ಹೀಂಗೊಂದ ಕಾಡಿನೊಳಗ ಒಂದು ಕತ್ತೆ, ಒಂದು ನರಿ ಇದ್ದುವಂತ. ಅವು ಭಾಳ ಪ್ರಾಣದ ಗೆಳೆಯರಾಗಿದ್ರಂತ. ಯಾವಾಗಿದ್ರು ಜೋಡಿ ಜೋಡಿನ ಇರ್ತಿದ್ದುವಂತ. ಯಾವಾಗ್ಲು ಕೂಡಿನ ಆಟಾ ಆಡತಿದ್ದುವಂತ. ಆಹಾರ ಹುಡಕತಿದ್ದುವಂತ.
ಹಿಂಗಿರಬೇಕಾದ್ರ ಒಂದ ದಿನ ಕತ್ತೆಗೆ ಕಲ್ಲಂಗಡಿ ಹಣ್ಣು ತಿನಬೇಕನಿಸ್ತಂತ. ಅಷ್ಟನಿಸಿದ್ದ ತಡಾ,” ದೊಸ್ತ ಇವತ್ತ ನಂಗ ಕಲ್ಲಂಗಡಿ ಹಣ್ಣು ತಿನಬೇಕನಸೇದ, ನಡಿ ಕಲ್ಲಂಗಡಿ ತೋಟಕ್ಕ ಹೋಗೊಣು” ಅಂತ ನರಿ ಗೆ ಹೇಳ್ತಂತ. ಅದಕ್ಕ ನರಿ, ಆತ ನಡಿ ಹಂಗಂದ್ರ ಅಂತ, ನರಿ ಮತ್ತ ಕತ್ತೆ ಇಬ್ಬರು ಕಲ್ಲಂಗಡಿ ತೋಟ ಹುಡಿಕ್ಕೊತ ಹೊಂಟುವಂತ. ಹಿಂಗ ಹೋಗಬೇಕಾದ್ರ ಒಂದು ಕಲ್ಲಂಗಡಿ ಹಣ್ಣಿನ ತ್ವಾಟಾ ಕಾಣಿಸ್ತಂತ. ಕತ್ತಲಾಗೊ ತನಕಾ ಕಾದು ಕೂತು, ಆಮ್ಯಾಲೆ ಒಳಗ ಹೋದುವಂತ. ಅಲ್ಲೆ ದೊಡ್ಡು ದೊಡ್ಡು ಕಲ್ಲಂಗಡಿ ಹಣ್ಣು ನೋಡಿ ಕತ್ತೆಗೆ ಭಾಳ ಖುಷಿ ಆತಂತ. ಹೇ ಎಷ್ಟು ಮಸ್ತ ಕಲ್ಲಂಗಡಿ ಹಣ್ಣು ಅವ, ನಂಗಂತು ಭಾಳ ಸೇರ್ತಾವ. ಇವತ್ತ ಹೊಟ್ಟಿ ತುಂಬ ತಿಂತೇನಿ ಅಂತ ಹೇಳಿ ಗಬಾ ಗಬಾ ತಿಂದು ತೆಗಿತಂತ.
ನರಿ ಅಂತಂತ, ತಿನ್ನೊದ ಆತಲ್ಲಪ್ಪ ಮಾರಾಯಾ, ನಡಿ ಇನ್ನ ಕಾಡಿಗೆ ಹೋಗೊಣು ಅಂತಂತ. ಅದಕ್ಕ ಕತ್ತಿ, ಹೇ ಇಷ್ಟ ಲಗು ಕಾಡಿಗೆ ಹೋಗೊದಾ, ಅಲ್ಲೇನ ಕಡದ ಕಟ್ಟಿ ಕಟ್ಟಾಂವ ಇದ್ದಿ ಅಂತ ಇಷ್ಟ ಲಗೂ ಕಾಡಿಗೆ ಹೋಗ್ತಿ. ಇಲ್ಲೆ ಎಷ್ಟ ಆರಾಮ ತಂಪ ಗಾಳಿ ಬೀಸಲಿಕತ್ತದ, ಹಾಯ ಹಾಯ ಹಾಯ, ಆಕಾಶದಾಗ ಚಂದಪ್ಪ, ನಕ್ಷತ್ರ, ಎಷ್ಟ ಛಂದ ಲಕಾ ಲಕಾ ಹೋಳಿಲಿಕತ್ತಾವ, ಎಷ್ಟ ಛಂದ ರಾತ್ರಿ ಅದ, ಇಂಥಾದ್ರಾಗ ನಂಗ ಒಂದು ಹಾಡು ಹಾಡಬೇಕನಿಸ್ಲಿಕತ್ತದ. ಅಂದು “ ಘೇಂಚು ಘೇಂಚು ಅಂತ ಒದರಲಿಕತ್ತಂತ. ಅದನ್ನ ಕೇಳಿ ನರಿ, ಘಾಬರ್ಯಾಗಿ ಅತ್ಲಾಗ ಇತ್ಲಾಗ ನೋಡಕೋತ “ ಏ ಏ ಹುಚ್ಚಪ್ಯಾಲಿ, ನಿಂಗ ಹುಚ್ಚಗಿಚ್ಚ ಹಿಡದದೇನೊ, ಬುದ್ಧಿ ನೆಟ್ಟಗದ ಇಲ್ಲೊ. ಅಲ್ಲಾ ಹಿಂಗ್ಯಾಕ ಕಿರಚ್ಯಾಡ್ಲಿಕತ್ತಿ. ತ್ವಾಟದ ಮಾಲಕರು ಯಾರರ ಕೇಳಿಸ್ಕೊಂಡರ ನಮ್ಮ ಸಾಯ ಹೋಡಿತಾರ” ಅಂತಂತ. ಅದಕ್ಕ ಕತ್ತೆ, ಹೇ ಅದೆಲ್ಲ ಏನಿಲ್ಲ, ನಾ ಛಂದ ಹಾಡೋದು ನಿಂಗ ಸಹಿಸ್ಲಿಕ್ಕಾಗುದಿಲ್ಲ, ಅದಕ್ಕ ಹೊಟ್ಟಿಕಿಚ್ಚಿಗೆ ನೀ ಎನರೆ ಹೇಳಿ ಹೆದರಸ್ಲಿಕತ್ತಿ. ಮೊದಲ ನಮ್ದು ಸಂಗೀತಗಾರರ ವಂಶ.” ಅದ ಅಂತು.
ಅದಕ್ಕ ನರಿ “ ಆತಪ್ಪಾ ನಂದ ತಪ್ಪಾತು, ನೀ ಹಾಡಾಂವ ಇದ್ರ ಹಾಡು. ನಾ ಮಾತ್ರ ಈ ತ್ವಾಟದ ಹೋರಗ ನಿನ್ನ ಹಾದಿ ಕಾಯ್ಕೋತ ನಿಂತಿರ್ತೇನಿ. ನೀ ಶುರು ಹಚ್ಕೊ ಶುರು ಹಚ್ಕೊ ಅಂತ ಹೋರಗ ಹೋತಂತ. ಇತ್ಲಾ ಕಡೆ ಕತ್ತಿ ಜೋರ ಧ್ವನಿಲೇ “ಘೇಂಚು ಘೇಂಚು ಅಂತ ಜೋರಾಗಿ ಒದರಲಿಕತ್ತಂತ. ಆವಾಗ ಅಲ್ಲೆ ಇದ್ದ ಕಾವಲುಗಾರರಿಗೆ ಇದರ ಧ್ವನಿ ಕೇಳಿ, ಹೇ ಯಾವದೋ ಕತ್ತಿ ನಮ್ಮ ತ್ವಾಟಕ್ಕ ಬಂದು ಕಲ್ಲಂಗಡಿ ಹಣ್ಣು ತಿನ್ನಲಿಕತ್ತದ. ನೋಡೂಣ ಬರ್ರಿ ಅಂತ, ದೊಡ್ಡ ದೊಡ್ಡ ಬಡಗಿ ಹಿಡಕೊಂಡ ಓಡಿ ಓಡಿ ಬಂದ್ರಂತ. ಅಲ್ಲೆ ಒದರಿಕೋತ ನಿಂತಿದ್ದ ಕತ್ತಿಗೆ ದಬಾ ದಬಾ ಹಾಕ್ಕೊಂಡ ಹೇರಿದ್ರಂತ. ಹೊಡತಾ ತಾಳಲಾರದ ಕತ್ತಿ ಸುಸ್ತಾಗಿ ಕೆಳಗ ಬಿತ್ತಂತ. ಕತ್ತಿ ಸತ್ತ ಹೋತು ಅಂತ ತಿಳಕೊಂಡ ಬಂದ ಮಂದಿಯೆಲ್ಲ ಅಷ್ಟಕ್ಕ ಬಿಟ್ಟು ಹೋದ್ರಂತ. ಅವರೆಲ್ಲ ಹೋದಮ್ಯಾಲೆ ಅಲ್ಲೆ ಡಕ್ಕೊಂಡಿದ್ದ ನರಿ ಹವರಗ ಕತ್ತಿ ಹತ್ರ ಬಂತಂತ. ನರಿಗೆ ಕತ್ತಿಗಾದ ಆವಸ್ಥಿ ನೋಡಿ ಭಾಳ ತ್ರಾಸ ಆತಂತ. ಅದು ಕತ್ತಿಗೆ, “ ಎನೋ ಮಾಹಾರಾಯಾ, ಎಂಥಾದ್ದು ಮಾಡ್ಕೊಂಡಿ, ನಾ ಎಷ್ಟ ಹೇಳಿದ್ರು ಕೇಳಲಿಲ್ಲ. ಈಗ ನೋಡು ನೋವು ಅನುಭೋಗಸಾಂವ ನೀನ ಹೌದಿಲ್ಲೊ. ಅಂತಂತ.
ಅಷ್ಟೊತ್ತಿಗಾಗಲೇ ಗಜ್ಜು ತಿಂದ ಕತ್ತಿಗೆ ಬುದ್ಧಿ ಬಂದಿತ್ತಂತ, ಅದಕ್ಕ ಅದು ಅಂತಂತ, ಹೌದಪ್ಪ, ನಂದ ತಪ್ಪಾತು, ಇನಮ್ಯಾಲೆ ಯಾರೆ ಬುದ್ಧಿಮಾತ ಹೇಳಿದ್ರು ನಾ ಕೇಳತೇನಿ, ನಿರ್ಲಕ್ಷ ಮಾಡುದಿಲ್ಲ ಅಂತಂತ.
ಮಕ್ಕಳೇ ಇದರಿಂದ ಕಲಿಯೋ ನೀತಿ ಏನಂದ್ರ” ಬುದ್ಧಿವಂತರು ಸಲಹೆ ಕೊಟ್ಟಾಗ ಯಾವಾಗಲು ತಾಳ್ಮೇಯಿಂದ ಕೇಳಬೇಕು”
*****
ವಿ.ಸೂ.: ಮಕ್ಕಳಿಗಾಗಿಯೇ ವಿಶೇಷವಾಗಿ ರೆಕಾರ್ಡ್ ಮಾಡಿರುವ ಸುಮನ್ ದೇಸಾಯಿಯವರ ಧ್ವನಿಯಲ್ಲಿರುವ ಈ ಕತೆ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಕತೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಹಾ ಹಾ ಹಾ ಸುಮನ್ ! ನಿಮ್ಮ ಕು೦ಬಳ ಕಾಯಿ ಕಥೆ ನನ್ನ ಮಕ್ಕಳಿಗೆ ಹೇಳಿದೆ !!! ಬಿದ್ದು ಬಿದ್ದು ನಕ್ಕರು , ಹಾಗೆ ನಿಮ್ಮ ಎಲ್ಲಾ ಬರಹದ ಮಕ್ಕಳ ಕಥೆ ಹೆಳ್ತಿರ್ತಿನಿ ! ಹುಡುಗರು ರಿಲ್ಯಾಕ್ಸ್ ನಾವು ರಿಲ್ಯಾಕ್ಸ್ !ನಿಮಗೆ ನಮ್ಮದೊ೦ದು ಥ್ಯಾ೦ಕ್ಸ್ !
ನಿಮ್ಮ 'ಕೇಳು ಕಥಿ' ಭಾಳ ಚೊಲೋ ಬಂದದರೀ! 🙂