ಕತ್ತಲ ಕೊಳ್ಳದಾಚೆಗೆ: ಪ್ರಶಸ್ತಿ ಪಿ.

 

ಬೈಕಲ್ಲಿ ಹೋಗ್ಬೇಡ, ಒಂದಷ್ಟು ಲೇಟಾದ್ರೂ ಪರ್ವಾಗಿಲ್ಲ. ಬಸ್ಸಿಗೆ ಹೋಗೋ ಅಂತ ಅಮ್ಮ ಹೇಳಿದ ಮಾತ್ನ ಕೇಳ್ಬೇಕಾಗಿತ್ತು ಅಂತ ಬಾಳೇಬರೆ ಘಾಟೀಲಿ ಕತ್ತಲ ರಾತ್ರೇಲಿ ಕೆಟ್ಟ ಬೈಕಿಗೊಂದು ಮೆಕ್ಯಾನಿಕ್ನ ಹುಡುಕೋಕೋದಾಗ್ಲೇ ಅನಿಸಿದ್ದು. ಫ್ರೆಂಡ್ ಮನೆ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಹೊರಟು ಬಿಡ್ಬೇಕಿತ್ತು. ಆದ್ರೆ ಬೈಕಿದ್ಯಲ್ಲ, ಬಸ್ಸು ಹೋದ್ರೆ ಹೆಂಗಾದ್ರೂ ರಾತ್ರೆಗೆ ಮುಟ್ಕೋಬೋದು ಅನ್ನೋ ಧೈರ್ಯವೇ ನಿರ್ಲಕ್ಷ್ಯಕ್ಕೆ ಕಾರಣವಾಗಿ ಊರಲ್ಲೇ ಸಂಜೆಯಾಗೋಗಿತ್ತು. ನಾಳೆ ಹೋಗೋಣ ಅಂದ್ರೆ ಕಾರ್ಯಕ್ರಮವಿದ್ದಿದ್ದೇ ಇವತ್ತು ರಾತ್ರೆ. ಹೋಗ್ಲೇಬೇಕೆನ್ನೊ ಹಟಕ್ಕೆ ಮನೆಯವ್ರು ಅರೆಮನಸ್ಸಿಂದ್ಲೇ ಒಪ್ಪಿದ್ರು. ಜೊತೆಗಿನ್ನಿಬ್ರು ಗೆಳೆಯಂದ್ರು ಬರ್ತಾರೆ ಅನ್ನೋ ಸುಳ್ಳೋ ಅವ್ರು ಅರ್ಧ ಮನಸ್ಸಿಂದ್ಲಾರೂ ಒಪ್ಪೋದಕ್ಕೆ ಕಾರಣವಾಗಿತ್ತೇನೋ. ಒಬ್ನೇ ಹೋಗ್ತಿನಂದ್ರೆ ಗ್ಯಾರಂಟಿ ಬಿಡ್ತಿರಲಿಲ್ವೇನೋ. ಈಗದನ್ನೆಲ್ಲಾ ಯೋಚ್ನೆ ಮಾಡಿ ಪ್ರಯೋಜನವೇನು ? ಮಾಸ್ತಿಕಟ್ಟೆ ದಾಟೋ ಹೊತ್ತಿಗೇ ಸೂರ್ಯ ಇರ್ಲೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಂಗೆ ಒಂಚೂರೇ ಬೆಳಕ ತೋರುಸ್ತಿದ್ದವ ಮುಳುಗಲಾರಂಭಿಸಿದ್ದ. ಆ ಗೇಟಲ್ಲಾದ್ರೂ ಆರ್ಗಂಟೆ ಮೇಲೆ ಯಾರ್ನೂ ಬಿಡಲ್ಲ ವಾಪಾಸ್ ಹೋಗು ಅಂತ ಕಳಿಸಿದ್ರೆ.. ಹೂಂ. ಈಗಂದೇನು ಪ್ರಯೋಜ್ನ ? ಘಾಟಿಯ ಬುಡದಲ್ಲಿ ಸಿಕ್ಕಾಗಿದೆ. ಒಂದೋ ಹೆಂಗಾದ್ರೂ ಮಾಡಿ ಈ ಘಾಟಿ ದಾಟಿದ್ರೆ ಅದ್ರ ಆಚೆಗಿರೋ ದೇವಸ್ಥಾನದ ಬಳಿ ತಲುಪಬಹುದು ಇಲ್ಲಾ ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಾಸ್ ತಳ್ಳಿದ್ರೆ ಯಾವ್ದಾದ್ರೂ ಹಳ್ಳಿ ಸಿಕ್ಕು ಅಲ್ಲಿ ಯಾರಾದ್ರೂ ಗಾಡಿ ಪಡೆದು ಹತ್ತಿರದೂರ ಮೆಕ್ಯಾನಿಕ್ಕ ಹುಡುಕಬಹುದು. ಟ್ರೆಕ್ಕಿಂಗಿಗೆ ಅಂತ ಹೋದಾಗ ಬೆಟ್ಟದ ಮೇಲೆ ಬರೀ ಟೆಂಟಲ್ಲಿ ಒಂದು ರಾತ್ರೆ ಕಳೆದಿತ್ತಾದ್ರೂ ಊರಿಗೆ ತೀರಾ ಸಮೀಪದಲ್ಲಿ ಹೀಗೆ ಯಾವ್ದೋ ಹಳ್ಳಿಯಲ್ಲೋ , ದೇವಸ್ಥಾನದಲ್ಲೋ ರಾತ್ರಿ ತಂಗಬೇಕಾದ ಪರಿಸ್ಥಿತಿ ಬರಬಹುದೆಂಬ ಕಲ್ಪನೆ ಖಂಡಿತಾ ಇರಲಿಲ್ಲ. ಹಳ್ಳಿಯೋ ದೇವಸ್ಥಾನವೋ ತಲುಪಿದ್ರೆ ಅದು ದೊಡ್ಡ ಮಾತೇ.ಈ ಜಾಗ್ದಲ್ಲಿ ನಕ್ಸಲೈಟುಗಳು , ಆನೆಗಳು, ಕಾಡುಕೋಣಗಳೆಲ್ಲಾ ಇದ್ದಾವೆ ಅಂತ ಯಾರೋ ಹೇಳಿದ ನೆನಪು. ಅಚಾನಕ್ಕಾಗಿ ಯಾವ್ದೋ ನಕ್ಸಲೈಟ್ ಬಂದು ಕೋವಿ ತೋರಿಸೋ ಮೊದ್ಲು, ಆನೆಯೋ , ಕಾಡುಕೋಣವೋ ಬಂದು ಪ್ರಪಾತಕ್ಕೆ ತಳ್ಳೋ ಮೊದ್ಲು ಈ ಗವ್ವೆನ್ನೋ ಕತ್ತಲೆಯಿಂದ ಪಾರಾದ್ರೆ ಸಾಕೆನಿಸ್ತಾ ಇದೆ.

ಗಾಡಿ ಚೆನ್ನಾಗಿ ಓಡ್ತಿದ್ದ ತನಕ, ಲೈಟಾನಾಗಿದ್ದ ತನಕ ಈ ಯಾವ ಭಾವಗಳೂ ಇರ್ಲಿಲ್ಲ. ಸಂಜೆ ಕಂಡ ಸೂರ್ಯಾಸ್ತ, ಕೆಂಪಾಗ್ತಿದ್ದ ಭಾನು ಎಲ್ಲಾ ಅತ್ಯದ್ಭುತವಾಗಿ ಕಾಣ್ತಿದ್ವು. ಆದ್ರೆ ಅದಾಗಿ ಹದಿನೈದು   ನಿಮಿಷಗಳಲ್ಲೇ ಈ ಘಾಟಿ ಸಿಕ್ತು ನೋಡಿ. ಮರಗಳ ಮರೆಯಲ್ಲಿ ಸೂರ್ಯನ ಬಿಸಿಲೂ ನೆಲ ತಲುಪಲಾಗ್ದೇ ಹಗಲಲ್ಲೂ ನಸುಗತ್ತಲಿರುವಂತ ಜಾಗ ಅದು. ಇದ್ದಲ್ಪ ಸ್ವಲ್ಪ ಚಂದ್ರನ ಬೆಳಕು ಮರಗಳ ಮರೆಯ ಹಿಂದೆ ಅಲ್ಲಲ್ಲಿ ಕಣ್ಣಾಮುಚ್ಚಾಲೆಯಾಡ್ತಾ , ರಸ್ತೆ ತಲುಪಬೇಕೋ ಬೇಡ್ವೋ ಅನ್ನೋ ಯೋಚನೆಯಲ್ಲಿರುವಾಗ್ಲೇ ಬೈಕ್ ಕೈ ಕೊಟ್ಟಿತ್ತು. ಬೈಕಿಲ್ಲ ಅಂದ್ರೆ ಬೆಳಕಿಲ್ಲ. ಬೆಳಕಿಲ್ಲ ಅಂದ್ರೆ , ಒಬ್ಬನೇ ಬೇರೆ ಆಗಿರುವಾಗ ಇದ್ದ ಚೂರು ಪಾರು ಧೈರ್ಯವೂ ಕೊಂಚ ಹೊತ್ತಲ್ಲೇ ಉಡೀಸ್. ಮೊಬೈಲಿದ್ದಿದ್ದು ಹೌದಾದ್ರೂ ಅದ್ರಲ್ಲಿ ನೆಟ್ವರ್ಕಿಲ್ಲ. ಅದ್ರ ಬೆಳಕಲ್ಲಿ ಒಂದೆರಡು ಮಾರು ಮುಂದೆ ಕಾಣ್ತಿದ್ರೂ ಅದ್ನೇ ನಂಬಿಕೊಂಡು ಕಳೆಯೋ ಹಂಗಿಲ್ಲ. ಗಾಡಿಯಿಲ್ಲೇ ಇಟ್ಟು ಮೇಲೋ ಕೆಳಗೋ ನಡೆದು ಹೋಗಿ ಯಾರನ್ನಾದ್ರೂ ಕರೆತರೋಣ ಅನಿಸ್ತೊಮ್ಮೆ. ಮನೆ ಮುಂದೆ ನಿಲ್ಸಿದ ಗಾಡೀನೆ ಮಾಯವಾಗುತ್ತಂತೆ ಪೇಟೇಲಿ. ಅಂತದ್ರಲ್ಲಿ ಇಲ್ಲಿಡೋದು ಸೇಫಾ ಅನ್ನಿಸಿಬಿಡ್ತು. ಕೆಳಗೆ ಹೋಗಿದ್ರೆ ಹದಿನೈದು ನಿಮಿಷದ ಬೈಕ ಹಾದಿ ಅಥವಾ ತಳ್ಳೋರಿಗೆ ಮುಕ್ಕಾಲು ಘಂಟೆಯ ಹಾದಿಯಲ್ಲೊಂದು ಹಳ್ಳಿ ಸಿಗ್ತಿತ್ತು. ಅದೃಷ್ಟವಿದ್ರೆ ಅಲ್ಲಿಂದ ಹೆಂಗಾದ್ರೂ ಗಾಡಿ ರಿಪೇರಿಯಾಗಿ ಮಧ್ಯರಾತ್ರಿವೊಳ್ಗೆ ಮನೆಗೂ ತಲುಪಬಹುದಿತ್ತೇನೋ. ಆದ್ರೆ ಒಬ್ನೆ ಹೋಗಿದ್ದು, ಗಾಡಿ ಕೆಟ್ಟಿದ್ದು, ಮಾತು ಕೇಳದಿದ್ದಿದ್ದು ಎಲ್ಲದಕ್ಕೂ ಸೇರ್ಸಿ ಬೈಸ್ಕೊಳ್ಳಬೇಕಾಗ್ತಿತ್ತು. ಅತ್ತ ನಾ ಹೇಳೋದೆಲ್ಲ ಸುಳ್ಳು ಅಂತ ಕಾರ್ಯಕ್ರಮಕ್ಕೆ ಬರದ ಬೇಸರದಲ್ಲಿ ಫ್ರೆಂಡರ್ತಾನೂ ಬೈಸ್ಕೊಳ್ಳಬೇಕಾಗಿತ್ತು. ಅದ್ರ ಬದ್ಲು ಈ ದೇವಸ್ಥಾನದ ಕಡೆ ಹೊಂಟ್ರೆ ದೇವಸ್ತಾನದ ಘಾಟಿಯಾಗಿ ಹತ್ತು ಕಿ.ಮೀಗೆ ಸ್ನೇಹಿತನ ಊರು. ಹಂಗಾಗಿ ಅತ್ತ ಹೇಗೋದೇ ಕ್ಷೇಮ ಅನಿಸ್ತು. ಅದೃಷ್ಟ ಚೆನ್ನಾಗಿದ್ರೆ ದೇವಸ್ಥಾನದತ್ರ ಯಾವ್ದಾದ್ರೂ ಗಾಡಿ ಸಿಕ್ಕು ಒಂದರ್ಧ ಘಂಟೆ ಲೇಟಾಗಾದ್ರೂ ಅವ್ನ ಮನೆಗೆ ತಲುಪೋ ಸಾಧ್ಯತೆಯಿತ್ತು.   ಹಂಗಾಗಿ ಘಾಟಿ ಕೊನೆಯ ದೇವಸ್ಥಾನದ ಕಡೆಗೆ ತಳ್ಳೋದೇ ಕ್ಷೇಮ ಅನಿಸ್ತು. ಅದ್ರೆ ಮುಂದಿದ್ದ ದೇವಸ್ಥಾನಕ್ಕೆ ಈಗಿರೋ ಜಾಗದಿಂದ ಎಷ್ಟು ದೂರ ಅಂತ ನಿಖರವಾಗಿ ಗೊತ್ತಿಲ್ವೇ . ಅಷ್ಟರಲ್ಲೇ ಮತ್ತೊಂದು ಯೋಚ್ನೆ ಹೊಳಿತು. ಆ ಕಡೆ, ಈ ಕಡೆಯಿಂದ ಯಾವ್ದಾದ್ರೂ ಗಾಡಿ ಬರ್ಬೋದು ಅಂತ ಕೆಟ್ಟೋದ್ಗಾಡಿ ಸೈಡಿಗಾಕಿ ಕಾಲ್ಗಂಟೆ ಕಾದ್ರೂ ಗಾಡಿಯಿರ್ಲಿ ಅದ್ರ ಸದ್ದೂ ಇಲ್ಲ. ಕಗ್ಗತ್ತಲ ರಾತ್ರೀಲಿ ಕಪ್ಪೆಗಳ ಸದ್ದು , ಜೀರುಂಡೆಯ ಸದ್ದು, ಚಿಟ್ಚಿಟ್ ಚಿಟ್ಚಿಟ್ ಚಿಟ್ ಚೀಟ್ ಚೀಟ್ ಚೀಟ್.. ಹೀಗೆ ಎಲ್ಲೆಲ್ಲೋ ಕೇಳಿದ್ದ ಹಲವು ಸದ್ದುಗಳ ಕಲಸುಮೇಲೋಗ್ರವಾಗಿ ನಾನಾ ತರಹದ ಸಂಗೀತ ಗೋಷ್ಟಿ ನಡೆಸಿದಂತೆ ಕೇಳಿಬಂದು , ಪ್ರತೀ ಪುನರಾವರ್ತನೆಯೂ ಹೇಗಾದ್ರೂ ಇಲ್ಲಿಂದ ಹೊರಡು, ಅಪಾಯ, ಅಪಾಯ ಅಂತ ಕೂಗಿದಂತಾಗ್ತಿತ್ತು. ಈ ಘಾಟಿಯಲ್ಲಿ ಮೇಲೇರಿ ದೇವಸ್ಥಾನದ ಬಳಿಗೋ ಅಥವಾ ಮುಂಚೆ ಅಂದ್ಕೊಂಡ ಹಾಗೆ ಹಿಂದೆ ಸಾಗಿ ಯಾವ್ದಾದ್ರೂ ಹಳ್ಳಿ ತಲುಪೋದನ್ನೋ ಮೊದ್ಲು ಮಾಡ್ಲೇ ಬೇಕು. ಇಲ್ಲಿರೋ ಹಂಗೆಂತೂ ಇಲ್ಲ ಅನಿಸೋ ಪರಿಸ್ಥಿತಿ ಬರೋಕಿಡೀತು. 

ಕೊಡಚಾದ್ರಿಗೆ ಹೋದಾಗ ಒಂದೇ ದಿನ ಮೂವತ್ತು ಕಿ.ಮಿ ನಡೆದಿದ್ದು, ಕೇರಳದತ್ರ ಹೈಕಿಂಗ್ ಅಂತ ಎರಡು ದಿನದಲ್ಲಿ ಮೂವತ್ತಾರು ಕಿ.ಮಿ ನಡೆದವನಿಗೆ, ಸಣ್ಣೋನಿದ್ದಾಗ ಊರಲ್ಲಿ ದಿನಾ ಶಾಲೆಗೆಂದು ದಿನಾ ಎಂಟು ಕಿ.ಮಿ ನಡೆಯುತ್ತಿದ್ದವನಿಗೆ ನಡೆಯೋದೊಂದು ದೊಡ್ಡ ವಿಷಯವಾಗಿರ್ಲಿಲ್ಲ. ಆದ್ರೆ ಅದು ನಮ್ಮ ಊರಾಗಿತ್ತು, ಇಲ್ಲಾ ಜೊತೆಗೊಂದಿಷ್ಟು ಜನರಿರ್ತಿದ್ರು,  ಇಲ್ಲಾ ದೂರದ ನಿಖರ ಕಲ್ಪನೆಯಿರ್ತಿತ್ತು, ಇಲ್ಲಾ ಹಗಲಾಗಿರ್ತಿತ್ತು, ಬೆನ್ನಿಗೆ ಬೆಚ್ಚನೆಯ ಬಟ್ಟೆಗಳು, ಹೊಟ್ಟೆಗೊಂದಿಷ್ಟು ಕೂಳಿರ್ತಿತ್ತು. ಆದ್ರೆ ಅದ್ಯಾವ್ದೂ ಇಲ್ಲದ ಅನಿಶ್ಚಿತತೆಯಿದ್ಯಲ್ಲ ಅದೇ ಅನ್ಸತ್ತೆ ಈ ಘಾಟೀಲಿ ಅದೇನೋ ಒಂಥರದ ಅನಿರ್ವಚನೀಯ ಭಯ ಹುಟ್ಟೋಕೆ ಕಾರಣವಾಗಿದ್ದು. ಸಂಜೆಯ ಹೊತ್ತಿಗೆ ಹೊರಟಿದ್ದಕ್ಕೆ ಒಂದು ಜರ್ಕೀನಿದ್ದ ಕಾರಣ ಚಳಿಯ ಕಾಟ ಅಷ್ಟಿರದಿದ್ರೂ ಅದ್ರ ಪ್ರಭಾವ ಲೈಟಾಗಿ ಗೊತ್ತಾಗ್ತಾ ಇತ್ತು. ಏನಾದ್ರಾಗ್ಲಿ ಅನ್ನೋ ಹುಚ್ಚು ಧೈರ್ಯ ಮಾಡಿ ದೇವಸ್ಥಾನದತ್ತ ಗಾಡಿ ತಳ್ಳತೊಡಗಿದೆ. 

ಶಾಲಾದಿನಗಳಲ್ಲಿ ಕೇಳಿದ ದೆವ್ವದ ಕತೆಗಳೆಲ್ಲಾ ಈಗ್ಲೇ ನೆನಪಾಗ್ಬೇಕೆ ? ಕೊಳ್ಳಿದೆವ್ವ, ಮೋಹಿನಿ , ಹಿಂದಿ ಧಾರಾವಾಹಿಗಳಲ್ಲಿ ನೋಡಿದ್ದಂತಹ ಬಿಳಿಸೀರೆಯ ದೆವ್ವಗಳು ಎದುರಾದ್ರೆ ಏನ್ಲಾಡ್ಲಿ ಅನುಸಿ ತಳ್ಳುತ್ತಿದ್ದ ಗಾಡಿಯ ಭಾರದಲ್ಲೂ ಒಮ್ಮೆ ಕೈ ನಡುಗಿದ್ವು. ಘಟ್ಟದ ಕೆಳಗಿನ ಭೂತಾರಾದನೆ, ನಾಗಪಾತ್ರಿಗಳು, ದಯ್ಯಗಳು ನೆನಪಾಗಿ ಭಯ ಮೈ ಮತ್ತೊಂದಿಷ್ಟು ಇಮ್ಮಡಿಸ್ತು. ಎಷ್ಟೇ ಧೈರ್ಯ ,ಸಾಲದೆಂಬಂತೆ ಕಾಡಿನ ಸದ್ದಿನ ಮಧ್ಯೆ ಎಲ್ಲಿಂದ್ಲೋ ನಾಯಿ ಊಳಿಡೋ ಸದ್ದು ಕೇಳುಸ್ತು, ನಾಯಿಯಿದೆ ಅಂದ್ರೆ ಇಲ್ಲೇ ಹತ್ತಿರದಲ್ಲಿ ಯಾವ್ದೋ ಊರಿರಬೇಕು. ಇಲ್ಲಾ ದೇವಸ್ಥಾನ ಹತ್ತಿರ ಬಂದಿರಬೇಕು ಅನ್ನೋ ಧೈರ್ಯ ಮೂಡಿ ಸುತ್ತೆಲ್ಲಾ ಕಣ್ಣು ಹಾಯಿಸಿದ್ರೂ ಎಲ್ಲೂ ಬೆಳಕಿನ ಲಕ್ಷಣ ಕಾಣಲಿಲ್ಲ. ಎಲ್ಲೆಡೆ ಹಿಂದಿನಂತೆ ಕತ್ತಲೇ ಕತ್ತಲು. ಸದ್ಯದಲ್ಲೇ ಏನಾದ್ರೊಂದು ಸಿಗಬಹುದಂತಾ ಮತ್ತೊಂದಿಷ್ಟು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದೆ. ಸ್ವಲ್ಪ ಹೊತ್ತಿನಲ್ಲಿ ಮತ್ತದೇ ನಾಯಿಯ ಊಳಿಡೋ ಸದ್ದು. ತಿರುಗಿ ನೋಡಿದೆ. ಹಿಂದೆಲ್ಲೂ ಯಾವ ನಾಯಿಯೂ ಕಾಣಲಿಲ್ಲ. ಹಿಂದಿನ ವರ್ಷ ಟ್ರಿಪ್ಪಿನ ಸಮಯದಲ್ಲಿ ನಮ್ಮ ಜೀಪಿಗೆ ಸಿಕ್ಕು ಸತ್ತಿದ್ದ ನಾಯಿಯೇನಾದ್ರೂ ಈಗ ಭೂತವಾಗಿ ಬಂದು ನನ್ನ ಹಿಂಬಾಲಿಸ್ತಿದ್ಯ ಅನ್ನೋ ಭಾವ ಕಾಡಿ ಆ ಚಳಿಯಲ್ಲೂ ಮೈಬೆವರೋಕೆ ಶುರುವಾಯ್ತು. ಹಂಗೇನಾದ್ರೂ ಆಗಿದ್ರೆ ಅದು ಬಂದು ಕಚ್ಚೋದ್ರೊಳಗೆ ಈ ಘಾಟಿಯಿಂದ ಪಾರಾಗಿಬಿಡ್ಬೇಕು ಅಂತ ಮತ್ತಷ್ಟು ಚುರುಕಾಗಿ ಗಾಡಿ ತಳ್ಳಲು ಶ್ರಮ ಹಾಕಿದೆ. ಆದ್ರೆ ನಾನು ಹೋಗಬೇಕೆಂದಂಗೆ ಹೋಗೋಕೇನು ಸಮತಟ್ಟಾದ ರೋಡೇ ಅದು ? ಆನಾದ ಗಾಡಿಯೇ ಎತ್ತಿನ ಗಾಡಿಯಂತೆ ಕುರ್ರೋ ಮರ್ರೋ ಅಂತ ಕೂಗುತ್ತಾ ಹತ್ತೋ ಸ್ಥಳ ಅದು. ಅಂತದ್ರಲ್ಲಿ ಗಾಡಿಯನ್ನ ತಳ್ಳೋದು ಅಂದ್ರೆ.. ರಟ್ಟೆಯೆಲ್ಲಾ ಬಿದ್ದು ಹೋದಾಗಾಗ್ತಿತ್ತು. ಕೆಲ ಹೆಜ್ಜೆ ಬರೋ ಹೊತ್ತಿಗೆ ಅದು ಭೂತವಾಗಿದ್ರೆ ಅದು ಹಿಂಬಾಲಿಸಿಕೊಂಡು ಬರ್ಬೇಕಾ  ?ನಾನಿದ್ದಲ್ಲೇ ಬಂದು ಕಚ್ಚಬಹುದಿತ್ತಲ್ವಾ ? ಅದಕ್ಕಾಗಿ ಹೆದರಿ ಓಡೋದ್ರಲ್ಲಿ ಅರ್ಥವಿಲ್ಲ. ಹೋಗ್ತಿದ್ದ ಹಾಗೆ ಆರಾಮವಾಗೇ ಹೋಗು ಅಂದಿತು ವಿವೇಕ. ಇದು ಆತ್ಮವೇ ಆಗಿದ್ರೆ ಕಳೆದ ತಿಂಗಳು ತೀರಿಹೋದ ನನ್ನ ಮೆಚ್ಚಿನ ಪಪ್ಪಿಯ ಆತ್ಮವೇಕಾಗಿರಬಾರ್ದು ? ಒಬ್ಬಂಟಿಯಾಗಿರೋ ನನಗಿಲ್ಲಿ ದಾರಿ ತೋರಲೇಕೆ ಬಂದಿರಬಾರದು ಅಂತ್ಲೂ ಅನಿಸಿ ಧೈರ್ಯವೂ ಬಂತು. ಅದೇ ಧೈರ್ಯದಲ್ಲಿ ಒಂದು ತಿರುವು ದಾಟ್ತಿದ್ದ ಹಾಗೆ ಅದೇನೋ ಕಪ್ಪನೆ ಆಕಾರ ಎದುರು ಬಂದದ್ದು ಮೊಬೈಲ ಮಸುಕು ಬೆಳಕಲ್ಲೂ ಕಾಣ್ತು !

ದಿಟ್ಟಿಸಿ ನೋಡ್ತಿದ್ರೆ ಬಾವ್ಲಿಗಳು. ಯಾರಪ್ಪಾ ನನ್ನ ದಾರಿಗೆ ಅಡ್ಡ ಬಂದೋರು ಅಂದ್ಕೊಂಡಿದ್ದೆ. ಆದ್ರೆ ಅವುಗಳ ದಾರಿಗೆ ಅಡ್ಡಬಂದವ ನಾನೇ ಆಗಿ ಅವೂ ಗಲಿಬಿಲಿಗೊಂಡು ತಮ್ಮ ಪಥ ಬದಲಿಸಿ ಹಾರಿಹೋಗಿದ್ವು. ಛಲ, ಧೈರ್ಯ ಅಂತ ಎಷ್ಟೆಲ್ಲಾ ಇದ್ರೂ ಹಿಂಗೆ ಕಗ್ಗತ್ತಲ, ಒಂಟಿ ಪಯಣದ ರಾತ್ರಿಲಿ ಬಾವಲಿಗಳು ಮುಖಕ್ಕೇ ಮುತ್ತಿಕ್ಕುವಂತೆ ಹಾರಿಹೋದ್ರೆ ಯಾರಿಗಾದ್ರೂ ಭಯವಾಗ್ದೇ ಇರುತ್ತಾ ? ಈ ಬಾವ್ಲಿಗಳ ಬದ್ಲು ಮುಂದಿಂದ ಕಾರೋ, ಲಾರಿಯೋ ಬಂದು ಅವುಗಳ ಬೆಳಕಿಗೆ ನಾನು ಪಕ್ಕನೆ ಕಾಣದೇ ಹೋಗಿ ನನ್ನ ಮೇಲೇ ಹತ್ತಿಸಿಬಿಟ್ಟಿದ್ರೆ ಅಂತನಿಸಿ ಮತ್ತೊಮ್ಮೆ ಭಯವಾಯ್ತು. ಆದ್ರೆ ದೇವರು ದೊಡ್ಡವ. ಅಂತದ್ದೇನು ಆಗಿರಲಿಲ್ಲ !  ಅಂತೂ ಕೇಳುತ್ತಿದ್ದ ಪ್ರತೀ ಸದ್ದಿಗೂ ಪ್ರಸ್ತುತ, ಭೂತ, ಭವಿಷ್ಯಗಳಲ್ಲಿ ಬರಬಹುದಾದ ಘಟನೆಗಳ ತಳುಕು ಹಾಕುತ್ತಾ ಒಂದೊಂದೇ ತಿರುವುಗಳ ದಾಟುತ್ತಿರುವಾಗ ಎದುರಿಗೇನೋ ಬೆಳಕು ಕಂಡ ಹಾಗಾಯ್ತು. 

ಗಾಡಿ ತಳ್ಳುತ್ತಾ ಸುಮಾರು ನಲವತ್ತು ನಿಮಿಷವಾಗಿದ್ದರಿಂದ ಮೈಯೆಲ್ಲಾ ಬೆವರಲ್ಲೇ ಒದ್ದೆಯಾಗಿಹೋಗಿತ್ತು. ಅಂತಾ ಪರಿಸ್ಥಿತಿಯಲ್ಲಿ ಬೆಳಕ ಕಂಡು ಕೊನೆಗೂ ದೇವಸ್ಥಾನ ಬಂದುಬಿಟ್ಟಿತಾ ಅನ್ನೋ ಖುಷಿಯಲ್ಲಿ ತಿರುವ ದಾಟಿದ್ರೆ ಮುಂದೆ ಕಂಡ ದೃಶ್ಯ ಬೇಸರ, ಸಂತಸಗಳನ್ನ ಒಟ್ಟಿಗೇ ತಂದಿತ್ತು. ಎದುರಿಗೆ ಯಾವುದೋ ಪಾಳು ಗ್ಯಾರೇಜೊಂದು ಕಂಡ ಹಾಗೆ. ಮುಂಚೆ ಕಂಡ ಬೆಳಕು ಅದರೊಳಗಿದ್ದ ಸೀಮೆಯೆಣ್ಣೆ ಲಾಂದ್ರದಿಂದ್ಲೇ ಬರ್ತಾ ಇದ್ದಿದು. ಆದ್ರೆ ಆ ಲಾಂದ್ರದ ಬೆಳಕಲ್ಲಿ ಗ್ಯಾರೇಜನ್ನ ಬಾಗ್ಲು ಹಾಕ್ತಾ ಇರೋ ತರ ಕಾಣ್ತು. ಏ, ತಡೀರಿ ತಡೀರಿ. ಒಂದ್ಮಿನಿಷ ಸಾರ್ ಅಂತ ಕೂಗಿದ್ರೂ ಬಾಗ್ಲು ಹಾಕ್ತಿದ್ದ ಆಕಾರ ಈ ಕಡೆ ತಿರುಗಲಿಲ್ಲ. ಇನ್ನು ನೋಡೋದೇನು, ಮಾಡೋದೇನು ? ಇಷ್ಟು ಕಾಡಿನಲ್ಲಿ ಇಷ್ಟೊತ್ತಿನ ತನಕ ಗ್ಯಾರೇಜಲ್ಲಿ ಏನ್ಮಾಡ್ತಿದ್ದಾನೆ ಅಂತೆಲ್ಲಾ ಯೋಚಿಸ್ತಾ ಕೂರೋಕೆ ಸಮಯವಿಲ್ಲ.   ಕಾರಿರುಳಲ್ಲಿ ಆಪದ್ಭಾಂದವನ ತರಹ ಸಿಕ್ಕಿದ್ದಾನೆ ಇವ. ಅವ್ನತ್ರ ಮಾತಾಡುವಾಗ ಎಲ್ಲಾ ಮಾಹಿತಿ ಕೇಳ್ಬೋದು. ಆದ್ರೆ ಅವ ಅಂಗ್ಡಿ ಬಾಗ್ಲು ಹಾಕಿ ಮುಂದೆಲ್ಲಾದ್ರೂ ಕೊರಕಲುಗಳಲ್ಲಿ ಇಳ್ದು ಮಾಯವಾದ್ರೆ ಕತೆಯೇನು ಅನ್ನೋ ಆಲೋಚನೆಯಲ್ಲಿ ಇದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಆ ಗ್ಯಾರೇಜಿನತ್ತ ಗಾಡಿಯೊಂದಿಗೆ ಓಡಿದೆ. 

ಗ್ಯಾರೇಜೆಂದ್ರೆ ಗ್ಯಾರೇಜಲ್ಲ ಅದು. ಒಂದಿಷ್ಟು ಇಟ್ಟಿಗೆಗಳ ಮೇಲೆ ನಾಲ್ಕು ಬೊಂಬಿಟ್ಟು ತಲೆಗೆ ಒಂದಿಷ್ಟು ಸೋಂಗೆ ಹೊದಿಸಿದ ಆಕಾರವಷ್ಟೆ. ಇರದಿದ್ದ ಹಂಚು, ಕಿತ್ತು ಬೀಳುತ್ತಿದ್ದ , ಇದ್ದೂ ಇರದಂತಿದ್ದ ಸುಣ್ಣ ಇದರ ಇದ್ದಿರಬಹುದಾದ ಹಳೇ ವೈಭವವನ್ನು ಸಾರಿ ಹೇಳುವಂತಿದ್ದವು. ಯಾರಪ್ಪಾ ಇದು , ಈ ರಾತ್ರಿ ಹೊತ್ತಲ್ಲಿ ಅನ್ನುವಂತೆ , ನನ್ನ ಕೂಗುವಿಕೆಗೆ ಉತ್ತರಿಸಲೋ ಏನೋ ಎನ್ನುವಂತೆ ನನ್ನತ್ತ ತಿರುಗಿದ ಬೀಗ ಹಾಕುತ್ತಿದ್ದ ವ್ಯಕ್ತಿ. ಒಕ್ಕಣ್ಣ ಶುಕ್ರಾಚಾರಿ ಅಂತ ಕೇಳಿದ್ದನ್ನು ನೆನಪಿಸುವಂತಿದ್ದ ಅವನ ಒಂಟಿ ಕಣ್ಣುಗಳು ಆ ರಾತ್ರಿಯಲ್ಲಿ ಯಾರಿಗಾದ್ರೂ ಭಯ ಹುಟ್ಟಿಸೋದೇ. ಆದ್ರೆ ಹಿಂದಿನೊಂದು ಘಂಟೆಯ ಸಮಯದಲ್ಲಿ  ಭಯದ ಹಲವು ಕಲ್ಪನೆಗಳ ದಾಟಿ ಬಂದಿದ್ದ ನನಗೆ ಅವನನ್ನು ಕಂಡ್ರೆ ಭಯ ಮೂಡೋ ಬದ್ಲು ಆಪದ್ಭಾಂಧವನೆನ್ನುವಂತೆ, ಎಲ್ಲೋ ಕಂಡ ಆತ್ಮೀಯನೆಂಬಂತೆ ವಿಶ್ವಾಸ ಮೂಡಿ ಹೋಯ್ತು. ಗಾಡಿ ಕೆಟ್ಟಿರೋದ ತಿಳಿಸಿ , ರಿಪೇರಿ ಮಾಡಿ ಕೊಡಬೇಕಾಗಿ ವಿನಂತಿಸಿದೆ.  ಏನಾಗಿದ್ಯೋ ಏನೋ, ಇದನ್ನ ರಿಪೇರಿ ಮಾಡೋಕೆ ಬೇಕಾಗಿದ್ದು ನನ್ನ ಗುಡಿಸ್ಲಲ್ಲಿ ಸಿಗತ್ತೋ ಇಲ್ವೋ, ಅಷ್ಟ್ರಲ್ಲೂ ಈಗ್ಲೇ ರಾತ್ರಿಯಾಗ್ತಾ ಬಂತು. ಇನ್ನು ರಿಪೇರಿ ಮಾಡ್ಸಿ ಏನ್ಮಾಡ್ತೀರಿ. ಕೆಳಗೇ ನಮ್ಮ ಮನೆ ಇದೆ. ಬಂದು ಉಳಿದು , ನಾಳೆ ರಿಪೇರಿ ಮಾಡ್ಸಿಕೊಂಡು ಹೋಗ್ಬೋದು ಅಂದ ಅವ ಘಟ್ಟದ ಕೆಳಗಿನ ಭಾಷೇಲಿ. 

ಇಲ್ಲ, ನನ್ನ ಸ್ನೇಹಿತನ ಮನೆ ಫಂಕ್ಷನ್ ಇದೆ. ಇವತ್ತು ರಾತ್ರಿಗೆ ನಾ ಹೆಂಗಾದ್ರೂ ಅಲ್ಲಿ ಮುಟ್ಲೇಬೇಕು. ದುಟ್ಟೆಷ್ಟಾದ್ರೂ ಪರ್ವಾಗಿಲ್ಲ. ರಿಪೇರಿ ಆಗ್ದಿದ್ರೂ ಪರ್ವಾಗಿಲ್ಲ. ಒಂದ್ಸಲ ನೋಡಿ ಅಂತ ಗೋಗರದ್ಮೇಲೆ ಅವನ ಮನ ಕರಗಿದಂತೆ ಕಾಣುಸ್ತು. ಅರ್ಧ ಹಾಕಿದ್ದ ಅವನ ಗ್ಯಾರೇಜಿನ ಬಾಗಿಲು ತೆಗ್ದು ಗಾಡಿ ರಿಪೇರಿಯ ಕಾಯಂ ಹತಾರಗಳ ಹೊರತೆಗ್ದ. 

ಅಂತೂ ಹದಿನೈದು ನಿಮಿಷಕ್ಕೆ ಗಾಡಿ ರಿಪೇರಿಯಾಯ್ತು. ದುಡ್ಡು ಎಷ್ಟು ಅಂದ್ರೆ ಅವ ಹೇಳೋಕೆ, ತಗೊಳ್ಳೋಕೆ ಸುತರಾಂ ಒಪ್ಲಿಲ್ಲ. ನಿಮ್ಮ ಗೆಳೆಯನ ಮನೆ ಕಾರ್ಯಕ್ರಮ ಹೇಳುತ್ರಿ. ನಿಮಗೆ ಅನಿವಾರ್ಯ ಆಯಿತ್ತು ಹೇಳಿ ನಾನು ರಿಪೇರಿ ಮಾಡ್ಕೊಟ್ಟಿದ್ದು ಬಿಟ್ರೆ ದುಡ್ಡಿಗಾಗಿ ಅಲ್ಲ. ನಿಮ್ಗೆ ದುಡ್ಡು ಕೊಡ್ಲೇಬೇಕಿತ್ತು ಹೇಳಿದ್ರೆ ಮುಂದೆ ಸಿಗೋ ಚಂಡಿಕಾಂಬನ ಹುಂಡಿಗೆ ನನ್ನ ಹೆಸ್ರು ಹೇಳಿ ನಿಮ್ಮ ಮನ್ಸಿಗೆ ಕಾಂಬಷ್ಟು ಕಾಣ್ಕೆ ಹಾಕಿ ಹೋಯಿನಿ. ಹಾಕ್ದಿದ್ರೂ ಬೇಜಾರಿಲ್ಲೆ ಹೋಯ್. ಜ್ವಾಪಾನ್ವಾಗ್ ಹೋಯಿ ಬನ್ನಿ ಆಯ್ತಾ. ನಿಮ್ಗೆ ಒಳ್ಳೆದಾಗ್ಲಿ ಅಂದ. ಆಯ್ತು ಅಂತ ಸ್ಟಾರ್ಟಾದ ಗಾಡೀಲಿ ಮುಂದೆ ಬಂದವನಿಗೆ ಒಂದು ತಿರುವು ದಾಟಿದ ಮೇಲೆ ಅವ್ನ ಹೆಸ್ರೆಂತ ಅಂತ ಕೇಳ್ಲೇ ಇಲ್ಲವ ಅನಿಸ್ತು. ಗಾಡಿ ತಿರುಗ್ಸಿ ವಾಪಾಸ್ ಬಂದ್ರೆ ಗ್ಯಾರೇಜತ್ರ ಪೂರ್ಣ ಕತ್ತಲೆ. ರಿಪೇರಿ ಮಾಡ್ಕೊಟ್ಟವನ, ಅವನ ಲಾಂದ್ರದ ಬೆಳಕ ಸುಳಿವೂ ಹತ್ರದಲ್ಲೆಲ್ಲೂ ಕಾಣ್ತಿರಲಿಲ್ಲ. ಇಷ್ಟು ಬೇಗ ಎಲ್ಲಿ ಮಾಯ ಆದ್ನಪ್ಪ ಅನ್ನೋ ಆಶ್ಚರ್ಯದಲ್ಲೇ ಅವ್ನಿಗೆ ಮತ್ತೊಂದು ಧನ್ಯವಾದ ಹಾಕಿ ಮುಂದೆ ಸಾಗಿದೆ. ನಾಲ್ಕೈದು ನಿಮಿಷ ಸಾಗುವಷ್ಟರಲ್ಲೇ ಚಂಡಿಕಾಂಬ ದೇಗುಲ ಸಿಗ್ತು. ಗರ್ಭಗುಡಿಯ ಬಾಗ್ಲು ಹಾಕಾಗಿದ್ದ ಕಾರಣ ಹೊರಗಿದ್ದ ಕಾಣಿಕೆ ಹುಂಡಿಗೆ ಒಂದಿಷ್ಟು ಕಾಣಿಕೆ ಹಾಕಿ ಕೊನೆಗೂ ಒಬ್ಬ ಸಿಕ್ಕಿದ ಖುಷಿಗೆ ಧನ್ಯವಾದ ಅರ್ಪಿಸಿ ಗೆಳೆಯನ ಮನೆಯತ್ತ ಸಾಗಿದೆ. ಅಲ್ಲಿ ಅವನ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದು ಊಟಕ್ಕೆ ಕೂತಿದ್ರು. ಸಂಜೆಗೆ ಬಾರೋ ಅಂದ್ರೆ ರಾತ್ರೆಗಾದ್ರೂ ಬಂದ್ಯಲ್ಲ ಅನ್ನೋ ಬಯ್ಗುಳದ ಜೊತೆಗೆ ಒಳ್ಳೆಯ ಭೋಜನದ ಸವಿಯಲ್ಲಿ ಕಾಯ್ತಾ ಇತ್ತು. ಯಾಕೆ ಲೇಟಾಯ್ತು ಅನ್ನೋ ಪ್ರಶ್ನೆಗೆ ಗಾಡಿ ಕೆಟ್ಟಿದ್ರ ಕತೆ, ಕೊನೆಗೂ ಒಬ್ಬ ರಿಪೇರಿಯವ್ನು ಸಿಕ್ಕಿದ್ದ ಕತೆ ಹೇಳಿದ್ರೆ ಅಲ್ಲಿರೋರ್ಯಾರೂ ನಂಬೋಕೆ ತಯಾರಿಲ್ಲ. ಆ ಘಾಟಿಯಲ್ಲಿ ಚಂಡಿಕಾಂಬ ದೇವಸ್ಥಾನ ಬಿಟ್ರೆ ಬೇರೆ ಗ್ಯಾರೇಜಿರ್ಲಿ ಒಂದು ಪಾಳು ಗುಡಿಸ್ಲ ಅವಶೇಷವೂ ಇಲ್ಲ.  ನಿಮ್ಮ ಗೆಳೆಯ ಒಳ್ಳೇ ಕತೆ ಕಟ್ತ ಕಾಣಿ, ಬಾಲಿವುಡ್ಡಿಗೆ ಕತೆ ಬರ್ಯಕ್ಕೆ ಲಾಯಕ್ಕಿದ್ದ ಇವ ಹೋಯ್ ಅಂದ್ರು ಅಲ್ಲಿದ್ದ ಕೆಲೋರು. ಅಂದು ರಾತ್ರೆ ಕಾಡುತ್ತಿದ್ದ ಹಲವು ಪ್ರಶ್ನೆಗಳು ರಾತ್ರಿಯಿಡೀ ನಿದ್ರಿಸಬಿಡದಿದ್ರೂ ಹೇಗೋ ಬೆಳಗು ಮಾಡಿದ ನಾನು ಅದೇ ರಸ್ತೆಯಲ್ಲಿ ಮಾರನೇ ದಿನ ಮನೆಗೆ ಮರಳಿದೆ. ಮರಳುವಾಗ ಚಂಡಿಕಾಂಬೆಯ ದರ್ಶನವಾದ್ರೂ ತದನಂತರದ ಹಿಂದಿನ ದಿನ ಗ್ಯಾರೇಜು ಕಂಡಿದ್ದ ಜಾಗದಲ್ಲಿ ಏನೂ ಕಾಣಲಿಲ್ಲ. ಹಾಗಾದ್ರೆ ನಿನ್ನೆ ರಾತ್ರೆ ಗಾಡಿ ಕೆಟ್ಟಿದ್ದು, ಊಳಿಟ್ಟ ನಾಯಿ, ಎದುರಾದ ಬಾವಲಿ, ಗಾಡಿ ರಿಪೇರಿ ಮಾಡಿದವ ಎಲ್ಲಾ ಕನಸ ? ಖಂಡಿತಾ ಅಲ್ಲ ಅಂದ್ರೆ ಅವನ್ಯಾರು ? .. ಈ ಪ್ರಶ್ನೆಗೆ ಸದ್ಯಕ್ಕೆಂತೂ ಉತ್ತರ ಹೊಳೆಯುತ್ತಿಲ್ಲ ನನಗೆ. ನಿಮಗೇನಾದ್ರೂ ಹೊಳೆದ್ರೆ ತಿಳಿಸಿರೆಂಬ ವಿನಂತಿಯೊಂದಿಗೆ…

ತಮ್ಮ ವಿಶ್ವಾಸಿ
ಬೈಕ್ ಬಾಲು .

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
umesh desai
9 years ago

good one boss

Akhilesh Chipli
Akhilesh Chipli
9 years ago

ಚೆನ್ನಾಗಿದೆ ಪ್ರಶಸ್ತಿ.

Rukmini Nagannavarಋ
Rukmini Nagannavarಋ
9 years ago

ತುಂಬ ಹಿಡಿಸ್ತು ಪ್ರಶಸ್ತಿ. ..

3
0
Would love your thoughts, please comment.x
()
x