ಕನಸುಗಳಿಗೆ ರೆಕ್ಕೆ ಬಂದಾಗ: ನಿಂಗಪ್ಪ ಹುತಗಣ್ಣವರ

ಹಿಡಿಯಷ್ಟು ಕನಸುಗಳನ್ನು ಎದೆಗಪ್ಪಿಕೊಂಡು ಧಾರಾಳವಾಗಿ ಜಗತ್ತಿನ ಬಗ್ಗೆ ಒಂದಷ್ಟು ಕಾಳಜಿಯಿಲ್ಲದೆ ಬದುಕಿಬಿಡುತ್ತೇವಲ್ಲ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಬದುಕಿನ ಅಸ್ತಿತ್ವಕ್ಕಾಗಿ ಯಾವುದೇ ಸಿದ್ಧಾಂತದೊಂದಿಗೆ ಮುಲಾಜಿಲ್ಲದೆ ರಾಜಿಯಾಗುವ ನಮ್ಮ ಮನಸ್ಥಿತಿಯ ಬಗ್ಗೆಯೂ ಒಂದಷ್ಟು ತಕರಾರಿದೆ. ಏನೇ ಇರಲಿ ನೇರವಾಗಿ ವಿಷಯಕ್ಕೆ ಬಂದುಬಿಡೋಣ.

ಮಕ್ಕಳ ಬಾಲ್ಯವನ್ನು ಕಸಿಯಲಾಗುತ್ತಿದೆ ಮತ್ತು ಅವರ ವರ್ತಮಾನದ ಜೀವನದೊಂದಿಗೆ ಚೆಲ್ಲಾಟವಾಡಿ, ಭವಿಷ್ಯದ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ ಭಾಸವಾಗುತ್ತದೆ. ನಾವು ಚೆನ್ನಾಗಿ ನಟಿಸುತ್ತಿದ್ದೇವೆ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂಬುದನ್ನು ಮರೆತು. ಇದನ್ನು ನಾನು ಹೇಳುವುದಕ್ಕೂ ಕಾರಣವಿದೆ ನನ್ನ ಸ್ನೇಹಿತೆ ಸ್ಟ್ರಾಬೆರಿ ತನ್ನ ಬದುಕಿನ ಬಗ್ಗೆ ಒಂದಷ್ಟು ಕನಸುಗಳನ್ನು ಹಂಚಿಕೊಂಡಳು ಮತ್ತು ಬಸ್ ನಿಲ್ದಾಣದಲಿ ಪ್ರಯಾಣಿಕರ ಅನುಕಂಪವನ್ನು ಆದಾಯವನ್ನಾಗಿ ಮಾರ್ಪಡಿಸಿಕೊಳ್ಳುತ್ತಿರುವ ಮುಗ್ದ ಮಕ್ಕಳ ಭವಿಷ್ಯದ ಬಗ್ಗೆಯೂ ಚರ್ಚಿಸಿದಳು. ಅವಳು ಮಾತನಾಡುತ್ತಾ ಹೀಗೆ ಹೇಳಿದಳು “ನಾವು ಬಯಸಿದ್ದೆಲ್ಲವನ್ನು ಪಡೆದುಕೊಳ್ಳುತ್ತೇವೆ ಜೊತೆಗೆ ನೂರೆಂಟು ಕನಸುಗಳು” ಆದರೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಭವಿಷ್ಯ ಹೇಗೆ ? ನಮ್ಮಂತೆ ಅವರಿಗೂ ಶಿಕ್ಷಣ ದೊರೆಯಬೇಕಲ್ಲವೇ ? ತಮ್ಮ ಕನಸುಗಳೊಂದಿಗೆ ಬದುಕುವ ಹಕ್ಕು ಅವರಿಗಿಲ್ಲವೇ ? ಅವರ ಬದುಕು ದುಸ್ತರವಾದರೆ ಹೊಣೆ ಯಾರು ? ಹೀಗೆ ಅವಳ ಪ್ರಶ್ನೆಗಳ ಸರಳಿನ ಕೊಂಡಿ ಸಾಗುತ್ತಲೇ ಹೋಯಿತು ಜೊತೆಗೆ ನಾನು ಕೆಲವು ನಿಮಿಷ ನಿರುತ್ತರನಾದೆ.

ಅನುಕಂಪವನ್ನೆ ಬಂಡವಾಳವನ್ನಾಗಿಸಿಕೊಂಡು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ. ಅದನ್ನು ನಾವು ಭಿಕ್ಷಾಟನೆ ಎನ್ನಬಹುದು. ಹೀಗೆ ಬೆಳೆದವರಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಜಾಲ ಜಗತ್ತಿನಾದ್ಯಂತ ಹರಡಿದೆ. ಮಾನವೀಯತೆಯಂತೂ ಸಮಾಧಿಯಾಗಿದೆ ಅದರ ಬಗ್ಗೆ ಮಾತನಾಡುವಂತಿಲ್ಲ. ೨೦೦೨ ರಲ್ಲಿ ೮೬ನೇ ಸಂವಿಧಾನ ತಿದ್ದುಪಡಿಯ ಮೂಲಕ ಹನ್ನೊಂದನೇ ಮೂಲಭೂತ ಕರ್ತವ್ಯವನ್ನು ಸೇರಿಸಿಲಾಯಿತು. ಅದರನ್ವಯ ೬ ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಮತ್ತು ೨೧(ಎ) ವಿಧಿಯು ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂಬುದನ್ನು ತಿಳಿಸಿದ್ದರೂ ಸಹ ನಾವು ಅದನ್ನೆಲ್ಲ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋದಂತೆ ಕಾಣಿಸುತ್ತಿಲ್ಲ. ಬದುಕುವ ಒಂದೇ ಒಂದು ಕಾರಣಕ್ಕೆ ಮಕ್ಕಳ ಕನಸುಗಳನ್ನು ಕಸಿಯುವ ಹಕ್ಕು ನಮಗಿಲ್ಲ. ಇಂದು ಭಿಕ್ಷೆ ಬೇಡುವ ಮಕ್ಕಳು ಮುಂದೊಮ್ಮೆ ಸಮಾಜದಲ್ಲಿ ದರೋಡೆ, ಕೊಲೆತನಕ್ಕೆ ಇಳಿದರೆ ಯಾರು ಹೊಣೆ ? ಅದಕ್ಕೆ ಭಿಕ್ಷಾಟನೆ ಸಂಪೂರ್ಣವಾಗಿ ನಿಲ್ಲಬೇಕು. ಭಿಕ್ಷೆ ಬೇಡುವುದು ಮತ್ತು ನೀಡುವುದು ಎರಡೂ ಅಪರಾಧ.

ಕೊರೊನಾ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ, ಆರ್ಥಿಕತೆ ಪಾತಾಳಕ್ಕಿಳಿದೆ ಇಂತಹ ಸಂದರ್ಭದಲ್ಲಿ ಭಿಕ್ಷೆ ಬೇಡುವ ಮಕ್ಕಳು ಎಲ್ಲಿದ್ದಾರೆ ? ಹೇಗಿದ್ದಾರೆ ? ಭಾರತ ಲಾಕ್ ದೌನ್ ಆಗಿ ೨೧ ದಿನಗಳೆ ಕಳೆದಿವೆ, ಈಗ ಆ ಮಕ್ಕಳು ಮತ್ತು ಅವರ ಪಾಲಕ/ಪೋಷಕರು ಬದುಕುತ್ತಿದ್ದಾರೆ ಎಂದರೆ ಇನ್ನುಳಿದ ದಿನಗಳಲ್ಲಿಯೂ ಅವರು ಬದುಕಲು ತೊಂದರೆಯೇನು ? ಇದರರ್ಥ ಅವರು ಮಕ್ಕಳನ್ನು ಬಂಡವಾಳವನ್ನಾಗಿಸಿಕೊಂಡು ಬದುಕನ್ನು ಸಾಗಿಸುವ ಸರಳ ಹಾದಿಯನ್ನು ಹಿಡಿದಿರುವುದು ಸೂರ್ಯನಷ್ಟೇ ಸತ್ಯ. ದೇಶದಲ್ಲಿ ನಿಜವಾದ ಅನಾಥ ಮಕ್ಕಳಿದ್ದಾರೆ, ಮಕ್ಕಳಿದ್ದೂ ಅನಾಥವಾಗಿರುವ ವೃದ್ಧರಿದ್ದಾರೆ ಅವರೂ ಭಿಕ್ಷಾಟನೆಯಲ್ಲಿ ತೊಡಗಿರಬಹುದು ಸರ್ಕಾರ, ಸಂಘ ಸಂಸ್ಥೆಗಳು ಇತ್ತ ಕಡೆ ಗಮನಹರಿಸಿ ಇಂಥವರಿಗೆ ರಕ್ಷಣೆ ಕೊಡಬೇಕು. ದೇಶದ ಅಭಿವೃದ್ಧಿಗಾಗಿ ಎನೋನೋ ತಂತ್ರಗಳನ್ನು ಮಾಡುವುದಕ್ಕಿಂತ ಮಕ್ಕಳನ್ನು ಸರಿಯಾದ ಶಿಕ್ಷಣದೊಂದಿಗೆ ಬೆಳೆಸಿದರೆ ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ನಮ್ಮ ದೇಶ ವಿಶ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಿಸ್ಸಂಶಯವಾಗಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಬೆನ್ನು ಹತ್ತಿ ಅವರ ಪಾಲಕ/ಪೋಷಕರನ್ನು ಗುರುತಿಸಿ ಸಲಹೆ ನೀಡಬೇಕು, ಸಾಲದಿದ್ದರೆ ಅವರನ್ನು ಶಿಕ್ಷಿಸಬೇಕು ಯಾಕೆಂದರೆ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂಬುದು ಎಷ್ಟು ಸತ್ಯವೋ ಅದು ಪಾಲಕರ ಕರ್ತವ್ಯವೂ ಸಹ ಆಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆ ಮಕ್ಕಳು ನಮ್ಮಂತೆಯೇ ಬದುಕಬೇಕು ಬಣ್ಣ ಬಣ್ಣದ ತಮ್ಮ ಕನಸುಗಳೊಂದಿಗೆ ಬಾನೆತ್ತರಕೆ ಹಾರಬೇಕು, ಅವರಲ್ಲೂ ಒಬ್ಬ ಸಾಧಕನಿರಬಹುದು ಡಾ.ಎ. ಪಿ.ಜೆ.ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್, ಸಿ.ವಿ.ರಾಮನರವರಂತಹ ಮತ್ತೊಬ್ಬರು ನಮಗೆ ಸಿಗಬಹುದು ಆದರೆ ಅದಕ್ಕೂ ಮೊದಲು ಬಡ ಮಕ್ಕಳ ಕನಸುಗಳಿಗೆ ರೆಕ್ಕೆ ಬರಬೇಕಷ್ಟೆ.
ನಿಂಗಪ್ಪ ಹುತಗಣ್ಣವರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x