ಕಿಟಕಯಿಂದಾಚೆ ಹೆಪ್ಪುಗಟ್ಟಿದ ಭಾನು, ಗೂಡು ಸೇರಿದ ಹಕ್ಕಿ, ಅಲ್ಲೊಂದು ಇಲ್ಲೊಂದು ಬೀಳುವ ಹನಿಗಳ ಕಂಡು ಖಾಲಿಯಾದ ಸಂತೆ, ನೀರವ ರಸ್ತೆ, ಇದೆಲ್ಲದರ ಜೊತೆಗೆ ಸಾವಿರ ನೆನಪುಗಳ ರಾಶಿ ಹಾಕಿಕೊಂಡು ಕೂತಿದ್ದರೂ ಮನದೊಳಗೆ ಆವರಿಸಿದ ಮೌನ, ಸಾವಿರ ಮಾತಿದ್ದರೂ ಮೌನದೊಂದಿಗೆ ಹೊಂದಿಕೊಂಡ ಖಾಲಿತನದ ಬದುಕು..
ಬದುಕು ಖಾಲಿತನ ಎನಿಸುವುದು ಒಂದು ಇಷ್ಟವಾದ ಬಾಂಧವ್ಯವೊಂದು ನಿರಾಶೆ ಮಾಡಿದಾಗ, ರಪರಪನೆ ಬಿದ್ದ ಮಳೆಗೆ ಎಲೆಗಳು ಉದುರಿದಂತೆ ಕನಸುಗಳು ಕಂಬನಿಯಲ್ಲಿ ಜಾರಿಹೋದಾಗ, ಆದರೆ ಹೇಳಿಕೊಳ್ಳಲು ಪದಗಳು ಇರುವುದಿಲ್ಲ.. ಅನುಭವಿಸಲು ಅಸಾಧ್ಯವೆನ್ನುವ ನೋವೊಂದು ಕಾಡುವಾಗ, ಮನದೊಳಗಿನ ದುಡುಗ ಹೆಚ್ಚಾದಾಗ ಕಾರಣಗಳ ಅರಸಿ ಹೋದಾಗ ಅಲ್ಲಿ ಸಿಗುವುದು ಖಾಲಿತನವೆ..!
ನಂಬಿಕೆ, ವಿಶ್ವಾಸಗಳು ಬಿರುಬಿಟ್ಟಾಗ, ಇಟ್ಟ ನಿರೀಕ್ಷೆಗಳ ಹುಸಿಯಾಗಿ ಬದುಕು ಇಷ್ಟೇನಾ ಎಂಬ ಉದಾಸೀನತೆಯೊಂದು ಆವರಿಸಿದಾಗ, ಹೃದಯ ನೊಂದುಕೊಂಡು ರಾತ್ರಿಯಿಡೀ ತಲೆದಿಂಬನ್ನು ತೋಯ್ದ ಕಣ್ಣ ಹನಿಗಳು ಮುಂಜಾನೆಯ ಹೊತ್ತಿಗೆ ಖಾಲಿತನವನ್ನೆ ತುಂಬಿಕೊಳ್ಳುತ್ತವೆ..!
ಕೆಲವು ನೆನಪುಗಳು ನಮ್ಮನ್ನಿರಿದು ಚಿಂದಿಮಾಡಿದರೂ
ಭಾವನೆಗಳ ಪ್ರಪಂಚದೊಳು ಯಾಂತ್ರಿಕತೆಯಲ್ಲಿ ಸಾಗುವಾಗಲೂ, ಎಲ್ಲೊ ಅಂಟಿಕೊಂಡ ಬಂಧವೊಂದು ನಮ್ಮೊಳಗಿರುವ ಎಲ್ಲವನ್ನು ಖರೀದಿ ಮಾಡಿದರೂ, ಕಾಣದ ಯಾವುದೋ ಅಮೂರ್ತ ಭಾವಗಳ ಲೋಕದೊಳಗೆ ಹೊರಡಬೇಕೆಂದರೂ.. ಎಲ್ಲವನ್ನು ಬಿಕರಿ ಮಾಡುವ ಲೋಕ ಖಾಲಿತನವೊಂದನ್ನು ಉಳಿಸಿಬಿಡುತ್ತದೆ..!
ನಡೆಯುತ್ತಲೇ ಸವೆಸಿದ ಬದುಕಿನ ಹಾದಿಯ ನಡುವೆ ಒಂದಷ್ಟು ನೆನಪುಗಳನ್ನು ದೋಚಿಕೊಂಡು, ಚಿಗುರಿದ ಎಳೆ ಕನಸುಗಳನ್ನು ಪೋಷಿಸುತ್ತ, ಹೇಳಲಾಗದ ಭಾವನೆಗಳೊಡನೆ ನಾಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲೆ ಬದುಕಿನ ಮಜಲುಗಳನ್ನು ಸವೆಸಿಬಿಡುವ ನಮ್ಮ ಬಾಳು ಈ ನಿರಾಕಾರಿ ಪ್ರಪಂಚದೊಳಗೆ ಬಂಧಿಯಾದರೂ..
ಮನದೊಳಗೆ ಬಳ್ಳಿಯಂತೆ ಹಬ್ಬಿಕೊಂಡ ನೋವು, ಹತಾಶೆ, ಬೇಸರ ಎಲ್ಲವನ್ನು ಆಗಾಗ ಕಿತ್ತು ಶುಚಿಗೊಳಿಸಿ ಖಾಲಿತನದ ಮೌನದೊಳಗೆ ದೂಡಿ ಬಿಡಬೇಕು..
ಆಗಲೇ ನಾಳೆ ಎಂಬ ನಂಬಿಕೆಯ ಮೇಲೆ ಭರವಸೆ ಹುಟ್ಟುವುದು.. ಸುರಿದು ಹೋದ ಕಂಬನಿಯ ಜೊತೆ ಜಾರಿ ಹೋದ ಕನಸುಗಳು ಮರುಹುಟ್ಟು ಪಡೆಯುವುದು..!
ಇಷ್ಟೆಲ್ಲ ಬೇಸರದೊಂದಿಗೆ ಭರವಸೆಯ ಹೊತ್ತುಕೊಂಡ ಮನಸು ಪುನಃ ಹೇಳುವುದು ಕಿಟಕಿಯಾಚೆ ಹೊಸದೇನಿಲ್ಲ..! ಮತ್ತೆ ಖಾಲಿತನ..!
ಕದಡಿದ ನೆನಪುಗಳ ನಡುವೆಯೂ ಕಾಡುವ ಅದೇ ಖಾಲಿತನ..!
–ನಂದಾದೀಪ, ಮಂಡ್ಯ