ಕನಸು: ದಿವ್ಯ ಆಂಜನಪ್ಪ

'ಕನಸು', ಕೇಳಲೆಷ್ಟು ಸುಮಧುರ!. ಕನಸೆಂಬುದು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಹುಟ್ಟುತ್ತಾ ಕಾಡುತ್ತಲೇ ಇರುವುದು. ಕನಸು ಕಾಣದ ಮನಸ್ಸು ಸಾಧ್ಯವೇ? ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಬದುಕಲಿ ಸೊಗಸೇ ಇರುತ್ತಿರಲಿಲ್ಲ. ಬದುಕು ಎಂದಾಗ ಅದರೊಳಗಿನ ಸೋಲು ಗೆಲುವುಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಸೋಲು ಗೆಲುವುಗಳು ಎಂಬ ಅಂಶಗಳು ಹುಟ್ಟಿಕೊಳ್ಳಲೂ ಮತ್ತೂ ಈ ಕನಸುಗಳೇ ಕಾರಣ. ಆದರೂ ಎಲ್ಲರೂ ಕನಸಿನ ದಾಸರೇ. ''ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ; ಕನಸೇ ಇಲ್ಲದ ದಾರಿಯಲಿ ಹೇಗೆ ನಡೆಯಲಮ್ಮ'' ಎನ್ನುವ ರವಿಚಂದ್ರನ್ರವರ ''ಕನಸುಗಾರ'' ಚಿತ್ರದ ಗೀತೆಯ ಈ ಒಂದು ಸಾಲು ನನ್ನನು ಸದಾ ಕಾಡುತ್ತದೆ. 'ಸೋತೆ ಇನ್ನಾಗದು' ಎನ್ನುವ ಪ್ರತೀ ಹಂತದಲ್ಲೂ ಅದೆಲ್ಲಿರುವುದೋ ಈ ಗಾನ ಬಂದು ಮನಕ್ಕೆ ರಾಚುತ್ತದೆ. ಎಚ್ಚೆತ್ತಂತೆ ಮತ್ತೆ ಮತ್ತೆ ನನ್ನೊಳ ಚೇತರಿಕೆ ಮತ್ತೆ ಕನಸ ಕುಸುರಿ ಪ್ರಾರಂಭ.

ಕನಸೇ ಹಾಗೆ; ಪ್ರಚೊದಿಸುತ್ತದೆ, ಬರಸೆಳೆಯುತ್ತದೆ ನೀಯತ್ತಿಗೆ ತಕ್ಕಂತೆ ಫಲವನ್ನೂ ಹತ್ತಿರಾಗಿಸುತ್ತದೆ. ಆದರೂ ಕನಸು ಕಾಡಿದಷ್ಟು ಮತ್ತಿನ್ಯಾವುದು ಮನುಷ್ಯನ ಮನಸ್ಸನ್ನು ಕಲಕಿಲ್ಲವೆನ್ನಬಹುದು. ಸಾಮಾನ್ಯವಾಗಿ ನಮಗೆ ಬೀಳೋ ಕನಸಿಗೂ ನಾವು 'ಕನಸು' ಎನ್ನುವ ಕನಸಿಗೂ ವ್ಯತ್ಯಾಸವುಂಟು. ದಿನನಿತ್ಯದ ಜೀವನದಲ್ಲಿ ನಮ್ಮ ನೋವು, ನಲಿವು, ಒಲವು ಹೀಗೆ ಯಾವುದನ್ನು ತೀರಾ ಮನಸ್ಸಿಗೆ ಹಚ್ಚಿಕೊಳ್ಳುತ್ತೇವೋ ಅವುಗಳೇ ರಾತ್ರಿಯ ಕನಸುಗಳಾಗಿ ಬರುವುದು.

ಮೊನ್ನೆಯಷ್ಟೇ ಬಿದ್ದ ಕನಸಿದು. ಕನಸಿನ ಕಾರಣಗಳನ್ನೂ ಊಹಿಸಿಬಿಟ್ಟಿದ್ದೆ ನಾನಾಗ. ಒಂದು ರಾತ್ರಿಯ ಕನಸಲ್ಲಿ ನಾನೊಂದು ಮಹಡಿಯ ಮೇಲೇರುತ್ತಿರುವೆ, ಮಹಡಿಯ ತೆರೆಸ್ಸನ್ನು ತಲುಪೋ ಸಮಯ, ಮಹಡಿಯ ಕೊನೆ ಮೆಟ್ಟಿಲು ಬಹಳ ಎತ್ತರವಾಗಿದೆ, ಸಾಮಾನ್ಯ ಅಳತೆಗಿಂತ ಹೆಚ್ಚು. ಸರಿ ಅಲ್ಲಿ ಒಂದಡಿಯಷ್ಟೇ ಜಾಗವಿತ್ತು ಕಾಲಿಡಲು. ಆದರೆ ಅಲ್ಲಿ ಅಷ್ಟಗಲವೂ ಒಂದು ನೀಲಿ ವಸ್ತ್ರ, ಅದರ ಮೇಲೆಲ್ಲಾ ಅರಿಶಿನ-ಕುಂಕುಮ, ನಿಂಬೆ ಹಣ್ಣು ಇತ್ಯಾದಿ ಏನೇನೋ. ಒಟ್ಟಿನಲ್ಲಿ 'ಮಾಟ' ಎನ್ನುವಂತೆ ಎಲ್ಲಾ ಅಂಶಗಳಿದ್ದವು. ಹಾಗಿದ್ದಾಗ ಅಲ್ಲಿ ಕಾಲಿಡಲು ಹಿಂಜರಿಕೆ. ಮೇಲೇರಬೇಕಾದ ಅನಿವಾರ್ಯ. ಕನಸಿನಲ್ಲೂ ನಾನು ಅಳುತ್ತಿದ್ದಂತೆ ಅನಿಸುತ್ತಿತ್ತು. ಯಾರೋ ಹೀಗೆಲ್ಲಾ ಮಾಡಿದ್ದಾರೆ ಮೂಢರು ಎಂದೊ, ನನಗಾಗದವರೂ ಇದ್ದಾರೆಯೇ ಎಂದೊ, ಇಷ್ಟ ಕಷ್ಟವಾಗುತ್ತಿದೆ ಎಂದೊ ನೋಯ್ಯುತ್ತಿದ್ದೇನೆ. ಮತ್ತೊಂದು ಆಶ್ಚರ್ಯವೆಂದರೆ ನನ್ನ ಹೊಟ್ಟೆಯಲ್ಲಿ ಮಗುವಿದ್ದಂತೆ ನಾನು ಅಷ್ಟು ಎತ್ತರಕ್ಕೆ ಏರಲಾಗದಂತಹ ಪರಿಸ್ಥಿತಿ. ಹಿಂದಿನಿಂದ ಒಬ್ಬರು ನನ್ನನು ಹತ್ತಿಸಲು ಹಿಡಿದಿದ್ದರು. ಮೇಲೊಬ್ಬ ಹೆಂಗಸು ಕೈ ಕೊಟ್ಟು ಸಹಕರಿಸುತ್ತಿದ್ದರು. ಆದರೂ ನನಗೆ ತೀರ ಸಂಕಟ!. ಸಿಕ್ಕಾಪಟ್ಟೆ ಭಯವಾಗಿ ಕಣ್ಣು ಬಿಟ್ಟು ಕನಸು ಎಂದು ಗೊತ್ತಾದ ಮೇಲೂ ಭಯಂಕರ ಹಿಂಸೆಪಟ್ಟಿದ್ದೆ ಆ ಇರುಳು.

ಬೆಳಗೆ ಎದ್ದಾಗಲೂ ಅದೇ ವೇದನೆ. ಯಾಕೆ ಹೀಗಾಯ್ತು ಅಂತೆಲ್ಲಾ ಚಿಂತನೆ. ಮೊದಲೆ ಈ ಟೀ,ವಿ ಚಾನೆಲ್ಗಳಲ್ಲಿ ಹೇಳೋ ಮಾತು ಕಿವಿಗೆ ಬಿದ್ದಿದ್ದು.. ಯಾರಾದರೂ ಮಾಟ ಮಾಡಿಸಿದ್ದರೆ ಅದು ನಮಗೆ ಸೂಚನೆ ನೀಡಲು ಕನಸುಗಳಲ್ಲಿ ಬರುತ್ತವೆಂದು. ಓ… ಇನ್ನೂ ಕಷ್ಟವಾಯ್ತು ಈ ಕನಸಿನ ವಿಶ್ಲೇಷಣೆ. ಸರಿ ಹಾಳಾಗಿ ಹೋಗಲಿ ಎಂದು ಸುಮ್ಮನಾಗಿ ಕೆಲಸಕ್ಕೆ ಹೊರಟೆ. ಮತ್ತೆ ಸಂಜೆ ಬಂದಾಗ ಅದೇ ಚಿಂತನೆ. ಆಗ ಹೊಳೆಯಿತು ನೋಡಿ; ದಿನವೂ ನೋಡೋ ಸಿರಿಯಲ್ನಲ್ಲಿ ಗರ್ಭಿಣಿ ಸ್ರ್ತೀಯೊಬ್ಬಳಿಗೆ ಕಾಡುವ ತರತರಹದ ರೀತಿಗಳನ್ನು ಕಣ್ಣುಬಿಟ್ಟುಕೊಂಡು ನೋಡಿ ನೋಡಿ ಕನಸಲಿ ನಾನೇ ಆ ಭಾವವನ್ನು ಭಾವಿಸಿದೆ ಎಂದು ತಿಳಿಯಿತು. ಇನ್ನು ಮಾಯಾ ಮಂತ್ರಗಳು; ಹಿಂದಿನ ದಿನವಷ್ಟೇ ನನ್ನಕ್ಕ ಮಾಟದ ಒಂದು ಕಥೆ ಹೇಳಿದ್ದಳು. ನನಗೂ ''ಹುಷಾರೂ'' ಎಂದೂ ಹೇಳಿದ್ದಳು. ಓಹ್! ಒಳ್ಳೆ ಕತೆಯಾಯ್ತು ನನ್ನದು ಅಂದುಕೊಂಡೆ. ಕತೆಗಳನ್ನು ನೋಡಿ, ಕೇಳಿಯೇ ಈ ಮಟ್ಟಕ್ಕೆ ತನ್ಮಳಾಗಿ ಹೋದರೆ ಹೇಗೆ? ಎಂದು ವಿನೋದವೆನಿಸಿದರೂ ತುಸು ಹೆಮ್ಮೆಯೇ ಅನಿಸಿತು. ಸಾಹಿತ್ಯಾತ್ಮಕವಾಗಿ ಈ ರೀತಿಯ ತನ್ಮಯತೆ ಒಂದು ಉತ್ತಮಾಂಶವೆನಿಸಿತು. 🙂

ಹಾಗೆಯೇ ನಾವು ಹೆಚ್ಚು ಬಯಸುವ ಹೊಸತನಗಳೂ ಸಹ ಹೀಗೆ ಕನಸುಗಳಾಗುತ್ತವೆ. ಬಹಳ ಅಪರೂಪವೆಂಬಂತೆ ಮಾತ್ರ ಅಸಂಬದ್ಧ ಕನಸುಗಳು ಬೀಳುತ್ತವೆ. ಅವುಗಳನ್ನೂ ಸೂಕ್ಷವಾಗಿ ವಿಶ್ಲೇಷಿಸಿದ್ದೇ ಆದಲ್ಲಿ ಅವುಗಳನ್ನೂ ಅರಿತುಕೊಳ್ಳಬಹುದು. ಇವಿಷ್ಟು ಒಂದು ರೀತಿಯ ಕನಸುಗಳು. ಈ ಕನಸುಗಳಿಗೆ ಸಮಯದ ಆಧಾರದ ಮೇಲೆ ನಿಜವಾಗುವುದೋ ಇಲ್ಲವೋ ಎಂದೂ ಕೂಡ ಅನಿಸಿಕೆಗಳಿವೆ. ಅವು ನಿಜವೋ ಸುಳ್ಳೋ ಅವರವರ ತರ್ಕಗಳು. ನನಗಂತೂ ಸುಳ್ಳು. ಆದರೆ ನಾವೇ ಕಾಣೋ ಕನಸುಗಳು ಬಹುಶಃ ನಿಜವಾಗಲೂ ಆಗಬಹುದು ಅದು ಮತ್ತೊಂದು ರೀತಿಯ ಕನಸುಗಳು. ಇವು ನಮ್ಮ ಕನಸುಗಳು; ಹಗಲುಗನಸುಗಳು.

ಹಗಲುಗನಸೆಂದು ಉತ್ಪ್ರೇಕ್ಷೆ ಮಾಡುವುದು ಬೇಡ. ಇವು ನಮ್ಮ ಸಾಧನೆಯ ಪ್ರಚೋದಕಗಳು, ಹುಮ್ಮಸ್ಸುಗಳು. ಕನಸುಗಳು ದೊಡ್ಡದಿರಲಿ ಚಿಕ್ಕದಿರಲಿ ನಾವು ಅದರೊಟ್ಟಿಗೆ ಅನುಭವಿಸುವ ಸಂತೋಷವು ಮುಖ್ಯ. ಹೀಗೆ ಭಿಕ್ಷುಕನೊಬ್ಬ ಅರಸನಾದ ಕನಸು, ಅಗಸನೊಬ್ಬ ಸಾಮಂತನಾದ ಕನಸುಗಳು ಉದಾಹರಣೆಗಳನ್ನು ನಾವು ಕತೆಗಳಲ್ಲಿ ಕೇಳಿರುತ್ತೇನೆ. ಇವೆಲ್ಲಾ ಚಿಕ್ಕಮಕ್ಕಳ ಕತೆಗಳು. ಈ ರೀತಿಯ ಕತೆಗಳು ನಮಗೆ ಕನಸುಗಳ ಕಲ್ಪನೆಯನ್ನು ನೀಡುತ್ತದೆ. ಆದಕಾರಣ ಸಣ್ಣ ವಯಸ್ಸಿನಲ್ಲಿ ನಾವು ಹೆಚ್ಚು ಹೆಚ್ಚು ಮಕ್ಕಳಿಗೆ ಕತೆಗಳನ್ನು ಹೇಳುತ್ತೇವೆ. ಕಲ್ಪನೆ-ವಸ್ತು ಪರಿಕಲ್ಪನೆಗಳನ್ನು ಮೂಡಿಸುವಲ್ಲಿ ಕತೆಗಳು ಮಹತ್ವದ ಪಾತ್ರ ವಹಿಸುತ್ತವೆ. ಜಾನಪದ ಕತೆಗಳಲ್ಲಂತೂ ಕತೆಗಳೊಳಗಿನ ಕನಸುಗಳು; ಕನಸುಗಳೊಳ ಕತೆಗಳು ಬಲು ರೋಚಕವಾಗಿರುತ್ತವೆ. ಸರಿಯಾಗಿ ಗ್ರಹಿಸಿದ್ದರೆ ಮಾತ್ರ ಕತೆ ಪೂರ್ಣವಾಗಿ ಅರ್ಥವಾಗುವುದು. ಇಲ್ಲದ್ದಿದ್ದರೆ ಇಲ್ಲ. ಅಂತಹ ಕತೆಗಳನ್ನು ನಾವು ಪದವಿ ಪಠ್ಯವಸ್ತುವಾಗಿ ಪಡೆಯುತ್ತೇವೆ. ಈ ಕತೆಗಳಿಗೂ ಕಲ್ಪನೆಗಳಿಗೂ ಕನಸುಗಳಿಗೂ ಎಲ್ಲೊ ಒಂದು ಆಂತರಿಕ ಸಂಭಂದವಿದೆ ಎಂದೆನಿಸುತ್ತದೆ. ಕೇಳುವ ಕತೆಗಳು ಕಲ್ಪನೆಗಳಲ್ಲಿ ಇನ್ನಷ್ಟು ರೆಕ್ಕೆಪುಕ್ಕ ಹೊಂದಿ ಕನಸುಗಳಲ್ಲಿ ಬೇರೆಯೇ ಹಕ್ಕಿಯಾಗಿ ಹಾರಾಡುತ್ತವೆ. ಹೌದಲ್ಲವೇ?! 🙂

ಹೀಗೆಲ್ಲಾ ನಾವು ನಮ್ಮ ಬಾಲ್ಯವನ್ನು ಕಳೆಯುವಾಗ ನಮ್ಮೊಳಗೆ ಹಲವು ಬಗೆಯ ಆಸೆಗಳು ಹುಟ್ಟಿಕೊಳ್ಳುತ್ತವೆ. ಮುಂದೆ ನಾನು ಚೆನ್ನಾಗಿ ಓದಬೇಕು, ಓದಿ ಡಾಕ್ಟರ್, ಎಂಜಿನಿಯರ್, ಟೀಚರ್, ಇಲ್ಲ ಸಿನೆಮಾ ನಟ, ರೈತ ಇತ್ಯಾದಿಯಾಗಿ ಆಗಬೇಕು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಬೆಳೆಯುತ್ತಾ ಹೋದಂತೆ ಆಸೆಗಳು ಕನಸುಗಳಾಗುತ್ತವೆ. ಅಂದುಕೊಂಡ ಆಸೆಗಳ ಸಾಕಾರಗಳಿಗೆ ನಾವು ನಮ್ಮದೇ ಆದ ರೂಪುರೇಶೆಗಳನ್ನು ಕೂಡಿಸುತ್ತಾ ಹೋಗುತ್ತೇವೆ. ಇವುಗಳೇ ನಮ್ಮ ಕನಸುಗಳು. ಕೆಲವರಿಗೆ ಬಾನೆತ್ತರದಲಿ ಹಾರಾಡೋ ಕನಸು. ಕೆಲವರಿಗೆ ಇದ್ದಲ್ಲಿಯೇ ಸ್ವರ್ಗ ಕಾಣೋ ಬಯಕೆ(ಕನಸು), ಮತ್ತೆ ಕೆಲವರಿಗೆ ಇರುವುದನ್ನು ಇಲ್ಲದವರಿಗೆ ನೀಡಿ ಆತ್ಮತೃಪ್ತಿಯ ಕನಸು.. 🙂

ಈ ಕನಸುಗಳಲ್ಲಿ ಶ್ರೇಷ್ಠ-ನೀಚವೆನ್ನುವ ಬೇಧವಿಲ್ಲ,, ಹೇಗೆ ಜನರಲ್ಲಿನ ಮನೋಭಾವವು ಭಿನ್ನವೋ ಹಾಗೆಯೇ ಅವರ ಕನಸುಗಳು ಅವರವರಿಗೆ ಶ್ರೇಷ್ಠವೇ ಸರಿ. ಆದರೆ ಈ ಕನಸುಗಳ ಸಾಕಾರಕ್ಕಾಗಿ ಮತ್ತೊಬ್ಬರ ಕನಸ್ಸನ್ನು ಕೀಳುವುದು ಸಲ್ಲದು. ಹಾಗೆಯೇ ಕನಸು ಕಾಣುವುದು ತಪ್ಪಲ್ಲ.

ಈ ಕನಸುಗಳು, ಎಷ್ಟೋ ಬಾರಿ ಈ ಬದುಕು ದುಸ್ತರವೆನಿಸಿದರೂ ಮತ್ತೂ ನಮ್ಮನ್ನು ಬದುಕುವಂತೆ ಮಾಡುತ್ತದೆ. ಭಗ್ನ ಕನಸುಗಳು ತಂದ ನೋವನ್ನು ಮರೆಯಲೂ ಮತ್ತೂ ಕನಸುಗಳೇ ಆಸರೆ. ಏನೇ ಹೇಳಿ ರವಿಚಂದ್ರನ್ರವರ ಕನಸಿನ ಪರಿಕಲ್ಪನೆ ಯಾಕೋ ತುಂಬಾ ಇಷ್ಟವಾಗುತ್ತದೆ. ಬದುಕಿನೆಡೆಗೆ ಸೆಳೆಯೋ ಆ ಎಲ್ಲಾ ಅಂಶಗಳೂ ನನಗೆ ಶ್ರೇಷ್ಠವೇ ಎನಿಸುತ್ತವೆ. ಹೀಗೆ ಒಮ್ಮೆ ಬಸ್ಸಿನಲ್ಲಿ ಒಬ್ಬ ಅಂಗವಿಕಲ ಹುಡುಗಿಯೊಬ್ಬಳು ಕುಂಟುತ್ತಾ ಬಸ್ ಹತ್ತಿ ಬಂದಳು, ನನ್ನೆದುರೇ ಬಂದು ಕುಳಿತಳು, ಹಾಗಾಗಿ ನಾನು ಗಮನಿಸುವಂತಾಯಿತು. ಪಾಪವೆಂದು ನೋಡುತ್ತಿದ್ದೆ. ಆದರೆ ಆಕೆಯು ತೊಟ್ಟ ಬಟ್ಟೆ ಎಷ್ಟು ಅಚ್ಚುಕಟ್ಟು!,, ಹೊಸ ತರಹದ ದುಪ್ಪಟ್ಟ! ಅಂದವಾಗಿ ಸಿಂಗರಿಸಿಕೊಂಡಿದ್ದಳು. ನೋಡಿ ಒಂತರ ಖುಷಿಯಾಗೋಯ್ತು. ಸಣ್ಣ-ಪುಟ್ಟ ತೊಂದರೆಗಳಿಗೆಲ್ಲಾ ಆಕಾಶವೇ ತಲೆ ಮೇಲೆ ಬಿದ್ದಂತೆ ತಲೆ ಕೆದರಿಕೊಂಡು ಓಡಾಡೊ ಜನರ ಮುಂದೆ ಆ ಹುಡುಗಿ ಸಿಕ್ಕಾಪಟ್ಟೆ ಆತ್ಮವಿಶ್ವಾಸದವಳು ಎಂದೆನಿಸಿತು. ಆ ಶೃಂಗಾರದ ಅಚ್ಚುಕಟ್ಟುತನ ಜೀವನದೆಡೆಗಿನ ಅವಳ ಜೀವನೋತ್ಸಾಹವೆನಿಸಿತು. ನಾನು ಕಲಿತೆ ಕೂಡ ಈ ಸಂದರ್ಭದಲ್ಲಿ,, 🙂

ಹೀಗೆ ಆಸೆಗಳು, ಕನಸುಗಳು ನಮ್ಮೊಳಗೆ ಮತ್ತೆ ಮತ್ತೆ ಹುಟ್ಟಬೇಕು ಜೀವನದ ಹಾದಿ ಸೊಗಸೆನಿಸಿಕೊಳ್ಳಲು. ಏನೇ ಬರಲಿ ಕನಸೊಂದಿರಲಿ! 🙂 ಎನ್ನುವಂತೆ ನಾವು ಕನಸುಗಳ ಆರಾಧಕರಾಗಬೇಕು. ನಿರ್ವಿಕಾರ, ನಿಸ್ವಾರ್ಥ ಕನಸುಗಳ ಮಾಲೀಕರಾಗಬೇಕು. ಮನಸ್ಸಿನಂತೆ ಕನಸುಗಳು, ಕನಸುಗಳು ಸುಂದರ; ಸುಂದರ ಕನಸುಗಳೇ ಮನುಷ್ಯನ ನಿಜ ಸೌಂದರ್ಯ. 🙂

ಧನ್ಯವಾದಗಳು,
ದಿವ್ಯ ಆಂಜನಪ್ಪ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
kotresh
kotresh
9 years ago

ಕನಸಿನ ಬರಹ ತುಂಬಾ ಚನ್ನಾಗಿದೆ

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago
Reply to  kotresh

thank u 🙂

ravivarma
ravivarma
9 years ago

nimma  baraha ola  manassannu tattuvantide..

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago
Reply to  ravivarma

thank u sir  

gurunath
gurunath
9 years ago

chennagide

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago
Reply to  gurunath

ಧನ್ಯವಾದಗಳು 

6
0
Would love your thoughts, please comment.x
()
x