ಲೇಖನ

ಕನಸು ಚಿವುಟಿದ ವಿಧಿ ಎದುರು ಕುಳಿತು…: ಕಾವೇರಿ ಎಸ್.ಎಸ್.


ಮನದ ತುಂಬ ದಿಗಿಲು, ಮನಸ್ಸು ಮೂಕ ಕಡಲು. ಕನಸು ಸೊರಗಿದೆ. ಸುತ್ತೆಲ್ಲ ನೀರವ ಮೌನ ಮನೆ ಮಾಡಿ ಕಾರ್ಗತ್ತಲ ಕಾರ್ಮೋಡ ಕವಿದು ಬೆಳದಿಂಗಳೂ ಕಪ್ಪಾದಂತೆ ಭಾಸವಾಗುತ್ತಿದೆ.

ಮನದಿ ಕಟ್ಟಿದ ಕನಸು ನುಚ್ಚುನೂರಾಗಿ ಕಣ್ಣು ತುಂಬಿ ಭಾವುಕತೆಯ ಹೊದ್ದು ನಲುಗಿದೆ. ಹೆಪ್ಪುಗಟ್ಟಿದ ನೋವಿನ ಮಡಿಲಲ್ಲಿ ಮಿಂದು ಮಡಿಯಾಗಬೇಕು ಎಂದುಕೊಂಡರೂ ಆಗದೇ ವಿಧಿಯ ಆಟಕ್ಕೆ ತಲೆ ಬಾಗಿ, ಅದರ ಮುಂದೆ ಶರಣಾಗಿ ಮಂಡಿಯೂರಿ ಕುಳಿತು ಬಿಕ್ಕುತ್ತಿದ್ದೇನೆ. ನನ್ನ ಆಲೋಚನೆ ಖಾಲಿ ಹಾಳೆಯಾಗಿದೆ. ಅದರಲ್ಲಿ ಏನೂ ಬರೆಯಲು ತೋಚದೇ ಒಂಟಿಯಾಗಿರುವ ನನ್ನನ್ನು ನೋಡಿ ನನ್ನ ಕನಸು ಮರುಗುತ್ತಿದೆ. ನಾ ಏನೂ ಮಾಡಲಾಗದೆ ಕೈಚೆಲ್ಲಿದ್ದೇನೆ. ನಿನ್ನ ಜೊತೆ ನಾನಿದ್ದೇನೆಂಬ ಆಸೆಯ ಮೂಡಿಸಿದ ಕನಸು ಇಂದು ಮೌನಕ್ಕೆ ಶರಣಾಗಿದೆ. ಮನಸ್ಸು ಬರಿದಾಗಿ ಕುಳಿತು, ಒಮ್ಮೆ ಮರುಗುತ್ತ, ಇನ್ನೊಮ್ಮೆ ಕೋಪಗೊಳ್ಳುತ್ತಾ ನನ್ನನ್ನೇ ದಿಟ್ಟಿಸುತ್ತಿದೆ.

ನಾ ಆ ನೋವಲ್ಲೂ ನಸುನಗುತ್ತಿದ್ದೇನೆ. ಇನ್ನೂ ಜೋರಾಗಿ ನಗಬೇಕೆನಿಸಿದರೂ ನಗಲಾಗದೇ ಉಸಿರಾಡುವ ಹೆಣವಾಗಿದ್ದೇನೆ. ನಾ ನಿರ್ಜೀವ ವಸ್ತುವಿನಂತಿರುವುದ ಅರಿತು ವಿಧಿಯೂ ನನ್ನತ್ತ ಬರಲು ಹೆದರುತ್ತಿದೆ. ನಾ ವಿಧಿಯ ದಿಟ್ಟಿಸುತ್ತಾ ಕಣ್ಣಲ್ಲೇ ಅದನ್ನು ಪ್ರಶ್ನಿಸುತ್ತಿದ್ದೇನೆ. ನಾ ಮಾಡಿದ ತಪ್ಪಾದರೂ ಏನು? ಯಾತಕ್ಕಾಗಿ ಈ ಶಿಕ್ಷೆ? ಎಂದು. ವಿಧಿಗೂ ಗೊತ್ತಿಲ್ಲ ನಾ ಮಾಡಿದ ತಪ್ಪು. ಅದೂ ನಿರುತ್ತರ. ನಾ ಕಟ್ಟಿದ ಕನಸು, ನನ್ನೊಲವಿನ ಮನಸ್ಸು ಇಂದು ಬರಿದಾಗಿ ಮತ್ತೆ ಬೆಳಕು ಮೂಡಬಹುದೆಂಬ ಪುಟ್ಟ ಆಸೆಯಲಿ ಚುಕ್ಕಿಯ ದಿಟ್ಟಿಸುತ್ತಿವೆ. ಅವುಗಳಿಗೆ ಚುಕ್ಕಿ ಕಾಣಸಿಗುತ್ತಿಲ್ಲ. ಅವುಗಳ ಮೊಗದಲ್ಲೂ ಮತ್ತೆ ನಿರಾಸೆಯ ಛಾಯೆ ತನ್ನ ಸಾಮಾಜ್ಯವನ್ನ ನಿಧಾನವಾಗಿ ವಿಸ್ತರಿಸುತ್ತಿದೆ. ಚುಕ್ಕಿಯ ಭರವಸೆಯಲ್ಲಿದ್ದ ಅವು ನನ್ನನ್ನೊಮ್ಮೆ ಆಗಸವನ್ನೊಮ್ಮೆ ನೋಡುತ್ತ ಬಿಕ್ಕುತ್ತಿವೆ.

ನಾ ಏನನ್ನೂ ಮಾಡಲು ಸಾಧ್ಯವಾಗದೇ ನಿಶಕ್ತಳಾಗಿರುವುದ ಕಂಡು ನನ್ನತ್ತಿರ ಸುಳಿದಾಡುತ್ತಾ ನನ್ನನ್ನು ಅಲುಗಾಡಿಸಲು ಪ್ರಯತ್ನಿಸಿ ಸೋತು ನನ್ನ ಪಕ್ಕದಲ್ಲಿ ಕುಳಿತು, ನನ್ನತ್ತ ಒಲವಿನ ನಗೆಯ ಹೊರ ಸೂಸುತ್ತಿವೆ. ನಾ ಈಗಲೂ ಮೌನಿಯಾಗಿದ್ದೇನೆ. ಮನಸ್ಸು ನನ್ನನ್ನು ಬರಸೆಳೆದು ಅಪ್ಪಿ ನನ್ನ ಸ್ಥಿತಿಗೆ ಮರುಗುತ್ತಿದೆ. ನನ್ನಲ್ಲಿ ಚೈತನ್ಯವ ಮೂಡಿಸಲು ಪ್ರಯತ್ನಿಸಿ ಸೋತ ಮನಸ್ಸು ನಾ ಜಡವಾಗಿರುವುದ ಕಾಣಲಾಗದೇ ದೈನ್ಯತಾಭಾವದಿಂದ ಸುತ್ತಲೂ ನೋಡಿ ಜೋರಾಗಿ ಬಿಕ್ಕುತ್ತಿದೆ. ನಾ ಮನದ ಮಡಿಲಲ್ಲಿ ತಲೆಯನ್ನಿಟ್ಟು ಬಿದ್ದುಕೊಂಡಿದ್ದೇನೆ.
ಮನದ ಕಣ್ಣಿನ ಹನಿ ನನ್ನ ಕೆನ್ನೆಯ ಮೇಲೆ ಬಿದ್ದು ಜಾರಿದರೂ ನನಗೆ ಅದರ ಅರಿವಿಲ್ಲ. ನಾ ಈ ಪ್ರಪಂಚದ ಜಂಜಾಟ, ಯಾವ ಹಂಗೂ ಬೇಡವೆಂದು ನಿರ್ಧರಿಸಿ ಹೊರಡಲು ಅಣಿಯಾಗಿ ವಿಧಿಯ ಕಡೆ ನಿರ್ಭೀತಿಯಿಂದ ನೋಡುತ್ತಿದ್ದೇನೆ. ನನ್ನ ಕಣ್ಣಲ್ಲಿ ಯಾವುದೇ ರೀತಿಯ ಭಯ, ಕಳವಳ, ಅಂಜಿಕೆ ಇರದಿರುವುದ ಕಂಡ ವಿಧಿ ಕ್ಷಣಕಾಲ ಮೂಕವಾಗಿದೆ. 

ನಾ ಮನದ ಮಡಿಲ ಸರಿಸಿ ಎದ್ದು ಹೊರಡಲು, ಮನಸ್ಸು ನನ್ನ ನೀ ಹೋಗದಿರು ಎಂದು ಕಿರು ಬೆರಳನ್ನು ಹಿಡಿದು ಜಗ್ಗುತ್ತಿದೆ. ಕನಸು ಎಲ್ಲವನ್ನೂ ವಿಸ್ಮಯದಿಂದ ನೋಡುತ್ತಾ ನಿಂತಿದೆ. ನಾ ಹೊರಟಿರುವುದು ಅದಕ್ಕೆ ತಿಳಿದಿಲ್ಲ. ಮನಸ್ಸಿನ ವ್ಯಥೆಯನ್ನು ಅರಿಯದೇ ಅವಳಿಗೆ ಹಿಂಸಿಸದಿರು ಎಂದು ಅದರ ಕೈ ನನ್ನಿಂದ ಬಿಡಿಸಲು ಪ್ರಯತ್ನಿಸುತ್ತಿದೆ. ಮನಸ್ಸು ಇನ್ನೂ ಗಟ್ಟಿಯಾಗಿ ಕೈ ಹಿಡಿದು ರೋದಿಸುತ್ತಿದೆ. ಎಲ್ಲವನ್ನೂ ನೋಡುತ್ತ ನಿಂತ ವಿಧಿ ನನ್ನ ಕರೆದೊಯ್ಯಲು ನನ್ನ ಹತ್ತಿರ ಸುಳಿಯುತ್ತಿರುವುದ ಕಂಡ ಕನಸು ಪರಿಸ್ಥಿತಿಯ ಅರಿತು ವಿಧಿಯನ್ನು ಅಡ್ಡಗಟ್ಟುತ್ತಿದೆ. ಅವಳು ನನ್ನ ಹುಟ್ಟು ಹಾಕಿದ ತಾಯಿ. ನನಗೆ ಸುಂದರ ರೂಪವಿತ್ತ ಅವಳನ್ನು ನಾ ಕರೆದೊಯ್ಯಲು ಬಿಡುವುದಿಲ್ಲ ಎಂದು ವಿಧಿಯ ದಾರಿಗೆ ಅಡ್ಡಲಾಗಿ ನಿಂತು ದೈನ್ಯತೆಯಿಂದ ಬೇಡಿಕೊಳ್ಳುತ್ತಿದೆ. ಆದರೆ ವಿಧಿ ತನ್ನ ಕಾರ್ಯನಿಷ್ಟೆಯನ್ನು ತೋರಿ, ನನ್ನ ಜೊತೆಗೂಡಿ ಬಾ ಎಂದು ನನ್ನ ಕೈ ಹಿಡಿದು ಕರೆದೊಯ್ಯುತ್ತಿದೆ.

ನಾ ಮೂಕಳಾಗಿ ವಿಧಿಯ ಹಿಂಬಾಲಿಸುತ್ತಾ ದೂರಕ್ಕೆ ಸಾಗುವುದ ನೋಡಿ ಮನಸ್ಸು ಮತ್ತು ಕನಸು ಎವೆಯಿಕ್ಕದೆ ನನ್ನೆಡೆ ನೋಡುತ್ತಾ ನಿಂತಿವೆ. ಅವುಗಳಿಂದ ದೂರ ಬಹುದೂರ ನಾ ಸಾಗುತ್ತಿರುವುದು ತಿಳಿದಿದ್ದರೂ, ಅವುಗಳ ಮನದಲ್ಲಿ ನಿರಾಸೆ ಮೂಡಿಲ್ಲ. ಮರಳಿ ನಾ ಮತ್ತೆ ಬಂದೇ ಬರುವೆನೆಂಬ ನಂಬಿಕೆಯಲ್ಲಿ ನನ್ನ ದಾರಿಯನ್ನೇ ನೋಡುತ್ತಾ… ನನಗಾಗಿ ಕಾಯುತ್ತಾ ಕುಳಿತಿವೆ… ನಾ ಹೋದ ದಾರಿಯಲ್ಲೇ ಮರಳಿ ಬರಬಹುದೆಂಬ ಭರವಸೆಯಲಿ.
-ಕಾವೇರಿ ಎಸ್.ಎಸ್. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *