ಕನಸಲ್ಲಿ ಕಂಡವಳು!: ಎಸ್.ಜಿ.ಶಿವಶಂಕರ್

                  

`ನೋ…ಇದು ಸಾಧ್ಯವಿಲ್ಲ!'
ಕಪಿಲನ ದನಿ ನಡುಗುತ್ತಿತ್ತು! 
ಮಿದುಳಿಗೆ ಒಮ್ಮೆಲೇ ರಕ್ತ ಪ್ರವಾಹದಂತೆ ನುಗ್ಗಿ ಕಿವಿಗಳು ಗುಂಯ್ ಎಂದವು! ಎದುರು ಕುಳಿತಿದ್ದ ಆ ಅಪ್ರತಿಮ ಸುಂದರಿಯನ್ನು ಕಂಡು ಕಪಿಲ ಬೆದರಿ, ಬೆವರಿಬಿಟ್ಟಿದ್ದ! ಮೇರೆ ಮೀರಿದ ಅಚ್ಚರಿ, ಅನುಮಾನ, ಸಂತೋಷ  ಎಲ್ಲವೂ ಏಕ ಕಾಲದಲ್ಲಿ ಆಗಿದ್ದವು! ಜೊತೆಗೆ ಆಕೆ ತನ್ನ ಸಂಗಾತಿಯಾಗಲಿರುವಳು ಎಂಬ ಅನಿವರ್ಚನೀಯ ಆನಂದ ಬೇರೆ!

`ಎಸ್.. ಇಟ್ ಇಸ್ ರಿಯಲ್! ಯಾವುದೂ ಅಸಾಧ್ಯವಲ್ಲ!'
ಅಂಕುರನದು ಹಿಮಾಲಯದಂತ ಅಚಲ, ಆಗಸದಷ್ಟು ಅಖಂಡ ಆತ್ಮವಿಶ್ವಾಸ! 
`ಅಂದರೆ ಈಕೆ, ಈ ಹೆಣ್ಣು… ಅಲ್ಲ ಈ ಹುಡುಗಿ, ಈ ಸುಂದರಿ ನಿನ್ನ ಪ್ರಯೋಗ ಶಾಲೆಯಲ್ಲಿ ತಯಾರಾದವಳೆ..?’ ತಾನೇನು ಮಾತಾಡುತ್ತಿರುವೆನೋ ಎಂಬ ಅರಿವಿಲ್ಲದೆ ನಡುಗುತ್ತಾ, ಸಖೇದಾಶ್ಚರ್ಯದಿಂದ ಬಡಬಡಿಸಿದ ಕಪಿಲ. 

`ಮೈ ಡಿಯರ್ ಕಪಿಲ್, ನಿನಗೆ ನಂಬಿಕೆ ಬರದಿರುವುದಕ್ಕೆ ಏನು ಕಾರಣ..? ಕ್ಲೋನಿಂಗ್ ಇವತ್ತು ಸಾಮಾನ್ಯ ತಂತ್ರಜ್ಞಾನ! ಆದರೆ ಮಾನವರನ್ನು ಕ್ಲೋನ್ ಮಾಡುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಶಿದ್ಧ! ನೈತಿಕತೆ ಮತ್ತು ಧರ್ಮದ ಹಿನ್ನೆಲೆಯಲ್ಲಿ ಇದಕ್ಕೆ ಮನ್ನಣೆ ದೊರೆತಿಲ್ಲ. ಆದರೆ ಸಸ್ಯ ಕ್ಷೇತ್ರದಲ್ಲಿ, ಹೈನುಗಾರಿಕೆ, ಪ್ರಾಣಿ ಕ್ಷೇತ್ರದಲ್ಲಿ ಮುಕ್ತವಾಗಿ ಪ್ರಯೋಗ, ಪ್ರಯತ್ನ ಮತ್ತು ಉತ್ಪಾದನೆ ಸತತವಾಗಿ ನಡೆಯುತ್ತಲೇ ಇದೆ. ನಾನೇನು ವ್ಯಾಪಾರಕ್ಕಾಗಿ ಕ್ಲೋನಿಂಗ್ ಮಾಡಿಲ್ಲ! ನಿನಗಾಗಿ, ನನ್ನ ಸ್ನೇಹಿತನಿಗಾಗಿ ಕ್ಲೋನ್ ಮಾಡಿ ಒಂದು ಹೆಣ್ಣು ತಯಾರು ಮಾಡಿರುವೆ. ಇದನ್ನು  ನಂಬಲು ಅನುಮಾನವೇಕೆ? ನೀನೂ ಒಬ್ಬ ವಿಜ್ಞಾನಿ… ನೀನೇ..ಹೇಳು…ಇದು ಸಾಧ್ಯವಿಲ್ಲದ ತಂತ್ರಜ್ಞಾನವೇ..?’

ಅಂಕುರನ ಮಾತುಗಳು ಬಂದೂಕಿನ ಗುಂಡುಗಳಂತೆ ಸಿಡಿದವು.
ಕಪಿಲ ಮತ್ತೊಮ್ಮೆ ಆ ರೂಪಿಸಿಯನ್ನು ನೋಡಿದ – ಮಂತ್ರಮಗ್ಧನಂತೆ! ತಲೆ ಕೊಡವಿ, ಮೋಡಿಯಿಂದ ಈಚೆ ಬಂದು ಕಣ್ಣುಗಳನ್ನಗಲಿಸಿ ಮತ್ತೊಮ್ಮೆ ದಿಟ್ಟಿಸಿ ನೋಡಿದ. ಆ ರೂಪವನ್ನು ಬೊಗಸೆಯಲ್ಲಿ ಹಿಡಿದು ಕುಡಿಯುವವನಂತೆ ನೋಡಿದ. ಸಂಕೋಚವಾಯಿತು! ಎಂದೂ ಹೆಣ್ಣನ್ನು ನೋಡದ ನಿರ್ಲಜ್ಜನಂತೆ ಆಕೆಯನ್ನು ಹೀಗೆ ನೋಡುವುದು ಉಚಿತವೆ..? ಆಕೆ ಏನೆಂದುಕೊಂಡಾಳು..? ಅಂಕುರ ಏನೆಂದುಕೊಂಡಾನು..? ಅವನ ಮನಸ್ಸು ಮತ್ತೆ ಹೇಳಿತು..`ಆಕೆಯಾಗಲೀ..ಅಂಕುರನಾಗಲೀ..ಏನಾದರೂ ಅಂದುಕೊಂಡರೆ ನಿನಗೇನು..? ಆಕೆ ನಿನಗಾಗಿ ಸೃಷ್ಟಿಸಲ್ಪಟ್ಟವಳು… ನೀನೇ ಹೇಳಿದಂತೆ, ನಿನ್ನ ಅಪೇಕ್ಷೆಯ ಮೇರೆಗೆ! ಆಕೆಯ ದೇಹದ, ಬುದ್ಧಿಯ ಒಂದೊಂದು ಕಣವೂ ನಿನಗಾಗಿಯೇ ಬೆಳೆಸಿರುವುದು! ಅದನ್ನು ನೋಡಲು ಏಕೆ ಲಜ್ಜೆ?’
ಕಪಿಲನಿಗೆ ತನ್ನ ಒಳದನಿಯನ್ನು ಕೇಳಿ ಧೈರ್ಯ ಬಂತು! ಅಂಜಿಕೆಯಿಲ್ಲದೆ, ನಾಚಿಕೆಪಡದೆ ಸೌಂದರ್ಯೋಪಾಸನೆ ಮಾಡುವ ಒಬ್ಬ ಕಲಾವಿದನಂತೆ, ಕವಿಯಂತೆ ಆ ರೂಪಶ್ರೀಯನ್ನು ನೋಡಿದ.

ಏರು ಯೌವನದ, ಮಾಟವಾದ ಮೈನ, ಸುಂದರ ಮುಖದ ಒಡತಿ ಆಕೆ. ಅವಳ ಬಾದಾಮಿಯಂತ ಮುಖ, ತುಸು ಪುಟ್ಟ ಹಣೆ, ಸಂಪಿಗೆಯ ನಾಸಿಕ, ಬೆದರಿದ ಹರಿಣಿಯಂತೆ ಕಣ್ಣುಗಳು, ಶುಭ್ರ ಗೌರವ ವರ್ಣದ ತ್ವಚೆ, ಅಚ್ಚ ಕಪ್ಪು ಬಣ್ಣದ ದಟ್ಟ ಕೇಶರಾಶಿ! ಅದೆಷ್ಟು ಸಲ ಆಕೆ ಹಿಂದಕ್ಕೆ ತಳ್ಳಿದರೂ ಮತ್ತೆ ಮತ್ತೆ ಮುಖವನ್ನು ಮುತ್ತಿಡಲು ಧಾವಿಸುತ್ತಿದ ಗುಂಗುರು ಮುಂಗುರುಳು! ದುಂಬಿಗಳು ಕಮಲಕ್ಕೆ ಮುತ್ತುವಂತೆ ಮುತ್ತುತ್ತಿದ್ದವು.
ಹಿಂದೊಮ್ಮೆ ಅಂಕುರನ ಜೊತೆ ತಮಾಷೆಯಾಗಿ ಮಾತಾಡುತ್ತ, ಆಕೆ ಸಾಮಾನ್ಯ ಹೆಣ್ಣುಗಳಿಗಿಂತಲೂ ಕೊಂಚ ಎತ್ತರ ಇರಲಿ ಎಂದಿದ್ದೆ! ಆಕೆ ಹಾಗೇ ಇರಬಹುದೆ..? ಆಕೆ ಬಂದಾಗ ಆಕೆಯ ಎತ್ತರವನ್ನು ಗಮನಿಸಿರಲಿಲ್ಲ. ಈಗ ಆಕೆ ಕೂತಿದ್ದಾಳೆ. ಆಕೆಯನ್ನು ಏಳಿಸಿ ಅವಳ ನಿಂತ ನಿಲುವಿನ ಭಂಗಿಯನ್ನು ನೋಡಬೇಕಲ್ಲ..? ಹೇಗೆ ಕೇಳಲಿ..? ನಾಚಿಕೆಯೆನಿಸುತ್ತಿದೆಯಲ್ಲ..?’
`ರೂಪಸಿ, ನಮ್ಮಿಬ್ಬರಿಗೂ ಚಹ ಮಾಡಿ ತರುವಿಯಾ..?’
ಅವನ ಮನಸ್ಸನ್ನು ಓದಿದಂತೆ ಹೇಳಿದ ಅಂಕುರ.
`ಓ..ವಿತ್ ಪ್ಲೆಷರ್..ಬೈಯ್ಯಾ..’

ಎಂದಳು…ಹದವಾಗಿ ಶೃತಿ ಮಾಡಿದ ವೀಣೆಯನ್ನು ನುರಿತ ವೈಣಿಕ ನುಡಿಸಿದಂತೆ ಶಬ್ದದ ತರಂಗಗಳು ಹೊರಹೊಮ್ಮಿದವು. ಆಕೆ ಎದ್ದು ನಿಂತಳು. ನೀಳ ಹಾಗೂ ಮಾಟವಾದ ದೇಹ! ಆಕೆಯುಟ್ಟಿದ್ದ ತೆಳು ಗುಲಾಬಿಯ ಬಣ್ಣದ ಉಡುಪು ಅವಳ ಮೈ ಬಣ್ಣಕ್ಕೆ ಸರಿಸಮನಾಗಿತ್ತು! `ಓಹ್…ಎಂತಹ ಅದ್ವಿತೀಯ ಸೌಂದರ್ಯ..?’ ಕಪಿಲ ತನಗೆ ತಾನೇ ಹೇಳಿಕೊಂಡ!

`ಐ ಕೆನಾಟ್ ಬಿಲೀವ್ ದಿಸ್!’ ಕಪಿಲ ಮತ್ತೊಮ್ಮೆ ಉದ್ಗರಿಸಿದ.
`ಇವತ್ತಿಗೆ ಸರಿಯಾಗಿ ಎಂಟು ತಿಂಗಳ ಹಿಂದೆ ನೀನು ಹೇಳಿದ್ದು ನೆನಪಿದೆ ತಾನೆ..?’ ಅಂಕುರ ನೆನಪು ಮಾಡಿದ.
ಕಪಿಲ ನೆನಪು ಮಾಡಿಕೊಂಡ..ಹೌದು ಎಂಟು ತಿಂಗಳ ಹಿಂದೆ ತಾನು ಅಂಕುರನಿಗೆ ಹೇಳಿದ್ದೆ! ಆಕೆ ಹೀಗಿರಬೇಕು..ಹಾಗಿರಬೇಕು..ಎತ್ತರ ಇಷ್ಟಿರಬೇಕು..ತೂಕ ಹೀಗೆ…! ನೆನೆಪಾಯಿತು..ಎಲ್ಲ ಸ್ಪಷ್ಟವಾಗಿ ನೆನೆಪಾಯಿತು! ಹೌದು ಆ ಘಟನೆ ಎಂಟು ತಿಂಗಳ ಹಿಂದಿನದು…ಕಪಿಲನ ಮನಸ್ಸು ಕಾಲದಲ್ಲಿ ಹಿಂದಕ್ಕೆ ಓಡಿತು-ನಾಗಾಲೋಟದಲ್ಲಿ!
ಂ        ಂ        ಂ        ಂ        ಂ        ಂ

ಅಂಕುರ ಮತ್ತು ಕಪಿಲ ಕೈಕುಲುಕಿದರು. ಒಬ್ಬರನ್ನೊಬ್ಬರು ಆತ್ಮೀಯವಾಗಿ ನೋಡಿದರು. ಕಣ್ಣುಗಳಲ್ಲಿ ಸ್ನೇಹ, ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.
`ಬೈ..ಇನ್ನೊಂದು ವರ್ಷದವರೆಗೆ’
ಇಬ್ಬರ ಬಾಯಿಂದಲೂ ಏಕ ಕಾಲದಲ್ಲಿ ಒಂದೇ ಮಾತು! ಮುಖದಲ್ಲಿ ವಿದಾಯದ ನಗೆ.
ತಾವಿನ್ನು ಭೇಟಿಯಾಗುವುದು ಒಂದು ವರ್ಷದ ನಂತರವೇ ಎಂದುಕೊಳ್ಳುತ್ತಾ,ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ನಡೆದರು. 
ಹತ್ತು ವರ್ಷಗಳಿಂದಲೂ ಇದು ನಡೆಯುತ್ತಿದೆ. ಪ್ರತಿ ವರ್ಷ ಅಂಕುರ ಮತ್ತು ಕಪಿಲ ಇದೇ ಜಾಗದಲ್ಲಿ ಭೇಟಿಯಾಗುತ್ತಾರೆ-ಚಾಚೂ ತಪ್ಪದೆ! ಈ ವಾರ್ಷಿಕ ಭೇಟಿಯನ್ನು ತುಂಬ ಅಸ್ಥೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಹನ್ನೊಂದು ವರ್ಷದ ಕೆಳಗೆ ಭಾರತದ ನೆಲದಿಂದ ಅಮೆರಿಕಾಕ್ಕೆ ಹಾರಿಬಂದ ಹಕ್ಕಿಗಳು ಇಬ್ಬರೂ; ತಮ್ಮ ಅದೃಷ್ಟವನ್ನು ಪರೀಕ್ಷಿಸಲು, ಕನಸು ಸಾಕಾರಮಾಡಿಕ್ಕೊಳ್ಳಲು, ಭವಿಷ್ಯವನ್ನು ಅಪರಿಚಿತ ನೆಲದಲ್ಲಿ ರೂಪಿಸಿಕ್ಕೊಳ್ಳಲು! ಅವರಿಬ್ಬರೂ ಮೊದಲಿಗೆ ಇಳಿದದ್ದು ಚಿಕಾಗೋದಲ್ಲಿ. ಅಲ್ಲಿ ಏರ್‍ಪೆÇೀರ್ಟಿನಲ್ಲಿ ಪರಸ್ಪರರ ಪರಿಚಯ. ಆ ಪರಿಚಯ ಮುಂದೆ ಸ್ನೇಹವಾಗಿತ್ತು. 

ಅಂಕುರ ಜೀವವಿಜ್ಞಾನಿ.  ತಳಿಶಾಸ್ತ್ರದ ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದಾತ. ಕಪಿಲ ಭೌತಶಾಸ್ತ್ರದಲ್ಲಿ ಪ್ರತಿಭಾನ್ವಿತ. ಇಬ್ಬರೂ ಮೊದಲ ಬಾರಿ ಅಮೆರಿಕದ ನೆಲದಲ್ಲಿ ಅನಾಥರೆಂಬ ಭಾವನೆ ಮೂಡುವ ಮುನ್ನ ಚಿಕಾಗೋ ವಿಮಾನ ನಿಲ್ಧಾಣದಲ್ಲಿ ಭೇಟಿಯಾಗಿದ್ದರು. ಕೆಲ ಕಾಲ ಚಿಕಾಗೋದಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ನಂತರ ಕಪಿಲ ಅಮೆರಿಕಾದ ಪಶ್ಚಿಮದ ನ್ಯೂಯಾರ್ಕಿನಲ್ಲೂ, ಅಂಕುರ ಪೂರ್ವದ ಲಾಸಾಂಜಲೀಸ್‍ನಲ್ಲೂ ನೆಲಸಿದ್ದರು-ಕೆಲಸದ ನಿಮಿತ್ತ.  ತಾವಿಬ್ಬರೂ ಅಮೆರಿಕಾದ ನೆಲದಲ್ಲಿ ಪ್ರಥಮವಾಗಿ ಕಾಲಿಟ್ಟ ಜಾಗ ಮತ್ತು ಬದುಕನ್ನು ಪ್ರಾರಂಭಿಸಿದ ಜಾಗ ಎಂದು, ಪ್ರತಿ ವರ್ಷವೂ ಸ್ನೇಹಿತರಿಬ್ಬರೂ ಎರಡು ದಿನ ಬಿಡುವು ಮಾಡಿಕೊಂಡು ಬಂದು ಚಿಕಾಗೋದಲ್ಲಿ ಸ್ವಚ್ಛಂಧವಾಗಿ ಮಾತು, ತಿರುಗಾಟ, ಪಬ್ಬುಗಳಲ್ಲಿ ಕಳೆಯುತ್ತಿದ್ದರು. 
ಅಂಕುರ ಅತ್ಯಾಧುನಿಕವಾದ, ಅತಿವೇಗದ ಮ್ಯಾಗ್ನಾಫ್ಲೆಕ್ಸ್ ಟ್ರೈನಿನಲ್ಲಿ ಕೂತಿದ್ದ. ಇನ್ನೊಂದು ನಿಮಿಷದಲ್ಲಿ ಟ್ರೈನು ಹೊರಡಲಿತ್ತು. ಎರಡು ಗಂಟೆಯ ಪ್ರಯಾಣ..ನಂತರ ತನ್ನ ಮನೆ ಮಡದಿ, ಮಕ್ಕಳನ್ನು ಸೇರುವ ನಿರೀಕ್ಷೆಯಲ್ಲಿದ್ದ ಅಂಕುರ.

ಕಪಿಲ ವಿರುದ್ಧ ದಿಕ್ಕಿನಲ್ಲಿ ಹೊರಡುವ ಟ್ರೈನಿನಲ್ಲಿದ್ದನು.  ಸ್ವಸ್ಥಾನಕ್ಕೆ ಮರಳಿ, ಮಾರನೆಯ ದಿನದಿಂದ ಲ್ಯಾಬು, ಸ್ನೇಹಿತರು, ಪ್ರಾಜೆಕ್ಟು, ಟಾರ್ಗೆಟ್ಟುಗಳಲ್ಲಿ ಮುಳುಗಬೇಕು ಎಂದುಕೊಳ್ಳುವಾಗ ಪಕ್ಕದಲ್ಲಿ ಹಾದು ಹೋದ ಸಂಪಿಗೆಯ ಪರಿಮಳಕ್ಕೆ ಆಕರ್ಷಿತನಾಗಿ ತಿರುಗಿ ನೋಡಿದ್ದ. ಭಾರತೀಯ ಹೆಣ್ಣೊಬ್ಬಳು ಅಪ್ಪಟ ಭಾರತೀಯ ಉಡುಗೆ ತೊಟ್ಟು ಕಪಿಲನ ಪಕ್ಕದಲ್ಲಿ ಹಾದು ಹೋಗಿದ್ದಳು. ಆಕೆ ಮುಡಿದಿದ್ದ ಸಂಪಿಗೆಯ ಪರಿಮಳ ಹವಾನಿಯಂತ್ರಿತ ಟ್ರೈನಿನ ತುಂಬಾ ಪಸರಿಸಿತ್ತು.


 ಒಡನೆ ಅವನಿಗೆ ನೆನಪಾಗಿದ್ದು ಅಂಕುರನ ಮಾತುಗಳು!
`ನೀನೇಕೆ ಇನ್ನೂ ಮದುವೆಯಾಗಿಲ್ಲ..?’
ಕಳೆದ ಐದು ವರ್ಷಗಳಿಂದ ಕೇಳುತ್ತ ಬಂದಿದ್ದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದ್ದ ಅಂಕುರ.
`ಮದುವೆಯಲ್ಲಿ ಏನಿದೆ..?’
ಮಾರ್ಮಿಕ ಪ್ರಶ್ನೆ ಕಪಿಲನದು.
`ಪೂರ್ಣತೆಯಿದೆ, ಸಫಲತೆಯಿದೆ…ಈಗ ನಿನ್ನಲ್ಲಿ ಏನಿಲ್ಲವೋ ? ಅದೆಲ್ಲವೂ ಇದೆ. ಮದುವೆ, ಮಡದಿ, ಮಕ್ಕಳು ಇಲ್ಲದ ಬದುಕು ಅಪೂರ್ಣ ಕಪಿಲ. ಸೃಷ್ಟಿ ನಿಯಮವೂ ಇದೇ! ಶತಶತಮಾನಗಳಿಂದ ಅತ್ಯಂತ ಸಹಜವಾಗಿ ನಡೆದು ಬಂದೋರೋದೇ ಇದು! ಎಲ್ಲವನ್ನೂ ಮೀರಿ ಹೊರಟಿರುವ ಇಲ್ಲಿನ ಸಮಾಜವನ್ನು ನೋಡಿರುವೆಯಲ್ಲ..?’
 ಅಂಕುರನ ಮಾತಿನಲ್ಲಿ ಮಾಗಿದ ಮನಸ್ಸಿನ ಚಿಂತನೆಯಿತ್ತು. 
`ಆದ್ರೆ ಅಂಕುರ್, ನನಗೆ ಯಾಕೋ ಮದುವೆ ಬೇಕು ಅಂತ ಅನ್ನಿಸ್ತಾನೇ ಇಲ್ಲ!’
`ಕಾರಣ..?’

`ಮದುವೆಯಾಗಬೇಕು ಅಂತ ಅನ್ನಿಸೋ ಹೆಣ್ಣು ಸಿಕ್ಕಿಲ್ಲ..’
`ಹುಡುಕದೆ ಸಿಕ್ಕಲಿಲ್ಲ ಎಂದರೆ…?’
`ಹುಡುಕಿದೆ ಮಿತ್ರ, ಬಹಳ ಹುಡುಕಿದೆ…ಪರಿಣಾಮ ಶೂನ್ಯ’
`ನಿನ್ನ ಮನಸ್ಸಿನಲ್ಲಿರುವ ಹೆಣ್ಣನ್ನು ವರ್ಣಿಸು ನೋಡೋಣ…’
ಅಂಕುರ ಕೇಳಿದ.
`ಆಕೆ ಸಾವಿರದಲ್ಲಿ ಒಬ್ಬಳಾಗಿರಬೇಕು..ಅಪ್ರತಿಮ ಸುಂದರಿಯಾಗಿರಬೇಕು..ಗುಲಾಬಿಯ ಮೈಬಣ್ಣ, ಬಾದಾಮಿಯ ಮುಖ, ಪುಟ್ಟ ಹಣೆ, ಹಣೆಯನ್ನು ಸದಾ ಮುತ್ತುವ ದಟ್ಟ ಕಪ್ಪನೆಯ ಮುಂಗುರುಳು, ಸಂಪಿಗೆಯನ್ನು ನೆನಪಿಗೆ ತರುವ ನಾಸಿಕ, ಅಪ್ಸರೆಯರನ್ನು ಮೀರಿಸುವ ಮೈಮಾಟ ಆಕೆಯದಾಗಿರಬೇಕು! ಆಕೆ ಸರಸಿಯಾಗಿರಬೇಕು…..ಬಿರುಸಿಯಾಗಿರಬಾರದು! ಆಕೆಯಲ್ಲಿ ಶೃಂಗಾರವಿರಬೇಕು; ಶುಷ್ಕತೆಯಿರಬಾರದು! ಆಕೆಯಲ್ಲಿ ಆಸೆಯಿರಬೇಕು; ದುರಾಸೆಯಿರಬಾರದು!’

 ಕಪಿಲ ಕನಸಿನ ಲೋಕದಲ್ಲಿದ್ದ.
`ಹೋಲ್ಡ್ ಆನ್…ನಿಲ್ಲಿಸಯ್ಯಾ ಮಿತ್ರ! ಇಂತಾ ಹೆಣ್ಣನ್ನು ಸೃಷ್ಟಿಸೋಕೆ ಬ್ರಹ್ಮನಿಗೂ ಸಾಕಷ್ಟು ಸಮಯ ಬೇಕಾಗುತ್ತೆ! ಮೊದಲು ಅಚ್ಚು ತಯಾರು ಮಾಡಬೇಕು ಆಮೇಲೆ ಹೆಣ್ಣನ್ನು ಎರಕ ಹುಯ್ಯಬೇಕು..! ಒಂದು ಕೆಲ್ಸ ಮಾಡು, ಬ್ರಹ್ಮನಿಗೆ ಇವತ್ತೇ ಇ-ಮೈಲ್ ಮಾಡು! ತಡವಾದರೆ ನಿನ್ನ ಜೀವಿತದ ಅವಧಿಯಲ್ಲಿ ಇಂಥಾ ಹೆಣ್ಣನ್ನು ನೋಡಲು ಸಾಧ್ಯವಾಗುವುದಿಲ್ಲ!’
ಅಂಕುರ ತಮಾಷೆ ಮಾಡಿದ.
`ನನ್ನ ಕಲ್ಪನೆಯ ಹೆಣ್ಣು ಹೇಗಿರಬೇಕು ಅಂತ ಕೇಳಿದೋನು ನೀನು! ಈಗ ನೀನೇ ಅದನ್ನು ಬ್ರಹ್ಮ ವಿಶೇಷವಾಗಿ ಸೃಷ್ಟಿಸಬೇಕು ಅಂದರೆ ಹೇಗೆ? ನೀನು ಕೇಳಿದ್ದಕ್ಕೇ ಹೇಳ್ತಿರೋದು..ಜೀವ ವಿಜ್ಞಾನಿಗಲ್ಲದೆ ಇದನ್ನು ಇನ್ನಾರಿಗೆ ಹೇಳಲಿ..? ನಿನ್ನ ತಳಿ ಶಾಸ್ತ್ರದಲ್ಲಿ ಇದಕ್ಕೆ ಉತ್ತರ ಇದೆಯೇನು..?’
`ಖಂಡಿತಾ ಇದೆ.  ಸ್ವಲ್ಪ ಸಮಯ ಕೊಡು..’
`ನಮ್ಮ ತಾತ ಒಂದು ಗಾದೆ ಹೇಳ್ತಿದ್ದರು: ಅಮ್ಮ ಪಟ್ಟಕ್ಕೆ ಬರೋ ಹೊತ್ತಿಗೆ ಅಯ್ಯ ಚಟ್ಟ ಏರಿದ್ದರಂತೆ ! ನೀನು ನನಗಾಗಿ ಹೆಣ್ಣು ಸೃಷ್ಟಿಸೋದ್ರಲ್ಲಿ ನಾನು ಮುದಕನಾಗಿರ್ತೇನೆ…ಇಲ್ಲಾ ಗೊಟಕ್ ಅಂದಿರ್ತೇನೆ!’
ಕಪಿಲ ಜೋರಾಗಿ ನಕ್ಕಿದ್ದ.
`ಕಪಿಲ, ಇನ್ನು ಎಂಟು ತಿಂಗಳಲ್ಲಿ ನಿನ್ನ ಕಲ್ಪನೆಯ ಹೆಣ್ಣು ಸಿದ್ಧಳಾಗಿರ್ತಾಳೆ!’
ಅಂಕುರ ಗಂಭೀರನಾಗಿ ವಿಶ್ವಾಸದಿಂದ ಹೇಳಿದ.


`ಅಯ್ಯೋ…ತಮಾಷೆಗೆ ಹೇಳಿದೆ ಮಹರಾಯ! ಅದನ್ನೇ ನಿಜ ಅಂತಾ ತಿಳ್ಕೋಬೇಡ’ ಕಪಿಲ ಕಣ್ಣು ಮಿಟುಕಿಸಿ ಹೇಳಿದ.  ಹಗುರಾದ ವಿಷಯ ಹೇಳುವಾಗ ಕಪಿಲ ಹೀಗೇ ಹೇಳುವುದು.
`ಆದ್ರೆ, ನಾನು ಗಂಭೀರವಾಗೇ ತೆಗೆದುಕೊಂಡಿದ್ದೇನೆ. ಇದೊಬ್ಬ ಜೀವ ವಿಜ್ಞಾನಿಗೆ ಸವಾಲು ಅಂತ ತಗೊಂಡಿದ್ದೇನೆ. ನೀನೂ  ಸೀರಿಯಸ್ಸಾಗಿರೋದೇ ಒಳ್ಳೆಯದು…ಅಲ್ಲಾ, ಇನ್ನೆಷ್ಟು ಕಾಲ ಹೀಗೆ ಒಂಟಿಯಾಗಿರ್ತೀಯಾ..? ಪೂರ್ಣತೆಯ ಅರಿವಾಗೋದು ಯಾವಾಗ ನಿನಗೆ..?’
`ಬೇಡ ಮಹರಾಯ…ಇಷ್ಟೊಂದು ಸೀರಿಯಸ್‍ನೆಸ್ ಬೇಡ! ನಾವು ವಿದಾಯ ಹೇಳೋ ಸಮಯ ಬಂತು..ಬೈ ಮುಂದಿನ ವರ್ಷದವರೆಗೆ! ನಿನ್ನ ಮಡದಿ ಮಕ್ಕಳಿಗೆ ನಾನು ನೆನಪಿಸಿಕೊಂಡೆ ಅಂತ ಹೇಳು..ಬೈ’.
ಕಪಿಲ ಕೊನೆಯ ಮಾತಾಡಿದ್ದ.

ಇಬ್ಬರೂ ಪರಸ್ಪರ ವಿದಾಯ ಹೇಳಿ ತಮ್ಮತಮ್ಮ ಸ್ವಸ್ಥಾನಗಳಿಗೆ ವಾಪಸ್ಸಾಗಿದ್ದರು. ಆ ಘಟನೆಯ ನಂತರ ಅಂಕುರ ಪದೇ ಪದೇ ಕಪಿಲನಿಗೆ ಫೆÇೀನಾಯಿಸುತ್ತಿದ್ದ. ನಿನ್ನ ಕಲ್ಪನೆಯ ಹೆಣ್ಣನ್ನು ವಿವರವಾಗಿ ಹೇಳು ಎಂದು ಒತ್ತಾಯಿಸುತ್ತಿದ್ದ. ಕಪಿಲ ಅದನ್ನು ತಮಾಷೆಯಾಗಿ ಪರಿಗಣಿಸಿ ತನ್ನ ಕಲ್ಪನೆಯನ್ನು ಹರಿಯಬಿಟ್ಟಿದ್ದ.
ನಂತರ…ಕೆಲ ಕಾಲ ಅಂಕುರನ ಧೀರ್ಘ ಮೌನ! ಕರಾರುವಾಕ್ಕಾಗಿ ಎಂಟನೆಯ ತಿಂಗಳಲ್ಲಿ ಅಂಕುರನಿಂದ ಮೌನ ಮುರಿದು ಸಂತೋಷದ ಸುದ್ದಿ ತಿಳಿಸಿದ್ದ! ಆ ಸುದ್ದಿ ತಿಳಿದ ನಂತರ ಕಪಿಲ ಕಾದ ಹೆಂಚಿನ ಮೇಲೆ ನಿಂತವನಂತೆ ಚಡಪಡಿಸಿದ್ದ. ಅಂಕುರ ಬರುವವರೆಗೆ ಕಾಯುವುದು ಜೀವನದಲ್ಲಿ ಅನುಭವಿಸಿದ ಕಠಿಣತಮವಾದ ನೋವುಗಳಲ್ಲಿ ಒಂದೆನಿಸಿತ್ತು. 
ಕೊನೆಗೆ ಅಂಕುರನ ತನ್ನ ಮಹತ್ವದ ಪ್ರಯೋಗದ ಫಲಿತಾಂಶದೊಂದಿಗೆ ಕಪಿಲನ ಮನೆಗೆ ಬಂದಿದ್ದ! ಆಗಲೇ ಕಪಿಲನಿಗೆ ಕಂಡಿದ್ದು ಆಕೆ! ಅವನ ಕಲ್ಪನೆಯ ಸುಂದರಿ! ಅಂಕುರನ ಪ್ರಯೋಗದ ಯಶಸ್ಸು!
`ಓ…ಗಾಡ್!’ ಆಕೆಯನ್ನು ನೋಡಿ ಕಪಿಲ ಉದ್ಗರಿಸಿದ್ದ!

ಂ        ಂ        ಂ        ಂ        ಂ        ಂ

ಕಪಿಲನಿಗೆ ಎಲ್ಲ ನೆನಪಾಯಿತು! ಎಂಟು ತಿಂಗಳ ಹಿಂದೆ ಹುಡುಗಾಟಕ್ಕೆ ಮಾತಾಡಿದ್ದು ಎಂತಾ ಗಂಭೀರ ಪ್ರಮಾಣದಲ್ಲಿ ಸಾಕಾರವಾಗಿದೆ ಎಂಬುದನ್ನು ನೆನೆದು ಅಚ್ಚರಿಯಾಗಿತ್ತು!
ಅಂಕುರ ಜೀನಿಯಸ್! ಅಲ್ಲ… ಅವನು ಸಾಕ್ಷಾತ್ ಬ್ರಹ್ಮ! ತನ್ನ ಕಲ್ಪನೆಯನ್ನು ಚಾಚೂ ತಪ್ಪದೆ ಸಾಕಾರ ಮಾಡಿದ್ದಾನೆ.  ಅಂಕುರನ ಪ್ರತಿಭೆಯನ್ನು ವರ್ಣಿಸಲು ಕಪಿಲನಲ್ಲಿ ಶಬ್ದಗಳೇ ಇರಲಿಲ್ಲ.
`ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ. ಈಗ ನಿನ್ನ ಸರದಿ. ನೀನು ಮಾತನ್ನು ಉಳಿಸಿಕ್ಕೊಳ್ಳಬೇಕು’
ಅಂಕುರ ಹೇಳಿದ.

`ಅಂದರೆ..?’ಗೊಂದಲದಲ್ಲಿ ಸಿಕ್ಕಂತೆ ಕಪಿಲ ಕೇಳಿದ. ಅವನು ಮಾತುಗಳಿಗೆ ತಡಕಾಡುತ್ತಿರುವಂತೆ ಕಂಡಿತು ಅಂಕುರನಿಗೆ. ಆಕೆಯ ಎದುರಿನಲ್ಲಿ ಕಪಿಲನಿಗೆ ತನ್ನ ಬಾಯಲ್ಲಿನ ಪಸೆ ಆರಿದಂತೆ ಭಾಸವಾಯಿತು.
`ಏನೂ ತಿಳಿಯದ ಹುಂಬನಂತೆ ಮಾತಾಡಬೇಡ ಕಪಿಲ. ನನ್ನ ಕಲ್ಪನೆಯ ಹೆಣ್ಣು ನನಗೆ ಸಿಕ್ಕಿಲ್ಲ, ಅದಕ್ಕೇ ನಾನಿನ್ನೂ ಮದುವೆಯಾಗಿಲ್ಲ ಎಂದಿದ್ದೆ ನನಪಿದೆ ತಾನೆ..? ಇಗೋ ನಿನ್ನ ಕಲ್ಪನೆಯ ಹೆಣ್ಣು!’ ಆಕೆಯೆಡೆಗೆ ಕೈತೋರಿಸಿದ ಅಂಕುರ.
`ಈಕೆಯ ಗುಣ-ಅವಗುಣಗಳು, ಆಸಕ್ತಿ-ಅನಾಸಕ್ತಿಗಳು, ಅಸೆ-ಅಕಾಂಕ್ಷೆಗಳು, ಬೇಕು-ಬೇಡಗಳು ಇವನ್ನೆಲ್ಲಾ ನಾನು ತಿಳಿಯಬೇಡವೆ..? ಈಕೆಯನ್ನು ಅರಿಯದೆ ಮದುವೆಯಾಗುವುದು ಸಾಧ್ಯವೆ..?’ ಧೈರ್ಯ ತಂದುಕೊಂಡು ಕಪಿಲ ಬಡಬಡಿಸಿದ. ಆಕೆ ಸುಂದರಿಯೇನೋ ನಿಜ. ಆದರೆ ಆಕೆಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವಾಗ ರೂಪವೊಂದೇ ಸಾಲದು ಎನಿಸಿತು ಅವನಿಗೆ.
`ನಿನ್ನ ಕಲ್ಪನೆಯ ರೂಪ, ನೀನು ಅಪೇಕ್ಷಿಸಿದ ಎಲ್ಲ ಗುಣಗಳನ್ನೂ ಈಕೆಯಲ್ಲಿ ಅಳವಡಿಸಿದೆ’


`ಆದರೂ ಅವಳನ್ನು ಅರಿಯದೆ..ಬೆರೆಯದೆ..’
`ಕಪಿಲ್’ ಅಂಕುರ ಗದರಿದ. `ನಿನ್ನದು ಅತಿಯಾಯ್ತು! ಅಮೆರಿಕಾದಲ್ಲಿದ್ದ ಮಾತ್ರಕ್ಕೆ ಭಾರತದ ಮೂಲ ಬೇರು ಮರೀಬೇಡ. ನಮ್ಮ ಸಂಪ್ರದಾಯದಂತೆ. ಮೊದಲು ಮದುವೆ ನಂತರವಷ್ಟೇ ದಾಂಪತ್ಯ! ಇಲ್ಲಿನಂತೆ ಮೊದಲು ಕೂಡಿ ಆಮೇಲೆ ಬೇಕೆನಿಸಿದರೆ ಮದುವೆಯಾಗಿ ಸಂಸಾರ ಹೂಡುವ ಹುನ್ನಾರ ಬೇಡ!’
`ಆದರೆ…ಈಕೆಯ ತಂದೆ-ತಾಯಿಗಳು..?’ ಹಟಬಿಡದೆ ಮತ್ತೇನನ್ನೋ ಕೇಳತೊಡಗಿದ ಕಪಿಲ.
ಅವನ ಮಾತಿಗೆ ಆಕೆ ಫಕ್ಕನೆ ನಕ್ಕಳು. ಕುಸುರಿ ಕೆಲಸದ ಕುಶಲಿಯೊಬ್ಬ ಜೋಡಿಸಿದ ಮುತ್ತುಗಳಂತೆ ಅವಳ ದಂತಪಂಕ್ತಿಗಳು ಹೊಳೆದವು.
`ನಿನ್ನ ಮಾತು ಹೇಗಿದೆ ನೋಡು? ನಿನ್ನ ಮಾತಿಗೆ ಈಕೆಯೂ ನಕ್ಕಳು! ನನ್ನ ಲ್ಯಾಬೋರೇಟರಿಯೇ ಈಕೆಯ ಜನ್ಮಸ್ಥಳ!  ಜೀವಕಣ ಕೊಟ್ಟವರೇ ಈಕೆಯ ತಂದೆ-ತಾಯಿಗಳು! ಸಾಕೆ..? ಇನ್ನೂ ಬೇಕೆ..?’
`ಹೆಸರು..?’
`ಈವರೆಗೆ ಯಾವ ಹೆಸರೂ ಇಲ್ಲ. ಹೇಳು ಯಾವ ಹೆಸರು ಇಡೋಣ..?’
`ಚಂಪಕ!’ ಕಪಿಲ ತನಗರಿವಿಲ್ಲದಂತೆ ಉದ್ಗರಿಸಿದ. ಎಂಟು ತಿಂಗಳ ಹಿಂದೆ ಚಿಕಾಗೋದಿಂದ ನ್ಯೂಯಾರ್ಕಿಗೆ ವಾಪಸ್ಸಾಗುವಾಗ ಟ್ರೈನಿನಲ್ಲಿ ಸಂಪಿಗೆಯ ಪರಿಮಳವನ್ನು ಹರಡಿ ಹೋದ ಹೆಂಗಸಿನ ನೆನಪು ಮಿಂಚಿನಂತೆ ಅವನ ಮನಸ್ಸಿನಲ್ಲಿ ಹೊಳೆದಿತ್ತು.
`ಚಂಪಕ….ಚಂಪಕ…..ಚಂ…ಪ..ಕ..’ ಆಕೆ ಮೆಲು ದನಿಯಲ್ಲಿ ತನಗೆ ತಾನೇ ಹೇಳಿಕೊಂಡಳು! ಆ ಹೆಸರು ಅವಳಿಗೆ ಇಷ್ಟವಾದಂತೆ ಇತ್ತು.
`ಚಂಪಕ.. ಸುಂದರವಾದ ಹೆಸರು..ಇನ್ನು ಮುಂದೆ ನಿನ್ನ ಹೆಸರು ಚಂಪಕ..ಚೆನ್ನಾಗಿದೆಯಲ್ಲವೆ ಹೆಸರು?’ ಎಂದಾಕೆಗೆ ಹೇಳಿ ಅಂಕುರ ಮುಂದುವರಿದು ಕಪಿಲನಿಗೆ ಹೇಳಿದ. `ಅಂದ ಹಾಗೆ ಕಪಿಲ, ನಿನಗೆ ಹೇಳೋದು ಮರೆತಿದ್ದೆ. ಚಂಪಕ ಪಾಕಶಾಸ್ತ್ರಪ್ರವೀಣೆ! ಆ ವಿಧ್ಯೆ ಪರಿಪೂರ್ಣವಾಗಿ ಅವಳಿಗೆ ಅಂತರ್ಗತವಾಗಿದೆ. ಆಕೆಯ ಕೈಯಿನ ಅಡುಗೆಯ ರುಚಿ ನೋಡೋದಿಲ್ಲವೆ..?’
ಅವನ ಮಾತಿನಲ್ಲಿ ತುಂಟತನವಿತ್ತು. ಕಪಿಲನನ್ನು ಕೆಣಕುವ ಪ್ರವೃತ್ತಿಯಿತ್ತು.
`ಅಲ್ಲಾ…..ಎಂಟೇ ತಿಂಗಳಲ್ಲಿ ಜೀವಕಣದ ಹಂತದಿಂದ ಪೂರ್ಣಪ್ರಮಾಣದ ಹೆಣ್ಣಿನ ಬೆಳವಣಿಗೆ..?’ ಕಪಿಲನಲ್ಲಿ  ನೂರಾರು ಪ್ರಶ್ನೆಗಳಿದ್ದವು. ಅವೆಲ್ಲಕ್ಕೂ ಉತ್ತರ ತಿಳಿಯುವ ಕಾತರವಿತ್ತು.
`ಮಿತ್ರಾ, ನೀನೂ ವಿಜ್ಞಾನಿ. ಬೆಳವಣಿಗೆಯನ್ನು ತ್ವರಿತಗೊಳಿಸುವ ಬೂಸ್ಟರ್ ಕ್ರಿಯೆ ನಿನಗೆ ಗೊತ್ತಿಲ್ಲವೆ ?’
`ಎಲ್ಲಾ ಗೊತ್ತಿದ್ದರೂ..ಯಾವುದನ್ನೂ ನಂಬಲಾಗುತ್ತಿಲ್ಲ’
ಕಪಿಲ ತನಗೆ ತಾನೇ ಹೇಳಿಕೊಂಡ.
`ಅರೆ..? ಚಂಪಕ ಎಲ್ಲಿ…?’
ಆತುರದಿಂದ ಏನೋ ಕಳೆದುಕೊಂಡಂತೆ ಕೇಳಿದ ಕಪಿಲ. ಕೆಲವು ನಿಮಿಷಗಳ ಹಿಂದೆ ಎದುರಿನ ಸೋಫಾದಲ್ಲಿ ಕುಳಿತಿದ್ದ ಚಂಪಕ ಅಲ್ಲಿರಲಿಲ್ಲ.
`ಈಗಷ್ಟೇ ಇಲ್ಲಿದ್ದಳಲ್ಲ..!?’

ಅಂಕುರನೂ ಗಾಬರಿ ವ್ಯಕ್ತಪಡಿಸಿದ. ಕೆಲ ಕ್ಷಣಗಳ ಅಂತರ ಅಂಕುರ ಮತ್ತು ಕಪಿಲನಲ್ಲಿ ಆತಂಕ ಸೃಷ್ಟಿಸಿತ್ತು! ಅವರ ಆತಂಕಕ್ಕೆ ಕಾರಣವೂ ಇತ್ತು! ಜಗತ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಜೀವಿ ಆಕೆ! ಲೋಕದ ರೀತಿ ನೀತಿಗಳಾಗಲೀ, ಬದುಕುವ ಮಾರ್ಗಗಳಾಗಲೀ ಆಕೆಗಿನ್ನೂ ಪರಿಚಯವಾಗಿರುವ ಸಾಧ್ಯತೆಗಳು ಕಮ್ಮಿಯಿದ್ದುವು. ಸ್ವತಂತ್ರವಾಗಿ ಜಗತ್ತನ್ನು ಎದುರಿಸಲಾರದೆ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಅವರಿಗೆ ಗಾಬರಿಯಾಗಿತ್ತು. 
`ನಾನಿಲ್ಲಿದ್ದೀನಿ’ ಚಂಪಕಳ ದನಿ ಒಳಗಿನಿಂದ.
`ಅರೆ, ಕಿಚನ್ನಿನಲ್ಲಿ?’ ಕಪಿಲ ಉದ್ಗರಿಸಿದ.
`ಭೈಯ್ಯಾ, ಡಿನ್ನರ್ ರೆಡಿ ಮಾಡೋಕೆ ಹೇಳಿದ್ರಲ್ಲಾ..?’ ಒಳಗಿನಿಂದಲೇ ಕೂಗಿ ಹೇಳಿದಳು ಚಂಪಕ.
`ಏನು ಮೆನು..?’
`ಅದೊಂದು ಸರ್‍ಪ್ರೈಸ್ ಆಗಿರಲಿ!’
ಏಪ್ರನ್ ಹಾಕಿಕೊಂಡು ತಲೆಗೆ ಹುಡ್ ಧರಿಸಿ, ಸ್ಟಾರ್ ಹೋಟೆಲಿನ ಚೆಫ್‍ನಂತ ವೇಷ ಧರಿಸಿದ್ದ ಚಂಪಕ ಈಚೆ ಬಂದು ಹೇಳಿದಳು. ಅಂತ ವೇಷದಲ್ಲೂ ಆಕೆಯ ರೂಪ ಕಣ್ಸೆಳೆಯುತ್ತಿತ್ತು.
`ಆದರೆ ಅಲ್ಲಿ ನಿನಗೆ ಬೇಕಾದ ಎಲ್ಲಾ ಸಾಮಾನು ಇರೋದು ಅನುಮಾನವೇ..ಏಕೆಂದರೆ ಇದು ಒಬ್ಬ ಬ್ರಹ್ಮಚಾರಿಯ ಮನೆ ಇಲ್ಲಿರೋದು ಕೇವಲ ಕಾಫಿ, ಚಹಾ ಮಾಡಲೆಂದು ಸಜ್ಜುಗೊಳಿಸಿರುವ  ಸಣ್ಣ ಕಿಚನ್ನು’
ಇಷ್ಟು ಹೇಳುವುದರಲ್ಲಿ ಕಪಿಲನ ಬಾಯಲ್ಲಿ ದ್ರವ ಆರಿತ್ತು! ನನಗೇನಾಗಿದೆ..? ಏಕಿಷ್ಟು ಅಧೀರನಾಗಿರುವೆ ? ಯಾವುದಕ್ಕೆ ಭೀತಿ..? ಏಕೆ ಈ  ಉದ್ವೇಗ..? ನಾನೇನು ಈವರೆಗೆ ಹೆಣ್ಣು ನೋಡಿಲ್ಲವೆ..? ಅಥವಾ ಹೆಣ್ಣಿನೊಂದಿಗೆ ವ್ಯವಹರಿಸಿಲ್ಲವೆ..? ಕಪಿಲನಿಗೆ ತನ್ನ ಸ್ವಭಾವದ ಬಗೆಗೆ ಅಚ್ಚರಿಯಾಯಿತು. 
`ಏನಿದೆಯೋ..ಅದರಲ್ಲಿಯೇ ಅಡ್ಜೆಸ್ಟ್ ಮಾಡುವೆ.  ಹೆಣ್ಣೊಬ್ಬಳಿಗೆ ಅದು ಚಾಲೆಂಜ್ ಅಲ್ಲವೆ ?’ ಚಂಪಕ ನಕ್ಕಳು. ಅವಳ ನಗು ಅದೆಷ್ಟು ಮೋಹಕವಾಗಿತ್ತೆಂದರೆ ಅವಳನ್ನು ನೋಡುತ್ತಾ ಕಪಿಲ ತನ್ನನ್ನೇ ಮರೆತ.
`ಹಾಗೇ ಇನ್ನೊಂದು ಮಾತು! ತಪ್ಪು ತಿಳಿಯಬಾರದು. ಬ್ರಹ್ಮಚಾರಿಯ ಮನೆ ಅಂದ್ರಲ್ಲಾ..? ಬ್ರಹ್ಮಚಾರಿಗೆ ಮನೆ ಹೇಗೆ ಇರೋದಕ್ಕೆ ಸಾಧ್ಯ..? ಗೃಹಸ್ಥರಿಗೆ ಮನೆ ಇರುತ್ತೆ, ಆದರೆ ಬ್ರಹ್ಮಚಾರಿಗೆ..?’ ಚಂಪಕಳ ಮಾತಿನಲ್ಲಿ ನಗೆ, ಕುಚೋದ್ಯ ಎಲ್ಲ ಸೇರಿತ್ತು. ಅವಳ ಧೈರ್ಯ ಮತ್ತು ಹಾಸ್ಯಪ್ರಜ್ಞೆಯನ್ನು ಕಪಿಲ ಒಳಗೊಳಗೇ ಮೆಚ್ಚಿದ.

ಅವಳ ಮಾತಿಗೆ ಅಂಕುರ ಬಿದ್ಡುಬಿದ್ದು ನಕ್ಕ-ಜೀವನದಲ್ಲಿ ಈವರೆಗೆ ಅಂತ ಜೋಕನ್ನೇ ಕೇಳಿಲ್ಲವೇನೋ ಎಂಬಂತೆ!
`ಕೇಳಿದೆಯೇನೋ..? ಮನೆ ಅನ್ನಿಸಿಕೋಬೇಕಾದರೆ ಮನೆಯೊಡತಿ ಇರಲೇಬೇಕು’
`ಕೇಳಿಸಿಕೊಂಡೆ! ಎಲ್ಲಾ ಕೇಳಿಸ್ಕೋತಿದ್ದೀನಿ..ಇಲ್ಲದಿದ್ದರೆ ನೀವು ಬಿಡಬೇಕಲ್ಲ..?’ ಕಪಿಲನೂ ನಕ್ಕ.
ಕೇವಲ ಅರ್ಧ ಗಂಟೆಯಲ್ಲಿ ಚಂಪಕ ಅಲ್ಲಿ ದೊರಕಿದ ಸಾಮಾಗ್ರಿಗಳನ್ನೇ ಬಳಸಿ ರುಚಿಕರವಾದ ಭೋಜನವನ್ನು ತಯಾರಿಸಿದ್ದಳು. ಮೂವರೂ ಹರಟೆ ಹೊಡೆಯುತ್ತಾ ಸರಸವಾಗಿ ಮಾತಾಡುತ್ತಾ ಊಟ ಮುಗಿಸಿದರು.
ಚಂಪಕ ಮತ್ತು ಅಂಕುರ ಹೊರಟಾಗ ಇನ್ನೊಂದು ದಿನ ಇರುವಂತೆ ಒತ್ತಾಯ ಮಾಡಿದ ಕಪಿಲ. ಆದರೆ ಅಂಕುರನಿಗೆ ಒಂದು ಉಳಿಯುವುದು ಸಾಧ್ಯವಿರಲಿಲ್ಲ. ಹೊರಡಬೇಕಾದದ್ದು ಅನಿವಾರ್ಯವಾಗಿತ್ತು.
`ಹೋಗಲಿ, ಚಂಪಕಳನ್ನು ಬಿಟ್ಟು ಹೋಗಬಹುದಲ್ಲ..?’ ಧೈರ್ಯ ಮಾಡಿ ಹೇಳಿಬಿಟ್ಟ ಕಪಿಲ.  ಅಷ್ಟು ಹೇಳುವುದರಲ್ಲಿ ಅವನಿಗೆ ಹೃದಯವೇ ಬಾಯಿಗೆ ಬಂದಂತಾಗಿತ್ತು.

`ಕಪಿಲ್’ ಅಂಕುರ ಗದರಿಸಿದ. `ನಾವು ಅಮೆರಿಕದಲ್ಲಿರಬಹುದು. ಆದ್ರೆ ನಾವು ಭಾರತೀಯರು. ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುವುದು ಸಾಧ್ಯವಿಲ್ಲ. ಒಂದು ಅವಿವಾಹಿತ ಹೆಣ್ಣು ಮತ್ತು ಗಂಡು ಹೀಗೆ ಒಂದೇ ಮನೆಯಲ್ಲಿರುವುದು ನಮ್ಮ ಸಂಸ್ಕೃತಿಯಲ್ಲ. ನಿನಗಾಗಿ ಮಾಡಿದ ಹೆಣ್ಣು ಚಂಪಕ ಆಗಿದ್ಡರೂ ಸಹ, ಮದುವೆಯ ನಂತರವೇ ಆಕೆ ನಿನ್ನವಳು’
ತುಂಬಾ ಗಂಭೀರವಾಗಿ ಹೇಳಿ ಚಂಪಕಳೊಂದಿಗೆ ಮನೆ ಬಿಟ್ಟ ಅಂಕುರ. 
ಕಪಿಲ ನಿರಾಶನಾದ-ಆ ಕ್ಷಣ! ನಂತರ ತನಗೇನಾಗಿದೆ ಎಂದು ಪರೀಕ್ಷೆ ಮಾಡಿಕೊಳ್ಳತೊಡಗಿದ. ಚಂಪಕ ನಾನು ಹೇಳಿದಂತೆಯೇ ಇದ್ದಾಳೆ..ಆದರೆ ಆಕೆಯನ್ನು ವಿವಾಹವಾಗುವುದೆ..? ಮದುವೆಯ ಬಂಧನದಲ್ಲಿ ಸಿಕ್ಕಿಕ್ಕೊಳ್ಳುವುದು. ತನಗೆ ಅನುರೂಪಳಾದ ಹೆಣ್ಣು ಸಿಕ್ಕಿಲ್ಲ ಎಂದಲ್ಲವೆ ತಾನು ಮದುವೆಯಾಗದೆ ಉಳಿದಿರುವುದು? ಈಗ ಅಂತ ಹೆಣ್ಣು ಸಿಕ್ಕಿರುವಾಗ ಮದುವೆಯಾಗುವುದರಲ್ಲಿ ತಪ್ಪೇನು..? ಇಷ್ಟು ವರ್ಷದ ತನ್ನ ವಿಚಾರಧಾರೆ ಮತ್ತು ನಂಬಿಕೆಗಳನ್ನು ಬದಲಿಸಿಕ್ಕೊಳ್ಳಬೇಕೆ..?

 
ವಿಚಾರಗಳಾಗಲೀ..ನಂಬಿಕೆಗಳಾಗಲೀ..ಇಲ್ಲಾ ಒಟ್ಟಾರೆ ಬದುಕೇ ಅಗಲಿ – ಅದೆಂದಿಗೂ ಜಡವಾಗಬಾರದು, ಸ್ಥಾವರವಾಗಬಾರದು. ಸ್ಥಾವರವಾದರೆ ಅದು ಸತ್ತಂತೆ! ಬದಲಾವಣೆ ಅನಿವಾರ್ಯ! ಜಂಗಮತೆ ಜೀವಂತಿಕೆಯ ಪ್ರತೀಕ. ತನ್ನ ಅಭಿಪ್ರಾಯ ಬದಲಿಸಿಕ್ಕೊಳ್ಳಬೇಕು!

ಂ        ಂ        ಂ        ಂ        ಂ        ಂ    

ಕಾರು ಇನ್ನೂ ಮನೆಯನ್ನೇ ತಲುಪಿರಲಿಲ್ಲ. ಅಂಕುರನ ಮೊಬೈಲು ಫೆÇೀನು ರಿಂಗಾಯಿತು. ಕಪಿಲನ ದನಿ ಕೇಳಿತು.
`ಹಲೋ..ಅಂಕುರ್ ನಾನು ಕಣೋ..ಕಪಿಲ’
`ಗೊತ್ತಾಯ್ತು ಹೇಳು’
`ನಾಳೆ ನಾನು ಲಾಸೆಂಜಲೀಸ್‍ಗೆ ಬರ್ತಿದ್ದೀನಿ..ನಿನ್ನ ಮನೆಗೆ ಸಂಜೆ ಬರ್ತೀನಿ. ಮನೇಲಿ ಇರ್ತೀಯಾ ತಾನೆ..?’
`ಹೂಂ ಇರ್ತೀನಿ…! ಏನೀ ತುರಾತುರಿ..?’
`ಸ್ವಲ್ಪ ಅರ್ಜೆಂಟು ಕೆಲಸ ಇದೆ ..?’
`ಎಲ್ಲಿ..? ಲಾಸೆಂಜಲೀಸ್‍ನಲ್ಲೋ…? ಇಲ್ಲಾ ನನ್ನ ಮನೇಲೋ..?’ ಅಂಕುರನ ದನಿಯಲ್ಲಿ ತುಂಟತನವಿತ್ತು.
`ಎರಡೂ ಕಡೆ..ಬೈ ದ ವೇ..ನಾನು ಬಂದಾಗ ಚಂಪಕ ಇರ್ತಾಳಲ್ಲ..?’
ಕಪಿಲನ ದನಿಯಲ್ಲಿ ಚಂಪಕಳ ಬಗೆಗೆ ಅವನಿಗಿರುವ ಆಸಕ್ತಿ ಎದ್ದು ಕಾಣುತ್ತಿತ್ತು.
`ಆಫ್‍ಕೋರ್ಸ್ ಮೈ ಡಿಯರ್ ಕಪಿಲ. ಚಂಪಕ ನನ್ನ ಮನೆಯಲ್ಲೇ ಇರ್ತಾಳೆ..ನನ್ನ ಮಾನಸ ಪುತ್ರಿಯಲ್ಲವೆ..? ಆಕೆ ಇನ್ನೆಲ್ಲಿ ಇರೋದಕ್ಕೆ ಸಾಧ್ಯ..?’
`ಬೈ ನಾಳೆಯವರೆಗೆ..!’ ಕಪಿಲ ಫೆÇೀನ್ ಸಂಪರ್ಕ ಕತ್ತರಿಸಿದ.

ಂ        ಂ        ಂ        ಂ        ಂ        ಂ

ಕಪಿಲನಿಗೆ ಅಂಕುರನ ಮನೆಯ ಮುಂದಿದ್ದ ಕಾರುಗಳನ್ನು ನೋಡಿ ಅಚ್ಚರಿಯಾಯಿತು. ಅಲ್ಲಿ ಯಾವುದೋ ಸಂತೋಷದ ಸಮಾರಂಭ ಇರುವಂತೆ ಕಾಣಿಸುತ್ತಿತ್ತು. ಆರೆ..ನೆನ್ನೆ ಮಾತಾಡಿದಾಗ ಈ ಬೆಗ್ಗೆ ಅಂಕುರ ಒಂದು ಮಾತನ್ನೂ ಹೇಳಲಿಲ್ಲವಲ್ಲ..? ಕಪಿಲ ಅನುಮಾನಿಸುತ್ತಾ ಮನೆಯೊಳಗೆ ಕಾಲಿಟ್ಟ.
ನಿಜ, ಅಲ್ಲೊಂದು ಪುಟ್ಟ ಸಮಾರಂಭದ ಸಿದ್ಧತೆಯಿತ್ತು. ಅಂಕುರನ ಮಕ್ಕಳು ಎದುರು ಬಂದು, ಕಪಿಲನನ್ನು ನೋಡಿ ಪರಿಚಯದ ನಗೆ ನಕ್ಕು `ಕಪಿಲ್ ಅಂಕಲ್ ಬಂದು’ ಎಂದು ಜೋರಾಗಿ ಮಕ್ಕಳ ಸಹಜ ಉದ್ವೇಗ, ಸಂತೋಷದಿಂದ ಹೇಳಿದರು. ಅಲ್ಲಿ ನೆರೆದಿದ್ದವರೆಲ್ಲಾ ಕಪಿಲನತ್ತ ನೋಡಿದರು. ಕಪಿಲನಿಗೆ ಕೊಂಚ ನಾಚಿಕೆಯಾಯಿತು. ಎಲ್ಲರ ಗಮನವನ್ನೂ ಈ ಮಕ್ಕಳು ತನ್ನೆಡೆಗೆ ಗುರಿ ಮಾಡಿದರಲ್ಲ ಎಂದು.  ಅಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಜನರಿದ್ದರು.
`ಐಯಾಮ್ ಸಾರಿ, ಐ ಹ್ಯಾವ್ ಕಂ ಇನ್ ದ ರಾಂಗ ಟೈಮ್’ ಎಲ್ಲರ ಕ್ಷಮಾಪಣೆ ಯಾಚಿಸಿದ ಕಪಿಲ.
`ನೋ ಮೈ ಫ್ರೆಂಡ್, ಯ್ ಊ ಹ್ಯಾವ್ ಕಮ್ ಇನ್ ದ ರೈಟ್ ಟೈಮ್! ಗೌರವಾನ್ವಿತ ಹಿರಿಯರೆ ಈತ ನನ್ನ ಆತ್ಮೀಂiÀi ಸ್ನೇಹಿತ ಕಪಿಲ್… ಇವತ್ತಿನ ಸಮಾರಂಭದ ರಾಜಕುಮಾರ!’ ಎಲ್ಲಿಯೋ ಇದ್ದ ಅಂಕುರ ಘೋಷಣೆ ಮಾಡುತ್ತ ಬಂದ.
ಅಲ್ಲಿ ನೆರದಿದ್ದವರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿದರು. ಆತ್ಮೀಯವಾದ ಭಾವ ಬಿತ್ತರವಾಯಿತು. ಕಣ್ಣುಗಳಲ್ಲಿ ಸ್ನೇಹ ಸೂಸುತ್ತಿತ್ತು! ಕಪಿಲ್ ಶಿಷ್ಟಾಚಾರಕ್ಕಾಗಿ ಎಲ್ಲರಿಗೂ ನಮಸ್ಕಾರ ಮತ್ತು ಧನ್ಯವಾದಗಳನ್ನು ಹೇಳಿದ. ಇಷ್ಟೆಲ್ಲಾ ತನಗೆ ತಿಳಿಯದೆ ಆಗಿರುವುದಕ್ಕೆ ಕಸಿವಿಸಿಯಾಗಿತ್ತು.
`ಅಂಕುರ್, ಏನೋ ಇದೆಲ್ಲಾ…?’ ಸ್ನೇಹದ ಆತ್ಮೀಯತೆಯಲ್ಲಿ ಅಂಕುರನನ್ನು ಗದರಿದ ಕಪಿಲ.
`ಇನ್ಯಾಕೋ ಕಪಿಲ ಈ ನಾಟಕ..? ಚಂಪಕಳನ್ನು ನೀನು ಇಷ್ಟಪಟಿದ್ದೀಯ..! ಅದು ನನಗೆ ನೆನ್ನೆಯೇ ತಿಳಿದು ಹೋಗಿತ್ತು. ಅವಳ ಅಪ್ಪ-ಅಮ್ಮ ಬಂದಿದ್ದಾರೆ! ಇವತ್ತೇ  ಫಾರ್ಮಲ್ ಎಂಗೇಜ್ಮೆಂಟ್ ಆಗಿಬಿಡಲಿ…ಏನಂತೀಯ..?’
`ಚಂಪಕಳ ಅಪ್ಪ-ಅಮ್ಮ ಅಂದರೆ..?’ ಗೊಂದಲದಿಂದ ಕೇಳಿದ ಕಪಿಲ.
`ಅದೆಲ್ಲಾ ಇರಲಿ..ಎಂಗೇಜ್ಮೆಂಟಿಗೆ ನೀನು ಒಪ್ಪಿದ್ದೀಯ ತಾನೆ..?’
`ಒಪ್ಪಿದ್ದೇನೆ ನಿಜ, ಆದರೆ…? ಆಕೆ ಕ್ಲೋನ್ ಅಲ್ಲವೇನೋ..? ನಿನ್ನ ಲ್ಯಾಬಿನಲ್ಲಿ ತಯಾರಾದವಳು..ಅಂತಾ..?’
ಕಪಿಲ ಗೊಂದಲದ ಮಡುವಿನಲ್ಲಿದ್ದ.
`ಪೆದ್ದಾ…!’ ಆತ್ಮೀಯವಾಗಿ ಬೈದ ಅಂಕುರ ತನ್ನ ಸ್ನೇಹಿತನನ್ನ. `ಇಷ್ಟು ಕಲಾತ್ಮಕವಾಗಿ, ನೈಜತೆಯನ್ನು ಮೈಗೂಡಿಸಿಕೊಂಡ ಹೆಣ್ಣನ್ನು ಕ್ಲೋನಿಂಗ್‍ನಿಂದ ಈವರೆಗೆ ತಯಾರು ಮಾಡೋಕೆ ಆಗಿಲ್ಲ! ಚಂಪಕ ಸಹಜವಾಗಿ ಹುಟ್ಟಿದಾಕೆ. ಬೆಂಗಳೂರಿನಲ್ಲಿ ಬೆಳೆದವಳು! ನನ್ನ ಹೆಂಡತಿಗೆ ದೂರದ ಸಂಬಂಧಿ ಕೂಡ! ಈ ನಾಟಕದಲ್ಲಿ ತಪ್ಪು ಮಾಡಿ ಎಲ್ಲಾ ಕೆಡಿಸಿಯಾಳು ಎಂದು ನನ್ನ ಹೆಂಡತಿಯನ್ನು ಈ ನಾಟಕದ ಪಾತ್ರವನ್ನಾಗಿ ಮಾಡಲಿಲ್ಲ! ನಿನ್ನ ಮದುವೆಯ ಖೆಡ್ಡಾಕೆ ಬೀಳಿಸಿ ಪಳಗಿಸೋಕೆ ಈ ನಾಟಕ! ಬದುಕು ಪೂರ್ಣವಾಗಬೇಕಾದರೆ ಮದುವೆ ಅನಿವಾರ್ಯ! ಇಂತಾ ಹೆಣ್ಣು ಸುಮ್ಮನೆ ಸಿಗೋದಿಲ್ಲ! ಒಪ್ಪಿಕೋ..!’
ಅಂಕುರನ ಮಾತಿಗೆ ಕಪಿಲನ ಬಾಯಿ ಅಚ್ಚರಿಯಿಂದ ತೆರೆದುಬಿಟ್ಟಿತು. ಅವನ ಮನಸ್ಸು ಯಾವಾಗಲೋ ಚಂಪಕಳನ್ನು ಮೆಚ್ಚಿತ್ತು, ಎಲ್ಲ ರೀತಿಯಿಂದಲೂ ಒಪ್ಪಿತ್ತು, ಅಪ್ಪಿತ್ತು! 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
7 years ago

ಕಥೆ ಕೊನೆವರೆಗು ಲವಲವಿಕೆ ಮತ್ತು ಸಸ್ಪೆನ್ಸ್ ಉಳಿಸಿಕೊಂಡಿದೆ.

1
0
Would love your thoughts, please comment.x
()
x