ಪ್ರೀತಿ ಪ್ರೇಮ

ಕದಡಿಹೋದ ಮನವ ಹಿಡಿದು: ಲಹರಿ

ಸಂದು ಹೋದವಲ್ಲೇ ಗೆಳತೀ.. ಬದುಕಲ್ಲಿಷ್ಟು ದಿನಗಳು! ಸದ್ದು-ಗದ್ದಲವ ಮಾಡದಂತೆ.. 'ನೀ ಮಾತು ಮರೆತು ಮೌನಕ್ಕೆ ಜಾರಿದಾಗೆಲ್ಲಾ ಹುಡುಕಲು ಹೊರಡುತ್ತೇನೆ ನಾ ನಿನ್ನೊಳಗಿನ ಆ ನನ್ನ ವ್ಯಕ್ತಿತ್ವದ ಛಾಯೆಯನ್ನು' ಎಂದು ಬರೆದಿದ್ದೆ ನಾ ಅಂದು, ನಕ್ಕು ಸುಮ್ಮನಾಗಿದ್ದೆ ನೀ! ನನ್ನ ಈ ವ್ಯಕ್ತಿತ್ವ ನಿನ್ನೊಳಗೆ ಇಳಿದಿದ್ದೇ ಸುಳ್ಳಾ ಎಂದೆನಿಸಲಾರಂಭಿಸಿದೆ ಇಂದು. ತಿಂಗಳಾಯ್ತಲ್ಲೆ ಹುಡುಗಿ ನಾವಿಬ್ಬರೂ ಮಾತು ಮರೆತು , ನಮ್ಮಿಬ್ಬರ ಮನಸು ಮುರಿದು.. 'ದೃಷ್ಟಿಯಾಗತ್ತೆ ಕಣೇ ನಿಮ್ಮಿಬ್ಬರ ಗೆಳೆತನಕ್ಕೆ' ಎನ್ನುತ್ತಿದ್ದ ಗೆಳತಿಯೂ ನೀವ್ಯಾಕೆ ದೂರ ಸರಿಯುತ್ತಿದ್ದೀರ ಎಂದು ಬಿಕ್ಕಲಾರಂಭಿಸಿದ್ದಾಳೆ 🙁 ನನ್ನೆಲ್ಲಾ ಕಂಬನಿಗಳೂ ಅರ್ಥವಾಗದಷ್ಟು ಬದುಕಿನಿಂದ ಅಂತರವ ಕಾಯ್ದುಕೊಳ್ಳಲಾರಂಭಿಸಿದ್ದೀಯಾ ನೀನು? ತಿಳಿಯುತ್ತಿಲ್ಲ ಕಣೇ.. ಬಿಡಿಸಿ ಕೇಳಲು ಧೈರ್ಯವೂ ಸಾಲುತ್ತಿಲ್ಲ ನಂಗಿಲ್ಲಿ! ಜೀವದ ಗೆಳತಿ ಎಂಬಷ್ಟು ಆಪ್ತ ಭಾವಗಳ ಸುರಿಸಿ ಯಾವಾಗಲೂ ನನ್ನವಳೇನೋ ಎನಿಸುತ್ತಿದ್ದ ನೀ ಯಾಕೋ ಈಗೀಗ ಹತ್ತಿರವಿದ್ದೂ ದೂರ.. ಆ ಬಿಟ್ಟು ಹೋದ ಗೆಳೆತನದ ಬಗ್ಗೆ ನೆನೆಪಿಸಿಕೊಂಡು ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಅತ್ತಿದ್ದರಿಂದ ಹಿಡಿದು , ಸುಖಾ ಸುಮ್ಮನೆ ಕಂಡಲ್ಲೆಲ್ಲಾ ನಗುತ್ತಿದ್ದ ಆ ವಡಾಪಾವ್ ಅಂಗಡಿ ಹುಡುಗನ ತನಕ ನನ್ನ ಬದುಕಿನ ಪ್ರತೀ ಕ್ಷಣದಲ್ಲೂ ನೀನಿದ್ದೀಯ.. ಫನ್, infatuation, ಮಸ್ತಿಗಳ ಹೊರತಾಗಿಯೂ ಬದುಕಿನ್ನೇನೋ ಬೇರೆಯದಿದೆ ಎಂಬುದ ಅರಿತವರು ನಾವು! ಅರಿತು ,ಬೆರೆತು ಜೊತೆ ನಡೆದ ಹೆಜ್ಜೆಗಳ್ಯಾಕೋ ಅಣಕವಾಡುತ್ತಿವೆ ನನ್ನ ಒಂಟಿತನವ ಕಂಡು..  ತೀರಾ ಆಪ್ತವೆನಿಸುತ್ತಿದ್ದ ಆ ಏಕಾಂತದ ಸಂಜೆಗಳ್ಯಾಕೋ ಈಗೀಗ ಅಸಹನೀಯವಾಗುತ್ತಿವೆ..  ನನ್ನೆಲ್ಲಾ ದುಃಖಕ್ಕೆ , ಕಣ್ಣೀರಿಗೆ ನಿನ್ನ ಸಾಂತ್ವನ, ದೊಡ್ಡ ನಗುವಿನ ಹಿಂದಿರುವ ನಿನ್ನ dialogue, ಪ್ರತೀ ಖುಷಿಯಲ್ಲೂ ಪಾಲು ಬೇಕೆನ್ನುವ ನನ್ನ ಹುಚ್ಚುತನ … ಬರೆದು ಮುಗಿಯಲಾದೀತೇನೇ? 🙂

ನಿನ್ನದೆಲ್ಲಾ ನನ್ನದೆನ್ನುವ ನನ್ನ ಕೆಟ್ಟ ಸ್ವಾರ್ಥ, Hospital ಬೆಡ್ ಮೇಲೆ ಅರೆಕ್ಷಣವೂ ನಿಂಗೆ ರೆಪ್ಪೆ ಮುಚ್ಚಲು ಬಿಡದ ನನ್ನ ಹಠ, ನಿನ್ನ ಅರ್ಥವಾಗದ ಜೋಕುಗಳಿಗೆ ಕಣ್ ಕಣ್ ಬಿಡುವ ನನ್ನ ಪೆದ್ದುತನ… ಎಂದಾದರೂ ಮರೆಯಲಾದೀತೇನೇ? 

ಆಡಿದಾಟಗಳೇನೋ ಕಂಡ ಕನಸುಗಳೇನೋ
ಕೊನೆಯುಂಟೆ ಮೊದಲುಂಟೆ ಕನಸೆ ಜೀವ.. :* 

ನನ್ನ ಬದುಕಿನ ಕನಸುಗಳನ್ನೆಲ್ಲಾ ನಿನ್ನೆದುರು ಬಿಚ್ಚಿಟ್ಟು ಹೃದಯ ಹಗುರಾಗಿಸಿಕೊಂಡ ಕ್ಷಣಗಳೆಷ್ಟೊ! ನಿನ್ನೆಲ್ಲಾ ಕನಸುಗಳಿಗೆ ಜೀವವಾಗುವ , ಸ್ಪೂರ್ಥಿ ತುಂಬುವ ಮನಸು ಕೊಡು ಭಗವಂತಾ ಎಂದು ಪ್ರಾರ್ಥಿಸಿದ ದಿನಗಳೆಷ್ಟೊ! ಲೆಕ್ಕ ಹಾಕುತ್ತಾ ಕೂತರೆ ಮತ್ತೆರಡು ವರ್ಷ ಬೇಕಾದೀತು.. ನಾ ನನ್ನ ಕಲ್ಪನೆಯ ಕೃಷ್ಣನಿಗೆ ರೂಪ ಕೊಡುತ್ತಾ ಕೂತಿದ್ದರೆ ನೀ ಲೌಕಿಕದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದೆ. ಮಳೆ, ಬಣ್ಣ ಎಂತೆಲ್ಲಾ ಭಾವಗಳ ಪದರಗಳಲ್ಲಿ ನಾ ಮೈ ಮರೆತರೆ , materialistic ಬದುಕ ಮೆರಗಿಗೆ ನೀ ಕಣ್ಣರಳುಸುತ್ತಿದ್ದೆ!! ನನ್ನೆಲ್ಲಾ ಭಾವಗಳಿಗೆ ಕಿವಿಯಾಗುತ್ತಿದ್ದ ನೀನು ನಿನ್ನ ಬೇಸರವ ಅಕ್ಷರಕ್ಕಿಳಿಸುತ್ತೇನೆ ಎಂದಾಗ ಮತ್ರ ಮತ್ತದೇ ನಿರ್ಭಾವುಕ ಮೌನಕ್ಕೆ ಜಾರುತ್ತಿದ್ದೆ.. ಎಲ್ಲಿ ಹೋದವೇ ಆ ದಿನಗಳು? ಬದುಕೆಲ್ಲೋ ಕವಲೊಡೆಯುತ್ತಿರುವ ಭಾವ ನನ್ನಲ್ಲಿ.. ಯಾಕೋ ಈ ಬಿರುಕಿಗೆ ಅವ ಕಾರಣವೆಂದೆನಿಸಿ ಅವನ್ನನೂ ಬೇಡಿಯಾಯ್ತು ನಾನು! ಮರಳಿಸಿ ನಿನ್ನ ನನ್ನೀ ಪ್ರಪಂಚಕ್ಕೆ ಎಂದು.. ಊಹೂಂ! ಅವನಿಗೂ ನಿನ್ನ ಮೌನವನ್ನು ದಾಟಿಸಿಬಿಟ್ಟಿದ್ದೀಯೇನೋ.. ಮಾತನಾಡಲೊಲ್ಲ ಅವ! ಅವನೊಡನೆ ಮಾತನಾಡುವ ತಾಳ್ಮೆಯೂ ನಂಗಿಲ್ಲ ಬಿಡು.. ಹೆಗಲಿಗೆ ಹೆಗಲು ಕೊಟ್ಟು, ಇರಿಸು-ಮುರಿಸುಗಳಿಗೆ ಬೆನ್ನು ಹಾಕಿ , ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಆ ಘಳಿಗೆಗಳು ಬದುಕಲ್ಲಿ ಮರಳಿ ಬೇಕಿದೆ ನಂಗೆ! ಅಸಹಜ ನಗುವ ಪಕ್ಕಕ್ಕೆ ಸರಿಸಿ, ಮುಖವಾಡವ ಕಳಚಿ ನಿನ್ನೊಡನೆ ಜೊತೆಗೂಡಬೇಕಿದೆ ನಂಗೆ.. ಇನ್ನೊಂದು ವರ್ಷ ಜೊತೆಯಿದ್ದುಬಿಡೇ ಗೆಳತೀ…  ಕಹಿಯ ಬಿರುಕು ಮೂಡದಿರಲಿ  ನಮ್ಮೀ ಸ್ನೇಹ ಸೇತುವಿನಲ್ಲಿ.. ಬದುಕಿಗಾಗುವಷ್ಟು ಸವಿ ನೆನಪ ಕಟ್ಟಿಕೊಂಡು ಹೊರಟು ಬಿಡುತ್ತೇನೆ ನಾ ನನ್ನೂರಿಗೆ! ಅದ್ಭುತ ಗೆಳೆತನದ ಭಾಗವಾದ ಹೆಮ್ಮೆಯ ಜೊತೆಗೆ , ನಿನ್ನದೊಂದು ಪ್ರೀತಿಯ ಅಪ್ಪುಗೆಯ ಕೊಟ್ಟು ಬೀಳ್ಕೊಡೇ ಹುಡುಗೀ.. ಕದಡಿಹೋದ ಮನವ ಹಿಡಿದು ನಾನಿಲ್ಲಿ ಒಂಟಿಯಾಗಿ ನಿಂತಿದ್ದೇನೆ ಬದುಕ ಬಗೆಗೊಂದು ಕೌತುಕವ ಹೊತ್ತು! ಅದೇ ಮುಗಿಯದ ನಗುವ ಹೊತ್ತು ನಾವು ಹೋಗುತ್ತಿದ್ದ ಆ ಕವಲು ಹಾದಿಯ ತಿರುವಿನಲ್ಲಿ.. ನೀ ಬಂದು ಜೊತೆ ಸೇರುತ್ತೀಯೆಂಬ ನಿರೀಕ್ಷೆಯೊಂದಿಗೆ! 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಕದಡಿಹೋದ ಮನವ ಹಿಡಿದು: ಲಹರಿ

Leave a Reply

Your email address will not be published. Required fields are marked *