂದುಕೊಳ್ಳುತ್ತಾ ಯೋಚಿಸುತ್ತಾ ತುಟಿಗಳ ತೋರುಬೆರಳಿಂದ ಬಡಿದುಕೊಳ್ಳುತ್ತಾ ಅದು ಸಣ್ಣ ರೈಮ್ ತಾನೆ ಎಂದು ಕನ್ನಡ ಅರ್ಥ ಹೇಳುವ ಪ್ರಯತ್ನ ಮಾಡತೊಡಗಿದರು. ಕನ್ನಡ ಮೀಡಿಯಂನಿಂದ ಬಂದುದಿಯ ಅಂತ ಇವತ್ತೊಂದು ದಿನ ಹೇಳುವೆ ಇನ್ನೊಂದು ದಿನ ಕನ್ನಡದಲ್ಲಿ ಹೇಳು ಅಂತ ಕೇಳಬೇಡ.

Rain rain go away
Come again another day
Little Jhony wants to play
Rain rain go away.

ಮಳೆಯೇ ಮಳೆಯೇ ದೂರ ಹೋಗು
ಇನ್ನೊಂದು ದಿನ ಮತ್ತೆ ಬಾ
ಪುಟಾಣಿ ಜಾನಿ ಆಡಬೇಕಂತೆ
ಮಳೆಯೆ ಮಳೆಯೆ ದೂರ ಹೋಗೂ‌ – ಎಂದು ತಡವರಿಸುತ್ತಾ ಹೇಳಿದರು.

ತಕ್ಷಣ ಎಗ್ಗಿಲ್ಲದೆ ಸರೂ, ಈ ರೈಮು ಸರಿಯಿಲ್ಲ! ನಾನು ಹೇಳಿಕೊಡಕಿಲ್ಲ ಎಂದು ದೈರ್ಯವಾಗಿ ಕಡ್ಡಿಮುರಿದಂತೆ ಹೇಳಿಬಿಡುವುದೆ ಆ ಹಳ್ಳಿಹೈದ! ಹೌಹಾರಿ ಎಲ್ಲಾ ವಿದ್ಯಾರ್ಥಿಗಳು ಅವನನ್ನೇ ನೋಡತೊಡಗಿದರು! ಶಿಕ್ಷಕರಿಗೂ ಅವನ ಮಾತಿನ ಶಾಕ್ ಸಹಿಸಲಾಗಲಿಲ್ಲ. ಆದರೂ ಹೊಸ ಹುಡುಗ ಎಂದು ಸಮಾಧಾನ ಮಾಡಿಕೊಂಡರೂ ಮುಖದಲ್ಲಿ ಅಸಹನೆ ಎದ್ದುಕಾಣುತ್ತಿತ್ತು. ” ಯಾಕೋ ಸರಿಯಿಲ್ಲ? ” ಎಂದರು ಮಾಸ್ಟರ್ ಗಡುಸುದನಿಯಲ್ಲಿ.

ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ!
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ …. !

ಎಂದು ದುಃಖದಲ್ಲಿ ಹಾಡುತ್ತಾ, ಹೀಗೆ ಎಲ್ಲರೂ ದೇವರನ್ನು ಮಳೆಗಾಗಿ ಧ್ಯಾನ ಮಾಡುತ್ತಾ ಕತ್ತೆ, ಕಪ್ಪೆ ಮದುವೆಗಳ ಮಾಡಿ ಮಳೆಯೇ ಮಳೆಯೇ ಬಾ ಎಂದು ಕರಿತಿರಬೇಕಾದರೆ, ದನಕರು, ಕಾಡು ಪ್ರಾಣಿಗಳು ನೀರಿಲ್ಲದೆ ಸಾಯುತ್ತಿರಬೇಕಾದರೆ, ಊರಿಗೆ ನುಗ್ಗಿ ಅನಾಹುತ ಮಾಡುತ್ತಿರಬೇಕಾದರೆ, ಕೆರೆಗಳೆಲ್ಲಾ ಒಣಗಿ ಬಿರುಕು ಬಿಟ್ಟಿರಬೇಕಾದರೆ, ಬೋರುಗಳೆಲ್ಲಾ ವಿಫಲವಾಗಿ ನೀರಿಗೆ ಆಹಾಕಾರ ಉಂಟಾಗಿರಬೇಕಾದರೆ, ರೈತರು ಮುಗಿಲು ನೋಡುತ್ತಾ ಇರುವ ಅಡಿಕೆ ತೆಂಗಿಗೆ ಎಲ್ಲೆಲ್ಲಿಂದಲೋ ನೀರು ಕೊಂಡು ಲಾರಿ ಟ್ರಾಕ್ಟರ್ ಗಳಲ್ಲಿ ತಂದು ಅವುಗಳ ಬದುಕಿಸುವ ಶತ ಪ್ರಯತ್ನ ಮಾಡುತ್ತಿರಬೇಕಾದರೆ ಮಳೆಯೇ ಮಳೆಯೇ ದೂರ ಹೋಗಿಬಿಡು ಎಂದು ಹೇಳುವುದು ಸರಿಯೇ ಸರೂ? ನಾನು ಹೇಳಿಕೊಡುವುದಿಲ್ಲ! ನಮ್ಮೂರಲ್ಲಿ ನೀರೇ ಸಿಕ್ತಾ ಇಲ್ಲ! ನನಿಗೆ ಮಳೆಬೇಕು. ಬೆಳೆಬೇಕು! ನೀರುಬೇಕು! ಮಳೆಯಲ್ಲಿ ನಾನು ಕುಣಿಬೇಕು! ತೃಪ್ತಿಯಿಂದ ಸ್ನಾನ ಮಾಡದೆ ಬಹಳ ದಿವಸ ಆಯ್ತು, ಈಜಾಡದು ಮರತೇ ಹೋದಂಗಾಗೆದ! ನಮ್ಮೂರಲ್ಲಿ ಒಂದು ಕೊಡ ನೀರಿಗಾಗಿ ಸರದಿಯಲ್ಲಿ ನಿಂತು ದಿನವೆಲ್ಲಾ ಕಾಯಬೇಕಿದೆ! ಮಳೆ ಬರಲೆಂದು ತಾನೆ ಗುಲುಕಮ್ಮನನ್ನು ಹೊತ್ತುಕೊಂಡು ಸ್ನೇಹಿತರೊಂದಿಗೆ ” ಗುಲುಕಮ್ಮಾ ಗುಲುಕಮ್ಮಾ ಎಲ್ಲಾಡಿ ಬಂದೆ? ” ಎಂದು ಹಾಡು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸುತ್ತಾ ಮನೆಮನೆಗೂ ಹೋದಾಗ ಈ ಹಾಡು ಕೇಳಿ ಮನೆಯವರು ತಕ್ಷಣ ಹೊರಬಂದು ಒಂದೋ ಎರಡೋ ಚಂಬು ತಣ್ಣೀರ ಗುಲುಕಮ್ಮನ ಸಮೇತ ನನಿಗೆ ಮಳೆ ಬರಲೆಂದು ಸುರಿದು ದವಸ ದಾನ್ಯ ದಾನಮಾಡುತ್ತಿದ್ದುದು. ಬಾ ಗುಲುಕಮ್ಮ ನಿನಿಗೆ ಎಲ್ಲಾ ಮನೆಯವರು ನೀರು ಹಾಕಿದರು ಶೀತವಾಗುವುದಿಲ್ಲವಾ? ನಿನಿಗೆ ಮಳೆ ಬರಲಿ ಅಂತ ಎಷ್ಟು ಕಳಕಳಿನೊ ಅಂತ ಕೆಲವರು ಅಂದುದು ನೆನಪಾಗಿ ನಾನು ಆ ರೈಮು ಹೇಳಿಕೊಡಕಿಲ್ಲ ಸರೂ, ಹೇಳಿಕೊಡಕಿಲ್ಲ ಸರೂ …. ಅಂದ. ಅಷ್ಟೇ ಅಲ್ಲ ನಮ್ಮ ಅಣ್ಣ ಒಂದು ಜನಪದಗೀತೆ ಹೇಳುತ್ತಾನೆ ಅದನ್ನು ಕೇಳಿ ಸರೂ :

ಮಳೆಗಳಿನ್ಯಾಕೋದವೋ ಶಿವಶಿವಾ
ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದಾರೆ ಬೆಂಕಿಯ ಮಳೆ ಸುರಿಯೆ
ಮಳೆಗಳಿನ್ನ್ಯಾಕೋದವೋ! …..

ಎಂದು ಹೇಳಿ ನಮಗೆ ಮಳೆಬೇಕು ಸರೂ. ರೈತರು ಮಾಗಿ ಮಾಡಿ, ಸಾಲಸೂಲ ಮಾಡಿ ಬೀಜ ಗೊಬ್ಬರ ತಂದಿಟ್ಟುಕೊಂಡು ಮುಗಿಲಿಗೆ ಕಣ್ಣು ನೆಟ್ಟಿರುವಾಗ ನನ್ನಪ್ಪ ಚಿಕ್ಕಪ್ಪಂದಿರು ದನಕರುಗಳು ಕುಡಿಯಲು ನೀರಿಲ್ಲ ಮೇವಿಲ್ಲ ಎಂದು ಪ್ರೀತಿಯಿಂದ ಸಾಕಿದ ದನ ಕರುಗಳ ಮಾರಲು ಪಟ್ಟಣಕ್ಕೆ ಹೊರಟಿರುವಾಗ ನಾನು ಆ ರೈಮು ಹೇಗೆ ಹೇಳಿಕೊಡಲಿ ಸರೂ ಎಂದ ದುಃಖದಲ್ಲಿ!

ಮಾಸ್ಟ್ರಿಗೆ ಅವನು ಹೇಳಿದ್ದು ಸರಿಯೆನಿಸಿದರೂ ತಾನು ಹೇಳಿದ ಮಾತು ಕೇಳುತ್ತಿಲ್ಲವಲ್ಲ ಎಲ್ಲರೂ ಹೀಗೆ ಮಾಡಿಯಾರೆಂಬ ಆತಂಕದಲ್ಲಿ ” stupid, do as I say! ” ಎಂದು ಗದರಿದರು! ಆದರೂ ಮನಸ್ಸಿನಲ್ಲಿ ಅವನು ಹೇಳಿದ್ದು ಸರಿಯಲ್ಲವೆ? ನಮಗೆ ಮಳೆ ಬೇಕು! ಮಳೆಯೆ ಇಂದು ಬರಬೇಡ ದೂರ ಹೋಗಿಬಿಡು ಎಂದು ಹಿಗ್ಗಿನಿಂದ ಬಹಳ ವರುಷದಿಂದ ಹರುಷದಿಂದ ಕುಣಿಯುತ್ತಾ ಹೇಳಿಕೊಡುತ್ತಿದ್ದೇವಲ್ಲ ಇದು ಸರಿಯೇ? ಅವನಿಗೆ ಹೊಳೆದದ್ದು ನಮಿಗೇಕೆ ಇಷ್ಟೂ ದಿನ ಹೊಳೆಯಲಿಲ್ಲ? ಎಂದು ಯೋಚನೆಯಲ್ಲಿ ಮುಳುಗಿದರು. ಉಳಿದ ಈ ಮಕ್ಕಳು ಏಕೆ ಅವನಂತೆ ಪ್ರಶ್ನಿಸುತ್ತಿಲ್ಲ? ಈ ಮಕ್ಕಳಿಗೆ ಪ್ರಶ್ನಿಸುವುದಕ್ಕೆ ಭಾಷೆಯ ತೊಡಕಿನ ಜತೆಗೆ ಪ್ರಶ್ನಿಸುವ ಸ್ವಾತಂತ್ರವನ್ನೇ ನಾವು ಇಲ್ಲವಾಗಿಸಿದ್ದೇವಾ? ಅದುಕ್ಕೇ ಈ ಮಕ್ಕಳು ನಮ್ಮನ್ನು ಪ್ರಶ್ನಿಸುತ್ತಿಲ್ಲವಾ? ಇಂಗ್ಲಿಷ್ ಜತೆಗೆ ಅವರ ಭಾಷೆಯಲ್ಲೇ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರೆ ಅವರ ಪ್ರತಿಭೆಯ ಅನಾವರಣವಾಗಿ ಮಾತನಾಡುವ ಕಲೆ ಉತ್ತಮವಾಗುತಿತ್ತೇನೋ? ಸ್ವತಂತ್ರವಾಗಿ ಯೋಚಿಸುತ್ತಿದ್ದರೇನೋ ಆಗ ಇದು ಬೇರೆ ದೇಶದವರು ರಚಿಸಿದ ರೈಮು. ಆ ದೇಶದಲ್ಲಿ ಆಟವಾಡುವುದಕ್ಕೇ ಬಿಡುವುಕೊಡದಂತೆ ಮಳೆ ಸುರಿಯುತ್ತಿರುತ್ತದೆ! ಅದಕ್ಕೆ ಆ ಇಂಗ್ಲೆಂಡ್ ನವರು ಈ ಥರ ಬರೆದಿದ್ದಾರೆ ಎಂದು ಹೇಳಿ ಅರ್ಥೈಸಿ ಆ ದೇಶಕ್ಕೂ ನಮ್ಮ ದೇಶಕ್ಕೂ ಇರುವ ಹವಾಮಾನ, ಕಾಲ ಮತ್ತು ಋತುಗಳ ವ್ಯತ್ಯಾಸನೂ ತಿಳಿಸಬಹುದಿತ್ತು ಆದರೂ ಆ ರೈಮನ್ನು ನಮ್ಮ ದೇಶದಲ್ಲಿ ಹೇಳಬಾರದಲ್ಲವೆ? ಎಂದು ಯೋಚಿಸುತ್ತಾ ಇನ್ನೊಂದು ಮುಖದ ಚಿಂತನೆಗೆ ಹೊರಟರು. ಆ ರೈಮು ಹೇಳುವುದರಿಂದ ಮಳೆ ಬರುವುದಿಲ್ಲವೆ? ಎಂದೂ ಚಿಂತಿಸತೊಡಗಿದರು. ರಾಗಗಳಿಂದಲೇ ಮಳೆ ತರಿಸಿರುವವರು ಭಾರತೀಯರು! ದೀಪಕಮಾಲ ರಾಗದಿಂದ ದೀಪಗಳ ಬೆಳಗಿಸಿದ ಮಾಂದಾತರು ಇರುವರೆಂದು ಕೇಳಿದ್ದೇವೆ. ಮಂತ್ರಗಳ ಉಚ್ಛಾರ ಮಾತ್ರದಿಂದ ಅನೇಕ ಕಾರ್ಯಗಳು ಸಿದ್ದಿಸುತ್ತವೆಂದು ತಿಳಿದಿದ್ದೇವೆ. ನಿತ್ಯ ಮಂತ್ರೋಚ್ಛಾರಗಳ ಮಾಡುತ್ತೇವೆ. ಅವಿಲ್ಲದೆ, ಅವುಗಳ ಉಚ್ಚರಿಸುವವರಿಲ್ಲದೆ ಯಾವ ಶುಭ ಕಾರ್ಯಗಳೂ ನಡೆಯುವುದಿಲ್ಲ! ಈ ರೈಮ್ ಹೇಳುವುದರಿಂದ ಮಳೆ ಬರದಂತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲವಲ್ಲವೆ? ಸುಮ್ಮಸುಮ್ಮನೆಯಾಗಲಿ ನಕಾರಾತ್ಮಕವಾಗಿ ಮಾತನಾಡಬೇಡಿ ನೀವು ಅಂದುದಕ್ಕೆ ಭಗವಂತ ಅಸ್ತು ಅಂದುಬಿಡುತ್ತಾನೆ ಎಂದು ಹಿರಿಯರು ಹೇಳುತ್ತಿದ್ದರು. ಎಂದು ಅ ಹಳ್ಳಿಹೈದನ ಮಾತಿನ ಸುತ್ತನೇ ಆ ಶಿಕ್ಷಕರ ಮನಸ್ಸು ಅಂದು ಗಿರಕಿ ಹೊಡೆಯುತ್ತಿತ್ತು!

ನಮ್ಮ ಶಾಲೆಯಲ್ಲಾಗಿದ್ದರೆ ಹೌದು ಕಣೋ ಈ ರೈಮು ನಮ್ಮ ದೇಶಕ್ಕೆ ಸರಿಹೊಂದುವುದಿಲ್ಲ. ನೀನು ಹೇಳುವುದು ಸರಿ. ನೀನು ತುಂಬ ಜಾಣ, ಭಲೆ, ಭೇಷ್! ಅನ್ನುತಿದ್ದರು. ಇಲ್ಲಿ ನೋಡಿದರೆ ಸ್ಟುಫಿಡ್ ಸೆಟಪ್ ಯುವರ್ ಮೌತ್, ಡು ಯಾಸ್ ಐ ಸೇ ಅನ್ನುತ್ತಿದ್ದಾರೆ! ಈ ಶಾಲೆಯಲ್ಲಿನ ಮರದಲ್ಲಿನ ಒಂದು ಹಣ್ಣು ತಿನ್ನಲು ಇರಲಿ ಮುಟ್ಟಲು ಬಿಡುವುದಿಲ್ಲ! ಅಲ್ಲಿಯಾದರೆ ಕಾರೆ ಹಣ್ಣು ಬಾರೆಹಣ್ಣು, ಅತ್ತಿ, ನೇರಲ, ಮಾವು ತಿನ್ನುತ್ತಾ ಮರಗಳ ಹತ್ತುತ್ತಾ, ಮರಕೋತಿ ಆಡುತ್ತಾ, ಚಿನ್ನಿದಂಡ, ಲಗೋರಿ, ಹುಲಿ ಹಸು ಕಬಡ್ಡಿ ಮುಂತಾದ ಆಟಗಳ ಆಡುತ್ತಾ, ಹೊರಸಂಚಾರ ಹೋದಾಗೊಮ್ಮೆ ಏಕದಳ ದ್ವಿದಳ ಸಸ್ಯಗಳ ಕಿತ್ತು ಬೇರು, ಎಲೆ, ಬೀಜಗಳ ವ್ಯತ್ಯಾಸ ವಿವರಿಸಿದ್ದು, ಬೆನ್ನತಟ್ಟಿಸಿಕೊಂಡದ್ದು, ಜತ್ರೋಪ ಗಿಡದ ಹಾಲಿನಿಂದ ಗುಳ್ಳೆಗಳ ಗಾಳಿಯಲ್ಲಿ ಊದಿ ಹಿಡಿಯಲು ಹೋಗುತ್ತಿದ್ದು ಅದರಿಂದ ಇಂಧನ ತಯಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಶಿಕ್ಷಕರು ವಿವರಿಸಿದ್ದು ಎಲ್ಲಾ ನೆನೆಪಾಗತೊಡಗಿ ಇಲ್ಲಿ ಬೆಳೆ ಬೆಳೆಯುವ ಮಣ್ಣು ಸಹ ಮುಟ್ಟಲು ಬಿಡುವುದಿಲ್ಲ, ಬೆಳೆಯ ಇಳುವರಿ ಹೆಚ್ಚಿಸುವ ಸಗಣೆಯನ್ನು dust, ಗಲೀಜು, ಟಯ್ಲೆಟ್, ಕಕ್ಕ ಅಂತರೆ, ಕಬಡ್ಡಿ, ಲಗೋರಿ, ಮರಕೋತಿ ಆಡಲು ಸ್ನೇಹಿತರ ಕರೆದರೆ ನಾನು ಬರದಿಲ್ಲ ನಾನು ಬರದಿಲ್ಲ ಯೂನಿಫಾರಂ ಗಲೀಜಾಗುತ್ತೆ, ಹರಿದು ಹೋಗುತ್ತೆ ಟೀಚರ್ ಬೈತಾರೆ, ಅವನ್ನೆಲ್ಲಾ ಆಡದು ಕಷ್ಟ ತೊಂದರೆ ಅಂತಾರೆ. ಆಟ ಆಡಕೆ ಬಿಡಲ್ಲ! ಕನ್ನಡ ಮಾತನಾಡಲು ಬಿಡಲ್ಲ! ಓದು, ಬರಿ, ಶಾಂತಿ, ಶಿಸ್ತು ಅಂತಾರೆ, ಬೇಜಾರು! ನಾನು ಮತ್ತೆ ನಮ್ಮೂರ ಶಾಲೆಗೆ ಹೋಗೋಣವೇ? ಅಲ್ಲಿ ಎಲ್ಲಾರೂ ಆಟಕ್ಕೆ ನನ್ನ ಸೇರಿಸಿಕೊಳ್ಳೋ ನನ್ನ ಸೇರಿಸಿಕೊಳ್ಳೋ ಎಂದು ತಾ ಮುಂದು ನಾ ಮುಂದು ಅಂತ ಬರ್ತಾರೆ! ಬ್ಯಾಗಲ್ಲೇ ಗೋಲಿ, ಗಜ್ಜಗ, ಬುಗರಿ, ಚಂಡು, ಚಿನ್ನಿದಂಡ .. ಇಟ್ಟುಕೊಂಡಿರುತ್ತಾರೆ. ಬ್ಯಾಟು ಬಾಲು, ನೆಟ್, ಕೇರಮ್ ಬೋರ್ಡ್, ರಿಂಗ್, ಸ್ಕಿಪ್ಪಿಂಗ್ ರೋಪ್ ಮುಂತಾದವುಗಳ ಶಾಲೆಲೆ ಕೊಡ್ತಾರೆ ಅಂತ ಅವುಗಳ ನೆನೆಯುತ್ತಾ ಚಿಂತಾ ಮಗ್ನನಾದ ಆ ಹಳ್ಳಿಹೈದ.

ಮತ್ತೊಂದು ದಿನ ಗಣಿತದ ಮಾಸ್ಟ್ರು ಬಂದು ಒಂದು ಬಾಯಿ ಲೆಕ್ಕ ಮಾಡಲು ಹೇಳುತ್ತಾರೆ. Sheep seller sells each sheep for rs 300. He sells 9 Sheep. How much money will he collelct? ಎಂದಾಗ ಎಲ್ಲರೂ ಲೆಕ್ಕ ಮಾಡತೊಡಗಿದರು. ಇವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ತಲೆ ಕೆರೆದುಕೊಳ್ಳುತ್ತಾ ಕುಳಿತ. ಬೇಜಾರಾಗಿ ಕೊನೆಗೆ ಬಯದಿಂದ ಬಾಯಿಬಿಡಲೋ ಬೇಡವೋ ಎಂದು ಬಾಯಿ ಬಿಟ್ಟು ” ಸರೂ ನನಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಒಸಿ ಕನ್ನಡದಲ್ಲಿ ಹೇಳಿ ” ಅಂದ. ಒಂದು ಕುರಿಯ ಬೆಲೆ 300 ರೂ ಆದರೆ ಒಂಬತ್ತು ಕುರಿಗೆ ಎಷ್ಟಾಗುತ್ತದೆ ಎಂದರು. ಎಲ್ಲರೂ ಲೆಕ್ಕ ಮಾಡುವಲ್ಲಿ ಮಗ್ನರಾಗಿದ್ದರು. ಕೆಲವರು ಆ 300 ರನ್ನು ಒಂಬತ್ತು ಸಾರಿ ಕೂಡಲು ಪ್ರಯತ್ನಿಸಿದರೆ ಇನ್ನೂ ಕೆಲವರು 300 x 9 ಎಂದು ಗುಣಿಸಲು ಮುಂದಾಗುತ್ತಾರೆ. ಎಲ್ಲರೂ ಲೆಕ್ಕದಲ್ಲಿ ಮಗ್ನರಾಗಿದ್ದರೆ ಆ ಹುಡುಗ ಮಾತ್ರ ಯಾಕೋ ಲೆಕ್ಕ ಸರಿಯಿಲ್ಲವಲ್ಲಾ ಅಂತ ಯೋಚಿಸತೊಡಗುತ್ತಾನೆ. ಶಿಕ್ಷಕರು ಏನು ಮಾಡುತ್ತಿದ್ದೀಯ ಲೆಕ್ಕ ಮಾಡು ಅಂದರೆ ತೋರು ಬೆರಳಿಂದ ಕಿವಿ ಮುಂದಿನ ತಲೆ ಕುಟ್ಟಿಕೊಳ್ಳುತ್ತಿದ್ದೀಯಲ್ಲಾ? ಎಂದು ಪ್ರಶ್ನಿಸುತ್ತಿದ್ದಂತೆ ಹಾ! ಸರೂ, ನೀವು ಹಾಕಿದ ಲೆಕ್ಕ ಸರಿಯಿಲ್ಲ! ಅನ್ನುವುದೆ! ಇಡೀ ಶಾಲೆ ಇವನನ್ನೇ ನೋಡುತ್ತದೆ. ನಿನ್ನ ಹಳ್ಳಿ ಹುಡುಗ ಅಂತ ಕರೆಯುವುದು ಇದುಕ್ಕೆ! ನಿನಿಗೆ ಲೆಕ್ಕ ಮಾಡಲು ಬರದೆ ಇರುವುದಕ್ಕೆ ಲೆಕ್ಕನೇ ಸರಿಯಿಲ್ಲಾ ಅಂತ ಹೇಳುತ್ತೀಯಲ್ಲ? ನನಿಗೆ ಲೆಕ್ಕ ಮಾಡಕೆ ಬರಲ್ಲ ಅಂತ ಹೇಳು ಹೇಗೆ ಮಾಡದು ಅಂತ ಕಲಿಸಿಕೊಡುವೆ ಅಂತಾರೆ ಶಿಕ್ಷಕರು. ನೋಡಿ ಸರೂ, ಒಂಬತ್ತು ಕುರಿಗೆ 2700 ರೂ ಆಗುತ್ತೆ. ಅಷ್ಟು ದುಡ್ಡಿಗೆ ನಮ್ಮೂರಿನಾಗೆ ಒಂದು ಕುರಿ ಮರಿನೂ ಸಿಗಲ್ಲ! ಅಂದರೆ ಈ ಪ್ಯಾಟ್ಯಾಗೆ ಕುರಿ ರೇಟು ಅಷ್ಟು ಕಡಿಮೆ ಹೆಂಗೆ ಆಗುತ್ತೆ? ಒಂದು ಕುರಿ ಬೆಲೆ ಕನಿಷ್ಟ 5 ಸಾವಿರ ರೂನಾದರೂ ಇರುತ್ತೆ. ಒಂದು ಕುರಿನ ಹತ್ತು ಜನ ಪಾಲಾಕಿಕೊಂಡರೆ ಪ್ರತಿಯೊಬ್ಬರಿಗೆ 800 ರೂ ಬಂತು ಅಂತ ಮಾತನಾಡುವುದ, ಕೆಲಮೊಮ್ಮೆ 700 ರೂ ಬಂತು ಎಂದು ಮಾತನಾಡುವುದು ಕೇಳಿರುವೆ! ಕುರಿ ಸಾಕುವವರು ಹಳ್ಳಿಯವರು. ಅವರೇ ಪ್ಯಾಟೆಯವರಿಗೆ ಮಾರಾದು! ಪ್ಯಾಟೇಲಿ ಇನ್ನೂ ಅವುಗಳ ಬೆಲೆ ಹೆಚ್ಚೇ ಆಗಬೇಕು ಅಲ್ವ ಸರೂ? ಅಂತದರಾಗೆ ಒಂದು ಕುರಿ ಬೆಲೆ 300 ರೂ ಇರಾಕೆ ಯಂಗೆ ಆಯ್ತದೆ? ಆಗಾಕಿಲ್ಲ! ಅಂದರೆ ಲೆಕ್ಕ ತಪ್ಪಲ್ಲವೇ ಸರೂ? ಎಂದು ಪ್ರಶ್ನಿಸುತ್ತಾನೆ ಹಳ್ಳಿಹೈದ! ಅಯ್ಯೋ ಇವ್ನ! ಕನ್ನಡದಲ್ಲಿ ಮಾತನಾಡಾಕೆ ಬಿಟ್ಟರೆ ನನಿಗೆ ಲೆಕ್ಕ ಹೇಳಿಕೊಡಾಕೆ ಬಂದುಬಿಡ್ತಿಯಲ್ಲ? ನನ್ನನ್ನು ಕನ್ನಡದಲ್ಲಿ ಮಾತನಾಡುವಂತೆ ಮಾಡಿಬಿಡ್ತಿಯಲ್ಲಾ! ಲೆಕ್ಕ ತಪ್ಪಿಲ್ಲ ಕಣ್ಲ. ಮಾರುಕಟ್ಟೆಯಲ್ಲಿ ಕುರಿ ಬೆಲೆ ಎಷ್ಟಿದೆ ಅನ್ನುವುದು ಇಲ್ಲಿ ಮುಖ್ಯವಲ್ಲ! ಲೆಕ್ಕ ಮಾಡುವುದು ಮುಖ್ಯ! ಆದರೆ ಸಾಮಾನ್ಯ ಜ್ಞಾನದ ಲೋಕಾನುಭವದ ಕೊರತೆ ಇರದಂತೂ ಸತ್ಯ! ಇಲ್ಲಿ ಓದುವ ಮಕ್ಕಳಿಗೆ ಒಂದು ಕುರಿ ಬೆಲೆ ಎಷ್ಟು ಅಂತನೆ ಗೊತ್ತಿಲ್ಲವಲ್ಲೋ? ಇವರು ಅವರಪ್ಪ ತಂದುದ ತಿಂತಾರಾಗಲಿ ಅದರ ಬೆಲೆ ಏಕೆ ತಿಳಿದುಕೊಳ್ಳಲಿಕ್ಕೆ ಹೋಗುತ್ತಾರೆ ಹೇಳು? ಆದರೂ ನೀ ಹೇಳಿದ್ದು ಬಹಳ ಮುಖ್ಯ! ನಿನಿಗೆ ಎರಡು ಥರದ ಜ್ಞಾನವೂ ಇದೆ. ಅದು ಸರಿ! ನೀನು ಯಾವಾಗ ಲೆಕ್ಕ ಮಾಡಿದೆ? ಎಂದರು ಟೀಚರು. ಅದಕ್ಕೇನು ಪೆನ್ನು ಪುಸ್ತಕ ಬೇಕಾ ಸರೂ? ಹಾಗೆ ಒಂಬತ್ಮೂರ್ಲೆಇಪ್ಪತ್ತೇಳು ಅಲ್ವ ಸರೂ! 3೦೦ ರಲ್ಲಿನ ಮೂರನ್ನು ಗುಣಿಸಿದೆ. ಇನ್ನು ಎರಡು ಸೊನ್ನೆ ಉಳಿದವು. ಆ ಎರಡು ಸೊನ್ನೆಯನ್ನ 9 ರಿಂದ ಗುಣಿಸಿದರೆ ಎರಡು ಸೊನ್ನೆನೆ ಬರುತ್ತವೆ. ಆ ಎರಡು ಸೊನ್ನೆಗಳ 27ರ ಮುಂದೆ 2700 ಹೀಗೆ ಹಾಕಿದರಾಯಿತು! ಎಂದ. Good, very good. ಎಂದರು ಟೀಚರು. ಹಳ್ಳಿ ಹೈದನಿಗೆ ತುಂಬ ಖುಷಿಯಾಯ್ತು. ಆದರೆ ಇದಕ್ಕಿಂತಾ ದೊಡ್ಡ ಲೆಕ್ಕಗಳ ಮಾಡುವವನಿಗೆ ಇಷ್ಟು ಚಿಕ್ಕ ಲೆಕ್ಕ ಮಾಡಿ Good ಅನಿಸಿಕೊಂಡುದ್ದಕ್ಕೆ ಅಷ್ಟೇನು ಖುಷಿ ಆಗದಿದ್ದರೂ ಕಾನ್ವೆಂಟ್ ಹೊಸದಲ್ಲವೆ? ಅಲ್ಲಿ ಎಲ್ಲಾ ಪ್ಯಾಟೆಯ ಇಂಗ್ಲಿಷ್ ವಿದ್ಯಾರ್ಥಿಗಳೆ ಅಲ್ವಾ ಇರದು? ಅವರ ಮಧ್ಯೆ ಉಬ್ಬಲಿಕ್ಕು ಬಿಡದಂತೆ ಹಿಡಿದುಕೊಂಡಿದ್ದ ಕಾನ್ವೆಂಟ್ ನ ಯೂನಿಪಾರಮ್ಮಿನಲ್ಲಿ ಉಬ್ಬಿದ್ದು ಖುಷಿಯೆನಿಸಿತು!

” ಲೋ ಪ್ರೆಂಡು ನೀನು ಎಷ್ಟು ಡೇರಾಗಿ ಕ್ವಶ್ಚನ್ ಕೇಳ್ತಿಯಲ್ಲ, ನಿನ್ನಂತೆ ನನಿಗೂ ಕ್ವಶ್ಛನ್ ಕೇಳಬೇಕೆನಿಸುತ್ತದೆ ಆದರೆ ಆಗ್ತಾಇಲ್ಲವೆ? ತ್ರೀಡೇಸ್ ಬ್ಯಾಕ್ ಸಯಿನ್ಸ್ ಟೀಚರು ವಾಟರ್ ಯುನಿಟ್ ಎಂಡ್ ಮಾಡಿ ಏರ್ ಯುನಿಟ್ ಸ್ಟಾರ್ಟ್ ಮಾಡಿದರಲ್ಲಾ ಆಗ ಏರಲ್ಲಿ ಆಕ್ಸಿಜನ್ನು ಹೈಡ್ರೋಜನ್ನು ಇವೆ ಎಂದರು. ಅವೆರಡು ಕಂಬೈನ್ ಅಗಿ h2o ಅಗುತ್ತೆ ಅದೇ ವಾಟರ್ ಎಂದಿದ್ದರು ” ವಾಟರ್‌ ಯುನಿಟ್ ಮಾಡಬೇಕಾದಾಗ. ಏರಲ್ಲಿ ಅವೆರಡೂ ಇವೆ ಯಾಕೆ ಕಂಬೈನಾಗಿ ವಾಟರ್ ಆಗಲ್ಲ ಅಂತ ” ನೀನು ಕೇಳಿದೆ. ನನಗು ಕೇಳಬೇಕೆನಿಸಿತ್ತು ಅದರೆ ನಿನ್ನಂತೆ ಕನ್ನಡದಲ್ಲಿ ಕೇಳಿದರೆ ಫೈನಾಕ್ತರಂತ ಸುಮ್ನಾದೆ! ” ಎಂದ ಆಸ್ಟಿನ್. ನನಗೂ ಮುಂದೆ ಪೈನಾಕ್ತಾರ? ನನಿಗೆ ಇಂಗ್ಲಿಷ್ ಅಂದರೆ ಇಷ್ಟ! ಅದರೆ ಇಂಗ್ಲೀಷಿನಲ್ಲಿ ಪ್ರಶ್ನೆ ಕೇಳಕೆ ಬರದಿಲ್ಲವೆ? ನಾನು ಫೈನ್ ಗಿಯ್ನ್ ಕೊಡಾಕಿಲ್ಲ! ಕನ್ನಡ ಅಂದರೆ ಪ್ರಾಣ. ಅದೇ ಉಸಿರು. ಅದರಲ್ಲೆ ನಾನು ಹುಟ್ಟಿ ಬೆಳೆದಿರುವುದು. ಕನ್ನಡ ಮಾತನಾಡದಂತೆ ಹೇಗೆ ಇರದು? ಈ ಶಾಲೆಯಲ್ಲಿ ಕನ್ನಡ ಮಾತನಾಡಬಾರದು ಅಂತಾರಲ್ಲಾ ಕನ್ನಡ ಮಾತಾಡದು ಅಪರಾಧವೆ? ಫೈನ್ ಹಾಕ್ತಾರೆ ಅಂದ್ರೆ ಕನ್ನಡ ಮಾತಾಡೋದು ಅಪರಾಧ ಅಂತ ಅಲ್ವೇ? ಅದನ್ನ ಮಾತನಾಡುವುದರಿಂದ ಏನು ಕೆಟ್ಟುದ್ದು ಆಗುತ್ತದೆ? ಇಂಗ್ಲಿಷ್ ನಲ್ಲೇ ಮಾತನಾಡಾಕೆ ಇದೇನು ಇಂಗ್ಲೆಂಡ? ಅವರನ್ನೇ ಒದ್ದು ಓಡಿಸಿದರೂ ಅವರ ಭಾಷೆಯನ್ನು ಓಡಿಸದೆ ಆರಾಧಿಸುತ್ತಿರುವುದು ಅವರ ಗುಲಾಮರಾಗಿದ್ದ ನೆನಪಿಗಾ? ಅವರ ಒಡೆದು ಆಳುವ ನೀತಿ ನೆನಪಿಗ? ನಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮ, ನಮ್ಮೂರಿನ ಜನ, ಟೀಚರು, ಊರಿನ ಜನ ಎಲ್ಲಾ ಕನ್ನಡದಲ್ಲೇ ಮಾತನಾಡುವುದು! ಕನ್ನಡದಲ್ಲೇ ಬದುಕು ರೂಪಿಸಿಕೊಂಡು ಕನ್ನಡದಲ್ಲೇ ಕನಸು ಕಾಣುತ್ತಾ ಸೊಗಸಾಗಿ ಬದುಕುತ್ತಿರೋದು. ನಮ್ಮ ಮುತ್ತಜ್ಜ ಮುತ್ತಜ್ಜಿ ಅವರಪ್ಪ ಅಮ್ಮ ಎಲ್ಲರೂ ಕನ್ನಡವನ್ನೇ ಮಾತಾಡುತ್ತಿದ್ದು! ಕನ್ನಡದಲ್ಲೇ ಬದುಕಿದ್ದು! ಕನ್ನಡ ಮಾತು ಎಷ್ಟು ಚಂದ. ಅಕ್ಷರ ಎಷ್ಟು ಅಂದ! ನಮ್ಮ ಹಳ್ಳಿ ಶಾಲೆಯಲ್ಲಿ ಮುತ್ತುರಾಜ್ ಅಂತ ಕನ್ನಡ ಮಾಸ್ಟರ್ ಇದ್ದರು. ಈಗ್ಲು ಇದ್ದಾರೆ. ಅವರು ತಮಿಳು ನಾಡಿನವರಾದರೂ ತುಂಬ ಚೆನ್ನಾಗಿ ಕನ್ನಡ ಕಲಿಸುತ್ತಿದ್ದರು. ನವಂಬರ್ ಬಂದುಬಿಟ್ಟರೆ ಮುಗಿತು ದಿನಾ ಒಂದೊಂದು ಕನ್ನಡ ಹಾಡು ಹೇಳಿಕೊಡೋರು. ಸಂಗೀತ ಬೇರೆ ಕಲಿತಿದ್ದರು ತುಂಬಾ ಚೆನ್ನಾಗಿ ಹಾಡಿತೋರಿಸುತ್ತಿದ್ದರು. ಬಾರಿಸು ಕನ್ನಡ ಡಿಂಢಿಮವ .., ಹಚ್ಚೇವು ಕನ್ನಡದ ದೀಪ.., ಜೋಗದಸಿರಿ ಬೆಳಕಿನಲ್ಲಿ .., ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು .., ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ .. ಇವೆಲ್ಲಾ ನನಿಗೆ ನೋಡಿಕೊಳ್ಳದಂತೆ ಹಾಡಾಕೆ ಬರ್ತಾವೆ. ಅಲ್ಲಿ ಹಾಡಿದರೆ ಖುಷಿಯಿಂದ ಬೆನ್ನುತಟ್ಟುತ್ತಿದ್ದರು. ಇಂಗ್ಲಿಷ್ ಟೀಚರು ಎಲ್ಲಾ ಟೀಚರು ಕನ್ನಡ ಮಾತನಾಡುತ್ತಾ ಕನ್ನಡ ಬೆಳೆಸಬೇಕೆನ್ನುತ್ತಿದ್ದರು. ಈ ಶಾಲೆಯಲ್ಲಿ ನೋಡಿದರೆ ಕನ್ನಡ ಮಾತನಾಡಿದರೆ ಫೈನ್ ಹಾಕುತ್ತಾರೆ! ಕನ್ನಡ ಮಾತನಾಡಲು ಬಿಡದ ಈ ಶಾಲೆ ನನಿಗೆ ಬೇಡ! ಮಾತನಾಡಲಿಲ್ಲ ಎಂದರೆ ನನ್ನ ಉಸಿರೆ ನಿಂತಂಗೆ ಆಗುತ್ತೆ! ಮುಂದಿನ ವರುಷ ಬೇರೆ ಶಾಲೆ ಸೇರ್ತೆನೆ ಎಂದ! ಆಸ್ಟಿನ್ ಇವನ ದೈರ್ಯ ಕಂಡು ಬೆಚ್ಚಿದ!

ಕನ್ನಡ ಮಾಸ್ಟರ್ ಬಂದರು ಸಂಧ್ಯಕ್ಷರಗಳು ಯಾವುವು ಎಂದು ಪ್ರಶ್ನಿಸಿದರು. ಎಲ್ಲರೂ ಕೈ ಎತ್ತಿದರು. ಸರಿ ಉತ್ತರಿಸಿದರು. ಅವನ್ನು ಯಾಕೆ ಸಂಧ್ಯಕ್ಷರ ಎನ್ನುತ್ತೇವೆ ಎಂದು ಪ್ರಶ್ನಿಸಿದಾಗ ಅವನೊಬ್ಬನನ್ನು ಬಿಟ್ಟು ಯಾರೂ ಕೈ ಎತ್ತಲಿಲ್ಲ! ಅನ್ವರ್ಥನಾಮಕ್ಕೆ ನಾಲ್ಕು ಉದಾ ಕೊಡಿ! ಅನುನಾಸಿಕಗಳು ಯಾವುವು ಎಂಬಂತಹ ಪ್ರಶ್ನೆಗಳಿಗೆ ಎಲ್ಲರೂ ಉತ್ತರಿಸುತ್ತಿದ್ದರಾಗಲಿ ಏಕೆ ಹಾಗೆನ್ನುತ್ತಾರೆಂಬುದಕ್ಕೆ ತಡವರಿಸಿದರೆ ಆ ಹಳ್ಳಿಹೈದ ತಡವರಿಸುತ್ತಿರಲಿಲ್ಲ! ಎಲ್ಲದಕ್ಕೂ ಕೈ ಎತ್ತುತ್ತಿದ್ದ. ಕೈ ಇಳಿಸು ಇಳಿಸು ಅಂದು ಅಂದು ಶಿಕ್ಷಕರಿಗೆ ಸಾಕಾಗದು! ಎಲ್ಲದಕೂ ಉತ್ತರಿಸಿ ಕನ್ನಡ ಚಂದ್ ಚಂದ್ ಮಾತನಾಡಿ ಇವರಿಗೆ ಮಾತ್ರ ನೆಚ್ಚಿನ ಶಿಷ್ಯ ಆಗಿದ್ದ! ನವಂಬರ್ ತಿಂಗಳು ಬಂತು ಶಿಕ್ಷಕರು ಆ ತಿಂಗಳು ಮುಗಿಸಬೇಕಿದ್ದ ನಿಸಾರ್ ಅಹ್ಮದ್ ರ ನಿತ್ಯೋತ್ಸವ ಪದ್ಯ ಬೋಧಿಸಿ ಕೆಲವರನ್ನು ಓದಿಸುತ್ತಿದ್ದರು ಓದಲು ಎಲ್ಲರೂ ಕಷ್ಟಪಡುತ್ತಿದ್ದರು. ಮಾಷ್ಟರ ಕಣ್ಣು ಹಳ್ಳಿಹೈದನ ಕಡೆಗೆ ಹೋಯ್ತು ತಕ್ಷಣ ಅವನು ಏರು ದ್ವನಿಯಲ್ಲಿ ಸುಶ್ರ್ಯಾವ್ಯವಾಗಿ ಹಾಡಲಾರಂಭಿಸಿದ ಪಕ್ಕದ ಕೊಠಡಿಯ ಶಿಕ್ಷಕರೆಲ್ಲಾ ಈ ಕೊಠಡಿಯ ಬಾಗಿಲ ಬಳಿ ಬಂದರು. ಹಾಡು ಮುಗಿಯುತ್ತಿದ್ದಂತೆ ಕನ್ನಡ ಶಿಕ್ಷಕರು ಚಪ್ಪಾಳೆ ತಟ್ಟುತ್ತಾ ಇವನ ಕಡೆಗೆ ದಾವಿಸಿ ಮನದುಂಬಿ ಬೆನ್ನು ತಟ್ಟಿದರು. ಅವನು ಉಬ್ಬಿ ಹೋದ. ಯೂನಿಫಾರಮ್ಮಿನ ವಾಸ್ಕೋಟಿನ ಎದೆಯ ಮೇಲಿನ ಮೊದಲ ಗುಂಡಿ ಪಟ್ ಅಂತ ಸಿಡಿಯಿತು.

ಒಮ್ಮೆ ಪ್ರವಾಸ ಹೋಗಿರುತ್ತಾರೆ. ಅಲ್ಲೊಂದು ಶಿಲಾಶಾಸನ ನೋಡಬೇಕಿರುತ್ತೆ. ಅದು ಎರಡು ಮೂರು ಹೊಲ ದಾಟಿ ಹೋಗಬೇಕಿರುತ್ತೆ. ಹೋಗುತ್ತಿರುತ್ತಾರೆ. ದೂರದಿಂದ ಅಲ್ಲಿ ಕಲ್ಲಂಗಡಿ ಹಾಕಿದ್ದಾರೆ ಹಣ್ಣು ಬಿಟ್ಟಂಗವೆ ಅಂದ ಹಳ್ಳಿಹೈದ. ಎಲ್ಲರೂ ಅಲ್ಲಿ ಮರಗಳೇ ಇಲ್ಲ ಹೆಂಗೆ ಬಿಡ್ತವೆ ಅಂದರು ಸ್ನೇಹಿತರು! ಕಲ್ಲಂಗಡಿ ಮರದಲ್ಲಲ್ಲ ಬಳ್ಳಿಯಲ್ಲಿ ಬಿಡದು! ಬಳ್ಳಿ ಬಿಡುತ್ತೆ, ಭೂಮಿ ಹೊತ್ತಿರುತ್ತದೆ! ಬಳ್ಳಿಯೇನು ಅದನ್ನು ಹೊತ್ತುಕೊಂಡಿರುವುದಿಲ್ಲ! ಎಂದು ಕಲ್ಲಂಗಡಿ ಬಳ್ಳಿ ಹತ್ತಿರ ಹೋಗಿ ತೋರಿಸಿ ಗೆಳೆಯರ ತಿಳುವಳಿಕೆಯ ಮಿತಿ ವಿಸ್ತರಿಸುತ್ತಾನೆ. ಹಾಗೆ ಪಕ್ಕದ ಹೊಲದಲ್ಲಿ ಸೇಂಗ ಗಿಡಗಳಿರುವುದ ನೋಡಿ ಬಡವರ ಬಾದಾಮಿ ಕಡ್ಲೆಕಾಯ್ ಬಡವರ ಬಾದಾಮಿ ಕಡ್ಲೆಕಾಯ್ ಎಂದು ಕುಣಿಯುತ್ತಾ ಕಡಲೆಗಿಡ ತೋರಿಸಿ ಒಂದು ಗಿಡಕ್ಕೆ ಕಡಿಮೆಯೆಂದರೆ ೨೦ ರಿಂದ ೩೦ ಕಾಯಿ ಇರುವುದಾಗಿ ಹೇಳುತ್ತಾನೆ. ಒಂದೂ ಕಾಣುತ್ತಿಲ್ಲವಲ್ಲ ಅಂತಾರೆ ಸ್ನೇಹಿತರು. ಗಿಡ ಕಿತ್ತು ಅಲ್ಲಾಡಿಸಿ ಬೇರಿಗೊಂದೊಂದು ಸೇಂಗಕಾಯಿ ಇರುವುದ ತೋರಿಸುತ್ತಾನೆ. ಅಚ್ಚರಿಯಿಂದ ಹಾ! ಸೇಂಗ ಗಿಡದ ಬೇರಿನಲ್ಲಿ ಬಿಡುತ್ತವಾ ಎಂದು ಬೆರಗಾಗುತ್ತಾರೆ!

ಶಾಲೆಯ ಯಾವುದೇ ಕಾರ್ಯಕ್ರಮಗಳಂದು ಬರಿ ಕನ್ನಡ ಹಾಡುಗಳ ಹಾಡಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಾನೆ. ಟೀಚರುಗಳಿಗೆ ಇವನೆಂದರೆ ಇಷ್ಟ ಆದರೆ ಶಾಲೆಯೆಲ್ಲಾ ಎಲ್ಲಿ ಕನ್ನಡಮಯ ಮಾಡಿಬಿಡುವನೆಂಬ ಬಯ! ಕನ್ನಡ ಅವರಿಗೂ ಇಷ್ಟ! ಆದರೆ ಕನ್ನಡದಲ್ಲಿ ಮಾತನಾಡವಂತಿಲ್ಲ ಎಂಬ ಬಿಗಿ ನಿಯಮ ಇರುವ ಕಾನ್ವೆಂಟ್ ಶಾಲೆ! ಶಿಕ್ಷಕರು ಇವನನ್ನು ಕರೆದರು ನಾವು ಇಂಗ್ಲೀಷ್ ಹಾಡುಗಳ ಹೇಳಿಕೊಟ್ಟರೆ ನೀನು ಬರಿ ಕನ್ನಡದ ಹಾಡೇ ಹೇಳ್ತಿ, ಕನ್ನಡದಲ್ಲೆ ಏಕಪಾತ್ರಾಭಿನಯ, ಕನ್ನಡದಲ್ಲೇ ಭಾಷಣ ಮಾಡ್ತಿ, ಕನ್ನಡದಲ್ಲೆ ಮಾತಾಡ್ತಿ, ಹುಡುಗರನ್ನೆಲ್ಲಾ ಕನ್ನಡದಲ್ಲೆ ಮಾತನಾಡುವಂತೆ ಮಾಡ್ತಿ! ಕನ್ನಡ ಹಾಡಿಗೆ ಎಲ್ಲರೂ ಬಂದು ಹೆಜ್ಜೆ ಹಾಕಿ ಕುಣಿಯುವಂತೆ ಮಾಡುತ್ತೀಯ? ನಾವು ಹೇಳಿದ್ದನ್ನು ಕೇಳುವುದಿಲ್ಲ. ನಿನಿಗೆ ತಿಳಿದಂತೆ ಮಾಡ್ತಿಯ ಏನೇನೋ ಪ್ರಶ್ನೆ ಕನ್ನಡದಲ್ಲೇ ಕೇಳ್ತಿಯ? ಇದು ಕನ್ನಡ ಶಾಲೆನಾ? ಕಾನ್ವೆಂಟ್ ಶಾಲೆನಾ? ಇಂಗೇ ಆದರೆ ನಮ್ಮ ಮಕ್ಕಳ ಬೇರೆ ಇಂಗ್ಲಿಷ್ ಶಾಲೆಗೆ ಸೇರಿಸುತ್ತೇವೆ ಅಂತಾರೆ ಪೋಷಕರು, ನಿನಗಾಗಿ ಶಾಲೆನೆ ಮುಚ್ಚಬೇಕಾದೀತು? ಅಂತ ದಂಡಿಸಿದರು. ನೀವು ಬೋಧಿಸುತ್ತೀರಲ್ಲ ಇಂಗ್ಲಿಷ್ ರೈಂ, ಲೆಸನ್ನು, ಪೊಯಂ, ಡ್ರಾಮ, ಸ್ಟೋರಿಗಳು ಅರ್ಥನೇ ಆಗಲ್ಲ! ನೀವು ಕನ್ನಡದಲ್ಲಿ ಹೇಳಿದರೆತಾನೆ ಅರ್ಥವಾಗುವುದು? ಅರ್ಥ ತಿಳಿದೆ ಹೇಗೆ ಅಭಿನಯಿಸಲಿ ಸರೂ? ನಾನು ನಮ್ಮೂರ ಶಾಲೆಗೆ ಹೋಗ್ತಿನಿ ಅಲ್ಲಿ ನಾನು ಹೀಗೆ ಮಾಡಿದ್ದರೆ ಚಪ್ಪಾಳೆ ತಟ್ಟಿ, ಭಲೇ ಭೆಷ್ ! ಎಂದು ಬಹುಮಾನ ಕೊಟ್ಟಿರರು! ನಾನು ಬರುವಾಗ ನನ್ನನ್ನು ಕನ್ನಡದ ಕಣ್ಮಣಿ ಎಂದು ಗೌರವಿಸಿ ಕನ್ನಡದ ಕಂಪು ಎಲ್ಲೆಡೆ ಪಸರಿಸು ಎಂದು ಆಶೀರ್ವದಿಸಿ ಕಳುಹಿಸಿದರು. ಅಲ್ಲಿ ಇದು ಬಹುಮಾನದ ವಿಷಯ! ಇಲ್ಲಿ ಅವಮಾನ! ಕನ್ನಡ ಮಾತನಾಡದಂತೆ, ಅರ್ಥವಾಗದೆ ಇರುವುದ ಪ್ರಶ್ನೆ ಕೇಳದಂತೆ, ಕ್ರಿಕೆಟ್ಟು, ಲಗೋರಿ ಆಡದಂತೆ ನನಿಗೆ ಇರಕಾಗಕಿಲ್ಲ! ನನಿಗೆ ಈ ಕಾನ್ವೆಂಟ್ ಜೈಲ್ ಅನ್ನಿಸುತ್ತಿದೆ! ನಾನು ನಮ್ಮೂರ ಶಾಲಿಗೇ ಹೋಗ್ತಿನಿ .. ನಾನು ನಮ್ಮೂರ ಶಾಲೆಗೇ ಹೋಗ್ತೀನಿ … ಎಂದ! ಯಾರಿಗೂ ಕಳಿಸಿಕೊಡಲು ಇಷ್ಟವಿಲ್ಲ! ಆದರೆ …

ಶಾಲೆ ಮುಖ್ಯೋಪಾಧ್ಯಾಯರು ಶಿಕ್ಷಕರ ಸಭೆ ಕರೆದಿದ್ದರು ಅದರಲ್ಲಿ ಕನ್ನಡದ ಕಣ್ಮಣಿಯ ಬಗ್ಗೆಯೂ ಚರ್ಚೆ ನಡೆಯಿತು. ಇವನು ಅಂದರೆ ಎಲ್ಲರಿಗೂ ಇಷ್ಟ. ಆದರೆ ಅವನ ಕನ್ನಡಾಭಿಮಾನ ಸಹಿಸುವುದು ಕಷ್ಟ ಬಾಯಿ ತೆಗೆದರೆ ಕನ್ನಡದ ಮುತ್ತುಗಳ ಸುರಿಸಿ ಇಂಗ್ಲಿಷ್ ಅದರ ರಭಸಕ್ಕೆ ಕೊಚ್ಚಿಕೊಂಡುಹೋಗುವಂತೆ ಮಾಡುತ್ತಾನೆ ಎಂದು ಎಲ್ಲಾ ಶಿಕ್ಷಕರು ದೂರಿದರು! ಇಂದು ಇಂಗ್ಲಿಷ್ ತುಂಬಾ ಅವಶ್ಯಕ! ಆದರೆ ಈ ವಯೋಮಾನದ ಮಕ್ಕಳಿಗೆ ಎಲ್ಲವನ್ನೂ ಕನ್ನಡದಲ್ಲಿ ಅಭಿವ್ಯಕ್ತಿಸಿದಂತೆ ಇಂಗ್ಲಿಷ್ ನಲ್ಲಿ ಅಭಿವ್ಯಕ್ತಿಸಲಾಗದು! ಮಾತೃ ಭಾಷೆಯಲ್ಲಾದರೆ ತಮ್ಮ ಎಲ್ಲಾ ಭಾವಗಳನ್ನು ಅಭಿವ್ಯಕ್ತಿಸುತ್ತಾರೆ. ಆದರೆ ಇಲ್ಲಿ ಏನನ್ನಾಗಲಿ ಇಂಗ್ಲಿಷ್ ನಲ್ಲಿ ಕೇಳಬೇಕಾಗಿರುವುದರಿಂದ ಬಹಳಷ್ಟು ಮಕ್ಕಳು ಪ್ರಶ್ನೆಗಳನ್ನು ಕೇಳರು? ಪ್ರಶ್ನೆ ಕೇಳಿದರೇನೆ ಸಮಸ್ಯೆಗಳು ಬಗೆಹರಿಯುವುದು ವಿಷಯ ಅರ್ಥವಾಗುವುದು. ಪ್ರಶ್ನಿಸುವುದರಿಂದನೆ ಜ್ಞಾನ ವೃದ್ದಿಸುವುದು. ಸ್ವತಂತ್ರ ಮತ್ತು ವೈಜ್ಞಾನಿಕ ಚಿಂತನೆಗೆ ಅವಕಾಶವಾಗುವುದು, ಆದರೆ ಪೋಷಕರು ಇದು ಇಂಗ್ಲಿಷ್ ಶಾಲೆ ಅಂತ ಇಂಗ್ಲಿಷ್ ನಲ್ಲೆ ಇಲ್ಲಿ ಮಾತನಾಡುವುದು ಅಂತ ಇಲ್ಲಿಗೆ ಸೇರಿಸಿದ್ದಾರೆ. ಈಗಾಗಲೆ ಕನ್ನಡದ ಕಣ್ಮಣಿ ಬಂದಾಗಿನಿಂದ ಪೋಷಕರು ಕನ್ನಡ ಮಾತನಾಡುವುದರ ಬಗ್ಗೆ ದೂರಿದ್ದಾರೆ. ನಾವೇನಾದರೂ ಕನ್ನಡದಲ್ಲಿ ಮಾತನಾಡಲು ಅವಕಾಶಕೊಟ್ಟರೆ ಎಲ್ಲರೂ ಕನ್ನಡದಲ್ಲೇ ಮಾತನಾಡತೊಡಗುವರು. ಆಗ ಪೋಷಕರು ಅವರ ಮಕ್ಕಳ ಬೇರೆ ಶಾಲೆಗೆ ಸೇರಿಸುತ್ತಾರೆ. ಆ ದುಸ್ಸಾಹಸ ಮಾಡಿ ನಾವು ಶಾಲೆ ಮುಚ್ಚಬೇಕಾಗುತ್ತದೆ. ಹಾಗೆ ಮಾಡುವುದು ಬೇಡ. ಎಷ್ಟೇ ಕಷ್ಟವಾದರೂ ಇಂಗ್ಲೀಷಿನಲ್ಲೇ ಮಾತನಾಡಬೇಕು. ನೀವೂ ಅಪ್ಪಿತಪ್ಪಿ ಸಹ ಕನ್ನಡದಲ್ಲಿ ಮಾತನಾಡಬಾರದು. ವಿದ್ಯಾರ್ಥಿಗಳು ಇಂದಲ್ಲ ನಾಳೆ ಇಂಗ್ಲಿಷ್ ಸರಿಯಾಗಿ ಮಾತನಾಡುವುದ ಪ್ರಶ್ನಿಸುವುದ ಕಲಿತುಕೊಳ್ಳುವರು. ಕನ್ನಡದ ಕಣ್ಮಣಿನ ಇಲ್ಲೇ ಇದ್ದು ಇಂಗ್ಲಿಷ್ ನಲ್ಲಿ ಮಾತನಾಡುವಂತೆ ಮಾಡಿ. ಇಲ್ಲಿನ ಇಂಗ್ಲಿಷ್ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದಿನ ವರುಷ ಬೇರೆ ಶಾಲೆಗೆ ಹೋಗಲಿ ಎಂದು ಕಾನ್ವೆಂಟಿನ ಅಧ್ಕಕ್ಷರು ಹೇಳಿದರು. ಆಡಳಿತ ಮಂಡಳಿ ಒಪ್ಪಿ ಅನುಮೋಧಿಸಿತು.

ವಾರ್ಷಿಕೋತ್ಸವದ ದಿನ ಬಂತು ಇವನ ಸರದಿಯೂ ಬಂದಾಗ ” ವಿಶ್ವವೇ ಒಂದು ಕುಟುಂಬವಾಗುವ ಕಡೆಗೆ ಸಾಗುತ್ತಿದೆ. ಪ್ರಯುಕ್ತ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡದುಕೊಂಡಿದೆ. ನಮ್ಮ ರಾಜ್ಯದಲ್ಲಿ ಕೆಲವರು ಕನ್ನಡ ಮಾಧ್ಯಮದಲ್ಲಿ ಮತ್ತೆ ಕೆಲವರು ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದರಿಂದ ಕೆಲವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಈಗ ಇರುವುದಕ್ಕಿಂತ ಇಂಗ್ಲೀಷಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು. ಹಾಗೇ ಕಾನ್ವೆಂಟುಗಳಲ್ಲಿ ಈಗ ಇರುವುದಕ್ಕಿಂತಾ ಹೆಚ್ಚು ಕನ್ನಡಕ್ಕೆ ಪ್ರಾಧಾನ್ಯತೆ ಕೊಡಬೇಕು. ಕನ್ನಡ ಶಾಲೆಗಳಲ್ಲಿ ಒಂದು ಥರ, ಕಾನ್ವೆಂಟುಗಳಲ್ಲಿ ಇನ್ನೊಂದು ಥರ ಕಲಿಸಿ ಮಕ್ಕಳಿಗೆ ಬೇದಭಾವ ಮಾಡದೆ ಎರಡೂ ಕಡೆ ಒಂದೇ ರೀತಿಯ ಶಿಕ್ಷಣ ಕೊಡುವುದು ತುಂಬಾ ಒಳ್ಳೆಯದು. ಕನ್ನಡ ನಮ್ಮ ಮಾತೃಭಾಷೆ. ಅದು ನಮ್ಮೆಲ್ಲರ ಉಸಿರು. ಅದು ಬೆಳಿಬೇಕು ” ಎಂದು ಹೇಳಿ ” ಇಂಗ್ಲಿಷ್ ಶಿಕ್ಷಕರು ನೀನು ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲೆ ನಿನ್ನ ಪ್ರತಿಭೆ ಪ್ರದರ್ಶಿಸಿದ್ದೀಯ ಈ ಸಾರಿ ಕೊನೆ ಪಕ್ಷ ಇಂಗ್ಲೀಷ್ ನಲ್ಲಿ ಒಂದು ಸಣ್ಣ ರೈಮನ್ನಾದರೂ ಹೇಳು ಎಂದಿದ್ದಾರೆ. ಆದ್ದರಿಂದ ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಮಾಡಿದಮೇಲೆ ಒಂದು ರೈಮನ್ನು ಸ್ವಲ್ಪ ಬದಲಿಸಿ ಹೇಳುವೆನೆಂದು ಕನ್ನಡಿಗರ ಕೆಚ್ಚು ಪ್ರದರ್ಶಿಸುವ ಏಕಪಾತ್ರಾಭಿನಯ ಮಾಡಿ ಒಂದುರೈಮನ್ನು ಹೇಳತೊಡಗಿದ.

Rain rain please come
Little Lalita wants to dance
If you do not come
She forget dance!
If you come
She will dance
Rain rain please come!

ಏಕಪಾತ್ರಾಭಿನಯ ಮಾಡುವಾಗ ಗಂಭೀರವಾಗಿ ಮೈಮೇಲಿನ ಕೂದಲು ನೆಟ್ಟಗೆ ಮಾಡಿಕೊಂಡು ನಿಬ್ಬೆರಗಾಗಿ ನೋಡಿದ ಪೋಷಕ ಸಮೂಹ ಈ ರೈಮು ಕೇಳಿ ಮಳೆಗಾಗಿ ತಹತಹಿಸಿದ ಬಿಸಿಲ ಬೇಗೆಗೆ ಬೆಂದಿದ್ದ ಕೇಳುಗರು ಚಪ್ಪಾಳೆಯ ಸುರಿಮಳೆಗೈದರು. ಜತೆಗೆ ಮೇಘ ಸುರಿಸತೊಡಗಿತು ತುಂತುರು ಮಳೆ! ಅಲ್ಲೇ ಇವನ ನಂತರ ಕಾರ್ಯಕ್ರಮ ಕೊಡಲು ಸಿದ್ದಳಿದ್ದ ಲಲಿತ ಮಳೆಯಲೇ ನವಿಲಂತೆ ನರ್ತಿಸಸುತ್ತಾ ವೇದಿಕೆಗೆ ಬಂದಳು!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕನ್ನಡದ ಕಣ್ಮಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

  1. ಬರಹ ಸೂಪರ್.ಕೊನೆಗೆ ಬಳಸಿರುವ ರೈಮ್ ಎಲ್ಲ ಶಾಲೆಗಳಿಗೂ ತಲುಪಬೇಕಿದೆ.

Leave a Reply

Your email address will not be published.