ಎಲೆಕ್ಷನ್ನಾದ ಮೇಲೆ ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದ ಮಳೆಯ ಸುಳಿವೂ ಇಲ್ಲದೇ ಅದೆಷ್ಟೋ ದಿನಗಳಾಗಿ , ತನ್ನನ್ನು ತಾನೇ ಸುಟ್ಟುಕೊಳ್ಳುವಂತಿದ್ದ ಬಿರುಬೇಸಿಗೆ. ಈ ಸುಡುಬೇಸಿಗೆಯಲ್ಲಿ ಕೂತ ಕುರ್ಚಿಯೂ ಕೊಂಚ ಹೊತ್ತಲ್ಲೇ ಕೆಂಡದಂತೆನಿಸಿದರೆ ಆಶ್ಚರ್ಯರ್ಯವೇನಿಲ್ಲ. ಸ್ವಂತಕ್ಕೇ ಸಮಯವಿಲ್ಲದೀ ಸಮಯದಲ್ಲೊಬ್ಬರ ಹುಡುಕಾಟ ನಡೆದಿದೆ. ಅವ್ರೇ ಕತೆಗಾರ ಕಟ್ಟಪ್ಪ. ಈ ಕಟ್ಟಪ್ಪರಿಗೆ ಕತೆ ಬರೆಯೋದು ಅಂದ್ರೆ ಅದೊಂದು ತಪಸ್ಸು. ಯಾರೋ ಕೇಳಿದ್ರು ಅಂತ, ಏನೋ ನೋಡಿದ್ರು ಅಂತ ತಕ್ಷಣಕ್ಕೆಲ್ಲಾ ಏನೇನೋ ಎಳೆಹೊಡೆದು ಅದು ಕತೆಯಾಗೋದಲ್ಲ.ಈ ತತ್ ಕ್ಷಣದ ಕತೆ ಮತ್ತು ಮೂಡಿದ್ದಾಗ, ಬಿಡುವಿದ್ದಾಗೆಲ್ಲಾ ಒಂದೊಂದು ಕತೆ ಹೊಳೆದುಬಿಡಬೇಕೆನ್ನೋದು ಒಂಥರಾ ನಂಗೆ ಬಾಯಾರಿದಾಗೆಲ್ಲಾ ಮಳೆಬರಬೇಕು ಅಂದಗಾಗತ್ತೆ!ಅನ್ನೋದು ಕತೆಗಾರ ಕಟ್ಟಪ್ಪರ ಅಭಿಪ್ರಾಯ. ಹೌದು. ಯಾಕೋ ಕತೆಗಾರ ಕಟ್ಟಪ್ಪ ಎಲ್ಲೋ ಕಳೆದುಹೋಗಿದ್ದಾನೆ. ಕಾಲದ ಮರೆಯಲ್ಲೋ, ಸಮಯವಿಲ್ಲದ ಸನ್ನಿವೇಶಗಳಲ್ಲೋ, ನಿರ್ಲಕ್ಷ್ಯದ ಪರದೆಯ ಹಿಂದಾ ? ಗೊತ್ತಿಲ್ಲ. ಕತೆಗಳಿಗೊಂದು ಕಟ್ಟು ಸಿಗೋ ಮೊದಲೇ ಮಣ್ಣಾಗಬಿಡಬಹುದಾದ ಅಪಾಯದಲ್ಲಿರುವನನ್ನು ಹುಡುಕಲೆಂದೇ ಈ ಪಯಣ..
ಮುಂಚೆಯೆಲ್ಲಾ ಕತೆಯೆಂದರೆ ಅದು ಕಾಗದದ ಮೇಲಷ್ಟೇ. ಕಾಗದವೆಂದರೆ ಲೆಕ್ಕಬಿಡಿಸಲಷ್ಟೇ. ಹೆಚ್ಚಂದರೆ ಪರೀಕ್ಷೆ ಬರಿಯಲಿಕ್ಕೆ ಅಥವಾ ಅದಕ್ಕೆ ತಯಾರಾಗಲಿಕ್ಕೆಂಬ ಭಾವಗಳಿಂದ ಹೊರಹೋಗಲೇ ಸಾಧ್ಯವಾಗದ ಕಾಲವದು. ಕಾಲೇಜಿನ ಮೆಟ್ಟಿಲು ಹತ್ತೋ ಹೊತ್ತಿಗೆ ಎಡತಾಕುತ್ತಿದ್ದ ಅನೇಕರನ್ನು ನೋಡಿ ನೋಡಿ ತಾನೂ ಒಬ್ಬ ಬುದ್ದಿಜೀವಿಯಾ ಅನ್ನೋ ಅನುಮಾನ ಕಾಡತೊಡಗಿತ್ತು. ಆದರೂ ಆಗೆಲ್ಲಾ ಕತೆ, ಕವನವೆಂಬೋ ಕಲ್ಪನೆಗಳೆಲ್ಲಾ ಪುಸ್ತಕದ ಕೊನೆಯ ಹಾಳೆಗಳಿಗೆ ಸೀಮಿತವಾಗಿ ಆ ಹಾಳೆಗಳೊಂದಿಗೇ ರದ್ದಿ ಸೇರುತ್ತಿತ್ತು.ಎಲ್ಲೋ ಅದೃಷ್ಟವಿದ್ದ ಕತೆ, ಕವನಗಳು ಸ್ನೇಹಿತರ ಕಣ್ಣಿಗೆ ಬಿದ್ದರೆ ದುರಾದೃಷ್ಟದವು ಮೇಷ್ಟರ ಕಣ್ಣಿಗೆ ಬಿದ್ದು ಮಂಗಳಾರತಿ ಮಾಡಿಸಿದ್ದೂ ಇದೆ. ಆದರೂ ಮೊದಮೊದಲ ಗೀಚುಗಳು ಕಾಲೇಜು ಗೋಡೆಪತ್ರಿಕೆಯ ಮುಖಕಂಡಾಗ ಆದ ಸಂತೋಷವೇ ಬೇರೆ. ಕಟ್ಟಪ್ಪನಿಗೇ ಗೊತ್ತಿಲ್ಲದೇ ಅವನೊಳಗಿದ್ದ ಕತೆಗಾರನೊಬ್ಬ ಬೆಳೆಯತೊಳಗಿದ್ದ.
ಒಂದು ಹಂತದ ಬರಹಗಳು, ಅದಕ್ಕೆ ಸಿಗುತ್ತಿದ್ದ ಬಹುಪರಾಕುಗಳು ಅವನ ಹಳ್ಳಿಯ ಕಾಲೇಜಲ್ಲೇ ಕೊನೆಗೊಂಡವು. ಪಟ್ಟಣಕ್ಕೆ ಬಂದಾಗ ಅಲ್ಲಿನ ಗಿಜಿಗಿಜಿಯಲ್ಲೊಂದು ತಣ್ಣಗಿನ ಜಾಗ ಹುಡುಕೋದೇ ಕಷ್ಟವಾಗಿತ್ತು ಕಟ್ಟಪ್ಪನಿಗೆ. ಊರಿಗೆ ಹೋಗೋ ಮನವಿದ್ದರೂ ಹೋಗಿ ಮುಂದೇನೆಂಬ ಪ್ರಶ್ನೆ ಪ್ರತೀಸಲ ಕಾಡುತ್ತಿತ್ತು.ಹೂಂ. ಅಲ್ಲೂ ಸಲ್ಲದೇ , ಇಲ್ಲೂ ಇಲ್ಲದ ತ್ರಿಶಂಕು ಸ್ವರ್ಗದ ಅನುಭವ ಸ್ವಲ್ಪ ದಿನ ಕಟ್ಟಪ್ಪನಿಗೆ. ಕವನಗಳಿಗೆ ಅಸ್ತಿತ್ವವನರಸಿ ಬೇಡದ ಸ್ನೇಹಿತರಿಲ್ಲ. ಕವನವನೋದಿರೆಂದು ಗೋಗರೆಯದ ಜನರಿಲ್ಲ. ಬೇಡಿ ಬೇಡಿ ಬೇಸತ್ತು ಬರಹಕ್ಕೇ ತಿಲಾಂಜಲಿಯಿಟ್ಟುಬಿಟ್ಟಿದ್ದ ಕಟ್ಟಪ್ಪನಿಗೆ ಮತ್ತೆ ಬರಹಲೋಕ ಸ್ವಾಗತಿಸಿದ್ದು ತೀರಾ ಆಕಸ್ಮಿಕ. ಯಾವುದೋ ಬೇಸರಕ್ಕೆ ಗೀಚಿದ ನಾಲ್ಕು ಸಾಲುಗಳು ಯಾರ್ಯಾರದೋ ಕೈಬದಲಾಗಿ ಸಾಕಷ್ಟು ದೂರ ಸಾಗಿಬಿಟ್ಟಿತ್ತು. ಮೊದಲು ತಮಾಷೆಯಾಗಿ ಪ್ರಚಾರ ಕೊಟ್ಟವರಿಗೇ ದಂಗಾಗುವಷ್ಟು ಪ್ರಖ್ಯಾತನಾದ ಕಟ್ಟಪ್ಪ. ಹಿಂಗೇ ಯಾರೋ ಪೇಪರಲ್ಲಿ ಬರೆಯೋ ಛಾನ್ನೂ ಕೊಟ್ಟಾಗ ಕಟ್ಟಪ್ಪನಿಗೆ ಆಕಾಶಕ್ಕೆ ಮೂರೇ ಗೇಣು.
ಕಾಲವನ್ನು ತಡೆಯೋರ್ಯಾರಿದ್ದಾರೆ ? ಕಟ್ಟಪ್ಪನಿಗೊಂದೆರಡು ಕಡೆ ಬರೆಯೋ ಅವಕಾಶಗಳು ಸಿಕ್ಕಿ ಜನಜನರ ಬಾಯಲ್ಲಿ ಸುದ್ದಿಯಾಗಿಹೋದ. ಕಟ್ಟಪ್ಪ ಪತ್ರಿಕೆಗಳಲ್ಲೊಬ್ಬ ಅಂಕಣಕಾರನಾಗುವನೆಂದೇ ಅವನ ಗೆಳೆಯರೆಲ್ಲಾ ನಂಬಿದ್ದರು. ಆದ್ರೆ ನೀರ ಮೇಲಿನ ಗುಳ್ಳೆಯಂತಹ ಬದುಕು ಯಾವಾಗ ಮರೆಯಾಯ್ತೋ ಕಟ್ಟಪ್ಪನ ಬಿಟ್ಟು ಬೇರೆ ಯಾರಿಗೂ ಉತ್ತರ ಹೇಳೋ ಸಾಧ್ಯತೆಯಿರಲಿಲ್ಲ.ಇದ್ದಕ್ಕಿದ್ದ ಹಾಗೆ ಕಾಣೆಯಾದವ ಎಲ್ಲಿ ಹೋದವನೆಂಬುದು ಸುಲಭದಲ್ಲಿ ಉತ್ತರ ಸಿಗೋ ಪ್ರಶ್ನೆಯೂ ಗಿರಲಿಲ್ಲ. ಸಣ್ಣ ವಯಸ್ಸಿನಲ್ಲೇ ಸಿಕ್ಕ ಪ್ರಸಿದ್ದಿಯ ಪಿತ್ತ ನೆತ್ತಿಗೇರಿದ್ದಾ ? ಇದ್ದಕ್ಕಿದ್ದಂತೆ ಏರಿದ್ದ ಪ್ರಸಿದ್ದಿಯ ಅಲೆಯಿಂದ ಕೆಳಗಿಳಿದು ಸಾಮಾನ್ಯತನಕ್ಕೆ ಬರೋದು ಅಸಾಧ್ಯವಾಗಿ ಎಲ್ಲೋ ಮರೆಯಾದನಾ ಗೊತ್ತಿಲ್ಲ ? ಆದ್ರೆ ಪ್ರಸಿದ್ದಿಯಿಂದ ಹೊಟ್ಟೆತುಂಬುತ್ಯೆ ? ಕಾಡೋ ಬಡತನವನ್ನು ಯಾರಲ್ಲಿಯೂ ಬಾಯಿಬಿಡದೇ ಯಾವುದೋ ಮೂಲೆಗೆ ಹೋಗಿ ಕೆಲಸ ಹಿಡಿದಿದ್ದಾನನ್ನೋದು ಅವನ ಕೆಲವು ಗೆಳೆಯರಿಗೆ ಮಾತ್ರ ಗೊತ್ತಿತ್ತು.
ದೇಶಾದ್ಯಂತ ಸುತ್ತಿದ ಕಟ್ಟಪ್ಪನಿಗೆ ಕೊನೆಗೂ ಕರ್ನಾಟಕಕ್ಕೆ ಬಂದಾಗಾದ ಸಂತೋಷಕ್ಕೆ ಮೇರೆಯಿರಲಿಲ್ಲ.ಆದ್ರೆ ಎಲ್ಲಾ ನನ್ನವರೆಂಬ ಭಾವ ಮರೆಯಾಗೋಕೆ ಹೆಚ್ಚಿಗೆ ಸಮಯ ಬೇಕಾಗಿರಲಿಲ್ಲ. ಪಾನಿಪೂರಿ ಅಂಗಡಿಯವರಿಂದ, ಐಟಿ ಕ್ಯಾಬ್ ಡ್ರೈವರವರೆಗೆ ಎಲ್ಲೆಲ್ಲೂ ಇಂಗ್ಲೀಷ್ , ಹಿಂದಿಯೇ.ಜಾಲಗಳ ಜಗತ್ತಿನಲ್ಲಿ ಕಂಡವರನ್ನೆಲ್ಲಾ ನಿಜಜೀವನದಲ್ಲಿ ಕಂಡಾಗಾದ ಭ್ರಮನಿರಸನ ಆತನ ಕತೆಗಳಲ್ಲಿರೋ ಪಾತ್ರಗಳ ದುಃಖಾಂತ್ಯಕ್ಕಿಂತ ಕಮ್ಮಿಯೇನಿರಲಿಲ್ಲ. ಟ್ರಾಫಿಕ್ಕಿನಲ್ಲೇ ಗಂಟೆಗಳ ಕಾಲ ಕಳೆದುಹೋಗುತ್ತಿದ್ದ ಕಟ್ಟಪ್ಪನ ಕತೆಗಳು ನೆನಪಿನಾಳದಲ್ಲೇ ಹುದುಗಿಹೋಗುತ್ತಿದ್ದವು. ಬರೆಯಲಾಗದ ಅಸಹಾಯಕತೆಗೆ ಇನ್ನೊಬ್ಬರ ದೂಷಣೆಯಲ್ಲೇ ಕಳೆದುಹೋಗುತ್ತಿದ್ದ ಕತೆಗಾರರಲ್ಲೊಬ್ಬನಾಗಬಹುದಿತ್ತೇನೋ ಕಟ್ಟಪ್ಪ. ಆದರೇಕೋ ಅವನ ಎಂದಿನ ಮೌನವೇ ಕಟ್ಟಪ್ಪನನ್ನ ಕಾಪಾಡಿತ್ತು. ತೇಜಸ್ವಿ,ಚೇತನ್ ಭಗತ್, ಭೈರಪ್ಪ, ಕಾರ್ನಾಡ್ ಹೀಗೆ ಸಿಕ್ಕಿದ್ದೆಲ್ಲಾ ಓದಲಾರಂಭಿಸಿದ್ದ ಕಟ್ಟಪ್ಪ. ಬರೆಯೋದಕ್ಕಿಂತ ಓದೋದರಲ್ಲಿರೋ ಖುಷಿಯನ್ನು ಕಂಡುಕೊಂಡಿದ್ದ ಕಟ್ಟಪ್ಪ. ಅಂದಂಗೆ ಕಟ್ಟಪ್ಪ ಬರೆಯುತ್ತಿಲ್ಲವೇ ಅನ್ನೋ ಅನುಮಾನವದವರಿಗೆಲ್ಲಾ ಕಟ್ಟಪ್ಪನನ್ನು ಭೇಟಿಯಾದಾಗ ಆಶ್ಚರ್ಯ.. ಅಗತ್ಯ ಬೀಳೋ ತನಕ ಅಸಾಧ್ಯ ಮೌನಿಯಾಗಿರೋ ಕಟ್ಟಪ್ಪ ಇಷ್ಟು ಮಾತನಾಡುತ್ತಾನಾ ಅಂದುಕೊಳ್ಳುವಷ್ಟು. ಏನಾರೋ ಬರೆಯೋ ಅಂದರೆ ನಯವಾಗಿ ನಿರಾಕರಿಸೋ, ಆದ್ರೆ ಸ್ವಲ್ಪ ಪ್ರ್ತೀತಿಯ ಒತ್ತಾಯ ಬಿದ್ದರೆ ಕೇಳಿದವರಿಗೆ ದಿಗಿಲುಬೀಳಿಸುವಂತೆ ಬರೆಯೋ ಕಟ್ಟಪ್ಪ ಯಾಕಿಷ್ಟು ಮೌನಿಯೆಂಬ ಪ್ರಶ್ನೆ ಕಾಡುತ್ತಲೇ ಇರತ್ತೆ. ಒಡನಾಟ ಇಟ್ಟುಕೊಂಡರೆ ಇದ್ದಾನೆ. ಇಲ್ಲವೆಂದರೆ ಕಾಲದ ಮರೆಯಲ್ಲೆಲ್ಲೋ ಕಳೆದುಹೋಗಿದ್ದಾನೆ ಈ ಕಟ್ಟಪ್ಪ..ನಮ್ಮ ನಿಮ್ಮೆಲ್ಲರ ಮಧ್ಯೆಯೇ ಕರಗಿಹೋಗಿದ್ದಾನವನು..ವಾಸ್ತವವೇ ಕತೆಯಾಗಿಸಿ, ಕತೆಯ ವಾಸ್ತವವಾಗಿಸಿದ್ದಾನೆ ಕತೆಗಾರ ಕಟ್ಟಪ್ಪ…
*****