ವಾಸುಕಿ ಕಾಲಂ

ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್

 

ಒಂದು ಹಾಡನ್ನ ಹೀಗೇ ಅಂತ ವಿಂಗಡಿಸೋದು ತುಂಬಾ ಕಷ್ಟ. ಒಬ್ಬರಿಗೆ ಮಜಾ ಕೊಡುವ ಹಾಡು ಇನ್ನೊಬ್ಬರಿಗೆ ಅತಿರೇಕ ಅನ್ನಿಸಬಹುದು. ಒಬ್ಬರ ‘ತುಂಟ’ ಹಾಡು ಇನ್ನೊಬ್ಬರಿಗೆ ಅಶ್ಲೀಲ ಅಥವಾ ‘ಪೋಲಿ ಹಾಡು’ ಅನ್ನಿಸಬಹುದು. ನನಗೆ ಈ ‘ತುಂಟ’ ಹಾಡುಗಳು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಿವೆ – ಆಯ್ದುಕೊಂಡಿರುವ ವಿಷಯಗಳು, ವಿಷಯವನ್ನು ಹೇಳಿರುವ ರೀತಿ, ಪದಗಳಲ್ಲಿ ಪನ್ ಮಾಡಿರುವುದು, ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಸಾಲುಗಳು ಅಥವಾ “ಹೀಗೂ ಉಂಟೇ” ಅನ್ನುವಂಥ ಅಸಂಬದ್ಧತೆ!

ಇಲ್ಲಿದೆ ನೋಡಿ ನನ್ನ ಅಚ್ಚುಮೆಚ್ಚಿನ ‘ತುಂಟ’ ಹಾಡುಗಳು:

ಏರಿ ಮೇಲೆ ಏರಿ 

“ಜಗ ಮೆಚ್ಚಿದ ಮಗ” ಚಿತ್ರದ ಈ ಹಾಡನ್ನ ಬರೆದಿರೋರು ಹುಣಸೂರ್ ಕೃಷ್ಣಮೂರ್ತಿ. ಹುಣಸೂರ್ ಅಂದ ತಕ್ಷಣ ನಂಗೆ ನೆನಪಾಗೋದು “ಬಬ್ರುವಾಹನ”ದ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ” ಹಾಡು. ಇವರು ಪದಗಳಲ್ಲಿ ಆಟ ಆಡೋದರಲ್ಲಿ ಎತ್ತಿದ ಕೈ.  “ಏರಿ ಮೇಲೆ ಏರಿ” ಆಗಿನ ಕಾಲದ “ಐಟಂ ಸಾಂಗ್”, ಗಾಯಕಿ ಎಲ್. ಆರ್. ಈಶ್ವರಿ – ಆಗಿನ ಕಾಲದಲ್ಲಿ ಈ ಥರ ಹಾಡುಗಳಿಗೇ ಹೆಸರುವಾಸಿಯಾಗಿದ್ದವರು. ಮೇಲ್ನೋಟಕ್ಕೆ ಇದು “ಏರಿ” ಅಂದರೆ “ದಿಬ್ಬ”ದ ಮೇಲೆ ಹೋಗುವ ಹಾಡು ಅನ್ನಿಸುತ್ತದೆ. ಆದರೆ “ಏರಿ” ಅಂದರೆ “ಮೇಲೆ ಹತ್ತಿ” ಅಂತ ಕೂಡ ಅರ್ಥ ಬರುತ್ತದೆ. “ಕಾದೈತೆ” ಅಂದರೆ “ಕಾಯುತ್ತಿದೆ” ಅಂತಲೂ ಅರ್ಥ ಬರುತ್ತೆ, “ಬಿಸಿಯಾಗಿದೆ” ಅನ್ನೋ ಅರ್ಥನೂ ಬರುತ್ತೆ. ಇನ್ನು “ಮೇಲೆ ಕೆಳಗೆ ಹಾರಿ” ಅಂದ್ರೆ ಏನು ಅಂತ ನೀವು ಊಹಿಸಬಹುದು. ಇನ್ನೂ ನಂಬಿಕೆ ಬರಲಿಲ್ವಾ? ಇಡೀ ಹಾಡಿನಲ್ಲಿ ಆಕೆ ನಾಯಕನನ್ನು “ಮಾವ” ಅಂತ ಸಂಬೋಧಿಸುತ್ತಾಳೆ – ಇದಕ್ಕಿಂತ ದೊಡ್ಡ ಪುರಾವೆ ಬೇಕಾ?

ಕಬ್ಬಿನ ಜಲ್ಲೆ 

“ಪ್ರೀತಿ ಪ್ರೇಮ ಪ್ರಣಯ” ಚಿತ್ರದ ಈ ಹಾಡು ಅದು ಹೇಗೆ ನಮ್ಮ ಮಡಿವಂತ ಸೆನ್ಸಾರ್ ಇಂದ ಹೊರಬಂತು ಅನ್ನೋದೇ ಅತ್ಯಂತ ಆಶ್ಚರ್ಯದ ವಿಷಯ. ನನಗೆ ತಿಳಿದಂತೆ ಶೀಘ್ರಸ್ಖಲನದ ಬಗ್ಗೆ ಪ್ರಸ್ತಾಪ ಇರುವ ಏಕೈಕ ಕನ್ನಡ ಚಿತ್ರ ಇದು. ಮೈಸೂರು ಮಲ್ಲಿಗೆ (ನರಸಿಂಹಸ್ವಾಮಿ ಅವರದು ಅಲ್ಲ!) ಅಂತಹಾ ಚಿತ್ರಗಳ ಬಗ್ಗೆ ಮಾತನಾಡಿರುವ ಚಿತ್ರ ಕೂಡ ಇದು. ಬಿ.ಜಯಶ್ರೀ ಅವರು ತಮ್ಮ ಅರ್ಧ ವಯಸ್ಸಿನ ಗಾಯಕಿಯರನ್ನು ನಾಚಿಸುವಷ್ಟು ಮಾದಕತೆಯಿಂದ ಈ ಹಾಡನ್ನು ಹಾಡಿದ್ದಾರೆ, ಭಾವನಾ ಆ ಕಪ್ಪು ಉಡುಗೆಯಲ್ಲಿ ಬೆಳ್ಳಿಪರದೆಗೆ ಬೆಂಕಿ ಹಚ್ಚುತ್ತಾರೆ. ನಂಗೆ ಈಗಲೂ ನಂಬಿಕೆ ಬರ್ತಿಲ್ಲ, ಸೆನ್ಸಾರ್ ಮಂದಿ ಈ ಹಾಡು ಬಂದಾಗ ತೂಕಡಿಸುತ್ತಿದ್ದರಾ ಅಥವಾ “ಕಬ್ಬಿನ ಜಲ್ಲೆ” ಅಂದರೆ ಏನು ಅಂತ ನಿಜವಾಗಿಯೂ ಅರ್ಥವಾಗದಷ್ಟು ಮುಗ್ಧರಾ ಅಂತ (ತುಂಟತನವನ್ನು ಸ್ವೀಕರಿಸುವ ಮುಕ್ತತೆ ಆಗಲೀ ಪ್ರಬುದ್ಧತೆ ಆಗಲೀ ಖಂಡಿತಾ ಇಲ್ಲ!) ಇಲ್ಲಿ ಕೆಗೆಲ್ ಎಕ್ಸರ್ಸೈಜ್ “ಕಾಮನ ಬಿಲ್ಲೇ ಸ್ವಲ್ಪಾ ನಿಂತುಕೋ”, “ಆತುರವೇಕೆ ತಾಳ್ಮೆ ತಂದುಕೋ” ಎಂದು ಕಾವ್ಯರೂಪ ಪಡೆದುಕೊಂಡಿದೆ!

ರಾಗಿ ಹೊಲದಾಗೆ 

“ಅಣ್ಣಯ್ಯ” ಚಿತ್ರದ ಈ ಕ್ಯಾಚಿ ಹಾಡು ಬರುವುದು ಮದುವೆಯಾದ ಮರುದಿನ ಮಧು ರವಿಚಂದ್ರನ್ ಗೆ ಊಟ ತೆಗೆದುಕೊಂಡು ಹೊಲಕ್ಕೆ ಹೋದಾಗ. ಅವರಿಬ್ಬರೂ ಇನ್ನೂ ದೈಹಿಕವಾಗಿ ಸಾಕಷ್ಟು ಅಪರಿಚಿತರು. “ಊಟ” ಆದ ಮೇಲೆ ಅವಳ ಗೆಳತಿಯರು (ಸಹ ನರ್ತಕಿಯರು) ಅವಳನ್ನು ಛೇಡಿಸುತ್ತಾರೆ. “ತಿನ್ನುವುದು”, “ಮಾತನಾಡುವುದು” ಇದೆರಡರ ಪ್ರಸ್ತಾಪ ಹಾಡಿನ ತುಂಬಾ ಇದೆ, ಆದರೆ ಹಂಸಲೇಖ ಅವರು ಹೇಳುತ್ತಿರುವ ವಿಷಯವೇ ಬೇರೆ ಅಂತ ಸುಲಭವಾಗಿ ಗೊತ್ತಾಗುತ್ತೆ. “ನನ್ನ ಪತಿರಾಯನಿಗೆ ತಿನಿಸಲು” ಅಂತ ಒಂದು ಸಾಲು ಬರುತ್ತೆ, “ತಾನು ತಿಂದು ನನಗು ತಿನ್ನು ಎಂದರಮ್ಮ” ಅಂತ ಇನ್ನೊಂದು ಸಾಲು. “ಹೊಸ ಹೊಸ ಮಾತು ಕಲಿತುಕೊಂಡರಮ್ಮ” ಅಂತ ಮತ್ತೊಂದು ಸಾಲು. ಈ ಹಾಡು ಯೂಫಿಮಿಸ್ಮ್ (‘ಸೌಮ್ಯೋಕ್ತಿ’ ಅಂತೆ ಗೂಗಲ್ ಪ್ರಕಾರ!) ಗೆ ಬಹಳ ಒಳ್ಳೆ ಉದಾಹರಣೆ. “ನನ್ನ ಪುಟ್ಟ ಪತಿರಾಯ” ಅಂದ್ರೆ ಏನು ಅಂತ ಅರ್ಥ ಆಗ್ಲಿಲ್ಲ ಅಂದ್ರೆ ವಿವರಿಸಿ ಅಂತ ಮಾತ್ರ ನಂಗೆ ಕೇಳಬೇಡಿ ಪ್ಲೀಸ್!

ಚಂದಿರ ತಂದ ಹುಣ್ಣಿಮೆ ರಾತ್ರಿ 

“ಚಲಿಸುವ ಮೋಡಗಳು” ಚಿತ್ರದ ಈ ರಂಜನೀಯ ಹಾಡು ಹೊರನೋಟಕ್ಕೆ ತಮಾಷೆಯಾಗಿದ್ದರೂ ಬಹಳ ಆಳವಾದ ವಿಚಾರಗಳನ್ನು ಒಳಗೊಂಡಿದೆ. ಇದು ಒಂದು ಅಪರೂಪದ ‘ಬೆಡ್ ರೂಂ’ ಹಾಡು. ನಮ್ಮ ಸಿನಿಮಾಗಳಲ್ಲಿ ಹೆಣ್ಣು ‘ಮೊದಲ ಹೆಜ್ಜೆ’ ತೆಗೆದುಕೊಳ್ಳುವುದು ಅತೀ ವಿರಳ. ಒಂದೋ ಅವಳು ಕ್ಯಾಬರೆ ನರ್ತಕಿ ಆಗಿರಬೇಕು. ಇಲ್ಲಾ ಅವಳು ಹೀರೋಯಿನ್ ಆಗಿದ್ದರೆ ದೂರದಿಂದಲೇ ಕೇವಲ “ಮಾನಸಿಕ” ಪ್ರೇಮ ನಿವೇದನೆ ಮಾಡಿಕೊಳ್ಳಬೇಕು, ಅಥವಾ ನಿಮ್ಮನ್ನು ಪಡೆದ ನಾನೇ ಧನ್ಯೆ ಅಂತ ಪ್ರೀತಿಗಿಂತ ಭಕ್ತಿಯೇ ಹೆಚ್ಚಿರುವಂತೆ ಹಾಡಬೇಕು. ಆದರೆ ಈ ಹಾಡಿನಲ್ಲಿ ಹೆಣ್ಣು “ಮೊದಲ ಹೆಜ್ಜೆ” ತೆಗೆದುಕೊಳ್ಳುತ್ತಾಳೆ. ಅದಕ್ಕೆ ಅವಳಿಗೆ ಸಿಗುವ ಪ್ರತಿಕ್ರಿಯೆ ಏನು? “ನಿನ್ನ ಹೆಣ್ಣು ಅಂದೋರಿಗೆ ಬುದ್ಧಿ ಇಲ್ಲ, ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ” ಅನ್ನುವ ಕ್ರೂರವಾದ ಮಾತುಗಳು. ಇದೆಲ್ಲಾ ಯಾಕೆ? ಅತ್ಯಂತ ಸಹಜವಾದ ಕಾಮನೆಗಳನ್ನು ಹೊಂದಿರುವುದಕ್ಕೆ! ನಮ್ಮ ಸಮಾಜದ ಡಬಲ್ ಸ್ಟ್ಯಾಂಡರ್ಡ್ಸ್ ಗೆ ಹಿಡಿದಿರುವ ಕನ್ನಡಿ ಇದು. ಅಷ್ಟೇ ಅಲ್ಲ, ಈ ಹಾಡು ಒಂದು ಅವಿಭಕ್ತ ಕುಟುಂಬದಲ್ಲಿ ಇರಬಹುದಾದ ಸ್ಪೇಸ್ ನ ಸಮಸ್ಯೆಯನ್ನ ಚನ್ನಾಗಿ ಹೇಳುತ್ತೆ. ಮನೆಯಲ್ಲಿ ಎಲ್ಲ ವೇಳೆಯಲ್ಲೂ ಯಾರದ್ರೂ ಇದ್ದೆ ಇರುವ ಸಾಧ್ಯತೆ, ಅನಿರೀಕ್ಷಿತ ಸಮಯಗಳಲ್ಲಿ ಬಾಗಿಲು ಹಾಕಿಕೊಳ್ಳಲು ಆಗದಂಥ ಪರಿಸ್ಥಿತಿ, ಶಬ್ದಗಳನ್ನು ತಡೆಗಟ್ಟಲು ವಿಫಲವಾಗುವ ಕಿಟಕಿಗಳು – ಸಮಸ್ಯೆಗಳು ಒಂದೇ ಎರಡೇ?

ಓ ಮಾಸ್ಟರ್ ಜಿಮ್ ಮಾಸ್ಟರ್ 

ಇದು ಯಾವುದೋ ಒಂದು ಥ್ರಿಲ್ಲರ್ ಮಂಜು ಚಿತ್ರದ್ದು. ಹೆಸರು ಗೊತ್ತಿಲ್ಲ. ಇದರಲ್ಲಿ ಬೇರೆ ಹಾಡುಗಳಲ್ಲಿ ಕಂಡುಬರುವ ಯಾವುದೇ ವಿಶೇಷತೆಗಳಿಲ್ಲ. ಇದು ಎಷ್ಟು ಅಸಹ್ಯಕರವಾಗಿ ಇದೆ ಅಂದ್ರೆ ಬರೀ ಕೋಪ ಬರಬೇಕಿತ್ತು, ಆದರೆ ಇಷ್ಟೊಂದು ಕೆಟ್ಟದಾಗಿ ತೆಗೆಯೋಕೆ ಸಾಧ್ಯಾನಾ ಅಂತ ತುಂಬಾ ನಗೂನೂ ಬರುತ್ತೆ. “ಓ ಮಾಸ್ಟರ್, ಜಿಮ್ ಮಾಸ್ಟರ್, ಥ್ರಿಲ್ಲರ್ ಥ್ರಿಲ್ಲರ್, ಬಾಡಿ ಬಿಲ್ಡರ್” ಅಂತ ಶುರು ಆಗೋ ಹಾಡಿನಲ್ಲಿ ಪ್ರಾಸಕ್ಕಾಗಿ ಪ್ರಾಸ ಎನ್ನುವಷ್ಟರ ಮಟ್ಟಿಗೆ ಆಂಗ್ಲ ಪದಗಳ ಓವರ್ ಡೋಸ್ ಇದೆ. ವೀಡಿಯೊ ಟಿಪಿಕಲ್ ಥ್ರಿಲ್ಲರ್ ಮಂಜು ಹಾಡಿನ ಥರ ಇದೆ. ಥ್ರಿಲ್ಲರ್ ಮಂಜು ಗೆ ಇರುವ ಏಕೈಕ ಆಸಕ್ತಿ ಅಂದರೆ ವ್ಯಾಯಾಮ ಮಾಡೋದು – ಜಿಮ್ ಅಲ್ಲಿ! ಹೀರೋಯಿನ್ ಇವನ ಮುಂದೆ ವಿಲವಿಲನೆ ಬಿದ್ದು ಹೊರಳಾಡುತ್ತಾಳೆ, ಕ್ಯಾಮೆರಾ ಹಾಳಾಗೋ ಮಟ್ಟಿಗೆ ತನ್ನ ಅಂಗಾಂಗಗಳಿಂದ ಧಾಳಿ ಮಾಡ್ತಾಳೆ. ಆದರೂ ಥ್ರಿಲ್ಲರ್ ಮುಖದಲ್ಲಿ ಒಂದೇ ಒಂದು ಭಾವನೆಯೂ ಸುಳಿದಾಡಲ್ಲ! ಇವರ ಪ್ರಕಾರ ಒಂದು ಹೆಣ್ಣು ಗಂಡಿನಿಂದ ತುಂಬಾ ಬಯಸೋದು ಪ್ರೀತಿ, ನಂಬಿಕೆ, ಅಕ್ಕರೆ, ಪ್ರಾಮಾಣಿಕತೆ, ಗೌರವ – ಇದ್ಯಾವುದೂ ಅಲ್ಲ; ಬಯಸೋದು ಒಂದೇ ಒಂದನ್ನ – ಜಿಮ್ ಬಾಡಿ! ಯಪ್ಪಾ, ಅಸಹ್ಯ!!

ಸೋ ನೀವು ತುಂಬಾ ಇಷ್ಟ ಪಡೋ ‘ತುಂಟ’ ಹಾಡುಗಳು ಯಾವುದು?

 

– ವಾಸುಕಿ ರಾಘವನ್

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್

  1. ಚೆನ್ನಾಗಿ ಬರೆದಿದ್ದೀರಿ. ವಿಮರ್ಶೆ ಮಾಡುವ ಸಾಮರ್ಥ್ಯವಿದೆ. ಬರೆಯುವ ಕಲೆ ಇದೆ. ಮುಂದುವರಿಸಿ.

  2. ಕನ್ನಡದಲ್ಲಿ ಈ ರೀತಿಯ ನೂರಾರು ಹಾಡುಗಳಿವೆ.
    ಆದರೆ ನಮಗೆ ಕಣ್ಣಿಗೆ ಕಾಣುವ ವ್ಯತ್ಯಾಸವೆಂದರೆ ಹಳೆಯ ಹಾಡುಗಳಲ್ಲಿನ ತುಂಟತನ ಹುದುಗಿರುತ್ತದೆ.. ನಾವದನ್ನು ಹೆಕ್ಕಿ ತೆಗೆಯುವತನಕ.
    ಆದರೆ ಇತ್ತೀಚಿನ ಹಾಡುಗಳಲ್ಲಿ ತುಂತತನವೆಂಬ ಹೆಸರಿಟ್ಟು ಅಶ್ಲೀಲ ಪದಗಳನ್ನೇ ರಾಜಾರೋಷವಾಗಿ ಬಳಸುತ್ತಿರುವುದು ಬಹಳ ಬೇಸರ ತರುತ್ತಿದೆ. "ಸೊಂಟದ ಇಸ್ಯ, ಬೇಡವೋ ಶಿಸ್ಯ" ಅನ್ನುವ ಧಾಟಿಯ ಸಾಲುಗಳಿಂದ ಮುಜುಗರ ಉಂಟಾಗುತ್ತಿರುವುದಂತೂ ನಿಜ.

    ಅದ್ಯಾವುದೇ ರೀತಿಯ ಹಾಡಾಗಲಿ, ಅದು ಭಾವತರಂಗಗಳನ್ನು ತನ್ನ ಸಾಲುಗಳಿಂದ ಸೃಷ್ಟಿ ಮಾಡುವಂತಿರಬೇಕು. ಅದ ಬಿಟ್ಟು ನೇರವಾಗಿ ಕೇಳುಗನಿಗೆ(ಇಲ್ಲಿ ನೋಡುಗನಿಗೆ!!) ಕೆಲಸವನ್ನೇ ಕೊಡದಂತೆ, ಏನೇನೊ ಬರೆದು ಒಂದು ವರ್ಗದ ಜನರಿಗೆ ಮಾತ್ರ ಖುಷಿ (!!) ಕೊಟ್ಟು, ಬೇರೆಯವರಿಗೆ ಮುಜುಗರ ಮಾಡುವಂತಿರಬಾರದು.

  3. ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ. ಹಾಗೇ ಇನ್ನೂ ತುಂಬಾ ಹಾಡುಗಳಿವೆ. ಹೇಳುತ್ಥಾ ಹೋದರೆ ಹಂಸಲೇಖರ ಒಂದೊಂದು ಹಾಡಿನಲ್ಲಿರುವ ಅರ್ಥಗಳದ್ದೇ ಒಂದೊಂದು ಆರ್ಟಿಕಲ್‌ ಆಗಬಹುದು..!!

  4. ಪ್ರೇಮ್ (ಜೋಗಿ) ಗೆ ಪೋಲಿ ಅನ್ನೋ ಪದ ತು೦ಬಾ ಇಷ್ಟದ್ದು. ಬಹಳಷ್ಟು ಚಿತ್ರಗಳಲ್ಲಿ, ಹಾಡುಗಳಲ್ಲಿ ಯಥೇಚ್ಛವಾಗಿ ಬಳಸಿದ್ದಾರೆ. ಆಮೇಲೆ ರವಿಚ೦ದ್ರನ್ ಚಿತ್ರಗಳಲ್ಲಿ ಬರೋ ಜೋಕ್ ಗಳೆಲ್ಲವೂ ಎಲ್ಲರಿಗೂ ಗೊತ್ತು. ಪ್ರೀತ್ಸೋದ್ ತಪ್ಪಾ ಚಿತ್ರದ ರಾಜ ರಾಜ ಸಾಹಿತ್ಯ ಏನೋ ಎಡವಟ್ಟಾಗಿದೆ.

Leave a Reply

Your email address will not be published. Required fields are marked *