ಪ್ರೀತಿ ಪ್ರೇಮ

ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.

ನೆಲದ ಮಣ್ಣು ಒಲುಮೆ ಕಣ್ಣು
ತೆರಯಬಹುದು ಪ್ರೇಮದ ಹೆಣ್ಣು
ಕನಸು ಮನಸುಗಳ ಬೆಸಗೆಯಲ್ಲಿ
ನಮ್ಮಿಬ್ಬರ ಹೃದಯ ಮಿಲನದ
ನವಿಲ ನರ್ತನವು ಪ್ರೇಮ ಕಾಶಿಯಲಿ….,

ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ ಬರುವೆ ಎಂಬ ನಂಬಿಕೆಯಲಿ ಬದುಕಿರುವ ಪ್ರೀತಿಯ ಫಕೀರ ನಾನು. ನಡು ಮಧ್ಯಾಹ್ನದಲಿ ಹಸಿದ ಫಕೀರನಿಗೆ ಸಿಕ್ಕ ಮಾವಿನ ಹಣ್ಣಿನಂತವಳೇ ಬದುಕು ನಿನ್ನೊಂದಿಗೆ ಚೆಂದವಾಗುತ್ತಿದೆ ಕಣೆ. ಸಾವಿಗೂ ನೋವಿಗೂ ಈಗ ಸಾವಾಗುವಂತೆ ನಿನ್ನ ಪ್ರೀತಿಯ ಪುಷ್ಪವರ್ಷ ಸುರಿಯುತ್ತಿದೆ. ಆದರೆ ಏಕಾಂತ ಸಹಿಸಲಾಗದ ಜ್ವಾಲೆಯಾಗಿ ದಹಿಸುಲಾರಂಬಿಸಿದಾಗಲೆ ಕವಿತೆಯು ಚಿಗುರೊಡೆಯಲಾರಂಭಿಸುತ್ತದೆ. ಆದರೆ ಆ ಕವಿತೆಯಲ್ಲು ನೀ ಮೈದೋರಿ ನಿಂತು ಒಲವಿನ ಚುಂಭನವಿಡುವ ಪರಿ ಪ್ರೀತಿ ಎನ್ನಬಹುದೇನೊ. ಬದುಕಿನ ಕಾಲಿತನದವನ್ನು ತುಂಬಲು ವಸಂತವಾಗಿ ನನ್ನ ಬದುಕಿನಲ್ಲಿ ಪ್ರವೇಶಿಸುವ ನಿನ್ನ ಪ್ರೇಮಕ್ಕೆ ನಾನು ಬಲಿಯಾದೆ ಒಲವಿನಲ್ಲಿ. ಮುಂಜಾವಿನ ಏಕಾಂತಲ್ಲೂ ನಿನ್ನ ನೆನಪುಗಳಲೇ ಕಳೆದುಹೋದದ್ದು ಹರಿವಾಗುತ್ತಲೆ ನಿನ್ನ ನೆನಪಿಗೊಂದು ಓಲೆ ಬರೆಯಲು ಕುಳಿತುಬಿಡುವೆ.

ಬದುಕು ವಿಸ್ಮಯಗಳ ಸಂತೆ, ಇದರಲ್ಲಿ ನೀನೊಂದು ಪ್ರೇಮದ ಹೂ, ಆ ಪ್ರೇಮದ ಹೂವನ್ನು ಕೊಳ್ಳೆಯೊಡೆಯಲೆಂದೆ ದಂಡೆತ್ತಿ ನಿನ್ನೊಲವಿನ ಚುಕ್ಕಿಚಂದ್ರಮರೂರಿಗೆ ದಾಳಿ ಮಾಡುತ್ತಲೆ ಇದ್ದೆ. ಆದರೆ ಮೊದ ಮೊದಲು ನಿನ್ನ ಪ್ರೇಮ ರತ್ನಗಂಬಳಿಯನ್ನು ಹಾಸಿ ಸ್ವಾಗತಿಸುವ ಬದಲು ಮುಳ್ಳಿನ ದಾರಿಯಂತಾಗಿತ್ತು. ಬರುಬರುತ್ತ ಮುಳ್ಳು ಹೂವಾಗಲಾರಂಬಿಸಿ ಇಂದು ಒಲವಿನ ಸುಗಂಧದ ತಂಗಾಳಿ ಬೀಸುತ್ತಿದೆ. ಕನಸು ಕನವರಿಕೆಯ ಜಪದಲ್ಲು ನಿನ್ನ ಹೆಸರನ್ನು ಸ್ವಚ್ಛವಾಗಿ ಉಚ್ಛರಿಸುವಂತೆ ಮಾಡುತ್ತಿದೆ. ನಿನ್ನ ತೆಕ್ಕೆಯೊಳೆಗೆ ಕಳೆದು ಹೋಗುವ ಪರಿ ಇದು. ನಿನ್ನ ಪ್ರೇಮದ ಪರ್ವದಲ್ಲಿ ಲೀನವಾಗುವ ಬಗೆ ಇದು. ಪ್ರೇಮವೆಂದರೆ ಹಾಗೆ ಕಣೆ, ನಿನ್ನಲ್ಲಿ ನಾನಾಗಿ ನಿನ್ನೊಳಗೆ ಒಂದಾಗಿ ಬೆರೆತುಬಿಡುವಂತದ್ದು. ಪ್ರೇಮವೆಂದರೆ ಎರಡು ಹೃದಯಗಳ ಮಿಲನದ ಸಂಭ್ರಮಾಚರಣೆ ಕಣೋ ಎನ್ನುತಿದ್ದ ನೀನು ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸಗಳ ಅರ್ಥವನ್ನು ನೀಡುತ್ತಲೆ ಬಂದೆ. ಕಾಮವನ್ನು ದಹಿಸುತ್ತಲೇ ಪ್ರೇಮವನ್ನು ಕಾಪಾಡುವುದು ಪ್ರತಿ ಪ್ರೇಮಿಗಳ ಧರ್ಮ ಎನ್ನವುದನ್ನು ಕಲಿಸಿದವಳೂ ನೀನಲ್ಲವೇ ಸಖಿ. ಸಾವಿರ ಸಾವಿರ ಭಾವನೆಗಳ ಸೈನ್ಯದೊಂದಿಗೆ ನೀನ್ನ ಪ್ರೇಮ ಲಗ್ಗೆ ಇಟ್ಟಾಗಲೆ ನನ್ನೆದೆ ಕಣಿವೆಗೆ ಪ್ರೇಮದ ಜಲಧಾರೆ ಸುರಿಯುತ್ತಿತ್ತು. ನಿನ್ನ ಸಂದೇಶ ಬಂದಾಗಲೆ ಕಣೆ ನನ್ನೂರಿಗೆ ನನ್ನದೆಯ ಬೀದಿಗೆ ಅದೆಂತದ್ದೊ ಸಂಭ್ರಮದ ಘಮಲು.

ಕತ್ತಿನಿಳಿಜಾರಿಗೆ ನಿನಿತ್ತ ಮುತ್ತಿನುಂಗರವು
ಮಚ್ಚೆಯಾಗಿ ಕೆಣಕುತಿದೆ ನಲ್ಲ
ನಿನ್ನ ತೋಳು ಬಂಧನದಲ್ಲಿ ನಲುಗಲು
ಮನಸು ಹಂಬಲಿಸುತ್ತಿದೆ
ಇನ್ನೊಲುಮೆಯ ಕುಲುಮೆಯಲಿ ನಾ ಕರಗಲೇ…,

ಇಂತಹ ಭಾವನೆಗಳ ಜಲಧಾರೆಯಾಗಿ ನೀ ಧುಮಿಕುವಾಗ ನಿನ್ನ ಧುಮಿಕಿಗೆ ಆತೋರೆಯುವ ಸಾಗರದ ಬಂಡೆಗಲ್ಲು ನಾನಾಗಿ ಬೀಡುವೇ ಸಖಿ. ಮದೋನ್ಮತ್ತತೆಯ ಮನಸ್ಸೆಂಬ ಬಿಸಿಲುಗುದುರೆನ್ನು ಹಿಡಿದು ಪಳಗಿಸಿ ಶುದ್ಧ ಬದುಕಿನ ಯುದ್ಧಗುದುರೆಯಂತಾಗಿಸಿಬೀಡುವ ನಿನ್ನ ಪ್ರೇಮಕ್ಕೆ ನನ್ನ ಬದುಕೆ ಶಿರಭಾಗಿ ನಮಿಸುವಂತಾಗಿದೆ. ನೀ ಬರುವ ಮುನ್ನ ಈ ಬದುಕು ಅಷ್ಟೇನು ಚೆಂದವೆನಿಸುತ್ತಿರಲಿಲ್ಲ. ನೀ ಬಂದ ನಂತರವೇ ಈ ಬದುಕು ನವ ಯೌವ್ವನದ ಉಡುಗೆಯನ್ನುಟ್ಟು ಸಂಭ್ರಮಿಸಲು ಆರಂಭಿಸಿದ್ದು. ನಿನ್ನ ಕಂಡ ಮೊದಲು ದಿನವೇ ನಿನ್ನ ಮನೆಯ ಬಾಗಿಲೆ ಬಂದು ನಿನ್ನ ಅಪ್ಪನೆದು ನಿಂತು ನಿನ್ನನ್ನ ನನಗೆ ಕೊಟ್ಟು ಬೀಡಿ, ನಾನು ಇಷ್ಟು ದಿವಸ ನನ್ನನ್ನು ನಾನು ಯಾಗೆ ಸಾಕಿಕೊಂಡೆನು ಅದರ ಸಾವಿನ ಪಟ್ಟು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಎಂದು ಕೇಳಬೆಕೆಂದುಕೊಂಡೆ ಆದರೆ ಪ್ರೇಮದ ಮೊದಲ ಪಾಠ ಅರಿಯದ ಅಜ್ಙಾನಿಯಂತಾಗಿಬಿಟ್ಟಿತ್ತೆ. ನಿನ್ನ ಪ್ರೇಮ, ಸೌಂಧರ್ಯ, ನಗುವು, ಚೆಲುವು, ನಡೆ,ನುಡಿಗೆ ನನ್ನ ಬಯಕೆಯ ಪ್ರೇಮ ನತಮಸ್ತಕವಾಗಿ ಮೂಕತನದಿ ನಿನ್ನ ಒಲಮೇಯ ಕಡಲಿಗೆ ಹಂಬಲಿಸುತ್ತ ಮೈಮರೆಯುತ್ತಿತ್ತು.

ಸಾಕೆನ್ನದ ಭಾವನೆಗಳ ಝರಿಗಳು ನಿನ್ನ ಪ್ರೇಮದ ಮಹಾ ಸಾಗರದಲ್ಲಿ ಮುಳಿಗೆದ್ದು ನನ್ನೆದೆಯ ದಡಕಪ್ಪಳಿಸಿದಾಗ ಚುಕ್ಕಿ ಚಂದ್ರಮರೂರಿನಲ್ಲಿ ಮಿಂಚು ಸಂಚರಿಸಿ ಶಶಿಧನು ಒಲವಿನ ಭಿಕ್ಷೆಗೆ ಬರಲು ಸಿದ್ದನಾಗುತಿದ್ದ. ನಿನ್ನ ಮೈ ಬಣ್ಣಕ್ಕೆ ಅವನೇ ಸೋತು ಅದನ್ನು ತನ್ನ ಮೇಲೆರಚಿಕೊಳ್ಳಲು ಬರುವನೇನು ಎನ್ನುವ ಆತುರ ನನ್ನನ್ನು ಕೆಣಕುವಂತೆ ಮಾಡಿದ್ದು ಸುಳ್ಳಲ್ಲ. ಸಾಂಗತ್ಯದ ಸಂಧಾನಕೆ ಅತ್ಮಾರ್ಪಣೆಯೊಂದೆ ಸಾಧನ ಎಂದುಕೊಂಡು ನಿನ್ನ ಪ್ರೇಮದ ರಥಯಾತ್ರದಯಲ್ಲಿ ನಾನು ಸಾರಥಿಯಾಗಲು ನನ್ನ ಸ್ವಾಭೀಮಾನವನ್ನೆ ನಿನ್ನ ಪ್ರೇಮದ ಪಾದಕ್ಕೆ ಪುಷ್ಪವನ್ನಾಗಿ ಸಮರ್ಪಿಸಿ ನನ್ನ ಬದುಕನ್ನೆ ಹಸನಾಸಿಕೊಂಡ ಹೆಮ್ಮೆ ನನ್ನದು ಸಖಿ. “ಹೆಂಡತಿ ಒಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ” ಎಂದು ಕವಿ ಹೇಳಿದ್ದು ಸುಳ್ಳಲ್ಲ. ನಿನ್ನ ಪ್ರೇಮದ ಒಲುಮೆಯ ಭಾಗ್ಯವನಿಯದೆ ನನಗೂ ಜಯವಿಲ್ಲ ಕಣೆ. ನಾಳೆ ನಿನ್ನ ಮನೆಯನ್ನು ಬೆಳಗು ಹಣತೆ ನಾನಾಗುತ್ತೇನೆ ಕಣೋ ಎಂದು ನೀ ಬಾಚಿದಾಗಲೆ ನಿನ್ನ ಕಣ್ಣುಗಳಲ್ಲಿ ನನ್ನ ಬದುಕಿಗೆ ನವೂದಯದ ಕಿರಣದಬ್ಬವನ್ನೆ ಕಂಡುಕೊಂಡೆ.

ನಿನ್ನ ನಗೆಯ ಸ್ವರವೇ ಸಂಗೀತ ಲಹರಿ
ನಿನ್ನ ಗೆಜ್ಜೆ ನನ್ನೆದೆಯ ತಾಳ
ನೀನ್ನ ಮಧುರ ಮಾತೆ ಸಾಹಿತ್ಯದಂತೆ
ಅದು ನನ್ನೊಲವಿನಂತರಾಳ

ನಿನ್ನ ಹೆಜ್ಜೆ ಬರೆಯುತಿದೆ ನರ್ತನದಿ
ಮೌನದಲಿ ಕವಿತೆ ಸಾಲು
ಕಣ್ಣೊಟವೊಂದು ಸೌಂದರ್ಯ ಸಿರಿಯು
ಪಡೆದೆ ನಾ ಪ್ರೇಮದಾ ಸಾಲ

ನಿನ್ನ ಪ್ರೇಮದ ಸಾಲ ಪಡೆದ ಸಾಲಗಾರ ನಾನು. ಅದನ್ನು ಎಂದು ನನ್ನಿಂದ ಮರಳಿಸಲಾಗದು ಎನ್ನವುದನ್ನು ಕಂಡುಕೊಂಡಿದ್ದೇನೆ. ನೀ ಕೊಟ್ಟ ಪ್ರೇಮದ ಒಲವಿನ ಸಾಲವನ್ನು ನನ್ನ ಬದುಕು ನಿನಗೆ ಮರಳಿಸಲು ಪ್ರಯತ್ನಿಸುತ್ತದೆ. ನನ್ನ ಪ್ರೇಮದ ರೂಪದಲ್ಲಿ. ನಿನ್ನ ಪ್ರೇಮದ ಮಹಾಸಾಗರದಲ್ಲಿ ಭಾವನೆಗಳ ಅಲೆ ಹೊಮ್ಮುವುದನ್ನು ಕಂಡು ನನ್ನದೆಯ ರತ್ನಪರ್ವತದ ಸಾಲೆ ಕರಗುತ್ತಿದೆ. ಕನಸು ಕನವರಿಸುವ ಪರಿ ಇದೆ ಇರಬೇಕು. ಹುಣ್ಣಿಮೆಯ ರಾತ್ರಿಯಲ್ಲಿ ಚೆಂದಿರ ಬಂದರೆ ನಿನ್ನ ಕಾಯ್ದುಕೊಳ್ಳುವ ಹೊರೆ ನನ್ನ ಮೇಲೆ ಬಿದ್ದಂತಾಗುತ್ತದೆ. ನಾನು ಚೆಂದಿರನಷ್ಟೊ ಚೆಂದವಿಲ್ಲದಿದ್ದರಬಹುದು ಆದರೆ ಅವನ ಬೆಳಕಿಗಿಂತಲು ನೂರು ಪಟ್ಟು ಹೆಚ್ಚಿನ ಪ್ರೀತಿಯನ್ನು ನಿನ್ನ ಒಲವಿನ ಬಟ್ಟಲಿಗೆ ಧಾರೆ ಎರೆವೆ ಸಖಿ. ನಮ್ಮಿಬ್ಬರ ದಾಂಪತ್ಯದ ಶುಭ ಸಮಯ ಹತ್ತಿರವಾಗುತ್ತಿದೆ. ನಡುವೆ ಶಕುನಿಗಳ ಕುತಂತ್ರಗಳಿಗೇನು ಕಡಿಮೆ ಇಲ್ಲ. ಆದರೆ ನಮ್ಮಿ ಪ್ರೀತಿಯ ನಂಬಿಕೆಯ ಮುಂದೆ ಸಾವಿರ ಶಕುನಿಗಳು ಬಂದುರು ರಕ್ತರಾತ್ರಿಯ ಕಾಳಗಕ್ಕೆ ಒಲವು ಸಿದ್ದವಾಗಿ ನಿಂತಿದೆ. ನಮ್ಮವರೆಲ್ಲರು ನಮ್ಮಿಬ್ಬರ ಪ್ರೀತಿಗೆ ಶತ್ರುಗಳಾದ ಬಗೆಯೇ ಸೋಜಿಗ. ಜಗದ ಜಾತ್ರೆಯಲ್ಲಿ ಕಳ್ಳರು ಇರುತ್ತಾರೆ, ಸುಳ್ಳರು ಇರುತ್ತಾರೆ, ಪ್ರೇಮಿಗಳ ಪಾಲಿಗೆ ದುಷ್ಯಾಶನನಂತ ಬಂಧುಗಳು ಇರುತ್ತಾರೆ. ಇಂತಹ ಕುರುಡು ಕುರು ವಂಶದವರಿಂದ ಪ್ರೀತಿಗೆ ಎಂದು ಧಕ್ಕೆಯಾಗದು.

ಹಾದಿಬೀದಿಯಲ್ಲೆಲ್ಲಾ ಅರಳತಾವಾ ನೋಡ
ಮಮಕಾರದ ಹೂ ನಗುನಗುತಲೆ ಅಲ್ಲೆ
ರಂಬೆಕೊಂಬೆಯ ಮೆಲೆ ಗೂಡು ಕಟ್ಯಾವ ನೋಡ
ಹಕ್ಕಿ-ಪಕ್ಷಿಗಳು ಖಗಗಾನದಲಿ ಸ್ವರವ ಚೆಲ್ಲಿ

ಚೆಂದುಳ್ಳೆ ಚೆಲುವೆ ನೀ ಬಳುಕಾಡಿ ಬರುವಾಗ
ತುಳುಕಾಡುತಾವ ನೋಡ ಗಿಡಮರದ ಬಳ್ಳಿ
ಕುಣಿತೈತಿ ನವಿಲ ಓಡೈತಿ ಆ ನದಿಯು
ಒಂದೆ ಗತಿಯಲಿ ಹೊಮ್ಮೈತಿ ವನದ ಘಮಲ

ನಿನ್ನ ಪ್ರೀತಿಯ ವನದ ಘಮಲಿಗೆ ನನ್ನ ಬದುಕಿನ ನವ ಚಿಗುರು ಹೂ ಬಿಡುವ ಕಾಲ ಕಣೆ ಇದು. ಈ ಮುಂಜಾವಿನಲ್ಲಿ ಮುಖವನ್ನು ತೊಳೆಯದೆ ಈಗೆ ನಿನ್ನ ನೆನಪುಗಳನ್ನು ಹರಡಿಕೊಂಡು ಕುಳಿತುಬಿಟ್ಟಿದ್ದೇನೆ. ದೂರದೂರಿನ ದೊರೆ ಮಗಳೆ, ದಿಗಂತದಲಿ ಮಿನುಗು ದ್ರುವತಾರೆಯೇ, ನನ್ನ ಬದುಕಿನಲಿ ಬಂದು ಪವಡಿಸು ಬಾ ಸಖಿಯೇ. ದೂರ ಸಾಕಿನ್ನು ಸಾಗರದ ಅಲೆಗೂ ಬೆಸರವಾಗವಂತಿದೆ ಈ ವಿರಹದ ಕಹಿ ಬರಹ. ಬದುಕನ್ನು ರಮ್ಯೋಧ್ಯಾನವಾಗಿಸಿದವಳೆ ಬಾ ನನ್ನೊಲವೇ ಕಾಯುತಿರುವೇ, ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..,

ನಿನ್ನವ…,
ಸಿದ್ದುಯಾದವ್ ಚಿರಿಬಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *