ಕಲಾಕುಂಜದ ಸಂತೆಯಲ್ಲಿ
ಅಕ್ಕಪಕ್ಕ ಕಲಾಚಿತ್ರಗಳು ವರ್ಣಭಿತ್ತಿಗಳು ಎಣಿಕೆಗೆ ಸಿಗದಷ್ಟು
ಹಾದಿಗುಂಟ ಮೈಲಿಗಟ್ಟಲೇ ಲಕ್ಷಲಕ್ಷ ಜನವೋ ಜನ
ಸಾವಿರಾರು ಚಿತ್ರಕಲಾವಿದರು ತಮ್ಮ ತಮ್ಮ ಕಲ್ಪನೆಯ
ಕನಸುಗಳೊಂದಿಗೆ ನಿಂತಿಹರು ಚಿತ್ರಪಟದ ಎದುರು
-1-
ಬಣ್ಣಗಳು ಅಂದು ಮಾತನಾಡುತ್ತಿವೆ ಚಿತ್ರಪಟಗಳು
ಅತ್ತಿಂದತ್ತ ಓಡಾಡುತ್ತಿವೆ ಕಲಾರಸಿಕರ ಮನದೊಳಗೆ
ಕಲಾವಿದನ ಕಲ್ಪನೆಯ ಚಿತ್ರಗಳು ಅಂದು ಮಾರಾಟಕ್ಕಿವೆ
ಲಕ್ಷೋಪಲಕ್ಷ ಕಂಗಳ ಚಿತ್ತ ಅಕ್ಕಪಕ್ಕದಲಿ ನಿಂತ
ಚಿತ್ರಪಟಗಳತ್ತ ಅರಸುತಿವೆ ಎಡಬಿಡದೆ ಕಣ್ಣುಗಳನು
ಮಿಟುಕಿಸುತಿವೆ ತಮ್ಮನು ಕೊಳ್ಳುವ ರಸಿಕರತ್ತ
ಆಸೆ ಕಂಗಳದಿ ಬೆರಗು ಹುಟ್ಟಿಸುವಂತೆ
ಕಲಾವಿದನ ಕಣ್ಣಲ್ಲಿ ತಮ್ಮ ಕನಸಿಗೆ ಬೆಲೆ ಸಿಗಬಹುದೆ
ಎಂಬ ಆಸೆಯ ಚಿತ್ತನೋಟದಂತೆ
ಚಿತ್ರಗಾರನ ಹೃದಯ ಅರಳುವುದು ಚಿತ್ರಸಂತೆಯಲ್ಲಿ
ತನ್ನ ಕನಸುಗಳ ಕಡೆಗೆ ಜನರ ದೃಷ್ಟಿ ಬಿದ್ದಾಗ
ನೋಡುವ ಲಕ್ಷ ಕಂಗಳಲ್ಲಿ ಯಾವ ಕಣ್ಣಿಗೆ
ಯಾವ ಚಿತ್ರವು ಬಿಕರಿಯಾಗುವುದು ಕೊಳ್ಳುವ
ವಾರಸುದಾರನು ಆ ಸಂತೆಯಲಿ ನಿಗೂಢನಂತಿರಲು
ಸಂಚರಿಸುತಿಹನು ನೋಡುವವನ ಮನಸಿಗೆ
ಅದರ ಬೆಲೆಯೇ ಮಾನದಂಡವು
-2-
ಕಲೆಗೆ ಬೆಲೆಯಿಲ್ಲ ಅನ್ನುವುದು ಲೋಕರೂಢಿ ಮಾತು
ಆ ಚಿತ್ರಸಂತೆಯಲ್ಲಿ ಪ್ರತಿ ಚಿತ್ರಕೂ ಒಂದೊಂದು ಬೆಲೆ
ವಿಚಾರಿಸಿದರೆ ಸ್ವಲ್ಪ ಚೌಕಾಶಿ
ನೂರಾರು ರೂಪಾಯಿಗಳಿಂದ ಲಕ್ಷ ರೂಪಾಯಿಗಳವರೆಗೆ
ಕೋಟಿ ರೂಪಾಯಿ ಸಿಗುವುದು
ಯಾವುದೋ ಒಂದೊ ಎರಡೋ ಕಲಾವರ್ಣಗಳಿಗೆ
ಕಲಾವಿದರ ಕಲ್ಪನೆಯ ಕೂಸುಗಳು ಜಾತ್ರೆಯಲ್ಲಿ ಮಾರಾಟಕ್ಕಿವೆ
ವಾರಸುದಾರನ ಗಮನ ಬೇರಡೆ ಹರಿದುಹೋಗದಂತೆ
ನಿಂತಿಹವು ಓಡುತಿಹವು ಕಾಲಿಗೆ ಚಕ್ರ ಕಟ್ಟಿಕೊಂಡಂತೆ
ಕ್ರಯವಿಕ್ರಯದಲ್ಲಿರುವವರು ನೋಡುವವರು ಕಲಾರಸಿಕರು
ಕಲಿಕೆಯಲ್ಲಿರುವವರು ಟೈಂಪಾಸ್‍ಗೆ ಬರುವವರು
ಖಾಲಿ ತಲೆಯನು ತುಂಬಿಕೊಳ್ಳಲು ಬರುವ ಸೃಜನಶೀಲರು
ವರ್ಷ ವರ್ಷವೂ ಬರುವ ಇವರ ಸಂಖ್ಯೆ ಆ ದಿನ
ಲಕ್ಷ ಸಂಖ್ಯೆ ಇರಬಹುದೇನೋ?
ಸಂತೆಯಲಿ ಎಲ್ಲಾ ಚಿತ್ರಗಳು ಕಣ್ಣಿಗೆ ಬೀಳುವವು
ಕೆಲವು ಜಾಗ ಸಿಗದೆ ಸಂಧಿಗೊಂದಿಯಲಿ ಅವಿತು ಕಣ್ಣರಳಿಸಿ
ಜನರತ್ತ ನೋಡುವಂತೆ
ಸೆರೆಮನೆಯ ಸರಳಿನಲ್ಲಿ ಕದ್ದು ನೋಡುವಂತೆ
ಚಿತ್ರಪ್ರಿಯರಿಗೆ ಭಾಸವಾಗುವಂತೆ
-3-
ಅಲ್ಲೊಂದು ಕಡೆ
ಸುಂದರ ಹುಡುಗಿ ಪುಟ್ಟ ಬಾಲಕ
ಕುಳಿತಿದ್ದರು ಅಕ್ಕಪಕ್ಕ
ಚಿತ್ರಕಲಾವಿದ ಅವರನ್ನೆ ನೋಡುತ್ತಿದ್ದ
ದೃಷ್ಟಿ ಅತ್ತಿಂದಿತ್ತ
ಒಂದು ಚಿತ್ರಕೆ ನೂರು ರೂಪಾಯಿ ಎಂಬ ಬೋರ್ಡ್
ಹೊತ್ತ ಚೇರ್‍ನಲ್ಲಿ ಕೂತು
ತನ್ನ ಪೇಪರ್‍ಪ್ಯಾಡ್‍ನಲ್ಲಿ ಇಬ್ಬರನ್ನೂ ತಿದ್ದಿ ತೀಡುತ್ತಿದ್ದ
ಅವನ ಮುಖ ಗಂಭೀರ
ಸುತ್ತಲೂ ಜನ ಗಜಿಬಿಜಿ ನಸುನಗು ನೋಡುವವರ ಕಣ್ಣುಗಳು
ಕಲಾವಿದನ ಕೈಗಳತ್ತ ಜನರ ನಗು
ಕಂಡು ಕುಳಿತಿದ್ದ ಇಬ್ಬರೂ ನಸುನಕ್ಕರು
ಅವರಿಬ್ಬರೂ ಮತ್ತೆ ಗಂಭೀರ
ಕಲಾವಿದನ ದೃಷ್ಟಿ ಇವರತ್ತ ಬಿದ್ದಾಗ
ಹುಡುಗಿ ಎಂದಿನಂತೆ ಮಂದಹಾಸ ತೋರಿದರೂ
ಪುಟ್ಟ ಬಾಲಕನ ಹುಡುಗಾಟ ಹಾಗೇ ಇತ್ತು.
ಕಲಾವಿದ ಮಾತನಾಡಲಿಲ್ಲ ಆತನ ಪೆನ್ಸಿಲ್‍ನಲ್ಲಿ
ಎದುರುಗಿದ್ದವರ ಬಾಗಿದ ರೇಖೆಗಳು ಅರಳುತ್ತಿದ್ದವು
ಮಾತನಾಡುತ್ತಿರುವಂತೆ ಕಾಣುತ್ತಿದ್ದವು
ಕಲಾವಿದನ ರೇಖೆಗಳ ತಿದ್ದಾಟವು
ಜೊತೆ ಜೊತೆಯಾಗಿ ಸಾಗುತಿರಲು
ಹೌದೌದು ಇವನು ಎಷ್ಟು ಚೆನ್ನಾಗಿ
ಬರೆಯುತ್ತಿದ್ದಾನಲ್ಲವೇ?
ಅವರಂತೆ ಇನ್ನಷ್ಟು ಮುದ್ದಾಗಿ ರೇಖೆಗಳೊಂದಿಗೆ
ಸರದಿಸಾಲಿನಲ್ಲಿ ನಿಂತರು ಇನ್ನಷ್ಟು ಜನರು
ಮುದ್ದು ಮಕ್ಕಳು ಬಿಳಿಹಾಳೆಯಲ್ಲಿ ಮೂಡುವ ತಮ್ಮ
ಮುಖದ ರೇಖೆಗಳನ್ನು ನಿರೀಕ್ಷಿಸುತ್ತಾ
-4-
ಚಿತ್ರಸಂತೆಯಲ್ಲಿ ವರುಷ ವರುಷವೂ
ಪ್ರಸಿದ್ಧ ಕಲಾವಿದರು ಅಕ್ಕಪಕ್ಕದ ರಾಜ್ಯಗಳಿಂದ
ತಪ್ಪದೇ ಬರುವರು ತಮಗೆ ಹಾಸಿದ
ರತ್ನಗಂಬಳಿಯ ಮೇಲೆ ನಡೆದಾಡಲು
ಆ ಚಿತ್ರಸಂತೆಯು ಕಲ್ಪನೆಯ ಕಲಾಕುಂಜದ ಮೇಳವು
ಗಂಧರ್ವ ವಿದ್ಯೆಯ ಉದಾಹರಣೆಯು
ಕಲೆ ನಿಂತ ನೀರಲ್ಲ
ಅದು ಹರಿಯುತ್ತಿರುವ ನದಿಯ ಹಾಗೆ
ಅದು ಭೋರ್ಗರೆಯುತ್ತಿರುವ ಜಲಪಾತದ ವಿಸ್ಮಯದಂತಿರಲು
ಭಯಾನಕ ಮಳೆ ಸುರಿಸುವ ಕರಿಮೋಡದ ಸರಣಿಯಂತೆ
ಅತಿಥಿಗಳಂತಿದ್ದ ಪ್ರಸಿದ್ಧ ಕಲಾವಿದರ ಜೊತೆ
ಸೆಲ್ಫಿ ಪಡೆಯಲು ಸರದಿ ಸಾಲು ಸುತ್ತಲೂ ಸದ್ದು ಮಾಡುವ
ಡಿಜಿಟಲ್ ಕ್ಯಾಮರಾಗಳು ವರದಿಗಾರರ ಪ್ರಶ್ನೆಗಳು
ಮರುದಿನದ ಪತ್ರಿಕೆಗಳ ವರದಿಯಲ್ಲಿ
ಕೆಲವು ಪ್ರಸಿದ್ಧ ಕಲಾವಿದರದ್ದೇ ಪಾರುಪಥ್ಯವು
-5-
ಚಿತ್ರಸಂತೆಯ ಸಂಧ್ಯಾಕಾಲದಲ್ಲಿ
ಅಳಿದುಳಿದ ಚಿತ್ರಗಳು ಸೋತಂತೆ ಕಾಣಲಿಲ್ಲ
ಇನ್ನೊಮ್ಮೆ ಕಲಾರಸಿಕರ ಎದೆಯೊಳಗೆ
ನುಗ್ಗುವ ತವಕದಲ್ಲಿದ್ದಂತೆ
ಲಕ್ಷಕೋಟಿ ರೂಪಾಯಿಗೆ ಚಿತ್ರಪಟ ಕೊಳ್ಳುವ
ಶ್ರೀಮಂತರೂ ಜನರ ಜೊತೆ ಕರ್ಮಠರಂತೆ ಓಡಾಡುತ್ತಿರಲು
ಕಲಾವಿದನ ಕಣ್ಣೀರು ಬಣ್ಣದಲಿ ಸೇರಿಕೊಂಡಿದೆ ಅದು
ಕುಂಚದಲಿ ಅರಳಿ ಚಿತ್ರವಾಗಿದೆ
ಆ ಸಂತೆಯಲಿ ಮಾರಾಟಕ್ಕಿದೆ ಎಲ್ಲೆಲ್ಲೂ
ಜನರ ಕಂಗಳಲಿ ಕಲಾವಿದನ ಬದುಕು
ದುಸ್ತರವೂ ಹೌದು ಸೋಜಿಗವೂ ಹೌದು
ಮರೆಯಲ್ಲಿ ಬಣ್ಣ ಕುಂಚದ ಕಲಾವಿದರ ಬಂಧ-ಅನುಬಂಧವೂ
ಆ ಚಿತ್ರಸಂತೆಗೆ ಮುಗಿಯುವುದೇ ಭ್ರಾಮಕ ಜಗತ್ತನ್ನು
ಬಣ್ಣಕುಂಚದಿ ಮೂಡಿಸಿ ನಮ್ಮೊಳಗೂ
ಕಲಾವಿದನನ್ನು ಮೂಡಿಸುವ
ಆ ಚಿತ್ರಗಾರನ ಮನಸು ಅಮೂರ್ತ ಚಿತ್ರಪಟದಂತೆ
ಎಂದಿಗೂ ಗಹನರೂಢಿಯೇ ಸರಿ
ಕಲಾಕುಂಜದ ಸಂತೆಯಲ್ಲಿ ಕಲಾವಿದನ
ಎದೆಬಡಿತ ನಗಾರಿ ಮುಂದುವರಿಯುವುದು
ಮುಂದಿನ ಚಿತ್ರಸಂತೆಯ ಅಂಗಣ ಸಿದ್ಧವಾಗುವವರೆಗೂ
ಕಲಾವಿದನ ಕನಸುಗಳ ಬಿತ್ತನೆ ಮತ್ತೆ ಪ್ರಾರಂಭವು…
-ಫಕೀರ