ಸರಣಿ ಬರಹ

ಕನಸೆಂಬೋ ಕುದುರೆಯನೇರಿ:ಮಹಾದೇವ ಹಡಪದ


ಜಗತ್ತಿನ ಶ್ರೇಷ್ಠ ಚಿತ್ರನಿರ್ದೇಶಕರಾದ ಜಪಾನಿನ ಕುರೊಸವಾ ಅವರ ರಶೊಮನ್ ಗೇಟ್ ಚಿತ್ರದ ಮಾದರಿಯಲ್ಲಿ ಕನಸೆಂಬೋ ಕುದುರೆಯನೇರಿ ಸಿನಿಮಾವನ್ನು ಕಾಸರವಳ್ಳಿಯವರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಒಂದು ಘಟನೆಯನ್ನು ಏಳೆಂಟು ಜನ ತಮಗೆ ಕಂಡ ಸತ್ಯದ ಎಳೆಯಲ್ಲಿ, ಗ್ರಹಿಸಿದ ರೀತಿಯಲ್ಲಿ ಹೇಳುವ ರಶೋಮನ್ ಗೇಟ್ ಸಿನಿಮಾದ ನಿರೂಪಣಾ ತಂತ್ರವನ್ನು ಕನಸೆಂಬೋ ಕುದುರೆಯನೇರಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಆದರೆ ರಶೋಮನ್ ಚಿತ್ರದ ಸಾಧ್ಯತೆಗಳಿಗಿಂತ ಹೆಚ್ಚು ಸಾತ್ವಿಕವಾದ ವಿಭಿನ್ನ ಹಾದಿ ತುಳಿದಿದೆ. ಈ ಚಿತ್ರದಲ್ಲಿ ವಾಸ್ತವದ ಮತ್ತೊಂದು ಮಜಲು ಕಾಣಿಸುತ್ತದೆ.  ಕನಸು, ನಂಬಿಕೆಗಳು ಸುಳ್ಳಾಗುತ್ತ ಹೋದಂತೆ ಅಧೀರಗೊಳ್ಳುವ ಸಮುದಾಯಗಳು ಬದಲಿ ಮಾರ್ಗಗಳನ್ನು ಹುಡುಕಿಕೊಳ್ಳುತ್ತವೆ. ನಂಬಿಕೆ-ಮೂಢನಂಬಿಕೆ, ವಾಸ್ತವ ಮತ್ತು ಭ್ರಮೆಯ ಕಲ್ಪನೆಗಳನ್ನು  ಈ ಚಿತ್ರದ ಕಥಾವಸ್ತು ಒಳಗೊಂಡಿದೆ.

ವಿಶಿಷ್ಟವಾದ ಪರಿಸರವನ್ನು ಕಥೆಯೊಳಗೆ ಕಟ್ಟಿಕೊಡುವ ಅಮರೇಶ ನುಗಡೋಣಿಯವರ 'ಸವಾರಿ' ಕತೆಯನ್ನು ಆಧಾರವಾಗಿಟ್ಟುಕೊಂಡು ವಾಸ್ತವ ಅವಾಸ್ತವ ನೆಲೆಗಳಲ್ಲಿ ಪುನರ್ನಿರ್ಮಿಸಿರುವ  ಚಿತ್ರ ಕನಸೆಂಬೋ ಕುದುರೆಯನೇರಿ. ಆವರ್ತನದ ಮಾದರಿಯಲ್ಲಿ ದೃಶ್ಯಗಳನ್ನು ಸಂಯೋಜಿಸಿರುವ ತಂತ್ರ ಯಾಂತ್ರಿಕವಾಗದೆ ಮತ್ತೊಂದು ಮಗ್ಗುಲಿನ ಸತ್ಯವನ್ನು ಬಿಚ್ಚಿಡುತ್ತದೆ. ಒಂದೆಳೆಯ ನೂಲಿಗೆ ಒಳ ನೂಲೊಂದು ಅಡ್ಡ ಸಿಕ್ಕಿಕೊಂಡು ನೆಯ್ಗೆಯಲ್ಲಿ ಹೆಣೆದಾಗ ಅದು ವಸ್ತ್ರವಾಗಿ ಹೇಗೆ ರೂಪುಗೊಳ್ಳುತ್ತದೋ ಹಾಗೆ ವಸ್ತುವೊಂದರ ಒಂದು ಆಯಾಮದ ಕಥೆಯನ್ನು ಇನ್ನೊಂದು ಆಯಾಮದಲ್ಲಿ ಕಂಡಾಗ ಮನುಷ್ಯನ ನಂಬುಗೆಗೆ ಪೆಟ್ಟು ಕೊಡುವ – ಕನಸುಗಳ ಕದಿಯುವ ಮತ್ತು ಆಕಾಂಕ್ಷೆಗಳನ್ನು ಹುಸಿಗೊಳಿಸುವ ಆಧುನಿಕ ಜೀವನಪದ್ಧತಿಯ ಕೊಳಕುತನ ಕಾಣಿಸುತ್ತದೆ. ಸತ್ಯ-ಸುಳ್ಳುಗಳ ಪರಾಮರ್ಶನ ಆರಂಭಿಸುವ ಮೊದಲು ಇಲ್ಲಿ ಕನಸುಗಳು ಸೋಲುತ್ತವೆ. ಸೋಲುವ ಬದುಕಿನ ಬೆನ್ನುಬಿದ್ದು ಸವಾರಿ ಮಾಡುವ ಹುಮ್ಮಸ್ಸಿನ ಕನಸುಗಳನ್ನು ಮತ್ತೆ ಮತ್ತೆ ನಿರ್ಮಿಸಿಕೊಳ್ಳುವ ಈರ್‍ಯಾ ಮತ್ತು ರುದ್ರಿಯರ ಆಸರೆಗೆ ಗುರುಸಿದ್ಧನೆಂಬ ದೈವಬಲವಿದೆ. ಸಿದ್ಧ ಬರುತ್ತಾನೆ ಎಂಬುದೊಂದೇ ಅವರ ಕನಸುಗಳಿಗೆ ಆಸರಾಗಿ ನಿಲ್ಲುವ ಅಸ್ತಿತ್ವ.

ಸುಡುಗಾಡ ಸಿದ್ಧ ಅಂದ್ರೆ ಶಿವನ ಖಾಸಾ ನಿಕಟ ಸಂಬಂಧಿ. ರಾತ್ರಿಯ ಹೊತ್ತಲ್ಲಿ ಬಂದು ಹೋಗುವ ಅವನ ಸೇವೆಗಾಗಿಯೇ ಊರಲ್ಲಿ ಕೆಲವು ನೇಮದ ಮನೆಗಳಿರುತ್ತವೆ. ಆ ನೇಮದ ಮನೆಗಳಲ್ಲಿ ಆತನ ಪೂಜೆ, ಊಟೋಪಚಾರ ನಡೆಯುತ್ತದೆ. ಸತ್ತಾಗ ಕುಣಿ ತಗೆಯುವ ಬ್ಯಾಗಾರ ಈರ್ಯಾನೂ ಆತನ ಒಕ್ಕಲುಮಗನಾದ್ದರಿಂದ ಅವನ ಮನೆಗೆ ಸಿದ್ಧ ಬರುತ್ತಿರುತ್ತಾನೆ. ರಾತೋರಾತ್ರಿ ಬರುವ ಸಿದ್ಧ ನೇಮ ಒಪ್ಪಿಸಿಕೊಳ್ಳುವುದು ಈರ್‍ಯಾ ರುದ್ರಿಯರ ಮನೆಯ ಪರಂಪರೆ ಆಗಿರುತ್ತದೆ. ಸಿದ್ಧ ಕನಸಿನಲ್ಲಿ ಬಂದರೆ ಆ ದಿವಸ ಊರಿನಲ್ಲಿ ಯಾರಾದರೂ ಸಾಯುತ್ತಾರೆ ಎಂಬುದನ್ನುಈರ್‍ಯಾ ನಂಬಿರುತ್ತಾನೆ. ಆದರೆ ಕನಸು ಸುಳ್ಳಾಗುತ್ತ ಹೋದಂತೆ ಆತನೊಳಗಿನ ಆತ್ಮವಿಶ್ವಾಸವೂ ಕುಸಿಯತೊಡಗುತ್ತದೆ.

ಅಂಗಿಗೆ ಅಂಟಿರುವ ಬಣ್ಣವನ್ನು ತೊಳೆದುಕೊಳ್ಳಲು ಹವಣಿಸುವ ಈರ್‍ಯಾ ಸಿನೆಮಾದ ತುಂಬ ತಾನು ನಂಬಿದ್ದ ಕನಸುಗಳಿಂದ ಮುಕ್ತನಾಗಲಾರ. ವಾಸ್ತವವೇ ಸುಳ್ಳೋ ಅಥವಾ ಸುಳ್ಳೇ ವಾಸ್ತವವೋ ಎಂಬ ಗೊಂದಲದಲ್ಲಿ ಬದುಕುತ್ತಿರುತ್ತಾನೆ. ಕನಸಲ್ಲಿ ಗುರುಸಿದ್ಧ ಬಂದು ಕೆಲಸಕ್ಕ ಹೊತ್ತಾಯಿತು ಅಂದಾಗ ಈರ್‍ಯಾ ಚಿಗಿತುಕೊಳ್ಳುತ್ತಾನೆ. ನೆನ್ನೆ ದಿವಸ ಹಿರೇಗೌಡರ ಮಗ ಮತ್ತು ಆತನ ಹೆಂಡತಿ ಊರಿಗೆ ಬಂದಿದ್ದಾರೆ. ಆರು ತಿಂಗಳಿಂದ ಹಿರೇಗೌಡರು ಹಾಸಿಗೆ ಹಿಡಿದಿದ್ದಾರೆ… ಹಿರೇಗೌಡರು ಸತ್ತಿದ್ದಾರೆಂದು ಹೆಡಿಗೆ, ಸಣಿಕೆ, ಹಾರೆಗಳ ಸಮೇತ ಗೌಡರ ವಾಡೆಗೆ ಬರುತ್ತಾನೆ. ಆದರೆ ಅಲ್ಲಿ ಕನಸನ್ನು ಸುಳ್ಳು ಮಾಡಲಿಕ್ಕಾಗಿ ಎಲ್ಲವೂ ಗೌಪ್ಯವಾಗಿದೆ. ಸತ್ಯವನ್ನು ಒಳಗೆ ನುಂಗಿಕೊಳ್ಳುವ ಮಠದಯ್ಯ ಕೊಡುವ ಭಕ್ಷಿಸನ್ನು ಪಡೆದ ಈರ್‍ಯಾ ಗಡಂಗಿಗೆ ಹೋಗಿ ಸರಾಯಿ ಪಡೆದು ಕುಣಿ ತಗೆಯಲು ಹೋಗುತ್ತಾನೆ. ತನ್ನ ಕೆಲಸ ಮುಗಿಸಿ  ವಾಡೆಗೆ ಬಂದ ಈರ್‍ಯಾ ಖುಷಿ ಕೇಳುತ್ತಾನೆ. ಗುಡಿಸಲಿಗೆ ಕಳಿಸಿಕೊಡುತ್ತಾರೆಂದು ನಂಬುತ್ತಾನೆ. ತಡರಾತ್ರಿಯಾದರೂ ಖುಷಿ ಬರದಿದ್ದಾಗ ತನ್ನ ಕನಸು ಸುಳ್ಳಾಯಿತೇನೋ ಎಂಬ ಅಳುಕಿನಲ್ಲಿ ಒದ್ದಾಡುತ್ತಾನೆ. ಆದರೆ ಮತ್ತೊಂದು ಮಗ್ಗುಲಿನ ವಾಸ್ತವದಲ್ಲಿ ಅದೇ ದೃಶ್ಯವನ್ನು ಮತ್ತೊಮ್ಮೆ ತೋರುವಾಗ ಹಿರೇಗೌಡ ಸತ್ತಿದ್ದಾನೆ. ಫ್ಯಾಕ್ಟರಿಯವರಿಗೆ ಜಮೀನು ಮಾರುವ ಕಾರಣಕ್ಕಾಗಿ ಸತ್ತಿರುವ ಸುದ್ದಿಯನ್ನು ಮುಚ್ಚಿಟ್ಟು ಈರ್‍ಯಾನ ಕನಸನ್ನು ಕಸಿದುಕೊಳ್ಳಲಾಗಿದೆ. ವಾಡೆದ ಕಥನದಲ್ಲಿ ನಂಬಿಕೆಗಳನ್ನು ಸುಳ್ಳು ಮಾಡಲಾಗುತ್ತಿದೆ. ಅದು ಬರೀ ವಾಡೆಯ ಕತೆ ಆಗಿದ್ದರೆ ಕನಸು ಸುಳ್ಳಾಗುತ್ತಿರಲಿಲ್ಲ. ಸಾಂದರ್ಭಿಕ ಒತ್ತಡಗಳು ಆ ಹೊತ್ತನ್ನು ಹಾಗೆ ನಿರೂಪಿಸುವಂತೆ ಮಠದಯ್ಯನನ್ನು ಪ್ರೇರೆಪಿಸುತ್ತವೆ.

ಫ್ಯಾಕ್ಟರಿಯವರಿಗೆ ಹೊಲ ಮಾರಲು ಹೋದ ಗೌಡರ ಮಗ ಬರುವುದು ತಡವಾದಾಗ ಹೆಣದ ವಾಸನೆ ಮನೆಯಂತ ಮನಿಯಲ್ಲ ದುರ್ನಾತ ಹಿಡಿಯುತ್ತದೆ. ಸುದ್ದಿ ಮುಚ್ಚಿಡುವ ಸಲುವಾಗಿ ಆ ದಿವಸ ವಾಡೇದ ಆಳುಮಕ್ಕಳಿಗೆಲ್ಲ ಕೆಲಸವಿಲ್ಲ. ಮೊಮ್ಮಗಳಿಗೆ ಮನೆಯಲ್ಲಿ ಕೂಡಲಾಗುವುದಿಲ್ಲ. ರುದ್ರಿ ಏನೋ ಸತ್ತಿರಬಹುದೆಂದು ಶಂಕಿಸಿ ನೋಡಲು ವಾಡೆಯ ಒಳಗೆ ಬಂದಾಗ ಮಠದಯ್ಯ ಆಕೆಯನ್ನು ತಡೆಯುತ್ತಾನೆ. ಮನೆಯಲ್ಲಿ ಹೆಣವಿಟ್ಟುಕೊಂಡು ಅಪಚಾರ ಮಾಡಿದ್ದಕ್ಕೆ ಗುರುಸಿದ್ಧ ಬರುತಾನೆ ಅನ್ನುವುದು ಮಠದಯ್ಯನಿಗೆ ಪರಿಹಾರವಾಗಿ ಕಾಣುತ್ತದೆ. ಮಠದಯ್ಯ ಆ ಜಮಾನಾದ ಕಡೆಯ ಕೊಂಡಿಯ ಹಾಗೆ ವಾಡೆಯನ್ನು ನಿರ್ವಹಿಸುತ್ತಾನೆ.

ರುದ್ರಿಯ ಕನಸು ಕೂಡ ಸುಳ್ಳಾಗುತ್ತ ಹೋದಂತೆ ಈರ್‍ಯಾನ ಆತ್ಮವಿಶ್ವಾಸ ಕುಸಿದುಬೀಳತೊಡಗುತ್ತದೆ. ಬಸಣ್ಣಿ ಎಂಬ ಪ್ರಗತಿಪರ ರೈತನಿಗೆ ಅದೊಂದು ಮೂಢನಂಬಿಕೆಯಾಗಿ ಕಾಣಿಸುವುದು. ನಂಬಿಕೆಯನ್ನು ಸುಳ್ಳಾಗಿಸಿ ಈರ್‍ಯಾನನ್ನು ಕೆಲಸಕ್ಕೆ ಹಚ್ಚುವ ಸಲುವಾಗಿ ಬರುತ್ತಿದ್ದ ಗುರುಸಿದ್ಧನ ದಾರಿತಪ್ಪಿಸುತ್ತಾನೆ. ದ್ವಂದ್ವಾತ್ಮಕವಾದ ಚಿತ್ರದ ನಿರೂಪಣೆಯಲ್ಲಿ ಬಸಣ್ಣ ಕನಸನ್ನು ಕಸಿದುಕೊಳ್ಳಲಾರ ಹೊರತಾಗಿ ಸುಳ್ಳಾಗಿಸಲು ಪ್ರಯತ್ನಿಸುತ್ತಾನೆ. ಇಲ್ಲಿ ಚಿತ್ರದ ಕತಾ ಎಳೆಯ ಹಿಂದೆ ಹೋಗಬೆಕಾದ ಪ್ರೇಕ್ಷಕ ತನ್ನೊಳಗೆ ವಾಸ್ತವ ಮತ್ತು ಅವಾಸ್ತವದ ನೆಲೆಗಳನ್ನು ಹುಡುಕಿಕೊಳ್ಳಲು ಆರಂಭಿಸುತ್ತಾನೆ. ದ್ವಿಮುಖ ಚಲನೆಯಲ್ಲಿ ಸಾಗುವ ಕತೆಯಲ್ಲಿ ಒಂದು ದೃಶ್ಯವನ್ನು ಎರಡೆರಡು ಬಾರಿ ತೋರಿಸುವ ಕಾರಣದಿಂದ ಸಹೃದಯ ಹೆಚ್ಚು ಜಾಗೃತನಾಗುತ್ತಾನೆ.

ಹಿರೇಗೌಡರು ಸತ್ತಿದ್ದಾರೆಂದು ಸುದ್ದಿ ಮಾಡುತ್ತಾರೆ. ಕುಣಿ ತೋಡಲು ಬರಬೇಕೆಂದು ಆಳು ಮಕ್ಕಳು ಕರೆಯಲು ಬಂದಾಗ ಈರ್‍ಯಾ ಹೋಗಲಾರ. ಅಮಾತಾಗಿ ಎತ್ತಿಕೊಂಡು ವಾಡೇಗೆ ಒಯ್ಯುತ್ತಾರೆ.  ಮೂಗರಳಿಸಿ ಹೆಣದ ವಾಸನೆ  ಹಿಡಿದು… ತನ್ನ ಕನಸಲ್ಲಿ ಗುರುಸಿದ್ಧ ಬಂದ ದಿನವೇ ಹಿರೇಗೌಡರು ಸತ್ತಿದ್ದಾರೆಂಬುದನ್ನು ಈರ್‍ಯಾ ಅಂದಾಜಿಸುತ್ತಾನೆ. ತನ್ನ ನಂಬಿಕೆ ಸುಳ್ಳಲ್ಲ ಕನಸು ಸುಳ್ಳಲ್ಲ ಎಂಬುದನ್ನು ಜನಗಳಿಗೆ ಹೇಳಬೇಕೆಂದು ಹಂಬಲಿಸುತ್ತಾನೆ.. ಆದರೆ ಆಳುಮಕ್ಕಳು ಬಿಡಲೊಲ್ಲರು. ಒದೆ ತಿಂದು ಮನೆಮೂಳಾಗಿ ಬಿದ್ದ ಈರ್‍ಯಾ ನಂಬಿಕೆಗಳನ್ನು ಕನಸುಗಳನ್ನು ಅಷ್ಟಕ್ಕೆ ಬಿಟ್ಟು ಕಡೆಯ ದೃಶ್ಯದಲ್ಲಿ ಹೊಸದೊಂದು ಕನಸಿನ ಕುದುರೆ ಏರಿ ನಿಲ್ಲುತ್ತಾನೆ. ಹಾಳುಮಡ್ಡಿಯಲ್ಲಿ ತೋಟ ಮಾಡುವ ಹಂಬಲ ಈರ್‍ಯಾನದ್ದು.  ಇಲ್ಲಿಯವರೆಗೂ ಕನಸಲ್ಲಿ ಕಾಣಿಸಿಕೊಳ್ಳುವ ಗುರುಸಿದ್ದ ಈಗ ಬರುತ್ತಾನೆ. ಕುಲಗುರುವೇ ಒಕ್ಕಲುತನದ ಹೊಸಪಾಠ ಹೇಳಿಕೊಡುವಲ್ಲಿಗೆ ಚಿತ್ರ ಮುಗಿಯುತ್ತದೆ. ಬಿಚ್ಚಿಕೊಳ್ಳುವ ಹಗ್ಗವು ಬದುಕು ತುಂಡಿಲ್ಲದ ಏಕೋಚಲನೆ ಎಂಬ ಜನಪದರ ನಂಬುಗೆಯಾಗಿ ಕಾಣಿಸುತ್ತದೆ.

ಬಯಲು ಬಂಜರು ಮಡ್ಡಿಯ ಲ್ಯಾಂಡಸ್ಕೇಪಗಳು, ದಿನ್ನೆಯ ಮೇಲೆ ನಿಂತು ದಾರಿ ಕಾಯುವ ಪಾತ್ರಗಳು. ದೇವರಗಿಡ, ಗುಡಿಸಲು, ನೀರಿನ ಹೊಂಡ, ವಾಡೆಯ ಏಕಾಂತದ ದೃಶ್ಯಗಳು ಸಿನಿಮಾದ ಆಂತರ್ಯವನ್ನು ಶ್ರೀಮಂತಗೊಳಿಸಿವೆ. ವೈಜನಾಥ ಬಿರಾದಾರ, ಉಮಾಶ್ರೀ ಮತ್ತು ಸದಾಶಿವ ಬ್ರಹ್ಮಾವರ್ ಅವರ ಪಾತ್ರಗಳಂತೂ ಸಿನಿಮಾಕ್ಕೆ ಜೀವಕಳೆ ಕೊಟ್ಟಿವೆ. ಹೆಚ್.ಎಮ್. ರಾಮಚಂದ್ರ ಅವರ ಛಾಯಾಗ್ರಹಣದ ಕೈಚಳಕವೋ ಎಂ.ಎನ್.ಸ್ವಾಮಿಯವರ ಸಂಕಲನವೋ ವಾಸ್ತವ ಭ್ರಮೆಗಳೆರಡರ ನಿರೂಪಣೆ ಸಿನೆಮಾದ ಆಶಯಕ್ಕೆ ಪೂರಕವಾಗಿದೆ. ಭಾಷೆ, ಸಂಗೀತ, ವಸ್ತ್ರವಿನ್ಯಾಸ ಮತ್ತು ಕಥನ ಸಾಹಿತ್ಯ ಪ್ರಾದೇಶಿಕತೆಗೆ ತಕ್ಕಂತೆ ಇರುವುದು ಒಟ್ಟು ಕಲಾಕೃತಿಯ ಅಂದವನ್ನು ಹೆಚ್ಚಿಸಿದೆ.


ಅಮರೇಶ ನುಗಡೋಣಿಯವರ 'ಸವಾರಿ' ಕತೆ ಓದಲು ಇಲ್ಲಿ ಕ್ಲಿಕ್ಕಿಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕನಸೆಂಬೋ ಕುದುರೆಯನೇರಿ:ಮಹಾದೇವ ಹಡಪದ

  1. ಉತ್ತಮ ವಿಮರ್ಶೆ .ಗಿರೀಶ್ ಕಾಸರವಳ್ಳಿಯವರ ಚಿತ್ರಗಳನ್ನು ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬಾ ಚೆನ್ನಾಗಿ ಪರಿಚಯಿಸುತ್ತಿದ್ದೀರಿ. 

Leave a Reply

Your email address will not be published. Required fields are marked *