ಕನಸುಗಳು ನನಸಾಗುವುದು ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ. 


ಕನಸುಗಳು ಮನುಷ್ಯನನ್ನು ಪ್ರಾಚೀನ ಕಾಲದಿಂದಲೂ ವಿಸ್ಮಯಗೊಳಿಸಿವೆ. ಕನಸೆಂಬುದು ಮಾಯಾಲೋಕ! ನಿಜ ಜೀವನದಲ್ಲಿ ಆಗದಿರುವುದು ಕನಸಿನಲ್ಲಿ ಸಾಧ್ಯವಾಗಬಹು. ಮಲಗಿದ್ದಾಗ ಅರೆ ಎಚ್ಚರದ ಸ್ಥಿತಿಯಲ್ಲಿ ಬೀಳುವಂಥವು ‘ ಕನಸು ‘ . ಕನಸು ಎಂದರೆ ಮಿಥ್ಯ! ಅವು ನನಸು ಆಗಬಹುದು ಆಗದೇ ಇರಬಹುದು. ಬಹುತೇಕ ಆಗಲಾರವು! ರಾತ್ರಿ ಅರೆ ಎಚ್ಚರದ ಸ್ಥಿತಿಯಲ್ಲಿ ಬಿದ್ದು ಎಚ್ಚರವಾಗುತ್ತಿದ್ದಂತೆ ಮಾಯವಾಗುವಂಥವು ಎಷ್ಟರಮಟ್ಟಿಗೆ ನನಸಾಗಿಯಾವು? ಬೆಳಗಿನಜಾವದಲ್ಲಿ ಬಿದ್ದ ಕನಸುಗಳು ನನಸಾಗುತ್ತವಂತೆ ಅಂತ ಯಾರು ಹೇಳಿದರೋ ಏನೋ ಆ ನಂಬಿಕೆಯಿದೆ! ಮನಸ್ಸಿಗೆ‌ ಸಂತೋಷ ನೀಡುವ ಸಕಾರಾತ್ಮಕವಾದ ಕನಸಿರುವಂತೆ ನಕಾರಾತ್ಮಕ ಕನಸುಗಳೂ‌ ಭಯಾನಕ ಕನಸುಗಳು ಇರುತ್ತವೆ. ಬೀಳುತ್ತವೆ. ಕೆಲವು ಕನಸುಗಳು ಬಿದ್ದದ್ದೇ ತಿಳಿಯುವುದಿಲ್ಲ ಹಾಗೆ ಮರೆತುಹೋಗಿರುತ್ತೇವೆ! ಮಧುರ ಕನಸುಗಳು ಮನಕ್ಕೆ ಮುದ ನೀಡುವುದರಿಂದ ಅವನ್ನು ಮತ್ತೆ ಮತ್ತೆ ಮೆಲುಕು ಹಾಕಿ ಆನಂದ ಪಡುತ್ತಾರೆ. ಕೆಲವು ನಿಜ ಜೀವನದಲ್ಲಿ ಘಟಿಸಲು ಅಸಾಧ್ಯವಾದ ಅದ್ಭುತ ಕನಸುಗಳಾಗಿರುತ್ತವೆ! ಕೆಲವು ನೋವುಂಟು ಮಾಡುವ ಕನಸುಗಳು ನೆನಪಾದರೂ ಬೇಗ ಮರೆಯಲು ಪ್ರಯತ್ನಿಸುತ್ತಾರೆ. ಕೆಲವು ಕನಸುಗಳು ಮರೆಯೋಣವೆಂದರೂ ಮತ್ತೆ ಮತ್ತೆ ನೆನಪಿಗೆ ಬಂದು ನೋವು ಕೊಡುತ್ತವೆ. ಕೆಲವು ಮನಸ್ಸು ಮತ್ತು ದೇಹದ ಮೇಲೆ ಗಾಢ ಪರಿಣಾಮವನ್ನು ಬೀರುತ್ತವೆ. ಬಯಾನಕ ಕನಸು ಕಂಡು ಎಚ್ಚರಗೊಂಡು ಎದ್ದು ಕುಳಿತಾಗ ಮನಸ್ಸು ಬಯ ಭೀತವಾಗಿರುತ್ತದೆ. ದೇಹ ಗಡಗಡ ನಡುಗುತ್ತಿರುತ್ತದೆ. ಬೆವೆಯುತ್ತಿರುತ್ತದೆ. ದೇಹ ಕನಸಿನ ಆ ಘಟನೆಯಲ್ಲಿ ಭಾಗಿ ಆಗಿರುವುದಿಲ್ಲ ಆದರೂ ಈ ಪರಿ ದೇಹ ಗಡಗಡ ನಡುಗುತ್ತಿರಲು, ಇನ್ನು ಬೇರೆ ಬೇರೆ ರೀತಿ ಪ್ರತಿಕ್ರಿಯಿಸಲು ಕಾರಣವೇನು? ಅವು ನಿದ್ದೆಯಲ್ಲಿ ದೇಹ ಪೂರ್ಣ ವಿಶ್ರಮಿಸುತ್ತಿರುವಾಗ ಕಂಡಂತಹವಾದರೂ ಪರಿಣಾಮ ಗಾಢವಾಗಿ ಮನಸ್ಸು ಮತ್ತು ದೇಹದ ಮೇಲೆ ಆಗಿರುತ್ತದೆ.

ಅದಕ್ಕೆ ಕಾರಣ ಹೇಳುವುದು ಕಷ್ಟವಾದರೂ ಅದು ನಿಜವಾಗಿ ನಡೆಯಿತೇನೋ ಎಂಬಂತೆ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಉಂಟಾಗಿರುತ್ತದೆ. ಆ ಕನಸು ಮಾತ್ರ ಕನಸೇ ಆಗಿದ್ದರೂ ಎಚ್ಚರವಾದಾಗ‌ ದೇಹ ಕಂಪಿಸುವುದು ಬೆವರುವಿಕೆ ಗದ್ಗದಿಸುವಿಕೆ ಬಯ ಎಲ್ಲಾ ನಿಜವಾಗಿರುತ್ತವೆ! ಕನಸುಗಳು ಒಮ್ಮೊಮ್ಮೆ ಮನದ ಬಯಕೆಗಳೇ ಆಗಿರುತ್ತವೆ. ಏನನ್ನು ಮಲಗುವ ಮುನ್ನ ನೆನೆದಿರುತ್ತೇವೋ ಚರ್ಚಿಸಿರುತ್ತೇವೋ ಮಾತನಾಡಿರುತ್ತೇವೋ ಚಿಂತಿಸಿರುತ್ತೇವೋ ಕನಸುಗಳು ಅವಕ್ಕೆ ಸಂಬಂಧಿಸದವಾಗಿರಬಹುದು, ಮನದ ಯಾವುದೋ ಮೂಲೆಯಲ್ಲಿ ಅಡಗಿರುವ ಸುಪ್ತ ವಿಷಯಗಳೋ ಬಯಕೆಗಳೋ ಆಗಿರಬಹುದು! ಯಾವುದನ್ನು ನಿಜ ಜೀವನದಲ್ಲಿ ಈಡೇರಿಸಿಕೊಳ್ಳಲು ಆಗುವುದಿಲ್ಲವೋ ಅಂಥವನ್ನು ಕನಸಿನ ಮೂಲಕ ಮನಸ್ಸು ಈಡೇರಿಸಿಕೊಳ್ಳುತ್ತದೆ ಅನ್ನುವರು ಕೆಲವರು. ಕೆಲವು ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಕೆಲವರು ಹುಡುಕುವುದಿಲ್ಲ. ಕೆಲವರು ಹುಡುಕುವರು ಆದರೆ ಸಿಗುವುದಿಲ್ಲ! ಕನಸುಗಳನ್ನು ಕಾಣಬೇಕು! ಕನಸು ಕಾಣುತ್ತಿದ್ದರೆ ಬದುಕು ಲವಲವಿಕೆಯಿಂದಿರುತ್ತದೆ. ಕನಸು ಕಾಣುವವರಿಗೆ ಜೀವನ ಪ್ರೇಮ, ಜೀವನೋತ್ಸಾಹ ಹೆಚ್ಚು. ಕನಸು ಕಾಣುವಂಥವಾ? ಅಲ್ಲ! ಅವಾಗಿ ಬೀಳುವಂಥವು ತಾನೆ? ಹೌದು! ಬೀಳುವಂಥವುಗಳ ಜತೆಗೆ ಕಾಣುವಂಥವೂ ಇರುತ್ತವೆ! ಕನಸು ಕಾಣುವವರು ಬದುಕಿನ ಬಗ್ಗೆ ಹೆಚ್ಚು ಆಸಕ್ತಿಯನ್ನು ಅದಮ್ಯ ಪ್ರೀತಿಯನ್ನು ಹೊಂದಿರುತ್ತಾರೆ. ಕನಸುಗಳಿಲ್ಲದ ಬದುಕು ಮರುಭೂಮಿಯಿದ್ದಂತೆ! ಗುರಿ ಇರದ ಪಯಣ! ಸಂತೋಷವೇ ಇಲ್ಲದ ದಾರಿಯನ್ನು ಸವೆಸಬಹುದಾಗಲಿ ಕನಸುಗಳೇ ಇಲ್ಲದ ದಾರಿಯನ್ನು ಸವೆಯಿಸಲಾಗದು!

ಕನಸುಗಳು ಅವಷ್ಟಕ್ಕೆ ಅವು ಬೀಳುತ್ತವೆ. ಎಷ್ಟೋ ಸಲ ಕನಸುಗಳಿಗೂ ಬದುಕಿಗೂ ಸಂಬಂಧವಿರುವುದಿಲ್ಲ! ಸಂಬಂಧಗಳಿದ್ದರು ತಿಳಿಯುವುದಿಲ್ಲ! ಆದರು ಬೀಳುತ್ತವೆ. ಅವು ಬೀಳುವುದಲ್ಲ ನಾವು ಕನಸುಗಳನ್ನು ಕಾಣಬೇಕು! ಕನಸು ಕಾಣುವುದೆಂದರೆ ಜೀವನವನ್ನು ಜೀವಂತಿಕೆಯಿಂದ ಇರಿಸುವುದು. ಹಾಗೆ ಇರಬೇಕೆಂದರೆ ಏನನ್ನಾದರೂ ಸಾಧಿಸುವ ಬಗ್ಗೆ ಸದಾ ಚಿಂತಿಸುವುದು. ಸಾಧಿಸಬೇಕೆಂದಿರುವುದನ್ನು ಹಗಲು ರಾತ್ರಿ ತಪಸ್ವಿಯಂತೆ ಧ್ಯಾನ ಮಾಡುವುದು! ರಾತ್ರಿ ಹೊತ್ತು ಕತ್ತಲೆಯಲಿ ಬೀಳುವುದು ನಿಜವಾದ ಕನಸಲ್ಲ! ಬೀಳಿಸಿಕೊಳ್ಳುವುದು ನಿಜವಾದ ಕನಸಾದರೂ ಹಗಲು ಹೊತ್ತು ಬೆಳಕಿನಲಿ ಕಾಣುವುದೇ ನಿಜವಾದ ಕನಸು! ಏಕೆಂದರೆ ಹಗಲು ಕಾಣುವ ಕನಸಿನಲ್ಲಿ ವಾಸ್ತವಿಕ ನೆಲೆಗಟ್ಟಿರುತ್ತದೆ. ಅದರಲ್ಲಿ ಸ್ಪಷ್ಟತೆ ನಿರ್ದಿಷ್ಟತೆ ಇರುತ್ತದೆ.

‘ ಹಗಲುಗನಸು ‘ ಎನ್ನುವ ನುಡಿಗಟ್ಟಿನ ಅರ್ಥ ಈಡೇರದ ಕನಸು ಎಂಬುದಾಗಿದೆ. ಹಗಲುಗನಸು ಎಂಬುದು ಈ ಲೇಖನದಲ್ಲಿ ಈಡೇರುವ ಕನಸು ಎನ್ನುವ ಅರ್ಥ ಪಡೆದಿದೆ. ಹಗಲು ಹೊತ್ತು ಏನಾದರೂ ಕನಸು ಕಾಣಲು ಸಾಧ್ಯವೆ? ಮಲಗಿದ್ದರೆತಾನೆ ಕನಸು ಕಾಣುವುದು? ಹಗಲು ಮಲಗುವುದಿಲ್ಲ ಕನಸು ಕಾಣಲು ಸಾಧ್ಯವಿಲ್ಲ. ರಾತ್ರಿ ಕಾಣುವ ಕನಸುಗಳು ಮಲಗಿದಾಗ ಕಾಣವಂತಹವಾಗಿ ಪ್ರಜ್ಞಾಪೂರ್ವಕವಾದವುಗಳಾಗಿರುವುದಿಲ್ಲ. ಹಗಲು ಕಾಣುವ ಕನಸುಗಳು ಮಲಗದೆ ಎಚ್ಚರದ ಸ್ಥಿತಿಯಲ್ಲಿ ಪ್ರಜ್ಞಾಪೂರ್ವಕವಾಗಿ ಕಾಣುವಂತಹವಾಗಿರುತ್ತವೆ. ಅವು ಒಂದು ನೆಲೆಗಟ್ಟಿನಮೇಲೆ ನಿಂತಿರುತ್ತವೆ. ಹಗಲಿನಲ್ಲಿ ಯಾವ ಕನಸು ಕಾಣಬಹುದು? ತನ್ನ ಭವಿಷ್ಯವನ್ನು ಭವ್ಯವಾಗಿಸುವ ಕನಸು ಕಾಣಲು ಸಾಧ್ಯ. ಬದುಕು ಸುಮ್ಮನೆ ಭವ್ಯವಾಗುತ್ತದೆಯೆ? ಇಲ್ಲ! ತನಗೆ ತುಂಬಾ ಆನಂದ ಕೊಡುವುದನ್ನು ಸಾಧಿಸಿದಾಗ ಬದುಕು ಭವ್ಯವಾದೀತು! ಯಾರಾದರೂ ಏನಾದರೂ ಸಾಧಿಸಬೇಕೆಂದಿರುವವರು ಆ ಸಾಧನೆಯ ಕನಸ ನಿತ್ಯ ಹಗಲು ಕಾಣಬೇಕು. ಹಗಲು ಕನಸು ಕಾಣುತ್ತಿದ್ದಾನೆಂದರೆ ಕನಸು ಕಾಣುವ ಜತೆಗೆ ನಿರಂತರವಾಗಿ ಅದನ್ನು ಸಾಧಿಸುವ ಪ್ರಯತ್ನ ಮಾಡುತ್ತಿರುತ್ತಾನೆ. ಪ್ರಯತ್ನಿಸುತ್ತಿರುವಾಗ ಎಡರು ತೊಡರು, ಏಳು ಬೀಳು ಸಾಮಾನ್ಯ! ಎದ್ದಾಗಿನ ಸಂತಸ, ಬಿದ್ದಾಗ ಛಲ ಬಿಡದೆ ಎದ್ದು ನಿಲ್ಲುವ ಪ್ರಯತ್ನ ಜೀವನವನ್ನು ಜೀವಂತಿಕೆಯಿಂದ ಇಡುತ್ತವೆ. ಇದೆ ನಿಜವಾದ ಜೀವನ! ಹೀಗೆ ಪ್ರಯತ್ನಿಸುವುದರಿಂದ ಅದು ಇಂದಲ್ಲ ನಾಳೆ ಸಾಕಾರ ಹೊಂದುತ್ತದೆ. ಸಾದಿಸುವುದರ ಬಗ್ಗೆ ಚಿಂತನ ಮಂಥನ ಮಾಡುವುದರಿಂದ ಅದರ ಅಕಾರ ಬಣ್ಣ ಗಾತ್ರ ರೂಪ ಸ್ಪಷ್ಟವಾಗುತ್ತಾ ಹೋಗುತ್ತದೆ. ಅದರ ಬಗ್ಗೆ ಆಳವಾಗಿ ಚಿಂತಿಸಿದಾಗ ಸಾಧನೆಯ ಮೆಟ್ಟಿಲುಗಳು ಒಂದೊಂದಾಗಿ ಗೋಚರಿಸತೊಡಗುತ್ತವೆ. ಹಾಗೆ ಅದನ್ನು ಹತ್ತುವ ಪೂರಕ ಪ್ರಯತ್ನವನ್ನು ನಿತ್ಯ ಜೀವನದಲ್ಲಿ ಮಾಡುತ್ತಿರುತ್ತಾನೆ. ಅದರ ಫಲವಾಗಿ ಎಲ್ಲಾ ಮೆಟ್ಟಿಲು ಹತ್ತಿ ಬಯಸಿದ ಗುರಿ ತಲುಪುತ್ತಾನೆ. ಆಗ ಅಪಾರ ಆನಂದ ಅಗಿ ಬದುಕು ಭವ್ಯ ಆಗುತ್ತದೆ. ಹೀಗೆ ಕನಸು ನನಸಾಗುತ್ತವೆ. ನಂತರ ಅದಕ್ಕಿಂತ ಮಿಗಿಲಾದ ಕನಸು ಕಾಣಬೇಕು. ಹೀಗೆ ನಿರಂತರ ಕಾಣತ್ತಿದ್ದಾಗ ಜೀವನ ಆಗುವುದು ಚೈತನ್ಯದ ಚಿಲುಮೆ!

ಎಂತಹ ಕನಸು ಕಾಣಬೇಕೆಂದರೆ ದೊಡ್ಡ ಕನಸನ್ನು ಕಾಣಬೇಕು! ಜೀವನದಲ್ಲಿ ದೊಡ್ಡ ಗುರಿಯನ್ನೇ ಇಟ್ಟುಕೊಂಡರೆ ದೊಡ್ಡ ಕನಸು ಕಾಣಲು ಸಾಧ್ಯ. ದೊಡ್ಡ ಕನಸುಗಳು ದೊಡ್ಡ ಸಾಧನೆಗೆ ಕಾರಣವಾಗುತ್ತವೆ. ದೊಡ್ಡ ಸಿದ್ದತೆಗೂ ಅವಕಾಶ ಮಾಡಿಕೊಡುತ್ತವೆ. ದೊಡ್ಡ ಏರುಪೇರುಗಳನ್ನು ಉಂಟುಮಾಡಿದರೂ ಹೋರಾಟದ ಥ್ರಿಲ್ ಕೊಡುತ್ತವೆ. ಜೀವನಕ್ಕೆ ಚೇತನ ತುಂಬುತ್ತವೆ. ಆದ್ದರಿಂದ ದೊಡ್ಡ ಕನಸು ಕಾಣಬೇಕು.

ದೊಡ್ಡ ಕನಸುಗಳ ಕಂಡ ಮಾತ್ರಕ್ಕೆ ಅವು ಸುಮ್ಮನೆ ನನಸಾಗುತ್ತವ? ದೊಡ್ಡ ಕನಸು ಕಾಣುವ ವ್ಯಕ್ತಿ ಸುಮ್ಮನೆ ಕಾಣಲಾರ ಅದನ್ನು ಸಾಧಿಸಲು ತಕ್ಕ ಸಾಮರ್ಥ್ಯ ಹೊಂದಿ ತಕ್ಕ ತಯಾರಿಯನ್ನೂ ಮಾಡಿಕೊಂಡಿರುತ್ತಾನೆ. ಆ ತಯಾರಿ ಎಷ್ಟರಮಟ್ಟಿಗೆ ಇರುತ್ತದೋ ಅಷ್ಟು ದೊಡ್ಡ ಕನಸು ಕಾಣಲು ಸಾಧ್ಯ! ಜತೆಗೆ ಅಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯ! ಹಗಲುಗನಸುಗಳು ಸಾಮಾನ್ಯವಾಗಿ ವಾಸ್ತವಕ್ಕೆ ಹತ್ತಿರವಾಗಿದ್ದು ತನ್ನ ಸಾಮರ್ಥ್ಯಕ್ಕೂ ಹತ್ತಿರವಿರುತ್ತವೆ. ಆದ್ದರಿಂದ ಸಾಧಿಸಲು ಸಾಧ್ಯ! ಅದು ತನ್ನ ಸಾಮರ್ಥ್ಯಕ್ಕೆ ಹತ್ತಿರವಿದೆ ಅಥವಾ ದೂರವಿದೆ ಎಂದು ತಿಳಿಯುವುದು ತನ್ನ ಸುತ್ತಮುತ್ತ ಇರುವವರ ಸಾಧಿಸುವ ಸಾಮರ್ಥ್ಯ ಎಂತಹದ್ದು ಎಂಬುದರ ಆಧಾರದಮೇಲೆ ತನ್ನ ಸಾಮರ್ಥ್ಯ ಹೋಲಿಸಿ ತಿಳಿದುಕೊಳ್ಳಬಹುದು! ಆಗ ತನ್ನ ಮಹಾನ್ ಸಾಮರ್ಥ್ಯದ ಅರಿವಾಗುತ್ತದೆ. ಮುಂದಡಿಯಿಡಲು ಆತ್ಮ ವಿಶ್ವಾಸ ಹೆಚ್ಚುತ್ತದೆ. ಅಂತಹ ಸಾಮರ್ಥ್ಯ ಅವನೊಳಗೆ ಇರುತ್ತದೆ. ಗಾಂಧಿ, ಸುಭಾಸ್ಚಂದ್ರಬೋಸ್ , ಬಾಲ ಗಂಗಾಧರ ತಿಲಕ್, ಚಂದ್ರಶೇಖರ್ ಆಜಾದ್ ಮುಂತಾದವರು ಹಗಲು ಸ್ವಾತಂತ್ರ್ಯದ ಮಹಾನ್ ಕನಸು ಕಾಣದಿದ್ದರೆ ಭಾರತದ ಜನತೆಯಲ್ಲಿ ಬಿತ್ತಿ ಬೆಳಸಿ ಹೆಮ್ಮರವಾಗಿಸದಿದ್ದರೆ ಭಾರತದ ಹೆಮ್ಮರ 1947 ರಂದು ಸ್ವಾತಂತ್ರ್ಯವೆಂಬ ಫಲ ಕೊಡುತ್ತಿತ್ತೇ? ಸ್ವಾತಂತ್ರ್ಯದ ಕನಸು ನನಸಾಗುತ್ತಿತ್ತೆ? ಬಚೇಂದ್ರಿಪಾಲ್ ವಿಶ್ವವಿಖ್ಯಾತ, ವಿಶ್ವದ ಅತಿ ಎ್ತರದ ಹಿಮಾಲಯದ ತುತ್ತ ತುದಿಯ ಮೆಟ್ಟುವ, ವಿಮಾನದಲ್ಲಿ ಹಾರಾಡುವ, vip ಗಳನ್ನು ಭೇಟಿಯಾಗಿ ಕೈ ಕುಲುಕುವ ಕನಸು ಕಿರಿಯವಳಿದ್ದಾಗಿನಿಂದಲೂ ಬಿಡದೆ ಕಾಣದಿದ್ದರೆ ಹಿಮಾಚ್ಚಾದಿತ ಹಿಮಾಲಯವ ಕಣ್ತುಂಬಿಸಿಕೊಳ್ಳುತ್ತಾ ಶಿಖರದ ತುದಿಯ ತಲುಪಿ ಹಿಗ್ಗುವ ಅವಳ ಕನಸು ನನಸಾಗುತ್ತಿತ್ತೇ? ಬಚೇಂದ್ರಿಪಾಲ್ ಖ್ಯಾತನಾಮರ ಭೇಟಿ ಮಾಡುತ್ತಿದ್ದಳೆ? ವಿಶ್ವ ವಿಖ್ಯಾತಳಾಗುತ್ತಿದ್ದಳೆ? ರೈಟ್ ಸಹೋದರರು ಗಾಳಿಯಲ್ಲಿ ಹಕ್ಕಿಯಂತೆ ಹಾರುವ ಕನಸು ಕಾಣದಿದ್ದರೆ ಲೋಹದ ಹಕ್ಕಿ ವಿಮಾನ ಸಾಕಾರಗೊಳ್ಳುತಿತ್ತೇ? ಹಕ್ಕಿಯಂತೆ ಆಗಸದಿ ಹಾರಲು ಸಾಧ್ಯವಾಗುತ್ತಿತ್ತೆ? ಹಗಲು ಕಂಡ ಕನಸಿನಿಂದನೆ ಇಷ್ಟೆಲ್ಲ ಸಾಧ್ಯವಾಗಿರುವಂತಹದ್ದು. ಕಣ್ಣುಗಳನು ತೆರೆದು ಕನಸು ಕಾಣಬೇಕು. ಸಾಧಿಸಬೇಕೆಂಬ ಮಹದಾಸೆಯ ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು ಆದ್ದರಿಂದಾಗಿ ದೃಢವಾದ ಮನಸ್ಸು ಅಚಲ ಗುರಿ ಸಾಧಿಸುವ ಹೆಬ್ಬಯಕೆಯಿಂದ ಅಸಾಧ್ಯವಾದುದನ್ನೂ ಸಾಧಿಸಬಹುದು. ಹಾಗೆ ಆಗಲು ಸದಾ ಕಂಗಳಲಿ ಕನಸು ತುಂಬಿರಬೇಕು. ನನಸಾಗುವವರೆಗೆ ಅವು ಕಾಡುತ್ತಿರಬೇಕು. ಕಂಗಳಲಿ ದೊಡ್ಡ ಕನಸೆ ತುಂಬಿರು ನನಸಾಗುವ ವರೆಗೂ ಬಿಡದೆ ಪ್ರಯತ್ನ ಮಾಡುತ್ತಿರು! ದೊಡ್ಡ ಕನಸುಗಳ ಕಂಡಾಗ ದೊಡ್ಡ ಪ್ರಯತ್ನ ಮಾಡಿಸುವುವು ಕನಸುಗಳು ನನಸಾಗಿಸುವುವು! ಪ್ರಯುಕ್ತ ಸದಾ ಕಾಣುತ್ತಿರು ದೊಡ್ಡ ಕನಸ! ಹಗಲುಗನಸ!

* ಕೆ ಟಿ ಸೋಮಶೇಖರ ಹೊಳಲ್ಕೆರೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x