ಕನಸುಗಾರನ ಒಂದು ಸುಂದರ ಕನಸು: ನಟರಾಜು ಎಸ್. ಎಂ.

ಜನವರಿ ತಿಂಗಳ ಒಂದು ದಿನ ನಾಟಕವೊಂದನ್ನು ನೋಡಲು ಬರುವಂತೆ ಹುಡುಗನೊಬ್ಬ ಆಮಂತ್ರಣ ನೀಡಿದ್ದ. ಆ ದಿನ ಸಂಜೆ ಆರು ಗಂಟೆಗೆ ಜಲ್ಪಾಯ್ಗುರಿಯ ಆರ್ಟ್ ಗ್ಯಾಲರಿ ತಲುಪಿದಾಗ ಆ ಕಲಾಮಂದಿರವನ್ನು ನೋಡಿ ನಾನು ಅವಕ್ಕಾಗಿದ್ದೆ. ಆ ಪುಟ್ಟ ಊರಿನಲ್ಲಿ ಅಷ್ಟೊಂದು ದೊಡ್ಡ ಸುಸಜ್ಜಿತ ಕಲಾಮಂದಿರವಿರುವುದ ಕಂಡು ಖುಷಿ ಸಹ ಆಗಿತ್ತು. ಸುಮಾರು ಎಂಟುನೂರು ಜನ ಕೂರುವಷ್ಟು ಜಾಗವಿರುವ ಇಡೀ ಕಲಾಮಂದಿರ ಜನರಿಂದ ಕಿಕ್ಕಿರಿದು ತುಂಬಿತ್ತು. ಎಷ್ಟೋ ವರ್ಷಗಳ ನಂತರ ನಾಟಕವೊಂದನ್ನು ನೋಡಲು ಹೋಗಿದ್ದೆ. ನಾಟಕ ನೋಡುತ್ತಿದ್ದೇನೆ ಎಂಬ ಖುಷಿಯ ಜೊತೆಗೆ ಮೊದಲ ಸಾಲಿನಲ್ಲಿ ಆಸೀನನಾದ ಖುಷಿ ಸಹ ಜೊತೆಗಿತ್ತು. ಪುಸ್ತಕವನ್ನು ಓದಲು, ನಾಟಕ ಮತ್ತು ಸಿನಿಮಾಗಳನ್ನು ನೋಡಲು ಮಾನಸಿಕ ಸಿದ್ಧತೆ ಬೇಕು. ಆ ಸಿದ್ದತೆ ಸುಮ್ಮನೆ ಒಲಿಯದು. ಅಂದೇಕೋ ಆ ಮಾನಸಿಕ ಸಿದ್ದತೆ ನನಗೆ ಲಭಿಸಿತ್ತು. 

ನಾಟಕದ ಕಿರುಪರಿಚಯವನ್ನು ತೆರೆಯ ಹಿಂದಿರುವ ಯಾರೋ ಹೇಳಿ ಮುಗಿಯುತ್ತಿದ್ದಂತೆ ಬೆಲ್ ಆಯಿತು. ಬೆಲ್ ಸದ್ದು ಮುಗಿದಂತೆ ನಿಧಾನವಾಗಿ ಪರದೆ ಸರಿಯುತ್ತಾ ಹೋಯಿತು. ಪರದೆ ಸರಿಯುತ್ತಿದ್ದಂತೆ ಪ್ರಾರ್ಥನೆಯ ಭಂಗಿಯಲ್ಲಿ ಕುಳಿತ ಪಾತ್ರಧಾರಿಗಳ ಮೇಲೆ ಮೆಲ್ಲನೆ ಬೆಳಕು ಸಹ ಬಿದ್ದಿತು. ಆ ಬೆಳಕು ಪ್ರಜ್ವಲವಾಗುತ್ತಿದ್ದಂತೆ ನೆಲಕ್ಕೆ ನಮಸ್ಕರಿಸುವಂತೆ ಮಂಡಿಯೂರಿ ಮಲಗಿದ್ದವರು ಮೆಲ್ಲನೆ ಕೈ ಮುಗಿಯುತ್ತಾ ಎದ್ದು ಕುಳಿತರು. ಆ ಕ್ಷಣ "ಅಲ್ಲಾ ಹೋ ಅಕ್ಬರ್" ಎಂಬ ಪ್ರಾರ್ಥನೆಯೂ ಸಹ ಶುರುವಾಯಿತು. ಹೀಗೆ ಅಲ್ಲಾ ಹೋ ಅಕ್ಬರ್ ಎಂಬ ಪ್ರಾರ್ಥನೆಯಿಂದ ಶುರುವಾದ ಮೂಕ ನಾಟಕ ನಮ್ಮ ಮುಂದೆ ತೆರೆದಿಟ್ಟಿದ್ದು ಗ್ರಾಮೀಣ ಪ್ರದೇಶದ  ಒಂದು ಸಿಂಪಲ್ ಲವ್ ಸ್ಟೋರಿಯನ್ನು. ಆ ನಾಟಕದಲ್ಲಿ ಮಾತಿರಲಿಲ್ಲ, ಜೀವಂತಿಕೆ ಇತ್ತು. ನಗುವಿತ್ತು, ಅಳುವಿತ್ತು. ಆ ನಗು, ಅಳು, ಕ್ರೌರ್ಯಗಳಿಗೆ ಸಾತ್ ನೀಡುವಂತೆ ಕೊಳಲಿನ ಗಾನವಿತ್ತು. ನಾಕು ತಂತಿಯ ಶೃತಿಯಿತ್ತು. ನಾಟಕ ಮುಗಿದಾಗ ಆ ನಾಟಕ ಬಾಂಗ್ಲಾದೇಶದ ಕವಿಯೊಬ್ಬರ ಕವಿತೆ ಆಧಾರಿತ ಎನ್ನುವುದ ಕೇಳಿ ಅಚ್ಚರಿಯಾಗಿತ್ತು. ಕವಿತೆಯೊಳಗಿನ ಕತೆಯೊಂದನ್ನು ಈ ರೀತಿ ನಾಟಕಕ್ಕೆ ಅಳವಡಿಸಬಹುದೇ ಎಂದೆನಿಸಿತ್ತು. ಅಂದು ಕವಿತೆಯಲ್ಲೇ ಕತೆ ಹೇಳುವ ಕವಿಗಳಿಗೆ ವಂದನೆ ಸಲ್ಲಿಸಿದ್ದೆ. ಇವತ್ತಿನ ದಿನಗಳಲ್ಲಿ ಕವಿತೆಗಳಲ್ಲಿ ಕತೆಗಳನ್ನು ಹೇಳುವವರು ಬಹಳ ಕಮ್ಮಿ ಬಿಡಿ. 

ಹೀಗೆ ಮೊದಲ ಬಾರಿ ಮೂಕ ನಾಟಕವೊಂದನ್ನು ನೋಡಿ ಮನಸ್ಸು ತುಂಬಾ ಖುಷಿಪಟ್ಟಿತ್ತು. ನನ್ನನ್ನು ನಾಟಕಕ್ಕೆ ಆಮಂತ್ರಿಸಿದ್ದ ಹುಡುಗ ನಾಟಕದ ಕೊನೆಗೆ ಆ ನಾಟಕದ ನಿರ್ದೇಶಕನ ಕೈ ಕುಲುಕುವಂತೆ ಮಾಡಿದ್ದ. ನಂತರ ನಾಟಕದಲ್ಲಿನ ಒಂದು ಪುಟ್ಟ ತಪ್ಪನ್ನು ಆ ಹುಡುಗನ ಮೂಲಕ ಆ ನಿರ್ದೇಶಕನಿಗೆ ರವಾನಿಸಿದ್ದೆ. ಆ ಪುಟ್ಟ ತಪ್ಪನ್ನು ನಾನು ಎತ್ತಿ ತೋರಿಸಿದ ಕಾರಣ ಆ ನಾಟಕದ ಮುಂದಿನ ಪ್ರದರ್ಶನದಲ್ಲಿ ಆ ತಪ್ಪನ್ನು ಸರಿ ಮಾಡಿಕೊಂಡಿದ್ದರಂತೆ. ಮೊದಲ ಬಾರಿಗೆ ನೋಡಿದ್ದ ಆ ಮೂಕ ನಾಟಕ ನನ್ನಲ್ಲಿ ಎಷ್ಟು ಗಾಢವಾದ ಪರಿಣಾಮ ಬೀರಿತ್ತೆಂದರೆ ಆ ನಾಟಕವನ್ನು ನಮ್ಮ ರಾಜ್ಯದಲ್ಲಿ ಪ್ರದರ್ಶಿಸುವಂತೆ ಆ ನಿರ್ದೇಶಕನಲ್ಲಿ ಕೇಳಿಕೊಂಡಿದ್ದೆ. ಆ ಕುರಿತು ಕರ್ನಾಟಕದಲ್ಲಿ ನನಗೆ ತುಂಬಾ ಪರಿಚಯವಿದ್ದ ಸಹೋದರರೊಬ್ಬರ ಜೊತೆ ಮಾತನಾಡಿದ್ದೆ ಸಹ. ಆ ಸಹೋದರ ಹೇಳಿದ ಹಾಗೆ ಒಂದು ದಿನ ಕುಳಿತು ಆ ನಾಟಕದ ಬ್ರೋಚರ್, ಫೋಟೋ ಮತ್ತು ನಾಟಕದ ವಿವರಗಳನ್ನು ನನ್ನ ನಿರ್ದೇಶಕ ಗೆಳೆಯನಿಂದ ಪಡೆದು ಕರ್ನಾಟಕದ ಆ ಸಹೋದರನಿಗೆ ಮೇಲ್ ಮಾಡಿದ್ದೆ.  ಬಹುಶಃ ನವೆಂಬರ್ ನಲ್ಲಿ ಆ ಮೂಕ ನಾಟಕ ನಮ್ಮ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವುದೆಂಬ ನಂಬಿಕೆ ನನ್ನದು.

ಆ ಮೇಲ್ ಮಾಡಿದ ದಿನ ಆ ನಿರ್ದೇಶಕ ಗೆಳೆಯ ಅಂದರೆ ಸವ್ಯ ದಾ ನನ್ನನ್ನು ತನ್ನ ಬೈಕ್ ನಲ್ಲಿ ಕುಳ್ಳರಿಸಿಕೊಂಡು ತನ್ನ ಮೊದಲ ಗುರುವಿನ ಮನೆಗೆ ಕರೆದೊಯ್ದ. ಆ ಮನೆಯ ಒಳ ಹೊಕ್ಕಿದಾಗ ಯಾವುದೋ ಮ್ಯೂಸಿಯಂನ ಒಳಗೆ ನುಗ್ಗಿದ ಅನುಭವವಾಗಿತ್ತು. ಆ ಮನೆಯಲ್ಲಿ ವಿಧ ವಿಧದ ಸಂಗೀತ ವಾದ್ಯಗಳಿಂದ ಹಿಡಿದು ಪುರಾತನ ಕಾಲದ ಗ್ರಾಮೋಫೋನ್ ವರೆಗೆ ಎಲ್ಲವೂ ಇತ್ತು. ನನ್ನ ಗೆಳೆಯನ ಗುರು ಮೊದಲ ದಿನದ ಭೇಟಿಯಲ್ಲೇ ಆತ್ಮೀಯರಾಗಿಬಿಟ್ಟರು. ಅವರ ಕುರಿತು ಒಮ್ಮೆ ಬರೆಯುವೆ. ಹೀಗೆ ಸವ್ಯ ದಾ ನನ್ನನ್ನು ಜಲ್ಪಾಯ್ಗುರಿಯ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸುತ್ತಾ ಹೋದಂತೆ ನನ್ನ ಮುಂದೆ ಹೊಸದೊಂದು ಪ್ರಪಂಚ ಗೋಚರಿಸುತ್ತಾ ತೊಡಗಿತು. ಒಂದು ದಿನ ಮೈಮ್ ಆದರೆ ಮತ್ತೊಂದು ದಿನ ನಾಟಕ, ಜಾನಪದ ನೃತ್ಯ, ಜಾನಪದ ಹಾಡು ಹೀಗೆ ವಿಧ ವಿಧದ ಕಲಾವಿದರ ಕೈ ಕುಲುಕುವ ಪರಿಚಯಿಸಿಕೊಳ್ಳುವ ಭಾಗ್ಯ ನನ್ನ ಪಾಲಿಗೆ ಬಂತು ಎಂದು ಹೇಳಬಹುದು. ಆ ದಿನದ ನಂತರ ಆ ನಿರ್ದೇಶಕ ಗೆಳೆಯ ನನ್ನ ಪಾಲಿಗೆ ನಿರ್ದೇಶಕನಾಗಿ ಉಳಿಯದೆ ನನ್ನ ಆತ್ಮೀಯ ಗೆಳೆಯನಾಗಿಬಿಟ್ಟ.  

ನನ್ನ ಗೆಳೆಯನಾದ ಸವ್ಯ ದಾ ನನ್ನನ್ನು ಪ್ರಥಮ ದಿನ ತನ್ನ ಮನೆಗೆ ಊಟಕ್ಕೆ ಕರೆದೊಯ್ದಿದ್ದ ದಿನ ಇನ್ನೂ ನೆನಪಿದೆ. ಆ ದಿನ ಮಧ್ಯಾಹ್ನ ಎರಡು ಗಂಟೆಗೆ ಅವನ ಮನೆಗೆ ಹೋದ ಮೇಲೆ ರಾತ್ರಿ ಹನ್ನೊಂದರವರೆಗೂ ಅದೂ ಇದೂ ಹರಟುತ್ತಲೇ ನಾವು ಕಾಲ ಕಳೆದಿದ್ದವು. ನಮ್ಮ ಹರಟೆ ಮೈಮ್ ನ ಇತಿಹಾಸದಿಂದ ಹಿಡಿದು ಮಣಿಪುರಿ ನಾಟಕಗಳವರೆಗೂ ಹಬ್ಬುತ್ತಾ ವಿಸ್ತಾರವಾಗುತ್ತಾ ಹೋಗಿತ್ತು. ಒಬ್ಬರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬೇಕಾದಾಗ ವ್ಯಕ್ತಿಗಳು ಹೆಚ್ಚು ಸಲ ಬೋರ್ ಹೊಡಿಸಿಬಿಡುತ್ತಾರೆ. ಆದರೆ ಈ ಗೆಳೆಯ ಯಾಕೋ ಇಂದಿಗೂ ನನಗೆ ಬೋರ್ ಎನಿಸಲಿಲ್ಲ. ಒಮ್ಮೊಮ್ಮೆ ಶನಿವಾರ ಮತ್ತು ಭಾನುವಾರಗಳಲ್ಲಿ ತನ್ನ ಪುಟ್ಟ ಮಗಳನ್ನು ಡ್ಯಾನ್ಸ್ ಸ್ಕೂಲಿಗೆ ಬಿಟ್ಟು ನನ್ನ ರೂಮಿಗೆ ಬಂದರೆ ಮೀನಿನ ಸಾರು ಮಾಡುತ್ತಲೋ ಇಲ್ಲ ಹತ್ತಿರದ ಯಾವುದೋ ಪುಟ್ಟ ಕಾಡಿನಂತಹ ಸ್ಥಳಕ್ಕೋ ಕರೆದೊಯ್ದು ಪ್ರಕೃತಿಯ ಸೊಬಗನ್ನು ಸುಮ್ಮನೆ ಸವಿಯುವಂತೆ ಮಾಡುವ ಸವ್ಯ ದಾ ನನ್ನ ಪಾಲಿನ ಜಲ್ಪಾಯ್ಗುರಿಯ ಗೈಡ್ ಎನ್ನಬಹುದೇನೋ..

ವ್ಯಕ್ತಿಯೊಬ್ಬನ ಜೊತೆ ಹೆಚ್ಚು ದಿನ ಕಳೆಯುತ್ತಿದ್ದಂತೆ ಅವನ ಕನಸುಗಳು ಮತ್ತು ವ್ಯಕ್ತಿತ್ವ ನಮಗೆ ಗೋಚರಿಸುತ್ತಾ ಹೋಗುತ್ತದೆ. ಸವ್ಯ ದಾ ನಲ್ಲಿಯೂ ಸಹ ಅವನ ಕನಸುಗಳು ನನಗೆ ಗೋಚರಿಸಿದ ದಿನಗಳನ್ನು ನಾನಿಲ್ಲಿ ಬರೆಯಲೇಬೇಕು. ಒಂದು ಭಾನುವಾರದ ಮಧ್ಯಾಹ್ನ ನನ್ನನ್ನು ತನ್ನ ಬೈಕ್ ನಲ್ಲಿ ಕುಳ್ಳರಿಸಿಕೊಂಡು ಯಾವುದೋ ಹಳ್ಳಿಗೆ ಕರೆದೊಯ್ದಿದ್ದ. ನಾನು ನೋಡಿದ್ದ ಸವ್ಯ ದಾ ನಿರ್ದೇಶನದ ಮೂಕ ನಾಟಕದಲ್ಲಿನ ಕೊಳಲು ವಾದಕನ ಮನೆಯ ಮುಂದೆ ನಾವು ನಿಂತಿದ್ದೇವೆ ಎಂದು ಸವ್ಯ ದಾ ಹೇಳುವವರೆಗೆ ನನಗೆ ತಿಳಿದಿರಲಿಲ್ಲ. ಮನೆಯ ಮುಂದೆ ಬೆಳೆದ ಬಿದಿರನ್ನು ಕೊಳಲನ್ನಾಗಿಸಿ ಗುರುವಿಲ್ಲದೆ ನುಡಿಸುವುದ ಕಲಿತ ಶುದ್ದ ಗ್ರಾಮೀಣ ಪ್ರತಿಭೆಯನ್ನು ಎದುರಿಗೆ ಕಂಡು ಯಾಕೋ ಅವತ್ತು ತುಂಬಾ ಖುಷಿಯಾಗಿತ್ತು. ಅದೇ ದಿನ ಮತ್ತೊಂದು ಹಳ್ಳಿಗೆ ಕರೆದೊಯ್ದು ಬಡವರ ಮನೆಯ ಹುಡುಗನನ್ನು ಭೇಟಿಯಾಗಿಸಿದ್ದ. ಮನೆ ತುಂಬ ದೂ ತಾರ, ಸಾರಿಂಗ ಮತ್ತು ಇತರ ಸಂಗೀತ ವಾದ್ಯಗಳನ್ನು ತುಂಬಿಕೊಂಡಿದ್ದ ಆ ಹುಡುಗನ ಸಂಗೀತವನ್ನು ಕತ್ತಲ ರಾತ್ರಿಯಲ್ಲಿ ಕುಳಿತು ಸವಿದ ದಿನವನ್ನು ಮರೆಯಲಾಗದು. 

ಹೀಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ತನ್ನ ನಾಟಕಗಳಲ್ಲಿ ಅವಕಾಶ ನೀಡುವ ನನ್ನ ಗೆಳೆಯ ಮೈಮ್ ಮತ್ತು ನಾಟಕಗಳ ಕುರಿತು ಅಗಾಧವಾದ ಕನಸು ಹೊಂದಿದ್ದಾನೆ. ಉತ್ತರ ಬಂಗಾಳದಲ್ಲಿ ಇದುವರೆಗೂ ಯಾರು ಮಾಡದಿರುವ ಥಿಯೇಟರ್ ವಿಲೇಜ್ ಒಂದನ್ನು ಮಾಡಿ ಅಲ್ಲಿ ಸ್ಥಳೀಯ ಪ್ರತಿಭೆಗಳನ್ನು ಬೆಳೆಸಬೇಕು ಎಂಬ ಕನಸು ಈ ಗೆಳೆಯನದು. ಆ ಕನಸಿನ ಮೊದಲ ಹಂತವಾಗಿ ನನ್ನ ಗೆಳೆಯನ ಇಬ್ಬರು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಕೊಡಮಾಡುವ ನ್ಯಾಷನಲ್ ಫೆಲೋಶಿಫ್ ಲಭಿಸಿದೆ. ಪ್ರಥಮ ಬಾರಿಗೆ ಉತ್ತರ ಬಂಗಾಳದಲ್ಲಿ ತನ್ನ ವಿದ್ಯಾರ್ಥಿಗಳಿಗೆ ಫೆಲೋಶಿಫ್ ಸಿಕ್ಕಿದ ಖುಷಿ ನನ್ನ ಗೆಳೆಯನಿಗಿದೆ. ಒಂದಿಷ್ಟು ಜಮೀನು ಖರೀದಿಸಿ ಅಲ್ಲೊಂದು ಥಿಯೇಟರ್ ವಿಲೇಜ್ ಕಟ್ಟಿ ಅಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂಬ ಈ ಗೆಳೆಯನ ಕನಸು ನನಸಾಗಲಿ. ಗ್ರಾಮೀಣ ಪ್ರತಿಭೆಗಳನ್ನು ಬರೀ ಗುರುತಿಸುವುದಷ್ಟೇ ಅಲ್ಲ ಅವರಿಗೆ ಸರಿಯಾದ ದಾರಿಯಲ್ಲಿ ನಡೆಯುವಂತೆ ದಾರಿ ದೀಪವಾಗುವ ಇಂತಹ ಗೆಳೆಯನ ಸಂಖ್ಯೆ ಇನ್ನೂ ವೃದ್ಧಿಸಲಿ. ನಮ್ಮ ಕಲೆ ಮತ್ತು ಸಂಸ್ಕೃತಿಗಳು ಸದಾ ಕಾಲ ಉಳಿಯಲಿ..

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

16 Comments
Oldest
Newest Most Voted
Inline Feedbacks
View all comments
Sunil
11 years ago

ಒಳ್ಳೆಯ ಕಾರ್ಯದ ಬಗ್ಗೆ ನಿಮ್ಮ ಗೆಳೆಯರು ಆಸಕ್ತಿ ಇಟ್ಟುಕೊಂಡಿದ್ದಾರೆ. ಅವರ ಕನಸ್ಸು ಬೇಗ ನನಸಾಗಲಿ ಎಂದು ಆಶಿಸುತ್ತೇನೆ.
ಇಂತಹದೊಂದು ಕಾರ್ಯ ನಮ್ಮ ಕರ್ನಾಟಕದಲ್ಲೂ ಆಗಬೇಕು.

srujan
srujan
11 years ago

ಓದಿ ವಿಸ್ಮಯ ಗೊಂಡೆ 
ಅದ್ಭುತ ಗೆಳೆಯನ ನಾಟಕ ಕರ್ನಾಟಕಕ್ಕೆ ಬರಲಿ . ಜಲಪೈಗುರಿ ಅಂದ್ರೆ ಗೌಹತಿ ಗೆ ಮುಂಚೆ ಬರುವ ಊರಲ್ಲವಾ?
ಪಶ್ಚಿಮ ಬಂಗಾಲ್ ರಾಜ್ಯದ ಊರಿರಬೇಕು 

Nataraju S M
11 years ago
Reply to  srujan

ಹೌದು ಸರ್.. ಅದೇ ಊರು.. ಥ್ಯಾಂಕ್ ಯೂ..

Sumathi Deepa Hegde
11 years ago

ನಿಮ್ಮ ಸ್ನೇಹಿತರ ಕನಸು ಆದಷ್ಟು ಬೇಗ ನನಸಾಗಲಿ….

Bellala Gopinatha Rao
Bellala Gopinatha Rao
11 years ago

ಪ್ರೀತಿಯ ನಟರಾಜು
ನಿಮ್ಮ ಪಂಜುವಿನ ಪ್ರತಿ ಸಂಪಾದಕೀಯ ನಾನು ಓದಿದ್ದೇನೆ. ಮೊದಲು ಮಿಲಿಟರಿಯಲ್ಲಿರುವಾಗ ನಾನು ಆಸಕ್ತಿಯಿಂದ ಓದುತ್ತಿರುವ ಸಂಪಾದಕೀಯವೆಂದರೆ ವಾರಪತ್ರಿಕೆಯ ಸಂಪಾದಕರಾದ ರಾಜು ಅವರದ್ದಾಗಿತ್ತು.ಪ್ರತಿ ವಾರ ಅವರ ಸಂಪಾದಕೀಯದ ಪ್ರತಿ ವಾರ ಹೊಸ ಹೊಸ ವಿಷಯಗಳು ಹೊಸ ಅರಿವಿನ ಬುತ್ತಿ. ನೀವೂ ಅದೇ ರೀತಿ ಆರಂಭ ಮಾಡಿದ್ದೀರಾ. ತುಂಬಾನೇ ಚೆನ್ನಾಗಿ ಬರೆಯುತ್ತಿದ್ದೀರಾ. ನಿಮಗೆ ಒಳ್ಳೆಯದಾಗಲಿ.

malathi S
malathi S
11 years ago

awesome editorial Nataraju. though you have shared part of these with me, loved reading them again. you writing is getting better and mature. proud of you. good luck to all your friends. (sorry something is wrong with baraha)
hanh  our next trip is to Japlaiguri…beware!!
🙂
malathi S

GAVISWAMY
11 years ago

ಸಂಪಾದಕೀಯ ಇಷ್ಟವಾಯಿತು ನಿಮ್ಮ ಗೆಳೆಯ ಸವ್ಯಸಾಚಿ ದತ್ತಾರ ಕಲಾಪ್ರೀತಿಯ ಬಗ್ಗೆ 
ಓದಿ ಖುಷಿಯಾಯಿತು . ಉದಾತ್ತ ಕನಸುಗಳನ್ನಿಟ್ಟುಕೊಂಡಿದ್ದಾರೆ.
ಅವರ ಕನಸುಗಳಿಗೆ ರೆಕ್ಕೆ ಮೂಡಲಿ ಎಂದು ಹಾರೈಸುತ್ತೇನೆ.
ಬಂಗಾಳದ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದಕ್ಕೆ
ನಿಮಗೆ ಧನ್ಯವಾದಗಳು. 

 

Santhoshkumar LM
11 years ago

Soooooper Nattu!!

ತ್ರಿಲೋಚನ ರಾಜಪ್ಪ
ತ್ರಿಲೋಚನ ರಾಜಪ್ಪ
11 years ago

ನಿಮ್ಮ ಬರವಣಿಗೆ ತುಂಬಾ ಚೆನಾಗಿದೆ. ನಾವು ಮೊನ್ನೆ ಆಫೀಸ್ ಅಲ್ಲಿ ೧೦ ನಿಮಿಷದ ಮೈಮ್ ಮಾಡಿದ್ವಿ. ನಾನಂತು ತುಂಬಾ ಎಂಜಾಯ್ ಮಾಡಿದ್ದೆ. ಮುಂದಿನ ಸಲ ಬೆಂಗಳೂರಿನಲ್ಲಿ ಈ ತಂಡ ಮಾಡುವುದಾದರೆ ನಂಗೂ ತಿಳಿಸಿ 🙂 ಮುಂದಿನ ಸರಿ ಜಲಪೈಗುರಿಗೆ ಬಂದಾಗ ನಿಮ್ಮ ನಿರ್ದೇಶಕ ಮಿತ್ರರ ಗುರುಗಳ ಮನೆಗೆ ಹೋಗೋಣ.

Nataraju S M
11 years ago

ನನ್ನ ಗೆಳೆಯನ ಮೈಮ್ ಗುರುಗಳು ಪದ್ಮಶ್ರೀ ನಿರಂಜನ ಗೋಸ್ವಾಮಿಯವರು ತ್ರಿಲೋಚನ್….ಅವರು ಇರುವುದು ಕೋಲ್ಕತ್ತಾದಲ್ಲಿ.. ಖಂಡಿತಾ ಅಲ್ಲಿಗೂ ಹೋಗಿ ಬರೋಣ.. 🙂

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

ಸರ್, ನಿಮ್ಮ ಅನುಭವಗಳು ಅಕ್ಷರರೂಪಕ್ಕಿಳಿಯುವುದನ್ನು ಓದುವುದೇ ಒಂದು ಸೊಗಸು….ರಂಗಭೂಮಿಯೆಂಬುದು ಬದುಕಿನ ಕನ್ನಡಿ…ಆ ಕನ್ನಡಿಯ ಮೂಲಕ ನಮ್ಮ ಲೋಕದ ಪ್ರತಿಬಿಂಭವನ್ನು ಅದ್ಭುತವಾಗಿ ನೋಡಬಹುದು…ಧನ್ಯವಾದಗಳು….ಶುಭದಿನ ಸರ್…

Utham
11 years ago

Natanna sampadakiya chenagidhe
Nimma gellayana kanasu ederali

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
11 years ago

ಓದಿ ಖುಷಿಯಾಯ್ತು.

poornima
poornima
11 years ago

all the best to ur frind…..

Upendra
Upendra
11 years ago

Like it.

Nataraju S M
11 years ago

ಲೇಖನ ಮೆಚ್ಚಿದ ಗೆಳೆಯರೆಲ್ಲರಿಗೂ ವಂದನೆಗಳು..

16
0
Would love your thoughts, please comment.x
()
x