ನಾನು ಕುಳಿತಿದ್ದ ರೈಲು ಹೊರಡಲು ಇನ್ನೂ ಸಮಯವಿತ್ತು. ಜನರು ಹತ್ತುವ ಇಳಿಯುವ ಗಜಿಬಿಜಿಯ ಗಲಾಟೆ ಕಡೆ ಕಣ್ಣಾಯಿಸಿದೆ. ಕೆಲವರು ಬೋಗಿಯೊಳಗೆ ತಮ್ಮ ಆಸನ ಹುಡುಕುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಲಗೇಜು ಇಡುವ ಭರದಲ್ಲಿದ್ದಾರೆ. ಕೆಲವರ ಬ್ಯಾಗುಗಳನ್ನು ಅಪ್ಪರ್ ಬರ್ತ್‍ನಲ್ಲಿಡುತ್ತಿದ್ದಾರೆ. ಇನ್ನೂ ಕೆಲವರು ಇಡೀ ಮನೆ ಖಾಲಿ ಮಾಡಿ ಬಂದಷ್ಟು ಲಗೇಜ್ ತಂದು ಇಡಲು ಸ್ಥಳವಿಲ್ಲದೆ ಪೇಚಾಡುತ್ತಿದ್ದಾರೆ. ಈ ಎಲ್ಲಾ ಗಲಾಟೆಯ ಮಧ್ಯೆಯೂ ಸೀಬೆಬುಟ್ಟಿ ಹಿಡಿದ ಹುಡುಗಿಯೊಬ್ಬಳು ತೂರಿ ಬಂದಳು. ಅವಳು ಮಾರಲು ತಂದ ಬುಟ್ಟಿಯೊಳಗೆ ಬಿಸಿಲಿಗೆ ಬಾಡಿ ಸೊರಗಿದ ಸೀಬೆ ಹಣ್ಣುಗಳಿದ್ದವು. “ತೆಗೊಳ್ಳಿ ಹತ್ತು ರೂ.ಗೆ ಮೂರು ಎಂದು ಅಂಗಲಾಚಿದಳು.” ಕೆದರಿದ ತಲೆ, ಕೊಳಕಾದ ಬಟ್ಟೆಯಿಂದ ಅವಳ ದರಿದ್ರ ಸ್ಥಿತಿ ನೆನೆದು ಬೇಡವೆನಿಸಿದರೂ ಮೂರು ಸೇಬೆ ಕೊಂಡೆ. ಆಕೆ ಮಾರುವ ಗುಂಗಿನಲಿ ಫ್ಲಾರ್ಟ್ ಫಾರ್ಮಿನೊಳಗೆ ಅದೆಲ್ಲೊ ಮಾಯವಾದಳು.
ಅದೊಂದು ನವೆಂಬರ್ ಮಧ್ಯಾಹ್ನವಾದ್ದರಿಂದ ತಂಪಾದ ಗಾಳಿ ತುಸು ಚಳಿಯೆನಿಸಿದರೂ ಹಿತ ನೀಡಿತು. ಕಿಟಕಿ ಪಕ್ಕದ ಆಸನ ದೊರೆತದ್ದೇ ಭಾಗ್ಯವೆಂದು ತಿಳಿದು ಸ್ಕ್ರೀನ್ ಸರಿಸಿ ಹೊರಗಡೆ ಕಣ್ಣಾಡಿಸಿದೆ. ರೈಲು ತಣ್ಣಗೆ ಚೀರುತ್ತಾ ವೇಗವಾಗಿ ಮುಂದಕ್ಕೆ ಚಲಿಸುವಷ್ಟೇ ಆತರದಿಂದ ಸೊಬಗಿನ ನೆನಪುಗಳು ನನ್ನನ್ನು ಹಿಂದಕ್ಕೆ ಅಟ್ಟಿಸಿಕೊಂಡು ಓಡಿಸಿದವು.
“ಸಾಲೆ ಮಕ್ಕಳೂ… ಸೂಳೇ ಮಕ್ಕಳೂ…”
ಈ ರೈಲು ಹಳಿಯ ಹಾದಿ ಬದಿಯ ಮರ ಗಿಡಗಳೊಳಗಿಂದ ಯಾರೋ ಕೂಗಿ ಹೇಳಿದಂತೆ ಮತ್ತೆ ಅದು ಅಲ್ಲೇ ಗಿರಕಿ ಹೊಡೆಯುತ್ತಿರುವಂತೆ ಭಾಸವಾಗಿ ನನ್ನ ಜೋಡಿಕಣ್ಣುಗಳು ಕಿವಿಗಳಷ್ಟೇ ವೇಗದಲ್ಲಿ ಹುಡುಕಾಡಿದವು. ಆದರೆ ಅದು ಹಲವಾರು ವರ್ಷಗಳ ಹಿಂದಿನ ಪ್ರಸಂಗಗಳು ಬಿಡಿ…!
ಅಂದು ಶಾಲೆ ಮುಗಿಸಿ ಹಿಂತಿರುಗುವಾಗ ಮೊದಲೇ ಯೋಜನೆ ಹಾಕಿದಂತೆ ಕಿತ್ತಳೆ ಕದಿಯುವ ಕಾರ್ಯಕ್ರಮವಿತ್ತು. ಎಷ್ಟೋ ದಿನಗಳಿಂದ ನಾವೆಲ್ಲರೂ ಕಣ್ಣಿಟ್ಟಿದ್ದ ಆ ಮರದಲ್ಲಿ ಹಳದಿ ಬಣ್ಣದ ದಪ್ಪ ದಪ್ಪ ಹಣ್ಣುಗಳು ತುಂಬಿ ಪ್ರತಿದಿನ ನಮ್ಮ ಬಾಯಲ್ಲಿ ನೀರೂರಿಸುತ್ತಿದ್ದವು. ನಮ್ಮದು ಐದಾರು ಮಂದಿಯಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪು. ಹತ್ತನೆಯ ತರಗತಿಯ ಒಬ್ಬ ದೊಡ್ಡ ಹುಡುಗ ಮರ ಹತ್ತಿ ಕುಲುಕುತ್ತಿದ್ದ. ನಾವೆಲ್ಲಾ ಕೆಳಗೆ ಬಿದ್ದ ಹಣ್ಣುಗಳನ್ನು ಆಯ್ದು ನಂತರ ಅಲ್ಲಿಂದ ಮುಂದೆ ಸಾಗಿ ಒಂದೆಡೆ ಕುಳಿತು ಹಂಚಿ ತಿನ್ನುವುದು ವಾಡಿಕೆ. ಅಗತ್ಯಕ್ಕಿಂತ ಹೆಚ್ಚು ಸಿಕ್ಕಿದರೆ ಒಂದು ಗುಂಡಿಯಲ್ಲಿ ಹಾಕಿ ಅದರ ಮೇಲೆ ಕಡ್ಡಿಗಳನ್ನಿಟ್ಟು ಕಾಣದಂತೆ ತರಗಲೆಗಳನ್ನು ಮುಚ್ಚಿ ಮುಂದಿನ ದಿನಗಳು ಅದನ್ನು ಹಂಚಿ ತಿನ್ನುವುದು ನಮ್ಮ ಪರಿಪಾಠ.
ಎಂದಿನಂತೆ ಆ ದಿನ ಅವನು ಮರ ಹತ್ತಿ ಕುಲುಕುತ್ತಿದ್ದಾನೆ. ಕಿತ್ತಳೆ ಹಣ್ಣಗಳು ದಡ ಬಡ ಎಂದು ನಮ್ಮ ಬೆನ್ನು ಲೆಕ್ಕಿಸದೆ ಬೀಳುತ್ತಿವೆ. ನಾವು ಆಯುವ ಭರದಲ್ಲಿದ್ದೇವೆ. ಅಷ್ಟರಲ್ಲೆ ಆ ತೋಟದ ಮಾಲೀಕನ ಹೆಂಡತಿ ಬೊಬ್ಬಿಡುತ್ತಾ ನಮ್ಮೆಡೆಗೆ ಓಡಿ ಧಾವಿಸುತ್ತಿದ್ದಾರೆ. ಸಿಕ್ಕಿದ್ದಷ್ಟನ್ನು ಬಾಚಿಕೊಂಡ ನಾವು ಎದ್ದೆವೋ… ಬಿದ್ದೆವೋ… ಎಂದು ಕಾಲಿಗೆ ಬುದ್ದಿ ಹೇಳಿದೆವು. ಮರದ ಮೇಲಿದ್ದ ಅವನು ಮರದಿಂದ ಜಿಗಿದು ನಮ್ಮ ಹಿಂದೆ ಓಡಿದ. ಆಕೆ ಎಸೆದ ಕಲ್ಲುಗಳೆಲ್ಲಾ ನಮ್ಮನ್ನು ತಲುಪಲೇ ಇಲ್ಲ. ಕೊನೆಗೆ ಅಸಹಾಯಕತೆಯಲ್ಲಿ ರೋಷದಿಂದ ಅರಚಿದ್ದು ಮಾತ್ರ ತೋಟದೊಳಗೆಲ್ಲಾ ಪ್ರತಿಧ್ವನಿಸುತ್ತಲೇ ಇತ್ತು. “ಸಾಲೆ ಮಕ್ಕಳು ಸೂಳೆ ಮಕ್ಕಳೂ…”
ಬಹುದೂರ ಓಡಿ ದಣಿದ ನಾವು ಬದುಕಿದೆವು ಬಡಜೀವಗಳು ಎಂದು ಒಂದೆಡೆ ಕುಳಿತು ಕಿತ್ತಳೆ ಹಣ್ಣು ಹಂಚಿ ತಿನ್ನುವಾಗ ತೋಟದೊಡತಿಯ ಬೈಯ್ಗಳ ನೆನೆದು ಹೊಟ್ಟೆ ಕಿವುಚಿಕೊಂಡು ನಕ್ಕೆವು. ಸುಮಾರು ಮೂರ್ನಾಲ್ಕು ಮೈಲಿ ತೋಟಗಳ ಹಾದಿಯನ್ನು ಕ್ರಮಿಸಿದರಷ್ಟೇ ನಮ್ಮಗಳ ಹಳ್ಳಿಯಲ್ಲಿರುವ ಮನೆ ತಲುಪಲು ಸಾಧ್ಯವೆಂದು ವೇಗದ ನಡಿಗೆಗೆ ಮೊರೆಹೋದೆವು.
ಕಿತ್ತಳೆಗಿಂತ ‘ಸೀಬೆ’ ಎಂದರೆ ಬಹಳ ಇಷ್ಟವಿದ್ದ ಕಾಲವದು. ನಮ್ಮ ಮನೆಯ ಸೀಬೆ ಮರದಲ್ಲಿ ಬಿಡುವ ಸೀಬೆಕಾಯಿಗಳೆಲ್ಲಾ ಗಟ್ಟಿಬೀಜವಾಗಿ ಬರೇ ಒಗರೊಗರಾಗಿತ್ತು. ವಾರದ ರಜಾ ದಿನವಾದ ಭಾನುವಾರಗಳಲ್ಲಿ ಪಕ್ಕದ ತೋಟದ ಮಾಲೀಕರಾದ ಮಮ್ಮದ್ ಮೇಸ್ತ್ರಿಯ ಮನೆಯಲ್ಲಿ ನನಗೆ ಕೆಲಸ. ಅವರ ತೆಂಗಿನ ತೋಪುಗಳಿಂದ ಕಿತ್ತ ಎಳನೀರು, ತೆಂಗಿನಕಾಯಿ, ಕೊಬ್ಬರಿಗಳನ್ನು ಪ್ರತ್ಯೇಕವಾಗಿ ಎಣಿಸುವ ಜವಾಬ್ದಾರಿ ನನ್ನದಾಗಿತ್ತು. ಆ ಕೆಲಸವನ್ನು ನನ್ನ ಅಮ್ಮನ ಬೇಡಿಕೆಯಂತೆ ನನಗಾಗಿ ಮೀಸಲಿಡುತ್ತಿದ್ದರು. ಈ ಕೆಲಸಕ್ಕಾಗಿ ಅದೆಷ್ಟೋ ಸಂಬಳವನ್ನು ಮೇಸ್ತ್ರಿ ಅಮ್ಮನ ಕೈಗಿಡುತ್ತಿದ್ದರು. ಮಮ್ಮದ್ ಮೇಸ್ತ್ರಿಯ ಮನೆಯಂಗಳದಲ್ಲಿ, ಹಿತ್ತಲಿನಲ್ಲಿ ಹಾಗೂ ತೋಟದೊಳಗೆಲ್ಲಾ ಸೀಬೆ ಮರಗಳೇ ತುಂಬಿದ್ದವು. ಅದರಲೆಲ್ಲಾ ರುಚಿಯಾದ ಸೀಬೆ ಹಣ್ಣುಗಳು ರಾರಾಜಿಸುತ್ತಿದ್ದವು. ನಾನು ಕೇಳಿದರೆ ಒಂದೋ ಎರಡೋ ಕೊಟ್ಟು ಸುಮ್ಮನಾಗುತ್ತಿದ್ದರು.
ಒಂದು ಭಾನುವಾರ ಕೊಬ್ಬರಿ ಎಣಿಸಿ ಮೇಸ್ತ್ರಿ ಭೇಷ್! ಎಂದಾಗ ಇದೇ ತಕ್ಕ ಸಮಯವೆಂದು “ಸ್ವಲ್ಪ ಸೀಬೆಕಾಯಿ ಕೊಡಿ…” ಎಂದು ಸಂಕೋಚ ಬಿಟ್ಟು ಕೇಳಿಬಿಟ್ಟೆ. “ಓ… ಅದಿನ್ನೂ ಬಲಿತಿಲ್ಲ. ಇನ್ನೊಮ್ಮೆ ಬರುವಾಗ ನೋಡೋಣ…” ಎಂದು ನೀರಸವಾಗಿ ರಾಗ ಎಳೆದು ಕೈತೊಳೆದುಕೊಂಡರು. ಇನ್ನು ಇವರ ಜಿಪುಣ ಹೆಂಡತಿಯನ್ನು ಕೇಳಿ ಪ್ರಯೋಜನವಿಲ್ಲವೆಂದು ಗೊತ್ತಿತ್ತು. ಮನದೊಳಗೆ ಏನೋ ಹೊಳೆದು, ಹೋಗಿ ಬರುವೆನೆಂದು ಹೇಳಿ ಹೊರಟೆ. ಮೇಸ್ತ್ರಿಯ ಮನೆಯ ಹಿಂದೆ ಸ್ಪಲ್ಪ ದೂರ ಇರುವ ಸೀಬೆ ಮರದಡಿಗೆ ಬಂದು ತಲೆಯೆತ್ತಿ ನೋಡಿದೆ. ಎಷ್ಟೊಂದು ಹಣ್ಣುಗಳು ! ಹೊಟ್ಟೆ ತುಂಬಾ ತಿಂದು ತಂಗಿಯರಿಗೂ ಒಯ್ಯಬೇಕೆಂದು ಹಾಡೊಂದನ್ನು ಗುನುಗುತ್ತಾ ಮರ ಹತ್ತಿಯೇ ಬಿಟ್ಟೆ. ಒಂದು ಹಣ್ಣನ್ನು ಸವಿದು, ಮತ್ತೊಂದನ್ನು ಅಗಿಯುತ್ತಾ ಮೂರನೆಯದಕ್ಕೆ ಕೈ ಹಾಕಬೇಕು ! ಅಷ್ಟರಲ್ಲೇ ಬಿಳಿ ಪಂಚೆ, ಶರ್ಟು ತೊಟ್ಟು, ಬಿಳಿ ತೋರ್ತು ಮುಂಡು ತಲೆಯಲ್ಲಿ ಸುತ್ತಿಕೊಂಡು ಮಮ್ಮದ್ ಮೇಸ್ತ್ರಿ ಬರುತ್ತಿದ್ದಾರೆ. ಹೌದು…! ಅವರು ಈ ಕಡೆಗೆ ಬರುತ್ತಿರುವುದು ಎಂದು ಖಾತ್ರಿಯಾಯಿತು. ಆದರೆ ಅವರು ಬರುತ್ತಿರುವುದು ಕಕ್ಕಸ್ಸು ಮಾಡಲು ಎಂದು ಅವರ ಕೈಯಲ್ಲಿರುವ ಬಾಲ ಇರುವ ಅಲ್ಯುಮಿನಿಯಂ ಕಿಂಡಿಯಿಂದ ತಿಳಿಯಿತು. ಅಯ್ಯೋ…ದೇವರೆ ! ಈಗ ನನ್ನನ್ನು ಹಿಡಿದು ಹೊಡೆದು, ಕಳ್ಳಿ ಸ್ಥಾನದಲ್ಲಿ ನಿಲ್ಲಿಸಿ, ಅಮ್ಮನಿಗೆ ವರದಿ ಒಪ್ಪಿಸುತ್ತಾರೆ. ಅಮ್ಮನಿಂದಲೂ ಒದೆ ತಿನ್ನಬೇಕಾಗುತ್ತದೆ.
ಏಕೆಂದರೆ ಬೇರೆಯವರ ವಸ್ತುಗಳನ್ನು ಕೇಳದೆ ಮುಟ್ಟಬಾರದೆಂದು ಅಮ್ಮ ಒಂದು ನೂರು ಸಲ ಹೇಳಿದ್ದಾರೆ. ನನಗೆ ಹೆದರಿಕೆಯ ನಡುಕದಿಂದ ಉಚ್ಛೆ ಬಂದೋಯ್ತು. ಸದ್ದು ಮಾಡದೆ ಅಲುಗಾಡದೆ ಹಾಗೆ ಮರದ ಮೇಲೆ ನಿಂತೇ ಇದ್ದೆ. ಮೇಸ್ತ್ರಿ ಬಂದವರೆ ಅದೇ ಸೀಬೆ ಮರದಡಿಯಲ್ಲಿ ಪಂಚೆ ಎತ್ತಿ ಕಕ್ಕಸು ಮಾಡಲು ಕುಳಿತರು. ಆ ಸಣ್ಣ ವಯಸ್ಸಿನಲ್ಲಿ ನೋಡಬಾರದನ್ನು ನೋಡಿ ಹೇಗೇಗೋ ಆಯಿತು. ತುಂಬಾ ಗಂಭೀರ ಸ್ವಭಾವದ ಮಮ್ಮದ್ ಮೇಸ್ತ್ರಿಯನ್ನು ಗೌರವಿಸುತ್ತಿದ್ದೆ. ಮೇಸ್ತ್ರಿಯ ಜೋರಾದ ತರಾವರಿ ಹೂಸಿನ ಸದ್ದನ್ನೂ… ಹೆರಿಗೆಯಾಗುವಂತೆ ಮುಕ್ಕರಿಕೆಗಳನ್ನು ನೋಡುತ್ತಾ ಆಶ್ಚರ್ಯ, ದಿಗಿಲುಗಣ್ಣುಗಳಿಂದ ತಟಸ್ಥಳಾದೆ. ಹೆದರಿಕೆಗೆ ಉಚ್ಛೆ ತೊಟ್ಟಿಕ್ಕಿದರೆ ಒಣ ಕಾಫಿ ಎಲೆಯ ಮೇಲೆ ‘ಫಟ್ಟ್’ ಎಂಬ ಸದ್ದಿಗೆ ಮೇಸ್ತ್ರಿ ಮೇಲೆ ನೋಡಿಯಾರು ಎಂದು ಒಂದು ಕೈಯಿಂದ ಮೆಲ್ಲನೆ ಲಂಗವನ್ನು ಒತ್ತಿ ಹಿಡಿದೆ. ಸುಮಾರು ಹೊತ್ತು ಹೇತ ಮೇಸ್ತ್ರಿ ಒಂದು ಪ್ರಸವ ಮುಗಿಸಿದಂತೆ ಎದ್ದು ತನಗೆ ತಾನೇ ಏನೋ ಹೇಳಿಕೊಂಡು ಮನೆಯ ಕಡೆ ಆತುರಾತುರವಾಗಿ ನಡೆಯಲಾರಂಭಿಸಿದರು. ಏಕೆಂದರೆ ಆಗ ಮಗರಿಬ್ ಬಾಂಗ್ ಆಗಲಿದ್ದೂ, ವುಳೂ ಮಾಡಿಕೊಂಡು ನಮಾಜ್ ಮಾಡಬೇಕಾಗಿದ್ದರಿಂದ ಅವಸರವಸರವಾಗಿ ಹೋಗಿರಬೇಕು.
ಹೋದ ಜೀವ ಮರಳಿ ಬಂದ ಹಾಗೆ ನಾನು ಎದೆ ಮೇಲೆ ಕೈಯಿಟ್ಟು ಜೋರಾಗಿ ಉಸಿರು ಬಿಟ್ಟು, ಸೀಬೆ ಆಸೆ ಬಿಟ್ಟು ಮರದಿಂದ ಜಿಗಿದೆ. ರಭಸದಿಂದ ಓಡಿ ಮನೆ ಸೇರಿದೆ. ಅಲ್ಲಿ ನಡೆದ ಎಲ್ಲಾ ವಿಷಯವನ್ನು ಒಂದು ಪತ್ತೆದಾರಿ ಕತೆಯಂತೆ ತಂಗಿಯರಿಗೆ ಹೇಳಿ “ಕಕ್ಕಸು” ಪ್ರಸಂಗವನ್ನು ಬೆವರು ಬರುವಷ್ಟು ಶ್ರಮಪಟ್ಟು ನಾಟಕ ಮಾಡಿ ವರ್ಣಿಸಿದೆ. ಚೀ… ಈ ಮೇಸ್ತ್ರಿ ಇಂಥವರೆಂದು ನನಗೆ ಗೊತ್ತಿರಲಿಲ್ಲಪ್ಪಾ… ಹೂಂ… ಎಂದು ನನ್ನ ತುಟಿ ವಕ್ರಮಾಡಿ ಎರಡೂ ಜಡೆಯನ್ನು ಹಿಂದಕ್ಕೆ ರಭಸದಿಂದ ಎಸೆದೆ.
“ಕದ್ದು ತಿನ್ನುವಾಗಿನ ರುಚಿಯೊಂದು ಬೇರೆಯೇ” ನಿಜ !. ಆದರೆ ಬಾಲ್ಯದಲ್ಲಿ ಕದ್ದು ತಿಂದ ಬೆಲ್ಲ, ತೆಂಗಿನಕಾಯಿ, ಕಿತ್ತಳೆ, ಸೇಬು, ಮಾವು, ಹಲಸುಗಳಿಗೆಲ್ಲಾ ಗೆಳೆಯರ ಒಗ್ಗಟ್ಟು ಸಹಕಾರ, ಧಾರಾಕಾರವಾಗಿ ಆವರಿಸುತ್ತಿತ್ತು. ಅಕ್ಕಿ ಕದ್ದು ತಿನ್ನುವ ಚಟವನ್ನು ಬಿಡಿಸಲು ಹೋಗಿ ಕೊನೆಗೆ ಅಮ್ಮನಿಂದ ಬರೆ ಹಾಕಿಸಿಕೊಂಡವರು ನಮ್ಮ ನಿಮ್ಮೊಳಗೆ ಎಷ್ಟೋ…? ಹೊಟ್ಟೆ ಬಿರಿಯುವಷ್ಟು ತಿನ್ನಿಸಿದರೂ ನಮ್ಮ ಮಕ್ಕಳು ಕದ್ದು ತಿನ್ನುವುದನ್ನು ಬಿಡುವುದಿಲ್ಲ ಎಂಬುದು ಕೆಲವು ಅಮ್ಮಂದಿರ ದೂರು ಇದ್ದೇ ಇದೆ.
ಪರೀಕ್ಷೆಗಳಿಗೆ ಸರಿಯಾಗಿ ಅಭ್ಯಾಸ ಮಾಡದೆ ಕದ್ದು ನೋಡಿ ಬರೆಯುವ ಅಥವಾ ಚೀಟಿ ನೋಡಿ ಬರೆಯುವವರು ಕೂಡಾ ಗುರುಗಳ ಕೆಂಗಣ್ಣಿಗೆ ಗುರಿಯಾಗುವರು. “ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ”. ಇದು ಎಲ್ಲಾ ಗುರು ಹಿರಿಯರ ಮಾಮೂಲಿ ಗಾದೆ ಮಾತು. ಇದನ್ನು ಕೇಳಿಸಿಕೊಳ್ಳುತ್ತಲೇ ಕಳ್ಳ-ಪೊಲೀಸ್ ಆಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಕದಿಯುವ ಹುಂಬತನ ನಮ್ಮದು.
“ಕದ್ದು ತಿನ್ನುವ ಚಟ” ಜೀವನದ ವಿವಿಧ ಆಯಾಮಗಳಲ್ಲಿ ಗೋಚರಿಸುವುದು ನಮ್ಮೆಲ್ಲರ ಅನುಭವಕ್ಕೆ ಬರುವ ವಿಚಾರ. ಪ್ರೀತಿ ಮಾಡುವುದೇ ಕದ್ದು ಮುಚ್ಚಿ ತಾನೇ ? ಕದ್ದು ಕದ್ದು ನೋಡುತ್ತಾ, ಅನುಭವಿಸುವ ಸುಖದಲ್ಲಿ ಅದೆಂತಹ ಮಜಾ ? ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ… ಎಂಬಂತೆ ಅದು ಅನುಭವಿಸಿದವರಿಗೆ ಗೊತ್ತು ಬಿಡಿ. ಮತ್ತೊಬ್ಬರ ವಸ್ತುವನ್ನು ಬೇಲಿದಾಟಿಯೂ ಪಡೆಯಲೆತ್ನಿಸುವುದೆಂದರೇ ಅದೆಷ್ಟು ಭಯಪಡಬೇಕು ? ಆದರೂ ಕದ್ದು ಕದ್ದು ಬೇಲಿ ದಾಟುವುದಿಲ್ಲವೇ ? ವರ್ತಮಾನದ ಜೀವಂತಿಕೆಯನ್ನು ಸುಖವಾಗಿಡಲು ಉಳಿಸಿಕೊಳ್ಳಲು ಮತ್ತು ಪ್ರಫುಲ್ಲವಾಗಿ ಕಾಲ ಕಳೆಯಲು ಕದ್ದು ತಿನ್ನುವ ಜಾಗರೂಕ ಮಾರ್ಗ ಕಲವೊಮ್ಮೆ ಉಲ್ಲಾಸಕಾರಿಯೇ ನಿಜ!
ಸುನೀತಾ ಮೇಡಮ್ ಕದ್ದು ತಿನ್ನುವ ರುಚಿ ನನ್ನನ್ನೂ ಹಳೆಯ ಹಳೆಯ………. ನೆನಪುಗಳತ್ತ ಎಳೆದೊಯ್ದಿತು ಧನ್ಯವಾದಗಳು