ಕಾಮನ ಬಿಲ್ಲು

ಕನಸಿನ ಹೊತ್ತು: ಪದ್ಮಾ ಭಟ್

                      
ಒಂದೇ ಸಮನೆ ಹರಿಯುವ ನದಿಯಲ್ಲಿ ಬಿಟ್ಟ ಕಾಗದದ ದೋಣಿ.. ಎತ್ತ ಪಯಣಿಸಬೇಕೆಂಬುದೇ ಗೊತ್ತಿಲ್ಲದ ಗೊಂದಲದ ನಡುವೆ ಒಂದೇ ಸಮನೆ ನಕ್ಕು ನಗಿಸುವ ನಾನು ಮತ್ತು ನೀನು. ಬಿಚ್ಚಿಕೊಂಡ ಭರವಸೆಗಳನೆಲ್ಲ ಒಂದೆಡೆ ಒಟ್ಟುಗೂಡಿಸಿ ಕಾಪಾಡುವ ತವಕ..ನಿನ್ನ ಕಣ್ಣಿನಲಿ ಹರಿಯುವ ಸಂತಸದ ಹೊನಲಿನಲಿ ನಾನೂ ಸೇರಿಹೋಗುವ ನಲುಮೆ.. ಓಹ್ ಇದೆಲ್ಲ ಕನಸು ಎಂದು ಎದ್ದ ಕೂಡಲೇ ಗೊತ್ತಾಗಿತ್ತು..ನೀನು ಎಂಬುವವನೇ ಇಲ್ಲದವನ ಬಗೆಗೆ ಇಲ್ಲ ಸಲ್ಲದ ಕನಸುಗಳ್ಯಾಕೆ..ಸುಖವಾದ ನಿದ್ರೆಯನು ಹಾಳುಮಾಡಲು ಎಂದು ಒಂದೇ ಸಮನೆ ಹಾಸಿಗೆಯಿಂದ ಎದ್ದು ಕೂತವಳಿಗೆ ಈ ಜಗತ್ತೇ ಮಲಗಿದೆ ನಾನ್ಯಾಕೆ ಏಳಬೇಕೆಂದುಕೊಂಡರೂ ನಿದ್ರೆ ಬರದ ಪರಿಸ್ಥಿತಿಯಲ್ಲಿ ಮನಸ್ಸು..ಈ॒ ಹಾಳಾದ್ ಮನಸ್ಸಿಗೆ ಮತ್ತೊಮ್ಮೆ ಇದೆಲ್ಲ ಕನಸು ಎಂದು ಅರ್ಥ ಮಾಡಿಸುವುದರೊಳಗೆ ಬೆಳಗ್ಗೆಯೇ ಆಗಿತ್ತು..ನಿದ್ರಾ ದೇವಿ ಬಾ ಎಂದು ಕರೆದರೂ ಸೂರ್‍ಯನ ಕಿರಣಗಳಿಂದ ಕಣ್ಮುಚ್ಚುವುದೂ ಆಗ ಕಷ್ಟವೇ..
ಈ ಕನಸುಗಳಿಗೆ ಮನಸಿಗೆ ಅದೆಂಥ ಸಂಬಂಧ ನೋಡಿ..ಕನಸು ಕಂಡಷ್ಟು ಹೊತ್ತು ನಿಜವೇನೋ ಎಂಬಷ್ಟು ಮುಳುಗಿ ಹೋಗಿರುತ್ತೇವೆ.. ಕೆಟ್ಟ ಕನಸುಗಳು ಬಿದ್ದಾಗ ಒಂದೇ ಸಲಕ್ಕೆ ಹಾಸಿಗೆಯಿಂದ ಎದ್ದು ಕೂತು ಅಬ್ಬ! ಪುಣ್ಯ ಇದು ಕನಸು ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ.. ಆ ದಿನ ಪೂರ್ತಿ ಕನಸಿನ ಬಗೆಗೆ ಯೋಚಿಸುವ ಸಾವಿರಾರು ಕೆಟ್ಟ ಯೋಚನೆಗಳು..ಈ ಕನಸೇನಾದರೂ ನಿಜವಾಗಿ ಬಿಟ್ರೆ ಎಂಬ ಹೆದರಿಕೆಯೋ, ಅಥವಾ ಕನಸಿನ ಕೆಟ್ಟ ಪರಿಣಾಮ ಮನಸ್ಸೆಂಬ ಹಠಮಾರಿಯ ಮೇಲೋ ತಿಳಿಯೆ.. ಒಟ್ಟಾರೆ ಒಂದು ಕನಸು ಇಷ್ಟೋಂದು ಪರಿಣಾಮ ಬೀರುವುದಂತೂ ಸತ್ಯ..

ಎಲ್ಲ ಕನಸುಗಳಲ್ಲೂ ನಾವೇ ಕೇಂದ್ರಬಿಂದು..ಎಂದೋ ಜೊತೆಯಲ್ಲಿ ಕೂರುತ್ತಿದ್ದ ಒಂದನೇ ಕ್ಲಾಸಿನ ಒಂದನೇ ಬೆಂಚಿನ ಹುಡುಗಿ ಕೂಡ ಒಂದು ದಿನದ ಕನಸಿನಲಿ..ಎದ್ದ ತಕ್ಷಣ ಅವಳ ನೆನಪು..ತಿರುಕನ ಕನಸಿನ ಮಟ್ಟಕ್ಕೆ ನಮ್ಮ ಕನಸುಗಳಿಲ್ಲದಿದ್ದರೂ ಒಂದು ರೇಂಜಿಗೆ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಬಂದಂತೆ, ಯಾವುದೋ ದೊಡ್ಡ ಪುರಸ್ಕಾರ ಸಿಕ್ಕಂತೆ, ಕನಸಿನ ಹುಡುಗನು ಬಂದು ಮುದ್ದು ಮಾಡಿದಂತೆ..ಛೇ ಛೇ ಈ ಕನಸುಗಳಿಗೆ ಎಲ್ಲೆಯೆಲ್ಲಿದೆ.. ಆಗುವುದಿಲ್ಲವೆಂದು ಗೊತ್ತಿದ್ದರೂ ಆ ಕನಸಿನಲ್ಲಿರುವಷ್ಟು ಹೊತ್ತಾದರೂ ಖುಷಿ ಪಡುತ್ತೇವಲ್ಲ..ಆ ಸಮಯವೇ ದೊಡ್ಡದು..ಎದ್ದ ತಕ್ಷಣ ಒಳ್ಳೆಯ ಕನಸಾಗಿದ್ದರೆ ನಿರಾಸೆ..ಇದು ಬಹುಶಃ ನಿಜ ಜೀವನದಲ್ಲಿ ನಡೆಯಲಾರದೇನೋ ಎಂಬಂತ ವಾಸ್ತವದ ಅರಿವು ಆಗುತ್ತದೆ..

ಬಿದ್ದ ಎಲ್ಲಾ ಕನಸುಗಳೂ ನಿಜವಾಗಿಬಿಟ್ಟಿದ್ದರೆ ಎಂಥ ಕನಸಿನಲ್ಲಿ ಮಜವೇ ಇರುತ್ತಿರಲಿಲ್ಲ..ಕನಸಿಗೆ ಅರ್ಥವೂ ಇರುತ್ತಿರಲಿಲ್ಲ.. ಬದುಕಿನ ಮುನ್ನುಡಿಗೋ, ಹಿನ್ನುಡಿಗೋ ಕನಸು ಎಲ್ಲೋ ಒಂದಿಷ್ಟು ತನ್ನ ಪಾಲನ್ನು ಕೇಳಿಬಿಡುತ್ತದೆ.. ಈ ಕನಸುಗಳು ಕೆರಳಿಸುತ್ತವೆಯಲ್ಲ ಅದು ವಿಚಿತ್ರ..ಬಿದ್ದಿದ್ದು ಕನಸು ಎಂದು ನಮಗೂ ಗೊತ್ತಿರುತ್ತದೆ..ಕನಸಿಗೂ ಗೊತ್ತು ತಾನು ನಿಜವಾಗಲೂ ಬಹುದು..ಆಗದೆನೂ ಇರಬಹುದೆಂಬುದು..ಇದೆಲ್ಲ ಗೊತ್ತಿದ್ದರೂ ಮನಸ್ಸಿನ ಮೇಲೊಂದಿಷ್ಟು ತಾನು ಒಡೆಯನಂತೆ ಸವಾರಿ ಮಾಡುತ್ತವೆ..

ಏನು ಯೋಚಿಸುತ್ತೇವೋ ಅದೇ ಕನಸಾಗುತ್ತದೆ ಎಂದು ಯಾರೋ ಹೇಳಿದ್ದನ್ನು ಕೇಳಿದ ನೆನಪು. ಆದರೆ ಎಷ್ಟೋ ಸಲ ನಮ್ಮ ಕಲ್ಪನೆಗೂ ನಿಲುಕದ್ದು, ನಾವು ಒಂದು ಕ್ಷಣವೂ ಅದರ ಬಗ್ಗೆ ಚಿಂತಿಸದ್ದು ಕನಸಾಗಿ ಬಿದ್ದ ಎಷ್ಟೋ ಅನುಭವಗಳಿವೆ.. ರಾತ್ರಿಯ ನಿದ್ರೆಯ ಮಂಪರಿನಲಿ ಒಂದಿಷ್ಟು ಮರೆತು ಹೋಗಿಬಿಡುತ್ತವೆ..ಬೆಳಿಗ್ಗೆ ಎದ್ದು ರಾತ್ರಿ ಏನೋ ಕನಸು ಬಿದ್ದಿತ್ತು ಅಂತ ನೆನಪು ಮಾಡಿಕೊಳ್ಳಲು ಶತ ಪ್ರಯತ್ನ ನಡೆಸಿದರೂ ಊಹೂಂ ಹಾಳಾದ್ ಕ್ಯಾಸೆಟ್ಟು ಓಡೋದೇ ಇಲ್ಲ..ಏನೋ ಭಾರಿ ನೆನಪಿನ ಶಕ್ತಿಯಿದೆ ನನಗೆ ಎಂದು ತಿಳಿದುಕೊಂಡಿದ್ದೆ..ಆದರೆ ಈ ಮರೆತು ಹೋದ ಕನಸಿನ ವಿಚಾರದಲ್ಲಿ ಮಾತ್ರ ಎಲ್ಲವೂ ಡಿಲಿಟ್..

ಈ ಕನಸುಗಳು ಎಷ್ಟು ನಿಜವಾಗುತ್ತದೆಯೋ, ಸುಳ್ಳಾಗುತ್ತದೆಯೋ ಗೊತ್ತಿಲ್ಲ..ಆದರೆ ಬಿದ್ದಷ್ಟು ಹೊತ್ತು ಮಾತ್ರ ಒಂದೋ ಬೇಸರ, ಇನ್ನೊಂದೋ ಖುಷಿ ಎರಡರಲ್ಲಿ ಒಂದಾಗುತ್ತದೆ..ಒಳ್ಳೆಯ ಕನಸು ಬೀಳುವಾಗ ಯಾರೋ ಅರ್ಧಕ್ಕೆ ಎಬ್ಬಿಸಿದರೆ ಈಗ್ಲೇ ಇವರು ಎಬ್ಬಿಸ್ಬೇಕಿತ್ತಾ..? ಎಂದೆನಿಸುವುದಂತೂ ಸುಳ್ಳಲ್ಲ..         

******

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕನಸಿನ ಹೊತ್ತು: ಪದ್ಮಾ ಭಟ್

Leave a Reply

Your email address will not be published. Required fields are marked *